ರಾಮಸ್ವಾಮಿ ಮತ್ತು ಗೌರಮ್ಮ ಸಾಧಾರಣ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರು. ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ದೊಡ್ಡವಳು ಶ್ರೀದೇವಿ, ಚಿಕ್ಕವಳು ಭೂದೇವಿ. ಪಿತ್ರಾರ್ಜಿತವಾಗಿ ಬಂದಿದ್ದ ಸಣ್ಣ ಮನೆಯಲ್ಲಿ ವಾಸ. ರಾಮಸ್ವಾಮಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದು ನಿವೃತ್ತಿಯಾದ ನಂತರವೇ ಅವರಿಗೆ ಹೆಣ್ಣುಮಕ್ಕಳ ಮದುವೆ ಮಾಡಲು ಸಾಧ್ಯವಾಗಿತ್ತು. ಶ್ರೀದೇವಿಯನ್ನು ರಾಜೇಂದ್ರ ಎನ್ನುವ ಗುತ್ತಿಗೆದಾರನಿಗೆ ಕೊಟ್ಟು ಲಗ್ನ ಮಾಡಿದಾಗ ಆಕೆ ಶ್ರೀಮಂತ ಕುಟುಂಬಕ್ಕೆ ಸೇರಿಕೊಂಡಳು ಎಂಬ ತೃಪ್ತಿ ರಾಮಸ್ವಾಮಿ ದಂಪತಿಗೆ ಬಂದಿತ್ತು. ಭೂದೇವಿ ಅಕ್ಕನಿಗಿಂತ ಸುಂದರಿಯಾಗಿದ್ದರೂ ಆಕೆಗೆ ಸೂಕ್ತ ವರ ಸಿಗುವುದು ಸ್ವಲ್ಪ ತಡವೇ ಆಯಿತು. ಆಕೆಗೆ ಶಂಕರ್ ಎನ್ನುವ ಲ್ಯಾಬ್ತಂತ್ರಜ್ಞ ಪತಿಯಾಗಿ ದೊರಕಿದ. ಅನುಕೂಲಸ್ಥನಲ್ಲದಿದ್ದರೂ ಆತ ಪತ್ನಿಯನ್ನು ಸುಖವಾಗಿಟ್ಟಿದ್ದ. ಅವರಿಗೆ ಲಕ್ಷ್ಮಣ ಎಂಬ ಕುವರ ಜನಿಸಿದ. ಹೀಗಿರುವಾಗ ಶಂಕರ್ ಏಕಾಏಕಿ ಹೃದಯಾಘಾತವಾಗಿ ಮೃತಪಟ್ಟ. ಆಗ ಭೂದೇವಿಗೆ ಕೇವಲ 35 ವರ್ಷ ವಯಸ್ಸು. ಮಗನಿಗೆ ಆರು ವರ್ಷವೂ ತುಂಬಿರಲಿಲ್ಲ. ಗಂಡನ ಮನೆಯವರು ಆಕೆಯನ್ನು ತವರು ಮನೆಯಲ್ಲಿರಲು ಹೇಳಿ ಮನೆಯಿಂದ ಹೊರಹಾಕಿದಾಗ ಆಕೆಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗಿತ್ತು.
ತಾವೇ ಆರ್ಥಿಕ ಸಂಕಷ್ಟದಲ್ಲಿದ್ದರೂ ರಾಮಸ್ವಾಮಿ ಮಗಳನ್ನು ಚೆನ್ನಾಗಿಯೇ ನೋಡಿಕೊಳ್ಳತೊಡಗಿದರು. ಬೇಸರ ಕಳೆಯಲು ಹಾಗೂ ಕುಟುಂಬದ ಆದಾಯವನ್ನು ಹೆಚ್ಚಿಸಲು ಭೂದೇವಿ ಗಾರ್ವೆಂಟ್ ಫ್ಯಾಕ್ಟರಿಗೆ ಕೆಲಸಕ್ಕೆ ಸೇರಿಕೊಂಡಳು. ಮಗನನ್ನು ಚೆನ್ನಾಗಿ ಓದಿಸಿ ಐಎಎಸ್ ಅಧಿಕಾರಿಯನ್ನಾಗಿಸಬೇಕೆಂಬ ಹಂಬಲದಿಂದ ಆಕೆ ಡೊನೇಷನ್ ಕೊಟ್ಟು ಲಕ್ಷ್ಮಣನನ್ನು ಇಂಗ್ಲಿಷ್ ಮೀಡಿಯಂ ಶಾಲೆಗೆ ಸೇರಿಸಿದಳು.
