| ಭಾರತಿ ಎ. ಕೊಪ್ಪ
ನಾಗಾಲೋಟದಲ್ಲಿ ಓಡುತ್ತಿರುವ ಇಂದಿನ ಯುಗದಲ್ಲಿ ಗಂಡು - ಹೆಣ್ಣು ಇಬ್ಬರೂ ಸಮಾನ ಶಿಕ್ಷಣ, ಸಮಾನ ಉದ್ಯೋಗ ಪಡೆದು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿರುವುದು ಸಾಮಾನ್ಯವಾಗಿದೆ. ಹತ್ತು ಹಲವು ಜವಾಬ್ದಾರಿಗಳ ನಡುವೆ ಕೌಟುಂಬಿಕ ಕಲಹಗಳು ಹೆಚ್ಚಾಗತೊಡಗಿವೆ. ನಿತ್ಯ ವೇದನೆಗಿಂತ ವಿಚ್ಛೇದನವೇ ಲೇಸು ಎಂದು ಪರಸ್ಪರ ವಿಚ್ಛೇದನ ಅಥವಾ ಯಾವುದೋ ವಿಚಾರದಲ್ಲಿ ಸಂಸಾರ ಒಪ್ಪಿತವಾಗುತ್ತಿಲ್ಲವೆಂದು ಗಂಡ ಹೆಂಡತಿಯಿಂದ ವಿಚ್ಛೇದನ ಬಯಸುವುದು, ಇಲ್ಲವೇ ಗಂಡನ ಕೆಲ ವರ್ತನೆಗಳು ಸಹಿಸಲಸಾಧ್ಯವೆಂದು ಹೆಂಡತಿಯೇ ಗಂಡನಿಂದ ವಿಚ್ಛೇದನ ಬಯಸುವುದು ಬಹಳವಾಗಿದೆ. ಅಂತೆಯೇ ಅಪಘಾತ, ಮರಣ ಮೃದಂಗ ತಂದೊಡ್ಡುವ ಕಾಯಿಲೆ ಇತ್ಯಾದಿಗಳಿಂದ ಪತಿಯನ್ನು ಕಳೆದುಕೊಂಡು ಮಹಿಳೆ ಒಂಟಿಯಾಗಿ ಜೀವನ ನಡೆಸುವ ಸನ್ನಿವೇಶ ಎದುರಾಗಬಹುದು. ಇಂತಹ ಎಲ್ಲ ಸಂದರ್ಭಗಳಲ್ಲಿ ಮಗುವಿನ ಜವಾಬ್ದಾರಿ ಬಹುತೇಕ ತಾಯಿ ಹೆಗಲೇರುತ್ತದೆ. ತಾಯಿಯೇ ಏಕಪೋಷಕಳಾಗಿ, ತಂದೆ ಇಲ್ಲವೆಂಬ ಕೊರಗು ಬರದಂತೆ ಮಗುವನ್ನು ಪಾಲನೆ ಮಾಡುವುದು ಅವಶ್ಯಕ ಹಾಗೂ ಅನಿವಾರ್ಯವಾಗುತ್ತದೆ.
