ಅಂಕಣ

ಅನಗತ್ಯ ತಂಟೆ: ಮಾಲ್ದೀವ್ಸ್​ಗೆ ಚೀನಾ ಕುಮ್ಮಕ್ಕು

ಚೀನಾವನ್ನು ನಂಬಿಕೊಂಡು ವಿದೇಶಾಂಗ ನೀತಿಗಳಲ್ಲಿ ಬದಲಾವಣೆ ಮಾಡಿಕೊಂಡ ಹಲವು ರಾಷ್ಟ್ರಗಳು ಇಕ್ಕಟ್ಟಿನಲ್ಲಿ ಸಿಲುಕಿ, ಅಂತಾರಾಷ್ಟ್ರೀಯ ಸಮುದಾಯದೆದುರು ದನಿ ಕಳೆದುಕೊಳ್ಳುತ್ತಿವೆ ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಾಲ್ದೀವ್ಸ್ ಸೋತಿದೆ. ಪ್ರಧಾನಿ ನರೇಂದ್ರ ಮೋದಿಯವರ ಲಕ್ಷದ್ವೀಪ ಭೇಟಿ ಹಿನ್ನೆಲೆಯಲ್ಲಿ ಅನಗತ್ಯ ವಿವಾದ ಸೃಷ್ಟಿಸಿಕೊಂಡಿದ್ದ ಮಾಲ್ದೀವ್ಸ್, ಭಾರಿ ವಿರೋಧ ವ್ಯಕ್ತವಾದ ಬಳಿಕ ಮೂವರು ಸಚಿವರನ್ನು ಅಮಾನತುಗೊಳಿಸಿತ್ತು. ಮಾಲ್ದೀವ್ಸ್​ನಲ್ಲಿ ದಶಕಗಳಿಂದ ಇರುವ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಇದೇ ಮಾರ್ಚ್ 15ರೊಳಗೆ ವಾಪಸ್ ಕರೆಸಿಕೊಳ್ಳುವಂತೆ ಅಧ್ಯಕ್ಷ ಮಹಮದ್ ಮುಯಿಝುು ಗಡುವು ವಿಧಿಸಿರುವುದು ಉಭಯ ದೇಶಗಳ ನಡುವಿನ ಶೀತಲಸಮರವನ್ನು ತೀವ್ರಗೊಳಿಸಿದೆ. ಅಧ್ಯಕ್ಷ ಮುಯಿಝುು ಐದು ದಿನಗಳ ಚೀನಾ ಭೇಟಿಯಿಂದ ಶನಿವಾರವಷ್ಟೇ ಮಾಲ್ದೀವ್ಸ್​ಗೆ ಮರಳಿದ್ದರು. ಅದರ ಮರುದಿನವೇ ಭಾರತೀಯ ಪಡೆಗಳ ವಾಪಸಾತಿಗೆ ಬಲವಾಗಿ ಆಗ್ರಹಿಸಿರುವುದು ಗಮನಾರ್ಹವಾಗಿದೆ. ಭಾರತೀಯ ಸೇನೆಯ 77 ಸೇನಾ ಸಿಬ್ಬಂದಿ ಮಾಲ್ದೀವ್ಸ್​ನಲ್ಲಿದ್ದಾರೆ.

