| ವಿದ್ಯಾ ಉಪೇಂದ್ರ ಜೋಶಿ
ಋಷಿಯೊಬ್ಬರು ಒಂದು ರಾಜ್ಯದ ಗ್ರಾಮದ ಮೂಲಕ ಹಾದು ಹೋಗುತ್ತಿದ್ದಾಗ ರಸ್ತೆಯಲ್ಲಿ ಬಿದ್ದಿದ್ದ ಬೆಲೆ ಬಾಳುವ ನಾಣ್ಯ ಗಮನಿಸಿ ಅದನ್ನು ಎತ್ತಿಕೊಂಡರು. ಸರಳ ಜೀವನದಿಂದ ತೃಪ್ತರಾಗಿದ್ದರಿಂದ ಮತ್ತು ಅದರ ಅಗತ್ಯ ಅವರಿಗಿಲ್ಲದ್ದರಿಂದ ನಾಣ್ಯವನ್ನು ದಾನ ನೀಡಬೇಕೆಂದು ನಿರ್ಧರಿಸಿ ದಿನವಿಡೀ ಗ್ರಾಮದ ಬೀದಿಗಳಲ್ಲಿ ಸುತ್ತಾಡಿದರು. ಆದರೆ, ದಾನದ ಅಗತ್ಯವಿರುವ ಯಾರನ್ನೂ ಕಂಡುಹಿಡಿಯಲು ಆಗಲಿಲ್ಲ. ಕತ್ತಲಾದ ಕಾರಣ ಋಷಿಗಳು ವಿಶ್ರಾಂತಿ ಪಡೆಯುವ ಉದ್ದೇಶದಿಂದ ಗ್ರಾಮದ ಹೊರವಲಯದಲ್ಲಿದ್ದ ಮಂದಿರವನ್ನು ತಲುಪಿ ಆ ರಾತ್ರಿಯನ್ನು ಅಲ್ಲಿಯೇ ಕಳೆದರು. ಮರುದಿನ ಬೆಳಗ್ಗೆ ರಾಜನೊಬ್ಬ ತನ್ನ ಸೈನ್ಯದೊಂದಿಗೆ ಮತ್ತೊಂದು ರಾಜ್ಯದ ಆಕ್ರಮಣಕ್ಕೆ ಹೋಗುತ್ತಿರುವುದನ್ನು ಅವರು ಕಂಡರು. ಋಷಿಗಳನ್ನು ನೋಡಿದ ರಾಜನು ಅವರ ಬಳಿ ಆಶೀರ್ವಾದ ಪಡೆಯುವ ಆಲೋಚನೆಯಿಂದ ಸೈನ್ಯವನ್ನು ನಿಲ್ಲಿಸಿದನು. ಅವರ ಬಳಿ ಬಂದು ಆಶೀರ್ವಾದ ಬೇಡಿದ ರಾಜನಿಗೆ ಅವರು ಆ ನಾಣ್ಯವನ್ನು ನೀಡಿದರು. ರಾಜನು ಗೊಂದಲಕ್ಕೊಳಗಾಗಿ ಇದರ ಅರ್ಥ ತಿಳಿಸಲು ಕೋರಿದನು.
ಆಗ ಋಷಿಗಳು ನಾಣ್ಯ ಸಿಕ್ಕಿದ್ದು, ಅದರ ಅಗತ್ಯ ತಮಗಿಲ್ಲದಿರುವುದು, ಅವಶ್ಯ ಇದ್ದವರಿಗೆ ದಾನ ಮಾಡಲು ಪಟ್ಟ ಕಷ್ಟ ಎಲ್ಲವನ್ನೂ ರಾಜನಿಗೆ ವಿವರಿಸಿದರು. ‘ನಿಮ್ಮ ರಾಜ್ಯದಲ್ಲಿ ಎಲ್ಲರೂ ಸಂತೋಷದಿಂದ ಇದ್ದಾರೆ ಮತ್ತು ಇದ್ದುದರಲ್ಲಿಯೇ ತೃಪ್ತರಾಗಿದ್ದಾರೆ. ಹಾಗಾಗಿ ಈ ನಾಣ್ಯವನ್ನು ಕೊಡಲು ನನಗೆ ಯಾರೂ ಸಿಗಲಿಲ್ಲ’ ಎಂದು ಹೇಳಿದರು. ಮಾತುಗಳನ್ನು ಮುಂದುವರಿಸಿದ ಅವರು, ‘ಈ ರಾಜ್ಯದ ರಾಜರಾದ ನೀವು ಈಗಿರುವುದರಲ್ಲಿ ತೃಪ್ತಿ ಹೊಂದಿಲ್ಲ. ಇನ್ನೂ ಹೆಚ್ಚಿನದನ್ನು ಗಳಿಸುವ ಬಯಕೆ ಹೊಂದಿದ್ದೀರಿ. ಆದ್ದರಿಂದ ಈ ನಾಣ್ಯದ ಅವಶ್ಯಕತೆ ಇರಬಹುದೆಂದು ಭಾವಿಸಿ ನಿಮಗೆ ನೀಡಿದೆ’ ಎಂದರು. ರಾಜನಿಗೆ ತನ್ನ ತಪ್ಪಿನ ಅರಿವಾಗಿ ಯುದ್ಧದ ಆಲೋಚನೆಯನ್ನು ಕೈಬಿಟ್ಟು ಸೈನ್ಯದೊಂದಿಗೆ ಮರಳಿದನು.
