ಅಂಕಣ

ಬಾಂಧವ್ಯ ಬೆಸೆಯುವ, ಸಡಗರ ಹೆಚ್ಚಿಸುವ ಹಬ್ಬಗಳು

ರಮೇಶ್​ ಕುಮಾರ್​​ ಬಿ ಎಡಮೋಳೆ

ಆಧುನಿಕತೆಯ ಯುಗದಲ್ಲಿ ಬದಲಾಗುತ್ತಿರುವ ಜೀವನಕ್ರಮದಿಂದ, ಒತ್ತಡದ ಕಾರ್ಯಗಳಿಂದ ಹಬ್ಬಗಳ ಆಚರಣೆಯ ಹಿಂದಿನ ಮೌಲ್ಯ ಮರೀಚಿಕೆಯಾಗಿ, ಆಚರಿಸುವ ಕ್ರಮದಲ್ಲಿ ಅನೇಕ ಬದಲಾವಣೆಗಳು ಆಗಿವೆಯಾದರೂ ಸಂಬಂಧಗಳನ್ನು ಗಟ್ಟಿ ಮಾಡಿ, ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಹಬ್ಬಗಳು ಪ್ರೇರಣಾದಾಯಕವಾಗಿವೆ.

‘ಅಮ್ಮ, ಇವತ್ತು ಕಡುಬು (ಇಡ್ಲಿ) ಮಾಡ್ತೀಯಾ, ಮಾವಂದಿರು ಬರುತ್ತಾರೆ, ದೀಪಾವಳಿಗೆ ಹೊಸ ಬಟ್ಟೆ, ತಿಂಡಿ, ಸುರುಸುರು ಕಡ್ಡಿ, ಪಟಾಕಿ ತರುತ್ತಾರೆ. ಕಡುಬು ಜೊತೆಗೆ ಪಾಯಸ, ಮತ್ತೆ ರಾತ್ರಿಗೆ ದೋಸೆ ಮಾಡ್ತೀಯಲ್ವಾ, ನನಗೆ ತುಂಬ ಇಷ್ಟ...’ ಹೀಗೆ ಮಗು ತಾಯಿಯಲ್ಲಿ ತನ್ನ ಬೇಡಿಕೆಗಳನ್ನು ಹೇಳುತ್ತಿದ್ದುದ್ದನ್ನು ಕಂಡು ನನಗೆ ಹಬ್ಬಗಳಲ್ಲಿ ಅಡಗಿರುವ ಬಾಂಧವ್ಯಗಳ ಮಧುರತೆಯ ನೆನಪು ಮನದಲ್ಲಿ ಮೂಡಿತು. ಹಬ್ಬಗಳು ಅಂದರೆ ಅದೆಷ್ಟು ಉತ್ಸಾಹ, ಅದೆಷ್ಟು ವೈವಿಧ್ಯ. ಹಬ್ಬ-ಹರಿದಿನಗಳನ್ನು ಎಲ್ಲರೂ ಖುಷಿಯಿಂದ ಆಸ್ವಾದಿಸುತ್ತಾರೆ. ಮಕ್ಕಳ ಖುಷಿಗಂತೂ ಮೇರೆಯೇ ಇಲ್ಲವಾಗುತ್ತದೆ. ದೀಪಾವಳಿ ಅಥವಾ ಇನ್ನಿತರ ಯಾವುದೇ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಎಂದಾಕ್ಷಣದಿಂದಲೇ ಮಕ್ಕಳ ಮುಖದಲ್ಲಿ ಸಂತಸ ಮನೆಮಾಡಿರುತ್ತದೆ. ಸರಸರನೇ ಅತ್ತಿಂದಿತ್ತ ಓಡುತ್ತ ಹಬ್ಬದ ದಿನಕ್ಕಾಗಿಯೇ ಚಾತಕಪಕ್ಷಿಯಂತೆ ಕಾಯುತ್ತಾರೆ. ಹಬ್ಬ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಸಂಸ್ಕೃತಿ, ಪರಂಪರೆ ಆಚರಣೆಗಳ ಜೊತೆ ನಮ್ಮ ಬಂಧು-ಬಳಗದವರೊಡಗೂಡಿ ಸಂಬಂಧವನ್ನು ಗಟ್ಟಿಯಾಗಿಸಲು ಒದಗುವ ಉತ್ತಮ ಅವಕಾಶ. ಹಬ್ಬದ ನೆಪದಲ್ಲಾದರೂ ಎಲ್ಲರೂ ಒಂದಾಗಿ, ಸವಿ-ಸುವಿಚಾರಗಳನ್ನು ಆಸ್ವಾದಿಸಿ ಸಂಬಂಧಕ್ಕೊಂದು ಹೊಸ ರೂಪ ನೀಡುವ ದಿಸೆಯಲ್ಲಿ ಹಬ್ಬಗಳು ಮಹತ್ತರ ಪಾತ್ರವಹಿಸುತ್ತವೆ. ಒತ್ತಡ, ಧಾವಂತದ ಬದುಕಿಗೆ ಬ್ರೇಕ್ ಹಾಕಿ ಹೊಸ ಚೈತನ್ಯ-ಉಲ್ಲಾಸ ತುಂಬಿಕೊಂಡು ಮತ್ತಷ್ಟು ಹುರುಪಿನಿಂದ ಮುಂದೆ ಸಾಗಲು ಹಬ್ಬದ ಆಚರಣೆಗಳು ಈಗಿನ ಕಾಲದ ಅನಿವಾರ್ಯತೆಯೂ ಆಗಿವೆ ಎನ್ನಬಹುದು.

