ನಮ್ಮ ಹೆಮ್ಮೆಯ ಭವ್ಯ ಭಾರತ ಬಲಿಷ್ಠ ರಾಷ್ಟ್ರವಾಗುವತ್ತ, ವಿಶ್ವಗುರುವಾಗುವತ್ತ ಸಿದ್ಧವಾಗುತ್ತಿರುವ ಈ ಸಂಕ್ರಮಣ ಕಾಲದಲ್ಲಿ ‘ಕರೊನಾ’ ಎಂಬ ಮಹಾಮಾರಿ ಅಡ್ಡಗಾಲು ಹಾಕಿ ರಾಕ್ಷಸೀ ಪ್ರವೃತ್ತಿ ಮೆರೆಸುತ್ತಿದೆ. ಈ ಸಂದಿಗ್ಧ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 21 ದಿನಗಳ ಕಾಲ ಭಾರತ ದೇಶ ಸಂಪೂರ್ಣ ದಿಗ್ಭಂಧನದಲ್ಲಿರಬೇಕೆಂದು ಕರೆ ನೀಡಿದರು. ಒಬ್ಬ ಸಮರ್ಥ ನಾಯಕ ಮಾತ್ರ ಜನಹಿತಕ್ಕಾಗಿ ಇಂತಹ ಸದೃಢ ನಿಲುವು ತೆಗೆದುಕೊಳ್ಳಲು ಸಾಧ್ಯ. ಅವರ ಕರೆಗೆ ಓಗೊಟ್ಟು ಸಹಯೋಗ ನೀಡಬೇಕಾದುದು ಭಾರತದೇಶದ ಸತ್ಪ್ರಜೆಗಳಾದ ನಮ್ಮೆಲ್ಲರ ಆದ್ಯ ಕರ್ತವ್ಯ. ಆದರೆ ಸಾವಿರಾರು ದೇಶವಾಸಿಗಳು ತಮ್ಮ ಜವಾಬ್ದಾರಿ ಮರೆತು, ಕರ್ತವ್ಯಕ್ಕೆ, ಕರೆಗೆ ವರುದ್ಧವಾಗಿ ಬೀದಿ ಬೀದಿಗಳಲ್ಲಿ ಅಲೆದಾಡುತ್ತಿರುವುದು ದುರದೃಷ್ಟಕರ, ಖೇದಕರ. ಮುಂದಿನ ದುರಂತಕ್ಕೆ ಆಹ್ವಾನ.
ವಿದ್ಯಾವಂತರಾದ ನಾವೆಲ್ಲ ನಮಗೂ ದೇಶಸೇವೆ ಮಾಡಬೇಕು ಎಂಬ ಆಸೆ ಇಟ್ಟುಕೊಂಡಿರುವುದಾದರೆ ಇದಕ್ಕಿಂತ ಹೆಚ್ಚಿನ ಅವಕಾಶ ಸಿಕ್ಕದು. ಸೈನಿಕ ಗಡಿಯನ್ನು ಕಾಯುವ ಮೂಲಕ ದೇಶಸೇವೆ ಮಾಡಿದರೆ, ನಾವು ದೇಶದ ಒಳಿತಿಗಾಗಿ ಮನೆಯೊಳಗೇ ಇದ್ದು, ಆರೋಗ್ಯವಾಗಿದ್ದು, ಕರೊನಾ ಮಹಾಪಿಶಾಚಿಯನ್ನು ಓಡಿಸಲು ಕಟಿಬದ್ಧರಾಗಿ ನಿಲ್ಲುವುದು, ಪ್ರಧಾನಿಯವರ ಕೈ ಬಲಪಡಿಸುವುದೂ ದೇಶಸೇವೆ. ಇದಕ್ಕೆ ವಿರುದ್ಧವಾಗಿ ನಡೆದರೆ ದೇಶದೊ್ರೕಹ. ಇಂತಹ ದೇಶದೊ್ರೕಹಿಗಳಿಗೆ ಕಠಿಣ ಶಿಕ್ಷೆ ನೀಡಲೇಬೇಕು. ಇದೊಂದೇ ಸೂಕ್ತವಾದ ದಾರಿ. ನಗರ ಬಿಟ್ಟು ವಿನಂತಿಗೆ ವಿರುದ್ಧವಾಗಿ ಹೋಗಿರುವ ಜನರನ್ನು ನಗರದ ಒಳಗೆ 21 ದಿನಗಳ ಕಾಲ ಬಿಡಲೇಬಾರದು. ಕರೊನಾದ ಕುರಿತು ಎಚ್ಚರವಾಗಿರಿ. ಕಾಣದ ಶತ್ರುವಿನ ಸವಾಲನ್ನು ಎದುರಿಸಲು ಸಂಕಲ್ಪ ಮಾಡಿ, ಸಂಯಮವಿರಲಿ. ಮನೆಯಲ್ಲಿಯೇ ಇದ್ದು ಸುಖಸಂಸಾರಿಗಳಾಗಿ. ಲಾಕ್ಡೌನ್ ಅಂದರೆ ಏನೆಂದು ಸರಿಯಾಗಿ ಅರ್ಥಮಾಡಿಕೊಳ್ಳಿ.
| ಪ್ರೊ. ಕೆ. ಕೃಷ್ಣಮೂರ್ತಿ ಮಯ್ಯ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು