ಅಂಕಣ

ಬಿಜೆಪಿ ನಾಯಕರ ಮೇಲಿನ ಹಗರಣದ ತನಿಖೆಗೆ ಆಗ್ರಹ ; ಇಡಿ ಜಂಟಿ ನಿರ್ದೇಶಕರಿಗೆ ಕೆಪಿಸಿಸಿ ಒತ್ತಾಯ

ಬೆಂಗಳೂರು : ಕರ್ನಾಟಕದಲ್ಲಿ ಇಡಿ ಸಂಸ್ಥೆ ರಾಜಕೀಯ ದುರುದ್ದೇಶದಿಂದ ಕಾಂಗ್ರೆಸ್ ನಾಯಕರ ಮೇಲೆ ದಾಳಿ ನಡೆಸುತ್ತಿದೆ. ಆದರೆ ರಾಜಕೀಯವಾಗಿ ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ನಾಯಕರ ಮೇಲೆ ಇರುವ ಕರೋನ ಶೇ.40 ಭ್ರಷ್ಟಾಚಾರ ಪ್ರಕರಣ ಮತ್ತು ಭೂ ಹಗರಣ ಪ್ರಕರಣಗಳ ವಿರುದ್ಧ ತನಿಖೆಗೆ ಮುಂದಾಗದೆ ಹಾಗೂ ಬಿಜೆಪಿ ನಾಯಕರೇ ಆರೋಪಿಸಿರುವಂತೆ ಕೋಟ್ಯಾಂತರ ರೂಪಾಯಿಗಳ ಅಕ್ರಮ ನಡೆದಿದೆ ಎಂದು ಬಹಿರಂಗಪಡಿಸಿದರೂ ಯಾವುದೇ ದಾಳಿ ಹಾಗೂ ತನಿಖೆಗೆ ಮುಂದಾಗದ ಕ್ರಮವನ್ನು ಕೆಪಿಸಿಸಿ ಖಂಡಿಸಿದೆ.

ಡಾ.ಜಿ.ಪರಮೇಶ್ವರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ ನಡೆಸಿರುವುದು ಮೇಲ್ನೋಟಕ್ಕೆ ರಾಜಕೀಯ ದಾಳಿಯಂತಿದೆ. ಕೇಂದ್ರ ಜಾರಿ ನಿರ್ದೇಶನಾಲಯ ಉದ್ದೇಶಪೂರ್ವಕವಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡುವವರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದೆ. ಹಲವು ರಾಜ್ಯಗಳಲ್ಲಿ ಇದು ನಡೆಯುತ್ತಿದೆ. ವಿರೋಧ ಪಕ್ಷದ ಶಕ್ತಿ ಕುಗ್ಗಿಸುವ ಪ್ರಯತ್ನ ಈ ದಾಳಿಯ ಹಿಂದೆ ಕೇಂದ್ರ ಮಾಡುತ್ತಿದೆ ಎಂದು ಕೆಪಿಸಿಸಿ ಮುಖಂಡರು ಆರೋಪಿಸಿದ್ದಾರೆ.

ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರ ತಂದೆಯವರು ನಿರ್ಮಿಸಿರುವ ಪ್ರಾಮಾಣಿಕ ಶಿಕ್ಷಣ ಸಂಸ್ಥೆಯ ಮೇಲೆ ದಾಳಿ ನಡೆಸಿರುವ ಇ.ಡಿ. ಅಧಿಕಾರಿಗಳ ವರ್ತನೆಯನ್ನು ಖಂಡಿಸಿರುವ ಮುಖಂಡರು, ಇ.ಡಿ. ಅಧಿಕಾರಿಗಳು ಮೊದಲು ರಾಜ್ಯದಲ್ಲಿರುವ ಭ್ರಷ್ಟ ಬಿಜೆಪಿ ನಾಯಕರ ಮನೆಯ ಮೇಲೆ ದಾಳಿ ನಡೆಸುವಂತೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಎಂಇಐ ಅಧ್ಯಕ್ಷ ಎಸ್.ಮನೋಹರ್ ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಮುಖಂಡರಾದ ಪುಟ್ಟರಾಜು, ಓಬಳೇಶ್, ಕುಶಾಲ್ ಹರುವೇಗೌಡ, ಆನಂದ್ ಕುಮಾರ್, ಸುಂಕದಕಟ್ಟೆ ನವೀನ್, ರಂಜಿತ್, ಕೆಂಪೇಗೌಡ, ನವೀನ್ ಸಾಯಿ, ಸಂಜಯ್ ಸಶಿಮಠ ಮತ್ತಿತರರು ಉಪಸ್ಥಿತರಿದ್ದರು.