ಅಂಕಣ

ಆತುರದಿಂದ ಪ್ರಮಾದ: ಆ ಕ್ಷಣ ಅಂಕಣ..

Webdesk - Ravikanth
ರೀಟಾ (34) ದೆಹಲಿಯಲ್ಲಿ ವೈದ್ಯೆಯಾಗಿದ್ದು ಆಕೆಯ ಪತಿ ಜವಳಿ ಅಂಗಡಿಯೊಂದರ ಮಾಲೀಕ. ಒಂದು ಬೆಳಗ್ಗೆ ಆಕೆಯ ಮೊಬೈಲ್ ಫೋನಿಗೆ ಅರಿಯದ ನಂಬರೊಂದರಿಂದ ಕರೆ ಬಂದಿತು. ಫೋನ್ ಮಾಡಿದಾತ ತಾನು ಫೆಡೆಕ್ಸ್ ಕೊರಿಯರ್ ಕಂಪನಿಯವನೆಂದು ತಿಳಿಸಿ, ನೀವು ಕಳುಹಿಸಿದ್ದ ಪಾರ್ಸಲನ್ನು ಮುಂಬೈ ಕಸ್ಟಮ್್ಸ ಅಧಿಕಾರಿಗಳು ಜಪ್ತಿ್ತಮಾಡಿದ್ದಾರೆ ಎಂದ. ನಿಮಗೆಲ್ಲೋ ತಪ್ಪು ಕಲ್ಪನೆಯಾಗಿರಬೇಕು. ನಾನು ಯಾವುದೇ ಪಾರ್ಸಲ್ ಕಳುಹಿಸಿಲ್ಲ ಎನ್ನುತ್ತಾ ಫೋನಿಡಲು ರೀಟಾ ಮುಂದಾದಾಗ ಆ ವ್ಯಕ್ತಿ, ‘ನಿಮ್ಮ ಪಾರ್ಸಲ್​ನಲ್ಲಿ ಒಂದು ನಕಲಿ ಪಾಸ್​ಪೋರ್ಟ್, ಬಟ್ಟೆಗಳು ಮತ್ತು 140 ಗ್ರಾಂ ಮಾದಕ ವಸ್ತುಗಳ ಟ್ಯಾಬ್ಲೆಟ್​ಗಳಿವೆ. ಪಾರ್ಸಲ್ ಮುಂಬೈನಿಂದ ಬ್ಯಾಂಕಾಕಿಗೆ ಬುಕ್ ಮಾಡಿದ್ದು ಬುಕಿಂಗ್ ಶುಲ್ಕವನ್ನು ನಿಮ್ಮ ಐಸಿಐಸಿಐ ಕ್ರೆಡಿಟ್ ಕಾರ್ಡಿನಿಂದ ಕೊಡಲಾಗಿದೆ’ ಎಂದ.