ತಂಗಿಯ ಪರಿಸ್ಥಿತಿ ಕಂಡು ಶ್ರೀದೇವಿಗೆ ಮನನೊಂದಿತ್ತು. ಏನಾದರೂ ಸಹಾಯಮಾಡಬೇಕೆಂದು ಆಕೆಯ ಮನ ತುಡಿಯುತ್ತಿತ್ತು. ಇದಲ್ಲದೆ ತನಗೆ ಮಕ್ಕಳಿರದ್ದರಿಂದ ಆಕೆ ಗಂಡನಿಗೆ ಹೇಳಿ ಲಕ್ಷ್ಮಣನ ವಿದ್ಯಾಭ್ಯಾಸಕ್ಕೆ ನೆರವಾಗುವುದಲ್ಲದೇ ಕಾಲಕಾಲಕ್ಕೆ ಅವನಿಗೆ ಬಟ್ಟೆ, ಬರೆ, ತಿಂಡಿ ತಿನಿಸುಗಳನ್ನು ತಂದು ಕೊಡುತ್ತಿದ್ದಳು.
ರಾಮಸ್ವಾಮಿ ಹಾಗೂ ಗೌರಮ್ಮ ಒಮ್ಮೆ ತಿರುಪತಿಗೆ ಹೋದ ಸಮಯದಲ್ಲಿ ಒಂದು ಸಂಜೆ ರಾಜೇಂದ್ರ ವಸ್ತುವೊಂದನ್ನು ತಲುಪಿಸಲು ಅವರ ಮನೆಗೆ ಬಂದ. ಮನೆಯಲ್ಲಿ ಭೂದೇವಿ ಒಬ್ಬಳೇ ಇದ್ದಳು. ಆಗ ತಾನೇ ಸ್ನಾನ ಮಾಡಿ ಒದ್ದೆಯಾದ ಕೂದಲನ್ನು ಒಣಗಿಸಿಕೊಳ್ಳುತ್ತಾ ಮುಂಬಾಗಿಲನ್ನು ತೆರೆದ ಆಕೆ ಭಾವನ ಜತೆಗೆ ಲೋಕಾಭಿರಾಮವಾಗಿ ಮಾತನಾಡಿ ಕಾಫಿ ಮಾಡಲು ಅಡುಗೆಮನೆಗೆ ಹೋದಳು. ಅವಳನ್ನು ಕಂಡು ಉದ್ರೇಕಗೊಂಡ ರಾಜೇಂದ್ರ ಹಿಂದಿನಿಂದ ಹೋಗಿ ಬಿಗಿದಪ್ಪಿದ. ‘ಇದೇನು ಭಾವ ಹೀಗೆ ಮಾಡುತ್ತಿರುವಿರಿ’ ಎಂದು ಹೇಳಿದರೂ, ಹಲವಾರು ತಿಂಗಳುಗಳ ನಂತರ ಆಗಿದ್ದ ಪುರುಷ ಸಂಪರ್ಕ ಅವಳನ್ನು ವಿವೇಚನಾರಹಿತಳನ್ನಾಗಿ ಮಾಡಿತ್ತು. ತಾನು ಮಾಡುತ್ತಿರುವುದು ತಪ್ಪು ಎಂದು ಅನಿಸಿದರೂ ಆಕೆ ಪ್ರತಿಭಟಿಸದೆ ಅವನೊಡನೆ ಸೇರಿದಳು.
