ಅಂಕಣ

ಚಾಲಕನಿಲ್ಲದಿದ್ರೂ 100ಕಿಮೀ ವೇಗದಲ್ಲಿ ಚಲಿಸಿತು ಗೂಡ್ಸ್​ ರೈಲು!! ಭಾರತದಲ್ಲಿ ಇದೇ ಮೊದಲು..ಕಾರಣ ಕೇಳಿದ್ರೆ ಬೆಚ್ಚಿಬೀಳ್ತೀರಿ..

ನವದೆಹಲಿ: ನಮ್ಮ ಮೆಟ್ರೋಗೆ ಚಾಲಕ ರಹಿತ ರೈಲನ್ನು ಚೀನಾದಿಂದ ಬೆಂಗಳೂರಿಗೆ ಇತ್ತೀಚೆಗೆ ತರಿಸಿಕೊಂಡಿದ್ದು, ಇನ್ನಷ್ಟೇ ಅದು ಹಳಿಗೆ ಇಳಿಯಬೇಕಿದೆ. ರೈಲ್ವೇ ಇಲಾಖೆಗೆ ಇನ್ನೂ ಚಾಲಕ ರಹಿತ ರೈಲುಗಳು ಲಭ್ಯವಿಲ್ಲ. ಪರಿಸ್ಥಿತಿ ಹೀಗಿದ್ದರೂ ಜಮ್ಮು ಮತ್ತು ಕಾಶ್ಮೀರದ ಕಥುವಾದಿಂದ ಪಠಾಣ್‌ಕೋಟ್ ಕಡೆಗೆ ಲೋಕೋ ಪೈಲಟ್ ಇಲ್ಲದೆ ಗೂಡ್ಸ್ ರೈಲು ಸಂಚರಿಸಿದೆ. ರೈಲ್ವೇ ಸಿಬ್ಬಂದಿ ಇದನ್ನು ಕಷ್ಟಪಟ್ಟು ಪಂಜಾಬ್‌ನ ಮುಕೇರಿಯನ್ ಬಳಿ ನಿಲ್ಲಿಸಲಾಗಿದೆ. ಹಾಗಾದರೆ ಚಾಲಕನಿಲ್ಲದೆ ಓಡುವ ಟ್ರೈನ್​ ಭಾರತಕ್ಕೆ ಹೇಗೆ ಬಂತು? ವಿವರ ಇಲ್ಲಿದೆ ನೋಡಿ..

ಜಮ್ಮು ಮತ್ತು ಕಾಶ್ಮೀರದ ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಗೂಡ್ಸ್ ರೈಲು ಪಠಾಣ್‌ಕೋಟ್ ಕಡೆಗೆ ಇಳಿಜಾರಿನ ಕಾರಣ ಲೊಕೊ ಪೈಲಟ್ ಇಲ್ಲದೆ ಓಡಲು ಪ್ರಾರಂಭಿಸಿದೆ. ರೈಲು ಹೆಚ್ಚಿನ ವೇಗದಲ್ಲಿ 100 ಕಿಮೀ/ಗಂ ವೇಗವನ್ನು ತಲುಪಿದೆ ಎಂದು ವರದಿಯಾಗಿದೆ. ರೈಲು ಅತಿ ವೇಗದಲ್ಲಿ ಹಾದುಹೋಗುತ್ತಿರುವ ದೃಶ್ಯವನ್ನು ಹಳಿಗಳ ಬಳಿ ಇದ್ದ ಜನ ಮೊಬೈಲ್​ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ವೀಡಿಯೊ ವೈರಲ್​ ಆಗಿದೆ.