ತನ್ನ ಬಳಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಇಲ್ಲವೆಂದೂ ತಾನು ಪಾರ್ಸಲನ್ನೂ ಕಳುಹಿಸಿಲ್ಲವೆಂದೂ ಮತ್ತೊಮ್ಮೆ ರೀಟಾ ಹೇಳಿದಾಗ ಆತ ‘ಮೇಡಂ, ನಮ್ಮ ಕಂಪನಿಗೆ ಕಸ್ಟಮ್್ಸ ಕಚೇರಿಯಿಂದ ಈ ಮಾಹಿತಿ ಬಂದಿದೆ. ಮುಂದೆ ಅಧಿಕಾರಿಗಳು ವಿಚಾರಣೆಗೆ ಕರೆಸಿದರೆ ನಿಮಗೆ ತೊಂದರೆಯಾಗದಿರಲಿ ಎಂದು ನಾನು ಕಾಲ್ ಮಾಡಿರುವೆ. ನೀವು ಪಾರ್ಸಲನ್ನೇ ಕಳುಹಿಸದಿದ್ದರೆ ನಾನು ಕೊಡುವ ಮುಂಬೈನ ಅಂಧೇರಿ ಪೊಲೀಸ್ ಠಾಣೆಯ ನಂಬರಿಗೆ ತಿಳಿಸಿ. ಇಲ್ಲವಾದರೆ ನಿಮಗೆ ಸಮಸ್ಯೆಯಾಗುತ್ತದೆ’ ಎಂದ. ಆ ನಂಬರ್ ಕೊಡಲು ರೀಟಾ ಕೇಳಿದಳು. ಆ ವ್ಯಕ್ತಿ, ಮೊಬೈಲ್​ನಲ್ಲಾಗಲೀ ಅಥವಾ ಲ್ಯಾಂಡ್​ಲೈನಿನಲ್ಲಾಗಲೀ ಬಂದ ಕರೆಗಳನ್ನು ಆ ಠಾಣೆಯಲ್ಲಿ ಸ್ವೀಕರಿಸುವುದಿಲ್ಲ, ಸ್ಕೈಪ್ ಕಾಲಿನಲ್ಲಿ ಮಾತ್ರ ಮಾತನಾಡುತ್ತಾರೆ, ನಿಮ್ಮ ಮೊಬೈಲ್​ನಲ್ಲಿ ಸ್ಕೈಪ್ ಇದೆಯೇ? ಎಂದು ಕೇಳಿದ. ರೀಟಾ ಇದೆ ಎಂದ ಕೂಡಲೇ ಆತ ಅಂಧೇರಿ ಈಸ್ಟ್ ಸೈಬರ್ ಕ್ರೈಂ ಪೊಲೀಸ್ ಠಾಣೆ ಎಂಬ ಹೆಸರಿನ ಸ್ಕೈಪ್ ಕಾಂಟಾಕ್ಟ್ ಅವಳಿಗೆ ಕೊಟ್ಟು ಫೋನನ್ನು ಕಟ್ ಮಾಡಿದ. ಗಾಬರಿಯಾಗಿದ್ದ ರೀಟಾ ಆ ಕಾಂಟಾಕ್ಟ್​ಗೆ ತಕ್ಷಣ ಕರೆ ಮಾಡಿದಳು.

