ನವದೆಹಲಿ: ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದೆ.ಇಬ್ಬರು ನಾಯಕರು ಏ.29ರಂದು ಬೆಳಿಗ್ಗೆ 11 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಕೆಲವು ದಿನಗಳ ಹಿಂದೆ ರಾಜಸ್ಥಾನದಲ್ಲಿ ಹಿಂದೂಗಳ ಸಂಪತ್ತನ್ನು ಹೆಚ್ಚು ಮಕ್ಕಳಿರುವವರಿಗೆ ಹಂಚುವ ಪ್ರಣಾಳಿಕೆಯು ಕಾಂಗ್ರೆಸ್‌ನದ್ದಾಗಿದೆ ಎಂದಿದ್ದರು.
ಇದು ಮುಸ್ಲಿಂ ಸಮುದಾಯದ ವಿರುದ್ಧ ಪರೋಕ್ಷವಾಗಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ನೀಡಿರುವ ದೂರಿನ ಮೇರೆಗೆ ಚುನಾವಣಾ ಆಯೋಗ ಬಿಜೆಪಿಯಿಂದ ಪ್ರತಿಕ್ರಿಯೆ ಕೇಳಿದೆ.
ಕಾಂಗ್ರೆಸ್ಸಿಗರು ಪ್ರಧಾನಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಆರಂಭದಲ್ಲಿ ಆಯೋಗ ತಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿತ್ತು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್ಚು ಸಂಪತ್ತು ಹೊಂದಿರುವವರಿಂದ ಬಡವರಿಗೆ ಸಂಪತ್ತಿನ ಹಂಚಿಕೆ ಮಾಡುವುದಾಗಿ ಹೇಳಿದ್ದರು.
ಪ್ರಧಾನಿ ಮೋದಿ ಹಾಗೂ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂಬುದನ್ನು ಆಯೋಗ ಗಮನಿಸಿದೆ. ಪ್ರಧಾನಿ ಮೋದಿ, ರಾಹುಲ್ ಗಾಂಧಿ ವಿರುದ್ಧದ ನೀತಿ ಸಂಹಿತ ಉಲ್ಲಂಘನೆ ಆರೋಪಗಳನ್ನು ಬಿಜೆಪಿ, ಕಾಂಗ್ರೆಸ್ ಮುಖ್ಯಸ್ಥರೊಂದಿಗೆ ಚುನಾವಣಾ ಹಂಚಿಕೊಂಡಿದೆ ಮತ್ತು ಏಪ್ರಿಲ್ 29 ರೊಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ.
ಉನ್ನತ ಹುದ್ದೆಯಲ್ಲಿರುವವರ ಭಾಷಣಗಳು ಹೆಚ್ಚು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತವೆ ಎಂದು ಚುನಾವಣಾ ಆಯೋಗ ಹೇಳಿದೆ.