ಮಕ್ಕಳ ಪಾಲಿನ ಮೊದಲ ಹೀರೋ ಎಂದರೆ ಅಪ್ಪನೇ. ಬದುಕಿನ ಪ್ರತಿ ಹಂತದಲ್ಲಿಯೂ, ಹೆಜ್ಜೆ ಹೆಜ್ಜೆಗೂ ಮಕ್ಕಳನ್ನು ಕಣ್ರೆಪ್ಪೆಯಂತೆ ಕಾಯುವ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ಸಲುವಾಗಿ ಬಂದಿದೆ ಫಾದರ್ಸ್ ಡೇ. ಅಪ್ಪನ ಜತೆಗಿನ ನೆನಪುಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ್ದ ಕರೆಗೆ 11 ಸಾವಿರಕ್ಕೂ ಅಧಿಕ ಪತ್ರಗಳು ನಮಗೆ ಬಂದಿವೆ. ಅವುಗಳ ಪೈಕಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.
ಅಮ್ಮನಿಗೆ ನಾಲ್ಕು ವರ್ಷ ಕಾಯಿಲೆ ಕಾಡಿತ್ತು. ಮನೆಯಲ್ಲಿ ಎಲ್ಲವೂ ಇದ್ದರೂ ಏನು ಇರದಂತಹ ಸ್ಥಿತಿ. ದಿನವೂ ನೋವು ಎಂದು ನನ್ನ ತಾಯಿ ನರಳುತ್ತಿದ್ದಳು. ಎಷ್ಟೇ ಖರ್ಚು ಮಾಡಿದರೂ ಕಡಿಮೆಯಾಗದಂಥ ಸ್ಥಿತಿ. ತಾಯಿಯನ್ನು ಕಳೆದುಕೊಳ್ಳುತ್ತೇವೆ ಎನ್ನುವ ಭಯದ ವಾತಾವರಣ. ಆದರೆ ತಂದೆ ಮಕ್ಕಳ ಮುಂದೆ ಆ ನೋವನ್ನು ತೋರಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಸರಿಯಾಗಿ ಅಡುಗೆ ಬರದಿದ್ದರೂ ತಮಗೆ ಬಂದ ಅಡುಗೆಯನ್ನು ಮಾಡಿ ನನ್ನ ಕಾಲೇಜಿಗೆ ಡಬ್ಬಿ ಕಟ್ಟಿ ಕಳುಹಿಸುತ್ತಿದ್ದರು. ಇದಲ್ಲದೆ ತಾಯಿಯ ಪ್ರೀತಿಯನ್ನೂ ಅವರೇ ನೀಡಿ ಒಳ್ಳೆಯ ಕಾಲ ಬಂದೇ ಬರುತ್ತದೆ ಎಂದು ಹೇಳುತ್ತಿದ್ದರು. ಅವರು ಅಂದು ತೋರಿದ ತಾಳ್ಮೆ, ಅಮ್ಮನ ಬಗೆಗಿನ ಕಾಳಜಿಯಿಂದ ಅಮ್ಮ ಹುಷಾರಾದರು. ಅಂದಿನ ಕಷ್ಟದ ದಿನಗಳನ್ನು ನೆನೆದರೆ ನಮ್ಮ ಪಾಲಿಗೆ ಅಪ್ಪ ದೇವರಾಗಿ ಬಂದವರು. |ಮಲ್ಲಿಕಾರ್ಜುನ ಮುತ್ತೆಪ್ಪಾ ಮಲ್ಲಾಪುರ ತುಕ್ಕನಟ್ಟಿ, ಗೋಕಾಕ್.