| ಅರವಿಂದ ಅಕ್ಲಾಪುರ ಶಿವಮೊಗ್ಗ
ಕಳೆದ ಎರಡು ದಶಕಗಳಲ್ಲಿ ಭತ್ತದ ಗದ್ದೆಗಳು ನಿಧಾನವಾಗಿ ಕರಗುತ್ತಿವೆ. ಹೆಚ್ಚಿನ ಪ್ರದೇಶ ಅಡಕೆ ತೋಟವಾಗಿ ಮಾರ್ಪಟ್ಟರೆ, ಬಹಳಷ್ಟು ಜಮೀನುಗಳು ನಿವೇಶನ ಇಲ್ಲವೇ ವಾಣಿಜ್ಯ ಪ್ರದೇಶಕ್ಕೆ ಬಳಕೆಯಾಗುತ್ತಿದೆ. ನಗರ ಹಾಗೂ ಪಟ್ಟಣದ ಹೊರವಲಯದ ಗದ್ದೆಗಳು ಬಡಾವಣೆಗಳಾಗಿವೆ. ಮಲೆನಾಡಿನಲ್ಲಿ ಭತ್ತದ ಗದ್ದೆಗಳು ಅಡಕೆ ಸಸಿಗಳಿಗೆ ಜಾಗ ತೆರವು ಮಾಡಿಕೊಟ್ಟಿವೆ. ಬಗರ್ಹುಕುಂ ಸಾಗುವಳಿ ಪ್ರದೇಶ ಹೆಚ್ಚಳದಲ್ಲಿ ಅಡಕೆ ಪಾತ್ರವೇ ಹೆಚ್ಚು. ಅರೆಬಯಲುಸೀಮೆ ಹಾಗೂ ಬಯಲುಸೀಮೆಯ ಮೆಕ್ಕೆಜೋಳದ ಹೊಲಗಳು, ತರಕಾರಿ ಬೆಳೆಯುವ ಬಹುತೇಕ ಜಾಗಗಳು ಅಡಕೆ ತೋಟಗಳಾಗಿ ಪರಿವರ್ತನೆಯಾಗಿವೆ. ಎರಡು ದಶಕಗಳ ಹಿಂದೆ ಆರಂಭವಾದ ಅಡಕೆ ಬೆಳೆ ವಿಸ್ತರಣೆ ಇಂದಿಗೂ ಮುಂದುವರಿದಿದೆ.
ಪ್ರತಿ ವರ್ಷ ರಾಜ್ಯದಲ್ಲಿ ಕನಿಷ್ಠ 40 ಸಾವಿರ ಎಕರೆ ತೋಟಕ್ಕೆ ಸೇರ್ಪಡೆಯಾಗುತ್ತಿದೆ. ಕೃಷಿ ಬೆಲೆ ನಿಗದಿ ಆಯೋಗದ ವರದಿ ಪ್ರಕಾರ 2020-21ನೇ ಸಾಲಿನಲ್ಲಿ ರಾಜ್ಯದ ಒಟ್ಟು ಅಡಕೆ ಬೆಳೆಯುವ ಪ್ರದೇಶ 5.51 ಲಕ್ಷ ಎಕರೆಯಾಗಿತ್ತು. ಕಳೆದೊಂದು ದಶಕದ ಅಂಕಿ-ಅಂಶದ ಪ್ರಕಾರ ಶೇ.133 ಪ್ರದೇಶ ಅಡಕೆ ತೋಟಗಳಾಗಿ ಮಾರ್ಪಟ್ಟಿದೆ. ಇದರಲ್ಲಿ ಬಹುಪಾಲು ಭತ್ತ ಬೆಳೆಯುವ ಭೂಮಿಯದ್ದು. ವಿಸ್ತರಣೆಯಾಗಿರುವ ಅಡಕೆ ತೋಟಗಳು ಸ್ಥಳೀಯವಾಗಿ ವ್ಯಾಪಕ ಉದ್ಯೋಗ ಸೃಷ್ಟಿಸುತ್ತಿವೆ. ಆಯಾ ಪ್ರದೇಶಕ್ಕೆ ಹೊಂದಿಕೆಯಾಗುವ ಅಡಕೆ ಸಸಿಗಳನ್ನು ಪೂರೈಸುವ ನರ್ಸರಿ ಉದ್ಯಮ ತಲೆ ಎತ್ತಿದೆ. ಕೃಷಿ ಕೂಲಿ ಕಾರ್ವಿುಕರ ಕುಟುಂಬಗಳೂ ಆರ್ಥಿಕವಾಗಿ ಸಬಲಗೊಳ್ಳಲು ಕಾರಣವಾಗಿದೆ. ಆದರೆ, ಆಹಾರ ಬೆಳೆ ಪ್ರದೇಶದ ಮೇಲೆ ಇದು ವ್ಯತಿರಿಕ್ತ ಪರಿಣಾಮ ಉಂಟು ಮಾಡಿದೆ.ಕೇಂದ್ರ ಸರ್ಕಾರ ಮುಂಗಾರು ಹಂಗಾಮಿನ ಭತ್ತಕ್ಕೆ ಬೆಂಬಲ ಬೆಲೆ ಘೊಷಣೆ ಮಾಡಿರುವುದರಿಂದ ಭತ್ತ ಬೆಳೆಯುವ ಕೃಷಿಕರು ಕೊಂಚ ನಿರಾಳರಾಗಿದ್ದಾರೆ. ಜತೆಗೆ ಅಡಕೆ ಬೆಳೆಯುವ ಪ್ರದೇಶಗಳ ವಿಸ್ತರಣೆಗೆ ಕೊಂಚ ಬ್ರೇಕ್ ಬೀಳಬಹುದೇ ಎಂಬ ಆಶಾಭಾವನೆಯೂ ಇದೆ.
ಸಕಾಲದಲ್ಲಿ ಸರ್ಕಾರವೇ ಭತ್ತ ಖರೀದಿ ಕೇಂದ್ರ ತೆರೆಯಬೇಕು. ಹಾಗೂ ವರ್ಷಪೂರ್ತಿ ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸಬೇಕು. ಹೀಗಾದರೆ ಮಾತ್ರ ಭತ್ತದ ಬೆಳೆಗಾರರು ಕೃಷಿಯನ್ನು ಮುಂದುವರಿಸುತ್ತಾರೆ. ಇಲ್ಲವಾದರೆ ಅನೇಕರು ಭವಿಷ್ಯದಲ್ಲಿ ಅಡಕೆ ಬೆಳೆಗಾರರು ಎನಿಸಿಕೊಳ್ಳುವ ಸಾಧ್ಯತೆಗಳಿವೆ. | ಕೆ.ಟಿ.ಗಂಗಾಧರ್, ರೈತ ಮುಖಂಡ
ಹಿಂಗಾರು ಕೃಷಿ ಕುಸಿತ: ಹೆಚ್ಚಿದ ಕೃಷಿ ಕೂಲಿ ಕಾರ್ವಿುಕರ ಕೊರತೆ, ದುಬಾರಿಯಾದ ಕೃಷಿ ಕೂಲಿ, ಹವಾಮಾನ ವೈಪರೀತ್ಯ, ಹೆಚ್ಚಿದ ಉತ್ಪಾದನಾ ವೆಚ್ಚ, ಸಮರ್ಪಕ ಮಾರುಕಟ್ಟೆಯಿಲ್ಲದ ಕಾರಣ ಭತ್ತದ ಕೃಷಿ ಕ್ಷೇತ್ರ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಜಲಾಶಯದ ಅಚ್ಚುಕಟ್ಟು ಪ್ರದೇಶಗಳನ್ನು ಹೊರತುಪಡಿಸಿದರೆ ಬೇರೆ ಕಡೆಗಳಲ್ಲಿ ಹಿಂಗಾರಿನಲ್ಲಿ ಭತ್ತ ಬೆಳೆಯುವರ ಸಂಖ್ಯೆ ವ್ಯಾಪಕವಾಗಿ ಕುಸಿದೆ. ಈ ವರ್ಷ ಶಿವಮೊಗ್ಗ, ಭದ್ರಾವತಿ ಹಾಗೂ ಶಿಕಾರಿಪುರ ತಾಲೂಕಿನ 11 ಸಾವಿರ ಹೆಕ್ಟೇರ್ನಲ್ಲಿ ಮಾತ್ರ ಭತ್ತ ಬೆಳೆಯಲಾಗಿದೆ. ಹೊಸನಗರ, ಸಾಗರ, ತೀರ್ಥಹಳ್ಳಿ ತಾಲೂಕಿನಲ್ಲಿ ಭತ್ತ ಕೃಷಿಕರ ಸಂಖ್ಯೆ ಅತ್ಯಂತ ಕಡಿಮೆಯಾಗಿದೆ. ಮುಂಗಾರು ಹಂಗಾಮಿನಲ್ಲಿ ಒಟ್ಟು 77 ಸಾವಿರ ಹೆಕ್ಟೇರ್ನಲ್ಲಿ ಭತ್ತದ ಕೃಷಿಯ ಗುರಿ ಹೊಂದಲಾಗಿದೆ. ಕನಿಷ್ಠ ಬೆಂಬಲ ಬೆಲೆ ಭತ್ತದ ಬೆಳೆಗಾರರಿಗೆ ಶಕ್ತಿ ತುಂಬಿದರೆ ಮಾತ್ರ ಆಹಾರೋತ್ಪಾದನೆಗೆ ಪೂರಕ ಸ್ಥಿತಿ ನಿರ್ವಣವಾಗಲಿದೆ.