ಸಾಂಪ್ರದಾಯಿಕ ಸಾಹಿತ್ಯಕ್ಕಿಂತ ಹೆಚ್ಚು ಸಾಹಿತ್ಯ ಈಗ ಆನ್ಲೈನ್ ವೇದಿಕೆಗಳಲ್ಲಿ ಪ್ರಕಟವಾಗುತ್ತಿದೆ. ಜನ ಇತ್ತೀಚೆಗೆ ಅದನ್ನೂ ‘ಸಾಹಿತ್ಯ’ ಎಂದು ಪರಿಗಣಿಸಲು ಆರಂಭಿಸಿದ್ದಾರೆ. ಸಾಹಿತಿಗಳೂ ತಮ್ಮ ಕಥೆ-ಕವನಗಳನ್ನು ಆನ್ಲೈನ್ನಲ್ಲಿ ಪ್ರಕಟಿಸಲಾರಂಭಿಸಿದ್ದಾರೆ. ಈ ಎರಡೂ ಪ್ರಕಾರಗಳ ನಡುವಿನ ವ್ಯತ್ಯಾಸಗಳೇನು, ಓದುಗರು ಅವುಗಳನ್ನು ಹೇಗೆ ಸ್ವೀಕರಿಸುತ್ತಾರೆ? ಕೆಲವು ಸಾಹಿತಿಗಳ ಅನಿಸಿಕೆಗಳು ಇಲ್ಲಿವೆ.
ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ, ಕೇಳುವವರಿಹರೆಂದು ನಾ ಬಲ್ಲೆ ಅದರಿಂದ, ಹಾಡುವೆನು ಮೈದುಂಬಿ ಎಂದಿನಂತೆ, ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ... ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಈ ಮಾತಿನಂತೆ, ಬರವಣಿಗೆಯನ್ನೂ ಆತ್ಮಸಂತೋಷಕ್ಕೆ ಮಾಡುವವರಿದ್ದಾರೆ. ಮನಸ್ಸಿನ ಸುಖ, ದುಃಖ ಹೊರಹಾಕುವ ಮಾರ್ಗ ಅದು. ಜತೆಗೆ, ಸಮಾಜವನ್ನು ತಿದ್ದುವ ಸಾಧನವಾಗಿ, ಬರವಣಿಗೆಗಾಗಿಯೇ ಬದುಕಿದ ವಿರಕ್ತ ರಾಷ್ಟ್ರಕ ಡಿ.ವಿ. ಗುಂಡಪ್ಪನವರಂಥ ಬರಹಗಾರರನ್ನೂ ಕಂಡಿದ್ದೇವೆ. ಆತ್ಮಸಂತೋಷಕ್ಕೇ ಇರಲಿ, ಸಮಾಜವನ್ನು ತಿದ್ದುವ ಸಲುವಾಗಿಯೇ ಆಗಿರಲಿ, ಜನರಿಗೆ ತಲುಪುವಂತೆ ಬರೆಯಲು ಒಂದು ಸ್ಥಳ ಬೇಕಲ್ಲ? ಸಾಂಪ್ರದಾಯಿಕ ಮಾಧ್ಯಮಗಳ ಜತೆಗೆ ಡಿಜಿಟಲ್ ಮಾಧ್ಯಮ ಅಗಾಧವಾಗಿ ಬರಹಗಾರರಿಗೆ ಅವಕಾಶ ನೀಡುತ್ತಿದೆ. ‘ಯಾರು ಕಿವಿ ಮುಚ್ಚಿದರೂ ನನಗಿಲ್ಲ ಚಿಂತೆ’ ಎಂದೇ ಸಾವಿರಾರು ಜನರನ್ನು ತಲುಪುವ ಫೇಸ್ಬುಕ್, ಬ್ಲಾಗ್ ಬರಹಗಳು ಸಾಹಿತ್ಯ ಲೋಕಕ್ಕೆ ಒದಗಿಬಂದ ಅನುಕೂಲಗಳು. ಮುದ್ರಣ ಮಾಧ್ಯಮದಂತಹ ಸಾಂಪ್ರದಾಯಿಕ ಓದಿಗೆ ಡಿಜಿಟಲ್ ಮಾಧ್ಯಮ ಪರ್ಯಾಯವಾಗಿರದೆ, ಪೂರಕವಾಗಿವೆ.
ವಿವಿಧ ಮಜಲುಗಳು: ಡಿಜಿಟಲ್ ಮಾಧ್ಯಮ ಎಂದ ಕೂಡಲೇ ಇದೀಗ ಹತ್ತಾರು ಬಾಗಿಲುಗಳು ತೆರೆದುಕೊಳ್ಳುತ್ತವೆ. ಸಾಮಾಜಿಕ ಜಾಲತಾಣ ಎಂದರೆ ಫೇಸ್ಬುಕ್ ಎನ್ನುವಷ್ಟರ ಮಟ್ಟಿಗೆ ಅದು ಎಲ್ಲರನ್ನೂ ಆವರಿಸಿಕೊಂಡಿದೆ. ಕೆಲವು ವರ್ಷಗಳ ಹಿಂದೆ ಡಿಜಿಟಲ್ ಮಾಧ್ಯಮ ಎಂದರೆ ಬ್ಲಾಗ್ಗಳು. ಸಾಂಪ್ರದಾಯಿಕವಾದ ಮುದ್ರಣ ಮಾಧ್ಯಮದಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಪಾಕ್ಷಿಕಗಳು, ಪುಸ್ತಕಗಳ ಮಾರ್ಗದಲ್ಲಿ ಸಾಹಿತ್ಯ ಪ್ರಸರಣ ನಡೆಯುತ್ತಿದೆ. ನಿಯತಕಾಲಿಕಗಳಲ್ಲಿ ಜಾಗದ ಕೊರತೆ ಪ್ರಮುಖವಾದರೆ, ಪುಸ್ತಕವಾಗಿ ಮುದ್ರಿಸಲು ಹಣಕಾಸಿನ ಅಡ್ಡಿ. ಇಂತಹ ಸಂದರ್ಭದಲ್ಲಿ ಬ್ಲಾಗ್ಗಳು ಮರಳುಗಾಡಿನಲ್ಲಿ ಓಯಸಿಸ್ ರೀತಿ ಕಂಡವು. ಸಾಂಪ್ರದಾಯಿಕ ಮಾಧ್ಯಮಗಳಲ್ಲಿ ಸ್ಥಳಾವಕಾಶ ಸಿಗಲಿಲ್ಲ ಎಂಬ ಕಾರಣವಷ್ಟೆ ಅಲ್ಲದೆ, ಅನೇಕ ಗಂಭೀರ ಬರಹಗಾರರೂ ಬ್ಲಾಗ್ ಹೊಂದುವುದನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದರು. ಈಗಿನ ಯೂಟ್ಯೂಬರ್ ರೀತಿಯಲ್ಲೆ ಬ್ಲಾಗರ್ ಎಂಬುದು ಪ್ರತಿಷ್ಠೆಯಾಗಿತ್ತು. ಫೇಸ್ಬುಕ್ ಪ್ರವೇಶದ ನಂತರ ಅದು ಕ್ಷೀಣಿಸಿತು.
ಆಸಕ್ತಿ ಮೂಡಿಸಲು ಸಾಕು...
ಬ್ಲಾಗ್ಗಳಲ್ಲಿ 400ರಿಂದ 1,000 ಪದಗಳವರೆಗೆ ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು. ಸ್ಮಾರ್ಟ್ಫೋನ್ಗಳು ಇಲ್ಲದ್ದರಿಂದ ಕಂಪ್ಯೂಟರಿನಲ್ಲೆ ಲೇಖನ ಓದುತ್ತಿದ್ದರು. ‘ಫೇಸ್ಬುಕ್ನ್ನು ಬಹುತೇಕರು ಸ್ಮಾರ್ಟ್ ಫೋನ್ ಮೂಲಕವೇ ವೀಕ್ಷಿಸುವುದರಿಂದ 150-400 ಪದಗಳಿಗಿಂತ ಹೆಚ್ಚು ಓದಲು ಆಸಕ್ತಿ ಆಗುತ್ತಿಲ್ಲ. ಹೀಗಾಗಿ ಫೇಸ್ಬುಕ್ ಎಂಬುದು ಪುಸ್ತಕ ಓದಿನತ್ತ ಸೆಳೆಯಲು, ಕುತೂಹಲ ಮೂಡಿಸಲು ಒಂದು ಸಾಧನವಾಗಿ ಬಳಕೆಯಾಗುತ್ತಿದೆ. ಅಲ್ಲಿಯೇ ಗಂಭೀರ ಸಾಹಿತ್ಯವನ್ನು ಪ್ರಕಟಿಸುವುದರಿಂದ ಉಪಯೋಗವೂ ಇಲ್ಲ, ಮಾಡಲೂಬಾರದು’ ಎನ್ನುತ್ತಾರೆ ಕಾಲಯಾನ, ಮಿಹಿರಕುಲಿ ಮುಂತಾದ ಕೃತಿಗಳ ಲೇಖಕ ಸದ್ಯೋಜಾತ ಭಟ್ಟ. ಫೇಸ್ಬುಕ್ನಲ್ಲಿ ಬರೆದದ್ದೇ ನಂತರ ಪುಸ್ತಕವೂ ಆಗಿದ್ದಿದೆ. ಆದರೆ ಪುಸ್ತಕದಲ್ಲಿ ಬರೆಯುವ ರೀತಿ ಫೇಸ್ಬುಕ್ನಲ್ಲಿ ಬರೆಯಲಾಗದು. ಅಲ್ಲಿನ ಓದುಗರ ಮನಸ್ಥಿತಿಯೇ ಬೇರೆ. ಚಿಕ್ಕದಾಗಿ, ಸ್ಥೂಲವಾಗಿ ವಿಷಯ ತಿಳಿಸಿ ಕುತೂಹಲ ಮೂಡಿಸಬಹುದು. ಪುಸ್ತಕದಲ್ಲಿ ವಿಸõತವಾಗಿ ಪ್ರಕಟವಾದಾಗ ಅವರು ಖರೀದಿಸಿ ಓದುತ್ತಾರೆ. ಫೇಸ್ಬುಕ್ನ ಅನೇಕ ಬರವಣಿಗೆಗಳಿಗೆ ಪ್ರತಿಕ್ರಿಯೆಗಳು ಅಲ್ಲೇ ಲಭಿಸುವುದರಿಂದ, ಕೆಲವೊಮ್ಮೆ ಪುಸ್ತಕ ಬರವಣಿಗೆಗೆ ಸಹಾಯಕವೂ ಆಗುತ್ತದೆ. ಪುಸ್ತಕ ಪ್ರಕಟಣೆ, ಓದಿಗೆ ಡಿಜಿಟಲ್ ಮಾಧ್ಯಮ ಪೂರಕವಾಗಬಲ್ಲದು ಎನ್ನುತ್ತಾರೆ ಸದ್ಯೋಜಾತರು.
ಅರಳಿ ಕಟ್ಟೆಯ ಮಾದರಿ
ಕನ್ನಡದ ಖ್ಯಾತ ಬರಹಗಾರ ವಸುಧೇಂದ್ರ ಹೇಳುವಂತೆ ಸಾಮಾಜಿಕ ಜಾಲತಾಣ ಅರಳಿಕಟ್ಟೆ ರೀತಿ. ಇಲ್ಲಿ ಅನೇಕ ವಿಚಾರ ಚರ್ಚೆಯಾಗುತ್ತವೆ, ಜನ ಸೇರಲು ಇರುವ ಸ್ಥಳ ಅದು. ಸಾಂಪ್ರದಾಯಿಕ ಮಾದರಿಯ ಪ್ರಮಾಣಕ್ಕಿಂತ ಹೆಚ್ಚು ಜನರನ್ನು ಈ ಮಾರ್ಗದಲ್ಲಿ ತಲುಪಬಹುದು. ಅಷ್ಟರ ಮಟ್ಟಿಗೆ ಪುಸ್ತಕ ಓದಿಗೆ, ಸಾಹಿತ್ಯ ರಚನೆಗೆ ಸಾಮಾಜಿಕ ಜಾಲತಾಣ ಪೂರಕ. ಆದರೆ ಇವೆಲ್ಲವೂ ಸೃಜನೇತರ ಕಾರ್ಯಗಳು. ಕಥೆ, ಕಾವ್ಯ, ಕಾದಂಬರಿ ಬರೆಯಲು ಲೇಖಕರು ವಹಿಸುತ್ತಿದ್ದ ಶ್ರಮ, ಸವಾಲುಗಳಲ್ಲಿ ಯಾವುದೇ ಬದಲಾವಣೆಯಿಲ್ಲ. ಅದು ಪಂಪ, ಕುಮಾರವ್ಯಾಸರಿಂದ ಇಂದಿನವರೆಗೆ ಎಲ್ಲರಿಗೂ ಸಮಾನ. ದೇಹದ ಮೇಲಿನ ಉಡುಪಿನಂತೆ, ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಜನರನ್ನು ತಲುಪಬಹುದು. ಫೇಸ್ಬುಕ್ನಲ್ಲಿ ಸಿಗುವ ಲೈಕುಗಳೇ ಮೆಚ್ಚುಗೆ ಎಂಬುದು ಭ್ರಮೆ. ಸಾವಿರ ಪದಗಳಿಗಿಂತ ಹೆಚ್ಚು ಓದಲು ಸಾಧ್ಯವಾಗದ ಮಾಧ್ಯಮವನ್ನು ಪುಸ್ತಕ ಓದಿಗೆ, ಕೇಳುವಿಕೆಗೆ ಪರ್ಯಾಯ ಎನ್ನಲು ಸಾಧ್ಯವಿಲ್ಲ. ಪೂರಕ ಎನ್ನಬಹುದು.
ಸ್ವಯಂ ಪ್ರಕಾಶನದ ಮಧ್ಯಮ ಮಾರ್ಗ
ಫೇಸ್ಬುಕ್ನಲ್ಲಿ ಚಿಕ್ಕ ಬರಹಗಳನ್ನು ಪ್ರಕಟಿಸಬಹುದೇ ಹೊರತು ಪುಸ್ತಕದ ಮಾದರಿಗೆ ಅವಕಾಶವಿಲ್ಲ. ಅಂತಹ ಕೊರತೆಯನ್ನು ಬ್ಲಾಗ್ಗಳು, ಇ-ಪುಸ್ತಕಗಳು ನೀಗಿಸುತ್ತಿವೆ. ಅಂತಹ ವೇದಿಕೆ ‘ಪ್ರತಿಲಿಪಿ’ಯಲ್ಲಿ ಕನ್ನಡ ವೊಂದರಲ್ಲೆ 24 ಸಾವಿರ ‘ಲೇಖಕರು’ ಇದ್ದಾರೆ. ಪ್ರತಿಲಿಪಿ ಕನ್ನಡದ ಸಂಪಾದಕ ಅಕ್ಷಯ್ ಬಾಳೆಗೆರೆ ಹೇಳುವಂತೆ, ತಿಂಗಳಿಗೆ ಕನಿಷ್ಠ ಒಂದಾದರೂ ಬರಹ ಪ್ರಕಟಿಸುವ 12 ಸಾವಿರ ಲೇಖಕರನ್ನು 12 ಲಕ್ಷ ಜನ ಓದುತ್ತಿದ್ದಾರೆ. ಲೇಖನ, ಕಾದಂಬರಿಯ ಕಂತು, ಕಥೆ, ಕವಿತೆ ಎಲ್ಲವೂ ಸೇರಿ ಪ್ರತಿದಿನ 600-700 ಲೇಖನಗಳು ಪ್ರಕಟಗೊಳ್ಳುತ್ತಿವೆ. ಸ್ವತಃ 60ಕ್ಕೂ ಹೆಚ್ಚು ಕಥೆ, ಕಾದಂಬರಿ, ಲೇಖನ ಸಂಗ್ರಹಗಳನ್ನು ಪ್ರತಿಲಿಪಿಯಲ್ಲಿ ಪ್ರಕಟಿಸಿರುವ ಯತಿರಾಜ್ ವೀರಾಂಬುಧಿ ಅವರಿಗೆ ಪ್ರತಿಲಿಪಿಯಲ್ಲಿ 13 ಸಾವಿರಕ್ಕೂ ಹೆಚ್ಚು ಫಾಲೋಯರ್ಗಳಿದ್ದಾರೆ. 2017ರಿಂದ ಇಲ್ಲಿವರೆಗೆ ಅವರ ಎಲ್ಲ ಕೃತಿಗಳನ್ನೂ 23 ಲಕ್ಷ ಜನರು ಓದಿದ್ದಾರೆ. ಈ ವೇದಿಕೆಗಾಗಿಯೇ ಬಹಳಷ್ಟು ಬರೆಯುವ ಯತಿರಾಜ್ ಹೇಳುವಂತೆ, ಪುಸ್ತಕಗಳ ಪ್ರಕಟಣೆ ನಂತರ ಓದುಗರ ಪ್ರತಿಕ್ರಿಯೆ ಲಭಿಸುವುದು ಬಹಳ ಕಷ್ಟ. ಆದರೆ ಆನ್ಲೈನ್ ವೇದಿಕೆಯಲ್ಲಿ ಪ್ರತಿ ಬರಹಕ್ಕೂ ಪ್ರತಿಕ್ರಿಯೆ, ವಿಮರ್ಶೆ ಲಭಿಸುತ್ತವೆ. ಮೆಚ್ಚುಗೆ ಜತೆಗೆ, ಹೀಗಿದ್ದರೆ ಚೆನ್ನಾಗಿರುತ್ತಿತ್ತು ಎಂಬ ಸಲಹೆಯನ್ನೂ ನೀಡುತ್ತಾರೆ. ಓದುಗರೊಂದಿಗೆ ಈ ರೀತಿ ಪರೋಕ್ಷ ಸಂವಹನ ನಡೆಸಲು ಫೇಸ್ಬುಕ್, ಪ್ರತಿಲಿಪಿಯಂತಹ ವೇದಿಕೆಗಳಿಂದ ಸಾಧ್ಯ ಎನ್ನುತ್ತಾರೆ.
ಡಿಜಿಟಲ್ ವೇದಿಕೆಗಳು ಅತ್ತ ಪುಸ್ತಕದ ರೀತಿ ಗಂಭೀರವೂ ಅಲ್ಲದ, ಇತ್ತ ಫೇಸ್ಬುಕ್ ರೀತಿ ಅಗ್ಗವೂ ಅಲ್ಲದ ಮಧ್ಯಮ ಮಾರ್ಗದ ಸ್ವಯಂ ಪ್ರಕಾಶನ ರೀತಿ. ನೇರವಾಗಿ ಪುಸ್ತಕ ಪ್ರಕಾಶನಕ್ಕೆ, ಪತ್ರಿಕೆಗಳಲ್ಲಿ ಲೇಖನ ಪ್ರಕಟಣೆಗೆ ಅನೇಕರಿಗೆ ಅವಕಾಶ ಸಿಗುವುದಿಲ್ಲ. ಡಿಜಿಟಲ್ ವೇದಿಕೆಯಲ್ಲಿ ಬರೆಯುತ್ತ ಹೋದಂತೆ ಅಭಿಪ್ರಾಯಗಳು ಲಭಿಸುತ್ತವೆ. ಅನೇಕ ಗೃಹಿಣಿಯರು, ಕಾಲೇಜು ವಿದ್ಯಾರ್ಥಿಗಳು ಇದೇ ಕಾರಣಕ್ಕೆ ಆಕರ್ಷಿತರಾಗುತ್ತಿದ್ದಾರೆ. ಹೊಸ ಲೇಖಕರು ತಮ್ಮ ಬರಹವನ್ನು ಸುಧಾರಿಸಿಕೊಳ್ಳಲು ಈ ಪ್ರತಿಕ್ರಿಯೆಗಳು ಸಹಕಾರಿ. ಬರೆಯಲು ಕನಸನ್ನು ನೀಡುವುದರ ಜತೆಗೆ ಪರಿಪೂರ್ಣ ಲೇಖಕನನ್ನಾಗಿಸಲೂ ಇವು ಪೂರಕವಾಗುತ್ತವೆ. ಸ್ಮಾರ್ಟ್ಫೋನ್ನಲ್ಲೇ ಪುಸ್ತಕ ಓದುವ ಅನುಕೂಲವೂ ಓದುಗರಿಗೆ ಲಭ್ಯ. ಪುಸ್ತಕ ರೂಪದಲ್ಲಿ ಪ್ರಕಟಿಸಿದಾಗ ಪ್ರತಿಕ್ರಿಯೆಯೇ ಸಿಗಲಿಲ್ಲ ಎಂಬ ಕಾರಣಕ್ಕೆ ಡಿಜಿಟಲ್ ವೇದಿಕೆಯಲ್ಲಿ ಪ್ರಕಟಿಸಿದವರೂ ಇದ್ದಾರೆ. ಪುಸ್ತಕ ಬರವಣಿಗೆಗೆ ಇಳಿಯುವ ಮುನ್ನ ತಾಲೀಮು ಎಂದು ಈ ವೇದಿಕೆಯನ್ನು ಕಲ್ಪಿಸಿಕೊಳ್ಳಬಹುದು ಎನ್ನುತ್ತಾರೆ ಅಕ್ಷಯ್.