ಅಂಕಣ

ರಕ್ತದಾನದಿಂದ ಜೀವದಾನ, ನಿಸ್ವಾರ್ಥದ ಮಹಾದಾನ

18 ವರ್ಷಕ್ಕಿಂತ ಮೇಲ್ಪಟ್ಟ, ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವ ತೊಂದರೆಯೂ ಇರುವುದಿಲ್ಲ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಪುರುಷರು 3 ತಿಂಗಳಿಗೆ ಒಂದು ಬಾರಿ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದಾಗಿದೆ.

ಒಡಿಸ್ಸಾದ ಬಾಲಾಸೋರ್​ನಲ್ಲಿ ನಡೆದ ರೈಲು ಅವಘಡದಲ್ಲಿ 270ಕ್ಕೂ ಹೆಚ್ಚು ಜನ ಮೃತಪಟ್ಟು, ಅನೇಕರು ಗಾಯಗೊಂಡಿದ್ದರು. ಇದೊಂದು ಭೀಕರ ದುರಂತವೇ ಆಗಿದೆ. ಅವಘಡ ನಡೆದ ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆದಿದ್ದು, ಸ್ಥಳೀಯರು, ಸ್ವಯಂಸೇವಕ ರಕ್ಷಣಾ ಕಾರ್ಯಕರ್ತರು, ಪೊಲೀಸ್ ಮತ್ತು ಆರೋಗ್ಯ ಇಲಾಖೆ, ಸೇನೆ, ಶ್ವಾನದಳ ಹೀಗೆ ಎಲ್ಲರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪ್ರಯಾಣಿಕರನ್ನು ರಕ್ಷಿಸುವಲ್ಲಿ, ಗಾಯಾಳುಗಳಿಗೆ ನೆರವು ನೀಡುವಲ್ಲಿ, ಹೀಗೆ ಪರಿಹಾರ ಕಾರ್ಯದಲ್ಲಿ ಹಗಲು ರಾತ್ರಿ ಶ್ರಮಿಸಿದ್ದರು. ಅಪಘಾತದಲ್ಲಿ ಗಾಯಗೊಂಡವರಿಗೆ ಪ್ರಥಮ ಚಿಕಿತ್ಸೆ ನೀಡಲು ಸ್ಥಳದಲ್ಲೇ ವ್ಯವಸ್ಥೆ ಕಲ್ಪಿಸಲಾಗಿತ್ತು. ಆರೋಗ್ಯ ಸಿಬ್ಬಂದಿಯು ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ಬಹಳಷ್ಟು ಸಾಕಷ್ಟು ದುಡಿದಿದ್ದರು. ಈ ವೇಳೆ ಗಾಯಾಳುಗಳಿಗೆ ಅಗತ್ಯವಾಗಿ ಮತ್ತು ತುರ್ತಾಗಿ ಬೇಕಿದ್ದ ರಕ್ತವನ್ನು ದಾನ ಮಾಡಲು ಅಂದಾಜು 2000 ಮಂದಿ ಸ್ವಯಂಪ್ರೇರಿತವಾಗಿ ಮುಂದೆ ಬಂದಿದ್ದರು ಹಾಗೂ ರಕ್ತದಾನ ಮಾಡಲೆಂದೇ ಆಸ್ಪತ್ರೆಗಳ ಮುಂದೆ ಸರತಿ ಸಾಲಿನಲ್ಲಿ ನಿಂತು ಮಾನವೀಯತೆ ತೋರಿದ್ದಾರೆ ಎಂಬ ವಿಚಾರವನ್ನು ಪತ್ರಿಕೆಯಲ್ಲಿ ಓದಿದ್ದೆವು. ರಕ್ಷಣಾ ಕಾರ್ಯದಲ್ಲಿ ತೊಡಗಿದವರು ಹಾಗೂ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾದವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇಬೇಕು. ಯಾಕೆಂದರೆ ಅಂತಹ ವ್ಯಕ್ತಿಗಳಿಂದಲೇ ಮಾನವೀಯತೆಗೆ ಗೌರವ, ಬೆಲೆ ದೊರೆಯುತ್ತಿರುವುದು.

ಒಂದು ಜೀವವನ್ನು ಉಳಿಸಬೇಕಿದ್ದರೆ ವೈದ್ಯರೇ ಆಗಬೇಕೆಂದಿಲ್ಲ. ಆಪತ್ಕಾಲದಲ್ಲಿ ಸಹಾಯ ಮಾಡುವುದರಿಂದಲೂ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯ. ಆತ್ಮಹತ್ಯೆಗೆ ಯತ್ನಿಸುವವನನ್ನು ತಡೆಯುವುದು. ಅಪಘಾತಕ್ಕೊಳಗಾದವರನ್ನು ರಕ್ಷಿಸುವುದು, ದುರ್ಘಟನೆಗಳಿಂದ ಪಾರು ಮಾಡುವುದು ಹೀಗೆ ಹಲವು ಸಂದರ್ಭಗಳಲ್ಲಿ ಮಾಡುವ ಉಪಕಾರಗಳು ಅನೇಕರ ಜೀವವನ್ನು ಉಳಿಸಲು ಸಾಧ್ಯ. ರಕ್ತದಾನ ಮಾಡುವುದರಿಂದಲೂ ಇನ್ನೊಬ್ಬರ ಜೀವವನ್ನು ಉಳಿಸಲು ಸಾಧ್ಯ. ಅಂಗಾಂಗ ದಾನ ಮಾಡುವುದರಿಂದಲೂ ಇತರರ ಜೀವವನ್ನು ಉಳಿಸಬಹುದು. ವ್ಯಕ್ತಿಯು ಮೃತನಾದರೆ ಅಥವಾ ಮೆದುಳು ನಿಷ್ಕಿ›ಯಗೊಂಡರೆ ಮಾತ್ರ ಅಂಗಾಂಗ ದಾನ ಮಾಡಬಹುದು. ಆದರೆ, ರಕ್ತದಾನವನ್ನು ಜೀವಂತವಿರುವಾಗಲೇ ಮಾಡಬಹುದಾಗಿದೆ. ಮನುಷ್ಯನೊಬ್ಬನ ರಕ್ತದಾನದಿಂದ ಕನಿಷ್ಠ ಮೂರರಿಂದ ನಾಲ್ಕು ಜನರ ಜೀವ ಉಳಿಸಲು ಸಾಧ್ಯ ಎಂದು ತಜ್ಞರ ಅಭಿಪ್ರಾಯವಾಗಿದೆ. ಈ ಹಿಂದೆ ರಕ್ತದ ಬಳಕೆ ಒಬ್ಬ ವ್ಯಕ್ತಿಗೆ ಮಾತ್ರ ಕೊಡಬಹುದಿತ್ತು. ಈಗ ಸಂಯೋಜನೆಯಿಂದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಪ್ಲಾಸ್ಮಾ ಹೀಗೆ ಬೇರೆ ಬೇರೆ ವಿಭಾಗ ಮಾಡಿ ಅಗತ್ಯವುಳ್ಳವರಿಗೆ ರಕ್ತವನ್ನು ನೀಡಲಾಗುತ್ತದೆ.

ದೇಶದಲ್ಲಿ ನಿಮಿಷವೊಂದಕ್ಕೆ ಅನೇಕರಿಗೆ ರಕ್ತದ ಅಗತ್ಯ ಕಂಡುಬರುತ್ತದೆ. ನಿತ್ಯವೂ ಎಲ್ಲಾ ಆಸ್ಪತ್ರೆಗಳಲ್ಲಿ ರಕ್ತದ ಅವಶ್ಯಕತೆ ಇದ್ದೇ ಇರುತ್ತದೆ. ಅನಾರೋಗ್ಯ ಪೀಡಿತರಿಗೆ ಮಾತ್ರವಲ್ಲದೆ ಅಪಘಾತದಲ್ಲಿ ಗಾಯಗೊಂಡವರಿಗೆ, ಗರ್ಭಿಣಿಯರಿಗೆ, ಶಸ್ತ್ರಚಿಕಿತ್ಸೆಗೆ ಒಳಗೊಳ್ಳುವವರಿಗೆ ಹೀಗೆ ರಕ್ತಕ್ಕೆ ಬಹು ಬೇಡಿಕೆಯಿದೆ. ರಕ್ತದ ಕೊರತೆಯಿಂದ ಸಾಕಷ್ಟು ಜನ ಮೃತರಾದ ಸಂಗತಿಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತದೆ. ಮುಖ್ಯವಾಗಿ ಗರ್ಭಿಣಿಯರು ಹಾಗೂ ಅಪಘಾತದ ಗಾಯಾಳುಗಳು ಅಧಿಕ ರಕ್ತಸ್ರಾವದಿಂದ ಮೃತಪಡುವುದು ಹೆಚ್ಚು. ಹಾಗಾಗಿ ಅವರಿಗೆ ತಕ್ಷಣ ಸೂಕ್ತ ರಕ್ತ ಪೂರೈಕೆ ಮಾಡಿದರೆ ಬದುಕುಳಿಯುವ ಸಾಧ್ಯತೆಯಿರುತ್ತದೆ. ಕೆಲವೊಂದು ಜಿಲ್ಲೆ, ತಾಲೂಕುಗಳ ಮುಖ್ಯ ಆಸ್ಪತ್ರೆಗಳಲ್ಲಿ ರಕ್ತವನ್ನು ಸಂಗ್ರಹಿಸಿಡಲಾಗುತ್ತದೆ. ಆದರೂ ಕೆಲವೊಂದು ಸಂದರ್ಭದಲ್ಲಿ ರೋಗಿಗಳು, ಮೇಲೆ ತಿಳಿಸಿದ ರೈಲು ಅವಘಡದಂತೆ ಭೀಕರ ಅಪಘಾತಗಳಾದಾಗ, ಗಾಯಾಳುಗಳ ಸಂಖ್ಯೆ ಹೆಚ್ಚಿದ್ದ ಸಂದರ್ಭಗಳಲ್ಲಿ ರಕ್ತದ ಕೊರತೆಯುಂಟಾಗುತ್ತದೆ. ರಕ್ತದ ಕೊರತೆ ನೀಗಿಸಲು ಜನರು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಲು ಮುಂದೆ ಬರಬೇಕಿದೆ.

ರಕ್ತದಾನಿಗಳು ನಿಶ್ಚಿಂತೆಯಿಂದ ದಾನ ಮಾಡುತ್ತಾರೆ. ವಿದ್ಯಾರ್ಥಿಗಳಂತೂ ಈ ಕಾರ್ಯವನ್ನು ನಿಷ್ಠೆಯಿಂದ ಮಾಡಿ ದಾನಿಗಳಾಗುತ್ತಾರೆ. ರಕ್ತದಾನಿಗಳ ಹೆಸರು ನೋಂದಾಯಿಸಿಕೊಂಡವರು ಅವಶ್ಯಕತೆ ಇದ್ದ ತಕ್ಷಣ ಹಾಜರಾಗುತ್ತಾರೆ. ನಗರಗಳಲ್ಲಿ ಪ್ರಜ್ಞೆ ಇದೆ. ಇತರ ಕಡೆಗೂ ಈ ಸಂದೇಶ ತಲುಪಬೇಕಾಗಿದೆ. ಧರ್ಮಸ್ಥಳಕ್ಕೆ ಬಂದಿದ್ದ ಓರ್ವರು ಬಹು ಹೆಮ್ಮೆಯಿಂದ ರಕ್ತದಾನ ಮಾಡುತ್ತಿದ್ದೇನೆ ಎಂದರು. ಚೆನ್ನೈನ ಓಎನ್​ಜಿಸಿ ಕಂಪೆನಿಯೊಂದಲ್ಲಿ ಕೆಲಸ ಮಾಡುತ್ತಿದ್ದ ನಂಜುಂಡಸ್ವಾಮಿಗೆ ಇದೀಗ 64 ವರ್ಷ. ತಮ್ಮ 21ನೇ ವಯಸ್ಸಿನಿಂದಲೇ ರಕ್ತದಾನ ಮಾಡಲು ಪ್ರಾರಂಭಿಸಿದ್ದು, ಇದುವರೆಗೂ 80 ಬಾರಿ ರಕ್ತದಾನ ಮಾಡಿದ್ದಾರೆ. ಹೀಗೆ ಸಾಕಷ್ಟು ಜನರು ಸಾಕಷ್ಟು ವರ್ಷಗಳಿಂದ ನಿರಂತರವಾಗಿ ರಕ್ತದಾನ ಮಾಡುವವರು ಇದ್ದಾರೆ. ಅಂತಹ ಸೇವಾಮನೋಭಾವನೆಯನ್ನು ನಾವೆಲ್ಲ ಶ್ಲಾಘಿಸಲೇಬೇಕು. ಹಾಗೂ ಅವರಿಂದ ಪ್ರೇರಣೆ ಪಡೆದು ರಕ್ತದಾನಕ್ಕೆ ಮುಂದಾಗಬೇಕು.

ಮನುಷ್ಯ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಲ್ಲಿಯೂ ರಕ್ತವಿದೆ. ಅದನ್ನು ಬಳಸಿಕೊಳ್ಳಬಹುದಲ್ಲವೇ ಎಂಬ ಮಾತು ಹೇಳುವವರಿದ್ದಾರೆ. ಆದರೆ ಮನುಷ್ಯನಿಗೆ ಮನುಷ್ಯರ ರಕ್ತ ಮಾತ್ರ ಹೊಂದಿಕೆಯಾಗುವುದು. ಬೇರೆ ಯಾವುದೇ ಜೀವಿಯ ರಕ್ತ ಹೊಂದಿಕೆಯಾಗುವುದಿಲ್ಲ. ಅದು ಕೂಡ ಎ, ಬಿ, ಓ ಇತ್ಯಾದಿಯಾಗಿ ವರ್ಗೀಕರಿಸಲ್ಪಟ್ಟ ರಕ್ತದ ಗುಂಪುಗಳಿಗೆ ಆಯಾ ಗುಂಪಿನ ರಕ್ತವೇ ಆಗಬೇಕು. ಇನ್ನೂ ಮುಂದುವರಿದು ರಕ್ತವನ್ನು ಕೃತಕವಾಗಿ ಸೃಷ್ಟಿಸಿ ರಕ್ತದ ಅಭಾವವನ್ನು ದೂರ ಮಾಡಬಹುದಲ್ಲವೇ ಎಂದೆನ್ನಬಹುದು. ಸಂಶೋಧಕರು ಈ ಬಗ್ಗೆ ಪ್ರಯತ್ನವನ್ನು ನಡೆಸುತ್ತಲೇ ಇದ್ದಾರೆ. ರಕ್ತವನ್ನು ಕೃತಕವಾಗಿ ಸೃಷ್ಟಿ ಮಾಡಿದರೂ ಅದರ ಒಳಿತೇನು? ಕೆಡುಕೇನು ಎಂಬುದು ಮುಖ್ಯವಾಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ರಕ್ತದಾನ ಶ್ರೇಷ್ಠದಾನ. ಆದರೆ ಬಹಳಷ್ಟು ಜನ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಮೂಢನಂಬಿಕೆ, ಸರಿಯಾದ ಮಾಹಿತಿ ಇಲ್ಲದಿರುವಿಕೆ, ಭಯ, ತಪ್ಪು ಕಲ್ಪನೆ ಮುಂತಾದವುಗಳು ಅದಕ್ಕೆ ಕಾರಣವಾಗಿವೆ. ರಕ್ತ ಕೊಟ್ಟರೆ ಪುರುಷತ್ವ ಕಳೆದುಕೊಳ್ಳುತ್ತಾನೆ, ಸ್ತ್ರೀಯು ಗರ್ಭ ಧರಿಸುವುದಿಲ್ಲ, ರಕ್ತದಾನ ಮಾಡುವುದರಿಂದ ಏಡ್ಸ್​ನಂತಹ ರೋಗಗಳು ಬರುತ್ತವೆ ಎಂಬಿತ್ಯಾದಿ ತಪ್ಪು ಕಲ್ಪನೆಗಳಿವೆ. ರಕ್ತದಾನ ಮಾಡಿದ ಮೇಲೆ ಕೆಲಸ ಮಾಡಲು ಆಗುವುದಿಲ್ಲ... ಹೀಗೆ ಅನೇಕ ಕಾರಣಗಳಿಂದ ರಕ್ತದಾನ ಮಾಡಲು ಹಿಂಜರಿಯುತ್ತಾರೆ. ಅವೆಲ್ಲ ಸುಳ್ಳು ಸುದ್ದಿಗಳು. ಅಂತಹ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ.

18 ವರ್ಷಕ್ಕಿಂತ ಮೇಲ್ಪಟ್ಟ, ಆರೋಗ್ಯವಂತ ವ್ಯಕ್ತಿ ರಕ್ತದಾನ ಮಾಡುವುದರಿಂದ ಯಾವ ತೊಂದರೆಯೂ ಇರುವುದಿಲ್ಲ. ರಕ್ತದಾನದಿಂದ ದೇಹದಲ್ಲಿ ಹೊಸ ರಕ್ತ ಉತ್ಪಾದನೆ ಆಗುತ್ತದೆ. ಇದರಿಂದ ಉತ್ತಮ ಆರೋಗ್ಯ ಪಡೆಯಬಹುದಾಗಿದೆ. ಪುರುಷರು 3 ತಿಂಗಳಿಗೆ ಒಂದು ಬಾರಿ ಹಾಗೂ ಮಹಿಳೆಯರು 4 ತಿಂಗಳಿಗೊಮ್ಮೆ ರಕ್ತ ನೀಡಬಹುದಾಗಿದೆ. ರಕ್ತದಾನದಿಂದ ಹಿಮೋಗ್ಲೋಬಿನ್ ಕಡಿಮೆಯಾಗುತ್ತದೆ ಎಂಬ ತಪ್ಪು ಕಲ್ಪನೆಯಿದೆ. ರಕ್ತದಾನ ಮಾಡಿದ 21 ದಿನಗಳಲ್ಲಿ ಶರೀರದಲ್ಲಿ ರಕ್ತವು ಮರುಶೇಖರಣೆಗೊಳ್ಳುತ್ತದೆ. ಒಬ್ಬರಿಂದ ಒಂದು ಬಾರಿ 471 ಮಿ.ಲೀಟರ್ ರಕ್ತವನ್ನು ಮಾತ್ರ ಪಡೆಯಲಾಗುತ್ತದೆ. ರಕ್ತದಾನ ಮಾಡಿದ 3 ಗಂಟೆಗಳ ಒಳಗೆ ಅತ್ಯುತ್ತಮ ಆಹಾರ ಅದರಲ್ಲೂ ಹಣ್ಣು-ಹಂಪಲನ್ನು ಹೆಚ್ಚಾಗಿ ಸೇವಿಸುವುದು ಹಾಗೂ ರಕ್ತದಾನ ಮಾಡಿದ 12 ಗಂಟೆಯೊಳಗೆ ಯಾವುದೇ ರೀತಿಯ ವ್ಯಾಯಾಮ ಅಥವಾ ದೈಹಿಕ ಶ್ರಮದ ಕೆಲಸಗಳನ್ನು ಮಾಡದಿರುವುದು ಉತ್ತಮ.

ದಾನಿಗಳಿಂದ ರಕ್ತ ಪಡೆಯುವ ಮೊದಲು ವೈದ್ಯರು ದಾನಿಯನ್ನು ಸಂಪೂರ್ಣ ಪರೀಕ್ಷೆಗೊಳಪಡಿಸುತ್ತಾರೆ. ಈ ಮೂಲಕವಾಗಿ ಉಚಿತವಾಗಿ ಸಂಪೂರ್ಣ ಆರೋಗ್ಯ ತಪಾಸಣೆ ಮಾಡಿಕೊಂಡಂತಾಗುತ್ತದೆ. ದಾನಿಯು ಆರೋಗ್ಯವಂತನಾಗಿದ್ದರೆ ಮಾತ್ರ ರಕ್ತ ಪಡೆಯಲಾಗುತ್ತದೆ. ಅನಾರೋಗ್ಯ ಅಥವಾ ಇತರ ಸಮಸ್ಯೆಗಳಿದ್ದಲ್ಲಿ ಅದಕ್ಕೆ ಪರಿಹಾರ ಸೂಚಿಸಲಾಗುತ್ತದೆ. ರೋಗಿಗಳಿಗೆ ರಕ್ತ ನೀಡುವಾಗಲೂ ಅಷ್ಟೇ, ರಕ್ತವನ್ನು ಎಲ್ಲಾ ರೀತಿಯ ಪರೀಕ್ಷೆಗೊಳಪಡಿಸಿಯೇ ನೀಡಲಾಗುತ್ತದೆ. ರಕ್ತದಾನ ಮಾಡುವುದು ಹೆಮ್ಮೆಯ ವಿಷಯ. ಒಂದು ಜೀವ ಉಳಿಸಿದ ಸಾರ್ಥಕತೆಯ ಭಾವನೆ ಹೊಂದುತ್ತಾರೆ ಹಾಗೂ ಸಮಾಜಕ್ಕಾಗಿ ಕೊಡುಗೆ ನೀಡಿದ ಬಗ್ಗೆ ಆತ್ಮತೃಪ್ತಿಯುಂಟಾಗುತ್ತದೆ. ರಕ್ತದಾನ ಮಾಡುವಾಗ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಧುಮೇಹ, ರಕ್ತದೊತ್ತಡ, ಏಡ್ಸ್ ಇತ್ಯಾದಿ ಉಳ್ಳವರು ಹಾಗೂ ಮದ್ಯಪಾನ, ಧೂಮಪಾನ ಮುಂತಾದ ಅಮಲು ಪದಾರ್ಥ ಸೇವಿಸಿದವರು ರಕ್ತದಾನ ಮಾಡಬಾರದು. ದೇಹದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಅನೇಕ ರೋಗಗಳಿಗೆ ತುತ್ತಾಗಬಹುದು. ಶರೀರದಲ್ಲಿ ರಕ್ತವು ಕಡಿಮೆಯಾಗುತ್ತಿದ್ದಂತೆ ದಣಿವು, ದೌರ್ಬಲ್ಯ, ಉಸಿರಾಟ ಸಮಸ್ಯೆ, ತಲೆ ತಿರುಗುವಿಕೆ, ತಲೆನೋವು ಮತ್ತಿತರ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ರಕ್ತದಾನ ಮಾಡುವ ಮೊದಲು ವೈದ್ಯರ ಸಲಹೆಯನ್ನು ಪಡೆಯುವುದು ಅತ್ಯವಶ್ಯವಾಗಿದೆ.

ಬಾಲಕನೊಬ್ಬ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಆತನ ಚಿಕಿತ್ಸೆಗಾಗಿ ತುರ್ತಾಗಿ ಎಂಟು ಬಾಟಲಿ ರಕ್ತವನ್ನು ಒದಗಿಸಿ, ಇಲ್ಲವೇ ಯಾರಾದರೂ ರಕ್ತ ಕೊಡುವವರಿದ್ದರೆ ಅವರನ್ನು ಬರ ಹೇಳಿ ಎಂದು ಬಾಲಕನ ತಂದೆಯವರಲ್ಲಿ ವೈದ್ಯರು ತಿಳಿಸಿದ್ದರು. ರಕ್ತ ಸಂಗ್ರಹಣಾ ಕೇಂದ್ರಕ್ಕೆ ಹೋದಾಗ ಅಲ್ಲಿ ಸಾಕಷ್ಟು ರಕ್ತ ಸಂಗ್ರಹವಿರಲಿಲ್ಲ. ಹಾಗಾಗಿ ತನ್ನ ಊರಿನ ಗೆಳೆಯರು ಸಂಬಂಧಿಕರಿಗೆಲ್ಲ ಫೋನಾಯಿಸಿ ‘ತುರ್ತಾಗಿ ರಕ್ತ ಬೇಕಿದೆ. ರಕ್ತ ನೀಡಿ ನನ್ನ ಮಗನನ್ನು ಉಳಿಸಿಕೊಡಿ’ ಎಂದು ಬೇಡಿದ. ಅದರಲ್ಲೊಬ್ಬ ಮಾತ್ರ, ‘ನಾಲ್ಕು ಬಾಟಲ್ ರಕ್ತಕ್ಕಾಗಿ ಯಾಕೆ ಫೋನ್ ಮಾಡಿ ಬಡ್ಕೋತಿಯಾ.. ಅಲ್ಲೇ ಯಾರನ್ನಾದ್ರೂ ಕೇಳಿ ರಕ್ತ ಇಸ್ಕೋ.. ನಾವು ಇಲ್ಲಿಂದ ಬರೋದು ತಪ್ಪುತ್ತದೆ, ಇಲ್ಲಿ ನಮ್ಮ ಕೆಲ್ಸನೂ ನಡೀತದೆ. ಸುಮ್ನೆ ಫೋನ್ ಮಡ್ಗು’ ಎಂದಿದ್ದ. ಅಂಥ ಸಂಕಷ್ಟದ ಸ್ಥಿತಿಯಲ್ಲಿ ಆತನ ಮಾತುಗಳನ್ನು ಕೇಳಿ ಬೇಜಾರಾದರೂ, ಗೊತ್ತಿದ್ದವರನ್ನೆಲ್ಲ ಕಾಡಿ ಬೇಡಿ ರಕ್ತ ಪಡೆದು ಮಗನನ್ನು ಉಳಿಸಿಕೊಂಡಿದ್ದ. ಕಾಲ ಸರಿಯಿತು. ರಕ್ತ ಕೇಳಿದಾಗ ಉಡಾಫೆಯಾಗಿ ಮಾತನಾಡಿದ ವ್ಯಕ್ತಿಯ ಹೆಂಡತಿ ಹೆರಿಗೆಗಾಗಿ ಆಸ್ಪತ್ರೆಗೆ ಹೋಗಿದ್ದಳು. ಆಗ ವೈದ್ಯರು ಹೇಳಿದ್ದಿಷ್ಟೇ.. ಪೇಷಂಟ್​ಗೆ ತೀವ್ರ ರಕ್ತಸ್ರಾವವಾಗುತ್ತಿದೆ. ಆದಷ್ಟು ಬೇಗ 10-12 ಬಾಟಲ್ ರಕ್ತ ಬೇಕು. ಅರ್ಜಂಟ್ ಆಗಿ ರಕ್ತದಾನಿಗಳನ್ನು ಕರೆಸಿ ಎಂದರು. ರಕ್ತ ಸಿಗದೇ ಹೋದರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ಎರಡೆರಡು ಬಾರಿ ಹೇಳಿದ್ದರು. ಆ ಕ್ಷಣ ಆತನಿಗೆ ಕಣ್ಣು ಕತ್ತಲೆ ಆದಂತಾಯಿತು. ಜತೆಗೆ ತನ್ನ ಗೆಳೆಯ ರಕ್ತದಾನ ಮಾಡೆಂದು ಹೇಳಿದ್ದಾಗ ತಾನು ಹೇಳಿದ್ದ ಉಢಾಫೆಯ ಮಾತುಗಳೆಲ್ಲ ನೆನಪಿಗೆ ಬಂದು ಕಣ್ಣೀರು ಒತ್ತರಿಸಿತು. ಆ ಕ್ಷಣ ರಕ್ತದಾನದ ಮಹತ್ವ ಅರಿವಾಗಿತ್ತು. ಪುಣ್ಯವಶಾತ್ ಆ ವೇಳೆ ಸಾಕಷ್ಟು ರಕ್ತ ದೊರೆತು ಆತನ ಹೆಂಡತಿ ಬದುಕುಳಿದಿದ್ದಳು. ಅದಾದ ಬಳಿಕ ಆತ ವರ್ಷಕ್ಕೆ ಒಂದೆರಡು ಸಲ ನಿರಂತರವಾಗಿ ರಕ್ತದಾನ ಮಾಡಿಕೊಂಡು ಬರುತ್ತಲೇ ಇದ್ದಾನೆ. ಯಾಕೆಂದರೆ ಕಷ್ಟ ಬೇರೆಯವರಿಗೆ ಆದಾಗ ಅದು ಕ್ಷುಲ್ಲಕ ಎನಿಸಬಹುದು. ಆದರೆ, ಅದೇ ಕಷ್ಟ ನಮಗಾದಾಗ ಮಾತ್ರ ನೋವಿನ ತೀವ್ರತೆ ಅರಿವಾಗುವುದು. ಹೀಗೇ ಅದೆಷ್ಟು ಜನ ರಕ್ತಕ್ಕಾಗಿ ಏನೇನೋ ಪಾಡು ಪಡುತ್ತಾರೆ. ಅಂತಹವರಿಗೆ ಕೈಲಾದಷ್ಟು ನೆರವಾಗಲು ಮುಂದಾಗೋಣ. ಇಂದು ಅವರಿಗೆ ಬಂದಿರುವ ಕಷ್ಟ ನಾಳೆ ನಮಗೂ ಎದುರಾದರೂ ಆಗಬಹುದು ಅಲ್ಲವೇ!

ರಕ್ತವು ಇಡೀ ಮಾನವ ಜನಾಂಗವನ್ನು ಒಗ್ಗೂಡಿಸುವ ಶಕ್ತಿ ಎಂದರೆ ತಪ್ಪಾಗಲಾರದು. ಯಾಕೆಂದರೆ ಸಮಾಜದಲ್ಲಿ ಜಾತಿ, ಮತ, ಧರ್ಮಗಳ ನಡುವೆ ಭಿನ್ನಾಭಿಪ್ರಾಯ, ಬಿರುಕುಗಳಿದ್ದರೂ ರಕ್ತವು ಧರ್ಮ, ಜಾತಿ, ಪಂಗಡಗಳ ಕಂದಕವನ್ನು ಮೀರಿ ಮಾನವೀಯ ನೆಲೆಯಲ್ಲಿ ಎಲ್ಲರನ್ನು ಒಂದುಗೂಡಿಸುತ್ತದೆ. ಯಾವ ಹೂವು ಯಾರ ಮುಡಿಗೋ ಎಂಬಂತೆ ಯಾರದೋ ರಕ್ತ ಇನ್ಯಾರಿಗೋ ಜೀವದಾನ ಮಾಡುತ್ತದೆ. ರಕ್ತ ನೀಡುವವರು ನಮ್ಮ ಜಾತಿಯವನಿಗೆ, ಧರ್ಮದವನಿಗೆ ಕೊಡಿ ಎಂದೆನ್ನದೆ ಯಾರಿಗೆ ಅಗತ್ಯವಿದೆಯೋ ಅವರಿಗೆ ನೀಡಿ ಎನ್ನುತ್ತಾರೆ. ರಕ್ತ ಪಡೆಯುವವರೂ ಅಷ್ಟೇ ಯಾರ ರಕ್ತ ಎಂದು ಪರಿಗಣನೆ ಮಾಡದೆ ರಕ್ತಪಡೆದು ಜೀವ ಉಳಿಸಿಕೊಳ್ಳುತ್ತಾರೆ. ಈ ಮೂಲಕ ಸಮಾಜದಲ್ಲಿರುವ ಜಾತಿ, ವರ್ಗ, ಪಂಗಡ, ಮತ ಇತ್ಯಾದಿಗಳ ನಡುವಿನ ಕಂದಕಗಳು ಮುಚ್ಚಿ ಮಾನವೀಯತೆ ಗೆಲ್ಲುತ್ತದೆ.

ನಮ್ಮ ಸಮಾಜದಲ್ಲಿ ಜಾತಿ ವೈಷಮ್ಯ, ಧರ್ಮಗಳ ನಡುವಿನ ತಿಕ್ಕಾಟ, ಮತಗಳ ನಡುವೆ ಭಿನ್ನಾಬಿಪ್ರಾಯ, ವರ್ಗಗಳ ನಡುವೆ ಹೋರಾಟ ಹೀಗೆ ಅನೇಕ ವಿಚಾರಗಳಲ್ಲಿ ಒಂದಲ್ಲ ಒಂದು ಕಡೆ ಗಲಭೆಗಳು, ಹಲ್ಲೆಗಳು ನಡೆಯುತ್ತಾ ಇರುವುದು ಪತ್ರಿಕೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತದೆ. ಈ ಸಂದರ್ಭದಲ್ಲಿ ಕೋಮು ಸಂಘರ್ಷಗಳು ಉಂಟಾಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಸಮಾಜದ ಅಶಾಂತಿ ಕದಡುವ, ಕೋಮು ಸಂಘರ್ಷಗಳಿಗೆ ಕಾರಣವಾಗುವ ವಿಷಯಗಳಿಗೆ ಬೇಕಾಗಿ ಜನರು ಹಲ್ಲೆ, ದೊಂಬಿಗಳಲ್ಲಿ ತೊಡಗುತ್ತಾ ರಕ್ತವನ್ನು ಸುರಿಸುತ್ತಾರೆ. ಆದರೆ, ಇನ್ನೊಬ್ಬರ ಜೀವವನ್ನು ಕಾಪಾಡಲು ಒಂದಿಷ್ಟು ರಕ್ತ ದಾನ ಮಾಡಲು ಹಿಂದು-ಮುಂದು ನೋಡುತ್ತಾರೆ ಎಂಬುದು ವಿಪರ್ಯಾಸ. ನಾವೆಲ್ಲ ಉಸಿರಾಡುವ ಗಾಳಿ, ಕುಡಿಯುವ ನೀರು, ನಿಂತಿರುವ ನೆಲ ಒಂದೇ. ನಮ್ಮೆಲ್ಲರ ರಕ್ತದ ಬಣ್ಣವೂ ಒಂದೇ ಆಗಿರುವಾಗ ಇಲ್ಲ-ಸಲ್ಲದ ಕಾರಣ, ನೆಪಗಳನ್ನು ಹುಡುಕಿಕೊಂಡು ಪರಸ್ಪರ ದ್ವೇಷ ಮಾಡುವುದರಿಂದ ಸಮಾಜಕ್ಕೆ ಖಂಡಿತಾ ಒಳಿತಾಗುವುದಿಲ್ಲ. ಸಮಾಜದಲ್ಲಿ ಯಾವುದೇ ಜಾತಿ, ಮತ, ಕುಲ-ಗೋತ್ರ ಧರ್ಮ-ಆಚರಣೆಗಳಿರಲಿ ಪರಸ್ಪರ ಗೌರವ ನೀಡುತ್ತಾ ಸೌಹಾರ್ದದಿಂದ ಬಾಳಬೇಕು. ಮಾನವೀಯತೆಯನ್ನೇ ನಮ್ಮೆಲ್ಲರ ಧರ್ಮವಾಗಿಸಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಒಂದಾಗಬೇಕು.

ರಕ್ತದಾನದ ಅಗತ್ಯ ಹಾಗೂ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಆರೋಗ್ಯ ಸಂಸ್ಥೆಯು ಜೂನ್ 14 ಅನ್ನು ವಿಶ್ವ ರಕ್ತದಾನಿಗಳ ದಿನವೆಂದು ಗುರುತಿಸಿದೆ. ಇದರ ಜೊತೆಗೆ ಇತರರ ಜೀವವನ್ನು ರಕ್ಷಿಸುವ ಸಲುವಾಗಿ ನಿಸ್ವಾರ್ಥ ಭಾವನೆಯಿಂದ ರಕ್ತದಾನ ಮಾಡಿದಂತಹವರಿಗೆ ಅಭಿನಂದನೆಗಳನ್ನು ಸಲ್ಲಿಸಲಾಗುತ್ತದೆ. ಒಬ್ಬರ ಜೀವ ಉಳಿಸುವ ರಕ್ತಕ್ಕೆ ಪರ್ಯಾಯವಾಗಿ ಮತ್ತೊಂದು ವಸ್ತುವಿಲ್ಲ ಎಂಬುದನ್ನು ಮರೆಯದಿರೋಣ. ಸಾಧ್ಯವಾದಷ್ಟು ರಕ್ತದಾನ ಮಾಡಿ ಇನ್ನೊಂದು ಜೀವವನ್ನು ಉಳಿಸಲು ಪ್ರಯತ್ನಿಸೋಣ ಹಾಗೂ ಈ ಕುರಿತು ಜಾಗೃತಿ ಮೂಡಿಸೋಣ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)