ನಾಗೇಶ ಜಿ. ವೈದ್ಯ
ಸರ್ಕಾರಿ ವಲಯದ ಬ್ಯಾಂಕುಗಳು ಹಕ್ಕುದಾರರಿರದ 35,012 ಕೋಟಿ ರೂ. ಮೊತ್ತದ ಠೇವಣಿಯನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ವರ್ಗಾಯಿಸಿವೆ. ಈ ಮೊತ್ತ 10.24 ಕೋಟಿ ಖಾತೆಗಳಿಗೆ ಸೇರಿದೆ. ಇದು ವಿವಿಧ ಕಾರಣಗಳಿಂದಾಗಿ ಬ್ಯಾಂಕ್ ಗ್ರಾಹಕರು, ತಮ್ಮ ನಿಷ್ಕ್ರಿಯಗೊಂಡ ಖಾತೆಯಿಂದ ಹಿಂಪಡೆಯದ ಹಣ.
ಏನಿದು ಹಕ್ಕುದಾರರಿರದ ಖಾತೆ?: ಯಾವುದೇ ಬ್ಯಾಂಕಿನಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿನ ಕಾಲ ವ್ಯವಹಾರ ನಡೆಯದಿರುವ ಉಳಿತಾಯ ಅಥವಾ ಚಾಲ್ತಿ ಖಾತೆ ಹಾಗೂ ಅವಧಿ ಪೂರ್ಣಗೊಂಡ ನಂತರ ಹತ್ತು ವರ್ಷಗಳಾದರೂ ನಗದು ಮಾಡಿರದ ನಿಷ್ಕ್ರಿಯ ಠೇವಣಿಗಳನ್ನು ಹಕ್ಕುದಾರರಿರದ ಖಾತೆಯೆಂದು ಪರಿಗಣಿಸಲಾಗುತ್ತದೆ.
ಒಂದು ವರ್ಷ ಯಾವುದೇ ವಹಿವಾಟು ನಡೆಸದೇ ಖಾತೆಗಳು ನಿಷ್ಕ್ರಿಯಗೊಳ್ಳುತ್ತಿದ್ದಂತೆ ಬ್ಯಾಂಕುಗಳು, ರಿಸರ್ವ್ ಬ್ಯಾಂಕ್ ನೀಡಿರುವ ನಿರ್ದೇಶನದಂತೆ ಅಂಥ ಖಾತೆಗಳ ಗ್ರಾಹಕರು ಅಥವಾ ವಾರಸುದಾರರನ್ನು ಪತ್ತೆ ಹಚ್ಚಲು ವಿಶೇಷ ಜಾಗೃತಿ ಅಭಿಯಾನಗಳನ್ನು ಕಾಲ ಕಾಲಕ್ಕೆ ನಡೆಸುತ್ತವೆ. ಅವು ಸಫಲಗೊಳ್ಳದ ಪಕ್ಷದಲ್ಲಿ, ಹತ್ತು ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ನಿಷ್ಕ್ರಿಯವಾಗಿರುವ ಖಾತೆಗಳ ವಿವರ ಹಾಗೂ ಮೊತ್ತವನ್ನು ರಿಸರ್ವ್ ಬ್ಯಾಂಕಿಗೆ ವರ್ಗಾಯಿಸುತ್ತವೆ. ಆ ಮೊತ್ತ ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪಿಸಿರುವ ಶಿಕ್ಷಣ ಮತ್ತು ಜಾಗೃತಿ ನಿಧಿಗೆ ಜಮೆಯಾಗುತ್ತದೆ. ದೇಶದ ಗ್ರಾಹಕರ ಸಾಕ್ಷರತೆ ಮತ್ತು ತಿಳಿವಳಿಕೆ ಹೆಚ್ಚಿಸುವಂಥ ಕಾರ್ಯಗಳಿಗಾಗಿ, ಸಂಗ್ರಹವಾದ ಮೊತ್ತವನ್ನು ವಿನಿಯೋಗಿಸುತ್ತದೆ ರಿಸರ್ವ್ ಬ್ಯಾಂಕ್. ಯಾವುದೇ ಗ್ರಾಹಕ ತನ್ನ ಖಾತೆಯ ಹಣ ಹಿಂಪಡೆಯಲು ಬಂದಾಗ, ಬ್ಯಾಂಕುಗಳು ಅದೇ ನಿಧಿಯಿಂದ ಬಡ್ಡಿ ಸಮೇತ ಹಿಂದೆ ಪಡೆದು, ಗ್ರಾಹಕರಿಗೆ ಮರಳಿಸುತ್ತವೆ.
ಆಯಾ ಬ್ಯಾಂಕುಗಳು ಹಕ್ಕುದಾರರಿರದ ಖಾತೆಗಳ ವಿವರವನ್ನು ಪಡೆಯಲು ಜಾಲತಾಣಗಳಲ್ಲಿ ಕೊಂಡಿಯನ್ನು ನೀಡಿವೆ. ಅಲ್ಲಿ ಕೇಳಲಾದ ಮಾಹಿತಿಗಳನ್ನು ನೀಡಿ, ಆ ಬ್ಯಾಂಕಿನಲ್ಲಿ ಹಕ್ಕುದಾರರಿರದ ಖಾತೆಯ ಪಟ್ಟಿಯಲ್ಲಿನ ನಿಮ್ಮ ಖಾತೆಯನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಒಮ್ಮೆ ನಿಮ್ಮ ಅಥವಾ ನಿಮ್ಮವರ ಖಾತೆಗಳು ಇರುವುದು ಖಾತ್ರಿಯಾದಲ್ಲಿ, ಆ ಬ್ಯಾಂಕಿಗೆ ತೆರಳಿ ಅರ್ಜಿ ಹಾಗೂ ಪಾಸ್ಬುಕ್, ಠೇವಣಿ ರಶೀದಿ, ನಿಮ್ಮ ಕೆವೈಸಿಗೆ ಸಂಬಂಧಿತ ಪುರಾವೆಗಳು ಹಾಗೂ ಖಾತೆದಾರರು ಮರಣಿಸಿದ್ದಲ್ಲಿ, ಅವರ ಮರಣ ದಾಖಲೆ ಪತ್ರವನ್ನು ಸಲ್ಲಿಸಿ, ಆ ಮೊತ್ತವನ್ನು ಬಡ್ಡಿ ಸಮೇತ ಹಿಂಪಡೆಯಬಹುದು. ನಿಮ್ಮದೇ ಖಾತೆಯಾಗಿದ್ದಲ್ಲಿ ಅದನ್ನು ಪುನರುಜ್ಜೀವನಗೊಳಿಸಲು ಕೂಡ ಅವಕಾಶವಿದೆ.