ಅಂಕಣ

ಸಣ್ಣ ಕಥೆಗಳ ಜನಕ, ಹೃದಯಸಂಪನ್ನ ಮಾಸ್ತಿ

‘‘ಪಂಡಿತ್ ಜವಾಹರಲಾಲ್ ನೆಹರೂ ಗಾಂಧೀಜಿ ಸಂಪರ್ಕಕ್ಕೆ ಬಂದ ಹೊಸದು. ಆಗಲೇ ಗಾಂಧೀಜಿ ಭಾರತಕ್ಕೆ ‘ರಾಮರಾಜ್ಯ’ದ ಕನಸನ್ನು ಕಾಣತೊಡಗಿದ್ದರು. ಗಾಂಧೀಜಿ ಬಾಯಿಂದ ‘ರಾಮರಾಜ್ಯ’ ಎಂಬ ಮಾತು ಪದೇಪದೇ ಬರುತ್ತಿತ್ತು. ನೆಹರೂಗೆ ಆ ಮಾತು ಅರ್ಥವಾಗುತ್ತಿರಲಿಲ್ಲ. ಒಮ್ಮೆ ನೆಹರೂ ‘ಹಾಗೆಂದರೆ ಏನು?’ ಎಂದು ಪಕ್ಕದವರನ್ನು ಕೇಳಿದರು. ಅದಕ್ಕೆ ಅವರು ‘ರಾಮಾಯಣದ ಕಥೆ ಹಾಗೂ ರಾಮ ಹೇಗೆ ಆದರ್ಶವಾಗಿ ಬಾಳಿದ’ ಅನ್ನುವುದನ್ನು ನೆಹರೂಗೆ ವಿವರಿಸಿದರು. ನೆಹರೂ ಮಹಾ ಓದುಗರೂ ಆಗಿದ್ದರು. ಕೂಡಲೇ ಅವರು ಭರತವರ್ಷದ ಚರಿತ್ರೆಯನ್ನು ಓದತೊಡಗಿದರು. ಆದರೆ ರಾಮಾಯಣದಿಂದ ಅಲ್ಲ. ಬುದ್ಧಗುರುವಿನ ಚರಿತ್ರೆಯಿಂದ. ಅದಕ್ಕಾಗಿಯೇ ನಮ್ಮ ದೇಶ ಸಾರನಾಥದ ಧ್ವಜಸ್ತಂಭವನ್ನು ರಾಷ್ಟ್ರದ ಲಾಂಛನವಾಗಿ ಸ್ವೀಕರಿಸಿತು. ರಾಷ್ಟ್ರಧ್ವಜದಲ್ಲಿ ಅಶೋಕಚಕ್ರ ಕೇಂದ್ರಬಿಂದುವಾಯಿತು. ‘ರಾಷ್ಟ್ರಕ್ಕೆ ಸ್ವಾತಂತ್ರ್ಯವನ್ನು ಅನುಗ್ರಹಿಸಿದ್ದಕ್ಕೆ ನಮ್ಮ ರಾಷ್ಟ್ರರಚನೆಯ ಸಭೆ ದೇವರಿಗೆ ವಂದನೆ ಸಲ್ಲಿಸಬೇಕು’ ಎಂದು ಯೋಚಿಸಿದಾಗ ಜವಾಹರಲಾಲರು ಅದನ್ನು ಒಪ್ಪದ ಕಾರಣ ಆ ಯೋಚನೆಯನ್ನು ಕೈಬಿಟ್ಟಿತು. ‘ದೇವರು’ ಉಂಟು ಎಂದು ನಂಬಿ, ‘ರಾಮ’ ದೇವರು ಎಂದು ತಿಳಿದು, ಆ ನಂಬಿಕೆಯಲ್ಲಿ ರಾಷ್ಟ್ರದ ಸ್ವಾತಂತ್ರ್ಯದ ಸಾಧನೆಯಲ್ಲಿ ಬಾಳನ್ನು ಸವೆಯಿಸಿ ಸ್ವಾತಂತ್ರ್ಯವನ್ನು ನಮಗೆ ಕೊಡಿಸಿದ ಕಾರಣ ಗಾಂಧೀಜಿ ಜೀವನದ ಮೂಲಭಾವನೆಗೆ ನಮ್ಮ ರಾಷ್ಟ್ರ ರಚನೆಯ ಶಾಸನದಲ್ಲಿ ಎಡೆಯಿಲ್ಲದೆ ಹೋಯಿತು’