ರೀಟಾಳ ವಿಡಿಯೋ ಕರೆಯನ್ನು ಸ್ವೀಕರಿಸಿದ ಹೆಣ್ಣು ಮಗಳು ಕುಳಿತಿದ್ದ ಮೇಜಿನ ಹಿಂದೆ ಸೈಬರ್ ಕ್ರೈಂ ಪೊಲೀಸ್ ಎಂಬ ಫಲಕವಿತ್ತು. ಆಕೆ ತನ್ನನ್ನು ಇನ್​ಸ್ಪೆಕ್ಟರ್ ಸ್ಮಿತಾ ಪಾಟೀಲ್ ಎಂದು ಪರಿಚಯಿಸಿಕೊಂಡಾಗ ಡಾ. ರೀಟಾ ತಾನು ಯಾವ ಪಾರ್ಸಲನ್ನೂ ಕಳುಹಿಸಿಲ್ಲ ಎಂದಳು. ಆಕೆ ಯಾವುದೋ ರಿಜಿಸ್ಟರ್ ನೋಡಿ, ನೀವು ಕಳುಹಿಸಿದ ಪಾರ್ಸಲ್ ಜಪ್ತಿಯಾಗಿದೆ. ತುಂಬಾ ಸೀರಿಯಸ್ ಕೇಸ್ ಎಂದು ಹೇಳಿ ತನ್ನ ಕಚೇರಿಯ ಇನ್ನೊಬ್ಬನಿಗೆ ರೀಟಾ ಕರೆ ಮಾಡುತ್ತಿರುವುದಾಗಿ ತಿಳಿಸಿದಳು. ಆ ವ್ಯಕ್ತಿ ಅವರ ಆಧಾರ್ ಕಾರ್ಡ್ ಸಂಖ್ಯೆ ತೆಗೆದುಕೋ ಎಂದು ಹೇಳಿದ್ದನ್ನು ರೀಟಾ ಕೇಳಿಸಿಕೊಂಡು ತನ್ನ ಆಧಾರ್ ಕಾರ್ಡ್ ನಂಬರ್ ಕೊಟ್ಟಳು. ಸ್ಮಿತಾ ಆ ನಂಬರನ್ನು ಯಾರಿಗೋ ಓದಿ ಹೇಳಿದಳು. ಕೆಲ ನಿಮಿಷದ ನಂತರ ಆತ, ಈ ಆಧಾರ್ ಕಾರ್ಡಿನಲ್ಲಿ 23 ವಿವಿಧ ಬ್ಯಾಂಕ್ ಅಕೌಂಟ್​ಗಳನ್ನು ತೆರೆಯಲಾಗಿದೆ. ಇವುಗಳ ಮೂಲಕ ಹಣದ ದುರ್ವ್ಯವಹಾರ ಮಾಡುತ್ತಿರುವುದಾಗಿ ದೂರು ಬಂದಿದೆ. ಇದು ಸೀರಿಯಸ್ ಪ್ರಕರಣವಾದ್ದರಿಂದ ಅಕೌಂಟ್​ಗಳನ್ನು ವಾಚ್ ಮಾಡಲು ಹೇಳಿದ್ದಾರೆ ಎಂದ. ಈ ಸಂಭಾಷಣೆಯನ್ನು ಕೇಳಿ ಗಾಬರಿಯಾದ ರೀಟಾ, ‘ಇನ್​ಸ್ಪೆಕ್ಟರ್, ನಾನೊಬ್ಬ ಡಾಕ್ಟರ್, ನನಗೂ ಕ್ರಿಮಿನಲ್ ಪ್ರಕರಣಗಳಿಗೂ ಸಂಬಂಧವಿಲ್ಲ’ ಎಂದಳು. ಆಗ ಅವಳು, ‘ನೀವು ನಮ್ಮ ಸಾಹೇಬರೊಡನೆ ಮಾತನಾಡಿ’ ಎನ್ನುತ್ತಾ ಯಾರನ್ನೋ ಕರೆದಳು.

ಕಾಲ್​ಗೆ ಬಂದವನು ತನ್ನನ್ನು ಸೈಬರ್ ಡಿಸಿಪಿ ಎಂದು ಪರಿಚಯಿಸಿಕೊಂಡು, ಮಾದಕ ವಸ್ತುಗಳ ಸಾಗಾಟ ಮತ್ತು ಉಗ್ರಗಾಮಿ ಚಟುವಟಿಕೆಗಳಿಗಾಗಿ ಹಣ ಕಳಿಸಿರುವ ಆರೋಪದ ಮೇರೆಗೆ ನಿಮ್ಮ ಅಕೌಂಟ್​ಗಳನ್ನು ಜಪ್ತಿ ಮಾಡಬೇಕಾಗಿದೆ. ನಿಮ್ಮ ಎಲ್ಲ ಬ್ಯಾಂಕ್ ಅಕೌಂಟ್​ಗಳ ವಿವರ ಮತ್ತು ಅವುಗಳ ಬ್ಯಾಲೆನ್ಸ್ ಕೊಡಿ. ಇದಲ್ಲದೆ, ನಿಮ್ಮ ಎಲ್ಲ ಬ್ಯಾಂಕ್ ಪಾಸ್​ಬುಕ್​ಗಳ ಮುಂಭಾಗದ ಪೇಜ್ ಮತ್ತು ಅಂದಿನ ಬ್ಯಾಲೆನ್ಸ್ ಇರುವ ಪುಟಗಳ ಫೋಟೋ ತೆಗೆದು ಅವುಗಳ ಸ್ಕಿ›ೕನ್ ಷಾಟುಗಳನ್ನು ನಾನು ಕೊಡುವ ನಂಬರಿಗೆ ವಾಟ್ಸಪ್ ಮಾಡಿ’ ಎಂದು ಹೇಳಿ ಒಂದು ನಂಬರ್ ಕೊಟ್ಟ. ಮುಂದುವರಿದ ಆತ, ‘ನೀವು ನನ್ನ ಜತೆ ಮಾತನಾಡಿದ್ದನ್ನು ಯಾರಿಗೂ, ಅಂದರೆ ನಿಮ್ಮ ಪತಿ, ಕುಟುಂಬದವರು ಇಲ್ಲವೇ ಪರಿಚಯದವರಿಗೂ ತಿಳಿಸಬಾರದು. ತಿಳಿಸಿದರೆ ನನ್ನನ್ನು ಕೆಲಸದಿಂದ ಅಮಾನತು ಮಾಡುತ್ತಾರೆ, ಆಗ ನಿಮ್ಮ ಕೆಲಸ ಕೆಡುತ್ತದೆ’ ಎಂದ.