ಈ ವಿಷಯವನ್ನು ಯಾರಿಗೂ ಹೇಳಬಾರದೆಂದು ರಾಜೇಂದ್ರ ಅವಳಿಂದ ಮಾತು ತೆಗೆದುಕೊಂಡ. ಅವರಿಬ್ಬರ ಸಂಬಂಧ ಮುಂದುವರಿಯಿತು. ರಾಜೇಂದ್ರ ಅವಳ ಫ್ಯಾಕ್ಟರಿಯ ಬಳಿಗೆ ಹೋಗಿ ಅಲ್ಲಿಂದ ಅವಳನ್ನು ಲಾಡ್ಜ್ಗಳಿಗೆ ಕರೆದುಕೊಂಡು ಹೋಗುತ್ತಿದ್ದ. ಮಗಳ ವರ್ತನೆ ಬದಲಾಗಿದೆ ಎಂದು ತಿಳಿಯಲು ಗೌರಮ್ಮಳಿಗೆ ಹೆಚ್ಚು ಕಾಲ ಬೇಕಾಗಲಿಲ್ಲ. ಹಾಗೆಯೇ ಶ್ರೀದೇವಿಗೂ ಗಂಡ ಪರಸ್ತ್ರೀ ಸಂಗ ಮಾಡುತ್ತಿದ್ದಾನೆ ಎನ್ನುವ ಅನುಮಾನ ಬಂದಿತ್ತು. ಒಂದು ದಿನ ಗೌರಮ್ಮ ಹೆದರಿಸಿ ವಿಚಾರಿಸಿದಾಗ ಭೂದೇವಿ ವಿಷಯ ತಿಳಿಸಿದಳು. ಕೂಡಲೇ ಆಕೆ ಮಗಳನ್ನು ಗಾರ್ವೆಂಟ್ ಫ್ಯಾಕ್ಟರಿಯಿಂದ ಬಿಡಿಸಿ ಮನೆಯಲ್ಲಿಯೇ ಟೇಲರಿಂಗ್ ಅಂಗಡಿ ಹಾಕಿಸಿಕೊಟ್ಟಳು. ಭೂದೇವಿಯ ಸಖ್ಯ ಸಿಗದ ರಾಜೇಂದ್ರ ಕಂಗಾಲಾಗಿ ಅವಳನ್ನು ಪದೇಪದೇ ಫೋನಿನಲ್ಲಿ ಸಂರ್ಪಸಿ ತನ್ನ ಜತೆಗೆ ಬಂದಿರಲು ಪೀಡಿಸತೊಡಗಿದ. ‘ನಿನ್ನನ್ನು ಮದುವೆಯಾಗಿ ನಿನ್ನ ಮಗನನ್ನು ತಂದೆಯಂತೆಯೇ ನೋಡಿಕೊಳ್ಳುತ್ತೇನೆ’ ಎಂದ.
ಅಕ್ಕನ ಸಂಸಾರವನ್ನು ಹಾಳುಮಾಡುವುದು ಭೂದೇವಿಗೆ ಇಷ್ಟವಿರಲಿಲ್ಲ. ತನಗೆ ಈಗಾಗಲೇ 37 ವರ್ಷ ವಯಸ್ಸಾಗುತ್ತಾ ಬಂದಿದ್ದು ಈ ಸಮಯದಲ್ಲಿ ಭಾವನೊಡನೆ ಸಂಸಾರ ಮಾಡಿದರೆ ಸಮಾಜ ತನ್ನನ್ನು ಮೂದಲಿಸುತ್ತದೆ ಎಂದು ಯೋಚಿಸಿದ ಭೂದೇವಿ ಆತನ ಆಹ್ವಾನವನ್ನು ನಯವಾಗಿಯೇ ತಿರಸ್ಕರಿಸಿದಳು. ಆದರೆ ರಾಜೇಂದ್ರ ಅವಳಲ್ಲಿ ಎಷ್ಟು ಅನುರಕ್ತನಾಗಿದ್ದನೆಂದರೆ ನಾನಾ ವಿಧವಾದ ಆಮಿಷ ಮತ್ತು ಬೆದರಿಕೆಗಳನ್ನು ಒಡ್ಡತೊಡಗಿದ. ‘ನಾವು ಹಿಂದೆ ಲಾಡ್ಜಿನಲ್ಲಿ ಕಳೆದ ದೃಶ್ಯಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದಿದ್ದೇನೆ, ನೀನೇನಾದರೂ ನನ್ನ ಜೊತೆಗೆ ಬಂದು ಇರಲು ತಯಾರಾಗದಿದ್ದರೆ ಅವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತೇನೆ’ ಎಂದು ಹೆದರಿಸಿದ. ಅವನ ಒತ್ತಡಕ್ಕೆ ಕಡೆಗೂ ಭೂದೇವಿ ಮಣಿದಳು. ಕುಟುಂಬದ ವಿರೋಧದ ನಡುವೆಯೂ ಭೂದೇವಿ ಮತ್ತು ಅವಳ ಮಗನನ್ನು ಅತ್ತೆ ಮಾವನ ಮನೆಯಿಂದ ಹೊರತಂದ ರಾಜೇಂದ್ರ ಬಾಡಿಗೆ ಮನೆಯಲ್ಲಿಟ್ಟ. ಕೆಲ ತಿಂಗಳುಗಳ ನಂತರ ಅವಳನ್ನು ಮದುವೆಯಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸುವೆ ಎಂದ.