ಈ ಮಾತುಗಳಲ್ಲಿ ಎಷ್ಟೊಂದು ವಿಷಯ ಅಡಕವಾಗಿವೆ! ನೆಹರೂಗೆ ಭಾರತದ ಪುರಾಣೇತಿಹಾಸಗಳು ಗೊತ್ತಿರಲಿಲ್ಲ; ಅವರು ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕುವವರೆಗೂ ವಿದೇಶದಲ್ಲಿ ಇದ್ದರು; ಆದರೆ ದೊಡ್ಡ ಓದುಗರಾಗಿದ್ದರು; ಪುಸ್ತಕಪ್ರೇಮಿಯಾಗಿದ್ದರು. ಅವರ ಓದು ರಾಮಾಯಣದಿಂದ ಆಗುವ ಬದಲು ಬುದ್ಧದರ್ಶನದಿಂದ ಆಯಿತು. ಅದರ ಪರಿಣಾಮವಾಗಿಯೇ ರಾಷ್ಟ್ರಲಾಂಛನ ‘ಸಾರನಾಥದ ಧ್ವಜಸ್ತಂಭ’ ಮತ್ತು ‘ಅಶೋಕಚಕ್ರ’ ಆಯಿತು. ಗಾಂಧೀಜಿ ಕನಸಿನ ‘ರಾಮವಿಗ್ರಹ’ ಧ್ವಜದಲ್ಲಿ ಅವಕಾಶ ಪಡೆಯದೇಹೋಯಿತು. ಬಹುಸಂಖ್ಯಾತರ ಆರಾಧನೆಯಾದ ರಾಮನ ಆದರ್ಶ, ರಾಮನ ವಿಗ್ರಹ ವಿರಾಜಿಸುವ ಬದಲು ನಾಸ್ತಿಕ ಮತದ (ವೇದವನ್ನು ಒಪ್ಪದವರನ್ನು ನಾಸ್ತಿಕ ಎಂದು ಕರೆಯುತ್ತಾರೆ. ಬೌದ್ಧರು ವೇದವನ್ನು ಒಪ್ಪುವುದಿಲ್ಲ.) ಬೌದ್ಧರ ಲಾಂಛನ ನಮ್ಮ ಧ್ವಜದಲ್ಲಿ ಶಾಶ್ವತ ಸ್ಥಾನವನ್ನು ಪಡೆಯುವಂತಾಯಿತು. ಇದರಿಂದ ಗಾಂಧಿ ಹಾಗೂ ಭಾರತೀಯರು ನೊಂದರು. ಹೀಗೆ ಎಷ್ಟೊಂದು ವಿಚಾರಗಳು ಇದರಲ್ಲಿ ಹಾದುಹೋಗುತ್ತವೆ. ಈ ಕೆಲವೇ ಮಾತುಗಳಲ್ಲಿ ಇಷ್ಟೊಂದು ವಿಚಾರಗಳನ್ನು ಅಡಕಗೊಳಿಸಿದವರು ಕನ್ನಡದ ಆಸ್ತಿಯೆಂದೇ, ಸಣ್ಣ ಕಥೆಗಳ ಜನಕನೆಂದೇ ಪ್ರಖ್ಯಾತರಾದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್. ಮಾಸ್ತಿ ಬರೆದ ಕಾವ್ಯ, ನಾಟಕ, ಪ್ರಬಂಧ, ಸಣ್ಣಕಥೆಗಳು, ವಿಮರ್ಶೆ, ಲೇಖನ, ಕಾದಂಬರಿ, ಮುನ್ನುಡಿ ಯಾವುದೇ ಇರಲಿ ಅವುಗಳಲ್ಲೆಲ್ಲ ಸ್ಥಾಯಿಯಾಗಿರುವುದು ವೈಚಾರಿಕತೆಗಳು. ಮಾತಿನ ಭಾರವಿಲ್ಲದ, ವರ್ಣನೆಗಳ ಆಡಂಬರವಿಲ್ಲದ ಸಹಜವಾದ, ಸರಳವಾದ ಬರವಣಿಗೆಯಲ್ಲಿ ವಿಚಾರದ ಕಿಡಿಗಳನ್ನು ಹರಡುವುದು, ಮೌಢ್ಯಗಳನ್ನು ನೀಗುವುದು, ಜೀವನೋನ್ನತಿಯ ದರ್ಶನ ಮಾಡಿಸುವುದು, ತತ್ತ್ವಚಿಂತನೆಗೆ ದಾರಿ ಮಾಡಿಕೊಡುವುದು ಅವರ ಬರಹದ ವೈಶಿಷ್ಟ್ಯಗಳಾಗಿವೆ.

