2021-22ನೇ ಸಾಲಿನಿಂದ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ವ್ಯಾಪ್ತಿಗೆ ಒಳಪಡುವ ಪದವಿ ಕಾಲೇಜುಗಳಲ್ಲಿ ನಾಲ್ಕು ವರ್ಷದ ಪದವಿ ಕೋರ್ಸಗಳನ್ನು ಆರಂಭಿಸಲು ಸರ್ಕಾರ ಚಿಂತನೆ ನಡೆಸಿದೆ. ಇದನ್ನು ನೂತನ ರಾಷ್ಟ್ರೀಯ ನೀತಿಯ ಶಿಫಾರಸಿನಂತೆ ಆರಂಭಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿದ್ದಾರೆ. ಈ ಚಿಂತನೆ ಸ್ವಾಗತಾರ್ಹವಾದರೂ ಕೋವಿಡ್ ಪರಿಸ್ಥಿತಿಯಿಂದ ಇನ್ನೂ ಜನ ಚೇತರಿಸಿಕೊಳ್ಳದಿರುವಾಗ ಈ ಹೊಸ ನೀತಿಯನ್ನು ಪಾಲಿಸುವುದು ಕೆಲವು ಗೊಂದಲಗಳನ್ನು ಉಂಟುಮಾಡಬಹುದು. ಕಾಲೇಜುಗಳು ಇದಕ್ಕೆ ಪೂರ್ವಸಿದ್ಧತೆಯಲ್ಲಿ ತೊಡಗಬೇಕು. ಹಾಗಾಗಿ ಕನಿಷ್ಠ ಒಂದು ವರ್ಷವಾದರೂ ಅಂತರ ಇರಲೇಬೇಕಾಗುತ್ತದೆ. ಬಹು ಮುಖ್ಯವಾಗಿ ಪಠ್ಯಕ್ರಮವನ್ನು ಅಳವಡಿಸುವುದೇ ದೊಡ್ಡ ಕೆಲಸ. ಈ ಕುರಿತು ರಚಿಸಿರುವ ಸಮಿತಿಗೆ ಜುಲೈ 15ರ ಒಳಗೆ ವರದಿ ನೀಡಲು ಸೂಚಿಸಿರುತ್ತಾರೆ ಸರಿ, ಅದರೆ ಇಲ್ಲಿ ಭಾಷಾ ವಿಷಯಗಳನ್ನಷ್ಟೇ ಅಲ್ಲದೆ ಇತರ ಐಚ್ಛಿಕ ವಿಷಯಗಳನ್ನು ಮನದಲ್ಲಿಟ್ಟು ಸಿದ್ಧತೆಗೊಳಿಸಬೇಕು ಎಂಬುದನ್ನು ಮರೆಯುವಂತಿಲ್ಲ. ಈಗಿನ ಸಿಲಬಸ್ಗಳನ್ನು ಪರಾಮಶಿಸಿ, ಬದಲಾಗಬೇಕಾಗಿರುವ, ಹೊಸದಾಗಿ ಅಳವಡಿಸಬೇಕಾದ ವಿಷಯಗಳ ಕೂಲಂಕಷ ಚರ್ಚೆಗಳಾಗಬೇಕು. ಇದಕ್ಕಾಗಿ ಶಿಕ್ಷಣ ತಜ್ಞರ ತಂಡವನ್ನು ಮೊದಲು ನೇಮಿಸಿ ಹೊಸ ಪಠ್ಯಕ್ರಮ ವಿದ್ಯಾರ್ಥಿಗಳಿಗೆ ಎಷ್ಟರ ಮಟ್ಟಿಗೆ ಉಪಯುಕ್ತ ಅಲ್ಲದೆ ಪ್ರಸ್ತುತ ಕಾಲಕ್ಕೆ ಪಠ್ಯವನ್ನು ಯಾವ ಹಂತದಲ್ಲಿ ಸಿದ್ಧತೆಗೊಳಿಸಬೇಕು ಎಂಬೆಲ್ಲ ವಿಚಾರಗಳ ಬಗ್ಗೆ ಚರ್ಚೆಗಳಾಗಬೇಕಿದೆ. ಈ ಹೊಸ ಪದ್ಧತಿಯಲ್ಲಿ ಬೋಧನಾ ಕ್ರಮವನ್ನು ಬದಲಾಯಿಸುವ ಅವಶ್ಯಕತೆ ಇದೆ. ಈಗಿರುವ ಕೆಲವು ಸೆಮಿಸ್ಟರ್ಗಳು ಪರೀಕ್ಷೆಗಳ ಭಾಗ್ಯವನ್ನೇ ಕಂಡಿಲ್ಲದಿರುವಾಗ ಹೊಸ ಯೋಜನೆಗಳು ಆತುರವಾಗಿ ಅನುಷ್ಠಾನಗೊಳ್ಳುವುದು ಸೂಕ್ತವಲ್ಲ. ಇದಕ್ಕೂ ಮೊದಲು ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ, ಉಪನ್ಯಾಸಕರ ಕೊರತೆ ಮತ್ತು ಕಾರ್ಯಭಾರ ಇವುಗಳನ್ನು ಪರಿಶೀಲಿಸುವ ಜರೂರಿದೆ.
ಏಕಾಏಕಿ ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸುವುದಾದರೆ ಈ ಎಲ್ಲ ತೊಡಕುಗಳು ಎದುರಾಗುವ ಸಾಧ್ಯತೆಗಳಿವೆ. ತರಾತುರಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಂಡು ಹಲವು ಸಮಸ್ಯೆ-ಗೊಂದಲಗಳನ್ನು ಎದುರಿಸುವ ಬದಲಾಗಿ ಮುಂದಿನ ವರ್ಷ ಅಂದರೆ 2022-23ಕ್ಕೆ ವ್ಯವಸ್ಥಿತ ರೀತಿಯಲ್ಲಿ ನಾಲ್ಕು ವರ್ಷದ ಪದವಿಯನ್ನು ಜಾರಿಗೊಳಿಸಬೇಕು. ಅಷ್ಟರಲ್ಲಿ ಪಠ್ಯಪುಸ್ತಕ ಮುದ್ರಣ, ಉಪನ್ಯಾಸಕರ ಕೊರತೆ, ಸ್ಮಾರ್ಟ್ಕ್ಲಾಸ್ನಂತಹ ಹೊಸ ತಂತ್ರಜ್ಞಾನ ಮತ್ತು ಕಲಿಕೆಗೆ ಇರುವ ಸೌಲಭ್ಯಗಳ ಕೊರತೆ ನೀಗಿಸಿ ಹೆಜ್ಜೆ ಇಟ್ಟಲ್ಲಿ ನಿರಾಳವಾಗಿ ಶೈಕ್ಷಣಿಕ ವರ್ಷವನ್ನು ಪ್ರಾರಂಭಿಸಬಹುದು. ಬೋಧನೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬಹುದು. ಸರ್ಕಾರ ಪುನರ್ ಪರಿಶೀಲನೆ ನಡೆಸಲಿ.
| ವಿ.ಶ್ರೀರಾಮ್ ವಾಣಿಜ್ಯ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕರು, ಬೆಂಗಳೂರು