ಮದ್ಯಾಹ್ನದೊಳಗೆ ರೀಟಾ ತನ್ನ ಬ್ಯಾಂಕ್ ಪಾಸ್​ಬುಕ್​ಗಳನ್ನು ನವೀಕರಿಸಿ ಅದರ ಸ್ಕ್ರೀನ್ ಶಾಟ್ ತೆಗೆದುಕೊಂಡು ಅವರು ಕೊಟ್ಟ ವಾಟ್ಸಪ್ ನಂಬರಿಗೆ ಕಳಿಸಿ ಆನಂತರ ಸ್ಕೈಪ್ ಕರೆ ಮಾಡಿದಳು. ಉತ್ತರಿಸಿದ ಸ್ಮಿತಾ ಪಾಟೀಲ್, ‘ಮೇಡಂ, ನಿಮ್ಮ ಕೇಸು ಹೊಸ ತಿರುವನ್ನು ಪಡೆದುಕೊಂಡಿದೆ. ರಿಸರ್ವ್ ಬ್ಯಾಂಕ್, ಮತ್ತು ಕಸ್ಟಮ್್ಸ ಅಧಿಕಾರಿಗಳು ನಿಮ್ಮೊಡನೆ ಮಾತನಾಡಲು ಬಯಸುತ್ತಾರೆ. ನಾಳೆ ಬೆಳಗ್ಗೆ ಮತ್ತೆ ಕರೆ ಮಾಡಿ’ ಎಂದು ಫೋನಿಟ್ಟಳು. ಮಾರನೆಯ ಬೆಳಗ್ಗೆ ಡಾ. ರೀಟಾ ಅದೇ ಸ್ಕೈಪ್ ನಂಬರಿಗೆ ಕರೆ ಮಾಡಿದಳು. ಆಗ ಅವಳೊಡನೆ ಈ ಹಿಂದೆ ಮಾತನಾಡಿದ್ದ ಡಿಸಿಪಿ ತನ್ನ ಜತೆಗಿದ್ದ ನಾಲ್ಕು ಜನ ಅಧಿಕಾರಿಗಳನ್ನು ರೆವಿನ್ಯೂ ಇಂಟಲಿಜನ್ಸ್, ಎನ್​ಐಎ, ಇನ್​ಕಂ ಟ್ಯಾಕ್ಸ್ ಮತ್ತು ಕಸ್ಟಮ್್ಸ ಅಧಿಕಾರಿಗಳೆಂದು ಅವಳಿಗೆ ಪರಿಚಯಿಸಿ ಅವಳ ಪ್ರಕರಣದ ಬಗ್ಗೆ ಅವರಿಗೆ ತಿಳಿಸಿದ. ಅವರು ಪರಸ್ಪರ ಮಾತನಾಡಿಕೊಂಡು ‘ಇದೊಂದು ಸೀರಿಯಸ್ ಪ್ರಕರಣ. ನಾವು ಅವರನ್ನು ಬಂಧಿಸಿ ಅವರ ಮನೆಯ ಮೇಲೆ ದಾಳಿ ಮಾಡಬೇಕು. ನಾಳೆಯೇ ದೆಹಲಿಯ ಅಧಿಕಾರಿಗಳಿಗೆ ಸೂಚಿಸಿ’ ಎನ್ನತೊಡಗಿದರು. ಇದನ್ನು ಕೇಳಿದ ರೀಟಾ ಬೆವೆತು ಹೋದಳು. ‘ಸಾಹೇಬರೇ ನಮ್ಮದು ಮರ್ಯಾದಸ್ಥ ಕುಟುಂಬ, ದಯವಿಟ್ಟು ಯಾರನ್ನೂ ನಮ್ಮ ಮನೆಗೆ ಕಳಿಸಬೇಡಿ, ಏನಾದರೂ ಮಾಡಿ ನನ್ನ ಸಮಸ್ಯೆ ಬಗೆಹರಿಸಿ’ ಎಂದಳು. ಆಗ ಅಲ್ಲಿದ್ದ ಕಸ್ಟಮ್್ಸ ಅಧಿಕಾರಿ, ‘ನಿಮ್ಮ ಬಗ್ಗೆ ನಮಗೆ ಸಹಾನುಭೂತಿ ಇದೆ. ಏನೋ ತಪ್ಪಿನಿಂದ ಹೀಗಾಗಿರಬಹುದು. ಈಗ ನಾವು ಹೇಳಿದ್ದನ್ನು ಮಾಡಿದರೆ ನಾವು ಪರಿಶೀಲಿಸಿ ನಿಮಗೆ ಸಹಾಯ ಮಾಡುತ್ತೇವೆ’ ಎಂದ.