ಸನಾತನ ಧರ್ಮ, ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಂದು ಹಬ್ಬಗಳಿಗೆ ವಿಶೇಷ ಮಹತ್ವವಿದೆ. ಯುಗಾದಿ, ದೀಪಾವಳಿ, ಸಂಕ್ರಾಂತಿ ಮೊದಲಾದ ಅನೇಕ ಹಬ್ಬಗಳನ್ನು ಸಡಗರದಿಂದ ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ಭಾರತದಲ್ಲಿರುವಷ್ಟು ಹಬ್ಬ, ಹರಿದಿನಗಳು ಬೇರೆಲ್ಲೂ ಕಾಣಸಿಗದು. ಪ್ರತಿದಿನವೂ ಹಬ್ಬವೇ. ಹಬ್ಬಗಳಲ್ಲಿಯೇ ಇಲ್ಲಿನ ಜನಜೀವನ ಹಾಸುಹೊಕ್ಕಾಗಿದ್ದು ಪ್ರಾಚೀನ ಧಾರ್ವಿುಕ ಸಂಸ್ಕ ೃಯೂ ಇದಕ್ಕೆ ಕಾರಣ ಎನ್ನಬಹುದು. ಬದುಕನ್ನು ಸಂಭ್ರಮದಿಂದ ಜೀವಿಸಬೇಕು ಎನ್ನುವುದು ಇದರ ಉದ್ದೇಶವೂ ಹೌದು. ಇಲ್ಲಿನ ಪ್ರತಿ ಹಬ್ಬಗಳ ಆಚರಣೆಯಲ್ಲಿ ವೈಜ್ಞಾನಿಕತೆಯೂ ಒಳಗೊಂಡಿದೆ. ಆಧುನಿಕತೆಯ ಯುಗದಲ್ಲಿ ಬದಲಾಗುತ್ತಿರುವ ಜೀವನಕ್ರಮದಿಂದ, ಒತ್ತಡದ ಕಾರ್ಯಗಳಿಂದ ಹಬ್ಬಗಳ ಆಚರಣೆಯ ಹಿಂದಿನ ಮೌಲ್ಯ ಮರೀಚಿಕೆಯಾಗಿ, ಆಚರಿಸುವ ಕ್ರಮದಲ್ಲಿ ಅನೇಕ ಬದಲಾವಣೆಗಳು ಆಗಿವೆಯಾದರೂ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ಹಬ್ಬಗಳು ಪ್ರೇರಣಾದಾಯಕವಾಗಿವೆ. ಮನೆಯವರು, ಬಂಧುಬಳಗದವರೆಲ್ಲರೂ ಒಟ್ಟಾಗಿ ಉಲ್ಲಾಸ, ಉತ್ಸಾಹದೊಂದಿಗೆ, ಸುಖ, ಸಂತೋಷದಿಂದ ಜೀವನ ನಡೆಸಬೇಕೆಂಬುದು ಹಬ್ಬಗಳ ಆಚರಣೆಯ ಹಿನ್ನೆಲೆಯಾಗಿದೆ.