ಮಗುವನ್ನು ಗೌರವಿಸಿ: ಮಗು ಎಲ್ಲ ಭಾವನೆಗಳನ್ನು, ಕುತೂಹಲದ ಪ್ರಶ್ನೆಗಳನ್ನು ತಾಯಿ ಬಳಿ ಮಾತ್ರವೇ ಹೇಳುವ ಅನಿವಾರ್ಯತೆ ಇರುತ್ತದೆ. ಮಕ್ಕಳು ಪ್ರೌಢ ಹಂತಕ್ಕೆ ಬರುವವರೆಗೂ ತನ್ನ ದೈನಂದಿನ ಎಲ್ಲ ಚಟುವಟಿಕೆಗಳನ್ನು ಮನೆಯಲ್ಲಿ ಹೇಳಿಕೊಳ್ಳುತ್ತಾರೆ. ಭಾವನೆಗಳಿಗೆ ಸೂಕ್ತ ಪ್ರತಿಕ್ರಿಯೆ ಕೂಡ ನಿರೀಕ್ಷಿಸುತ್ತಾರೆ. ಒಂಟಿಯಾಗಿ ಸಾಗುವ ಬದುಕಿನಲ್ಲಿ ಉಂಟಾಗುವ ಹತ್ತಾರು ಒತ್ತಡಗಳಿದ್ದರೂ, ಅದನ್ನು ಮಗುವಿನ ಭಾವನೆಗಳ ಮೇಲೆ ಹೇರಬಾರದು. ಮಗುವಿನ ಭಾವನೆಗಳನ್ನು ಗೌರವಿಸಬೇಕು. ಮಗುವಿನ ಮನದಲ್ಲಿ ತನ್ನೆಲ್ಲಾ ಭಾವನೆಗಳಿಗೆ, ಸಮಸ್ಯೆಗಳಿಗೆ ತಾಯಿ ಕಿವಿಯಾಗುತ್ತಾಳೆ, ಸದಾ ಜತೆಯಾಗಿ ಸ್ಪಂದಿಸುತ್ತಾಳೆಂಬ ಆತ್ಮವಿಶ್ವಾಸ ಬೆಳೆಸಬೇಕು. ಆಗ ಮಗುವಿಗೆ ಭಾವನಾತ್ಮಕ ಅಭದ್ರತೆ ಕಾಡದೆ ಆತ್ಮವಿಶ್ವಾಸದಿಂದ ಮುನ್ನಡೆಯಲು ಮನಸ್ಸು ಅಣಿಯಾಗುತ್ತದೆ. ತಾನೂ ಸ್ನೇಹಿತರಂತೆಯೇ ಎಲ್ಲ ರಂಗಗಳಲ್ಲಿ ಮುಂದಡಿ ಇಡಲು ಪ್ರಾರಂಭಿಸುತ್ತದೆ.
ಉದ್ಯೋಗ ಭದ್ರತೆ: ಈಗಾಗಲೆ ಉದ್ಯೋಗ ಪಡೆದುಕೊಂಡಿದ್ದು ಹಣಕಾಸಿನ ಸಮಸ್ಯೆ ಕಾಡುತ್ತಿಲ್ಲವೆಂದಾದರೂ, ಮಾಡುತ್ತಿರುವ ಕೆಲಸವನ್ನು ಹೆಚ್ಚು ಗೌರವಿಸಿ ಅದರಲ್ಲಿ ಸಫಲರಾಗಲು ಪ್ರಯತ್ನಿಸಬೇಕು. ಮಹಿಳೆ ಏಕಪೋಷಕಳಾದಾಗ ಯಾವುದೇ ಆರ್ಥಿಕ ಭದ್ರತೆಯ ಉದ್ಯೋಗ ಇಲ್ಲವೆಂದಾದರೆ, ತಕ್ಷಣ ಶಿಕ್ಷಣ ಮತ್ತು ಅರ್ಹತೆಗೆ ತಕ್ಕ ಉದ್ಯೋಗ ಹುಡುಕಿ ಪಡೆಯಬೇಕು. ತಾಯಿಯ ಆರ್ಥಿಕ ಭದ್ರತೆಯು ಮಗುವನ್ನು ಇತರ ಮಕ್ಕಳಂತೆಯೇ ಭೌತಿಕ ಸೌಲಭ್ಯಗಳನ್ನು ಒದಗಿಸಿ, ಮಕ್ಕಳಲ್ಲಿ ಬಡತನದ ಕೀಳರಿಮೆ ಭಾವನೆ ಬೆಳೆಯದಂತೆ ಬೆಳೆಸಲು ಸಹಕಾರಿಯಾಗುತ್ತದೆ. ಅದಲ್ಲದೆ ಮಗುವಿಗೆ ದುಡಿಮೆಯ ಹಿಂದೆ ಇರುವ ಶ್ರಮದ ಅರಿವು ಮೂಡಿ, ತನ್ನ ವ್ಯಕ್ತಿತ್ವದಲ್ಲಿ ಶ್ರಮ ಗೌರವದ ಭಾವನೆ ಬೆಳೆಸಿಕೊಳ್ಳಲು ಕಾರಣವಾಗುತ್ತದೆ. ಮಗುವಿಗೆ ತನ್ನ ತಾಯಿಯ ಆರ್ಥಿಕ ಹಿನ್ನಡೆಯಿಂದ ತನ್ನ ಅಗತ್ಯಗಳಿಗೆ ಇತರರ ಬಳಿ ಕೈಚಾಚುವ ಪರಿಸ್ಥಿತಿ ಉಂಟಾಗಬಾರದು. ತಾಯಿಯು ಶಿಕ್ಷಣ ಮತ್ತು ಇನ್ನಿತರ ಅಗತ್ಯತೆಗಳನ್ನು ತನ್ನದೇ ಸ್ನೇಹಿತರ ವಲಯದ ಇತರ ಪಾಲಕರಂತೆಯೇ ಸರಿದೂಗಿಸುತ್ತಾಳೆಂದು ಮಗುವಿನ ಅನುಭವಕ್ಕೆ ಬಂದಾಗ, ಮಗುವಿಗೆ ತಂದೆಯಿಲ್ಲದ ಕೊರತೆ ಕಾಡಲಾರದು.
ಕಹಿ ಘಟನೆಗಳ ಪ್ರಸ್ತಾಪ ಬೇಡ: ವಿಚ್ಛೇದನ ಇರಲಿ, ಸಾಂಸಾರಿಕ ಕಲಹ ಇರಲಿ ಅಥವಾ ಪತಿಯ ಕುಟುಂಬದ ಸದಸ್ಯರ ಬಗೆಗಿನ ಅಸಮಾಧಾನವಾಗಿರಲಿ ಪದೇ ಪದೆ ಮಕ್ಕಳ ಮುಂದೆ ಹೇಳುವುದು ಸೂಕ್ತ ಅಲ್ಲ. ಇದರಿಂದ ಮಕ್ಕಳ ಮನಸ್ಸು ಕದಡುತ್ತದೆ. ಮರೆವು ದೇವರು ಕೊಟ್ಟ ವರ ಎಂಬುದನ್ನು ಅರಿತು ಹಳೆಯ ಕಹಿ ಘಟನೆಗಳನ್ನು ಮರೆತು, ಮಗುವಿನ ಪರಿಪೂರ್ಣ ಬೆಳವಣಿಗೆಯತ್ತ ಮಾತ್ರ ಚಿತ್ತ ಬೆಳೆಸಬೇಕು. ಕಹಿ ಘಟನೆಗಳನ್ನು ಪದೇ ಪದೆ ತೆರೆದಿಡುವುದರಿಂದ ಮಗುವಿನಲ್ಲಿ ದ್ವೇಷ, ಸೇಡು, ಖಿನ್ನತೆ, ಒಂಟಿತನದಂತಹ ನಕಾರಾತ್ಮಕ ಗುಣಗಳು ಬೆಳೆಯುವ ಸಾಧ್ಯತೆ ಇದೆ.
