ಅಂಕಣ

ಗೀತಾಬಾಯಿ ಆತ್ಮಕ್ಕೆ ಕೊನೆಗೂ ಶಾಂತಿ!; ವರದಕ್ಷಿಣೆಗೆ ವಿಶಾಲ ವ್ಯಾಖ್ಯಾನ ನೀಡಿದ ಸುಪ್ರೀಂ

Webdesk - Ravikanth
ವರದಕ್ಷಿಣೆ ನೀಡುವುದು ಅಥವಾ ಸ್ವೀಕರಿಸುವುದು ಅಪರಾಧವಾಗಿದ್ದರೂ ಭಾರತೀಯ ಸಮಾಜ ವರದಕ್ಷಿಣೆ ಪಿಡುಗಿನಿಂದ ಈಗಲೂ ಮುಕ್ತಿಕಂಡಿಲ್ಲ. ವಿವಾಹ ಸಂದರ್ಭದಲ್ಲಿ ಹೆಣ್ಣಿನ ಜತೆಗೆ ಧನ ಸಂಪನ್ಮೂಲವನ್ನೂ ವರನ ಕುಟುಂಬಕ್ಕೆ ನೀಡುವ ಆಕ್ಷೇಪಾರ್ಹ ಆಚರಣೆಗೆ ಕಾನೂನಿನಲ್ಲಿ ಸಮ್ಮತಿಯಿಲ್ಲದಿದ್ದರೂ, ಹಲವು ಸಂದರ್ಭಗಳಲ್ಲಿ ಕುಟುಂಬಗಳ ಪರಸ್ಪರ ಸಮ್ಮತಿಯಿಂದಲೇ ಇಂದಿಗೂ ಜೀವಂತವಾಗಿದೆ. ಮದುವೆ ನಂತರವೂ ಹೆಣ್ಣು ಹೆತ್ತವರಿಗೆ ಹಣಕ್ಕಾಗಿ ಪೀಡಿಸುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಲೇ ಇದೆ.

| ರಾಘವ ಶರ್ಮ ನಿಡ್ಲೆ ನವದೆಹಲಿ

ಕೆಲ ದಿನಗಳ ಹಿಂದೆ ವರದಕ್ಷಿಣೆ ವ್ಯಾಖ್ಯಾನ ವಿಸ್ತರಿಸುವ ಮತ್ತು ಈ ವಿಚಾರವನ್ನು ವಿಶಾಲ ದೃಷ್ಟಿಕೋನದಿಂದ ನೋಡುವ ಅಗತ್ಯದ ಬಗ್ಗೆ ಸುಪ್ರೀಂಕೋರ್ಟ್ ತೀರ್ಪೆಂದನ್ನು ಪ್ರಕಟಿಸಿರುವುದು ಗಮನಸೆಳೆದಿದೆ. ಪತಿ ಕುಟುಂಬಸ್ಥರು ಮನೆ ಕಟ್ಟುತ್ತಿದ್ದಾರೆಂದು ಪತ್ನಿ ಹೆತ್ತವರಲ್ಲಿ ಹಣ ಕೇಳುವುದನ್ನೂ ವರದಕ್ಷಿಣೆ ವ್ಯಾಪ್ತಿಯಲ್ಲಿ ನೋಡಬೇಕು. ಪತ್ನಿ ತನ್ನ ಗಂಡನ ಒತ್ತಾಯ, ಶೋಷಣೆ, ಹಿಂಸೆ ತಾಳಲಾರದೆ ಹೆತ್ತವರಲ್ಲಿ ಇಂತಹ ಬೇಡಿಕೆ ಇಟ್ಟಿದ್ದರಿಂದ ಇಲ್ಲಿ ಆಕೆಯ ಪತಿ, ಮಾವ ಇಬ್ಬರೂ ಅಪರಾಧಿಗಳು ಎಂದು ದಾಖಲಿಸಿದ ಸುಪ್ರೀಂಕೋರ್ಟ್, ಮೃತ ಮಹಿಳೆಯೊಬ್ಬಳ ಕುಟುಂಬಸ್ಥರ ಪರ ತೀರ್ಪು ನೀಡಿ ನ್ಯಾಯ ಒದಗಿಸಿದೆ.

