ನವೆಂಬರ್ 2019ರಲ್ಲಿ ಚೀನಾದ ‘ವುಹಾನ್’ದಲ್ಲಿ ಹುಟ್ಟಿದ ದೈತ್ಯ ಕರೊನಾ ವೈರಾಣು ಒಂದು ವರ್ಷದಲ್ಲಿ ವಿಶ್ವದಾದ್ಯಂತ ಲಕ್ಷಾಂತರ ಜನರ ಪ್ರಾಣ ತೆಗೆದುಕೊಂಡು, ಕೋಟ್ಯಂತರ ಜನರಲ್ಲಿ ಹರಡಿ ಆರೋಗ್ಯದಲ್ಲಿ ತೀವ್ರ ಏರುಪೇರು ಉಂಟುಮಾಡಿದೆ. ಅಲ್ಲದೆ ಕೋವಿಡ್ನಿಂದ ಗುಣವಾದ ನಂತರವೂ ಹಲವರಲ್ಲಿ ಪುಪ್ಪುಸ ತೊಂದರೆ, ಹೃದಯಾಘಾತ, ನಾಡಿಬಡಿತದ ಏರುಪೇರು, ನೆನಪಿನ ಶಕ್ತಿ ಕುಂದುವಿಕೆ, ತೀವ್ರ ಅಶಕ್ತತೆ, ರಕ್ತನಾಳಗಳಲ್ಲಿ ಹೆಪ್ಪುಗಟ್ಟುವಿಕೆ ಮುಂತಾದ ತೊಂದರೆಗಳನ್ನು ಉಂಟುಮಾಡಿದೆ. ಕೋವಿಡ್ನಿಂದ ಜಗತ್ತಿನ ಆರ್ಥಿಕ ಪರಿಸ್ಥಿತಿಯಲ್ಲೂ ವ್ಯತ್ಯಾಸವಾಗಿದೆ. ಅದರಲ್ಲೂ ಕಡಿಮೆ ಉತ್ಪನ್ನವಿರುವ ದೇಶಗಳಿಗಿಂತ ಚೀನಾ ದೇಶದ ಪರಿಸ್ಥಿತಿಯು ಶೇ. 23ರಷ್ಟು ಲಾಭದಾಯಕವಾಗಿ ಪರಿವರ್ತಿತವಾಗಿದೆ.
ಈಗ ಇರುವ ಕೋವಿಡ್-19 ಕರೊನಾ ವೈರಸ್ ಸಾರ್ಸ್-ಕೋವ್-2ರಿಂದ ಆಗಿದ್ದು. ಕರೊನಾ ವೈರಸ್ಗೆ ‘ಸ್ಪೈಕ್ ಪ್ರೊಟೀನ್’ ಎಂಬ ಪದಾರ್ಥದ ಹೊದಿಕೆ ಇದ್ದು, ಇದು ನಮ್ಮ ದೇಹದಲ್ಲಿಯ ವಿಶೇಷ ಜೀವಕೋಶ ‘ಎಸಿಇ 2’ (ಪುಪ್ಪುಸದಲ್ಲಿ ಇವು ಬಹಳ ಸಂಖ್ಯೆಯಲ್ಲಿವೆ) ಇವಕ್ಕೆ ಹತ್ತಿಕೊಂಡು (ಬೈಂಡ್ಸ್) ಜೀವಕೋಶವನ್ನು ಭೇದಿಸಿ ಒಳಗೆ ಬರುತ್ತದೆ. ಅಲ್ಲಿ, ಅಗಣಿತವಾಗಿ ಸ್ಪೋಟಗೊಂಡು ‘ಕೋವಿಡ್’ನ ವಿವಿಧ ಲಕ್ಷಣಗಳನ್ನು ಪ್ರಕಟಗೊಳಿಸುತ್ತದೆ.
ಹೇಗಾದರೂ ಮಾಡಿ ತಾನು ‘ಜೀವಂತ ಇರಬೇಕು’ ಎಂಬ ಏಕೈಕ ಧ್ಯೇಯದಿಂದ ಕರೊನಾ ವೈರಾಣು ತನ್ನ ಲಕ್ಷಣಗಳನ್ನು ಬದಲಿಸುತ್ತ ಹೋಗುತ್ತದೆ. ಸದ್ಯಕ್ಕೆ ಇರುವ ಕೋವಿಡ್-19 ಬೇನೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಬ್ರಿಟನ್ನಲ್ಲಿ ಹೊಸ ತಳಿ (ಮ್ಯೂಟಂಟ್ ಸ್ಟ್ರೇನ್) ಕಂಡುಬಂದಿದೆ. ಸ್ಪೈಕ್ ಪ್ರೊಟೀನ್ನಲ್ಲಿ ಬದಲಾವಣೆಯಾಗಿ ಕರೊನಾದ ಹೊಸ ತಳಿ, ಇಂಗ್ಲೆಂಡಿನಲ್ಲಿ ಕಂಡುಬಂದಿದೆ. ಇದಕ್ಕೆ ಬಿ.1.1.7 ಎಂಬ ಹೆಸರಿದೆ. ಲಂಡನ್ನಲ್ಲಿ ಸದ್ಯಕ್ಕೆ ಶೇ. 60 ಕೋವಿಡ್ ರೋಗಿಗಳು ಈ ರೂಪಾಂತರ ತಳಿಯಿಂದ ಬೇನೆ ಹೊಂದಿದ್ದಾರೆ. ಈ ಬಿ.1.1.7 ತಳಿಯು, ಮುಂಚಿನ ವೈರಸ್ಗಿಂತ ಶೇ. 70ರಷ್ಟು ಹೆಚ್ಚು ಸಾಂಕ್ರಾಮಿಕವಾಗಿದ್ದು, ಒಬ್ಬರಿಂದ ಒಬ್ಬರಿಗೆ ತೀವ್ರ ಗತಿಯಿಂದ ಹರಡುತ್ತದೆ. ಇದು ಮಕ್ಕಳನ್ನು ಹೆಚ್ಚು ಕಾಡುವುದು. ಆದರೆ, ಮುಂಚಿನ ತಳಿಗಿಂತ ಇದು ಹೆಚ್ಚು ಅಪಾಯಕಾರಿಯಾದದ್ದಲ್ಲ. ಆದರೂ, ಇತ್ತೀಚೆಗಷ್ಟೇ ಇದು ಕಂಡುಬಂದಿದ್ದು, ಕಾಲಾಂತರದಲ್ಲಿ ತನ್ನ ಹೆಚ್ಚಿನ ‘ಬಣ್ಣವನ್ನು’ ತೋರಿಸಬಹುದು. ಎಲ್ಲ ರೂಪಾಂತರಗೊಂಡ ವೈರಸ್ ತಳಿಗಳು ತೀವ್ರತರ ಬೇನೆಯನ್ನು ಕೊಡುತ್ತವೆ ಎಂದೇನೂ ಇಲ್ಲ. ಭಾರತದಲ್ಲಿ ಇದುವರೆಗೆ ಬಿ.1.1.7 ತಳಿಯ ಕೋವಿಡ್ ಕಂಡುಬಂದಿಲ್ಲ.
ಕರೊನಾವನ್ನು ಸದೆಬಡಿಯಲು ಚುಚ್ಚುಮದ್ದು (ವ್ಯಾಕ್ಸಿನ್) ಜಗತ್ತಿನಾದ್ಯಂತ ಲಭ್ಯವಾಗುವಂತೆ ಮಾಡಲು ಹಲವಾರು ರಾಷ್ಟ್ರಗಳು, ಔಷಧ ಕಂಪನಿಗಳು ಪ್ರಯತ್ನಿಸುತ್ತಿವೆ. ಭಾರತದಲ್ಲಿ, ಇಲ್ಲಿಯೇ ತಯಾರಾದ ವ್ಯಾಕ್ಸಿನ್ ಇನ್ನು 2-3 ತಿಂಗಳಲ್ಲಿ ಲಭ್ಯವಾಗುತ್ತದೆ. 