ಕ್ರಿ.ಶ.12ನೆಯ ಶತಮಾನದ ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ದೊಡ್ಡ ಚಳವಳಿಯನ್ನೇ ಎಬ್ಬಿಸಿದರು. ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ ಮೊದಲಾದ ಬದಲಾವಣೆಗಳನ್ನು ಅಂದಿನ ಕಾಲದಲ್ಲಿ ಕಾಣುತ್ತೇವೆ. ಇದಕ್ಕೆಲ್ಲ ಮೂಲ ಭದ್ರಬುನಾದಿ ಹಾಕಿದವರು ದೇವರ ದಾಸಿಮಯ್ಯನವರು. ಇವರು ಬಸವೇಶ್ವರರಿಗಿಂತಲೂ 140 ವರ್ಷಗಳ ಪೂರ್ವದಲ್ಲಿ ಮಹಾಶಿವಶರಣರಾಗಿದ್ದರು. ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ದೇವರ ದಾಸಿಮಯ್ಯನವರಿಂದ ವಚನ ಸಾಹಿತ್ಯವು ಪ್ರಾರಂಭಗೊಂಡು, ಹತ್ತೊಂಬತ್ತನೆಯ ಶತಮಾನದ ಎಡೆಯೂರು ಸಿದ್ಧಲಿಂಗೇಶ್ವರರವರೆಗೆ ಬೆಳೆದು ಬಂದಿರುವುದನ್ನು ಕಾಣುತ್ತೇವೆ. ವಚನವೆಂಬ ಮಗುವಿಗೆ ಹೆತ್ತ ತಂದೆ ದಾಸಿಮಯ್ಯನವರಾದರೆ, ಅದನ್ನು ರಕ್ಷಿಸಿ ಪೋಷಣೆ ಮಾಡಿದವರು ಬಸವಾದಿ ಶರಣರು. ಅದನ್ನು ಪುನರುಜ್ಜೀವಗೊಳಿಸಿದ್ದು ಎಡೆಯೂರು ಸಿದ್ಧಲಿಂಗೇಶ್ವರರು. ಇದನ್ನು ಅಧ್ಯಯನ ದೃಷ್ಟಿಯಿಂದ ವಿದ್ವಾಂಸರು ಬಸವಪೂರ್ವಯುಗ, ಬಸವಯುಗ ಮತ್ತು ಬಸವೋತ್ತರ ಯುಗವೆಂದು ಕರೆದಿದ್ದಾರೆ.
ಹಲವಾರು ಸಾಧು-ಸಂತರು, ಶರಣ-ಶರಣೆಯರ ಆಡುಂಬೋಲವೆನಿಸಿಕೊಂಡಿರುವ ಕಲಬುರ್ಗಿ ಜಿಲ್ಲೆ ಸಾಹಿತ್ಯ ಕ್ಷೇತ್ರದಲ್ಲೂ ಕೆಲವು ಪ್ರಥಮಗಳನ್ನು ಸ್ಥಾಪಿಸಿದೆ. ಕನ್ನಡ ಸಾಹಿತ್ಯದ ಉಪಲಬ್ಧ ಕೃತಿಗಳಲ್ಲಿ ಈಗ ತಿಳಿದಿರುವ ಮಟ್ಟಿಗೆ ಅತ್ಯಂತ ಪ್ರಾಚೀನವಾದದ್ದು ಕವಿರಾಜ ಮಾರ್ಗ. ಅದು ನಿರ್ವಣಗೊಂಡಿದ್ದು ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಮಳಖೆೇಡದಲ್ಲಿ. ಮಳಖೇಡ ಗ್ರಾಮ ಇಂದು ಚಿಕ್ಕ ಹಳ್ಳಿಯಾದರೂ ಹಿಂದೆ ಅದು ಕರ್ನಾಟಕವನ್ನು ಏಕ ಛತ್ರಾದಿಪತಿಗಳಾಗಿ ಆಳಿದ ರಾಷ್ಟ್ರಕೂಟರ ರಾಜಧಾನಿಯಾಗಿತ್ತು. ಎರಡನೆಯದಾಗಿ, ವಿಶ್ವಸಾಹಿತ್ಯಕ್ಕೆ ಕನ್ನಡಿಗರ ವಿಶಿಷ್ಟ ಕಾಣಿಕೆಯೆಂದು ಪಂಡಿತರಿಂದ ಮಾನ್ಯತೆ ಪಡೆದ ವಚನಸಾಹಿತ್ಯದ ಆದ್ಯಪ್ರವರ್ತಕ ಜೇಡರ (ದೇವರ) ದಾಸಿಮಯ್ಯ ಕಲಬುರಗಿ ಜಿಲ್ಲೆಯ ಸುರಪುರ ತಾಲೂಕಿನ ಮುದನೂರು ಗ್ರಾಮದವರು. ಕಲಬುರ್ಗಿ ಜಿಲ್ಲೆ ಕನ್ನಡ ಸಾಹಿತ್ಯಕ್ಕೆ ತವರುಮನೆ ಎನಿಸಿಕೊಂಡರೆ ವಚನ ಸಾಹಿತ್ಯಕ್ಕೆ ತೂಗು ತೊಟ್ಟಿಲು.
