ಅಂಕಣ

ತಾಯಿಗೆ ಮಾರಿಯಾದ ಮಗಳು: ಆ ಕ್ಷಣ..

ಆ ದಿನ ರಾತ್ರಿ 11 ಗಂಟೆಗೆ ನಗರದ ಪೊಲೀಸ್ ಕಂಟ್ರೋಲ್ ರೂಂಗೆ ಒಂದು ಕರೆ ಬಂದಿತು. ಹೊರವರ್ತಲ ರಸ್ತೆಯಲ್ಲಿ ಇನ್ನೋವಾ ಕಾರೊಂದು ನಿಂತಿದೆ. ಕಾರಿನ ನಾಲ್ಕೂ ಬಾಗಿಲುಗಳು ಬಂದಾಗಿವೆ. ಕಾರಿನಲ್ಲಿ ಯಾರೂ ಇಲ್ಲ. ಅದರ ಹಿಂದಿನ ಎಡಭಾಗದ ಬಾಗಿಲಿನಿಂದ ರಕ್ತ ಹರಿದು ಬರುತ್ತಿದೆ ಎಂದು ಹೇಳಿದ ಅಪರಿಚಿತ ಫೋನ್ ಕಟ್ ಮಾಡಿದ. ಹತ್ತಿರದಲ್ಲಿದ್ದ ಗಸ್ತು ವಾಹನಕ್ಕೆ ಸ್ಥಳಕ್ಕೆ ಧಾವಿಸಲು ಕಂಟ್ರೋಲ್ ರೂಂ ಆದೇಶಿಸಿತು. ಪೊಲೀಸರು ಆ ನಿರ್ಜನ ಸ್ಥಳಕ್ಕೆ ಹೋದಾಗ ರಸ್ತೆಯ ಬದಿಯಲ್ಲಿ ಒಂದು ಬಿಳಿಯ ಬಣ್ಣದ ಇನ್ನೋವಾ ವಾಹನ ನಿಂತಿದ್ದು ಅದರ ಹಿಂದಿನ ಸೀಟಿನಿಂದ ರಸ್ತೆಗೆ ಧಾರಾಕಾರವಾಗಿ ರಕ್ತ ಹರಿದಿತ್ತು. ಟಾರ್ಚ್ ಬೆಳಕಿನಲ್ಲಿ ಕಾರಿನೊಳಗೆ ನೋಡಿದಾಗ ಹಿಂದಿನ ಸೀಟಿನ ಮೇಲೆ ಮಧ್ಯವಯಸ್ಕ ಹೆಣ್ಣು ಮಗಳೊಬ್ಬಳು ಬಿದ್ದಿದ್ದು ಆಕೆಯ ಕುತ್ತಿಗೆ ಕುಯ್ಯಲಾಗಿದ್ದು ಅಲ್ಲಿಂದ ರಕ್ತ ಸೋರುತ್ತಿತ್ತು. ಆಕೆಯ ಮೈಮೇಲೆ ಆಭರಣಗಳು ಇದ್ದದ್ದನ್ನು ಕಂಡ ಪೊಲೀಸರು, ಇದು ಸ್ವತ್ತಿಗಾಗಿ ನಡೆದ ಹತ್ಯೆಯಲ್ಲವೆಂದು ಭಾವಿಸಿದರು. ವಾಹನವನ್ನು ಶೋಧಿಸಿದಾಗ ಮೃತಳ ಬ್ಯಾಗ್ ಆಗಲೀ, ಮೊಬೈಲ್ ಫೋನಾಗಲೀ ಕಂಡುಬರಲಿಲ್ಲ. ಹತ್ಯೆಗೆ ಬಳಸಿದ ಆಯುಧವೂ ಕಾಣಲಿಲ್ಲ.

