ಅಂಕಣ

ಶಿಕ್ಷಣದ ಪ್ರಾರಂಭದಲ್ಲಿ ಗುರು-ಶಿಷ್ಯರ ಪ್ರಾರ್ಥನೆ

ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಪಡೆಯುವುದು ಮಾತ್ರ ಕಲಿಕೆಯ ಉದ್ದೇಶವಾಗಿದ್ದು, ಕಲಿತ ಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದನ್ನು ಜೀವನದಲ್ಲಿ ಅನುಷ್ಠಾನಿಸುವ ಬಗ್ಗೆ ಗುರುಗಳಾಗಲೀ ಅಥವಾ ಶಿಷ್ಯರಾಗಲೀ ಯೋಚಿಸುವುದಿಲ್ಲ. ವ್ಯವಹಾರಕ್ಕೆ ಬಾರದ ಇಂತಹ ಜ್ಞಾನವು ಮಸ್ತಕದಿಂದ ಬಹುಬೇಗ ಮರೆತುಹೋಗುತ್ತದೆ.

ಯಾವುದೇ ಶಿಕ್ಷಣ ಫಲಪ್ರದವಾಗಬೇಕಾದರೆ ಉತ್ತಮ ಗುರು ಹಾಗೂ ಉತ್ತಮ ಶಿಷ್ಯರ ಸಮಾಗಮವಾಗಬೇಕು. ನಮ್ಮ ಹೆಚ್ಚಿನ ಉಪನಿಷತ್ತುಗಳು ಗುರು-ಶಿಷ್ಯರ ಸಂವಾದ ರೂಪದಲ್ಲಿದ್ದು, ಪ್ರತಿಯೊಂದು ಉಪನಿಷತ್ತೂ ಒಂದು ಶಾಂತಿಮಂತ್ರದೊಂದಿಗೆ ಪ್ರಾರಂಭವಾಗುತ್ತದೆ. ಕೃಷ್ಣ ಯಜುರ್ವೆದದ ತೈತ್ತಿರೀಯ ಉಪನಿಷತ್ತಿನಲ್ಲಿ ಕಂಡುಬರುವ ಈ ಶಾಂತಿಮಂತ್ರವು ಯಾವುದೇ ಶಿಕ್ಷಣದ ಪ್ರಾರಂಭಕ್ಕೆ ಬಹು ಪ್ರಸ್ತುತವಾಗಿದ್ದು, ಗುರು-ಶಿಷ್ಯರಿಬ್ಬರೂ ಸೇರಿ ಒಟ್ಟಿಗೆ ಈ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ:

ಓಂ ಸಹನಾವವತು |

ಸಹ ನೌ ಭುನಕ್ತು |

ಸಹ ವೀರ್ಯು ಕರವಾವಹೈ |

ತೇಜಸ್ವಿ ನಾವಧೀತಮಸ್ತು ಮಾ ವಿದ್ವಿಷಾವಹೈ |

ಓಂ ಶಾಂತಿಃ ಶಾಂತಿಃ ಶಾಂತಿಃ ||

‘ಓಂ - ನಾವಿಬ್ಬರೂ ಒಟ್ಟಿಗೆ ರಕ್ಷಿಸಲ್ಪಡೋಣ. ಕಲಿಕೆಯನ್ನು ನಾವಿಬ್ಬರೂ ಒಟ್ಟಿಗೆ ಆನಂದಿಸೋಣ. ನಾವಿಬ್ಬರೂ ಒಟ್ಟಿಗೆ ಸೇರಿ ಶ್ರದ್ಧೆಯಿಂದ ಕಲಿಕೆಯ ಕಾರ್ಯವನ್ನೆಸಗೋಣ. ಕಲಿಕೆಯ ತೇಜಸ್ಸು ಸದಾ ನಮ್ಮೊಂದಿಗಿರಲಿ. ನಮ್ಮಿಬ್ಬರ ಮಧ್ಯೆ ಪರಸ್ಪರ ಯಾವುದೇ ರೀತಿಯ ಹಗೆತನವುಂಟಾಗದಿರಲಿ. ಓಂ ಶಾಂತಿಃ ಶಾಂತಿಃ ಶಾಂತಿಃ.’

