ಅಂಕಣ

ಪಿಎಚ್​ಎಂ ವೃತ್ತಿಪರರಿಗೆ ಡಿಮಾಂಡ್; ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಪ್ರಾಮುಖ್ಯತೆ

Webdesk - Ravikanth

ಕೋವಿಡ್ 19 ಸಂಕಷ್ಟವು ಜಗತ್ತಿಗೆ ಹಲವು ಪಾಠಗಳನ್ನು ಕಲಿಸಿದೆ. ಬದುಕಿನ ಶೈಲಿಯಲ್ಲೂ ಅನೇಕ ಬದಲಾವಣೆಗಳಿಗೂ, ಆರ್ಥಿಕ ವ್ಯವಸ್ಥೆಯಲ್ಲಿ ಡಿಜಿಟಲ್​ಗೆ ಪ್ರಾಮುಖ್ಯತೆ ಬರುವುದಕ್ಕೂ ಕಾರಣವಾಯಿತು. ಇದಲ್ಲದೇ, ವೈದ್ಯಕೀಯ ಕ್ಷೇತ್ರ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರ ಎರಡೂ ಬೇರೆ ಬೇರೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿತು. ಹೀಗಾಗಿ ಸಾರ್ವಜನಿಕ ಆರೋಗ್ಯ ನಿರ್ವಹಣೆಯ ವೃತ್ತಿಪರರ ಬೇಡಿಕೆಯೂ ಹೆಚ್ಚಾಯಿತು. ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ನಿರ್ವಹಣಾ ಪರಿಣತರಿಗೆ ಹೆಚ್ಚಿನ ಬೇಡಿಕೆ ಇರಲಿದೆ.

ಕೋವಿಡ್ ಸಂಕಷ್ಟದ ಆರಂಭದ ದಿನಗಳಲ್ಲಿ ಅದನ್ನು ಎದುರಿಸುವುದಕ್ಕೆ ಅಗತ್ಯ ಮೂಲಸೌಕರ್ಯ ಇರಲಿಲ್ಲ. ಭಾರತ ಸರ್ಕಾರ ಇದಕ್ಕಾಗಿ ಜನರನ್ನು ಮಾನಸಿಕವಾಗಿ ಸಿದ್ಧಗೊಳಿಸಿದ್ದಲ್ಲದೆ, ಲಾಕ್​ಡೌನ್ ಘೋಷಿಸಿತು. ಈ ಅವಧಿಯಲ್ಲಿ ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ ವೃದ್ಧಿಗೊಳಿಸುವ ಕಾರ್ಯಗಳಿಗೆ ವೇಗ ನೀಡಿತ್ತು. ಕೋವಿಡ್ 19 ಸಂಕಷ್ಟ ಎದುರಿಸುವುದಕ್ಕೆ ಅಗತ್ಯ ಮೂಲಸೌಕರ್ಯ ಸಿದ್ಧವಾಯಿತು. ಎರಡನೇ ಅಲೆ, ಮೂರನೇ ಅಲೆಗಳನ್ನು ದೇಶ ಸಮರ್ಥವಾಗಿ ಎದುರಿಸಿದ್ದು ಈಗ ಇತಿಹಾಸ. ಈ ವಿದ್ಯಮಾನಗಳನ್ನು ಗಮನಿಸಿದರೆ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣತರ ಬೇಡಿಕೆ ಹೆಚ್ಚಾಗಿರುವುದು ವೇದ್ಯವಾದೀತು. ಒಂದು ಅಂದಾಜಿನ ಪ್ರಕಾರ, 2026ರ ವೇಳೆಗೆ ಭಾರತದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಮೌಲ್ಯ 46.7 ಶತಕೋಟಿ ಡಾಲರ್ ಆಗಿರಲಿದೆ. 2021ರಲ್ಲಿ ಇದರ ಮೌಲ್ಯ 24.9 ಶತಕೋಟಿ ಆಗಿತ್ತು. ಕ್ಷಿಪ್ರವಾಗಿ ಬೆಳೆಯುತ್ತಿರುವ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡಲು ಅಂದರೆ ಸಮಾಜ ಸೇವಾಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಖಚಿತವಾಗಿ ಇದು ನಿಮ್ಮನ್ನು ಬರಮಾಡಿಕೊಳ್ಳುತ್ತದೆ.