ತೀರ್ಪಿನ ಆಳಕ್ಕೆ ಹೋಗುವ ಮುನ್ನ ಈ ಪ್ರಕರಣದ ಬಗ್ಗೆಯೂ ತಿಳಿದುಕೊಳ್ಳುವುದು ಮುಖ್ಯ. ಮಧ್ಯಪ್ರದೇಶದ ಗೀತಾಬಾಯಿ (18 ವರ್ಷ) 1998ರ ಮೇ 18ರಂದು ಜೋಗೇಂದ್ರ ಎಂಬಾತನನ್ನು ಮದುವೆಯಾಗುತ್ತಾಳೆ. ಮದುವೆಯಾದ ನಾಲ್ಕೇ ವರ್ಷದಲ್ಲಿ ಗೀತಾಬಾಯಿ ಸೀಮೆ ಎಣ್ಣೆ ಸುರಿದು, ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಗಂಡ, ಮಾವ ಮತ್ತು ಕುಟುಂಬಸ್ಥರು ಮನೆ ಕಟ್ಟಲು ನಿನ್ನ ಕಡೆಯವರು ರೂ. 50000 ನೀಡಬೇಕು ಎಂಬ ಪೀಡನೆಯಿಂದ ಬೇಸತ್ತ ಗೀತಾಬಾಯಿ 2020ರ ಏಪ್ರಿಲ್ 20ರಂದು ಆತ್ಮಹತ್ಯೆಗೆ ಶರಣಾಗಿದ್ದಳು. ಗೀತಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಗ 5 ತಿಂಗಳ ಗರ್ಭಿಣಿ. ಮರಣೋತ್ತರ ಪರೀಕ್ಷೆ ನಡೆಸಿದ್ದ ಡಾ. ವಿ.ಕೆ. ಗಾರ್ಗ್, ಆಕೆಯ ಗರ್ಭಾಶಯವನ್ನು ಪರೀಕ್ಷಿಸಿದಾಗ ಐದು ತಿಂಗಳ ಭ್ರೂಣವು ಸತ್ತ ಸ್ಥಿತಿಯಲ್ಲಿತ್ತು ಎಂದು ವರದಿ ನೀಡಿದ್ದರು.

ಗೀತಾಬಾಯಿ ಚಿಕ್ಕಪ್ಪ ಬನ್ಸಿಲಾಲ್, ಕುಟುಂಬಸ್ಥರಾದ ಶ್ಯಾಮ್ ಬಿಹಾರಿ, ಅಮೃತ್ ಲಾಲ್ ಸೇರಿ ಹಲವರ ಸಾಕ್ಷ್ಯ ಆಧರಿಸಿ ಕೆಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಪ್ರಕರಣದಲ್ಲಿ ಗೀತಾಬಾಯಿ ಅತ್ತೆ (ಪತಿಯ ತಾಯಿ) ಮತ್ತು ಸೋದರನನ್ನು ಆರೋಪ ಮುಕ್ತಗೊಳಿಸಲಾಯಿತು. ಆದರೆ, ಹಣಕ್ಕಾಗಿ ಒತ್ತಾಯಿಸಿ ಮಾನಸಿಕ, ದೈಹಿಕ ಹಿಂಸೆ ನೀಡಿದ ಪತಿ ಜೋಗೇಂದ್ರ ಮತ್ತು ಮಾವ ಬದ್ರಿ ಪ್ರಸಾದ್ ಗೆ ಐಪಿಸಿ ಸೆಕ್ಷನ್ 498(2) (ವರದಕ್ಷಿಣೆ ಕಾಯ್ದೆ) ಅಡಿಯಲ್ಲಿ ಕಠಿಣ ಜೈಲು ಶಿಕ್ಷೆ ಘೊಷಿಸಲಾಯಿತು. ಪತಿ ಮತ್ತು ಕುಟುಂಬಸ್ಥರು ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದರು. ಸಾವಿನ ಘಟನೆಯನ್ನು ಬೇರೆಯದೇ ರೀತಿಯಲ್ಲಿ ವ್ಯಾಖ್ಯಾನಿಸಿದ ಮಧ್ಯಪ್ರದೇಶ ಹೈಕೋರ್ಟ್, ಗೀತಾಬಾಯಿ ಸಾವಿಗೂ ರೂ 50000 ಬೇಡಿಕೆಗೂ ಸಂಬಂಧವಿಲ್ಲ. ಮನೆ ಕಟ್ಟಲು ಹಣ ಕೇಳಿದ್ದನ್ನು ವರದಕ್ಷಿಣೆ ಎನ್ನಲಾಗುವುದಿಲ್ಲ. ಅದೇ ಕಾರಣಕ್ಕೆ ಗೀತಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದಕ್ಕೆ ಸಾಕ್ಷಿಗಳ ಹೇಳಿಕೆ, ದಾಖಲೆ ಪುಷ್ಟಿ ನೀಡುವುದಿಲ್ಲ ಎಂದು ತೀರ್ಪು ನೀಡಿ ಮಾವನನ್ನು ಆರೋಪಮುಕ್ತಗೊಳಿಸಿ ಪ್ರಮುಖ ಆರೋಪಿ ಪತಿ ಶಿಕ್ಷೆಯ ಅವಧಿಯನ್ನು ಹೈಕೋರ್ಟ್ ಕಡಿತಗೊಳಿಸಿತು.