ಕಲಿಸುವ ಗುರು ಹಾಗೂ ಕಲಿಯುವ ಶಿಷ್ಯ ಇವರಿಬ್ಬರ ಸಂಬಂಧದ ಕುರಿತಾಗಿ ಈ ಮಂತ್ರದಲ್ಲಿ ಐದು ಮುಖ್ಯ ಅಂಶಗಳಿವೆ

1. ಸಹನಾವವತು - ನಾವಿಬ್ಬರೂ ಒಟ್ಟಿಗೆ ರಕ್ಷಿಸಲ್ಪಡೋಣ.

ಪ್ರಾಚೀನ ಭಾರತದ ಗುರುಕುಲಗಳು ದಟ್ಟವಾದ ಅರಣ್ಯಗಳಲ್ಲಿ ಇದ್ದುದರಿಂದ, ವನ್ಯಮೃಗಗಳು, ಪ್ರಾಕೃತಿಕ ವಿಕೋಪಗಳು, ರೋಗ-ರುಜಿನಗಳು ಅಥವಾ ಶತ್ರುಗಳ ದಾಳಿ - ಮುಂತಾದವುಗಳಿಂದ ಹಲವು ರೀತಿಯ ಅಪಾಯಗಳ ಸಂಭವವು ಸದಾ ಇರುತ್ತಿತ್ತು. ಆದ್ದರಿಂದ ಶಿಕ್ಷಣವನ್ನು ಪ್ರಾರಂಭಿಸುವ ಮೊದಲು ಗುರು-ಶಿಷ್ಯರಿಬ್ಬರೂ ಸೇರಿ ಸಂಭವನೀಯ ಅಪಾಯಗಳಿಂದ ರಕ್ಷಣೆಗಾಗಿ ಪ್ರಾರ್ಥಿಸುತ್ತಿದ್ದರು. ಉದಾಹರಣೆಗೆ, ನಮ್ಮ ಆಧುನಿಕ ಕಾಲದಲ್ಲಿಯೇ ಕೋವಿಡ್ ಪಿಡುಗಿನಿಂದಾಗಿ ಜಗತ್ತಿನ ಅಸಂಖ್ಯಾತ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಶಿಕ್ಷಣವು ಒಂದೆರಡು ವರ್ಷಗಳ ಕಾಲ ಅಸ್ತವ್ಯಸ್ತವಾಗಿದ್ದುದು ನಮ್ಮೆಲ್ಲರ ಅನುಭವವೇ. ಅಂತೆಯೇ ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ ಲಕ್ಷಾಂತರ ಮಕ್ಕಳು ಹಾಗೂ ಯುವಜನರು ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತಲ್ಲವೇ? ಆದ್ದರಿಂದ ಶಿಕ್ಷಣಕ್ಕೆ ಅಡಚಣೆಯನ್ನುಂಟು ಮಾಡುವ ಯಾವುದೇ ಅಡ್ಡಿ-ಆತಂಕಗಳಿಂದ ಗುರು-ಶಿಷ್ಯರಿಬ್ಬರನ್ನೂ ರಕ್ಷಿಸಲು ಭಗವಂತನಲ್ಲಿ ಮೊರೆಯಿಡುವುದು ಪ್ರಾರ್ಥನೆಯ ಮೊದಲ ಅಂಶ.

2. ಸಹ ನೌ ಭುನಕ್ತು- ಕಲಿಕೆಯನ್ನು ನಾವಿಬ್ಬರೂ ಒಟ್ಟಿಗೆ ಸೇರಿ ಆನಂದಿಸೋಣ.

ಶಿಕ್ಷಣದಲ್ಲಿ ಗುರುವು ಜ್ಞಾನಪ್ರದಾನದಿಂದ ಆನಂದವನ್ನು ಪಡೆದರೆ, ಶಿಷ್ಯನು ಜ್ಞಾನಲಾಭದಿಂದ ಆನಂದಿತನಾಗುತ್ತಾನೆ. ಗುರುವಿನಲ್ಲಿ ಕಲಿಸುವ ಉತ್ಸಾಹವಿದ್ದರೂ, ಶಿಷ್ಯನಲ್ಲಿ ಕಲಿಯಲು ಆಸಕ್ತಿಯಿಲ್ಲದಿದ್ದರೆ ಅಥವಾ ಶಿಷ್ಯನಲ್ಲಿ ಕಲಿಯಲು ಶ್ರದ್ಧೆಯಿದ್ದರೂ, ಗುರುವಿನಲ್ಲಿ ಕಲಿಸುವ ಆಸಕ್ತಿ-ಉತ್ಸಾಹಗಳಿಲ್ಲದಿದ್ದರೆ, ಶಿಕ್ಷಣವು ಆನಂದಪ್ರದಾಯಕವಾಗುವುದಿರಲಿ, ಫಲಪ್ರದವೂ ಆಗುವುದಿಲ್ಲ. ಆದ್ದರಿಂದ ಶಿಕ್ಷಣವು ಫಲಪ್ರದವೂ, ಆನಂದಪ್ರದಾಯಕವೂ ಆಗಲೆಂದು ಬೇಡುವುದು ಪ್ರಾರ್ಥನೆಯ ಎರಡನೆಯ ಅಂಶ. ಕೆಲವೊಮ್ಮೆ ಬಹು ಭಾರವಾದ ಪಠ್ಯಕ್ರಮ, ನೀರಸ ಬೋಧನಾ ವಿಧಾನ ಹಾಗೂ ಹೆಚ್ಚಿನ ಒತ್ತಡದ ಪರೀಕ್ಷೆಗಳಿಂದಾಗಿ ಗುರು-ಶಿಷ್ಯರಿಬ್ಬರೂ ಯಾವುದೇ ಸಂತೋಷವಿಲ್ಲದೇ ಬಳಲುವುದನ್ನು ನಾವು ನೋಡಿದ್ದೇವಲ್ಲವೇ! ಆದ್ದರಿಂದ ಶಿಕ್ಷಣವು ಯಶಸ್ವಿಯಾಗಬೇಕಾದರೆ, ಅದನ್ನು ಸಂತೋಷದಾಯಕವನ್ನಾಗಿ ಮಾಡುವುದು ಅತ್ಯಗತ್ಯ. ಇಂದು ಶಾಲೆಗಳಲ್ಲಿ ನಲಿ-ಕಲಿ ವಿಧಾನವು ಇಂತಹ ಒಂದು ಪ್ರಯತ್ನವಾಗಿದೆ.

3. ಸಹ ವೀರ್ಯು ಕರವಾವಹೈ -ನಾವಿಬ್ಬರೂ ಒಟ್ಟಿಗೆ ಸೇರಿ ಶ್ರದ್ಧೆಯಿಂದ ಕಲಿಕೆಯ ಕಾರ್ಯವನ್ನೆಸಗೋಣ.