ಇನ್ನೋವಾ ವಾಹನದ ನೊಂದಣಿ ಸಂಖ್ಯೆಯನ್ನು ವಾಹನ್ ಆಪ್ ಮೂಲಕ ಪರಿಶೀಲಿಸಿದಾಗ ಅದು ಅರುಣಾ ಎನ್ನುವವರ ಹೆಸರಿನಲ್ಲಿ ನೋಂದಣಿಯಾಗಿದ್ದು ಆಕೆಯ ವಿಳಾಸ ದೊರಕಿತು. ಆಕೆ ಅದೇ ಊರಿನ ನಿವಾಸಿಯಾಗಿದ್ದ ಕಾರಣ ಕೂಡಲೇ ಈ ಮಾಹಿತಿಯನ್ನು ಕಂಟ್ರೋಲ್ ರೂಂಗೆ ಕೊಡಲಾಗಿ ಪೊಲೀಸ್ ತಂಡವೊಂದು ನಗರದ ಹೊರವಲಯದ ಬಡಾವಣೆಯ ಆ ವಿಳಾಸಕ್ಕೆ ಧಾವಿಸಿತು. ಅದೊಂದು ದೊಡ್ಡ ಮನೆಯಾಗಿದ್ದು ಮನೆಗೆ ಬೀಗ ಹಾಕಿತ್ತು. ಅಕ್ಕಪಕ್ಕದವರನ್ನು ವಿಚಾರಿಸಿದಾಗ ಕಾರಿನ ಮಾಲೀಕಳಾಗಿದ್ದ ಅರುಣಾ ಸುಮಾರು 45 ವರ್ಷ ವಯಸ್ಸಿನವಳಾಗಿದ್ದು, ಆಕೆ ನಗರದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡು ಸಾಕಷ್ಟು ಶ್ರೀಮಂತಳಾಗಿದ್ದಳು. ಈಚೀಚೆಗೆ ಆಕೆ ರಾಜಕೀಯದಲ್ಲಿ ಆಸಕ್ತಿ ವಹಿಸಿದ್ದು, ತನ್ನ ವಾರ್ಡಿನಿಂದ ಕಾರ್ಪೇರೇಟರ್ ಆಗಬೇಕೆಂದು ಓಡಾಡುತ್ತಿದ್ದಳೆಂದು ತಿಳಿಯಿತು. ಅರುಣಾಗೆ ಒಬ್ಬ ಗಂಡು ಹಾಗೂ ಒಬ್ಬಳು ಹೆಣ್ಣು ಮಗಳಿದ್ದು ಇನ್ನೋವಾ ವಾಹನವನ್ನು ರಾಮು ಎಂಬ ಚಾಲಕ ಓಡಿಸುತ್ತಿದ್ದ ಎಂದು ತಿಳಿದು ಬಂದಿತು.

ಮಾರನೆಯ ಬೆಳಿಗ್ಗೆ ಅರುಣಾಳ ಶವವನ್ನು ಪೋಸ್ಟ್​ಮಾರ್ಟಂ ಪರೀಕ್ಷೆಗೆ ಕಳಿಸಲಾಯಿತು. ದೇಹದ ಮೇಲೆ 16 ಇರಿತದ ಗಾಯಗಳಾಗಿದ್ದು ಕುತ್ತಿಗೆಯನ್ನು ಕತ್ತರಿಸಿದ್ದ ಕಾರಣ ತೀವ್ರ ರಕ್ತಸ್ರಾವವಾಗಿ ಅರುಣಾ ಸತ್ತಿದ್ದಳು ಎಂಬ ವರದಿ ಬಂದಿತು. ಚಾಲಕ ರಾಮುವನ್ನು ಪತ್ತೆ ಮಾಡಿದಾಗ ಆತ ಹೀಗೆಂದ: ‘ನಿನ್ನೆ ರಾತ್ರಿ ಮೇಡಂ ಮತ್ತು ಅವರ ಇಬ್ಬರು ಮಕ್ಕಳನ್ನು ಕರೆದುಕೊಂಡು ನಾನು ಮದುವೆ ಸಮಾರಂಭವೊಂದಕ್ಕೆ ಹೋಗಿದ್ದೆ. ರಾತ್ರಿ 10.30 ಕ್ಕೆ ಸಮಾರಂಭದಿಂದ ಮನೆಗೆ ಹೊರಟೆವು. ವರ್ತಲ ರಸ್ತೆಯಲ್ಲಿ ಸ್ವಲ್ಪ ದೂರ ಚಲಿಸಿದ ಬಳಿಕ ಮೂರು ಮೊಟಾರ್ ಸೈಕಲ್​ಗಳಲ್ಲಿ ನಮ್ಮ ವಾಹನವನ್ನು ಕೆಲವರು ಹಿಂಬಾಲಿಸಿಕೊಂಡು ಬಂದು ವಾಹನವನ್ನು ನಿಲ್ಲಿಸಲು ನನಗೆ ಸೂಚಿಸಿದರು. ಆದರೆ ನಾನು ನಿಲ್ಲಿಸದೇ ವೇಗವಾಗಿ ಹೊರಟೆ. ಮುಂದೆ ರಸ್ತೆಯನ್ನು ಅಗೆದಿದ್ದ ಕಾರಣ ನಾನು ವಾಹನವನ್ನು ನಿಧಾನವಾಗಿ ಚಲಿಸಲೇ ಬೇಕಾಯಿತು. ಆಗ ಓವರ್ ಟೇಕ್ ಮಾಡಿದ ಆ ಮೂವರು ನನ್ನ ವಾಹನದ ಮುಂದೆ ತಮ್ಮ ಬೈಕುಗಳನ್ನು ನಿಲ್ಲಿಸಿದರು. ನಾನು ವಾಹನವನ್ನು ನಿಲ್ಲಿಸಿದೆ. ಕೂಡಲೇ ಬೈಕುಗಳಿಂದ ಇಳಿದ 5 ಜನರು ಕಾರನ್ನು ಸುತ್ತುವರಿದರು. ಎಲ್ಲರ ಕೈಯಲ್ಲಿ ಮಚ್ಚು, ಲಾಂಗ್​ಗಳು ಇದ್ದವು. ಕಾರಿನ ಬಾಗಿಲನ್ನು ತೆರೆಯಲು ಹೇಳಿದರು. ನಾನು ತೆರೆಯಲಿಲ್ಲ. ಬಾಗಿಲು ತೆರೆಯದಿದ್ದರೆ ನಿಮ್ಮನ್ನು ಕೊಲ್ಲುತ್ತೇವೆ ಎಂದು ಲಾಂಗಿನಿಂದ ಕಿಟಕಿಯನ್ನು ಕುಟ್ಟಿದರು. ಹೆದರಿದ ನಾನು ಬಾಗಿಲನ್ನು ತೆರೆದು, ಕೆಳಕ್ಕಿಳಿದು ಅಲ್ಲಿಂದ ಓಡಿ ಹೋದೆ. ಹಾದಿಯಲ್ಲಿ ಕಂಡ ಬೈಕೊಂದನ್ನು ನಿಲ್ಲಿಸಿ ಅದರಲ್ಲಿ ಕುಳಿತು ನನ್ನ ಮನೆಗೆ ಬಂದೆ. ಕಾರಿನಲ್ಲಿದ್ದವರಿಗೆ ಏನಾಯಿತೆಂದು ನನಗೆ ತಿಳಿದಿಲ್ಲ.’ ನೀನೇಕೆ ಈ ಮಾಹಿತಿಯನ್ನು ಪೊಲೀಸರಿಗಾಗಲೀ ಅಥವಾ ಬೇರಾರಿಗಾಗಲೀ ಕೊಡಲಿಲ್ಲ? ಎಂದು ಪ್ರಶ್ನಿಸಿದಾಗ ಆತ ತಾನು ಹೆದರಿದ್ದಾಗಿ ಕಾರಣ ನೀಡಿದ.