ಹವ್ಯಾಸಗಳಿಗೆ ಪ್ರೋತ್ಸಾಹ: ಮಕ್ಕಳು ಓದಿನೊಂದಿಗೆ ಅನೇಕ ಹವ್ಯಾಸಗಳಲ್ಲಿ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿರುತ್ತಾರೆ. ನಮ್ಮ ಒಂಟಿತನದ ಒತ್ತಡದ ಬದುಕು ಮಕ್ಕಳ ಈ ರೀತಿಯ ಉತ್ಸಾಹಕ್ಕೆ ತಣ್ಣೀರೆರೆಚಬಾರದು. ಸಂಗೀತ, ನೃತ್ಯ, ಚಿತ್ರಕಲೆ ಇಂತಹ ಯಾವುದೇ ತರಬೇತಿ ಪಡೆಯಲು ಮಕ್ಕಳು ಆಸಕ್ತಿ ವ್ಯಕ್ತಪಡಿಸಿದಾಗ, ನನಗೆ ಬಿಡುವಿಲ್ಲ, ಒಬ್ಬಳೇ ದುಡಿದು ಅವುಗಳಿಗೆ ಸಮಯ ಮತ್ತು ಹಣ ಹೊಂದಾಣಿಕೆ ಮಾಡುವುದು ಕಷ್ಟ ಎಂಬ ಮಾತು ಬರಬಾರದು. ಈ ರೀತಿಯ ಮಾತುಗಳು ಬಂದಾಗ ಮಕ್ಕಳಲ್ಲಿ ತಂದೆಯಿಲ್ಲದ ಭಾವ ಮೂಡಬಹುದು. ಮಕ್ಕಳ ಹವ್ಯಾಸ ಹುರಿದುಂಬಿಸಲು ಒಂದಿಷ್ಟು ಸಮಯ, ಹಣಕಾಸು ಮೀಸಲಿಡಬೇಕು.
ಸೂಕ್ಷ್ಮತೆ ಇರಲಿ: 2019-20ರ ಒಂದು ಅಂಕಿ-ಅಂಶದ ಪ್ರಕಾರ ಭಾರತದಲ್ಲಿ ಸರಿ ಸುಮಾರು ಶೇ.4.5 ಅಂದರೆ ಅಂದಾಜು 1.3 ಕೋಟಿ ಮಹಿಳೆಯರು ಏಕಪೋಷಕರಾಗಿ ಮಕ್ಕಳ ಪಾಲನೆ ಮಾಡುತ್ತಿದ್ದಾರೆ. ಯುನೈಟೆಡ್ ನೇಷನ್ಸ್ ನ ವರದಿಯೊಂದರನ್ವಯ ಸುಮಾರು 89 ದೇಶಗಳ ಅಂಕಿ-ಅಂಶವನ್ನು ಪರಿಗಣಿಸಿದಾಗ ಪ್ರಪಂಚದಾದ್ಯಂತ 101.3 ಮಿಲಿಯನ್ ತಾಯಂದಿರು ಏಕಪೋಷಕರಾಗಿ ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.
ನಿರ್ಧಾರ ಏಕಮುಖವಾಗದಿರಲಿ: ಹದಿಹರಯಕ್ಕೆ ಬಂದ ಮೇಲೆ ಮಕ್ಕಳು ತಾಯಿಯ ಎಲ್ಲ ನೋವು-ನಲಿವುಗಳನ್ನು ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಪಡೆಯುತ್ತಾ ಬೆಳೆಯುತ್ತಾರೆ. ಹಾಗಾಗಿ ಮನೆಯ ಆಗು-ಹೋಗುಗಳ ಅಂದರೆ ಪ್ರಯಾಣ, ಪ್ರವಾಸ, ಸ್ವಂತ ಮನೆ ಖರೀದಿ, ಬೆಲೆ ಬಾಳುವ ವಸ್ತು ಖರೀದಿ ಇತ್ಯಾದಿ ಸಂದರ್ಭಗಳಲ್ಲಿ ನಿರ್ಧಾರ ನಮ್ಮದೇ ಏಕಮುಖವಾಗಿರಬಾರದು. ಮಕ್ಕಳೊಂದಿಗೆ ರ್ಚಚಿಸಿ ಪ್ರಮುಖ ನಿರ್ಧಾರ ತೆಗೆದುಕೊಂಡಾಗ ಅವರಿಗೆ ಕುಟುಂಬದ ಜವಾಬ್ದಾರಿಯ ಅರಿವು ಮೂಡುತ್ತದೆ. ತನ್ನ ಅಭಿಪ್ರಾಯಗಳಿಗೂ ತಾಯಿ ಮನ್ನಣೆ ಕೊಡುತ್ತಾಳೆಂಬ ಆತ್ಮವಿಶ್ವಾಸ ಮತ್ತು ಗೌರವ ಭಾವ ಬೆಳೆಯುತ್ತದೆ.
ಸಾಮಾಜಿಕ ನಡೆ-ನುಡಿ: ಸಾಮಾನ್ಯವಾಗಿ ಏಕಪೋಷಕಳಾದ ತಾಯಿ ಸಮಾಜದ ಕೆಲ ಪ್ರಶ್ನೆ, ನಿಂದನೆ ಎದುರಿಸಬೇಕಾಗುತ್ತದೆ. ಕೌಟುಂಬಿಕ ಕಲಹದ ಕುರಿತೋ, ಒಂಟಿತನದ ಬದುಕಿನ ಕುರಿತೋ ಎಳೆಯ ಮಕ್ಕಳ ಮುಂದೆಯೇ ಕೆಲವರು ಪ್ರಶ್ನಿಸಿ ಮನಸ್ಸು ಕದಡುತ್ತಾರೆ. ಅಂತಹ ಸಂದರ್ಭಗಳಲ್ಲಿ ಮಕ್ಕಳ ಮನಸ್ಸನ್ನು ಘಾಸಿಗೊಳಿಸುವ ವಿಚಾರಗಳನ್ನು ಸಮಾಜದ ಯಾವುದೇ ವ್ಯಕ್ತಿಗಳ ಮುಂದೆ ಹೇಳಬಾರದು. ಕೆಲವೊಮ್ಮೆ ಎಳೆಯ ಮಕ್ಕಳೂ ಇಂತಹ ಪ್ರಶ್ನೆ, ನಿಂದನೆ ಎದುರಿಸುವ ಸಂದರ್ಭ ಬರಬಹುದು. ಆಗ ಮಗು ವಿಚಲಿತವಾಗದೆ ಏಕಪೋಷಕತ್ವ ತನ್ನ ಬೆಳವಣಿಗೆಗೆ ಕೊರತೆಯಲ್ಲ ಎಂದು ಹೇಳುವ ಆತ್ಮವಿಶ್ವಾಸ ಮಕ್ಕಳಲ್ಲಿ ಬೆಳೆಸಬೇಕು.
ಸಾಧನೆಗೆ ತೊಡಕಲ್ಲ: ಬಾಲ್ಯದಲ್ಲೇ ತಂದೆಯನ್ನು ಕಳೆದು ಕೊಂಡರೂ, ತಾಯಿಯ ಆಸರೆ ಹಾಗೂ ಮಾರ್ಗ ದರ್ಶನದಲ್ಲಿ ಸಾಧನೆಯ ಉತ್ತುಂಗಕ್ಕೆ ಏರಿದ ಅನೇಕ ಸಾಧಕರು ಮಕ್ಕಳಿಗೆ ಸ್ಪೂರ್ತಿಯಾಗುವಂತೆ ಬೆಳೆಸಬೇಕು. ಲಾಲ್ ಬಹದ್ದೂರ್ ಶಾಸ್ತ್ರಿ, ಸರ್.ಎಂ.ವಿಶ್ವೇಶ್ವರಯ್ಯ, ಶಿವಾಜಿಯಂತಹ ಮಹಾನ್ ಸಾಧಕರು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡರೂ, ಅದನ್ನು ಮೀರಿ ತಾಯಿಯ ಮಾರ್ಗದರ್ಶನದಲ್ಲಿ ಬೆಳೆದು ಸಾಧನೆಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದಕ್ಕೆ ನಿದರ್ಶನರಾಗಿದ್ದಾರೆ. ಏಕಪೋಷಕತ್ವ ಸಾಧನೆಗೆ ಅಡ್ಡಿಯಾಗದೆಂಬ ಮನೋಭಾವ ಮಕ್ಕಳಲ್ಲಿ ಬೆಳೆಸಬೇಕು.