130 ಕೋಟಿ ಜನರಿಗೆ ತಲುಪಲು ಕನಿಷ್ಠ ಒಂದು ವರ್ಷ ಬೇಕು. ವೈದ್ಯಕೀಯ ಸಿಬ್ಬಂದಿ, 50 ವರ್ಷ ಮೇಲ್ಪಟ್ಟವರು ಮುಂತಾದ ‘ವಿಶೇಷ ಗುಂಪಿಗೆ’ ಮೊದಲು ಲಭ್ಯವಾಗುವುದು. ಸದ್ಯದ ಮಾಹಿತಿಯ ಪ್ರಕಾರ, ಈಗ ಲಭ್ಯವಿರುವ ವ್ಯಾಕ್ಸಿನ್ ರೂಪಾಂತರಗೊಂಡ ಬಿ.1.1.7 ತಳಿಯ ಮೇಲೂ ಪ್ರಭಾವ ಬೀರುತ್ತದೆ. ಕಾದು ನೋಡಬೇಕಷ್ಟೆ! ವ್ಯಾಕ್ಸಿನ್ ಬಹಳೇ ಉಪಯುಕ್ತವಾಗಿದೆ. ಆದರೆ ಇದನ್ನು ತೆಗೆದುಕೊಳ್ಳಬೇಕೆಂದು ಒತ್ತಾಯಿಸುವಂತಿಲ್ಲ. ಆದರೂ, ಮುಂಜಾಗ್ರತೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ವ್ಯಾಕ್ಸಿನ್ ತೆಗೆದುಕೊಳ್ಳುವುದು ಅತ್ಯಗತ್ಯ. ಇದುವರೆಗಿನ ಟ್ರಯಲ್ಸ್ ಪ್ರಕಾರ 16 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ ಸುರಕ್ಷಿತವಾಗಿದೆ. ಚಿಕ್ಕಮಕ್ಕಳಲ್ಲಿ ಇದರ ಬಗ್ಗೆ ಇನ್ನೂ ಸಂಶೋಧನೆಗಳು, ಅಧ್ಯಯನಗಳು ಆಗಬೇಕಿವೆ.
ಕೋವಿಡ್ನಿಂದ ಗುಣವಾದವರೂ ವ್ಯಾಕ್ಸಿನ್ ತೆಗೆದುಕೊಳ್ಳಬೇಕು. ಗರ್ಭಿಣಿಯರಿಗೆ, ಮಗುವಿಗೆ ಸ್ತನ್ಯಪಾನ ಮಾಡಿಸುವವರಿಗೆ ವ್ಯಾಕ್ಸಿನ್ ಕೊಡುವ ಮುಂಚೆ, ತಜ್ಞ ವೈದ್ಯರೊಂದಿಗೆ ರ್ಚಚಿಸಬೇಕು. ವ್ಯಾಕ್ಸಿನ್ ತೆಗೆದುಕೊಂಡ ನಂತರ (ಎರಡನೇ ಡೋಸ್ ಮುಗಿದ ನಂತರ) ರೋಗನಿರೋಧಕ ಶಕ್ತಿ ಬರಲು (ಆ್ಯಂಟಿಬಾಡಿ) ಎರಡು ವಾರ ಬೇಕು! ವ್ಯಾಕ್ಸಿನ್ ಎಷ್ಟು ತಿಂಗಳು, ವರ್ಷಗಳವರೆಗೆ ‘ರಕ್ಷಣೆ’ ಕೊಡಬಹುದೆಂಬುದು ಕಾಲಾಂತರದಲ್ಲಿ ತಿಳಿಯುತ್ತದೆ. ಹಲವರು ಧಾರ್ವಿುಕ ಕಾರಣಗಳಿಂದ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿಯಬಹುದು. ಆದರೆ, ಇದು ಜೀವ ಉಳಿಸುವ ತುರ್ತು ಔಷಧ ಎಂದು ಪರಿಗಣಿಸಿದಲ್ಲಿ ವ್ಯಾಕ್ಸಿನ್ ತೆಗೆದುಕೊಳ್ಳಲು ಮನಸ್ಸು ಒಪ್ಪುವುದು. ಅದೇನೆ ಇದ್ದರೂ ಇನ್ನೂ ಒಂದು ವರ್ಷ, 2021ರ ಡಿಸೆಂಬರ್ ತನಕ ಮಾಸ್ಕ್, ಅಂತರ ಕಾಪಾಡುವಿಕೆ, ಕೈ ತೊಳೆಯುವುದು (ಎಂ.ಡಿ.ಯು. - ಮಾಸ್ಕ್, ಡಿಸ್ಟನ್ಸ್, ವಾಷ್) ಕಡ್ಡಾಯ. ವ್ಯಾಕ್ಸಿನ್ ತೆಗೆದುಕೊಂಡರೂ ಇವುಗಳನ್ನು ನಿಲ್ಲಿಸಕೂಡದು.