ಸುಲಿದ ಬಾಳಿಯ ಹಣ್ಣಿನಂದದಿ/ ಕಳೆದ ಸಿಗುರಿನ ಕಬ್ಬಿನಂದದಿ/ ಅಳೆದ ಉಷ್ಣದ ಹಾಲಿನಂದದಿ ಸುಲಭವಾಗಿರುವ/ ಲಲಿತವಹ ಕನ್ನಡದ ನುಡಿಯಲಿ / ತಿಳಿದು ತನ್ನೊಳು ತನ್ನ ಮೋಕ್ಷವ/ ಗಳಿಸಿಕೊಂಡರೆ ಸಾಲದ ಸಂಸ್ಕೃತದಲಿನ್ನೇನು?
ಸಂಸ್ಕೃತ ಭಾಷೆಗೆ ತಿಲಾಂಜಲಿಯನ್ನಿತ್ತು ಕನ್ನಡ ಭಾಷೆಗೆ ಆದ್ಯತೆ ನೀಡುವ ಕಾಲ ಅದಾಗಿತ್ತು. ಅಂತಹ ಜನಸಾಮಾನ್ಯರು ಆಡುವ ಕನ್ನಡ ಭಾಷೆಯಲ್ಲಿ ವಚನಗಳನ್ನು ರಚಿಸಿ ಅಂತರಂಗದ ಅನುಭವವನ್ನು ಬಿಚ್ಚಿಟ್ಟರು ನಮ್ಮ ಶಿವಶರಣರು. ಈ ಪರಂಪರೆಯಲ್ಲಿ ಮೊಟ್ಟ ಮೊದಲಿಗರು ಮುದನೂರಿನ ಜೇಡರ ದಾಸಿಮಯ್ಯನವರು. ವಿಪುಲವಾದ ವಚನ ಸಾಹಿತ್ಯ ಸಾಗರಕ್ಕೆ ಮೂಲಸೆಲೆ ಜೇಡರ ದಾಸಿಮಯ್ಯ. ಈತ ಬಸವಪೂರ್ವಯುಗದವನು. ಶೈವ, ವೀರಶೈವವಾಗಿ ರೂಪುಗೊಳ್ಳುತ್ತಿದ್ದ ಸಂಧಿಕಾಲದಲ್ಲಿದ್ದವನು. ಹೀಗಾಗಿ, ಈತನ ವಚನಗಳಲ್ಲಿ ವೀರಶೈವದ ಸುಳಿಯನ್ನು ಗುರುತಿಸಬಹುದು. ಅಲ್ಲದೆ, ಮುಂದೆ ಬಂದ ಬಸವಾದಿ ವಚನಕಾರರಿಗೆ ಈತನ ವಚನಗಳು ಸ್ಪೂರ್ತಿ ನೀಡಿವೆ.
ಜನನ ಮತ್ತು ಸ್ಥಳ: ದೇವರ ದಾಸಿಮಯ್ಯನವರು ಕ್ರಿ.ಶ. ಹತ್ತನೆಯ ಶತಮಾನದ ಉತ್ತರಾರ್ಧದಲ್ಲಿ ಶ್ರೀ ರಾಮನಾಥನ ಭಕ್ತರಾದ ಶಂಕರಿ ಮತ್ತು ರಾಮಯ್ಯರೆಂಬ ದಂಪತಿಗಳ ಪವಿತ್ರ ಉದರದಲ್ಲಿ ಚೈತ್ರ ಮಾಸದ ಶುದ್ಧ ಪಂಚಮಿಯ ದಿನದಂದು ಜನಿಸಿದರು. ಇವರನ್ನು ದಾಸ, ದಾಸಯ್ಯ, ದಾಸಿಮಯ್ಯ, ದಾಸಿದೇವ, ದೇವದಾಸ, ಜೇಡರದಾಸಿಮಯ್ಯ, ದೇವರದಾಸಿಮಯ್ಯ, ದಾಸಿಮಾರ್ಯ ಹೀಗೆ ಹಲವು ಹೆಸರುಗಳಿಂದ ಕರೆಯುತ್ತಾರೆ. ಇವರು ದೇವಾಂಗ ಜನಾಂಗದ ಮೂಲಪುರುಷನಾದ ದೇವಲನ ಏಳನೆಯ ಅವತಾರ ಎಂದು ಹಲವರು ಒಪ್ಪಿಕೊಂಡಿದ್ದಾರೆ. ವಿದ್ಯಾಧರ, ಪುಷ್ಪದಂತ, ಬೇತಾಳ, ವರರುಚಿ, ಚಿತ್ರಯೋಗಿ, ದೇವಶಾಲಿ, ದೇವದಾಸ ಎಂದು ಏಳು ಅವತಾರಗಳನ್ನು ಹೇಳಲಾಗುತ್ತದೆ. ಮದನೂರಿನಲ್ಲಿರುವ ರಾಮತೀರ್ಥ, ಲಕ್ಷಣತೀರ್ಥ, ಸಕ್ಕರೆತೀರ್ಥ, ಮರಳುತೀರ್ಥ ಪಾಂಡವತೀರ್ಥ, ಹಾಲುತೀರ್ಥ ಮತ್ತು ಸಂಗಮತೀರ್ಥಗಳು ದೇವಾಂಗನ ಸಪ್ತಾವತಾರಗಳ ದ್ಯೋತಕವೇ ಆಗಿವೆ.
ಬಾಲ್ಯ ಮತ್ತು ವಿದ್ಯಾಭ್ಯಾಸ: ದೇವರ ದಾಸಿಮಯ್ಯನವರು ಬಾಲ್ಯವನ್ನು ಆಟ, ಪಾಠ, ಧ್ಯಾನ, ಪೂಜೆಗಳಲ್ಲಿ ಮುದನೂರಿನಲ್ಲಿ ಕಳೆದರು. ಅಲ್ಲಿ ದೊರೆತ ಅಲ್ಪ ವಿದ್ಯೆಯಿಂದ ಅತೃಪ್ತರಾಗಿ ಜ್ಞಾನದ ತೃಷೆಯನ್ನು ಇಂಗಿಸುವ ಸಲುವಾಗಿ ಅಂದು ಸುಪ್ರಸಿದ್ಧ ವಿದ್ಯಾಕೇಂದ್ರವಾಗಿದ್ದ ಶ್ರೀಶೈಲಕ್ಕೆ ಹೋದರು. ಅಲ್ಲಿ ಸೂರ್ಯಸಿಂಹಾಸನ ಪೀಠದ ಮೂರನೆಯ ಜಗದ್ಗುರು ಶ್ರೀ ಚಂದ್ರಗಂಡ ಶಿವಾಚಾರ್ಯರಿಂದ ಶೈವದೀಕ್ಷೆ ಪಡೆದು ಆಧ್ಯಾತ್ಮಿಕ ಜ್ಞಾನ ಸಂಪಾದಿಸಿಕೊಂಡರು. ದಾಸಿಮಯ್ಯನವರು ಆತ್ಮತೃಪ್ತಿಗೆ ಬೇಕಾದ ಜ್ಞಾನ ಸಂಪಾದಿಸಿಕೊಂಡರು. ಸಂಸ್ಕೃತ, ಕನ್ನಡ ಮೊದಲಾದ ಭಾಷೆ ಬಲ್ಲವರಾಗಿ ಗುರುವಿನ ಆದೇಶದಂತೆ, ಪುಣ್ಯಕ್ಷೇತ್ರಗಳನ್ನು ದರ್ಶನಗೈಯುತ್ತ, ಜಿಜ್ಞಾಸುಗಳಿಗೆ ಸನ್ಮಾರ್ಗ ತೋರುತ್ತ ಶರಣ (ವೀರಶೈವ) ತತ್ವ್ತ ಪ್ರಚಾರ ಮಾಡಿದರು. ಮಾರ್ಗಮಧ್ಯದಲ್ಲಿ ಕುಲೀನರು, ದುಷ್ಟರು ಇವರ ಮೇಲೆ ದಂಡೆತ್ತಿ ಬಂದರೂ ವಿಚಲಿತರಾಗದೆ ಅವರಿಗೆ