ಇಂದಿನ ದಿನಗಳಲ್ಲಿ ಜೀವನಶೈಲಿ ಎಷ್ಟು ಬದಲಾವಣೆಯಾಗಿದೆ ಎಂದರೆ ಹಬ್ಬಗಳನ್ನೂ ಮನೆಯವರೊಂದಿಗೆ, ಬಂಧುಗಳೊಂದಿಗೆ ಸರಿಯಾದ ರೀತಿಯಲ್ಲಿ ಆಚರಿಸಲು ಸಾಧ್ಯವಾಗುತ್ತಿಲ್ಲ. ಕೆಲಸದ ಒತ್ತಡ, ರಜೆ ದೊರಕದಿರುವುದು, ಉದ್ಯೋಗ ನಿಮಿತ್ತ ದೂರದ ಊರಿನಲ್ಲಿರುವುದು ಹೀಗೆ ಕಾರಣಗಳು ಹಲವಾರು. ಇನ್ನು ಕೆಲವರಿಗಂತೂ ರಜೆ ಸಿಕ್ಕರೆ ಸಾಕು ನಿದ್ರೆ ಮಾಡೋಣ ಎಂಬ ಜಡತ್ವ, ಉದಾಸೀನತೆಯಿಂದ ಹಬ್ಬವನ್ನು ಆಚರಿಸುವ ಒಲವು ಕಡಿಮೆಯಾಗಿದೆ. ಈಗೀಗ ಹಬ್ಬಗಳನ್ನು ಯಾವ ರೀತಿ ಆಚರಿಸಬೇಕೆಂಬ ಅರಿವು ಕಡಿಮೆಯಾಗುತ್ತಿದೆ. ಇವೆಲ್ಲದರಿಂದ ಕೆಲವು ಹಬ್ಬಗಳ ಆಚರಣೆಯೇ ಇಲ್ಲವಾಗುತ್ತಿದೆ.

ನಗರ-ಪಟ್ಟಣಗಳಲ್ಲಿ ಬಣ್ಣ-ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ದೇವರಿಗೆ ಪೂಜೆ ಮಾಡಿ, ಪಟಾಕಿ ಹೊಡೆದು, ಅಂಗಡಿಯಿಂದ ಕೊಂಡು ತಂದ ಸಿಹಿ ತಿಂದು, ಊಟ ಮಾಡಿದರೆ ದೀಪಾವಳಿ ಮುಗಿಯಿತು. ಯುಗಾದಿಗೆ ಬೇವು-ಬೆಲ್ಲ ಹಂಚಿ ಸಿಹಿಯೂಟ ಮಾಡಿದರೆ, ಮಕರ ಸಂಕ್ರಾಂತಿಗೆ ಎಳ್ಳು-ಬೆಲ್ಲ ಹಂಚಿದರೆ ಹಬ್ಬಗಳು ಆಚರಿಸಲ್ಪಟ್ಟಂತೆ ಎಂಬ ಭಾವನೆ ಹೆಚ್ಚಾಗುತ್ತಿದೆ. ಸಾಂಕೇತಿಕ ಎಂಬಂತೆ ಹಬ್ಬಗಳು ಆಚರಿಸಲ್ಪಡುವುದರ ಜೊತೆಗೆ ಹಬ್ಬಕ್ಕಾಗಿ ರಜೆ ದೊರೆಯುವುದರಿಂದ ಲೇಟಾಗಿ ಎದ್ದು, ಮಧ್ಯಾಹ್ನ ಹೊತ್ತಿಗೆ ತಿಂಡಿ ಮಾಡಿ, ಸಂಜೆಯಾಗುತ್ತಲೇ ಪಾರ್ಟಿ, ಔತಣಕೂಟದಲ್ಲಿ ಭಾಗಿಯಾಗಿ, ಪಾರ್ಕ ಸುತ್ತಾಡಿ, ಸಿನಿಮಾ ನೋಡಿ ಬರುವ ಮೂಲಕ ಹಬ್ಬದ ದಿನಗಳನ್ನು ಸಂತೋಷವಾಗಿ ಕಳೆಯುವವರಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳು ಇನ್ನೂ ತನ್ನ ಸೊಗಡನ್ನು ಉಳಿಸಿಕೊಂಡಿವೆ ಎಂಬುದು ಸಮಾಧಾನಕರ. ಊರಿಗೆ ಊರೇ ಒಂದುಗೂಡಿ ಹಬ್ಬವನ್ನಾಚರಿಸಲಾಗುತ್ತದೆ. ಹಬ್ಬಕ್ಕೆ ಕೆಲ ದಿನ ಇರುವಾಗಲೇ, ಸಾಕಷ್ಟು ಪೂರ್ವ ತಯಾರಿಗಳು ನಡೆಯುತ್ತವೆ. ಅಡುಗೆಸಾಮಗ್ರಿ, ಪೂಜಾಸಾಮಗ್ರಿ, ಮನೆ ಸ್ವಚ್ಛಗೊಳಿಸುವುದು, ಸುಣ್ಣ-ಬಣ್ಣ ಬಳಿಯುವುದು ಹೀಗೆ ಒಂದಲ್ಲ ಒಂದು ಕೆಲಸಗಳು ನಡೆಯುತ್ತಿರುತ್ತವೆ. ಮುಂಜಾನೆ ನಾಲ್ಕು-ಐದು ಗಂಟೆಗೆ ಎದ್ದು ಸ್ನಾನ ಮಾಡಿ, ತಳಿರುತೋರಣದ ಸಿಂಗಾರ, ರಂಗೋಲಿ ಬಿಡಿಸಿ, ಪೂಜೆಗೆ ತಯಾರು ಮಾಡಿ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಮನೆಯ ಹಿರಿಯರು ಮುಂದೆ ನಿಂತು ಮಕ್ಕಳಿಗೆ, ಮೊಮ್ಮಕ್ಕಳಿಗೆ ಧಾರ್ವಿುಕ ವಿಧಿ-ವಿಧಾನಗಳನ್ನು ತಿಳಿಹೇಳುತ್ತಾರೆ. ಅವರ ಕೈಯಿಂದಲೇ ಕೆಲಸ ಕಾರ್ಯಗಳನ್ನು ಮಾಡಿಸುವ ಮೂಲಕ ಹಬ್ಬದ ಆಚರಣೆಯ ಬಗ್ಗೆ ಅರಿವು ಮೂಡಿಸುತ್ತಾರೆ. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಎಲ್ಲರೂ ಒಟ್ಟು ಸೇರಿ ಕೆಲಸಗಳನ್ನೆಲ್ಲ ಹಂಚಿಕೊಂಡು ಧಾರ್ವಿುಕ ಆಚರಣೆಯ ಬಳಿಕ ಸಿಹಿಯೂಟ ಉಂಡು ಖುಷಿ ಪಡುತ್ತಾರೆ. ದೂರದ ಊರಿನಲ್ಲಿರುವ ಮಗ-ಸೊಸೆ, ಮೊಮ್ಮಕ್ಕಳು, ಮಗಳು-ಅಳಿಯ, ಬಂಧುಮಿತ್ರರು ಕೂಡ ಹಬ್ಬದ ನೆಪದಲ್ಲಿ ಒಟ್ಟಾಗಿ ಬೆರೆಯುವ ಸುಮಧುರ ಕ್ಷಣವಾಗಿದೆ.