ಶಿಕ್ಷಣದ ಯಶಸ್ಸಿಗಾಗಿ ಗುರು-ಶಿಷ್ಯರಿಬ್ಬರೂ ಸೇರಿ ಶ್ರಮವಹಿಸಬೇಕಾಗುತ್ತದೆ. ಗುರುವು ಜೀವನಪರ್ಯಂತ ಜ್ಞಾನಪಿಪಾಸುವಾಗಿದ್ದುಕೊಂಡು, ನಿರಂತರ ಅಧ್ಯಯನ ಮತ್ತು ಸಂಶೋಧನೆಗಳೊಂದಿಗೆ ತನ್ನ ಜ್ಞಾನವರ್ಧನೆ ಮಾಡಿಕೊಳ್ಳುವುದಲ್ಲದೆ, ತನ್ನ ಬೋಧನಾ ವಿಧಾನ ಹಾಗೂ ಸಾಮರ್ಥ್ಯಗಳಲ್ಲಿಯೂ ಹೆಚ್ಚಿನ ಪರಿಣತಿಯನ್ನು ಪ್ರಯತ್ನ ಪೂರ್ವಕವಾಗಿ ಸಾಧಿಸಬೇಕಾಗುತ್ತದೆ. ಅದರ ಜೊತೆಗೆ, ಶಿಷ್ಯರಲ್ಲಿ ಆಸಕ್ತಿ-ಕುತೂಹಲಗಳನ್ನು ಕೆರಳಿಸಿ, ಅವರು ಕಲಿಯುವಿಕೆಯಲ್ಲಿ ಹೆಚ್ಚು ಶ್ರಮವಹಿಸುವಂತೆ ಅವರನ್ನು ಹುರಿದುಂಬಿಸಬೇಕಾಗಿರುತ್ತದೆ. ಶಿಷ್ಯರಾದರೋ ಗುರುಗಳ ನಿರೀಕ್ಷೆಗಳನ್ನು ಅರ್ಥಮಾಡಿಕೊಂಡು, ಅವರಿಗೆ ಸಂತೃಪ್ತಿಯನ್ನು ನೀಡಲು ಸ್ವಯಂಪ್ರೇರಿತರಾಗಿ ಕಷ್ಟಪಟ್ಟು ದುಡಿಯಬೇಕಾಗುತ್ತದೆ. ಆದ್ದರಿಂದ ಇದು ಗುರು-ಶಿಷ್ಯರ ಪ್ರಾರ್ಥನೆಯ ಮೂರನೆಯ ಅಂಶ.

4. ತೇಜಸ್ವಿ ನಾವಧೀತಮಸ್ತು - ಕಲಿಕೆಯ ತೇಜಸ್ಸು ಸದಾ ನಮ್ಮೊಂದಿಗಿರಲಿ.

