ಅಂಕಣ

ಇಂದು ಯುಗದ ಮಹಾಸಂತ ಮಹರ್ಷಿ ದಯಾನಂದ ಸರಸ್ವತಿ ಜನ್ಮ ದ್ವಿಶತಮಾನೋತ್ಸವ

ಬಾಬಾ ರಾಮದೇವ ಯೋಗಗುರು

ಮಹರ್ಷಿ ದಯಾನಂದ ಸರಸ್ವತಿಯವರು ಮಹಾನ್ ಸಮಾಜ ಸುಧಾರಕರು. ರಾಷ್ಟ್ರ ನಿರ್ವಣದಲ್ಲಿ ರಾಜಕೀಯ, ಧಾರ್ವಿುಕ, ಆಧ್ಯಾತ್ಮಿಕ, ಸಾಮಾಜಿಕ, ಜಾಗತಿಕ ಮತ್ತು ಶೈಕ್ಷಣಿಕ ಮಹತ್ವ ಸಾರಿದವರು. ಅವರು ‘ಸತ್ಯಾರ್ಥ ಪ್ರಕಾಶ’ ಕೃತಿಯಲ್ಲಿ ರಾಜಧರ್ಮ, ರಾಷ್ಟ್ರಧರ್ಮ, ಅಧ್ಯಾತ್ಮ ಧರ್ಮ, ಸನಾತನ ವೈದಿಕ ಋಷಿಧರ್ಮದ ಕಾಲದಲ್ಲಿದ್ದ ವೈಜ್ಞಾನಿಕ ದೃಷ್ಟಿಯನ್ನು ಪರಿಚಯಿಸಿದ್ದಾರೆ. ಧರ್ಮವನ್ನು ರ್ಚಚಿಸಲು ಮತ್ತು ತರ್ಕ, ಪುರಾವೆಗಳ ಆಧಾರದ ಮೇಲೆ ಸತ್ಯವನ್ನು ನಿರ್ಧರಿಸುವ ಪ್ರಬಲ ಮಾಧ್ಯಮವನ್ನು ಅವರು ನೀಡಿದರು. 1824 ಫೆಬ್ರವರಿ 12ರಂದು ಗುಜರಾತ್​ನ ಟಂಕಾರದಲ್ಲಿ ಜನಿಸಿದರು.

ಪಟ್ಟಾಭಿ ಸೀತಾರಾಮಯ್ಯ, ಲೋಕಮಾನ್ಯ ಬಾಲಗಂಗಾಧರ ತಿಲಕರು, ಗಾಂಧೀಜಿಯವರಿಂದ ಹಿಡಿದು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಬಹುತೇಕ ಮಹನೀಯರು ಮಹರ್ಷಿ ದಯಾನಂದರ ಕ್ರಾಂತಿಕಾರಿ ವಿಚಾರಗಳಿಂದ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಪ್ರೇರಿತರಾದವರು. ಡಾ. ಶ್ಯಾಮ್ ಕೃಷ್ಣ ವರ್ವ, ಭಾಯಿ ಪರಮಾನಂದ, ವೀರ ಸಾವರ್ಕರ್, ಲಾಲಾ ಲಜಪತ ರಾಯ್, ಮತ್ತು ಮದನ್ ಲಾಲ್ ಧಿಂಗ್ರಾ, ಭಗತ್ ಸಿಂಗ್ ಮುಂತಾದ ಕ್ರಾಂತಿಕಾರಿಗಳು, ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್ ಮೊದಲಾದವರಿಗೆ ಸ್ಪೂರ್ತಿಯಾಗಿದ್ದರು.

200 ವರ್ಷಗಳ ಹಿಂದೆ, ಸ್ವದೇಶಿ, ಸ್ವರಾಜ್ಯ ಮತ್ತು ರಾಷ್ಟ್ರದ ಏಕತೆ, ಸಮಗ್ರತೆಗಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯಾಗಿ ಪ್ರಚಾರ ಮಾಡಲು ಪ್ರಯತ್ನಿಸಿದ ದಯಾನಂದರು, ಮಹಿಳೆಯರಲ್ಲಿ ಶಿಕ್ಷಣದ ಹಕ್ಕುಗಳಿಗಾಗಿ ಚಳವಳಿ ಪ್ರಾರಂಭಿಸಿದರು. ದೇಶವನ್ನು ಜಾತೀಯತೆ, ಮೂಢನಂಬಿಕೆ ಮತ್ತು ಅಸ್ಪೃ್ಯತೆಗಳಿಂದ ಮುಕ್ತಗೊಳಿಸಿ, ಪ್ರತಿಯೊಬ್ಬರನ್ನು ಭಾರತಮಾತೆ, ಭೂಮಾತೆಯ ಮಕ್ಕಳು ಎಂದು ಹೇಳಿದರು. ಸನಾತನ ಧರ್ಮವೆನ್ನುವುದು ಕೇವಲ ರಾಷ್ಟ್ರದ ಧರ್ಮವಲ್ಲ, ಯುಗದ ಧರ್ಮ ಎಂದು ಕರೆದರು.