ಹಬ್ಬಗಳು ಸಂಭ್ರಮ, ಸಡಗರದಿಂದ ಮಾತ್ರ ಕೂಡಿರದೆ ಧಾರ್ವಿುಕ ಹಿನ್ನೆಲೆಯೂ ಒಳಗೊಂಡಿದೆ. ಹಿರಿಯರಿಗೆ ಗೌರವ, ದೇವಾಲಯಕ್ಕೆ ತೆರಳುವುದು, ಪ್ರಾರ್ಥನೆ, ಉಪವಾಸ ಮಾಡಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಸಂಗೀತ, ನೃತ್ಯ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ. ಹಬ್ಬವು ಅಂತರಂಗ ಶುದ್ಧಿಯ ಜೊತೆ ದೈಹಿಕ ಚಟುವಟಿಕೆಗಳ ಮೂಲಕ ಬಹಿರಂಗ ಶುದ್ಧಿಯನ್ನು ಪ್ರತಿಪಾದಿಸುತ್ತದೆ. ಸಾಮಾಜಿಕ ಮತ್ತು ಸಾಂಸ್ಕ ೃಕ ಮಹತ್ವವನ್ನು ಇದು ಒಳಗೊಂಡಿದೆ. ಈ ಹಬ್ಬಗಳ ಜೊತೆ ಅಲ್ಲಿಯ ಜಾನಪದೀಯ ಕಲೆಗಳೂ ಉಳಿದುಕೊಂಡು ಬಂದಿದ್ದು ಅವುಗಳನ್ನು ಅರ್ಥೈಸಿಕೊಂಡು, ಮಹತ್ವವನ್ನು ಅರಿತುಕೊಂಡು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮದಾಗಿದೆ. ನಮ್ಮ ನಾಡಿನಲ್ಲಿ ಆಚರಿಸಲ್ಪಡುವ ಮಕರ ಸಂಕ್ರಾಂತಿ, ಸುಗ್ಗಿ, ಹೋಳಿ, ಇತ್ಯಾದಿ ಹಬ್ಬಗಳು ಜಾನಪದ ಮತ್ತು ಕೃಷಿ ಹಿನ್ನೆಲೆಯನ್ನು ಹೊಂದಿರುವಂಥವುಗಳು. ಮೊದಲೇ ನಮ್ಮ ದೇಶದಲ್ಲಿ ಹಲವು ಬಗೆಯ ಧರ್ಮ, ಜಾತಿ, ಮತ, ನಡೆ-ನುಡಿಗಳಿವೆ. ಹಾಗಾಗಿ ನಮ್ಮ ಹಬ್ಬಗಳ ಆಚರಣೆಯಲ್ಲೂ ವೈವಿಧ್ಯವನ್ನು ಕಾಣಬಹುದಾಗಿದೆ.

ನಮ್ಮಲ್ಲಿ ದಸರಾವನ್ನು ನಾಡಹಬ್ಬವೆಂದು ಆಚರಿಸಲಾಗುತ್ತದೆ. ನವರಾತ್ರಿ, ಕೃಷ್ಣ ಜನ್ಮಾಷ್ಟಮಿ, ಗಣೇಶ ಚತುರ್ಥಿ, ರಾಮನವಮಿ ಹಬ್ಬಗಳು ಪೌರಾಣಿಕ ಹಿನ್ನೆಲೆ ಹೊಂದಿದ್ದು ಧಾರ್ವಿುಕತೆಯನ್ನು ಬಿಂಬಿಸುತ್ತವೆ. ಸಂಕ್ರಾಂತಿ, ಯುಗಾದಿ, ದೀಪಾವಳಿ, ಇತ್ಯಾದಿ ಹಬ್ಬಗಳು ಕೃಷಿ ಹಾಗೂ ಧಾರ್ವಿುಕ ಹಿನ್ನೆಲೆಯುಳ್ಳ ಹಬ್ಬಗಳಾಗಿವೆ. ಮಹಾವೀರ ಜಯಂತಿ, ಬುದ್ಧ ಜಯಂತಿ, ಕ್ರಿಸ್ಮಸ್, ಹೀಗೆ ಮಹಾ ಪುರುಷರ ಜನ್ಮದಿನದ ಪ್ರಯುಕ್ತವಾಗಿ ಆಚರಿಸಲ್ಪಟ್ಟರೆ, ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಇವೆಲ್ಲವನ್ನೂ ಸಾರ್ವತ್ರಿಕವಾಗಿ ನಮ್ಮ ನಾಡಿನ ಅಭಿಮಾನ, ಗೌರವದಿಂದ ಹಬ್ಬದ ರೀತಿಯಲ್ಲಿ ಆಚರಣೆಯನ್ನು ಮಾಡಲಾಗುತ್ತದೆ. ಹಾಗೆ ನೋಡಹೋದರೆ ವರ್ಷದ ಎಲ್ಲ ದಿನಗಳಲ್ಲೂ ಒಂದಲ್ಲ ಒಂದು ಹಬ್ಬ ಇರುವುದನ್ನು ಕಾಣಬಹುದು.

