ಅಂಕಣ

ಮೇವಿನ ಸಮಸ್ಯೆ ನಿವಾರಿಸಿ

ರಮೇಶ್​ ಕುಮಾರ್​​ ಬಿ ಎಡಮೋಳೆ

ಮಳೆಗಾಲ ಬಂತೆಂದರೆ ಕುರಿಗಾಹಿಗಳು ಸಂಕಷ್ಟಕ್ಕೀಡಾಗುತ್ತಾರೆ. ಮಳೆಗಾಲದಲ್ಲಿ ದನಗಳನ್ನು ಮೇಯಿಸುವುದು ಸಮಸ್ಯೆಯೇ ಆಗಿದೆ. ಈ ಕಾರಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಪಶುಸಂಪತ್ತು ಕ್ಷೀಣಿಸುತ್ತಿದೆ. 60-70 ವರ್ಷಗಳ ಹಿಂದೆ ಗ್ರಾಮೀಣ ಪ್ರದೇಶದ ಕೃಷಿಕರ ಮನೆಗಳಲ್ಲಿ ಹತ್ತಿಪ್ಪತ್ತು ಎತ್ತು, ಎಮ್ಮೆಗಳಿರುತ್ತಿದ್ದವು. ಕುರಿ ಆಡುಗಳೂ ಇರುತ್ತಿದ್ದವು. ಆಗ ಮೇವಿನ ಕೊರತೆ ಇರಲಿಲ್ಲ. ಸಾರ್ವಜನಿಕ ಗೋಮಾಳಗಳಿದ್ದವು. ಬೆಟ್ಟ ಗುಡ್ಡಗಳಿದ್ದವು. ದನ, ಕುರಿಗಳನ್ನು ಸಾಕುವುದು ಒಂದು ಜಾತಿ ಅಥವಾ ವರ್ಗಕ್ಕೆ ಸಂಬಂಧಿಸಿದ್ದಾಗಿರಲಿಲ್ಲ. ಈಗ ಹಾವೇರಿ ಜಿಲ್ಲೆಯಿಂದ ಆಂಧ್ರಸೀಮೆಗೆ ಹೋಗಿ ಕೃಷಿಕಾರ್ಯಕ್ಕಾಗಿ ಎತ್ತುಗಳನ್ನು ಖರೀದಿಸಿಕೊಂಡು ಬರುತ್ತಾರೆ, ಕಾರಣ ಆ ನಮ್ಮ ದನದ ದೊಡ್ಡಿಗಳೆಲ್ಲ ಮಾಯವಾಗಿ ಹೋಗಿವೆ.

ಬಳ್ಳಾರಿ, ಚಿತ್ರದುರ್ಗ ಜಿಲ್ಲೆಯ ಪಶುಪಾಲಕರಿಗೆ ಸಂಡೂರು,ಹೊಸಪೇಟೆ ಪಕ್ಕದ ರಾಮಾಮಲೆ (ರಾಮನಗುಡ್ಡ) ಆಶ್ರಯ ತಾಣವಾಗಿದ್ದರೆ, ಕೊಪ್ಪಳ ತಾಲೂಕಿನ ಇರಕಲ್ಲಗಡಾದಿಂದ ಬಳ್ಳಾರಿಯವರೆಗೆ ವ್ಯಾಪಿಸಿರುವ ಏಳುಗುಡ್ಡ, ಕಲಬುರಗಿ, ರಾಯಚೂರು, ಕೊಪ್ಪಳ ಜಿಲ್ಲೆಯ ಪಶುಗಳಿಗೆ ಮೇವು ಒದಗಿಸುತ್ತಿತ್ತು. ಮಳೆಗಾಲದಲ್ಲಿ ಅಲ್ಲಿ ದನ, ಕುರಿಗಳನ್ನು ಮೇಯಿಸುತ್ತಿದ್ದ ಅವುಗಳ ಮಾಲೀಕರು, ಮುಂದೆ ಬೇಸಿಗೆಗೆ ಇರಲೆಂದು ಕರಡನ್ನು(ಹುಲ್ಲು) ಕೊಯ್ದು ಸಂಗ್ರಹಿಸಿ ಇಡುತ್ತಿದ್ದರು. ನೂರಾರು ಚಕ್ಕಡಿ ಗೊಬ್ಬರ ಸಂಗ್ರಹಿಸಿ ರೈತರಿಗೆ ಕೊಡುವ ಮೂಲಕ ರೈತರ ಹೊಲಗಳನ್ನು ಸಮೃದ್ಧಗೊಳಿಸುತ್ತಿದ್ದರು. ಆಗ ಅರಣ್ಯ ಇಲಾಖೆಯ ಕಿರಿಕಿರಿ ಇಷ್ಟು ಇರಲಿಲ್ಲ. ಆದರೂ ಮರಗಿಡಗಳು ಇದಕ್ಕಿಂತ ಚೆನ್ನಾಗಿ ಬೆಳೆದಿರುತ್ತಿದ್ದವು.

ಸಾರ್ವಜನಿಕ ಗೋಮಾಳಗಳು ಒತ್ತುವರಿ ಆಗಿರುವುದರಿಂದ ಪಶುಸಂಕುಲ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ಪಶುಪಾಲಕರ ಸಂಕಷ್ಟಗಳಿಗೆ ಸ್ಪಂದಿಸಿ ಇದಕ್ಕೊಂದು ಶಾಶ್ವತ ಪರಿಹಾರ ಮಾಡಬೇಕು. ಹುಲ್ಲುಗಾವಲಿರುವ ನಿರ್ದಿಷ್ಟ ಪ್ರದೇಶದ ಅರಣ್ಯಭೂಮಿಯನ್ನು ಸಾರ್ವಜನಿಕ ಗೋಮಾಳ ಎಂದು ಘೊಷಿಸಿ ಅಲ್ಲಿ ಕುರಿಗಳನ್ನು ಮೇಯಿಸಲು ಅನುವು ಮಾಡಿ ಕೊಡಬೇಕು. ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಮರಗಳನ್ನು ಬೆಳೆಸುವಂತೆ ಹುಲ್ಲುಗಾವಲು ಪ್ರದೇಶವನ್ನು ಅಭಿವೃದ್ಧಿ ಪಡಿಸಬೇಕು.

| ವಿರೂಪಾಕ್ಷಪ್ಪ ಕೋರಗಲ್ಲ ನಿವೃತ್ತ ಪ್ರಾಧ್ಯಾಪಕರು, ಹಾವೇರಿ