ಇರುವುದನ್ನೆಲ್ಲ ಉಳಿಸಿಕೊಳ್ಳಲು ಸಾಧ್ಯವಿಲ್ಲ. ಕಳಕೊಂಡ ಎಲ್ಲವನ್ನೂ ಪಡೆಯಲು ಸಾಧ್ಯವಿಲ್ಲ. ಯಶಸ್ಸಿನ ಜೀವನಕ್ಕಿಂತ ಮಿಗಿಲಾದುದು ತೃಪ್ತಿಯ ಜೀವನ. ಯಶಸ್ಸು ಎಂಬುದು ನಾವ್ಯಾರು ಎಂಬುದನ್ನು ಹೊರಗಿನವರಿಗೆ ತೋರಿಸುತ್ತದೆ. ತೃಪ್ತಿ ಎಂಬುದು ನಾನ್ಯಾರು ಎಂಬುದನ್ನು ನಮ್ಮೊಳಗೆ ತೋರಿಸುತ್ತದೆ. ತೃಪ್ತಿ ಎನ್ನುವುದು ಬಾಹ್ಯ ಪ್ರಪಂಚದಲ್ಲಿ ಸಿಗುವಂತಹದ್ದಲ್ಲ. ಮಾಡುವ ಕೆಲಸ ಕಾರ್ಯಗಳು ಸರಿಯಾಗಿದ್ದರೆ ಅದೇ ತೃಪ್ತಿ. ಮನುಷ್ಯನಿಗೆ ಜೀವನದಲ್ಲಿ ಆತ್ಮತೃಪ್ತಿ ಇರಬೇಕು. ಅತೃಪ್ತಿ ಮನುಷ್ಯನ ಸಂತೋಷ, ನೆಮ್ಮದಿಗಳನ್ನು ಹಾಳು ಮಾಡುತ್ತದೆ. ಅರ್ಹತೆಯಿಂದ ಅವಕಾಶ ಸಿಕ್ಕರೆ, ಯೋಗ್ಯತೆಯಿಂದ ಮರ್ಯಾದೆ ಸಿಗುತ್ತದೆ. ವರಗಳಲ್ಲಿ ಅತಿ ದೊಡ್ಡ ವರ ಅರೋಗ್ಯ. ಶ್ರೀಮಂತಿಕೆಯಲ್ಲಿ ಅತಿ ದೊಡ್ಡ ಶ್ರೀಮಂತಿಕೆಯೇ ತೃಪ್ತಿ. ತೃಪ್ತಿ-ಅತೃಪ್ತಿಗಳ ವ್ಯತ್ಯಾಸಗಳನ್ನು ಅರಿತುಕೊಂಡರೆ ಜೀವನ ಆಗುವುದು ಸಂತೃಪ್ತಿ. ಇದನ್ನು ಅರಿತು ಭಗವಂತ ನಮಗೆ ಈಗಾಗಲೇ ನೀಡಿದ್ದರ ಬಗ್ಗೆ ಖುಷಿಯಿಂದ ತೃಪ್ತಿಯ ಜೀವನ ನಡೆಸೋಣ.
(ಲೇಖಕರು ಹವ್ಯಾಸಿ ಬರಹಗಾರರು)