ನಮ್ಮ ಮನೆಯಲ್ಲಿ ಹೊಸ ಅಕ್ಕಿ ಊಟ ತುಳುವಿನಲ್ಲಿ ಪುದ್ದರ್ ಎಂದು ಆಚರಿಸುವ ಸಂಪ್ರದಾಯವಿದೆ. ಅಂದರೆ ವರ್ಷದ ಪ್ರಥಮ ಬೆಳೆಯ ಫಲವನ್ನು ದೇವರಿಗೆ ಅರ್ಪಿಸಿ, ಹೊಸ ಅಕ್ಕಿಯಿಂದ ಮಾಡಲಾಗುವ ಅನ್ನವನ್ನು ಊಟ ಮಾಡುವುದು. ಸರ್ವಶಕ್ತನಾದ ಭಗವಂತನು ನಮ್ಮ ಜೀವನೋಪಾಯಕ್ಕಾಗಿ ಸಕಲ ಸೌಭಾಗ್ಯಗಳನ್ನು ಕರುಣಿಸಿದ್ದಾನೆ. ಫಲ-ವಸ್ತುಗಳ ಮೂಲಕ ಅನ್ನಾಹಾರಗಳನ್ನು ನೀಡುತ್ತಾನೆ. ನಮಗೆ ನೀಡಿರುವ ಹೂವು, ಹಣ್ಣು, ಕಾಯಿ, ಭತ್ತ, ಅಕ್ಕಿ ಇತ್ಯಾದಿ ಎಲ್ಲ ಫಲವಸ್ತುಗಳನ್ನು ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿ, ಪೂಜೆ-ಆರಾಧನೆಯ ಸೇವೆಯ ಮೂಲಕ ಕೃತಜ್ಞತೆಯನ್ನು ಸಲ್ಲಿಸಿ ಬಳಿಕ ಅವನ್ನು ಪ್ರಸಾದ ರೂಪದಲ್ಲಿ ಹೊಸ ಅಕ್ಕಿ ಊಟ ಮಾಡಲಾಗುತ್ತದೆ.

ಹೀಗೆ ಪ್ರತಿ ಆಚರಣೆಗೂ ಒಂದೊಂದು ಕತೆಯಿದೆ. ಹಿನ್ನೆಲೆಯಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಭಾರತೀಯ ಹಬ್ಬ-ಹರಿದಿನಗಳ ಬಗ್ಗೆ ಕುತೂಹಲ, ಆಸಕ್ತಿ ಇರುವ ಅನೇಕ ವಿದೇಶಿಗರು ಹಬ್ಬದ ಸಮಯದಲ್ಲಿ ಭಾರತಕ್ಕೆ ಪ್ರವಾಸಕ್ಕೆ ಆಗಮಿಸುತ್ತಾರೆ ಎಂಬುದು ಸಂತೋಷದ ವಿಷಯ. ಮುಂಬೈನ ಗಣೇಶ ಚತುರ್ಥಿ, ಕೊಲ್ಕತ್ತದ ನವರಾತ್ರಿ, ಗುಜರಾತ್​ನ ದಾಂಡಿಯಾ, ಕೇರಳದ ಓಣಂ, ಪೂರಂ ಹೀಗೆ ಆಯಾ ಪ್ರದೇಶದ ಹಬ್ಬಗಳಿಗೆ ಅನುಸಾರವಾಗಿ ಪ್ರವಾಸಿಗರು ತಮ್ಮ ವೇಳಾಪಟ್ಟಿಯನ್ನು ಆಯೋಜಿಸಿಕೊಂಡು ಭಾರತಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಐತಿಹಾಸಿಕ, ಪಾರಂಪರಿಕ ಹಾಗೂ ನಯನ ಮನೋಹರ ಪ್ರಾಕೃತಿಕ ತಾಣವನ್ನಷ್ಟೇ ಅಲ್ಲದೆ ಇಲ್ಲಿನ ಹಬ್ಬಗಳನ್ನೂ ಪ್ರವಾಸದ ಪಟ್ಟಿಯಲ್ಲಿ ವಿದೇಶಿಗರು ಸೇರಿಸಿಕೊಳ್ಳುತ್ತಿರುವುದು ಹೊಸ ಬೆಳವಣಿಗೆಯಾಗಿದೆ. ಮಾಹಿತಿಯ ಪ್ರಕಾರ ಭಾರತಕ್ಕೆ ಪ್ರವಾಸ ನಿಟ್ಟಿನಲ್ಲಿ ಆಗಮಿಸುವವರ ಸಂಖ್ಯೆಯೂ ಸಾಕಷ್ಟು ಇದ್ದು, ಇಲ್ಲಿನ ಕಲೆ-ಸಂಸ್ಕೃತಿಯನ್ನು ವಿದೇಶಿಗರಿಗೆ ಪರಿಚಯಿಸಲು ಸಾಕಷ್ಟು ಟ್ರಾವೆಲ್ಸ್-ಮತ್ತು ಟೂರಿಸ್ಟ್ ಸಂಸ್ಥೆಗಳು ಸೇವೆ ಒದಗಿಸುತ್ತಿವೆ.