ಅತಿವೇಗದಲ್ಲಿ ಸಂಚರಿಸುತ್ತಿದ್ದುದರಿಂದ ರೈಲ್ವೆ ಅಧಿಕಾರಿಗಳು ಸಾಕಷ್ಟು ಪ್ರಯತ್ನಗಳ ನಂತರ ಪಂಜಾಬ್‌ನ ಮುಕೇರಿಯನ್‌ನ ಉಚ್ಚಿ ಬಸ್ಸಿ ಬಳಿ ಮಾನವರಹಿತ ರೈಲನ್ನು ತಡೆದಿದ್ದಾರೆ. ಈ ಕುರಿತು ವಿಚಾರಣೆ ಆರಂಭಿಸಲಾಗಿದೆ ಎಂದು ಜಮ್ಮುವಿನ ವಿಭಾಗೀಯ ಸಂಚಾರ ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.

ಕಥುವಾ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದ ಸರಕು ಸಾಗಾಣಿಕೆ ರೈಲಿನಲ್ಲಿ ಲೊಕೊ ಪೈಲಟ್(ಚಾಲಕ) ಇರಲಿಲ್ಲ. ಇಳಿಜಾರಿನಲ್ಲಿ ಅಲ್ಲಿಂದ ಹೊರಟ ರೈಲು ಕೇವಲ 2ಗಂಟೆಯಲ್ಲಿ 160 ಕಿಲೋಮೀಟರ್ ದೂರದ ಮುಕೇರಿಯನ್‌ನ ಉಚ್ಚಿ ಬಸ್ಸಿ ತಲುಪಿದೆ. ಅಲ್ಲಿ ಸಿಬ್ಬಂದಿ ಕಷ್ಟಪಟ್ಟು ಯಶಸ್ವಿಯಾಗಿ ನಿಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸ್ಥಳೀಯರ ಪ್ರಕಾರ, ಭಾನುವಾರ ಬೆಳಳಗ್ಗೆ 7:10 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಲೋಕೋ ಪೈಲಟ್ ಜಮ್ಮುವಿನ ಕಥುವಾದಲ್ಲಿ ಗೂಡ್ಸ್ ರೈಲು ಸಂಖ್ಯೆ 14806 ಆರ್ ಅನ್ನು ನಿಲ್ಲಿಸಿದ್ದರು. ಬಳಿಕ ಚಾಲಕ ಹ್ಯಾಂಡ್‌ಬ್ರೇಕ್‌ ಹಾಕದೆ ರೈಲಿನಿಂದ ಇಳಿದು ಟೀ ಕುಡಿಯಲು ತೆರಳಿದ್ದ. ಏತನ್ಮಧ್ಯೆ, ರೈಲು ಇದ್ದಕ್ಕಿದ್ದಂತೆ ಚಲಿಸಲು ಪ್ರಾರಂಭಿಸಿತು ಮತ್ತು ಅಂತಿಮವಾಗಿ ವೇಗವನ್ನು ಪಡೆದ ನಂತರ ಓಡಲು ಪ್ರಾರಂಭಿಸಿತು.

ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದ ರೈಲ್ವೆ ಅಧಿಕಾರಿಗಳ ಸಮಯೋಚಿತ ಚಿಂತನೆ ಮತ್ತು ಕ್ಷಿಪ್ರ ನಿರ್ವಹಣೆಯಿಂದಾಗಿ ಭಾರೀ ಅನಾಹುತ ತಪ್ಪಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ. ರೈಲು ಇಳಿಜಾರಿನ ಕಾರಣ ಚಲಿಸಲು ಪ್ರಾರಂಭಿಸಿದೆ. ಇದಕ್ಕೆ ಬೇರೆ ಕಾರಣವೇನಿಲ್ಲ ಎಂದು ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ, ಲೊಕೊ ಪೈಲಟ್ ಅಥವಾ ಇತರ ಯಾವುದೇ ರೈಲ್ವೇ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವ ಬಗ್ಗೆ ವರದಿಯಾಗಿಲ್ಲ. ಆದಾಗ್ಯೂ, ಘಟನೆಗೆ ನಿಖರವಾದ ಕಾರಣವನ್ನು ನಿರ್ಧರಿಸಲು ಈ ವಿಷಯದಲ್ಲಿ ತನಿಖೆಯನ್ನು ಪ್ರಾರಂಭಿಸಲಾಗಿದೆ.