ಕಥೆ, ಕಾದಂಬರಿ, ಪ್ರಬಂಧ, ಅನುವಾದ, ಸಂಪಾದಿತ, ಆತ್ಮಚರಿತ್ರೆ ಮುಂತಾದ ಬಹುವಿಧದ ಪ್ರಕಾರಗಳನ್ನು ಅವರು ಬರೆದಿದ್ದರೂ ಅವರ ಪ್ರಸಿದ್ಧಿ ಗಗನಕ್ಕೇರಿದ್ದು ‘ಸಣ್ಣಕಥೆ’ಗಳಿಂದ. ಸಣ್ಣಕಥೆಗಳನ್ನು ಅವರಷ್ಟು ಹುಲುಸಾಗಿ, ಸಮೃದ್ಧವಾಗಿ ಬೆಳೆಸಿದವರು ಮತ್ತು ಅದನ್ನು ಒಂದು ಪ್ರಮುಖ ಮಾಧ್ಯಮವಾಗಿ ಮಾಡಿಕೊಂಡವರು ಮತ್ತೊಬ್ಬರು ಸಿಗುವುದು ದುರ್ಲಭ. ಅದನ್ನವರು ಒಂದು ತಪವಾಗಿ ಪರಿಗಣಿಸಿದರು. ಹೊಸಗನ್ನಡದ ನವೋದಯದ ಕಾಲದಲ್ಲಿ ಬಹುಮಂದಿ ಲೇಖಕರು ಭಾವೋದ್ವೇಗದ ಕಾವಿನಲ್ಲಿ ಸಾಹಿತ್ಯವನ್ನು ಸೃಷ್ಟಿಸುತ್ತಿದ್ದಾಗ ಮಾಸ್ತಿಯೊಬ್ಬರು ಮಾತ್ರ ಸ್ವಸ್ಥಚಿತ್ತದ ಲೇಖಕರಾಗಿ ಒಬ್ಬ ಕ್ರಾಂತಿಕಾರಿ ಎಂಬಂತೆ ‘ಸಣ್ಣಕಥೆ’ಗಳನ್ನು ಬರೆದು ಆ ಕಾಲದ ಸಾಂಪ್ರದಾಯಿಕ ಸಾಹಿತ್ಯದ ಸಂಕೋಲೆಯನ್ನು ಕಳಚಿಹಾಕಿದರು.

ನಮ್ಮ ಕಣ್ಣೆದುರಿಗೇ ಇದ್ದವರ, ನಮ್ಮ ನಿಮ್ಮಂತೆಯೇ ಬದುಕನ್ನು ನಡೆಸುತ್ತಿದ್ದವರ ಕುರಿತು ಬರೆದರು. ಆಗಲೇ ಇಂಗ್ಲಿಷ್ ಸಾಹಿತ್ಯಪ್ರಪಂಚದಲ್ಲಿ ಪ್ರಸಿದ್ಧಿಗೆ ಬಂದಿದ್ದ ಸಣ್ಣಕಥೆಗಳನ್ನು ಅನುಕರಿಸಿ ಕನ್ನಡದಲ್ಲೂ ಹೀಗೆ ಬರೆಯಬಹುದು ಎಂಬುದನ್ನು ಕನ್ನಡ ಸಾಹಿತ್ಯಪ್ರಪಂಚಕ್ಕೆ ತೋರಿಸಿಕೊಟ್ಟರು. ಇಂಗ್ಲಿಷ್ ಗದ್ಯಸಾಹಿತ್ಯದ ವಚನಪ್ರಬಂಧದ ರೀತಿಯನ್ನು, ಅಲ್ಲಿಯ ಸೊಗಸಿನ ವೈಭವವನ್ನು ಕನ್ನಡದಲ್ಲೂ ತರಬಹುದು ಎನ್ನುವುದನ್ನು ಜನತೆಗೆ ಪರಿಚಯಿಸಿದರು. ಕನ್ನಡದಲ್ಲಿ ಅದುವರೆಗೂ ಇಲ್ಲದಿದ್ದ ಇದ್ದರೂ ವಿರಳವಾಗಿ ಇದ್ದ ಸಣ್ಣಕಥೆಗಳ ಪ್ರಕಾರವೊಂದಕ್ಕೆ ಭದ್ರ ಬುನಾದಿಯನ್ನು ಹಾಕಿಕೊಟ್ಟರು.

ಒಂದು ಕುಟುಂಬದಲ್ಲಿ ನಡೆದ ವಿಶೇಷ ಘಟನೆಗಳನ್ನೋ, ಅವಿಚಾರಿತ(ರೂಢಿಗತ) ನಡವಳಿಕೆಯನ್ನೋ, ಬಾಂಧವ್ಯದಲ್ಲಿ ಉಂಟಾದ ಅಸ್ತವ್ಯಸ್ತತೆಯನ್ನೋ, ಭಗ್ನಪ್ರಣಯವನ್ನೋ, ಪ್ರಣಯದ ಪ್ರದರ್ಪವನ್ನೋ ಆಧರಿಸಿ ಅದಕ್ಕೊಂದು ಮೈಕಟ್ಟನ್ನು ರೂಪಿಸಿ, ಅಂದವಾಗಿ, ಚೇತೋಹಾರಿಯಾಗಿ, ಲಲಿತವಾಗಿ ಬರೆದರು. ಅಂತಹ ಕಥೆಗಳನ್ನು ಟೀಕಿಸಿ ನಿಂದಿಸಿದವರೂ ಇದ್ದಾರೆ. ಅದಕ್ಕೆಲ್ಲ ತಮ್ಮ ಕೃತಿಗಳಿಂದಲೇ ಮಾರುತ್ತರವನ್ನು ಕೊಟ್ಟು ‘ಸಣ್ಣಕಥೆಗಳ ಹರಿಕಾರ’ ಎಂಬ ಕೀರ್ತಿಗೆ ಭಾಜನಾದರು.

ಅವರ ಸಣ್ಣಕಥೆಗಳ ಆಕರ್ಷಣೆಯಂತೂ ಹೇಳತೀರದು. ವಸ್ತುವಿನ ಆಯ್ಕೆ, ಅದೊಂದು ವರದಿಯಾಗದಂತೆ ಸಾಹಿತ್ಯದ ಮಟ್ಟಕ್ಕೆ ಏರಿಸುವ ಕಲೆ, ಮಿತವಾದ ಪದಗಳಿಂದ ಅದನ್ನು ಚಿತ್ರಿಸುವ ನಿಪುಣತೆ, ನಾನಾ ಪಾತ್ರಗಳೂ, ಸನ್ನಿವೇಶಗಳೂ ಪರಸ್ಪರ ಸಂಬದ್ಧವಾಗಿ ಒಂದೇ ಮೈಕಟ್ಟು ಎಂಬಂತೆ ಶಿಲ್ಪಿಸುವ ಕೌಶಲ, ಭಾಷೆಯ ಮನೋಹರತೆ ಮುಂತಾದವು ಅವರ ಸಣ್ಣಕಥೆಗಳ ಮುಖ್ಯ ಆಕರ್ಷಣೆಗಳಾಗಿವೆ. ಮುಖ್ಯವಾಗಿ, ವೈಚಾರಿಕ ತಳಹದಿಯ ಮೇಲೆ ಕಟ್ಟುವ ಪಾತ್ರಶಿಲ್ಪ, ಅನ್ಯಾಯಕ್ಕೊಳಗಾದವರ ಮೇಲೆ ಸಹಜವಾಗಿ ಹುಟ್ಟುವ ಮರುಕ, ದುಃಖ, ಸಂವೇದನೆ ಮುಂತಾದವು