ನಾನೊಂದು ಸುರಗಿಯನೇನೆಂದು ಹಿಡಿವೆನು?/
ಏನ ಕಿತ್ತೇನನಿರಿವೆನು? / ಜಗವೆಲ್ಲಾ ನೀನಾಗಿಪ್ಪೆ ಕಾಣಾ! ರಾಮನಾಥ.
ಎಂದು ಸದ್ಬುದ್ಧಿಯ ಬೋಧನೆಗೈದು, ಪವಿತ್ರಾತ್ಮರನ್ನಾಗಿ, ಶಿಷ್ಟರನ್ನಾಗಿ ಮಾಡಿರುವ ಕೀರ್ತಿ, ಗೌರವ ಶರಣ ಸಂಪ್ರದಾಯದಲ್ಲಿ ಮೊಟ್ಟಮೊದಲು ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ.
ವಿವಾಹ: ದೇವರ ದಾಸಿಮಯ್ಯನವರು ಯೌವನಾವಸ್ಥೆ ಬಂದಾಗ ವಿವಾಹದ ಬಗ್ಗೆ ಆಸಕ್ತಿ ತೋರಿಸಲಿಲ್ಲ. ತಂದೆ-ತಾಯಿ, ಗುರು-ಹಿರಿಯರ ಒತ್ತಾಯಕ್ಕೆ ಮಣಿದು ಬಾಳಸಂಗಾತಿಗಾಗಿ ತಮ್ಮ ಮನದ ಇಚ್ಚೆಯಂತೆ ನಡೆಯುವ ಕನ್ಯಾರತ್ನವನ್ನು ಪಡೆಯಲು ಮರಳು ಮಿಶ್ರಿತ ಅಕ್ಕಿ ಮತ್ತು ಕಬ್ಬು ಜತೆಗೆ ಇಟ್ಟುಕೊಂಡು, ನೀರು ಮತ್ತು ಸೌದೆಯಿಲ್ಲದೆ ಅಡುಗೆ ಮಾಡಿ ಉಣಬಡಿಸಬೇಕೆಂಬ ಪರೀಕ್ಷೆಯೊಂದಿಗೆ ಅನೇಕ ಊರುಗಳನ್ನು ತಿರುಗುತ್ತ ನಡೆದರು. ಕೊನೆಗೆ ಅಫಜಲಪೂರ ತಾಲೂಕಿನ ಗೊಬ್ಬೂರು ಗ್ರಾಮದ ಮಲ್ಲಿನಾಥ ಮತ್ತು ಮಹಾದೇವಿಯವರ ಮಗಳಾದ ದುಗ್ಗಳೆ, ದಾಸಿಮಯ್ಯನವರೊಡ್ಡಿದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಬಾಳಸಂಗಾತಿಯಾದಳು. ದಾಸಿಮಯ್ಯನವರಿಗೆ ಬರೀ ಹೆಣ್ಣು ಬೇಕಾಗಿರಲಿಲ್ಲ ಒಲವಿನಕಣ್ಣು ಬೇಕಾಗಿತ್ತು. ಅಂತಹ ಸಹಧರ್ವಿುಣಿಗಾಗಿ ನೀರಿಲ್ಲದೆ ಅಡುಗೆ ಮಾಡಬೇಕೆಂಬ ಪರೀಕ್ಷೆ ಮುಂದಿಟ್ಟುಕೊಂಡು ಅರಸುತ್ತ ಬಂದಾಗ ದುಗ್ಗಳೆ ಅವರ ಪಾದೋದಕದಿಂದ ಅಡುಗೆ ಮಾಡಿ ಬಡಿಸಿ ಕೃತಾರ್ಥಳಾಗಿ ಸಹಧರ್ವಿುಣಿಯಾದಳು.