ಜ್ಞಾನವು ಆಹಾರವಿದ್ದಂತೆ. ಆಹಾರವನ್ನು ಜೀರ್ಣಿಸಿಕೊಂಡು ಅದರ ಸಾರವನ್ನು ದೇಹದ ಅಂಗಾಂಗಗಳು ಹೀರಿಕೊಂಡರೆ ಮಾತ್ರ, ಆಹಾರ ಸೇವನೆಯು ಸಂಪೂರ್ಣ ಸಫಲವಾಗುತ್ತದೆ. ಜೀರ್ಣವಾಗದ ಆಹಾರವು ನಮಗೆ ತೊಂದರೆಯನ್ನುಂಟುಮಾಡುತ್ತದೆ; ಜೀರ್ಣವಾದ ಆಹಾರವು ನಮಗೆ ಶಕ್ತಿಯನ್ನು ನೀಡುತ್ತದೆ. ಅದೇ ರೀತಿ ನಾವು ಅರ್ಜಿಸಿದ ಜ್ಞಾನವನ್ನು ಚಿಂತನ-ಮಂಥನಗಳ ಮೂಲಕ ಚೆನ್ನಾಗಿ ಅರ್ಥಮಾಡಿಕೊಂಡು, ಅದನ್ನು ನಮ್ಮ ಜೀವನದಲ್ಲಿ ಅನುಷ್ಠಾನಕ್ಕೆ ತಂದಾಗ ಮಾತ್ರ ಆ ಜ್ಞಾನವು ಸಾಫಲ್ಯ ಪಡೆಯುತ್ತದೆ. ಆಗ ಮಾತ್ರ ಆ ಜ್ಞಾನವು ಶಿಷ್ಯನ ವ್ಯಕ್ತಿತ್ವದ ಒಂದು ಭಾಗವಾಗಿ ಉಳಿಯುತ್ತದೆ. ಹಾಗಲ್ಲದೆ, ಪರೀಕ್ಷೆಗಳನ್ನು ಮಾತ್ರ ದೃಷ್ಟಿಯಲ್ಲಿಟ್ಟುಕೊಂಡು, ಜ್ಞಾನವನ್ನು ಕೇವಲ ಬಾಯಿಪಾಠ ಮಾಡಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ನಮ್ಮ ಇಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ, ಕಲಿಯುವ ಉದ್ದೇಶವು ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುವುದು ಮಾತ್ರವಾಗಿದ್ದು, ಕಲಿತ ಜ್ಞಾನವನ್ನು ಸರಿಯಾಗಿ ಅರ್ಥಮಾಡಿಕೊಂಡು ಅದನ್ನು ಜೀವನದಲ್ಲಿ ಅನುಷ್ಠಾನಕ್ಕೆ ತರುವ ಬಗ್ಗೆ ಗುರುಗಳಾಗಲೀ ಅಥವಾ ಶಿಷ್ಯರಾಗಲೀ ಯೋಚಿಸುವುದಿಲ್ಲ. ವ್ಯವಹಾರಕ್ಕೆ ಬಾರದ ಇಂತಹ ಜ್ಞಾನವು ಮಸ್ತಕದಿಂದ ಬಹುಬೇಗ ಮರೆತುಹೋಗುತ್ತದೆ. ಚೀನೀ ತತ್ತ್ವಜ್ಞಾನಿ ಕನ್ಪೂ್ಯಷಿಯಸ್ ಹೇಳಿರುವಂತೆ, ‘ನಾನು ಕಿವಿಯಲ್ಲಿ ಕೇಳಿದ ವಿಷಯವು ಮರೆತುಹೋಗುತ್ತದೆ. ಕಣ್ಣುಗಳಿಂದ ನೋಡಿದ್ದು ನೆನಪಿನಲ್ಲಿ ಉಳಿಯುತ್ತದೆ. ನಾನು ಕೈಯ್ಯಾರೆ ಮಾಡಿದ್ದು ಮಾತ್ರ ನನಗೆ ಅರ್ಥವಾಗುತ್ತದೆ’ ನಾವು ಕಲಿತ ಜ್ಞಾನವು ನಮಗೆ ಚೆನ್ನಾಗಿ ಅರ್ಥವಾಗಿ ನಾವು ಅದನ್ನು ಅನುಷ್ಠಾನಕ್ಕೆ ತಂದಾಗ, ಅದು ನಮ್ಮ ವ್ಯಕ್ತಿತ್ವದಲ್ಲಿ ತೇಜಸ್ಸಾಗಿ ವ್ಯಕ್ತವಾಗುತ್ತದೆ. ಅಂತಹ ತೇಜಸ್ಸಿಗಾಗಿ ಈ ಪ್ರಾರ್ಥನೆ.

5. ಮಾ ವಿದ್ವಿಷಾವಹೈ -ನಮ್ಮಿಬ್ಬರ ಮಧ್ಯೆ ಪರಸ್ಪರ ಯಾವುದೇ ರೀತಿಯ ಹಗೆತನವುಂಟಾಗದಿರಲಿ.