ಇನ್ನಿಲ್ಲದಂತೆ ನಮ್ಮನ್ನು ಸೆಳೆಯುತ್ತವೆ. ಉದಾಹರಣೆಗೆ- ‘ರಂಗನ ಮದುವೆ’ ಕಥೆಯಲ್ಲಿ ರಂಗ ತಾನು ಪ್ರೀತಿಸಿದ ಹುಡುಗಿ ಬಾಗಿಲ ಬಳಿ ನಿಂತು ಹಾಡುತ್ತಿರುವಾಗ ತನ್ನನ್ನು ಕಂಡರೆ ಎಲ್ಲಿ ಹಾಡನ್ನು ನಿಲ್ಲಿಸಿಬಿಡುವಳೋ ಎಂದು ಹಿಂದಕ್ಕೇ ನಿಂತು ಹಾಡು ಕೇಳುತ್ತಿರುತ್ತಾನೆ. ಆದರೂ ಅವಳು ಅವನನ್ನು ಕಂಡುಬಿಡುತ್ತಾಳೆ. ಹಾಗೆಯೇ ಹಾಡನ್ನು ನಿಲ್ಲಿಸಿಯೂಬಿಡುತ್ತಾಳೆ. ಆಗ ಮಾಸ್ತಿಯವರು ಕೊಡುವ ಉಪಮೆ ಎಷ್ಟು ಜೀವನಸಮೀಪ, ಹೃದ್ಯ ಎಂದು ವೇದ್ಯವಾಗದೆ ಇರುವುದಿಲ್ಲ. ‘ಕಸೀ ಮಾವಿನ ಹಣ್ಣನ್ನು ತಿನ್ನುವಾಗ-ದುಡ್ಡು ಕೊಟ್ಟು ಹಣ್ಣಿನ ಯಾವ ಭಾಗವಾದರೂ ವ್ಯರ್ಥವಾಗಿ ಹೋಗುವುದಲ್ಲ ಎಂದು ಅದರ ತೊಗಟೆಯನ್ನು ಮೊದಲು ತಿಂದು ಆಮೇಲೆ ತಿರುಳಿನಲ್ಲಿ ಸ್ವಲ್ಪ ರುಚಿ ನೋಡಿ ಉಳಿದುದನ್ನು ತಿನ್ನಲು ಪ್ರಯತ್ನಿಸಿದಾಗ ಅದು ಕೈಜಾರಿ ಮರಳಲ್ಲಿ ಬಿದ್ದುಹೋದರೆ ನಿಮಗೆ ಯಾವ ವಿಧದ ಖೇದವುಂಟಾಗುವುದೋ ಅದೇ ವಿಧವಾದ ಖೇದ ರಂಗನ ಮುಖದಲ್ಲಿ ತೋರಿಬಂತು’. ಇದು ಎಲ್ಲರ ಅನುಭವದಲ್ಲೂ ಇರುವಂಥದ್ದು. ಇಂಥದ್ದನ್ನು ಮಾಸ್ತಿಯವರು ಸಾವಿರ ಸಾವಿರ ಕೊಡುತ್ತಾರೆ. ಅವು ಕೊಡುವ ಆನಂದ ಎಣಿಕೆಗೆ ಮೀರಿದ್ದು.