ಮೆಡಿಕಲ್ ಸೆಕ್ಟರ್​ಗಿಂತ ಭಿನ್ನ: ಸಾರ್ವಜನಿಕ ಆರೋಗ್ಯ ಕ್ಷೇತ್ರದ ಪರಿಣತರು ರೋಗವನ್ನು ತಡೆಯಲು ಚಿಕಿತ್ಸೆ ನೀಡುವುದಲ್ಲ, ಬದಲಾಗಿ ರೋಗ ಹರಡುವುದಕ್ಕೆ ಕಾರಣ, ವೈದ್ಯಕೀಯ ಸೇವೆಗಳ ನಿರ್ವಹಣೆ, ರೋಗಗಳ ಬಗ್ಗೆ ಜನಜಾಗೃತಿ ಮುಂತಾದ ಕೆಲಸಗಳನ್ನು ಮಾಡಬೇಕಾಗುತ್ತದೆ. ಈ ಎಲ್ಲ ಕೆಲಸಗಳನ್ನು, ನಿರ್ವಹಣೆಯ ಕೆಲಸ ಗೊತ್ತಿದೆ ಎಂಬ ಕಾರಣಕ್ಕೆ ವೈದ್ಯ ವೃತ್ತಿಯಲ್ಲಿ ಇರುವವರು ಮಾಡುವುದು ಸಾಧ್ಯವಿಲ್ಲ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಇಂಜಿನಿಯರಿಂಗ್, ಭಾಷೆ, ಸಮಾಜ ಸೇವೆ, ವಾಣಿಜ್ಯ, ಪೌಷ್ಟಿಕಾಂಶ ಸೇರಿ ವಿವಿಧ ಪದವೀಧರರಿಗೆ ಕೆಲಸವಿದೆ.

ಸರ್ಕಾರಿ ಉದ್ಯೋಗಾವಕಾಶ: ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ 2005ರಲ್ಲಿ ಜಾರಿಗೊಂಡ ಬಳಿಕ, ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಜಿಲ್ಲಾ ಯೋಜನಾ ಅಧಿಕಾರಿಯ ಸ್ಥಾನಕ್ಕೆ ಇಂತಹ ಪದವೀಧರರನ್ನು ನೇಮಕ ಮಾಡಲಾರಂಭಿಸಿದೆ. ಸಚಿವಾಲಯಗಳ ಯೋಜನೆಗಳಿಗೆ ಹೊರತಾಗಿ, ಸರ್ಕಾರಿ ಆಸ್ಪತ್ರೆಗಳಲ್ಲಿ ಆಸ್ಪತ್ರೆಗಳ ಆಡಳಿತ ನೋಡಿಕೊಳ್ಳಲು ಕೂಡ ಇಂತಹ ನೇಮಕಾತಿಯನ್ನು ಸರ್ಕಾರ ಆರಂಭಿಸಿದೆ. ಟ್ರಸ್ಟ್​ಗಳು ನಡೆಸುವ ಆಸ್ಪತ್ರೆಗಳಲ್ಲೂ ಅಸಿಸ್ಟೆಂಟ್ ಮ್ಯಾನೇಜರ್ ಮುಂತಾದ ಹುದ್ದೆಗಳನ್ನು ಸೃಜಿಸಲಾಗಿದೆ.