ಗುರು-ಶಿಷ್ಯರ ಮಧ್ಯೆ ಸಂಬಂಧವು ಪರಸ್ಪರ ಪ್ರೇಮ-ಗೌರವಗಳಿಂದ ಕೂಡಿರಬೇಕು. ಗುರುವು ಯಾವುದೇ ಪಕ್ಷಪಾತವಿಲ್ಲದೆ ತನಗೆ ತಿಳಿದಿರುವ ಜ್ಞಾನವನ್ನೆಲ್ಲಾ, ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ತನ್ನ ಎಲ್ಲಾ ಶಿಷ್ಯರಿಗೂ ಧಾರೆಯೆರೆಯಬೇಕು. ಶಿಷ್ಯರು ಗುರುವಿನೊಂದಿಗೆ ವಿನಯ, ಗೌರವ ಮತ್ತು ವಿಧೇಯತೆಗಳೊಂದಿಗೆ ನಡೆದುಕೊಳ್ಳಬೇಕು. ಒಳ್ಳೆಯ ಗುರು ಹಾಗೂ ಕೆಟ್ಟ ಶಿಷ್ಯ ಅಥವಾ ಒಳ್ಳೆಯ ಶಿಷ್ಯ ಹಾಗೂ ಕೆಟ್ಟ ಗುರು ಒಟ್ಟಿಗೆ ಸೇರಿದರೆ ಕಲಿಕೆಯ ಆನಂದವು ಮಾಯವಾಗಿ, ಶಿಕ್ಷಣವು ಇಬ್ಬರಿಗೂ ದುಃಖದಾಯಕವಾಗುತ್ತದೆ. ಇದಕ್ಕೆ ನಿದರ್ಶನವಾಗಿ ಮಹಾಭಾರತದ ಎರಡು ಸನ್ನಿವೇಶಗಳನ್ನು ತೆಗೆದುಕೊಳ್ಳೋಣ. ಕರ್ಣನು ಶರವಿದ್ಯೆಯನ್ನು ಕಲಿಯಲು ಗುರುವನ್ನರಸಿಕೊಂಡು ಪರಶುರಾಮರ ಬಳಿ ಸೇರುತ್ತಾನೆ. ಪರಶುರಾಮರು ಕ್ಷತ್ರಿಯರಿಗೆ ವಿದ್ಯೆಯನ್ನು ಬೋಧಿಸುವುದಿಲ್ಲವೆಂದು ತಿಳಿದ ಕರ್ಣನು ತಾನು ಬ್ರಾಹ್ಮಣನೆಂದು ಸುಳ್ಳನ್ನು ಹೇಳುತ್ತಾನೆ. ಆದರೆ ಅವನು ಕೊನೆಯಲ್ಲಿ ಸತ್ಯವನ್ನರಿತ ಗುರುವಿನ ಕ್ರೋಧಕ್ಕೆ ಗುರಿಯಾಗಿ ಅವರಿಂದ ಶಾಪಗ್ರಸ್ತನಾಗುತ್ತಾನೆ. ಇದರಿಂದಾಗಿ ಅವನಿಗೆ ಯುದ್ಧಭೂಮಿಯಲ್ಲಿ ತಾನು ಕಲಿತ ವಿದ್ಯೆಯ ವಿಸ್ಮರಣೆಯಾಗಿ ಅರ್ಜುನನಿಂದ ಹತನಾಗುತ್ತಾನೆ. ಇನ್ನೊಂದೆಡೆ, ಅತ್ಯುತ್ತಮ ಶಿಷ್ಯನಾದ ಏಕಲವ್ಯನು ಸ್ವಾರ್ಥಿಯಾದ ಗುರು ದ್ರೋಣರ ವಂಚನೆಯಿಂದಾಗಿ ಶರವಿದ್ಯೆಗೆ ಅತ್ಯಗತ್ಯವಾದ ತನ್ನ ಹೆಬ್ಬೆರಳನ್ನೇ ಕಳೆದುಕೊಳ್ಳುತ್ತಾನೆ! ಮೊದಲಿನ ಸನ್ನಿವೇಶದಲ್ಲಿ ಶಿಷ್ಯನು ಗುರುವಿನ ದುಃಖಕ್ಕೆ ಕಾರಣವಾದರೆ, ಎರಡನೆಯ ಸನ್ನಿವೇಶದಲ್ಲಿ ಗುರುವೇ ಶಿಷ್ಯನಿಗೆ ಅಪಕಾರವೆಸಗುತ್ತಾನೆ. ಗುರು-ಶಿಷ್ಯರ ಮಧ್ಯೆ ಇಂತಹ ದ್ವೇಷದ ವಿಷಮ ಸನ್ನಿವೇಶವುಂಟಾಗದಿರಲಿ, ಎಂಬುದೇ ಐದನೆಯ ಪ್ರಾರ್ಥನೆ.