ಅರುಣಾಳ ಹಿರಿಯ ಮಗಳಾದ ರೇಖಾಳ ಸೆಲ್ ಫೋನ್ ನಂಬರನ್ನು ರಾಮುವಿನಿಂದ ಪಡೆದು ಅವಳನ್ನು ಸಂರ್ಪಸಲಾಯಿತು. ಆಕೆ ತಾನು ಸಹೋದರನೊಡನೆ ಗೆಳತಿಯ ಮನೆಗೆ ಬಂದು ಅಲ್ಲಿರುವುದಾಗಿ ತಿಳಿಸಿದಳು. 20 ವರ್ಷ ವಯಸ್ಸಿನ ರೇಖಾ, ಚಾಲಕ ರಾಮು ಹೇಳಿದ ಮಾತನ್ನೇ ಪುನರುಚ್ಚರಿಸಿ ತಮ್ಮ ವಾಹನದ ಮೇಲೆ 5 ಜನ ಆಗುಂತಕರು ದಾಳಿ ಮಾಡಿದಾಗ ತಾನು ಹೆದರಿ ಸೋದರನೊಡನೆ ಅಲ್ಲಿಂದ ಓಡಿಹೋಗಿ ಎದುರು ರಸ್ತೆಯಲ್ಲಿ ಬರುತ್ತಿದ್ದ ಇನ್ನೊಂದು ವಾಹನವನ್ನು ಹಿಡಿದು ಗೆಳತಿಯ ಮನೆಗೆ ಬಂದಿದ್ದಾಗಿ ತಿಳಿಸಿದಳು. ಗೆಳತಿಯ ಮನೆಯಿಂದ ತಾಯಿಯನ್ನು ಸಂರ್ಪಸಲು ಪ್ರಯತ್ನಿಸಿದ್ದಾಗಿಯೂ ಅವಳ ಫೋನು ಸ್ವಿಚ್ ಆಫ್ ಆಗಿದ್ದಾಗಿಯೂ ರೇಖಾ ತಿಳಿಸಿದಳು. ಅವಳಿಂದ ಅರುಣಾಳ ಫೋನ್ ನಂಬರನ್ನು ಪಡೆದು ರಿಂಗ್ ಮಾಡಿದಾಗ ಅದು ಸ್ವಿಚ್ ಆಫ್ ಎಂದೇ ತೋರಿಸಿತು. ಪೊಲೀಸರಿಗೇಕೆ ಘಟನೆಯ ಬಗ್ಗೆ ಮಾಹಿತಿ ನೀಡಲಿಲ್ಲ ಎಂದು ಕೇಳಿದಾಗ ನಮ್ಮಿಬ್ಬರಿಗೂ ತುಂಬಾ ಭಯವಾಗಿತ್ತು ಎಂದಳು. ಅರುಣಾ ಕೊಲೆಯಾದ ಬಗ್ಗೆ ತಿಳಿಸಿದಾಗ ಆಕೆ ಗಳಗಳನೆ ಅಳಲಾರಂಭಿಸಿದಳು. ಸಮಾಧಾನ ಮಾಡಿಕೊಂಡ ನಂತರ ರೇಖಾ ಹೀಗೆಂದಳು: ‘ನನ್ನ ತಾಯಿ ಸುಮಾರು 22 ವರ್ಷಗಳ ಹಿಂದೆ ಅಶೋಕ್ ಎನ್ನುವವನನ್ನು ಲಗ್ನವಾದಳು. ಅವರಿಗೆ ನಾವಿಬ್ಬರು ಮಕ್ಕಳು ಜನಿಸಿದೆವು. ಮದುವೆಯಾದ 15 ವರ್ಷಗಳ ನಂತರ ನನ್ನ ಮಾತಾಪಿತರು ನ್ಯಾಯಾಲಯದಲ್ಲಿ ವಿವಾಹ ವಿಚ್ಛೇದನ ಪಡೆದರು. ಆಗ ನಾವೆಲ್ಲರೂ ನಮ್ಮ ಅಜ್ಜನ ಮನೆಗೆ ಬಂದು ಸೇರಿಕೊಂಡೆವು. ನಮ್ಮ ಅಜ್ಜನಿಗೆ ನನ್ನ ತಾಯಿ ಒಬ್ಬಳೇ ಮಗಳಾಗಿದ್ದಳು. ಅಜ್ಜ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದು ಶ್ರೀಮಂತರಾಗಿದ್ದರು. ನನ್ನ ಅಮ್ಮ ಅಜ್ಜನಿಗೆ ಅವರ ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಳು. ಕೆಲಕಾಲದ ನಂತರ ಆಕೆಯೇ ಅಜ್ಜನ ಎಲ್ಲ ವ್ಯವಹಾರವನ್ನು ನಿಭಾಯಿಸತೊಡಗಿದಳು. ನಾಲ್ಕು ವರ್ಷಗಳ ಹಿಂದೆ ನನ್ನ ಅಜ್ಜ ಮತ್ತು ಅಜ್ಜಿ ಇಬ್ಬರೂ ಒಬ್ಬರ ನಂತರ ಒಬ್ಬರಾಗಿ ತೀರಿಕೊಂಡರು. ಹೀಗಾಗಿ ಅಜ್ಜನ ಆಸ್ತಿಗೆಲ್ಲಾ ಅಮ್ಮನೇ ಏಕೈಕ ವಾರಸುದಾರಳಾದಳು. ಇತ್ತೀಚೆಗೆ ಅಮ್ಮ ಕಾರ್ಪೆರೇಷನ್ ಚುನಾವಣೆಗೆ ನಿಲ್ಲಬೇಕೆಂದು ಓಡಾಡುತ್ತಿದ್ದಳು. ಇದೇ ಕಾರಣಕ್ಕಾಗಿ ಅವಳ ಕೊಲೆಯಾಗಿರಬಹುದು.’

ರಾಜಕೀಯ ವೈಷಮ್ಯದಿಂದ ಅರುಣಾಳ ಕೊಲೆಯಾಗಿದೆಯೇ, ಇಲ್ಲವೇ ಆಸ್ತಿಗಾಗಿ ಆಕೆಯ ಹತ್ಯೆ ನಡೆಯಿತೇ ಅಥವಾ ಬೇರಾವುದೇ ಕಾರಣಕ್ಕಾಗಿಯೇ ಎಂದು ತಿಳಿಯಲು ತನಿಖಾಧಿಕಾರಿ ಮಾಹಿತಿಯನ್ನು ಕಲೆಹಾಕತೊಡಗಿದರು. ಆಗ ಹೊರಬಂದದ್ದೇನೆಂದರೆ ಅರುಣಾ ತನ್ನ ಮನೆಯ ಬಳಿಯಿದ್ದ ಒಂದು ಜಿಮ್ೆ ಸೇರಿದ್ದಳು. ಆಲ್ಲಿ ಕಿಶೋರ್ ಎನ್ನುವವನು ಅವಳ ವೈಯಕ್ತಿಕ ತರಬೇತುದಾರನಾಗಿದ್ದ. ಕಿಶೋರ್ ಮದುವೆಯಾಗಿದ್ದು ಮೂರು ಮಕ್ಕಳ ತಂದೆಯಾಗಿದ್ದ. ಕಿಶೋರ್​ನತ್ತ ಆಕರ್ಷಿತಳಾದ ಅರುಣಾ ಅವನೊಡನೆ ಸಂಬಂಧ ಬೆಳೆಸಿದಳು. ಹೆಂಡತಿಯನ್ನು ತೊರೆಯಲು ಅವನಿಗೆ ಸೂಚಿಸಿ ಬೇರೊಂದು