ಏನು ಮಾಡಬೇಕೆಂದು ರೀಟಾ ಕೇಳಿದಾಗ ನಿಮ್ಮ ಅಕೌಂಟುಗಳಲ್ಲಿ ಒಟ್ಟು 1.27 ಕೋಟಿ ರೂಪಾಯಿಗಳು ಇವೆ. ಅವುಗಳಲ್ಲಿ ಒಂದು ಕೋಟಿಯಷ್ಟು ಹಣ ಫಿಕ್ಸೆಡ್ ಡಿಪಾಸಿಟ್ ಇದೆ. ನೀವು ಈ ಸಂಜೆಯೊಳಗೆ ನಿಮ್ಮ ಡಿಪಾಸಿಟ್ ಮುರಿದು ಆ ಹಣವನ್ನು ನಿಮ್ಮ ಸೇವಿಂಗ್ ಬ್ಯಾಂಕ್ ಅಕೌಂಟ್​ಗೆ ತುಂಬಿ ಆನಂತರ ನಮ್ಮನ್ನು ಸಂರ್ಪಸಿ ಎಂದು ಹೇಳಿ ಕರೆಯನ್ನು ಮುಗಿಸಿದ. ನಂತರ ರೀಟಾ ತನ್ನ ಬ್ಯಾಂಕ್ ಠೇವಣಿಗಳನ್ನು ಮುರಿದು ಅವನ್ನು ತನ್ನ ಸೇವಿಂಗ್ಸ್ ಅಕೌಂಟ್​ಗೆ ಹಾಕಿ ಮತ್ತೆ ಆ ಸೈಬರ್ ಪೊಲೀಸ್ ಠಾಣೆಗೆ ಸ್ಕೈಪ್ ಕಾಲ್ ಮಾಡಿದಳು. ಅವಳ ಸಂಪರ್ಕಕ್ಕೆ ಬಂದ ಡಿ.ಸಿ.ಪಿ, ‘ಈ ಪ್ರಕರಣ ನನ್ನ ವ್ಯಾಪ್ತಿಯಿಂದ ಹೊರಗೆ ಹೋಗಿದೆ. ರಿಸರ್ವ್ ಬ್ಯಾಂಕಿನ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದಾರೆ. ಅವರು ನಿಮ್ಮ ಅಕೌಂಟನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲು ಬಯಸಿದ್ದಾರೆ. ನಿಮ್ಮ ಅಕೌಂಟ್ ಅನ್ನು ಅವರು ಪರಿಶೀಲನೆ ಮಾಡಿದ ನಂತರ ನಿಮ್ಮ ಹಣವನ್ನು ವಾಪಾಸು ಮಾಡುತ್ತಾರೆ’ ಎನ್ನುತ್ತಾ ರಿಸರ್ವ್ ಬ್ಯಾಂಕ್ ಅಧಿಕಾರಿಯನ್ನು ಫೋನಿಗೆ ಕರೆದ. ಆ ಅಧಿಕಾರಿ, ‘ಡಾ. ರೀಟಾ, ನಿಮಗೆ ನಾನು ಒಂದು ಅಕೌಂಟ್ ನಂಬರ್ ಕೊಡುತ್ತೇನೆ. ನೀವು ನಿಮ್ಮ ಬ್ಯಾಂಕಿಗೆ ಹೋಗಿ ಆ ನಂಬರಿಗೆ 1. 25 ಕೋಟಿ ರೂ.ಗಳನ್ನು ವರ್ಗಾಯಿಸಿ’ ಎಂದು ಹೇಳಿ ಸದರಿ ಅಕೌಂಟಿನ ವಿವರಗಳನ್ನು ನೀಡಿದ. ರೀಟಾ ತನ್ನ ಬ್ಯಾಂಕಿಗೆ ಹೋಗಿ ಹಣ ವರ್ಗಾಯಿಸಲು ಮ್ಯಾನೇಜರರನ್ನು ಕೋರಿದಳು. ಅವರು ಸದರಿ ಅಕೌಂಟ್ ಮುಂಬೈನ ಖಾಸಗಿ ವ್ಯಕ್ತಿಯೊಬ್ಬನಿಗೆ ಸೇರಿದ್ದಾಗಿ ತಿಳಿಸಿ ಅಷ್ಟೊಂದು ಹಣ ಕಳಿಸುವ ಮುನ್ನ ಮತ್ತೊಮ್ಮೆ ಪರಿಶೀಲಿಸಲು ರೀಟಾಳಿಗೆ ಸೂಚಿಸಿದರು. ಅದಾಗಲೇ ಗಾಬರಿಯಾಗಿದ್ದ ರೀಟಾ ಅವರ ಮಾತುಗಳನ್ನು ಲೆಕ್ಕಿಸದೆ ಆ ಮುಂಬೈನ ಅಕೌಂಟ್​ಗೆ ತಕ್ಷಣ ಹಣವನ್ನು ಆರ್​ಟಿಜಿಎಸ್ ಮೂಲಕ ರವಾನಿಸಲು ಬ್ಯಾಂಕಿಗೆ ಸೂಚಿಸಿ ರವಾನಿಸಿದ ಬಗ್ಗೆ ರಸೀತಿಯನ್ನೂ ಪಡೆದಳು.