ಕೇಂದ್ರ ಮಾರ್ಗಸೂಚಿ ಬಿಡುಗಡೆ: ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಪ್ರತ್ಯೇಕ ಸಂಘಟನಾ ರಚನೆಯ ವ್ಯವಸ್ಥೆ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯಗಳು ಸ್ಪೆಷಲಿಸ್ಟ್ ಕೆಡರ್, ಸಾರ್ವಜನಿಕ ಆರೋಗ್ಯ ಕೆಡರ್, ಆರೋಗ್ಯ ನಿರ್ವಹಣಾ ಕೆಡರ್ ಮತ್ತು ಬೋಧನಾ ಕೆಡರ್ ಎಂದು ನಾಲ್ಕು ಸ್ತರದ ವ್ಯವಸ್ಥೆಯನ್ನು ರೂಪಿಸಬೇಕು ಎಂಬ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ರವಾನಿಸಿದೆ. ಎಲ್ಲರಿಗೂ ಆರೋಗ್ಯ ಸೇವೆ ಒದಗಿಸುವುದನ್ನು ಖಾತರಿಪಡಿಸಲು ಈ ರೀತಿ ಅಚ್ಚುಕಟ್ಟಾದ ವ್ಯವಸ್ಥೆ ಇರಬೇಕು ಎಂದು ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಬಿಡುಗಡೆ ಮಾಡಿದ ಮಾರ್ಗಸೂಚಿ ಚೌಕಟ್ಟು ಹೇಳಿದೆ.

ಪದವೀಧರರಿಗೆ ಎಂಎಚ್​ಎ ಅವಕಾಶ: ಮಣಿಪಾಲದ ಟಾಟಾ ಇನ್​ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್ ಮುಂತಾದ ಸ್ವಾಯತ್ತ ಸಂಸ್ಥೆಗಳಲ್ಲಿ ಯಾವುದೇ ವಿಷಯದಲ್ಲಿ ಪದವಿ ಪಡೆದವರು ಮಾಸ್ಟರ್ ಆಫ್ ಹಾಸ್ಪಿಟಲ್ ಅಡ್ಮಿನಿಸ್ಟ್ರೇಷನ್ (ಎಂಎಚ್​ಎ) ಕಲಿಯಬಹುದು. ಇಲ್ಲಿ ಕಲಿತವರಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳ ಮ್ಯಾನೇಜೀರಿಯಲ್ ಹುದ್ದೆಗಳಲ್ಲಿ ಉದ್ಯೋಗಾವಕಾಶ ಲಭ್ಯವಿದೆ. ಆದರೆ, ಸರ್ಕಾರಿ ಸಂಸ್ಥೆಗಳಲ್ಲಿ ಮೆಡಿಕಲ್ ಫೀಲ್ಡ್​ನ ಪದವಿ ಪಡೆದ ವಿದ್ಯಾರ್ಥಿಗಳಿಗಷ್ಟೇ ಈ ಕೋರ್ಸ್​ಗೆ ಪ್ರವೇಶಾವಕಾಶವಿದೆ.

ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲೂ ಕೆಲಸ: ಎಂಎಚ್​ಎ ಪದವೀಧರರಿಗೆ ಡಬ್ಲ್ಯುಎಚ್​ಒ, ಯುಎನ್, ಯುನಿಸೆಫ್ ಮುಂತಾದ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲೂ ಉದ್ಯೋಗದ ಅವಕಾಶವಿದೆ. ವ್ಯಾಕ್ಸಿನೇಷನ್, ಪೌಷ್ಟಿಕಾಂಶ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಮುಂತಾದ ಕ್ಷೇತ್ರದಲ್ಲಿ ಸರ್ಕಾರಕ್ಕೆ ನೆರವಾಗುವುದು ಇವರ ಉದ್ಯೋಗ. ಆದಾಗ್ಯೂ, ಸರ್ವೆಲೆನ್ಸ್ ಮಡಿಕಲ್ ಆಫೀಸರ್ ಹುದ್ದೆಗೆ ಆಯ್ಕೆ ಆಗಬೇಕಾದರೆ ವೈದ್ಯಕೀಯದಲ್ಲೇ ಪದವಿ ಮಾಡಿರಬೇಕು.