ಸಾವಿರಾರು ದಿನಗಳ ನಿರಂತರ ಓದಿಗಿಂತ, ಒಂದು ದಿನ ಗುರುವಿನೊಂದಿಗೆ ಕಳೆದರೂ ಸಾಕು ಎನ್ನುವ ಮಾತಿದೆ. ಗುರುವೆಂದರೆ ಶಿಷ್ಯನನ್ನು ಅಜ್ಞಾನದ ಕತ್ತಲೆಯಿಂದ ಜ್ಞಾನದ ಪ್ರಕಾಶಕ್ಕೆ ಕರೆದೊಯ್ಯುವ ದೀವಿಗೆ. ಕಬ್ಬಿಣದಂತಿರುವ ಶಿಷ್ಯನನ್ನು ಚಿನ್ನವಾಗಿಸುವ ಪಾರಸಮಣಿ. ಗುರು-ಶಿಷ್ಯ ಸಂಬಂಧ ಅತ್ಯಂತ ಪವಿತ್ರವಾದದ್ದು. ಶಿಷ್ಯನ ವ್ಯಕ್ತಿತ್ವ ರೂಪಿಸುವಲ್ಲಿ ಗುರುವಿನ ಪಾತ್ರ ನಿರ್ಣಾಯಕ.
ಹಾಗಾಗಿಯೇ ಸನಾತನ ಕಾಲದಿಂದಲೂ ಗುರುವಿಗೆ ಶ್ರೇಷ್ಠ ಸ್ಥಾನ. ನಾಲ್ಕು ತಲೆಗಳಿಲ್ಲದಿದ್ದರೂ ಅವನು ಬ್ರಹ್ಮ, ನಾಲ್ಕು ತೋಳುಗಳಿಲ್ಲದಿದ್ದರೂ ಅವನು ವಿಷ್ಣು, ಮೂರು ಕಣ್ಣುಗಳಿಲ್ಲದಿದ್ದರೂ ಅವನು ಮಹೇಶ್ವರ! ಗುರುವಿನ ಪಾದದಲ್ಲಿ ಶಿಷ್ಯ ಸ್ವರ್ಗ ಕಾಣುತ್ತಾನೆ. ಗುರುವಿನ ಅನುಗ್ರಹ ಪಡೆಯಲು ಶಿಷ್ಯ ಗುರುವಿನ ಆಜ್ಞೆಯನ್ನು ಕುರುಡಾಗಿ ಪಾಲಿಸಬೇಕು. ಕಾರಣ, ಗುರು ತನ್ನ ಶಿಷ್ಯನನ್ನು ಸದಾ ಪರೀಕ್ಷಿಸುತ್ತಿರುತ್ತಾನೆ. ಈ ಭಕ್ತಿ, ಸಮರ್ಪಣೆಗೆ ಫಲ ಸಿಕ್ಕೇ ಸಿಗುತ್ತದೆ.