ನಂತರ ರೀಟಾ ಮತ್ತೊಮ್ಮೆ ಸೈಬರ್ ಠಾಣೆಯನ್ನು ಸ್ಕೈಪ್ ಮೂಲಕ ಸಂರ್ಪಸಿದಾಗ ಇನ್​ಸ್ಪೆಕ್ಟರ್ ಗೀತಾ ಹಣ ಮುಟ್ಟಿರುವುದಾಗಿ ತಿಳಿಸಿ, ‘ನಾಳೆ ಸಂಜೆಯೊಳಗೆ ಅರ್​ಬಿಐ ತನಿಖೆ ಮುಗಿಯುತ್ತದೆ. ನೀವು ತಪ್ಪು ಮಾಡದಿದ್ದರೆ ನಾಡಿದ್ದು ಬೆಳಗ್ಗೆ ನಿಮ್ಮ ಹಣ ನಿಮ್ಮ ಬ್ಯಾಂಕಿಗೆ ಜಮಾ ಆಗಿರುತ್ತದೆ’ ಎಂದಳು. ಎರಡು ದಿನಗಳಾದರೂ ಹಣ ಬಾರದಾದಾಗ ರೀಟಾ ಸಂಬಂಧಿಸಿದವರಿಗೆ ಸ್ಕೈಪ್ ಕರೆ ಮಾಡಿದಳು. ಅದು ಚಾಲ್ತಿಯಲ್ಲಿಲ್ಲ ಎಂದು ಗೊತ್ತಾಯಿತು. ಪದೇಪದೆ ಅದೇ ನಂಬರಿಗೆ ವಾಟ್ಸಪ್, ಸ್ಕೈಪ್ ಕರೆ ಮಾಡಿದರೂ ಯಾವುದೇ ಉತ್ತರ ಬರಲಿಲ್ಲ. ಗಾಬರಿಗೊಂಡ ಆಕೆ ತನ್ನ ಗಂಡನಿಗೆ ನಡೆದ ವಿಷಯವನ್ನು ತಿಳಿಸಿ ಆತನೊಡನೆ ದೆಹಲಿಯ ಸೈಬರ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಳು. ಆಕೆ ಮೋಸ ಹೋಗಿರುವುದು ಮೇಲ್ನೋಟಕ್ಕೇ ತಿಳಿದ ಕಾರಣ ದೂರನ್ನು ದಾಖಲು ಮಾಡಿಕೊಂಡ ಅಧಿಕಾರಿಗಳು ಕೂಡಲೇ ತನಿಖೆ ಆರಂಭಿಸಿದರು. ರೀಟಾ ಕೊಟ್ಟಿದ್ದ ಅಷ್ಟೂ ಹಣವನ್ನು ವಿತ್​ಡ್ರಾ ಮಾಡಿದ್ದ ಖದೀಮರು ಅಕೌಂಟನ್ನೇ ಕ್ಲೋಸ್ ಮಾಡಿದ್ದರು. ಇಲ್ಲಿಯವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಪತ್ತೆಯಾದರೂ ಹೋದ ಹಣ ಪೂರ್ತಿಯಾಗಿ ಮರಳುವುದಿಲ್ಲ. ವಿದ್ಯಾವಂತೆಯಾಗಿದ್ದರೂ ಡಾ. ರೀಟಾ ಆಗಂತುಕರಿಗೆ ಕೋಟಿ ರೂ.ಗಳಿಗೂ ಹೆಚ್ಚಿನ ಹಣವನ್ನು ವರ್ಗಾಯಿಸಲು ವಂಚಕರು ಅವಳಿಗೆ ಭಯವುಂಟು ಮಾಡುವ ವಾತಾವರಣವನ್ನು ನಿರ್ವಿುಸಿದ್ದೇ ಕಾರಣ. ತಾನು ಪಾರ್ಸಲ್ ಕಳಿಸದಿದ್ದರೂ ವಂಚಕರು ಕೊಟ್ಟ ನಂಬರನ್ನು ಸಂರ್ಪಸಿದ್ದು, ಹಾಗೂ ಬ್ಯಾಂಕ್ ಮ್ಯಾನೇಜರರ ಸೂಚನೆಯನ್ನು ಪಾಲಿಸದಿದ್ದುದು ಭಯದಿಂದ ರೀಟಾಳ ಮನಸ್ಸು ಅಸ್ಥಿರಗೊಂಡಿದ್ದರಿಂದಲೇ. ವಂಚಕರಿಂದ ಪಾರಾಗಬೇಕಾದರೆ ಆತುರದ ತೀರ್ವನವನ್ನು ಎಂದಿಗೂ ತೆಗೆದುಕೊಳ್ಳಬಾರದು. ನೆಪೋಲಿಯನ್​ನನ್ನು ಮಣಿಸಿದ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಹೇಳಿದಂತೆ ‘ಆತುರದ ಮುಂದುವರಿದ ಭಾಗವೇ ಪ್ರಮಾದ’.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)