ಭಾರತಕ್ಕೆ ಮಾಲ್ದೀವ್ಸ್ ಸಾಂಪ್ರದಾಯಿಕ ಸ್ನೇಹವಲಯದ ದೇಶವಾಗಿತ್ತು. ಈ ಹಿಂದೆ ಆಗಿ ಹೋದ ಹಲವು ಅಧ್ಯಕ್ಷರು ‘ಭಾರತ ಮೊದಲು’ ಎಂಬ ವಿದೇಶಾಂಗ ನೀತಿಯನ್ನು ಅನುಸರಿಸಿಕೊಂಡು ಬಂದಿದ್ದರು. ಆದರೆ, 2023ರಲ್ಲಿ ಆಯ್ಕೆಯಾದ ಅಧ್ಯಕ್ಷ ಮುಯಿಝುು ಚೀನಾಗೆ ಆಪ್ತರಾಗಿದ್ದು, ಉದ್ದೇಶಪೂರ್ವಕವಾಗಿಯೇ ಭಾರತವಿರೋಧಿ ನೀತಿಯನ್ನು ಅನುಸರಿಸುತ್ತಿದ್ದಾರೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲೇ ಅವರು, ‘ಇಂಡಿಯಾ ಔಟ್’ (ಭಾರತ ಹೊರಹೋಗಲಿ) ಎಂಬ ನೀತಿಯನ್ನು ಅನುಸರಿಸಿದ್ದರು. ರ್ಯಾಲಿಗಳಲ್ಲಿ ಚೀನಾದ ಪರವಾಗಿ ಮಾತನಾಡಿದ್ದರು. ಮಾಲ್ದೀವ್ಸ್​ನಲ್ಲಿ ಯಾರೇ ಅಧ್ಯಕ್ಷರಾಗಲಿ ಅವರು ಮೊದಲು ಭಾರತಕ್ಕೆ ಭೇಟಿ ನೀಡುತ್ತಿದ್ದರು. ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ ಸಿಂಗ್ ಈ ಹಿಂದೆ ಮಾಲ್ದೀವ್ಸ್​ಗೆ ಭೇಟಿ ನೀಡಿದ್ದರು. ಆದರೆ ಮುಯಿಝುು ಮೊದಲ ಭೇಟಿ ಟರ್ಕಿ ಆಗಿತ್ತು. ಅಲ್ಲದೆ, ಅವರು ಅಧ್ಯಕ್ಷರಾದ ನಂತರ ಚೀನಾದ ಜತೆಗಿನ ವ್ಯಾಪಾರ ಸಂಬಂಧ ಹೆಚ್ಚಿದೆ.

ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಹದಗೆಟ್ಟರೆ ಅದರಿಂದ ಪುಟ್ಟ ದ್ವೀಪರಾಷ್ಟ್ರ ಮಾಲ್ದೀವ್ಸ್​ಗೇ ಹೆಚ್ಚು ನಷ್ಟ ಎಂಬುದನ್ನು ಮುಯಿಝುು ಮರೆತಂತಿದೆ. ಏನೇ ಬಿಕ್ಕಟ್ಟು ಬಂದರೂ, ಚೀನಾ ಬೆಂಬಲಿಸುತ್ತದೆ ಎಂಬ ಅವರ ಅತಿಯಾದ ಆತ್ಮವಿಶ್ವಾಸವೇ ಭಾರತದೊಂದಿಗಿನ ಶೀತಲಸಮರವನ್ನು ತೀವ್ರಗೊಳಿಸಿದೆ. ಮಾಲ್ದೀವ್ಸ್​ಗೆ ಕಳೆದ 40 ವರ್ಷಗಳಿಂದ ರಕ್ಷಣಾ ಉಪಕರಣಗಳನ್ನು ಒದಗಿಸುತ್ತಿರುವ ಭಾರತವು 2010ರಲ್ಲಿ 2 ಹೆಲಿಕಾಪ್ಟರ್ ಮತ್ತು 2013ರಲ್ಲಿ ಸಣ್ಣ ವಿಮಾನವನ್ನು ಉಡುಗೊರೆಯಾಗಿ ನೀಡಿತ್ತು. ಅಷ್ಟೇ ಅಲ್ಲದೆ, ಹಲವು ಸಂದರ್ಭಗಳಲ್ಲಿ ನೆರವು ನೀಡಿತ್ತು. ಈಗ ಭಾರಿ ಸಾಲದಲ್ಲಿ ಮುಳು ಗಿರುವ (ಜಿಡಿಪಿಯ ಶೇ.113) ಮಾಲ್ದೀವ್ಸ್ ಆರ್ಥಿಕ ನೆರವಿಗಾಗಿ ಚೀನಾದ ಮೊರೆ ಹೋಗಿದೆ. ಆದರೆ, ರಾಜತಾಂತ್ರಿಕವಾಗಿ ತಪು್ಪ ಹೆಜ್ಜೆ ಇರಿಸಿರುವ ಅಧ್ಯಕ್ಷ ಮುಯಿಝುು, ದ್ವೀಪರಾಷ್ಟ್ರದ ಸ್ಥಿತಿಯನ್ನು ಮತ್ತಷ್ಟು ವಿಷಮಗೊಳಿಸುತ್ತಿರುವುದಂತೂ ಹೌದು.