ನಾವಿಂದು ಎಲ್ಲ ರೀತಿಯಲ್ಲಿ ಸಾಕಷ್ಟು ಮುಂದುವರಿದಿದ್ದೇವೆ. ಈ ಸಂದರ್ಭದಲ್ಲಿ ನಮ್ಮ ಜೀವನಾಡಿಯಾಗಿರುವ ಹಬ್ಬ, ಹರಿದಿನ, ಪರಂಪರೆಗಳು ತೆರೆಮರೆಗೆ ಸರಿಯಬಾರದು. ಅವುಗಳ ಆಚರಣೆಯ ಮಹತ್ವವನ್ನು ತಿಳಿಯುವುದರ ಜೊತೆಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಅವುಗಳ ದಾಖಲೀಕರಣ, ಅಧ್ಯಯನ, ಸಂಶೋಧನೆಗಳೂ ನಡೆದರೆ ಇನ್ನೂ ಉತ್ತಮ. ಇಲ್ಲವಾದಲ್ಲಿ ಹಬ್ಬಗಳು ಆಚರಣೆಗೆ ಮಾತ್ರ ಸೀಮಿತವಾಗಿ ಅವುಗಳ ಮೂಲ ಆಶಯವೇ ಮರೆತು ಹೋಗಬಹುದು. ಇದಕ್ಕೆ ಸಂಬಂಧಿಸಿದಂತೆ ಒಂದು ಕತೆ ನೆನಪಾಗುತ್ತದೆ.

ಒಬ್ಬಾತ ತನ್ನ ಪಕ್ಕದ ಮನೆಯವರೊಂದಿಗೆ ಮಾತನಾಡುತ್ತ, ‘ಸ್ವಾಮಿ, ನಿಮ್ಮ ಮನೆಯ ಬೆಕ್ಕನ್ನು ಒಂದು ದಿನದ ಮಟ್ಟಿಗೆ ನಮ್ಮ ಮನೆಗೆ ಕಳುಹಿಸಿಕೊಡಿ’ ಎಂದನಂತೆ. ಪಕ್ಕದ ಮನೆಯಾತ, ‘ಏನು ಅಷ್ಟೊಂದು ಇಲಿಗಳ ಕಾಟ ನಿಮ್ಮ ಮನೆಯಲ್ಲಿ ಇದೆಯೇ?’ ಎಂದು ಪ್ರಶ್ನಿಸಿದ. ಅದಕ್ಕೆ ಈತ, ‘ಇಲ್ಲ.. ಇಲ್ಲ. ನಮ್ಮ ತಂದೆಯ ಶ್ರಾದ್ಧ ಮಾಡಬೇಕು. ಆಗ ಒಂದು ಬೆಕ್ಕನ್ನು ಕಟ್ಟಿ ಹಾಕುವ ಸಂಪ್ರದಾಯ ಉಂಟು. ಹಾಗಾಗಿ ನಮ್ಮ ಮನೆಯಲ್ಲಿ ಬೆಕ್ಕು ಇಲ್ಲ. ಅದಕ್ಕೆ ನಿಮ್ಮ ಮನೆಯ ಬೆಕ್ಕನ್ನು ಕೊಡಬಹುದೇ ಎಂದು ಕೇಳಿದೆ’ ಎಂದನಾತ.