ಈ ತೀರ್ಪು ಮಧ್ಯಪ್ರದೇಶ ಸರ್ಕಾರಕ್ಕೆ ಸಮಾಧಾನ ತರಲಿಲ್ಲ. ಸುಪ್ರೀಂಕೋರ್ಟ್ ಮೆಟ್ಟಲೇರಿದ ಸರ್ಕಾರ, ಪತಿ ಕುಟುಂಬಸ್ಥರ ಧನದಾಹಿ ಮನಸ್ಥಿತಿಯಿಂದಾಗಿಯೇ ಗೀತಾಬಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಲ್ಲದೆ, ಚಿಕ್ಕಪ್ಪನ ಮನೆಗೆ ತೆರಳಿದ್ದ ಸಂದರ್ಭದಲ್ಲೆಲ್ಲಾ ಆಕೆ ತನ್ನ ಮೇಲಾಗುತ್ತಿದ್ದ ಶೋಷಣೆ, ನೀಡುತ್ತಿದ್ದ ಚಿತ್ರಹಿಂಸೆ, ಹಣಕ್ಕಾಗಿ ಒತ್ತಾಯ ಮಾಡುತ್ತಿದ್ದುದರ ಬಗ್ಗೆ ಹೇಳಿಕೊಂಡಿದ್ದಳು. ಆದರೆ, ತನ್ನವರಿಂದ ಹಣ ಕೊಡಲು ಸಾಧ್ಯವಾಗುವುದಿಲ್ಲ ಮತ್ತು ಪತಿ ಕುಟುಂಬಸ್ಥರ ಹಿಂಸೆ ಮುಗಿಯದು ಎಂದು ಬೇಸತ್ತೇ ಆಕೆ ಪ್ರಾಣತ್ಯಾಗ ಮಾಡಿದ್ದಾಳೆ. ಇದು ವರದಕ್ಷಿಣೆ ವ್ಯಾಪ್ತಿಯಲ್ಲೇ ನೋಡಬೇಕಾದ ಗಂಭೀರ ಪ್ರಕರಣ ಎಂದು ಕೋರ್ಟ್ ಗಮನಸೆಳೆಯಿತು. ತೀರ್ಪಗಳನ್ನು ಅಧ್ಯಯನ ನಡೆಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾ.ಹಿಮಾ ಕೋಹ್ಲಿ ಮತ್ತು ನ್ಯಾ.ಎ.ಎಸ್. ಬೋಪಣ್ಣ ನೇತೃತ್ವದ ತ್ರಿಸದಸ್ಯ ಪೀಠ, ವರದಕ್ಷಿಣೆ ಪದಕ್ಕೆ ಇಲ್ಲಿ ವಿಸõತ ವ್ಯಾಖ್ಯಾನ ನೀಡಬೇಕು. ಏಕೆಂದರೆ, ಆಸ್ತಿ, ಮನೆ ಕಟ್ಟುವುದು ಅಥವಾ ಯಾವುದೇ ಕೆಲಸ, ಭದ್ರತೆಗೆ ಸಂಬಂಧಿಸಿ ಪತ್ನಿ ಮನೆಯವರಲ್ಲಿ ಹಣಕ್ಕಾಗಿ ಒತ್ತಾಯ ಮಾಡುವುದು ವರದಕ್ಷಿಣೆ ವ್ಯಾಪ್ತಿಯೊಳಗೇ ಬರುತ್ತದೆ. ಐಪಿಸಿ ಸೆಕ್ಷನ್ 304-ಆ ಅಡಿ ಪ್ರಕರಣ ನಿಭಾಯಿಸುವಾಗ, ವರದಕ್ಷಿಣೆ ಬೇಡಿಕೆಗಳ ಅಪರಾಧ ತಡೆಯುವ ಸಲುವಾಗಿ ನ್ಯಾಯಾಲಯಗಳು ಕಾನೂನು ಕಟ್ಟುನಿಟ್ಟಾಗಿ ವಿಶ್ಲೇಷಿಸಬೇಕೇ ವಿನಾ ಉದಾರತನ ತೋರುವುದಲ್ಲ. ಇಲ್ಲದಿದ್ದಲ್ಲಿ ಕಾನೂನು ರಚನೆಯ ನೈಜ ಉದ್ದೇಶವನ್ನೇ ಅದು ಹಾಳು ಮಾಡುತ್ತದೆ. ಸಮಾಜದಲ್ಲಿ ಆಳವಾಗಿ ಬೇರೂರಿರುವ ಈ ದುಷ್ಟತನದ ನಿಮೂಲನೆಗೆ ವರದಕ್ಷಿಣೆಗೆ ವಿಶಾಲ ವ್ಯಾಖ್ಯಾನ ನೀಡಬೇಕು ಎಂದು ಅಭಿಪ್ರಾಯಪಟ್ಟಿದೆ.