ಒಮ್ಮೆ ಗುರು ನಾನಕರು ಶಿಷ್ಯರೊಂದಿಗೆ ಪ್ರಯಾಣಿಸುತ್ತಿದ್ದರು. ನಾನಕರು ಎಲ್ಲೇ ಹೋಗುವುದಿದ್ದರೂ ಸದಾ ತಮ್ಮ ಜತೆ ತಟ್ಟೆಯೊಂದನ್ನು ಕೊಂಡೊಯ್ಯುತ್ತಿದ್ದರು. ಅವರು ನೀರು ಕುಡಿಯಲು, ಊಟ ಮಾಡಲು ಅದನ್ನೇ ಬಳಸುತ್ತಿದ್ದರು. ಆ ದಿನ ಸಾಗುವಾಗ ಮಾರ್ಗಮಧ್ಯದಲ್ಲಿ ಕೆಸರಿನಿಂದ ತುಂಬಿದ ಕೆರೆ ಕಾಣಿಸಿತು. ನಾನಕರು ತಟ್ಟೆಯನ್ನು ಅದರೊಳಗೆ ಎಸೆದರು. ಶಿಷ್ಯರು ನೋಡನೋಡುತ್ತಲೇ ತಟ್ಟೆಯು ಕೆಸರಲ್ಲಿ ಮುಳುಗಿತು. ಅದನ್ನು ಕೆಸರಿಂದ ಮೇಲಕ್ಕೆತ್ತಿ ತರಲು ನಾನಕರು ಶಿಷ್ಯರಿಗೆ ಹೇಳಿದರು. ಶಿಷ್ಯರಲ್ಲಿ ಗೊಂದಲ ಉಂಟಾಯಿತು. ಕೆರೆಯ ಆಳಕ್ಕೆ ಇಳಿದಿರುವ ತಟ್ಟೆಯನ್ನು ಎತ್ತಲು ಕೆರೆಗೆ ಇಳಿದರೆ, ತೊಟ್ಟ ಬಟ್ಟೆಯೆಲ್ಲ ಕೊಳೆಯಾಗುತ್ತದೆ. ಮೇಲಾಗಿ, ತಟ್ಟೆ ಸಿಗುವುದೆಂಬ ಯಾವುದೇ ವಿಶ್ವಾಸವಿಲ್ಲ! ನಿರರ್ಥಕವಾದ ಕೆಲಸವನ್ನು ಗುರುಗಳು ಹೇಳುತ್ತಿದ್ದಾರೆ ಎಂದು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತ ಅಲ್ಲೇ ನಿಂತರು.
ಹೀಗೆ ಉಳಿದವರು ಗುಂಪಿನಲ್ಲಿ ಮಾತನಾಡುತ್ತಿರುವಾಗ, ಲಹನಾ ಎಂಬ ಶಿಷ್ಯ ಇದಾವುದನ್ನೂ ಲೆಕ್ಕಿಸದೇ ಕೆರೆಗಿಳಿದ. ಕೆಸರಿನಲ್ಲಿ ಜಾರಿದ, ಆಯ ತಪ್ಪಿದ. ಆದರೆ, ಛಲ ಬಿಡದೇ ಹುಡುಕಿ, ತಟ್ಟೆಯನ್ನು ಮೇಲಕ್ಕೆ ತೆಗೆದುಕೊಂಡು ಬಂದ. ನೀರಿನಲ್ಲಿ ತಟ್ಟೆಯನ್ನು ತೊಳೆದು ಗುರು ನಾನಕರಿಗೆ ಅರ್ಪಿಸಿ, ಕಾಲಿಗೆರಗಿದ. ಇಡೀ ದೇಹ ಕೆಸರಿಂದ ತುಂಬಿದ್ದ ಆ ಶಿಷ್ಯನನ್ನು ಪ್ರೀತಿಯಿಂದ ತಬ್ಬಿಕೊಂಡು ಆಶೀರ್ವದಿಸಿದರು ಗುರು ನಾನಕರು. ಆತ ಗುರುವಿನ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದ. ಮುಂದೆ ಅವನೇ ಸಿಖ್ಖರ ಎರಡನೇ ಗುರು ಅಂಗದನಾಗಿ ಪ್ರಸಿದ್ಧನಾದ. ಇದಲ್ಲವೇ ಶಿಷ್ಯರನ್ನು ಒರೆಗೆ ಹಚ್ಚುವ ಗುರುವಿನ ಅನುಗ್ರಹ? ಗುರು-ಶಿಷ್ಯ ಸಂಬಂಧದ ಇಂಥ ಬೇರೆ ಬೇರೆ ನಿದರ್ಶನಗಳು ಕಾಣಸಿಗುತ್ತವೆ. ಶಿಷ್ಯರನ್ನು ಪರೀಕ್ಷಿಸುವ ಮೂಲಕ ಗುರು ಅವರನ್ನು ತಿದ್ದಿತೀಡಿ ಮುನ್ನಡೆಸುತ್ತಾನೆ. ಇವುಗಳ ಸಂದೇಶ ಒಂದೇ- ಗುರುವಿನ ಮಹಿಮೆ ಅಪಾರ.
(ಲೇಖಕರು ಹವ್ಯಾಸಿ ಬರಹಗಾರರು)