ಅಭಯಹಸ್ತಕ್ಕಾಗಿ ಡೊನಾಲ್ಡ್ ಟ್ರಂಪ್ರ ಬದಲು ಪಾಕಿಸ್ತಾನವನ್ನು ಆಶ್ರಯಿಸಹೋಗಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಮಹಮದ್ ಯೂನುಸ್ ಒಟ್ಟಿಗೇ ಟ್ರಂಪ್ ಮತ್ತು ತಮ್ಮ ಸೇನಾ ದಂಡನಾಯಕ ಜ. ವಕಾರ್-ಉಝå್-ಝುಮಾನ್ರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ದೇಶ ತೊರೆಯದೇ ಗತ್ಯಂತರವಿಲ್ಲ ಎನ್ನುವ ಸ್ಥಿತಿ ನಿರ್ವಣವಾಗಿದೆ. ಆದರೆ ಅದೂ ಸುಲಭವಲ್ಲ ಎನ್ನುವುದು ಗಂಭೀರ ವಿಷಯ.
ಮುಂದೆ ಬಾಂಗ್ಲಾದೇಶ ಯಾವ ಹಾದಿಯಲ್ಲಿ ಸಾಗಬೇಕೆಂಬ ಕುರಿತಾಗಿ ಪ್ರಣಾಳಿಕೆಯೊಂದನ್ನು ಘೊಷಿಸುವ ಬಗ್ಗೆ ಮಾತಾಡಿದ ಅವರು ಅದಕ್ಕಾಗಿ ಡಿಸೆಂಬರ್ 31ರ ದಿನವನ್ನು ನಿಗದಿಮಾಡಿದರು. ಅಂದು ಢಾಕಾದ ಶಹೀದ್ ಮಿನಾರ್ ಮುಂದೆ ಇಪ್ಪತ್ತರಿಂದ ಮೂವತ್ತು ಲಕ್ಷ ಜನರು ಸೇರಿ ತಮ್ಮ ಪ್ರಣಾಳಿಕೆಯನ್ನು ಅನುಮೋದಿಸುವುದಾಗಿಯೂ ಮಸೂದ್ ಹೇಳಿದರು ಮತ್ತು ಅದಕ್ಕಾಗಿ ತಯಾರಿ ಆರಂಭಿಸಿದರು.
ಡಿಸೆಂಬರ್ 31 ಬಂತು, ಹೋಯಿತು. ಸಂವಿಧಾನವನ್ನು ಬದಲಿಸುವ ಬಗ್ಗೆ ಮಹಾನಾಯಕ ಮಸೂದ್ ಅವರಿಂದ ಯಾವ ಘೊಷಣೆಯೂ ಹೊರಡಲಿಲ್ಲ. ಯಾಕೆಂದರೆ ಅವರು ಬಯಸಿದಷ್ಟು ಜನ ಸೇರಲಿಲ್ಲ! 20-30 ಲಕ್ಷ ಜನರ ಬದಲು ಅಂದು ಅಲ್ಲಿ ಸೇರಿದ್ದು 2-3 ಸಾವಿರ ಜನರಷ್ಟೇ. ‘ಮೈಕ್ರೋಫೈನಾನ್ಸ್ ಮಾಂತ್ರಿಕ’ನಾದ ತಮ್ಮನ್ನು ಬಡ ಬಾಂಗ್ಲಾದೇಶದ ಭಾಗ್ಯವಿಧಾತನೆಂದು ನಂಬಿದ ಕೆಲವರು ವಿದ್ಯಾರ್ಥಿಗಳನ್ನೂ, ಕೆಲವರು ಸರ್ಕಾರಿ ನೌಕರರನ್ನು ಹಿಂದಿಟ್ಟುಕೊಂಡು ದೇಶವನ್ನು ಕಟ್ಟಾ ಇಸ್ಲಾಮಿಕ್ ರಾಷ್ಟ್ರವಾಗಿ ಮಾರ್ಪಡಿಸಿ, ತಾವದರ ಸವೋಚ್ಚ ಧಾರ್ವಿುಕ ನಾಯಕನಾಗಲು ‘ಆಪರೇಷನ್ ಅಕ್ಟೋಪಸ್’ ಹಂಚಿಕೆ ಹಾಕಿದ್ದ ಮಹಮದ್ ಯೂನುಸ್ ನಿರಾಶರಾಗಿದ್ದಾರೆ. ನೊಬೆಲ್ ಪಾರಿತೋಷಕ ಪುರಸ್ಕೃತ ಅರ್ಥಶಾಸ್ತ್ರಜ್ಞರ ಲೆಕ್ಕ ತಪ್ಪಿದ್ದು ಎಲ್ಲಿ?
ಕಳೆದ ವರ್ಷದ ಮಧ್ಯಭಾಗದಲ್ಲಿ ಪ್ರಧಾನಿ ಶೇಖ್ ಹಸೀನಾ ವಿರುದ್ಧದ ಆಂದೋಲನದ ಮುಂಚೂಣಿಯಲ್ಲಿದ್ದುದು ಜಮಾತ್-ಎ-ಇಸ್ಲಾಮಿ ಮತ್ತದರ ವಿದ್ಯಾರ್ಥಿ ಅಂಗ ಇಸ್ಲಾಮಿ ಛಾತ್ರ ಶಿಬಿರ್ ಹಾಗೂ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಮತ್ತದರ ವಿದ್ಯಾರ್ಥಿ ಅಂಗ ಬಾಂಗ್ಲಾದೇಶ್ ಜಾತೀಯೋಬಾದಿ ಛಾತ್ರದಲ್. ನಂತರ ಅಮೆರಿಕದ ವಿದೇಶಾಂಗ ಇಲಾಖೆ ಕರೆತಂದು ಕೂರಿಸಿದ ಮಹಮದ್ ಯೂನುಸ್ ಬೆನ್ನಿಗೆ ನಿಂತವರೂ ಇವೇ. ಆದರೀಗ ಯೂನುಸ್ ನಡೆಗಳು ಬಿಎನ್ಪಿಗೆ ಸಮ್ಮತವಾಗುತ್ತಿಲ್ಲ. ಮಧ್ಯಂತರ ಸರ್ಕಾರ ರಚನೆಯಾದ ಮೇಲೂ ಮುಂದುವರಿದ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಒಂದು ರಾಜಕೀಯ ಪಕ್ಷವಾಗಿ ಬಿಎನ್ಪಿ ಒಪ್ಪುವುದಿಲ್ಲ. ಜತೆಗೆ, ಇಸ್ಕಾನ್ ಅನ್ನು ಬಹಿಷ್ಕರಿಸಲು ಹಾಕಿದ್ದ ಯೋಜನೆಯನ್ನು ಯೂನುಸ್ ಸರ್ಕಾರ ಕೈಬಿಟ್ಟದ್ದೂ ಬಿಎನ್ಪಿಯ ವಿರೋಧದಿಂದಲೇ. ಮತದಾರರ ಒಂದು ದೊಡ್ಡ ವರ್ಗವನ್ನು ಎದುರುಹಾಕಿಕೊಳ್ಳುವುದು ವಿಹಿತವಲ್ಲ ಎಂದು ಬಿಎನ್ಪಿ ಲೆಕ್ಕಹಾಕಿದ್ದು ಸಹಜವೇ. ಇಂದು ಯೂನುಸ್ -ಬಿಎನ್ಪಿ ಕಂದರ ಇನ್ನಷ್ಟು ಆಳವಾಗಿದೆ. ಯೂನುಸ್ ಸಂವಿಧಾನವನ್ನೇ ಬದಲಿಸಿದರೆ, ಸಂವಿಧಾನದ ಪ್ರಕಾರವೇ ನಡೆಯುತ್ತಿದ್ದ ಚುನಾವಣೆಗಳು ನಡೆಯುವುದಿಲ್ಲ, ಚುನಾಯಿತ ಸರ್ಕಾರದ ರಚನೆಗೂ ಅವಕಾಶವಿಲ್ಲ, ಅಂದರೆ ಒಂದು ರಾಜಕೀಯ ಪಕ್ಷವಾಗಿ ಅಸ್ತಿತ್ವದಲ್ಲಿರಲು ತಮ್ಮ ಪಕ್ಷಕ್ಕೆ ಅವಕಾಶವಿರುವುದಿಲ್ಲ ಮತ್ತು ರಾಜಕೀಯ ಅಧಿಕಾರಗಳನ್ನು ಪಡೆಯಲು ತನಗೆ ಸಾಧ್ಯವಿರುವುದಿಲ್ಲ ಎಂದು ಬಿಎನ್ಪಿ ನಾಯಕರು ಮನಗಂಡರು. ಹೀಗಾಗಿ ಡಿಸೆಂಬರ್ 31ರ ರ್ಯಾಲಿಯಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಸಹಕರಿಸಿದರೆ ಒಂದು ರಾಜಕೀಯ ಪಕ್ಷವಾಗಿ ಬಿಎನ್ಪಿ ಆತ್ಮಹತ್ಯೆ ಮಾಡಿಕೊಂಡಂತೆ ಮತ್ತು ತಮ್ಮ ರಾಜಕೀಯ ಆಶೋತ್ತರಗಳಿಗೆ ತಾವೇ ಕಲ್ಲು ಹಾಕಿಕೊಂಡಂತೆ ಎಂದು ಬಿಎನ್ಪಿ ನೇತಾರರು ಹಾಗೂ ಛಾತ್ರದಲ್ ಮುಂದಾಳುಗಳು ಅರಿತರು. ಹೀಗಾಗಿಯೇ ಅಂದು ರ್ಯಾಲಿಯಿಂದ ದೂರ ಉಳಿದರು. ಸಂವಿಧಾನ ಬದಲಾವಣೆಗಾಗಿ ನಡೆಯಬೇಕಾಗಿದ್ದ ರ್ಯಾಲಿಯನ್ನು ವಿಫಲವಾಗಿಸಿದ ಎರಡು ಪ್ರಮುಖ ಕಾರಣಗಳಲ್ಲಿ ಇದೊಂದು. ಇನ್ನೊಂದು ಇನ್ನಷ್ಟು ಕುತೂಹಲಕಾರಿಯಾದುದು.
ಹಸೀನಾ ವಿರುದ್ಧದ ತಥಾಕಥಿತ ವಿದ್ಯಾರ್ಥಿ ಆಂದೋಲನಕ್ಕೆ, ನಂತರ ಯೂನುಸ್ರನ್ನು ಪಟ್ಟದಲ್ಲಿ ಪಟ್ಟಾಗಿ ಕೂರಿಸುವುದಕ್ಕೆ ಹಣ ಮುಖ್ಯವಾಗಿ ಹರಿದುಬಂದದ್ದು ಬೈಡೆನ್ ಸರ್ಕಾರದ ಹಿಂದೆ ನಿಂತಿರುವ ಜಾರ್ಜ್ ಸೊರೋಸ್ನ ‘ಓಪನ್ ಸೊಸೈಟಿ ಫೌಂಡೇಶನ್’ ಹಾಗೂ ಇಬ್ಬರು ಮಾಜಿ ಡೆಮೋಕ್ರಾಟಿಕ್ ಅಧ್ಯಕ್ಷರುಗಳ ಕ್ಲಿಂಟನ್ ಮತ್ತು ಒಬಾಮ ಫೌಂಡೇಶನ್ಗಳಿಂದ. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಲ್ಲಿ ಕಮಲಾ ಹ್ಯಾರಿಸ್ ಜಯಗಳಿಸಿದ್ದರೆ ಯೂನುಸ್ ಅದೃಷ್ಟರೇಖೆ ಹಾಗೆಯೇ ಮೇಲಕ್ಕೇರುತ್ತಲೇ ಹೋಗುತ್ತಿತ್ತು. ಆದರೆ ಡೊನಾಲ್ಡ್ ಟ್ರಂಪ್ ವಿಜಯಿಯಾದದ್ದು ಯೂನುಸ್ ಗೊಂಬೆ ಮತ್ತದರ ಅಮೆರಿಕನ್ ಸೂತ್ರಧಾರರೆಲ್ಲರ ಲೆಕ್ಕಾಚಾರಗಳನ್ನು ತಲೆಕೆಳಕಾಗಿಸಿಬಿಟ್ಟಿತು.
ಟ್ರಂಪ್ ಅಧಿಕಾರಕ್ಕೆ ಬರುವ ಮೊದಲೇ ಡೆಮೋಕ್ರಾಟಿಕ್ ಪಕ್ಷ ಮತ್ತದರ ತಥಾಕಥಿತ ಪ್ರಗತಿಪರ ಬೆಂಬಲಿಗರನ್ನು ಇನ್ನಷ್ಟು ನಿರಾಶರಾಗಿಸಿದ್ದು ಬಾಂಗ್ಲಾದೇಶದ ಆಗ್ನೇಯ ಗಡಿಯಲ್ಲಿ ಕಳೆದ ಮೂರು ವಾರಗಳಿಂದ ಘಟಿಸುತ್ತಿರುವ ಬೆಳವಣಿಗೆಗಳು. ಬೈಡೆನ್ ಸರ್ಕಾರ ಹಸೀನಾರನ್ನು ಓಡಿಸಿ ಯೂನುಸ್ರನ್ನು ಕರೆತಂದು ಕೂರಿಸಿದ್ದರ ಮುಖ್ಯ ಉದ್ದೇಶ ಬಾಂಗ್ಲಾದೇಶದ ದಕ್ಷಿಣ ತುದಿಯಾದ ಸೈಂಟ್ ಮಾರ್ಟಿನ್ ದ್ವೀಪವನ್ನು ಪಡೆದುಕೊಂಡು ಅಲ್ಲಿ ಸೇನಾನೆಲೆ ನಿರ್ವಿುಸಿಕೊಳ್ಳುವುದು. ಆದರೆ ಮ್ಯಾನ್ಮಾರ್ನ ಅರಕಾನ್ ಸೇನೆಯ ಚಟುವಟಿಕೆಗಳಿಂದಾಗಿ ಕಳೆದ ಮೂರು ವಾರಗಳಲ್ಲಿ ಆ ಪ್ರದೇಶದ ಭೂ-ಸಾಮರಿಕ ವಾಸ್ತವಗಳು ಏಕಾಏಕಿ ಬದಲಾಗಿವೆ. ಸೈಂಟ್ ಮಾರ್ಟಿನ್ ದ್ವೀಪ ಅರಕಾನ್ ಸೇನೆಯ ವಶವಾಗಿರಬಹುದೇ, ಅದನ್ನು ತನ್ನದೇ ಪ್ರಜೆಗಳಿಂದ ಮುಚ್ಚಿಡಲು ಯೂನುಸ್ ಸರ್ಕಾರ ಹೆಣಗುತ್ತಿದೆಯೇ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ವಿರುದ್ಧವಾಗಿ, ಆ ದ್ವೀಪವನ್ನು ಯೂನುಸ್ ಸರ್ಕಾರ ರಹಸ್ಯವಾಗಿ ಅಮೆರಿಕನ್ನರಿಗೆ ಒಪ್ಪಿಸಿರಬಹುದೇ ಮತ್ತದು ವಿಷಯವನ್ನು ಜಗತ್ತಿನಿಂದ ಮುಖ್ಯವಾಗಿ ಭಾರತ ಹಾಗೂ ಚೀನಾಗಳಿಂದ ಮುಚ್ಚಿಡಲು ಕಸರತ್ತು ನಡೆಸುತ್ತಿದೆಯೇ ಎಂಬ ಪ್ರಶ್ನೆಯೂ ‘ಸಾಂರ್ದಭಿಕ ಸಾಕ್ಷ ್ಯಗಳ ಆಧಾರದ ಮೇಲೆ ಏಳುತ್ತದೆ. ವಾಸ್ತವ ಏನಿದ್ದರೂ ಭಾರತದ ‘ಸಮ್ಮತಿ ಮತ್ತು ಸಹಕಾರ’ವಿಲ್ಲದೆ ಆ ದ್ವೀಪದಲ್ಲಿ ಅಮೆರಿಕನ್ನರು ನೆಮ್ಮದಿಯಾಗಿ ತಳವೂರಲು ಸಾಧ್ಯವಿಲ್ಲ. ಈ ಕುರಿತಾಗಿ ಟ್ರಂಪ್ ಆಡಳಿತದ ಮನೋಭಾವನೆ ಏನಿರುತ್ತದೆಂದು ಈಗಲೇ ಹೇಳಲಾಗುವುದಿಲ್ಲ. ಹೀಗೆ ಬಾಂಗ್ಲಾದೇಶದಲ್ಲಿ ತಮ್ಮ ಕುಟಿಲ ಕಾರಸ್ಥಾನಕ್ಕೆ ಮೂಲಕಾರಣವಾದ ಸೈಂಟ್ ಮಾರ್ಟಿನ್ ದ್ವೀಪದ ಭವಿಷ್ಯದ ಬಗ್ಗೆ ಅನಿಶ್ಚಿತತೆ ಉಂಟಾಗಿರುವಾಗ ಬೈಡೆನ್ ಸರ್ಕಾರ ಯೂನುಸ್ ಬಗ್ಗೆ ಹಿಂದಿನ ಆಸಕ್ತಿಯನ್ನು ಉಳಿಸಿಕೊಳ್ಳುವ ಅಗತ್ಯ ಇಲ್ಲ. ಇದರರ್ಥ, ಬದಲಾದ ಸನ್ನಿವೇಶದಲ್ಲಿ ಯೂನುಸ್ ಸರ್ಕಾರವನ್ನು ಸದೃಢಗಳಿಸಲು ಹಣ ಸುರಿಯುತ್ತಲೇ ಇರಬೇಕಾದ ಅಗತ್ಯವೂ ಬೈಡೆನ್ ಸರ್ಕಾರಕ್ಕೆ ಮತ್ತದರ ಹಿಂದಿರುವ ‘ಡೀಪ್ ಸ್ಟೇಟ್’ನ ಕೈಗಳಾದ ಸೊರೋಸ್, ಕ್ಲಿಂಟನ್, ಒಬಾಮ ಮತ್ತವರ ಸಹಯೋಗಿಗಳಿಗೆ ಇಲ್ಲ. ಡಿಸೆಂಬರ್ 31ರ ರ್ಯಾಲಿಗೆ ಜನರನ್ನು ಕರೆತರಲು ಹಣವಿಲ್ಲದ ಪರಿಸ್ಥಿತಿ ಯೂನುಸ್ ಮತ್ತವರ ಸಹಯೋಗಿ ಮಸೂದ್ಗೆ ಉಂಟಾಯಿತು ಮತ್ತದರ ಪರಿಣಾಮವನ್ನು ಅಂದು ನಾವು ನೋಡಿಯೂ ಆಯಿತು.
ಸಂವಿಧಾನ ಬದಲಿಸುವ ಪ್ರಣಾಳಿಕೆಯ ಹೊರಡಿಸುವಿಕೆಯನ್ನು ವಿದ್ಯಾರ್ಥಿ ನಾಯಕ ಮಸೂದ್ ಜನವರಿ 15ಕ್ಕೆ ಮುಂದೂಡಿದನ್ನೂ ನೋಡಿದೆವು. ಆದರೆ ಯೂನುಸ್ ಜನವರಿ 15ರೊಳಗೇ ಅನಾರೋಗ್ಯ ಹಾಗೂ ಚಿಕಿತ್ಸೆಯ ಕಾರಣವೊಡ್ಡಿ ಬಾಂಗ್ಲಾದೇಶದಿಂದ ಹೊರಗೆ ಓಡಿಹೋಗಲಿದ್ದಾರೆ ಎಂದು ವಿಸ್ಪೋಟಕ ಸುದ್ದಿಗಳ ರಹಸ್ಯೋತ್ಪಾಟನೆಗೆ ಹೆಸರಾದ ಬಾಂಗ್ಲಾದೇಶಿ ಪತ್ರಕರ್ತ ಸಲಾಹ್-ಉದ್-ದೀನ್ ಶೊಯೇಬ್ ಚೌಧರಿ ಹೇಳಿದ್ದಾರೆ!
ದಿನೇದಿನೇ ಉಲ್ಬಣಗೊಳ್ಳುತ್ತಿರುವ ಯೂನುಸ್ರ ಸಮಸ್ಯೆಗಳ ಬಗ್ಗೆ ಚೌಧರಿ ಆಧಾರಗಳನ್ನು ನೀಡಿದ್ದಾರೆ. ‘ಸಂವಿಧಾನ ಬದಲಿಸಿ ಇಸ್ಲಾಮಿಕ್ ಮೂಲಭೂತವಾದಿ ಆಡಳಿತ ಜಾರಿಗೆ ತನ್ನಿ’ ಎಂದು ಒತ್ತಾಯಿಸುವ ಜಮಾತ್ ಮತ್ತು ‘ಯಾವ ಕಾರಣಕ್ಕೂ ಮೂಲಭೂತವಾದಿ ಸರ್ವಾಧಿಕಾರದ ಸ್ಥಾಪನೆಗೆ ಅವಕಾಶ ನೀಡುವುದಿಲ್ಲ’ ಎಂದು ಪಟ್ಟುಹಿಡಿದಿರುವ ಬಿಎನ್ಪಿ ನಡುವೆ ಯೂನುಸ್ ಸಿಕ್ಕಿಹೊಗಿದ್ದಾರೆ ಎಂದು ಪತ್ರಕರ್ತ ಚೌಧರಿ ಬರೆದಿದ್ದಾರೆ. ಹೌದು, ಅವರ ಮಾತು ಸರಿ. ಜಮಾತ್ ಮತ್ತು ಬಿಎನ್ಪಿಗಳಲ್ಲಿ ಒಂದರ ಮಾತಿಗೆ ಯೂನುಸ್ ಕಟ್ಟುಬಿದ್ದಲ್ಲಿ ಇನ್ನೊಂದರ ವೈರ ನಿಶ್ಚಿತ.
ಈ ನಡುವೆ ಯೂನುಸ್ ದೊಡ್ಡ ಭ್ರಷ್ಟಾಚಾರಿ, ಅವರ ಜತೆಗಿರುವ ವಿದ್ಯಾರ್ಥಿ ನಾಯಕರೂ ಅದೇ ಚಾಳಿಯವರು ಎಂಬ ವಿವರಗಳು ಹೊರಬರುತ್ತಿವೆ. ತಾವು ಪಾವತಿಸಬೇಕಾಗಿದ್ದ ಭಾರಿ ಮೊತ್ತದ ಆದಾಯ ತೆರಿಗೆಯನ್ನು ಯೂನುಸ್ ರದ್ದುಮಾಡಿಸಿಕೊಂಡಿದ್ದಾರೆ. ಆ ಮೊತ್ತವೆಷ್ಟು ಗೊತ್ತೇ? 666 ಕೋಟಿ ಟಕಾಗಳು! ಜತೆಗೆ ತಮ್ಮ ಗ್ರಾಮೀಣ ಬ್ಯಾಂಕ್ಗೆ ಐದು ವರ್ಷಗಳ ತೆರಿಗೆ ವಿನಾಯಿತಿಯನ್ನೂ ಪಡೆದುಕೊಂಡಿದ್ದಾರೆ! ಈ ನಡುವೆ ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ನಲ್ಲಿ ನಡೆದ ರ್ಯಾಲಿಯೊಂದನ್ನು ವರ್ಚ್ಯುವಲ್ ಮಾಧ್ಯಮದಲ್ಲಿ ಉದ್ದೇಶಿಸಿ ಮಾತಾಡಿದ ಶೇಖ್ ಹಸೀನಾ, ಢಾಕಾದ ಐಷಾರಾಮಿ ಬಡಾವಣೆ ಗುಲ್ಷನ್ ಬಾಗ್ನಲ್ಲಿ ಯೂನುಸ್ ಒಂಬತ್ತು ಕೋಟಿ ಟಕಾಗಳಿಗೆ ನಿವಾಸವೊಂದನ್ನು ಖರೀದಿಸಿರುವುದಾಗಿ ಹೇಳಿ, ಆ ಹಣ ಎಲ್ಲಿಂದ ಬಂತೆಂದು ಪ್ರಶ್ನಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಯೂನುಸ್ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ನಲ್ಲಿ ಒಂದುಸಾವಿರ ಕೋಟಿ ಟಕಾಗಳ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂಬ ವಿವರಗಳೂ ಬಂದಿವೆ. ಅದೆಲ್ಲವೂ ಸರ್ಕಾರಿ ಹಣ ಎಂಬ ಆಪಾದನೆ ದೊಡ್ಡದಾಗಿ ಎದ್ದಿದೆ. ಅವರ ಜತೆಗೆ, ವಿದ್ಯಾರ್ಥಿ ನಾಯಕರೂ ದಿಢೀರ್ ಶ್ರೀಮಂತರಾಗಿಬಿಟ್ಟಿದ್ದಾರೆ. ಯಾವುದೇ ಉದ್ಯೋಗದಲ್ಲಿಲ್ಲದ ಅವರುಗಳು ಏಕಾಏಕಿ ಕೋಟಿಗಟ್ಟಲೆ ಟಕಾ ಬೆಲೆಯ ಐಷಾರಾಮಿ ಕಾರುಗಳಲ್ಲಿ ತಿರುಗಾಡತೊಡಗಿದ್ದಾರೆ.
ಸರಿ, 84ರ ಯೂನುಸ್ ಮತ್ತು ಮೂವತ್ತನ್ನೂ ದಾಟದ ಅವರ ಸಹಯೋಗಿಗಳಿಗೆ ಇಷ್ಟು ಹಣ ಎಲ್ಲಿಂದ ಬಂತು? ಒಂದು ವರದಿಯ ಪ್ರಕಾರ ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ಯೂನುಸ್ ಸರ್ಕಾರ ಇಪ್ಪತ್ತೆರಡು ಸಾವಿರದ ಐನೂರು ಕೋಟಿ ಟಕಾಗಳ ಹೊಸ ನೋಟುಗಳನ್ನು ಪ್ರಿಂಟ್ ಮಾಡಿದೆ! ಇದರ ಬಹುಭಾಗ ಉಸ್ತುವಾರಿ ಸರ್ಕಾರದಲ್ಲಿ ಇರುವವರ ಕೈಗಳಿಗೇ ಸೇರಿರುವ ಸಾಧ್ಯತೆ ಇದೆ. ಇದರಿಂದಾಗಿಯೇ ಯೂನುಸ್ ವಿದೇಶಗಳಲ್ಲಿ ಒಂದುಸಾವಿರ ಕೋಟಿ ಟಕಾ ಹೂಡಿಕೆ ಮಾಡಿದ್ದಾರೆ, ಅವರ ವಿದ್ಯಾರ್ಥಿ ಸಹಯೋಗಿಗಳು ಐಷಾರಾಮಿ ಕಾರುಗಳಲ್ಲಿ ಸಂಚರಿಸುತ್ತಿದ್ದಾರೆ. ಆದರೆ ಹಣದ ಅತಿಪ್ರಸರಣದಿಂದಾಗಿ ಸಾಮಾನ್ಯ ಬೆಲೆಯೇರಿಕೆ 14%, ಆಹಾರವಸ್ತುಗಳ ಬೆಲೆಯೇರಿಕೆ 20% ದಾಟಿಹೋಗಿದೆ, ಜನಸಾಮಾನ್ಯರು ಕಷ್ಟಕ್ಕೊಳಗಾಗುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಜನಾಕ್ರೋಶ ಉಸ್ತುವಾರಿ ಸರ್ಕಾರದತ್ತಲೇ ತಿರುಗುತ್ತಿದೆ. ತಥಾಕಥಿತ ವಿದ್ಯಾರ್ಥಿ ನಾಯಕರನ್ನು ಅಟ್ಟಾಡಿಸಿಕೊಂಡು ಬಡಿಯುವ ಘಟನೆಗಳು ದಿನೇದಿನೇ ಹೆಚ್ಚುತ್ತಿವೆ. ಬಾಂಗ್ಲಾದೇಶದಲ್ಲಿ ಗುಂಪುಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ ಎಂದು ‘ಫ್ರಾನ್ಸ್ 24’ ಮತ್ತು ‘ಗಾರ್ಡಿಯನ್’ ಸೇರಿದಂತೆ ಪಶ್ಚಿಮದ ಮಾಧ್ಯಮಗಳೇ ಹೇಳತೊಡಗಿವೆ.
ಎಷ್ಟೋ ಆಡಳಿತಗಾರರು ಜನರನ್ನು ಕಷ್ಟಕ್ಕೆ ದೂಡಿ ತಾವು ನೆಮ್ಮದಿಯಾಗಿ ದಶಕಗಳವರೆಗೆ ಅಧಿಕಾರದಲ್ಲಿರುವುದಕ್ಕೆ ಉದಾಹರಣೆಗಳಿವೆ. ಆದರೆ ಅದಕ್ಕಾಗಿ ಅವರಿಗೆ ಹೊರಗಿನ ದೊಡ್ಡ ಶಕ್ತಿಯೊಂದರ ಅಭಯಹಸ್ತವಿರಬೇಕು ಅಥವಾ ಸೇನೆ ಬೆನ್ನಿಗೆ ನಿಂತಿರಬೇಕು. ಎರಡೂ ಇದ್ದರೆ ಕೂದಲೂ ಕೊಂಕದಂತೆ ನಿರಾತಂಕವಾಗಿರಬಹುದು. ಮೊನ್ನೆಮೊನ್ನೆಯವರೆಗೆ ಯೂನುಸ್ಗೆ ಎರಡೂ ಇದ್ದವು. ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳಿಗೆ ಮೊದಲು ಯೂನುಸ್ಗೆ ಅಂತಹ ಅಭಯಹಸ್ತದ ರಕ್ಷಣೆ ಇತ್ತು ಮತ್ತು ದೇಶದೊಳಗೆ ಸೇನೆ ಪೂರ್ಣವಾಗಿ ಅವರ ಪರವಾಗಿತ್ತು. ಡೊನಾಲ್ಡ್ ಟ್ರಂಪ್ ಆಯ್ಕೆಯಾಗುತ್ತಿದ್ದಂತೇ ಯೂನುಸ್ಗೆ ಅಭಯಸ್ತದ ಬದಲು ಬಡಿಗೆ ಕಾಣತೊಡಗಿತು. ಅಭಯಹಸ್ತಕ್ಕಾಗಿ ಟ್ರಂಪ್ರ ಬದಲು ಪಾಕಿಸ್ತಾನವನ್ನು ಆಶ್ರಯಿಸಹೋಗಿ ಅತಿ ಬುದ್ಧಿವಂತಿಕೆ ಪ್ರದರ್ಶಿಸಿದ ಯೂನುಸ್ ಒಟ್ಟಿಗೇ ಟ್ರಂಪ್ ಮತ್ತು ತಮ್ಮ ಸೇನಾ ದಂಡನಾಯಕ ಜ. ವಕಾರ್-ಉಝå್-ಝುಮಾನ್ರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಅವರಿಗೆ ದೇಶ ತೊರೆಯದೆ ಗತ್ಯಂತರವಿಲ್ಲ ಎನ್ನುವ ಸ್ಥಿತಿ ನಿರ್ವಣವಾಗಿದೆ. ಆದರೆ ಅದೂ ಸುಲಭವಲ್ಲ ಎನ್ನುವುದು ಗಂಭೀರ ವಿಷಯ.
2024ರ ಆಗಸ್ಟ್ 5ರಂದು ಶೇಖ್ ಹಸೀನಾ ಹತ್ಯೆಯ ಸಂಚು ತಯಾರಾಗಿತ್ತು. ಆದರೆ ಅದಕ್ಕೆ ಅವಕಾಶ ನೀಡದೆ ಅವರನ್ನು ಸುರಕ್ಷಿತವಾಗಿ ಗಡಿ ದಾಟಿಸಿ ನಂತರವೇ ಸಂಚುಗಾರರು ಮತ್ತು ಅವರಿಂದ ಉದ್ರಿಕ್ತಗೊಳಿಸಲ್ಪಟ್ಟಿದ್ದ ಜನಸ್ತೋಮಕ್ಕೆ ಪ್ರಧಾನಮಂತ್ರಿಗಳ ನಿವಾಸವನ್ನು ಸಮೀಪಿಸಲು ಅವಕಾಶ ನೀಡಿದ್ದು ಜ. ವಕಾರ್-ಉಝå್-ಝುಮಾನ್. ಅವರು ಹಾಗೆ ಮಾಡದೇ ಹೋಗಿದ್ದರೆ ತನ್ನ ತಂದೆಯ ಹಾಗೇ ಹಸೀನಾ ಸಹ ಹತ್ಯೆಗೊಳಗಾಗುವುದು ನಿಶ್ಚಿತವಾಗಿತ್ತು. ಜ. ಝುಮಾನ್ರನ್ನು ಕಳೆದ ಜೂನ್ನಲ್ಲಿ ಸೇನಾ ದಂಡನಾಯಕರನ್ನಾಗಿ ನೇಮಿಸಿದ್ದು ಶೇಖ್ ಹಸೀನಾ. ಇವರಿಬ್ಬರ ನಡುವೆ ಹತ್ತಿರದ ಸಂಬಂಧವಿದೆ. ಜ. ಝುಮಾನ್ ಪ್ರಧಾನಿ ಹಸೀನಾರ ಚಿಕ್ಕಪ್ಪನ ಮಗಳ ಗಂಡ ಅಂದರೆ ಭಾವ. ಹಸೀನಾರನ್ನು ಜೀವಸಹಿತ ಹೊರಹೋಗಲು ಝುಮಾನ್ ಅನುವು ಮಾಡಿಕೊಟ್ಟಿದ್ದಕ್ಕೆ ಇದು ಮುಖ್ಯ ಕಾರಣ. ಆದರೆ ಯೂನುಸ್ ವಿಷಯದಲ್ಲಿ ಝುಮಾನ್ ಕಾಳಜಿ ತೋರುವಂತೆ ಕಾಣುತ್ತಿಲ್ಲ. ಅದರ ಸೂಚನೆಗಳನ್ನವರು ಡಿಸೆಂಬರ್ 29ರ ನಂತರ ಮತ್ತೆಮತ್ತೆ ನೀಡುತ್ತಿದ್ದಾರೆ. ಇದು ಯೂನುಸ್ರ ಭವಿಷ್ಯವನ್ನು ಮಂಕಾಗಿಸಿದೆ.
ಝುಮಾನ್ರ ವಿಶ್ವಾಸವನ್ನು ಯೂನುಸ್ ಕಳೆದುಕೊಂಡದ್ದು ಹೇಗೆ? ಮೊದಲೇ ವ್ಯಗ್ರರಾಗಿದ್ದ ಟ್ರಂಪ್ರ ಪಿತ್ತವನ್ನು ಯೂನುಸ್ ಇನ್ನಷ್ಟು ಕೆರಳಿಸಿದ್ದು ಹೇಗೆ? ಹೀಗೆ ಎರಡೂ ಆಧಾರಸ್ತಂಭಗಳನ್ನು ಕಳೆದುಕೊಂಡು ಈಗ ಅನಿಶ್ಚಿತ ಭವಿಷ್ಯಕ್ಕೆದುರು ನಿಂತದ್ದು ಹೇಗೆ? ಇದನ್ನು ಮುಂದಿನವಾರ ವಿಶ್ಲೇಷಿಸೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)