ಶರಣ ಸಂಪ್ರದಾಯದಲ್ಲಿ ಪತಿಯಿಂದ ಹೊಗಳಿಸಿಕೊಂಡ ಮೊಟ್ಟ ಮೊದಲನೆಯ ಸತಿ ದುಗ್ಗಳೆ. ಪತಿಗೆ ತಕ್ಕ ಸತಿಯಾಗಿ ಮುಂದಿನ ಶರಣೆಯರಿಗೆ ಮಹಾಸಾಧಿ್ವ ಶಿರೋಮಣಿಯಾಗಿದ್ದಾಳೆ. ಸತಿಪತಿಗಳಿಗಳಿಬ್ಬರೂ ಒಬ್ಬರಿಗೊಬ್ಬರು ಅರಿತುಕೊಂಡು ಅನ್ಯೋನ್ಯವಾಗಿದ್ದು ಸಂಸಾರವನ್ನು ಅಮೃತಮಯ ಮಾಡಿಕೊಂಡಿದ್ದರು. ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ /ಸತಿಪತಿಗಳೊಂದಾಗದವನ ಭಕ್ತಿ / ಅಮೃತದೊಳು ವಿಷ ಬೆರೆದಂತೆ ಕಾಣಾ! ರಾಮನಾಥ.
ಸಂಸಾರ ಶ್ರೇಷ್ಠವೋ? ಸಂನ್ಯಾಸ ಶ್ರೇಷ್ಠವೋ?: ಒಮ್ಮೆ ದಾಸಿಮಾರ್ಯರು ಬಟ್ಟೆ ನೇಯುತ್ತಿರುವಾಗ ಇವರಲ್ಲಿಗೆ ಯುವಕರಿಬ್ಬರು ಬಂದು ಗೃಹಸ್ಥಾಶ್ರಮ ಶ್ರೇಷ್ಠವೋ? ಅಥವಾ ಸಂನ್ಯಾಸಾಶ್ರಮ ಶ್ರೇಷ್ಠವೋ? ಎಂದು ಪ್ರಶ್ನಿಸಿದರು. ಈ ಪ್ರಶ್ನೆಗೆ ದಾಸಿಮಯ್ಯನವರು ಮೌಖಿಕವಾಗಿ ಉತ್ತರಕೊಡದೆ, ಪ್ರಯೋಗಾತ್ಮಕ ಮತ್ತು ಪ್ರತ್ಯಕ್ಷ ನಿದರ್ಶನಗಳ ಮೂಲಕ ಉತ್ತರಿಸುವರು. ಬೆಳಕಿದ್ದರೂ, ಎಳೆ ಕತ್ತರಿಸಿ ಹೋದುದ್ದರಿಂದ ದೀಪವ ತರಲೂ ಮತ್ತು ಊಟಕ್ಕೆ ಕುಳಿತಾಗ ನೆನ್ನೆ ಮಾಡಿದ ಅಥವಾ ಆರಿದ ಅಂಬಲಿ ಸುಡುತ್ತಿದೆಂದು ಗಾಳಿ ಹಾಕಲು ಹೆಂಡತಿಗೆ ಹೇಳಿದಾಗ ಅದಕ್ಕೆ ಆ ಸತಿಸಾಧಿ್ವುಣಿ ಮರುಮಾತನಾಡದೆ ದೀಪವ ತಂದು ಕೊಡುವಳು ಮತ್ತು ಗಾಳಿಯನ್ನೂ ಹಾಕುವಳು. ಪತಿಯ ಮಾತಿಗೆ ಚಕಾರವೆತ್ತದ ಇಂತಹ ಸತಿಯಿದ್ದರೆ ಸಂಸಾರ ಶ್ರೇಷ್ಠ, ವಿರುದ್ಧವಾಗಿ ನಡೆದರೆ ಸಂನ್ಯಾಸವೇ ಶ್ರೇಷ್ಠವೆಂದರು.