ಮನೆಮಾಡಿ ಅಲ್ಲಿ ಅವನ ಮತ್ತು ತನ್ನ ಇಬ್ಬರು ಮಕ್ಕಳ ಜತೆ ವಾಸಿಸಲಾರಂಭಿಸಿದಳು. ಸುಮಾರು ಆರು ತಿಂಗಳ ನಂತರ ಕಿಶೋರ್ ಅರುಣಾಳ ಮಗಳು ರೇಖಾಳತ್ತ ಆಕರ್ಷಿತನಾದ. ಆಕೆಯೂ ಅವನತ್ತ ಅಕರ್ಷಣೆಗೊಂಡಳು. ಕಾಲಕ್ರಮೇಣ ಅವರಿಬ್ಬರ ನಡುವೆ ಅನೈತಿಕ ಸಂಬಂಧ ಏರ್ಪಟ್ಟಿತು. ಈ ಸಂಬಂಧವು ಅರುಣಾಗೆ ತಿಳಿಯದಂತೆ ಅವರಿಬ್ಬರೂ ಎಚ್ಚರ ವಹಿಸಿದ್ದರು. ಒಂದು ದಿನ ರೇಖಾ ಕಿಶೋರ್​ನಿಗೆ ತಾವು ಹೇಗಾದರೂ ಮಾಡಿ ಅರುಣಾಳನ್ನು ಮುಗಿಸಿದರೆ ಅವಳ ಇಡೀ ಆಸ್ತಿ ತಮ್ಮದಾಗುತ್ತದೆ. ಅದರಲ್ಲಿ ತನ್ನ ಸೋದರನಿಗೆ ಒಂದು ಪಾಲನ್ನು ಕೊಟ್ಟು ತಾವಿಬ್ಬರೂ ಸುಖವಾಗಿ ಜೀವಿಸಬಹುದು ಎಂದಳು. ಕಿಶೋರ್ ಕೂಡಲೇ ಒಪ್ಪಿದ. ಅರುಣಾಳನ್ನು ಹೇಗೆ ಕೊಲೆ ಮಾಡುವುದು ಎಂದು ಇಬ್ಬರೂ ಯೋಚಿಸಿದಾಗ ಕಿಶೋರ್​ಗೆ ತನ್ನ ಸ್ನೇಹಿತ ರಫೀಕ್ ನೆನಪಾದ. ರೌಡಿ ಶೀಟರ್ ಆಗಿದ್ದ ಆತ ಅರುಣಾಳ ಕೊಲೆ ಮಾಡಲು ಒಪ್ಪಿ 10 ಲಕ್ಷ ರೂ ಕೇಳಿದ. ರೇಖಾ ಅಮ್ಮನಿಗೆ ತಿಳಿಯದಂತೆ 3 ಲಕ್ಷ ರೂ.ಗಳನ್ನು ಕದ್ದು ತಂದು ಅವನಿಗೆ ಅಡ್ವಾನ್ಸ್ ಎಂದು ಕೊಟ್ಟಳು. ತಾಯಿಯ ಕೊಲೆಯನ್ನು ಎಲ್ಲಿ ಹೇಗೆ ಮಾಡಬೇಕು ಎಂದು ರಫೀಕ್​ಗೆ ರೇಖಾಳೇ ಸೂಚಿಸಿದಳು. ಪೂರ್ವನಿಯೋಜಿತ ಯೋಜನೆಯಂತೆ ರಫೀಕ್ ತನ್ನ ಸಹಚರರೊಂದಿಗೆ ವರ್ತಲ ರಸ್ತೆಯಲ್ಲಿ ಅರುಣಾಳ ಕಾರಿಗಾಗಿ ಕಾಯುತ್ತಿದ್ದ. ಆರತಕ್ಷತೆಯನ್ನು ಮುಗಿಸಿ ಹೊರಟಕೂಡಲೇ ಚಾಲಕ ರಾಮುವಿಗೆ ರೇಖಾ ವರ್ತಲ ರಸ್ತೆಯಲ್ಲಿ ಹೋದರೆ ಬೇಗ ಮನೆ ತಲುಪಬಹುದೆಂದು ಹೇಳಿದಳು. ವಾಹನ ಆ ರಸ್ತೆ ತಲುಪಿದ ಕೂಡಲೇ ಆಕೆ ತನ್ನ ಮೊಬೈಲಿನಲ್ಲಿ ರಫೀಕ್​ನಿಗೆ ಲೈವ್ ಲೊಕೇಷನ್ ಕೊಡುತ್ತಾ ಬಂದಳು. ಆತ ದಾಳಿ ಮಾಡಬೇಕಾದ ಜಾಗವನ್ನು ಆಗಲೇ ನಿರ್ಧರಿಸಿದ್ದ. ವಾಹನ ಕಂಡಕೂಡಲೇ ರಫೀಕ್ ಮತ್ತು ನಾಲ್ಕು ಜನ ಇತರರು ವಾಹನವನ್ನು ಹಿಂಬಾಲಿಸಿ ಅದನ್ನು ಅಡ್ಡಗಟ್ಟಿ ನಿಲ್ಲಿಸಿದರು. ಆಗ ರೇಖಾ, ಸುಭಾಷ್ ಮತ್ತು ಚಾಲಕ ಓಡಿಹೋದರು. ಅರುಣಾಳ ಕೊಲೆ ಮಾಡಿದ್ದನ್ನು ಆ ಮೂರೂ ಜನರು ನೋಡಲಿಲ್ಲ.

ಮುಂದೆ ರಫೀಕ್​ನನ್ನು ಬಂಧಿಸಿದಾಗ ಅವನ ಬಳಿ ಅರುಣಾಳ ಪರ್ಸ್ ಹಾಗೂ ಮೊಬೈಲ್ ಫೋನ್ ದೊರಕಿತು. ಇದಲ್ಲದೆ ಸುಪಾರಿಯಾಗಿ ಪಡೆದಿದ್ದ 2 ಲಕ್ಷ ರೂ ನಗದು ಸಿಕ್ಕಿತು. ಅವನ ಹೇಳಿಕೆಯ ಮೇರೆಗೆ ಉಳಿದ ಆರೋಪಿಗಳನ್ನು ಬಂಧಿಸಿ ಅವರಿಂದ ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಯಿತು. ರೇಖಾ ಮತ್ತು ಕಿಶೋರ್ ಸೇರಿ 7 ಜನರ ಮೇಲೆ ಒಳಸಂಚು, ಕೊಲೆ ಮತ್ತು ದರೋಡೆ ಪ್ರಕರಣವನ್ನು ದಾಖಲು ಮಾಡಲಾಯಿತು. ಆರೋಪಗಳು ಸಾಬೀತಾದರೆ ಎಲ್ಲರಿಗೂ ಜೀವಾವಧಿ ಶಿಕ್ಷೆಯಾಗಬಹುದು. ‘ಅರಿ ಮಿತ್ರ ಸತಿ ಪುತ್ರ ಬಂಧುಬಳಗವದೆಲ್ಲ ಕರುಮದವತಾರಗಳೊ, ಋಣಲತೆಯ ಚಿಗುರೋ ಕುರಿಯನಾಗಿಸಿ ನಿನ್ನ ಕಾಪಿಡುವ ಸಂಸಾರ ವುರಿಮಾರಿಯಾದೀತೋ ಮಂಕುತಿಮ್ಮ’ ಎಂಬಂತೆ ಆಸ್ತಿ ಮತ್ತು ಸೆಕ್ಸ್​ಗಾಗಿ ಹೆತ್ತ ಮಗಳೇ ತಾಯಿಗೆ ಮಾರಿಯಾದಳು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)