ಏತನ್ಮಧ್ಯೆ ಗಂಡನ ವರ್ತನೆಯಿಂದ ರೋಸಿಹೋಗಿದ್ದ ಶ್ರೀದೇವಿ ತಂಗಿಯ ಮನೆಗೆ ಪದೇಪದೆ ಬಂದು ಅವಳೊಡನೆ ಜಗಳವಾಡತೊಡಗಿದಳು. ಭೂದೇವಿಯನ್ನು ಬಿಟ್ಟುಬಿಡುವಂತೆ ಗಂಡನನ್ನು ಪ್ರತಿದಿನವೂ ಪೀಡಿಸತೊಡಗಿದಳು. ಭೂದೇವಿಯಿಲ್ಲದೆ ತನಗೆ ಬದುಕಲು ಸಾಧ್ಯವೇ ಇಲ್ಲ ಎಂದು ಭಾವಿಸಿದ್ದ ರಾಜೇಂದ್ರ ಪತ್ನಿಗೆ ವಿಚ್ಛೇದನ ನೀಡಲು ನಿರ್ಧರಿಸಿದ. ಆತ ವಕೀಲರನ್ನು ಕಂಡಾಗ, ‘ನೀನು ಪತ್ನಿಗೆ ಡಿವೋರ್ಸ್ ನೀಡಿದರೆ ನಿನ್ನ ಆಸ್ತಿಯಲ್ಲಿ ಅವಳಿಗೆ ಜೀವನಾಧಾರವನ್ನು ಕೊಡಬೇಕಾಗುತ್ತದೆ, ಮಿಗಿಲಾಗಿ ನ್ಯಾಯಾಲಯದ ಕಾರ್ಯಕಲಾಪ ವರ್ಷಾನುಗಟ್ಟಲೆ ಹಿಡಿಯುತ್ತದೆ’ ಎಂದರು. ಪ್ರತಿದಿನವೂ ಜಗಳವಾಡುತ್ತಿದ್ದ ಪತ್ನಿಯನ್ನು ಮುಗಿಸಿಬಿಡಲು ರಾಜೇಂದ್ರ ನಿಶ್ಚಯಿಸಿದ. ಒಂದು ಸಂಜೆ ಆತ, ‘ನಾನು ಮಾಡಿದ ಕೆಲಸದಿಂದ ಪಶ್ಚಾತ್ತಾಪವಾಗಿದೆ, ನಾನು ನಿನ್ನನ್ನು ನೋಯಿಸಿದ್ದೇನೆ, ಕೆಲವು ದಿನಗಳಲ್ಲಿ ಭೂದೇವಿಯ ಸಹವಾಸವನ್ನು ಬಿಟ್ಟು ನಿನ್ನೊಡನೆ ಹೊಂದಿಕೊಂಡು ಸಂಸಾರಮಾಡುವೆ’ಎಂದ. ಗಂಡನ ಮನಪರಿವರ್ತನೆಯಾದ ಬಗ್ಗೆ ಆಕೆ ಸಂತಸಗೊಂಡರೂ ಸಂದೇಹವೂ ಬಂದಿತ್ತು.
ಒಂದು ದಿನ ರಾಜೇಂದ್ರ ಪತ್ನಿಯನ್ನು ಸಿನಿಮಾಗೆ ಕರೆದೊಯ್ದ. ಆನಂತರ ರೆಸ್ಟೋರೆಂಟೊಂದರಲ್ಲಿ ಉತ್ತಮ ಭೋಜನವನ್ನು ಕೊಡಿಸಿದ. ಸ್ವಲ್ಪ ಕಾಲ ಇಲ್ಲೇ ಎಲ್ಲಾದರೂ ಕುಳಿತುಕೊಳ್ಳೋಣವೆಂದು ಅವಳನ್ನು ರೇಲ್ವೆ ಹಳಿಯ ಬಳಿಯಿದ್ದ ಬಯಲೊಂದಕ್ಕೆ ಕರೆದೊಯ್ದ. ಅರ್ಧ ಗಂಟೆಯ ನಂತರ ರೈಲು ಬರುತ್ತಿರುವ ಸಪ್ಪಳ ಕೇಳಿಬಂದಾಗ ಆಕೆಯನ್ನು ಹಳಿಯತ್ತ ಕರೆದೊಯ್ದು ಬರುತ್ತಿದ್ದ ಗೂಡ್ಸ್ ರೈಲಿನ ಮುಂದೆ ದೂಡಿದ. ಆಕೆಯ ದೇಹ ಎರಡು ಹೋಳಾಯಿತು. ಅಲ್ಲಿಂದ ಆತ ತಮ್ಮ ಮನೆಯ ಬಳಿಯ ಪೊಲೀಸ್ ಠಾಣೆಗೆ ಹೋಗಿ ಶ್ರೀದೇವಿ ಬೆಳಗ್ಗೆಯಿಂದ ಮನೆಯಿಂದ ಕಾಣೆಯಾಗಿದ್ದಾಳೆ ಎಂಬ ದೂರನ್ನು ನೀಡಿದ. ಹಳಿಯ ಮೇಲೆ ಸಿಕ್ಕ ಅಪರಿಚಿತ ದೇಹದ ಬಗ್ಗೆ ರೇಲ್ವೆ ಪೊಲೀಸರು ತನಿಖೆ ನಡೆಸತೊಡಗಿದರು. ಕಳೆದ ಕೆಲವು ದಿನಗಳಲ್ಲಿ ಕಾಣೆಯಾದ ಸ್ತ್ರೀಯರ ಬಗ್ಗೆ ವಿಚಾರಿಸಿದಾಗ ಅವರಿಗೆ ರಾಜೇಂದ್ರ ನೀಡಿದ್ದ ದೂರಿನ ಬಗ್ಗೆ ತಿಳಿಯಿತು. ರಾಜೇಂದ್ರನನ್ನು ಸಂರ್ಪಸಿದಾಗ ಈ ದೇಹವು ತನ್ನ ಹೆಂಡತಿಯದ್ದೇ ಎಂದು ಗುರುತಿಸಿ ಅಳತೊಡಗಿದ. ಮಕ್ಕಳಾಗದ ಕೊರಗಿನಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದ. ಕೇಸು ಮುಕ್ತಾಯವಾಯಿತು. ಒಂದು ತಿಂಗಳ ನಂತರ ಆತ ಭೂದೇವಿ ಮತ್ತು ಅವಳ ಮಗನನ್ನು ತನ್ನ ಮನೆಗೆ ಕರೆದುಕೊಂಡು ಬಂದ.
ಶ್ರೀದೇವಿಯ ಸಾವಿನಲ್ಲಿ ರಾಜೇಂದ್ರನ ಕೈವಾಡವಿರಲೇಬೇಕು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹವಳಲ್ಲ ಎಂದು ರ್ತಸಿದ ರಾಮಸ್ವಾಮಿ ದೂರು ನೀಡಿದರು. ಆರಂಭದಲ್ಲಿ ಪೊಲೀಸರು ಅವರ ದೂರಿಗೆ ಮಹತ್ವ ನೀಡಲಿಲ್ಲ. ಆಗ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಮೊರೆ ಹೋದರು. ಪ್ರಕರಣದ ಮರುತನಿಖೆಗೆ ಆದೇಶವಾಯಿತು.
ಏತನ್ಮಧ್ಯೆ ಭೂದೇವಿಗೆ ಪಾಪಪ್ರಜ್ಞೆ ಕಾಡುತ್ತಿತ್ತು. ಪೊಲೀಸರು ವಿಚಾರಣೆಗಾಗಿ ಬಂದಾಗ ಆಕೆ ತನ್ನ ಅಕ್ಕನನ್ನು ರಾಜೇಂದ್ರನೇ ಕೊಲೆಮಾಡಿರಬಹುದೆಂಬ ಸಂಶಯ ವ್ಯಕ್ತಪಡಿಸಿದಳು. ರಾಜೇಂದ್ರನನ್ನು ತೀವ್ರ ರೀತಿಯಲ್ಲಿ ಪ್ರಶ್ನಿಸಿದಾಗ ಆತ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ.
ಆದರೆ ಈ ಕೇಸಿನಲ್ಲಿ ಯಾವುದೇ ಪ್ರತ್ಯಕ್ಷದರ್ಶಿಗಳಿರಲಿಲ್ಲ. ಕೊಲೆಯಾದ ದಿನ ದಂಪತಿ ಸಂದರ್ಶಿಸಿದ್ದ ರೆಸ್ಟೋರೆಂಟ್ ಹಾಗೂ ರೇಲ್ವೆ ಹಳಿಯ ಬಳಿಯ ರಸ್ತೆಯಲ್ಲಿದ್ದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪರಾಧ ನಡೆಯುವ ಕೆಲವೇ ಗಂಟೆಗಳ ಮುಂಚೆ ರಾಜೇಂದ್ರ ಮೃತಳ ಜತೆಯಲ್ಲಿದ್ದುದನ್ನು ಪತ್ತೆ ಮಾಡಲಾಯಿತು. ರಾಜೇಂದ್ರನ ಸೆಲ್ ಫೋನ್ ಲೊಕೇಷನ್ ಸಹ ಆತ ಕೊಲೆಯಾದ ಸ್ಥಳದಲ್ಲಿದ್ದ ಬಗ್ಗೆ ಪುಷ್ಟೀಕರಿಸಿತು. ನ್ಯಾಯಾಲಯದಲ್ಲಿ ಮೃತಳ ಮಾತಾಪಿತರು ಹಾಗೂ ಸೋದರಿ ಆರೋಪಿಯ ನಡತೆಯ ಬಗ್ಗೆ ಸಾಕ್ಷ್ಯವನ್ನು ನೀಡಿದರು. ಕೇವಲ ಸಾಂರ್ದಭಿಕ ಸಾಕ್ಷ್ಯಗಳ ಮೇಲೆಯೇ ರಾಜೇಂದ್ರನನ್ನು ತಪ್ಪಿತಸ್ಥನೆಂದು ತೀರ್ವನಿಸಿದ ನ್ಯಾಯಾಲಯವು ಏಳು ವರ್ಷಗಳ ಕಾರಾಗೃಹವಾಸ ವಿಧಿಸಿತು.
‘ಜೀವನವು ನಮ್ಮ ಆಯ್ಕೆಗಳಿಗೆ ಸಂಬಂಧಿಸಿರುವಂತಹದು. ಕೆಲವು ಆಯ್ಕೆಗಳ ಬಗ್ಗೆ ನಮಗೆ ಖೇದವಿರುತ್ತದೆ, ಕೆಲವೊಂದರ ಬಗ್ಗೆ ಹೆಮ್ಮೆಯಿರುತ್ತದೆ. ನಾವೇನಾಗಿದ್ದೇವೆಯೋ ಅವೆಲ್ಲವೂ ನಮ್ಮ ಆಯ್ಕೆಗಳ ಫಲವೇ’ ಎಂದಿದ್ದಾನೆ, ಅಮೆರಿಕನ್ ಲೇಖಕ ಗ್ರಹಾಂ ಬ್ರೌನ್. ತನ್ನ ಅರೆಕ್ಷಣದ ಅಚಾತುರ್ಯ ಹಾಗೂ ತಪ್ಪು ಆಯ್ಕೆಯಿಂದ ಕುಟುಂಬವೊಂದು ದುಃಖದ ಕಡಲಿನಲ್ಲಿ ತೇಲಬೇಕಾದ ಪರಿಸ್ಥಿತಿ ನಿರ್ವಣವಾದದ್ದನ್ನು ಕಂಡು ಭೂದೇವಿ ಪರಿತಪಿಸುತ್ತಿದ್ದಾಳೆ.