More

    23ರಂದು ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ’ದ ಮಹಾಸಂಪರ್ಕ ದಿನ: ಎನ್​ಆರ್​ಕೆ

    ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 2ನೇ ಅವಧಿಯ ಮೊದಲ ವರ್ಷ ಪೂರ್ಣಗೊಂಡ ನಿಮಿತ್ತ ಭಾರತೀಯ ಜನತಾ ಪಕ್ಷ (ಬಿಜೆಪಿ) ದೇಶಾದ್ಯಂತ ‘ಸಮರ್ಥ ನಾಯಕತ್ವ-ಸ್ವಾವಲಂಬಿ ಭಾರತ ಅಭಿಯಾನ’ ಹಮ್ಮಿಕೊಂಡಿತ್ತು. ಇದರ ಭಾಗವಾಗಿ ಜೂನ್ 23ರಂದು ಮಹಾ ಸಂಪರ್ಕ ದಿನ ಆಚರಿಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ, ಬಿಜೆಪಿ ರಾಜ್ಯ ಪ್ರಧಾನಕಾರ್ಯದರ್ಶಿ ಎನ್​.ರವಿಕುಮಾರ್ ಹೇಳಿದ್ದಾರೆ.

    ಈ ಅಭಿಯಾನದ ಪ್ರಯುಕ್ತ ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯಾದ್ಯಂತ ಜೂ. 6ರಿಂದ 30ರವರೆಗೆ 600ಕ್ಕೂ ಹೆಚ್ಚು ರ‍್ಯಾಲಿ ಹಾಗೂ ಮನೆ ಮನೆ ಸಂಪರ್ಕ ಕಾರ್ಯಕ್ರಮ ಆಯೋಜನೆಗೊಂಡಿದೆ. ಜೂ.23ರಂದು ಮಹಾಸಂಪರ್ಕ ದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಬೂತ್ ಮಟ್ಟದಲ್ಲಿ ಸಂಚರಿಸಿ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು. ಜೂನ್ 30ರ ಒಳಗಾಗಿ ಎಲ್ಲಾ ಮಂಡಲ ಮಟ್ಟದ ರ‍್ಯಾಲಿಗಳನ್ನು ನಡೆಸಬೇಕೆಂದು ಆಯಾ ಸ್ಥಳೀಯ ನಾಯಕರು, ಕಾರ್ಯಕರ್ತರಿಗೆ ಸೂಚಿಸಲಾಗಿದೆ ಎಂದು ಎನ್. ರವಿಕುಮಾರ್ ತಿಳಿಸಿದ್ದಾರೆ.

    ಜೂನ್ 20ರಂದು ನಡೆದ ಪಕ್ಷದ ಪ್ರಮುಖ ಕಾರ್ಯಕರ್ತರ ಸಭೆಯಲ್ಲಿ ರಾಜ್ಯಾದ್ಯಂತ ಜೂ. 23ರಂದು ಮಹಾಸಂಪರ್ಕ ದಿನ ಆಚರಿಸಲು ತೀರ್ಮಾನಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಬೂತ್‌ಗಳಲ್ಲಿ ಪದಾಧಿಕಾರಿಗಳು, ಜನಪ್ರತಿನಿಧಿಗಳು ಮನೆ ಮನೆಗೆ ತೆರಳಿ ಮೋದಿ ಸರ್ಕಾರದ ಒಂದು ವರ್ಷದ ಸಾಧನೆ, ಕೋವಿಡ್-19 ಬಗ್ಗೆ ಜಾಗೃತಿ ಮೂಡಿಸುವುದಲ್ಲದೆ, ವಿಶೇಷವಾಗಿ ಚೀನಾ ಅಟ್ಟಹಾಸವನ್ನು ಮುರಿಯಲು ಸ್ವದೇಶಿ ವಸ್ತುಗಳನ್ನು ಬಳಸಬೇಕೆಂದು ಮನವಿ ಮಾಡಲಿದ್ದಾರೆ. ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ವೀರ ಮರಣವನ್ನಪ್ಪಿದ ಸೈನಿಕರಿಗೆ ಅರ್ಪಿಸುವ ನೈಜ ಶ್ರದ್ಧಾಂಜಲಿಯಾಗಲಿದೆ ಎಂದು ಅವರು ತಿಳಿಸಿದರು.

    ಇದನ್ನೂ ಓದಿ: ಗೋಹತ್ಯೆ ತಡೆಗೆ ಒಂದಡಿ ಮುಂದಿರಿಸಿತು ಯೋಗಿ ಸರ್ಕಾರ: ಕಠಿಣ ಶಿಕ್ಷೆ ಎಂಥವರನ್ನೂ ಹಿಮ್ಮೆಟ್ಟಿಸೀತು!

    ಅಭಿಯಾನದ ಭಾಗವಾಗಿ ರಾಜ್ಯದ 58 ಸಾವಿರ ಬೂತ್‌ಗಳ 50 ಲಕ್ಷಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಗುರಿ ಹೊಂದಲಾಗಿದೆ. ಅದರಲ್ಲಿ ಜೂ. 6ರಿಂದ ಈವರೆಗೆ 37,598 ಬೂತ್‌ಗಳಲ್ಲಿ 4,41,852 ಕಾರ್ಯಕರ್ತರು 28,91,821 ಮನೆಗಳನ್ನು ಸಂಪರ್ಕಿಸಿದ್ದಾರೆ. ಇದುವರೆಗೆ 7 ಮೋರ್ಚಾಗಳಲ್ಲಿ 83 ರ‍್ಯಾಲಿಗಳು ನಡೆದಿದ್ದು, ಅಂದಾಜು 20,750 ಜನ ಭಾಗವಹಿಸಿದ್ದಾರೆ. ಈ ಮಧ್ಯೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಜೂನ್ 14ರಂದು ನಡೆಸಿದ ವರ್ಚ್ಯುವಲ್ ರ‍್ಯಾಲಿಯಲ್ಲಿ ರಾಜ್ಯದಲ್ಲಿ 59 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಹಿತೈಷಿಗಳು, ಸಾರ್ವಜನಿಕರು ಭಾಗವಹಿಸಿದ್ದರು. ವಿಶ್ವಾದ್ಯಂತ ಸುಮಾರು 2.29 ಕೋಟಿಗೂ ಹೆಚ್ಚು ಜನರು ಪಾಲ್ಗೊಂಡಿದ್ದರು ಎಂದು ಅವರು ಹೇಳಿದ್ದಾರೆ.

    ಹಸು, ಗಂಗಾ, ಗೀತೆ ಇವುಗಳು ಭಾರತದ ಐಡೆಂಟಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts