ಅಂಕಣ

ಚಿಪ್ ಕನಸು ನನಸಾದೀತೆ?; ಮತ್ತೆ ಅರ್ಜಿ ಆಹ್ವಾನ..

Webdesk - Ravikanth
ಭಾರತವನ್ನು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ತಯಾರಿಕಾ ಕೇಂದ್ರವಾಗಿ ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ದೇಶದಲ್ಲಿ ಸೆಮಿಕಂಡಕ್ಟರ್ ಚಿಪ್ ಮತ್ತು ಡಿಸ್​ಪ್ಲೇ ತಯಾರಿಕೆ ಘಟಕಗಳನ್ನು ಸ್ಥಾಪಿಸಲು ಭಾರತವು 10 ಶತಕೋಟಿ ಡಾಲರ್ ಮೊತ್ತದ ಪೋ›ತ್ಸಾಹಕ ಯೋಜನೆಯನ್ನು 2021ರ ಡಿಸೆಂಬರ್​ನಲ್ಲಿ ಘೋಷಿಸಿತು. ಆದರೆ, ತಂತ್ರಜ್ಞಾನ ಪಾಲುದಾರರ ಕೊರತೆಯಿಂದ ಹಿನ್ನಡೆ ಉಂಟಾಗಿದೆ. ಈಗ ಜೂನ್ 1ರಿಂದ ಮತ್ತೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತದಲ್ಲಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆ ಪೋ›ತ್ಸಾಹಕ್ಕಾಗಿ ಬಿಡ್ ಮಾಡಿದ ವೇದಾಂತ- ಫಾಕ್ಸ್​ಕಾನ್ ಜಂಟಿ ಉದ್ಯಮ, ಐಎಸ್​ಎಂಸಿ ಚಿಪ್ ಒಕ್ಕೂಟ ಸೇರಿದಂತೆ ಬೃಹತ್ ಕಂಪನಿಗಳು ತಂತ್ರಜ್ಞಾನ ಪಾಲುದಾರರ ಕೊರತೆಯಿಂದ ಬಳಲುವುದರೊಂದಿಗೆ ಕೇಂದ್ರ ಸರ್ಕಾರದ ಚಿಪ್ ಮೇಕಿಂಗ್ ಮಹತ್ವಾಕಾಂಕ್ಷೆಗಳಿಗೆ ಹಿನ್ನಡೆಯಾಗಿದೆ.

ಪ್ರಪಂಚದ ಹೆಚ್ಚಿನ ಚಿಪ್ ಉತ್ಪಾದನೆ ತೈವಾನ್​ನಂತಹ ಕೆಲವು ದೇಶಗಳಿಗೆ ಸೀಮಿತವಾಗಿದೆ. ಅಲ್ಲದೆ, ಭಾರತವು ಈ ಕ್ಷೇತ್ರದಲ್ಲಿ ತಡವಾಗಿ ಪ್ರವೇಶಿಸಿದೆ. ಭಾರಿ ನಿರೀಕ್ಷೆಯ ನಡುವೆ ಕಳೆದ ಸೆಪ್ಟೆಂಬರ್​ನಲ್ಲಿ ಭಾರತದ ವೇದಾಂತ ಹಾಗೂ ತೈವಾನ್​ನ ಫಾಕ್ಸ್​ಕಾನ್ ಜಂಟಿ ಸಹಯೋಗದಲ್ಲಿ ಚಿಪ್ ತಯಾರಿಕಾ ಯೋಜನೆಗಳನ್ನು ಗುಜರಾತ್​ನಲ್ಲಿ ಘೊಷಿಸಲಾಯಿತು. ‘ಭಾರತದ ಚಿಪ್ ತಯಾರಿಕಾ ಮಹತ್ವಾಕಾಂಕ್ಷೆಗಳನ್ನು ಈಡೇರಿಸುವಲ್ಲಿ 19.5 ಶತಕೋಟಿ ಡಾಲರ್​ನ (1,60,543 ಕೋಟಿ ರೂಪಾಯಿ) ಈ ಯೋಜನೆಯು ಪ್ರಮುಖ ಹೆಜ್ಜೆಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದರು. ಆದರೆ, ತಂತ್ರಜ್ಞಾನ ಪಾಲುದಾರರನ್ನು ಹುಡುಕುವ ಯತ್ನವು ಸುಗಮವಾಗಿ ಸಾಗಿಲ್ಲ.

ಎಸ್​ಟಿಮೈಕ್ರೊಎಲೆಕ್ಟ್ರಾನಿಕ್ಸ್ ಕೂಡ ಹೆಚ್ಚಿನ ಪಾಲುದಾರಿಕೆ ಹೊಂದಬೇಕೆಂದು ಭಾರತ ಸರ್ಕಾರವು ತಿಳಿಸಿತು. ಆದರೆ, ಎಸ್​ಟಿಮೈಕ್ರೊಎಲೆಕ್ಟ್ರಾನಿಕ್ಸ್ ಆಸಕ್ತಿ ತೋರಿಸಿಲ್ಲವಾದ್ದರಿಂದ ಮಾತುಕತೆಗಳು ಕುಂಠಿತಗೊಂಡಿವೆ.

ಐಎಸ್​ಎಂಸಿ ಚಿಪ್ ಒಕ್ಕೂಟವು ಇಸ್ರೇಲಿನ ಚಿಪ್ ತಯಾರಕ ಸಂಸ್ಥೆಯಾದ ಟವರ್ ಅನ್ನು ತನ್ನ ತಂತ್ರಜ್ಞಾನ ಪಾಲುದಾರ ಎಂದು ಪರಿಗಣಿಸಿ ಭಾರತದಲ್ಲಿ 24,000 ಕೋಟಿ ರೂಪಾಯಿ ವೆಚ್ಚದ ಸೆಮಿಕಂಡಕ್ಟರ್ ತಯಾರಿಕೆ ಸೌಲಭ್ಯವನ್ನು ರೂಪಿಸಲು ಮುಂದಾಗಿತ್ತು. ಆದರೆ, ಕಳೆದ ವರ್ಷ ಟವರ್ ಸಂಸ್ಥೆಯನ್ನು 5.4 ಶತಕೋಟಿ ಡಾಲರ್​ಗೆ (44,458 ಕೋಟಿ ರೂಪಾಯಿ) ಇಂಟೆಲ್ ಕಂಪನಿಯು ಖರೀದಿಸಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದಗಳಿಗೆ ಸಹಿ ಹಾಕುವ ನಿಟ್ಟಿನಲ್ಲಿ ಟವರ್ ಸಂಸ್ಥೆಗೆ ಮುಂದುವರಿಯಲು ಸಾಧ್ಯವಾಗದ ಕಾರಣ ಐಎಸ್​ಎಂಸಿಯ ಚಿಪ್ ತಯಾರಿಕಾ ಸೌಲಭ್ಯ ಯೋಜನೆಯನ್ನು ಈಗ ತಡೆಹಿಡಿಯಲಾಗಿದೆ ಎಂದು ಹೇಳಲಾಗಿದೆ. ಟವರ್ ಹಾಗೂ ಇಂಟೆಲ್ ನಡುವೆ ಯಾವ ರೀತಿ ಸ್ವಾಧೀನ ಒಪ್ಪಂದ ನಡೆಯುತ್ತದೆ ಎಂಬುದರ ಆಧಾರದ ಮೇಲೆ ಮುಂದಿನ ನಡೆಗಳು ನಿರ್ಧರಿತವಾಗಲಿವೆ.

10 ಶತಕೋಟಿ ಡಾಲರ್ ಪ್ರೋತ್ಸಾಹ

ಜಾಗತಿಕ ಕಂಪನಿಗಳನ್ನು ಸೆಳೆಯುವ ಮೂಲಕ ಎಲೆಕ್ಟ್ರಾನಿಕ್ಸ್ ತಯಾರಿಕೆಯಲ್ಲಿ ಹೊಸ ಯುಗ ಪ್ರಾರಂಭಿಸಲು ಬಯಸಿರುವ ಪ್ರಧಾನಿ ಮೋದಿ ಅವರು, ಈ ಆರ್ಥಿಕ ಕಾರ್ಯತಂತ್ರಕ್ಕಾಗಿ ಸೆಮಿಕಂಡಕ್ಟರ್ ಚಿಪ್ ತಯಾರಿಕೆಯನ್ನು ಪ್ರಮುಖ ಆದ್ಯತೆಯ ನ್ನಾಗಿ ಗುರುತಿಸಿದ್ದಾರೆ. 2026ರ ವೇಳೆಗೆ ಸೆಮಿಕಂಡಕ್ಟರ್ ಚಿಪ್ ಮಾರುಕಟ್ಟೆಯು ವಾರ್ಷಿಕವಾಗಿ 5 ಲಕ್ಷ ಕೋಟಿ ರೂಪಾಯಿ ತಲುಪುವ ನಿರೀಕ್ಷೆ ಇದೆ. ದೇಶವನ್ನು ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕೇಂದ್ರವಾಗಿ ರೂಪಿಸಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಿಪ್ ತಯಾರಿಕೆಗಾಗಿ 10 ಶತಕೋಟಿ ಡಾಲರ್ (82,420 ಕೋಟಿ ರೂಪಾಯಿ) ಪೋ›ತ್ಸಾಹಕ ಯೋಜನೆಯನ್ನು ಸರ್ಕಾರ ಘೋಷಿಸಿದ್ದು, ಯೋಜನೆಯ ವೆಚ್ಚದ ಶೇಕಡಾ 50ರವರೆಗೆ ಹಣಕಾಸಿನ ಬೆಂಬಲ ನೀಡುವುದಾಗಿ ಪ್ರಕಟಿಸಿದೆ.

ಅಮೆರಿಕದ ಬಳಿ ಇರುವ ಕೆಲವು ಉನ್ನತ ತಂತ್ರಜ್ಞಾನಗಳನ್ನು ಪಡೆದುಕೊಂಡು ಮಿಲಿಟರಿ ಉಪಕರಣಗಳಲ್ಲಿ ಬಳಸುವುದು ಚೀನಾದ ತಂತ್ರವಾಗಿದೆ. ಇಂತಹ ತಂತ್ರಜ್ಞಾನವನ್ನು ಚೀನಾಕ್ಕೆ ಮಾರಾಟ ಮಾಡುವುದನ್ನು ರಫ್ತು ನಿಯಂತ್ರಣಗಳ ಮೂಲಕ ನಿಷೇಧಿಸುತ್ತೇವೆ. | ಗಿನಾ ರೈಮಂಡೊ, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ

ಮೂರು ಕಂಪನಿಗಳಿಂದ ಅರ್ಜಿ

ವೇದಾಂತ-ಫಾಕ್ಸ್​ಕಾನ್ ಜಂಟಿ ಯೋಜನೆ; ಟವರ್ ಸೆಮಿಕಂಡಕ್ಟರ್ ಸಂಸ್ಥೆ ತಂತ್ರಜ್ಞಾನ ಪಾಲುದಾರಿಕೆಯೊಂದಿಗಿನ ಜಾಗತಿಕ ಒಕ್ಕೂಟವಾದ ಐಎಸ್​ಎಂಸಿ ಮತ್ತು ಸಿಂಗಾಪುರ ಮೂಲದ ಐಜಿಎಸ್​ಎಸ್ ವೆಂಚರ್ಸ್ ಈ ಮೂರು ಕಂಪನಿಗಳು ಕಳೆದ ವರ್ಷ ಪೋ›ತ್ಸಾಹ ಯೋಜನೆಯ ಅಡಿಯಲ್ಲಿ ಚಿಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಅರ್ಜಿ ಸಲ್ಲಿಸಿದ್ದವು. ವೇದಾಂತ ಕಂಪನಿಯು ಮೋದಿಯವರ ತವರು ರಾಜ್ಯವಾದ ಗುಜರಾತ್​ನಲ್ಲಿ ಉತ್ಪಾದನೆ ಘಟಕ ಸ್ಥಾಪಿಸಲು ಉದ್ದೇಶಿಸಿದ್ದರೆ, ಐಎಸ್​ಎಂಸಿ ಮತ್ತು ಐಜಿಎಸ್​ಎಸ್ ಕಂಪನಿಗಳು ತಲಾ 3 ಶತಕೋಟಿ ಡಾಲರ್ ವೆಚ್ಚದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಉತ್ಪಾದನೆ ಘಟಕಗಳನ್ನು ಸ್ಥಾಪಿಸಲು ಯೋಜಿಸಿವೆ.

ಭಾರತ ಅಮೆರಿಕ ಒಪ್ಪಂದ

ಸೆಮಿಕಂಡಕ್ಟರ್ ಚಿಪ್ ತಯಾರಿಕಾ ಕ್ಷೇತ್ರದಲ್ಲಿ ಖಾಸಗಿ ವಲಯದ ಸಹಕಾರವನ್ನು ಹೆಚ್ಚಿಸುವ ಆರಂಭಿಕ ಒಪ್ಪಂದಕ್ಕೆ ಭಾರತ ಮತ್ತು ಅಮೆರಿಕೆ ಕೆಲ ದಿನಗಳ ಹಿಂದೆ ಸಹಿ ಹಾಕಿವೆ. ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಭಾರತದಲ್ಲಿ ಸೂಕ್ತ ಪರಿಸರವನ್ನು ಅಭಿವೃದ್ಧಿಪಡಿಸುವ ಹಾಗೂ ಉಭಯ ದೇಶಗಳ ನಡುವಿನ ವ್ಯಾಪಾರ ಸುಗಮಗೊಳಿಸುವ ಉದ್ದೇಶ ಈ ಒಪ್ಪಂದದಲ್ಲಿದೆ. ಅಮೆರಿಕದ ಚಿಪ್ ಮತ್ತು ವಿಜ್ಞಾನ ಕಾಯ್ದೆ ಹಾಗೂ ಭಾರತದ ಸೆಮಿಕಂಡಕ್ಟರ್ ಮಿಷನ್ ಹಿನ್ನೆಲೆಯಲ್ಲಿ ಸಹಯೋಗದ ಕಾರ್ಯವಿಧಾನವನ್ನು ರೂಪಿಸುವ ಕುರಿತು ರ್ಚಚಿಸಲಾಗಿದೆ. ಅಮೆರಿಕದ ಸೆಮಿಕಂಡಕ್ಟರ್ ಉದ್ಯಮಕ್ಕೆ ಧನಸಹಾಯವನ್ನು ಹೆಚ್ಚಿಸಲು 2022ರಲ್ಲಿ ಅಧ್ಯಕ್ಷ ಜೋ ಬೈಡೆನ್ ಅವರು ಚಿಪ್ ಮತ್ತು ವಿಜ್ಞಾನ ಕಾಯ್ದೆಗೆ ಸಹಿ ಹಾಕಿದ್ದಾರೆ.

ಮತ್ತೆ ಅರ್ಜಿ ಆಹ್ವಾನ: ಚಿಪ್ ತಯಾರಿಕೆ ಪೋ›ತ್ಸಾಹ ಕ್ಕಾಗಿ ಕಂಪನಿಗಳಿಂದ ಅರ್ಜಿಗಳನ್ನು ಮತ್ತೆ ಆಹ್ವಾನಿಸಲಾಗುವುದು ಎಂದು ಕೇಂಧ್ರ ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಮುಂದಿನ ವರ್ಷ ಡಿಸೆಂಬರ್​ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಹಿಂದಿನ ಬಾರಿ ಕೇವಲ 45 ದಿನಗಳ ಕಾಲಾವಕಾಶ ನೀಡಲಾಗಿತ್ತು.

ಆಶಾದಾಯಕ ಬೆಳವಣಿಗೆ

ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್ ಸೇರಿದಂತೆ ಆಧುನಿಕ ತಂತ್ರಜ್ಞಾನ ಬಳಸುವ ಎಲ್ಲ ಉತ್ಪನ್ನಗಳಿಗೆ ಸೆಮಿಕಂಡಕ್ಟರ್ ಚಿಪ್ ಅತ್ಯಗತ್ಯವಿದೆ. ಆದರೆ, ಸಂಕೀರ್ಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಚಿಪ್ ತಯಾರಿಕೆ ಸುಲಭದ ಸಂಗತಿಯಲ್ಲ. ಇದರ ತಯಾರಿಕೆಯಲ್ಲಿ ಕೆಲವೇ ದೇಶಗಳ ಪಾರಮ್ಯವಿದೆ. ಈ ಕ್ಷೇತ್ರದಲ್ಲಿ ಭಾರತ ಇನ್ನೂ ಅಂಬೆಗಾಲಿಡುತ್ತಿದೆ. ಹೀಗಾಗಿಯೇ ದೇಶವನ್ನು ಚಿಪ್ ಪವರ್ ಹೌಸ್ ಆಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಗೆ ಅನುಗುಣವಾಗಿ ಸರ್ಕಾರವು ಪೋ›ತ್ಸಾಹಕ ಪ್ಯಾಕೇಜ್ ಪ್ರಕಟಿಸಿದೆ. ಆದರೀಗ, ಸೆಮಿಕಂಡಕ್ಟರ್ ತಯಾರಿಕೆಯಂತಹ ಮಹತ್ವದ ಕ್ಷೇತ್ರಗಳಲ್ಲಿ ಸರಕು ಮತ್ತು ಸೇವೆಗಳ ಗುಣಮಟ್ಟವನ್ನು ಅಭಿವೃದ್ಧಿಪಡಿಸಲು ಮತ್ತು ಕಾರ್ವಿುಕರಿಗೆ ತರಬೇತಿ ನೀಡಲು ಅಮೆರಿಕವು ಮುಂದಾಗಿರುವುದು ಆಶಾದಾಯಕ ಸಂಗತಿ.