ದೇವರ ದಾಸಿಮಯ್ಯನವರ ಕೀರ್ತಿ ದಶದಿಕ್ಕುಗಳಿಗೆ ಹರಡಿತ್ತು. ಅಂದು ಆಂಧ್ರಪ್ರದೇಶದ ಪೊಟ್ಟಲಕೆರೆಯನ್ನು ಚಾಲುಕ್ಯ ಚಕ್ರ›ವರ್ತಿ ಮೊದಲನೆಯ ಜಯಸಿಂಹನು ಕ್ರಿ.ಶ. 1008-1042ವರೆಗೆ ವೈಭವದಿಂದ ರಾಜ್ಯವಾಳಿದನು. ಅವನ ಹೆಂಡತಿ ಸುಗ್ಗಲಾದೇವಿಯು ದಾಸಿಮಯ್ಯನವರ ಶಕ್ತಿ, ಮಹಿಮೆಯನ್ನು ಕೇಳಿ ಅವರನ್ನು ತನ್ನ ಗುರುವನ್ನಾಗಿ ಸ್ವೀಕರಿಸಿ ಶೈವದೀಕ್ಷೆ ಪಡೆದರು. ರಾಜನು ಜೈನನಾದುದ್ದರಿಂದ ಇದನ್ನು ವಿರೋಧಿಸುತ್ತಾನೆ. ಆಗ ಸುಗ್ಗಲಾದೇವಿ, ತಮ್ಮ ಗುರುವಾದ ದಾಸಿಮಯ್ಯನವರನ್ನು ಜೈನರು ವಾದದಲ್ಲಿ ಗೆದ್ದರೆ ತಾನು ಜೈನಳಾಗುವುದಾಗಿ, ಇಲ್ಲದಿದ್ದರೆ ರಾಜ ಇತರ ಜೈನರೊಡನೆ ಶಿವದೀಕ್ಷೆ ಪಡೆಯಬೇಕೆಂದು ಷರತ್ತನ್ನು ಹಾಕುತ್ತಾಳೆ. ಈ ನಿಮಿತ್ತವಾಗಿ ಅವಳು ದಾಸಿಮಯ್ಯನವರಿಗೆ ಪೊಟ್ಟಲಕೆರೆಗೆ ಆಮಂತ್ರಿಸುವಳು. ಆಗ ಜೈನರಿಗೂ, ದಾಸಿಮಯ್ಯನವರಿಗೂ ಧಾರ್ವಿುಕ ವಿಷಯದ ಮೇಲೆ ಚರ್ಚೆ ನಡೆಯುತ್ತದೆ. ಈಶ್ವರನ ಅಸ್ತಿತ್ವದ ಬಗೆಗೆ ಜೈನರು ಪ್ರಶ್ನೆ ಮಾಡಿದಾಗ ದಾಸಿಮಯ್ಯನವರು ಈಶ್ವರನು ಸರ್ವತ್ರದಲ್ಲಿಯೂ ಇರುವನೆಂದು ಹೇಳುವರು. ವಾದದಲ್ಲಿ ಸೋತ ಜೈನರು ಅವರನ್ನು ಹೊಂಚು ಹಾಕಿ ಕೊಲ್ಲಬೇಕೆಂದು ಒಂದು ಘಟದಲ್ಲಿ ಸರ್ಪವೊಂದನ್ನು ಮುಚ್ಚಿ ಇದರಲ್ಲಿ ನಿಮ್ಮ ಈಶ್ವರ ಇದ್ದಾನೆಯೇ? ಎಂದು ಪ್ರಶ್ನಿಸುತ್ತಾರೆ. ಸರ್ವತ್ರ ಈಶ್ವರನಿದ್ದಾನೆಂದು