ಆಗ ಪಕ್ಕದ ಮನೆಯಾತ, ‘ಹೌಹಾರಿ.. ಅಯ್ಯೋ ಪೆದ್ದು, ಬೆಕ್ಕನ್ನು ಕಟ್ಟಿ ಹಾಕುವುದು ಸಂಪ್ರದಾಯವಲ್ಲ ಮಾರಾಯ. ನೀನು ಸಣ್ಣದಿರುವಾಗ ಶ್ರಾದ್ಧದ ದಿನ ಬೆಕ್ಕು ಕಟ್ಟಿ ಹಾಕಿರುವುದನ್ನು ನೋಡಿದ್ದಿ ಅಲ್ಲವೇ. ಹಾಗಾಗಿ ಅದನ್ನು ತಪ್ಪಾಗಿ ಭಾವಿಸಿದ್ದಿ. ಶ್ರಾದ್ಧ ಮಾಡುವಾಗ ಅಲ್ಲಿ ಇಲ್ಲಿ ಓಡಾಡಿ ಅಡುಗೆ, ಪೂಜೆಯನ್ನು ಹಾಳು ಮಾಡುತ್ತದೆ ಎಂದು ನಿನ್ನ ಅಪ್ಪ ಆ ತುಂಟಬೆಕ್ಕನ್ನು ಕಂಬಕ್ಕೆ ಕಟ್ಟಿ ಹಾಕಿದ್ದರು. ಅದೇನೂ ಶಾಸ್ತ್ರವೂ ಅಲ್ಲ, ಸಂಪ್ರದಾಯವೂ ಅಲ್ಲ’ ಎಂದು ನಿಜ ಸಂಗತಿಯನ್ನು ತಿಳಿಸಿದ್ದರು. ಒಂದು ವೇಳೆ ಅವರು ತಿಳಿಸದೇ ಹೋಗಿದ್ದಲ್ಲಿ ಶ್ರಾದ್ಧ ಮಾಡಲು ಬೆಕ್ಕು ಬಾಡಿಗೆಗೆ ನೀಡುವ ಹೊಸ ಉದ್ಯಮ ಹುಟ್ಟಿಕೊಳ್ಳುತ್ತಿತ್ತೋ ಏನೋ.

ಹೀಗೆ ಅನೇಕ ಸಲ ಆಚರಣೆಯ ಹಿನ್ನೆಲೆ, ಮಹತ್ವ ಅರಿಯದೆ ಅಪಾರ್ಥವಾಗುವ ಸಂದರ್ಭಗಳೂ ಇವೆ. ಅದಕ್ಕಾಗಿ ನಮ್ಮ ಹಿರಿಯರಲ್ಲಿರುವ ಜ್ಞಾನವನ್ನು ಬಳುವಳಿಯಾಗಿ ಪಡೆದು ಅವುಗಳನ್ನು ಸೂಕ್ತ ರೀತಿಯಲ್ಲಿ ಅರ್ಥಮಾಡಿಕೊಂಡು ಆಚರಿಸುವ ಅಗತ್ಯವಿದೆ. ನಾವು ಮಾತ್ರವಲ್ಲದೆ ನಮ್ಮ ಮುಂದಿನ ಪೀಳಿಗೆ ಕೂಡ ಯಾವೊಂದು ಮೂಢನಂಬಿಕೆಗೆ ಬಲಿಯಾಗದೆ, ಶ್ರದ್ಧೆ-ಭಕ್ತಿಯಿಂದ ಧಾರ್ವಿುಕ, ಪಾರಂಪರಿಕ, ಹಬ್ಬ-ಹರಿದಿನಗಳನ್ನು ಆಚರಿಸುತ್ತ ಕುಟುಂಬದವರೊಡನೆ, ಬಂಧು-ಬಳಗದವರ ಜೊತೆ ಬೆರೆತು ಹಬ್ಬವನ್ನು ಆಚರಿಸಿ ಸಂತೋಷಪಡೋಣ. ಈ ಹಬ್ಬಗಳ ಮೂಲಕ ನಮ್ಮ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)