ಪ್ರಸ್ತುತ ನಮ್ಮ ದೇಶದಾದ್ಯಂತ ಹೆಚ್ಚಿನ ವಿದ್ಯಾಸಂಸ್ಥೆಗಳಲ್ಲಿ ಹೊಸ ಶೈಕ್ಷಣಿಕ ವರ್ಷವು ಇದೀಗ ಪ್ರಾರಂಭವಾಗುತ್ತಿದ್ದು, ಈ ಪ್ರಾರ್ಥನೆಯು ಗುರು-ಶಿಷ್ಯರಿಬ್ಬರಿಗೂ ತಮ್ಮ ಪರಸ್ಪರ ಕರ್ತವ್ಯ ಮತ್ತು ಹೊಣೆಗಾರಿಕೆಗಳನ್ನರಿಯುವಂತೆ ಮಾಡಲಿ ಎಂಬುದೇ ನಮ್ಮ ಆಶಯ.

ಕಠೋಪನಿಷತ್ತಿನಲ್ಲಿ ಉತ್ತಮ ಗುರು-ಶಿಷ್ಯರ ಸಂಯೋಗದ ಬಗ್ಗೆ ಬಹು ಮಾರ್ವಿುಕವಾದ ಒಂದು ಶ್ಲೋಕವಿದೆ. ಇಲ್ಲಿ ಮೃತ್ಯುದೇವತೆಯಾದ ಯಮನೇ ಗುರು ಹಾಗೂ ‘ನೀನು ಮೃತ್ಯುವಶನಾಗು’ ಎಂದು ತನ್ನ ತಂದೆಯಿಂದಲೇ ಶಪಿಸಲ್ಪಟ್ಟ ಅತಿ ಶ್ರದ್ಧಾವಂತ ನಚಿಕೇತನೇ ಶಿಷ್ಯ.

ಶ್ರವಣಾಯಾಪಿ ಬಹುಭಿರ್ಯೋ ನ ಲಭ್ಯಃ ಶೃಣ್ವಂತೋಪಿ

ಬಹವೋ ಯಂ ನ ವಿದ್ಯುಃ |

ಆಶ್ಚರ್ಯೋ ವಕ್ತಾ ಕುಶಲೋಸ್ಯ ಲಬ್ಧಾಶ್ಚರ್ಯೋ ಜ್ಞಾತಾ ಕುಶಲಾನುಶಿಷ್ಟಃ ||

(ಕಠೋಪನಿಷತ್ತು 1. 2. 7)

‘ಪರಮಜ್ಞಾನವು ಬಹುಮಂದಿಗೆ ಶ್ರವಣಕ್ಕೂ ಅಲಭ್ಯ. ಶ್ರವಣ ಮಾಡಿದರೂ ಬಹುಮಂದಿ ಇದನ್ನು ತಿಳಿದುಕೊಳ್ಳಲಾರರು. ಇದನ್ನು ಸಮರ್ಥವಾಗಿ ಬೋಧಿಸುವ ಗುರುವೂ ಅದ್ಭುತ; ಅಂತೆಯೇ ಇದನ್ನು ಶ್ರದ್ಧೆಯಿಂದ ಶ್ರವಣಮಾಡಿ ಸರಿಯಾಗಿ ಅರ್ಥಮಾಡಿಕೊಳ್ಳುವ ಶಿಷ್ಯನೂ ಅದ್ಭುತ!’

ಎಲ್ಲಾ ಗುರು-ಶಿಷ್ಯರೂ ಜ್ಞಾನದ ಗಣಿಗಳಾದ ಉಪನಿಷತ್ತುಗಳಂತಹ ನಮ್ಮ ಪ್ರಾಚೀನ ಗ್ರಂಥಗಳಿಂದ ಸ್ಪೂರ್ತಿ ಪಡೆದು, ಅವರ ಕಲಿಕೆಯು ಮೇಲಿನ ಶಾಂತಿಮಂತ್ರದಲ್ಲಿ ಹೇಳಿರುವಂತೆ ಆನಂದದಾಯಕವಾಗಲಿ!

(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)