ಸಾಧಿಸುತ್ತಿದ್ದ ದೇವರ ದಾಸಿಮಯ್ಯನವರು ಈ ಘಟದಲ್ಲಿಯೂ ಈಶ್ವರನಿದ್ದಾನೆಂದು ಕೈ ಹಾಕಿ ತೆಗೆದಾಗ ಸರ್ಪವು ಲಿಂಗವಾಗಿ ಮಾರ್ಪಡುತ್ತದೆ. ಅದನ್ನು ಉತ್ತರೇಶ್ವರ ಲಿಂಗವೆಂದು ಹೆಸರಿನಿಂದ ಪೊಟ್ಟಲಿಕೆರೆಯಲ್ಲಿ ಪ್ರತಿಷ್ಠಾಪಿಸುತ್ತಾರೆ. ಅಲ್ಲಿದ್ದ ರಾಜನು ಶಿವದೀಕ್ಷೆ ಪಡೆಯುತ್ತಾನೆ. ಅಷ್ಟೆ ಅಲ್ಲದೆ, ಅಲ್ಲಿದ್ದ 700 ಜೈನ ಬಸದಿಗಳು ಮಂದಿರಗಳಾದವು ಮತ್ತು 20,000 ಜೈನರು ಶೈವರಾಗಿ ಮತಾಂತರ ಹೊಂದಿದರು.
ದೇವರ ದಾಸಿಮಯ್ಯನವರೇ ಜೇಡರ ದಾಸಿಮಯ್ಯನವರೆಂದು ಹಲವರ ವಾದ. ಇವರಿಬ್ಬರೂ ಬೇರೆ-ಬೇರೆ ಎಂಬುವುದು ಕೆಲವರ ಅಭಿಪ್ರಾಯ. ಓರ್ವ ಬಸವಣ್ಣನವರ ಹಿರಿಯ ಸಮಕಾಲಿನವರು, ಇನ್ನೋರ್ವ ಅವರಿಗಿಂತ ಒಂದುನೂರು ವರ್ಷ ಮೊದಲಿನವರು. ಓರ್ವ ಘಟಸರ್ಪದ ಪವಾಡದಿಂದ ಪ್ರಸಿದ್ದರಾಗಿದ್ದರೆ. ಇನ್ನೋರ್ವ ತವನಿಧಿ ಪವಾಡದಿಂದ ಪ್ರಸಿದ್ದರಾಗಿದ್ದಾರೆ. ಇವರಲ್ಲಿ ಒಬ್ಬ ವಚನಕಾರನಲ್ಲ, ಇನ್ನೋರ್ವ ವಚನಕಾರ. ಒಬ್ಬ ದೇವೂರು ಗ್ರಾಮದವ, ಇನ್ನೋರ್ವ ಮುದನೂರು ಗ್ರಾಮದವ. ಓರ್ವನ ಕಾಯಕ ನೇಯ್ಗೆಯದ್ದು, ಇನ್ನೋರ್ವನ ಕಾಯಕ ಗೊತ್ತಿಲ್ಲ. ಎಂಬ ಭಿನ್ನಾಭಿಪ್ರಾಯಗಳಿವೆ. ಆದರೆ, ಇವರಿಬ್ಬರೂ ಒಬ್ಬರೇ ಆಗಿದ್ದಾರೆ. ದಾಸಿಮಯ್ಯನವರು ನೇಯ್ಗೆಯ ಕಾಯಕ ಮಾಡುವುದರಿಂದ ಜೇಡನೆಂದು, ದೇವರನ್ನು ಆರಾಧಿಸಿ ತವನಿಧಿ ಪಡೆದುದ್ದರಿಂದ ದೇವರ ಎಂಬ ವಿಶೇಷಣ ಕಾಣುತ್ತೇವೆ.