ಧರ್ಮದ ಹೆಸರಿನಲ್ಲಿ ಅವೈಜ್ಞಾನಿಕ, ಹೀನ ಆಚರಣೆಗಳನ್ನು ತಿರಸ್ಕರಿಸಿದರು. ವೇದಗಳ ಪ್ರಕಾರ ಉತ್ತಮ ನಡವಳಿಕೆಯನ್ನು ಜೀವನಧರ್ಮವೆಂದು ಪರಿಗಣಿಸಿ, ಇಡೀ ಜಗತ್ತನ್ನು ಒಂದೇ ಕುಟುಂಬವೆಂದು ಸಾರಿದರು. ಜನ್ಮದ ಆಧಾರದ ಜಾತಿ ಮತ್ತು ವರ್ಣಾಶ್ರಮವನ್ನು ವಿರೋಧಿಸಿದರು. ದೇಶದಲ್ಲಿ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ಮರುಸ್ಥಾಪಿಸಿದರು. ಆರ್ಥಿಕ ಗುಲಾಮಗಿರಿ, ಸಾಂಸ್ಕೃತಿಕ, ಧಾರ್ವಿುಕ ಗುಲಾಮಗಿರಿಯಿಂದ ದೇಶವನ್ನು ಬಿಡುಗಡೆ ಮಾಡಲು ಶ್ರಮಿಸಿದರು.

‘ಭೂಮಿ ನಮ್ಮ ತಾಯಿ, ಇದಕ್ಕಾಗಿ ನಾವು ನಮ್ಮೆಲ್ಲವನ್ನೂ ತ್ಯಾಗ ಮಾಡಲು ಸಿದ್ಧರಾಗಿರಬೇಕು’ ಎಂದು ದಯಾನಂದರು ರಾಷ್ಟ್ರಧರ್ಮ ಪ್ರತಿಪಾದಿಸುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಪರಮತ್ಯಾಗ ಮಾಡಿದರು. ‘ಇಡೀ ಜಗತ್ತಿಗೆ ವೇದಗಳಿಂದ ಎಲ್ಲಾ ಜ್ಞಾನವನ್ನು ನೀಡಿದ್ದೇವೆ, ನಮಗೆ ಯಾವುದೇ ಬಾಹ್ಯ ಸಂಸ್ಕೃತಿ ಅಗತ್ಯವಿಲ್ಲ. ಭಾರತಕ್ಕೆ ಆಮದು ಮಾಡಿಕೊಂಡ ಧರ್ಮಗಳು, ವಿದೇಶಿ ಉಪ ಸಂಸ್ಕೃತಿಗಳು ಮತ್ತು ಅವಿವೇಕದ ಅಜ್ಞಾನದ ಅಗತ್ಯವಿಲ್ಲ. ನಮ್ಮ ವೇದಗಳು, ತತ್ವಶಾಸ್ತ್ರ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆಗಳೇ ನಮಗೆ ಮಂಗಳಕರ’ ಎಂದರು.

ಅವರ ಜನ್ಮದ್ವಿಶತಮಾನೋತ್ಸವದ ಹಿನ್ನೆಲೆಯಲ್ಲಿ ಅವರ ಆಶಯದಂತೆ ದೇಶದಲ್ಲಿ ಶಿಕ್ಷಣ, ವೈದ್ಯಕೀಯ ವ್ಯವಸ್ಥೆ, ಸಾಮಾಜಿಕ ಐಕ್ಯತೆಯ ಭಾವನೆ, ಏಕಭಾರತ ಮತ್ತು ಶ್ರೇಷ್ಠ ಭಾರತಕ್ಕಾಗಿ ದುಡಿಯಬೇಕಿದೆ. ಬನ್ನಿ, ಮಹರ್ಷಿ ದಯಾನಂದರ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ.