ಅಂಕಣ

ಪರೀಕ್ಷೆ ಎಂಬ ಸಂಭ್ರಮ

ಮಾರ್ಚ್-ಎಪ್ರಿಲ್ ಬಂತೆಂದರೆ ಶೈಕ್ಷಣಿಕ ವರ್ಷದ ಕೊನೆಯ ಹಂತಕ್ಕೆ ತಲುಪಿದಂತೆ. ಇಡೀ ವರ್ಷದಲ್ಲಿ ತರಗತಿ ಕೊಠಡಿಯಲ್ಲಿ ಹಾಗೂ ಸ್ವಕಲಿಕೆಯಲ್ಲಿ ಕಲಿತ ವಿಚಾರಗಳನ್ನು ಪರೀಕ್ಷೆ ಎಂಬ ಚೌಕಟ್ಟಿನಲ್ಲಿ ಅನಾವರಣಗೊಳಿಸುವ ದಿನಗಳಿವು. ವಿದ್ಯಾರ್ಥಿಗಳ ಜ್ಞಾನ, ಕಲಿಕೆಯ ಗ್ರಹಿಕೆಯನ್ನು ಒಂದು ನಿರ್ದಿಷ್ಟ ಪರಿಧಿಯಲ್ಲಿ ಅಳೆಯಲು ಪರೀಕ್ಷೆ ಎಂಬ ವ್ಯವಸ್ಥೆ ರೂಪಿತವಾಗಿದೆ. ಶಿಕ್ಷಕರ ಬೋಧನೆಯ ಫಲಪ್ರದತೆ,ವಿದ್ಯಾರ್ಥಿಗಳ ಕಲಿಕೆಯ ಸಾಧನೆ ಎರಡಕ್ಕೂ ಪರೀಕ್ಷೆ ಎಂಬುದೊಂದು ಮಾಪನ ಇದ್ದಂತೆ. ಮಕ್ಕಳು, ಪಾಲಕರು, ಶಿಕ್ಷಕರು ಪರೀಕ್ಷೆಗೆ ಹೇಗೆ ಸಿದ್ಧರಾಗಬಹುದು ಎಂದು ಕೆಲ ಸಲಹೆ ನೀಡಲಾಗಿದೆ.

| ಭಾರತಿ ಎ. ಕೊಪ್ಪ

ಒಂದು ರಾಕೆಟ್ ಅಂತರಿಕ್ಷದಲ್ಲಿ ನುಗ್ಗಿ ಕಕ್ಷೆ ಸೇರಬೇಕಾದರೆ ಅದರಲ್ಲಿ ಸಾಕಾಗುವಷ್ಟು ಇಂಧನ, ಸಮರ್ಪಕವಾದ ಯಂತ್ರಗಳ ಜೋಡಣೆ ಇರಬೇಕಾಗುತ್ತದೆ. ಎಲ್ಲಕ್ಕೂ ಮಿಗಿಲಾಗಿ ನಿರ್ದಿಷ್ಟ ಸಮಯದಲ್ಲಿ ಉಡಾವಣೆ ಮಾಡಬೇಕು. ಅಂದರೆ ಸಮಯಪಾಲನೆ ಬಹಳ ಮುಖ್ಯ. ಅದೇ ರೀತಿ ಅಧ್ಯಯನದ ವಿಷಯಕ್ಕೆ ಬಂದರೂ ಸಮಯಪಾಲನೆಯತ್ತ ಗಮನ ಹರಿಸಬೇಕಾಗುತ್ತದೆ. ಓದಬೇಕಾದ ವಿಷಯಗಳ ವೇಳಾಪಟ್ಟಿ ಸಿದ್ಧಪಡಿಸಿಕೊಂಡು, ನಿರ್ದಿಷ್ಟವಾದ ಸಮಯದಲ್ಲಿ ಪರಿಣಾಮಕಾರಿಯಾಗಿ ಓದುವುದು ಅಗತ್ಯ. ವೇಳಾಪಟ್ಟಿಯು ಪರೀಕ್ಷಾ ಸಿದ್ಧತೆಯ ಬುನಾದಿ ಇದ್ದಂತೆ. ಓದಿದ ವಿಷಯಗಳನ್ನು ಪರೀಕ್ಷಾ ಸಮಯದಲ್ಲಿ ನೆನಪಿಗೆ ತರುವುದೇ ಜ್ಞಾಪಕ ಶಕ್ತಿ. ಹ್ಯಾರಿ ಲಾರೆನ್ ಹೇಳುವಂತೆ ‘ಜ್ಞಾಪಕ ಶಕ್ತಿಯನ್ನು ಎಷ್ಟು ಉಪಯೋಗಿಸಿಕೊಂಡರೆ ಅಷ್ಟು ಲಾಭವಿರುತ್ತದೆ. ಅಶ್ರದ್ಧೆ ತೋರಿಸಿದರೆ ಅಷ್ಟೇ ಹಾನಿಯಾಗುವ ಅಪಾಯವಿದೆ.’ ಹಾಗಾಗಿ ಶ್ರದ್ಧೆ, ಪುನರ್ಮನನದ ಮೂಲಕ ಓದಿದ್ದನ್ನು ಜ್ಞಾಪಿಸಿಕೊಂಡು, ತರ್ಕಬದ್ಧವಾಗಿ ಯೋಚಿಸಿ ಪರೀಕ್ಷೆ ಎದುರಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ.

ಸ್ವಸಾಮರ್ಥ್ಯ ಬೆಳೆಸಿಕೊಳ್ಳಿ: ಕೇವಲ ಬಾಯಿಪಾಠದ ಓದು ಯಶಸ್ಸಿಗೆ ಸಾಧನವಾಗುವುದಿಲ್ಲ. ಕೆಲವು ಪ್ರಶ್ನೆಗಳಿಗೆ ಸೃಜನಾತ್ಮಕ ವಾಗಿ ಚಿಂತಿಸಿ ಉತ್ತರ ಬರೆಯ ಬೇಕಾಗುತ್ತದೆ. ಓದಿನ ಸಮಯದಲ್ಲಿ ಪ್ರಮುಖಾಂಶಗಳನ್ನು ಬರೆದಿಟ್ಟುಕೊಂಡು, ನಿಮ್ಮದೇ ಯೋಚನೆಯಲ್ಲಿ ಕ್ರೋಡೀಕರಿಸಿ. ಆಗ ಸ್ವಸಾಮರ್ಥ್ಯದಿಂದ ಪ್ರಶ್ನೆಗಳಿಗೆ ಉತ್ತರಿಸಲು ಸಹಕಾರಿಯಾಗುತ್ತದೆ.

ಪರೀಕ್ಷಾ ಭಯ ಬೇಡ: ಪರೀಕ್ಷೆಗಳು ಸಮೀಪಿಸುತ್ತಿದ್ದಂತೆ ಅನಾವಶ್ಯಕ ಭಯ ಬೇಡ. ಓದಿದ್ದು ಮರೆತರೆ? ಅಂಕ ಕಡಿಮೆ ಬಂದರೆ? ಏನು ಮಾಡಲಿ ಎಂಬ ನಕಾರಾತ್ಮಕ ಚಿಂತನೆಗಳನ್ನು ತಲೆಯಿಂದ ತೆಗೆದುಹಾಕಿ. ನಾನು ಉತ್ತಮ ಸಿದ್ಧತೆ ಮಾಡಿಕೊಳ್ಳುತ್ತೇನೆ. ಉತ್ತಮ ಪ್ರಯತ್ನದಿಂದ ಪರೀಕ್ಷೆಯಲ್ಲಿ ಯಶಸ್ಸು ಗಳಿಸುತ್ತೇನೆ ಎಂಬ ಆತ್ಮವಿಶ್ವಾಸ ಇರಲಿ. ಆ ನಿಟ್ಟಿನಲ್ಲಿ ತಯಾರಿಯೂ ಇರಲಿ. ಒಂದೊಮ್ಮೆ ಅಂಕಗಳು ನಿರೀಕ್ಷೆಯಷ್ಟು ಬಾರದಿದ್ದರೆ ಮುಂದೇನು? ಎಂಬ ಭಯ ಬೇಡ. ಅಂಕಗಳು ಮುಂದಿನ ಹಂತಕ್ಕೆ ಮಾನದಂಡವೇ ಹೊರತು, ಅಧಿಕ ಅಂಕವೊಂದೇ ಸಾಧನೆಯ ಸೂತ್ರವಲ್ಲ. ಬದುಕಿನಲ್ಲಿ ಯಶಸ್ಸು ಪಡೆಯಲು ಹಲವು ಸನ್ಮಾರ್ಗಗಳಿವೆ. ಆದರೆ ಆ ದಿಕ್ಕಿನಲ್ಲಿ ಧನಾತ್ಮಕ ಯೋಚನೆ ಇರಬೇಕಾದುದು ಬಹಳ ಮುಖ್ಯ.

ಏಕಾಗ್ರತೆಯ ಓದು: ಆಸಕ್ತಿಯೇ ಏಕಾಗ್ರತೆಯ ಕೀಲಿಕೈ. ಎಷ್ಟು ಗಂಟೆ ಓದುತ್ತೇವೆಂಬುದಕ್ಕಿಂತ, ಎಷ್ಟು ಏಕಾಗ್ರತೆಯಿಂದ ಓದುತ್ತೇವೆ ಎಂಬುದು ಮುಖ್ಯ. ಓದು ಒಂದು ಜವಾಬ್ದಾರಿ ಎಂಬ ಭಾವನೆ ಇಟ್ಟುಕೊಳ್ಳದೆ ಪರೀಕ್ಷೆ ಮತ್ತು ಓದು ವಿದ್ಯಾರ್ಥಿ ಜೀವನದ ಒಂದು ಭಾಗ ಎಂದು ತಿಳಿದು ವಿಷಯದ ಮೇಲೆ ಗಮನ ಕೇಂದ್ರೀಕರಿಸಿ ಓದಬೇಕು. ಪರೀಕ್ಷಾ ಸಮಯದಲ್ಲಿ ಟೆನ್ಷನ್​ನಿಂದ ಓದಿದರೆ ಏಕಾಗ್ರತೆ ಬಾರದು. ತಿಳಿಯಾದ ಮನಸ್ಸಿನಿಂದ ಇಷ್ಟಪಟ್ಟು ಓದಿದರೆ ಸಹಜವಾಗಿಯೇ ಏಕಾಗ್ರತೆ ಬರುತ್ತದೆ. ಏಕಾಗ್ರತೆಗೆ ಧ್ಯಾನ, ಕೆಲವು ಯೋಗಾಸನಗಳು ಸಹಕಾರಿಯಾಗಬಲ್ಲದು.

ಮೊಬೈಲ್, ಟಿವಿಯಿಂದ ದೂರವಿರಿ: ಮಕ್ಕಳು ಮಾತ್ರ ಮೊಬೈಲ್, ಟಿ.ವಿಗಳಿಂದ ದೂರವಿದ್ದರೆ ಸಾಲದು. ಅವರ ಓದಿನ ಸಮಯದಲ್ಲಿ ಪಾಲಕರು ಕೂಡ ಮಕ್ಕಳ ಗಮನ ವಿಚಲಿತಗೊಳಿಸುವ ವಸ್ತುಗಳಿಂದ ದೂರವಿರಬೇಕು. ಮಕ್ಕಳನ್ನು ಓದಲು ಕೂರಿಸಿ, ಪಾಲಕರು ಬೇರೆ ಮನರಂಜನಾ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಾಗ ಓದು ಎಂಬುದು ಅವರಿಗೆ ಶಿಕ್ಷೆಯಾಗಿ ಭಾಸವಾಗುತ್ತದೆ.

ಪಾಲಕರ ಜವಾಬ್ದಾರಿ: ಮಕ್ಕಳು ಉನ್ನತ ಸ್ಥಾನಮಾನಕ್ಕೇರಬೇಕೆಂಬ ತುಡಿತ ಪಾಲಕರಿಗೆ ಇರುವುದು ಸಹಜ. ಆದರೆ ಅಂಕ ಗಳಿಕೆಯ ಅತಿಯಾದ ಒತ್ತಡವನ್ನು ಮಕ್ಕಳ ಮೇಲೆ ಹೇರಬಾರದು. ಪರೀಕ್ಷಾ ದಿನಗಳು ಸಮೀಪಿಸುತ್ತಿರುವಾಗ ಮಕ್ಕಳ ಆಹಾರ, ಆರೋಗ್ಯ, ನಿದ್ರೆ ಇವುಗಳ ಬಗೆಗೆ ಹೆಚ್ಚಿನ ಕಾಳಜಿ ತೋರಿಸಬೇಕು. ಮಕ್ಕಳು ಮನಸ್ಸಿನ ಯಾವುದೇ ಗೊಂದಲಗಳನ್ನು ವ್ಯಕ್ತಪಡಿಸಿದಾಗ ಸಮಾಧಾನವಾಗಿ, ಆಪ್ತವಾಗಿ ಅವುಗಳನ್ನು ಪರಿಹರಿಸಬೇಕು. ಬೇರೆ ಮಕ್ಕಳೊಂದಿಗೆ ಹೋಲಿಕೆ ಮಾಡಬೇಡಿ. ಮನೆಯಲ್ಲಿ ಓದಿಗೆ ಪೂರಕ ವಾತಾವರಣ ಕಲ್ಪಿಸಿ ಕೊಡುವ ಜವಾಬ್ದಾರಿ ಪಾಲಕರದಾಗಿದೆ.

ಗುಂಪು ಚರ್ಚೆ: ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಪರೀಕ್ಷಾ ಸಮಯದಲ್ಲಿ ಗುಂಪುಚರ್ಚೆ ಅಷ್ಟೇನೂ ಪರಿಣಾಮಕಾರಿ ಎನಿಸದು. ಪ್ರೌಢಶಾಲಾ ಹಂತದಲ್ಲಿ 3-4 ವಿದ್ಯಾರ್ಥಿಗಳ ಚಿಕ್ಕ ಗುಂಪು ಮಾಡಿಕೊಂಡು ಗಣಿತದ ಸಮಸ್ಯೆ ಗಳನ್ನು ಬಿಡಿಸುವುದು, ಓದಿದ ವಿಷಯಗಳ ಸಾರಾಂಶ ಹೇಳು ವುದು, ಈ ರೀತಿಯಲ್ಲಿ ಸಿದ್ಧತೆ ಮಾಡಿ ಕೊಳ್ಳುವುದರಿಂದ ಓದು ಪರಿಪಕ್ವ ವಾಗುತ್ತದೆ.

ಶಿಕ್ಷಕರ ಜವಾಬ್ದಾರಿ:ಪರೀಕ್ಷಾ ಪೂರಕ ಪೂರ್ವತಯಾರಿ ಪ್ರತಿಯೊಬ್ಬ ವಿದ್ಯಾರ್ಥಿಗೂ ವಿಭಿನ್ನವಾಗಿ ಬೇಕಾಗಿರುತ್ತದೆ. ಕಲಿಕೆಗೆ ಸಂಬಂಧಿಸಿದ ಯಾವುದೇ ಕ್ಲಿಷ್ಟ ಎನಿಸಿದ, ಗೊಂದಲ ಮೂಡಿದ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದಾಗ ಆ ಗೊಂದಲವನ್ನು ತಕ್ಷಣ ಪರಿಹರಿಸುವುದು ಸೂಕ್ತ. ಮಾದರಿ ಪ್ರಶ್ನೆ ಪತ್ರಿಕೆಗಳು, ಪುನರಾ ವರ್ತನೆ ಇವೆಲ್ಲವನ್ನೂ ಪ್ರತಿ ವಿದ್ಯಾರ್ಥಿಗೂ ಸಮರ್ಪಕವಾಗಿ ಅರ್ಥವಾಗು ವಂತೆ ತಿಳಿಸಿ ಹೇಳಬೇಕಾಗುತ್ತದೆ. ಪರೀಕ್ಷೆಯ ಅಂಕ ಗಳಿಕೆಯ ಓಟದಲ್ಲಿ ಅಧಿಕ ಬುದ್ಧಿವಂತ ಹಾಗೂ ಕಡಿಮೆ ಬುದ್ಧಿವಂತ ಎಂಬ ತುಲನೆ ಸಲ್ಲದು.

ವಿದ್ಯಾರ್ಥಿ ಜೀವನದ ಸಮಯ ಅತ್ಯಮೂಲ್ಯ. ಅದನ್ನು ಅಪವ್ಯಯ ಮಾಡಬಾರದು. ಸ್ವಲ್ಪ ಸಮಯ ಕ್ರೀಡೆಗೆ ಮೀಸಲಿಟ್ಟು ಉಳಿದ ಸಮಯವನ್ನು ಸಂಪೂರ್ಣ ಓದಿಗೆ ಮೀಸಲಿಡಿ. ಗುರಿಸಾಧನೆಗೆ ಮನೆಯ ಪರಿಸರ ನಿರ್ಣಾಯಕ. ಪುಟ್ಟ ಮನೆಯೇ ಆಗಿರಲಿ, ಅದರಲ್ಲಿ ಶಿಕ್ಷಣಕ್ಕೆ ಪೂರಕವಾದ ಪುಟ್ಟ ಗ್ರಂಥಾಲಯ ಇರಲಿ. ಅದರಲ್ಲಿ ಕನಿಷ್ಠ 20 ಪುಸ್ತಕಗಳಿರಲಿ. ಆಧ್ಯಾತ್ಮಿಕ ಪರಿಸರವೂ ಇರಲಿ, ದೈವಭಕ್ತಿ ಕೂಡ ಬೇಕು. ಮಕ್ಕಳ ಶ್ರೇಯಸ್ಸು ಬಯಸುವ ಪಾಲಕರು ಮಕ್ಕಳಿಗಾಗಿ ಮನೆಯಲ್ಲಿ ಪುಟ್ಟ ಗ್ರಂಥಾಲಯ ಮಾಡಿ, ನೀವು ಓದಿ ಕಲಿತದ್ದನ್ನು ಬಿಡುವಿನ ವೇಳೆಯಲ್ಲಿ ಮಕ್ಕಳಿಗೆ ತಿಳಿಸಿ. ಸಾಧಾರಣ ವಿದ್ಯಾರ್ಥಿಯನ್ನು ಪ್ರತಿಭಾವಂತರ ಸಾಲಿನಲ್ಲಿ ನಿಲ್ಲುವಂತೆ ಕಲಿಸುವವನೇ ಮಾದರಿ ಶಿಕ್ಷಕ. ಪ್ರತಿಭಾವಂತರಿಗೆ ಕಲಿಸುವುದರಲ್ಲಿ ಹೆಗ್ಗಳಿಕೆ ಇಲ್ಲ. ಸಾಧಾರಣ ವಿದ್ಯಾರ್ಥಿಯನ್ನು ಪ್ರತಿಭಾವಂತನನ್ನಾಗಿ ಮಾಡುವುದೇ ಶಿಕ್ಷಕರ ಗುರಿಯಾಗಬೇಕು. | ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಮಾಜಿ ರಾಷ್ಟ್ರಪತಿ (ಕಲಾಂ ಅವರು ತಮ್ಮ ಬಹುತೇಕ ಭಾಷಣಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರೇರಣೆ ತುಂಬುತ್ತಿದ್ದರು)

ಕೆಲ ಸಲಹೆಗಳು

  • ಓದುವ ಕೋಣೆಯಲ್ಲಿ ಗಾಳಿ, ಬೆಳಕು, ಪ್ರಶಾಂತತೆ ಇರಲಿ
  • ಆಸನ ವ್ಯವಸ್ಥೆ, ಓದಲು ಕುಳಿತುಕೊಳ್ಳುವ ಭಂಗಿ ಸರಿಯಾಗಿರಲಿ. ಮಲಗಿ ಓದುವುದು, ಆಲಸ್ಯದ ಭಂಗಿ ಸೂಕ್ತವಲ್ಲ.
  • ಇಷ್ಟಪಟ್ಟು ಓದಿ, ಕಷ್ಟಪಟ್ಟು ಓದಬೇಡಿ.
  • ಪ್ರತಿ ಗಂಟೆಗೊಮ್ಮೆ ಓದಿನ ನಡುವೆ ಎದ್ದು 5-10 ನಿಮಿಷ ಮನೆಯಲ್ಲೇ ಓಡಾಡಿ.
  • ಆಹಾರ, ಆರೋಗ್ಯ ಮತ್ತು ನಿದ್ರೆಯ ಕಡೆಗಣನೆ ಬೇಡ.
  • ಕಠಿಣ ಎನಿಸುವ ವಿಷಯ ಗಳನ್ನು ಮೊದಲು ಓದಿ,
  • ಸರಳ ಎನಿಸುವ ವಿಷಯ ಗಳನ್ನು ನಂತರ ಓದಿ.
  • ಓದಿನ ಪ್ರಮುಖಾಂಶಗಳನ್ನು ಬರೆದಿಟ್ಟುಕೊಂಡು ಪುನರ್ಮನನ ಮಾಡಿ.
  • ಗಣಿತದ ಸಮಸ್ಯೆಗಳನ್ನು ಬರೆದು ಅಭ್ಯಾಸ ಮಾಡಿ.
  • ಗುಂಪು ಚರ್ಚೆಗೆ ಕುಳಿತರೆ ಅದು ಓದಿಗೆ ಮಾತ್ರ ಮೀಸಲಾಗಿರಲಿ, ಅನವಶ್ಯಕ ಹರಟೆ ಬೇಡ.
  • ಒತ್ತಡರಹಿತವಾಗಿ ಪರೀಕ್ಷೆಗೆ ತೆರಳಿ, ಆತ್ಮವಿಶ್ವಾಸದಿಂದ ಎದುರಿಸಿ.
  • ಪರೀಕ್ಷೆ ಸಂಭ್ರಮಿಸಿ, ಹೊರೆಯಾಗಿ ಪರಿಗಣಿಸದಿರಿ.

ಪರೀಕ್ಷೆ ಬಗ್ಗೆ ಪ್ರಧಾನಿ ಮೋದಿ ಮಾತು

  • ನಿಮ್ಮ ಅಂಕಗಳು ನಿಮ್ಮ ಭವಿಷ್ಯವನ್ನು ನಿರ್ಧರಿಸುವುದಿಲ್ಲ. ಪರೀಕ್ಷೆಯು ಫಲಪ್ರದವಾದ ನಿಮ್ಮ ಬದುಕಿನ ಆರಂಭ ಮಾತ್ರ. ಪರೀಕ್ಷೆಗಳು ಬದುಕಿನ ಮೆಟ್ಟಿಲುಗಳಷ್ಟೇ ಹೊರತು ಗುರಿಯಲ್ಲ ಎಂಬುದನ್ನು ಮರೆಯಬೇಡಿ.
  • ಪರೀಕ್ಷೆಗಳು ಬದುಕು ರೂಪಿಸುವುದಕ್ಕೆ ಇರುವ ಅವಕಾಶ. ಅದನ್ನು ಹೇಗಿದೆಯೋ ಹಾಗೆಯೇ ಸ್ವೀಕರಿಸುವುದನ್ನು ನಾವು ರೂಢಿಸಿಕೊಳ್ಳಬೇಕು. ನಿಮಗೆ ಎರಡು ಗಂಟೆ ಕಾಲ ಅವಕಾಶ ಸಿಕ್ಕರೆ ಆ ಸಮಯದಲ್ಲಿ ಪ್ರತಿ ವಿಷಯವನ್ನು ಒಂದೇ ರೀತಿ ಓದಿ. ಅಧ್ಯಯನದ ವಿಚಾರವಾದರೆ ಮೊದಲು ಕಷ್ಟ ಇರುವುದನ್ನು ಅಧ್ಯಯನ ಮಾಡಿ. ಮನಸ್ಸು ತಿಳಿಯಾಗಿದ್ದರೆ ಕಷ್ಟದ ವಿಷಯವನ್ನೇ ಮೊದಲು ಆಯ್ಕೆ ಮಾಡಿ. ನಂತರ ಸರಳ, ಸುಲಭದ ವಿಷಯಗಳನ್ನು ಅಭ್ಯಾಸ ಮಾಡಿ.
  • ನಾನು ಮುಖ್ಯಮಂತ್ರಿ ಆಗಿದ್ದಾಗ ಮತ್ತು ಈಗ ಪ್ರಧಾನಮಂತ್ರಿ ಆದ ಬಳಿಕವೂ ಓದುವುದನ್ನು ಮುಂದುವರಿಸಿದ್ದೇನೆ. ಅನೇಕ ವಿಚಾರಗಳನ್ನು ಕಲಿಯುವುದಿದೆ ಮತ್ತು ಅರ್ಥಮಾಡಿಕೊಳ್ಳುವುದಿದೆ. ಕಷ್ಟದ ವಿಚಾರಗಳನ್ನೇ ಮೊದಲು ಆಯ್ಕೆ ಮಾಡಿಕೊಳ್ಳುತ್ತೇನೆ. ಕಷ್ಟದ ವಿಚಾರಗಳು ಅರ್ಥವಾಗದೇ ಹೋದರೆ ಅದು ನಿಮ್ಮ ಬದುಕಿನ ಹಿನ್ನಡೆಯಲ್ಲ. ಅದಕ್ಕಾಗಿ ಕಲಿಯದೇ, ಓದದೇ ಇರಬೇಕಾಗಿಲ್ಲ. ಅಂತಹ ಮನಸ್ಥಿತಿಯಿಂದ ಹೊರಗೆ ಬನ್ನಿ.
  • ಬೆಳಗಿನ ಜಾವ ಓದಿಗೆ ಪ್ರಶಸ್ತ. ಅಧ್ಯಯನಕ್ಕೆ ನಾವೊಂದು ಶಿಸ್ತನ್ನು ರೂಢಿಸಿಕೊಳ್ಳಬೇಕು. ಆತ್ಮವಿಶ್ವಾಸ ಬೆಳೆಸಿಕೊಂಡರೆ ಎಂಥ ಒತ್ತಡವನ್ನಾದರೂ ನಿಭಾಯಿಸಬಹುದು. ಇತ್ತೀಚಿನ ದಿನಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರಾಶಸ್ಱ ದೊರಕುತ್ತಿರುವುದು ಉತ್ತಮ ಬೆಳವಣಿಗೆ.

ಎಸ್ಸೆಸ್ಸೆಲ್ಸಿ ಸಹಾಯವಾಣಿ: ಪ್ರತಿ ಬಾರಿಯಂತೆ ಈ ಬಾರಿಯೂ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಸ್ಸೆಸ್ಸೆಲ್ಸಿ ಸಹಾಯವಾಣಿ ಸೌಲಭ್ಯ ಕಲ್ಪಿಸಿದೆ. ಈ ಸಹಾಯವಾಣಿಯು ಮಾ.14ರಿಂದ ರಿಂದ 27ರವರೆಗೆ ಕಾರ್ಯ ನಿರ್ವಹಿಸಲಿದೆ. ಇದೇ ವ್ಯವಸ್ಥೆಯು ಮಾ.28ರಿಂದ ಏ.11 ರವರೆಗೆ ನಿಯಂತ್ರಣ ಕೊಠಡಿಯಾಗಿ ಕಾರ್ಯ ನಿರ್ವಹಿಸಲಿದೆ. ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಕರೆ ಮಾಡಬಹುದು. ಸಹಾಯವಾಣಿ ಸಂಖ್ಯೆ: 080-23310075/76