ದೇವರ ದಾಸಿಮಯ್ಯನವರು ನಿರ್ಮಲನಾದ ಭಕ್ತಿಯಿಂದ ನೇಯ್ದ ವಸ್ತ್ರವನ್ನು ಶಿವನಿಗಿತ್ತು ತವನಿಧಿ ಪಡೆದ ಪವಾಡವು ಜನಜನಿತವಾಗಿದೆ. ಹದಿನಾಲ್ಕು ವರ್ಷಗಳವರೆಗೆ ನಿರಂತರವಾಗಿ ವಸ್ತ್ರವನ್ನು ನೇಯ್ದು ಅದನ್ನು ಮಾರುವುದಕ್ಕೆಂದು ಸಂತೆಗೆ ಒಯ್ದಾಗ ಎಲ್ಲರೂ ಉತ್ಸುಕತೆಯಿಂದ ನೋಡಿ ಆನಂದಿಸುತ್ತಾರೆ. ಆದರೆ, ಬೆಲೆ ಕಟ್ಟುವ ಶಕ್ತಿ ಯಾರಿಗೂ ಇರಲಿಲ್ಲ. ಬಂದು ನೋಡಿ ಹಿಂದಿರುಗುವರೇ ಹೊರತು ಯಾರಿಗೂ ಕೊಂಡುಕೊಳ್ಳುವ ಧೈರ್ಯವಿರಲಿಲ್ಲ. ಮರಳಿ ಮನೆಗೆ ತೆಗೆದುಕೊಂಡು ಬರುವಾಗ ದಾರಿಯಲ್ಲಿ ವೃದ್ಧ ಜಂಗಮನೊಬ್ಬನು ಚಳಿಯಿಂದ ನಡುಗುತ್ತ ಬಂದು ಹೊದೆಯಲು ವಸ್ತ್ರವನ್ನು ಕೇಳುತ್ತಾನೆ. ದಾಸಿಮಯ್ಯನವರು ತಮ್ಮಲ್ಲಿದ್ದ ಆ ಹೊಸ ವಸ್ತ್ರವನ್ನೇ ಹೊದ್ದುಕೊಳ್ಳಲು ಕೊಡುತ್ತಾರೆ. ಅದನ್ನು ತೆಗೆದುಕೊಂಡ ಆ ವೃದ್ಧ ಜಂಗಮನು ದಾಸಿಮಯ್ಯನವರ ಎದುರಿನಲ್ಲಿಯೇ ಅದನ್ನು ಹರಿದು ಹಾಕುತ್ತಾನೆ. ಅದನ್ನು ಶಾಂತಚಿತ್ತದಿಂದ ವೀಕ್ಷಿಸಿ ದಾಸಿಮಯ್ಯನವರ ದೃಢತೆಗೆ ಒಲಿದು ಈಶ್ವರನು ಪ್ರತ್ಯಕ್ಷನಾಗಿ ತವನಿಧಿ ದಯಪಾಲಿಸುತ್ತಾನೆ. ಅಂದಿನಿಂದ ದಾಸಿಮಯ್ಯನವರು ಜೇಡರ ಎಂಬ ಜಾತಿವಾಚಕ ಪದವನ್ನು ದೇವರ ಒಲುಮೆಗೆ ಪಾತ್ರರಾಗಿರುವುದರಿಂದ ದೇವರ ದಾಸಿಮಯ್ಯರೆಂದು ಈಶ್ವರನಿಂದ ತವನಿಧಿ ಪಡೆದುದಕ್ಕಾಗಿ ತವನಿಧಿಯ ದಾಸರೆಂದು ಪ್ರಸಿದ್ಧರಾದರು.
(ಲೇಖಕರು ಶ್ರೀ ಮುದನೂರು ಮಹಾಸಂಸ್ಥಾನ ಮಠ ಟ್ರಸ್ಟ್ (ರಿ) ಅಧ್ಯಕ್ಷರು, ಯಾದಗಿರಿ ಜಿಲ್ಲೆ)