ಕುಟುಂಬಸ್ಥರ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೇ ಗೀತಾಬಾಯಿ-ಜೋಗೇಂದ್ರ ಸಾಮೂಹಿಕ ವಿವಾಹವಾಗಿದ್ದರು. ಅನೇಕ ಸಂದರ್ಭಗಳಲ್ಲಿ ದಂಪತಿ ಖರ್ಚು-ವೆಚ್ಚವನ್ನು ಆಕೆಯ ಚಿಕ್ಕಪ್ಪ ಭರಿಸಿದ್ದಾರೆ. ಅಲ್ಲದೆ, ಗೀತಾಬಾಯಿ ತಾಯಿ ಮತ್ತು ಸೋದರನನ್ನೂ ಚಿಕ್ಕಪ್ಪ ನೋಡಿಕೊಳ್ಳುತ್ತಿದ್ದರು. ಹೀಗಿದ್ದರೂ, ಮಹಿಳೆಯ ವಾಸ್ತವ ಸ್ಥಿತಿ ಅರಿತುಕೊಳ್ಳುವಲ್ಲಿ ಮಧ್ಯಪ್ರದೇಶ ಹೈಕೋರ್ಟ್ ವಿಫಲವಾಯಿತು. ನಿಜಾರ್ಥದಲ್ಲಿ ಇದು ವರದಕ್ಷಿಣೆ ಬೇಡಿಕೆ ಎಂದ ಸುಪ್ರೀಂಕೋರ್ಟ್, ಗೀತಾಬಾಯಿ ಅಸಹಾಯಕಳಾಗಿದ್ದಳು ಮತ್ತು ಅನಿವಾರ್ಯವಾಗಿ ಗಂಡನ ಮನೆಯವರಿಗೆ ಹಣ ಕೊಡಿ ಎಂದು ಕೇಳಿಕೊಂಡಿದ್ದಳು ಎಂಬ ಕೆಳ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸಿದೆ. ಪತಿ ಮತ್ತು ಮಾವನನ್ನು ಸೆಕ್ಷನ್ 304-ಬಿ (ವರದಕ್ಷಿಣೆ ಸಾವು) ಮತ್ತು ಸೆಕ್ಷನ್ 498-ಎ ಅಡಿ ದೋಷಿಗಳು ಎಂದು ತೀರ್ವನಿಸಿ 7 ವರ್ಷ ಶಿಕ್ಷೆ ಘೊಷಿಸಿರುವುದು ಸಮರ್ಥನೀಯ ಎಂದಿರುವುದರಿಂದ ಪತಿ, ಮಾವ ಇಬ್ಬರೂ ಕೆಳ ನ್ಯಾಯಾಲಯಕ್ಕೆ ಹಾಜರಾಗುವುದಲ್ಲದೆ, ಶಿಕ್ಷೆಯ ಬಾಕಿ ಅವಧಿಯನ್ನು ಜೈಲಿನಲ್ಲಿ ಪೂರ್ಣಗೊಳಿಸಬೇಕಿದೆ.