ಮಾಸ್ತಿಯವರು ಸಣ್ಣಕಥೆಗಳನ್ನಷ್ಟೇ ಬರೆಯಲಿಲ್ಲ. ‘ಆದಿಕವಿ ವಾಲ್ಮೀಕಿ’, ‘ಭಾರತತೀರ್ಥ’, ‘ಸಾಹಿತ್ಯಪ್ರೇರಣೆ’ಯಂಥ ವೈಚಾರಿಕ ಕೃತಿಗಳನ್ನೂ ಬರೆದಿದ್ದಾರೆ. ಅವುಗಳಲ್ಲಿ ‘ಅಂತರಗಂಗೆ’ ಅನ್ನುವುದು ಒಂದು. ನಮ್ಮ ಸಂಸ್ಕೃತಿಯ ಜೀವನಾಡಿಯಾದ ವೇದೋಪನಿಷತ್ತು, ಪುರಾಣ, ಕಾವ್ಯಗಳಿಂದ ಹಿಡಿದು ಇತಿಹಾಸ, ಭಕ್ತಿಮಾರ್ಗ, ಸಿದ್ಧಾಂತ, ದರ್ಶನ, ಸ್ತೋತ್ರಸಾಹಿತ್ಯ, ಬೇರೆ ಬೇರೆ ಮತಗಳು, ಸುಧಾರಕ ಪಂಥಗಳವರೆಗೆ ಒಂದು ಪಕ್ಷಿನೋಟವನ್ನು ಹಾಯಿಸಿದ್ದಾರೆ. ವಿಸ್ತಾರವೂ ಅಲ್ಲದ ಸಂಕ್ಷಿಪ್ತವೂ ಅಲ್ಲದ ಒಂದು ಪರಿಮಾಣದಲ್ಲಿ ಮುಖ್ಯ ಆಶಯವನ್ನು ಎಲ್ಲೂ ಲೋಪಗೊಳಿಸದೆ ಬರೆದ ಈ ಕೃತಿ ಭಾರತ ನಡೆದುಬಂದ ಹಾದಿಯನ್ನು ಮನೋಜ್ಞವಾಗಿ ಪರಿಚಯಿಸುತ್ತದೆ.

ಮಾಸ್ತಿ ನಾಟಕಗಳೂ ಹಾಗೆಯೇ. ಅವರ ಕಾವ್ಯ ಅಥವಾ ಕಥಾಸಾಹಿತ್ಯಗಳ ಹಿಂದೆ ಮಾಡಿರುವ ಮನೋಧರ್ಮವೇ ಅವರ ನಾಟಕಗಳಲ್ಲಿಯೂ ಅಭಿವ್ಯಕ್ತಿಗೊಳ್ಳುತ್ತವೆ. ನಿತ್ಯಜೀವನದಲ್ಲಿ ಘಟಿಸುವ ಯಾವುದೋ ಒಂದು ವಿಕಾರವನ್ನೋ, ಮಾನವಸ್ವಭಾವದ ವಿಚಿತ್ರ ನಡವಳಿಕೆಯನ್ನೋ ಎತ್ತಿಕೊಂಡು ಅದನ್ನು ಸರಿಪಡಿಸಿ ಸುಖಾಂತಗೊಳಿಸುವುದು ಅವರ ಬರವಣಿಗೆಯ ವೈಶಿಷ್ಟ್ಯ.

ಮಾಸ್ತಿ ಮೂಲತಃ ಸ್ನೇಹಶೀಲರು, ಹೃದಯಸಂಪನ್ನರು, ಮಾನವೀಯ ಅಂತಃಕರಣವುಳ್ಳವರು, ಪರೋಪಕಾರಿಗಳು. ಕಷ್ಟದಲ್ಲಿ ಇದ್ದವರಿಗೆ ಸಹಾಯಹಸ್ತ ನೀಡಿದ್ದಕ್ಕೆ ಅನೇಕ ದಾಖಲೆಗಳಿವೆ. ಸಮಾಜದಲ್ಲಿ ಪರಸ್ಪರರ ನಡುವೆ ಪ್ರೀತಿ, ವಿಶ್ವಾಸ, ಗೌರವಗಳು ಒಡಮೂಡಬೇಕು ಎಂದು ಬಯಸಿದವರು. ಮನುಷ್ಯ ಜೀವನ ಹಸನಾಗಬೇಕು ಅಲ್ಲಿ ಸುಖ, ನೆಮ್ಮದಿ, ನೆಲೆಸಬೇಕು ಎಂದು ಆಶಿಸಿದರು. ಮಾಸ್ತಿಯವರ ಜನ್ಮದಿನವಾದ (ನಿಧನ ದಿನ ಕೂಡ) ಇಂದು ಅವರನ್ನು ಸ್ಮರಿಸಿಕೊಳ್ಳುವುದು ನಮಗೊಂದು ಸತ್ಪ್ರೇರಣೆ.

(ಲೇಖಕರು ನಿವೃತ್ತ ಉಪನ್ಯಾಸಕರು, ಬರಹಗಾರರು)