ಇದು ಒಂದು ಮನೆಯ ಕಥೆಯಲ್ಲ

ಇದು ಗೀತಾಬಾಯಿ ಕಥೆ ಮಾತ್ರವಲ್ಲ. ಇಂತಹ ಅಸಹಾಯಕ ಹೆಣ್ಣುಮಕ್ಕಳು ಅನೇಕರು ನಮ್ಮ ಕಣ್ಣ ಮುಂದೆ ಇರುತ್ತಾರೆ. ವಿವಾಹದ ವೇಳೆ ಹಣ ಅಥವಾ ಬೇರೆ ರೂಪದಲ್ಲಿ ಹುಡುಗಿ ಕಡೆಯವರಿಂದ ಆರ್ಥಿಕ ಲಾಭ ಪಡೆದರೂ, ಕೆಲ ಧನದಾಹಿ ಕುಟುಂಬಗಳು ಹಣಕ್ಕಾಗಿ ಪೀಡಿಸುತ್ತಲೇ ಇರುತ್ತವೆ ಮತ್ತು ಈಗಲೂ ಎಷ್ಟೋ ಮಂದಿ ಆತ್ಮಹತ್ಯೆ ಹಾದಿಯೇ ಪರಿಹಾರ ಎಂದುಕೊಳ್ಳುವವರಿದ್ದಾರೆ. ವರದಕ್ಷಿಣೆ ಒತ್ತಾಯದಿಂದ ವೈವಾಹಿಕ ಬದುಕು ದುಸ್ತರವೆನಿಸಿದಾಗ ಕಾನೂನಿನ ಮೊರೆ ಹೋಗುವುದೇ ಸೂಕ್ತ ನಿರ್ಧಾರವಾದರೂ, ಕೋರ್ಟ್-ಕಚೇರಿ ಓಡಾಟಕ್ಕೆ ಕಾಡುವ ಹಣಕಾಸು ಕೊರತೆ ದುರುದ್ದೇಶವಿಲ್ಲದ, ಅಮಾಯಕ ಮಹಿಳೆಯರ ಸಮಸ್ಯೆಯನ್ನು ಜಟಿಲಗೊಳಿಸುವುದು ಸುಳ್ಳಲ್ಲ. ವರದಕ್ಷಿಣೆ ಹೆಸರಲ್ಲಿ ಹೆಣ್ಣುಮಕ್ಕಳ ದೌರ್ಜನ್ಯ ತಡೆಯಲೆಂದೇ ಮಧ್ಯಪ್ರದೇಶ ಸರ್ಕಾರ ಗೀತಾಬಾಯಿ ಸಾವಿನ ಕುರಿತ ಕಾನೂನು ಹೋರಾಟವನ್ನು ಸುಪ್ರೀಂಕೋರ್ಟ್​ಗೆ ಕೊಂಡೊಯ್ದಿತ್ತು. ಸರ್ಕಾರಗಳ ಇಂತಹ ನಡೆಗಳೇ ಶ್ರೀಸಾಮಾನ್ಯರಲ್ಲಿ ಬದುಕಿನ ಬಗ್ಗೆ ವಿಶ್ವಾಸ ಮತ್ತು ಭರವಸೆ ಮೂಡಿಸುವುದು.

ಒಳಿತಿಗೆ ಕೊಟ್ಟದ್ದು ವರದಕ್ಷಿಣೆಯಲ್ಲ

ಕೇರಳ ಹೈಕೋರ್ಟ್ ಕಳೆದ ಡಿಸೆಂಬರ್​ನಲ್ಲಿ ನೀಡಿದ್ದ ತೀರ್ಪೆಂದರ ಪ್ರಕಾರ, ವಧುವಿನ ಶ್ರೇಯೋಭಿವೃದ್ಧಿ ಮತ್ತು ಒಳಿತಿಗಾಗಿ ಉಡುಗೊರೆ ನೀಡುವುದು ವರದಕ್ಷಿಣೆ ನಿಷೇಧ ಕಾಯ್ದೆ 1961ರಡಿ ವರದಕ್ಷಿಣೆ ಎಂದು ಪರಿಗಣಿಸಬಾರದು. ಪಾಲಕರು ವರನ ಕಡೆಯಿಂದ ಬೇಡಿಕೆ, ಒತ್ತಡವಿಲ್ಲದೆ ನಗದು, ಆಭರಣ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತು ನೀಡಿದರೆ ಅದು ವರದಕ್ಷಿಣೆಯಾಗುವುದಿಲ್ಲ.

ವರದಕ್ಷಿಣೆ, ಸ್ತ್ರೀಧನ ನಡುವಿನ ವ್ಯತ್ಯಾಸ

ವರದಕ್ಷಿಣೆಯು ಸ್ತ್ರೀಧನಕ್ಕಿಂತ (ಯುವತಿಗೆ ಸೇರಿದ ಆಸ್ತಿ, ಸಂಪನ್ಮೂಲ) ಭಿನ್ನ. ಮದುವೆ ಮೊದಲು ಅಥವಾ ನಂತರ ಅಥವಾ ಮಗುವಿನ ಜನನದ ಸಮಯದಲ್ಲಿ ವಧುವಿಗೆ ಉಡುಗೊರೆಯಾಗಿ ನೀಡುವ ಆಸ್ತಿ, ಸಂಪನ್ಮೂಲವನ್ನು ಸ್ತ್ರೀಧನ ಎನ್ನುತ್ತಾರೆ. ಸ್ತ್ರೀಧನವನ್ನು ಸ್ವಯಂಪ್ರೇರಣೆಯಿಂದ ನೀಡಿದರೆ, ವರದಕ್ಷಿಣೆ ಮದುವೆ ವೇಳೆ ಷರತ್ತು ವಿಧಿಸಿ ಬಲವಂತದಿಂದ ಪಡೆಯುವುದು. ಸ್ತ್ರೀಧನದಲ್ಲಿ ವಧು ಪಿತ್ರಾರ್ಜಿತವಾಗಿ ಪಡೆದ ಅಥವಾ ಸ್ವಯಂ-ಸ್ವಾಧೀನಪಡಿಸಿಕೊಂಡ ಆಸ್ತಿ ಸಹ ಒಳಗೊಂಡಿರುತ್ತದೆ. ಆಕೆಯ ಗಂಡನ ಕುಟುಂಬದಿಂದ ನಗದು ಅಥವಾ ವಸ್ತುವಿನ ರೂಪದಲ್ಲಿ ಸ್ವೀಕರಿಸಿದ ಉಡುಗೊರೆಗಳೂ ಸ್ತ್ರೀಧನವೇ. ವರದಕ್ಷಿಣೆಯನ್ನು ವರದಕ್ಷಿಣೆ ನಿಷೇಧ ಕಾಯ್ದೆ, 1961ರ ಮೂಲಕ ನಿಯಂತ್ರಿಸಿದರೆ, 1956ರ ಹಿಂದು ಉತ್ತರಾಧಿಕಾರ ಕಾಯ್ದೆಯಡಿ ಸ್ತ್ರೀಧನ ನಿಯಂತ್ರಿಸಲಾಗುತ್ತದೆ.