ಸ್ಟಾರ್ಟಪ್ ಕ್ರೇಜ್ ನಿರೀಕ್ಷೆ ಮೀರಿ ಬೆಳೆಯುತ್ತಿದೆ. ಸ್ಟಾರ್ಟಪ್ ಕ್ಷೇತ್ರದ ಆಳ ಅಗಲ ಊಹಿಸಲೂ ಸಾಧ್ಯವಾಗುತ್ತಿಲ್ಲ. ಯುವ ತಲೆಮಾರಿನ ಆಲೋಚನಾ ಲಹರಿ, ಸ್ಟಾರ್ಟಪ್ ಕಲ್ಪನೆಯಲ್ಲಿ ಯುವ ಸಮೂಹ ಅಸಾಧ್ಯವಾದದ್ದನ್ನೂ ಸಾಧ್ಯವಾಗಿಸುವ ಪ್ರಯತ್ನ ನಿಜಕ್ಕೂ ಅಚ್ಚರಿ ಹುಟ್ಟಿಸುವಂತಿದೆ. ಕರ್ನಾಟಕದ ವಿಚಾರಕ್ಕೇ ಬರುವುದಾದರೆ, ಬಸವರಾಜ ಬೊಮ್ಮಾಯಿ ಸರ್ಕಾರ ನವೆಂಬರ್ನಲ್ಲಿ ಎರಡು ಮಹತ್ವದ ಕಾರ್ಯಕ್ರಮಗಳನ್ನು ನಡೆಸಿತು. ಎರಡೂ ಕೂಡಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಯುವಕರಿಗೆ ಸಂಬಂಧಪಟ್ಟ ಇವೆಂಟ್ಗಳೇ ಆಗಿದ್ದವು. ಜಾಗತಿಕ ಹೂಡಿಕೆದಾರರ ಸಮ್ಮೇಳನದ ಮೂಲಕ ಹೊಸ ತಲೆಮಾರಿನ ಉದ್ಯಮಿಗಳನ್ನು ಒಂದು ವೇದಿಕೆಯಲ್ಲಿ ತಂದು ಕರ್ನಾಟಕವನ್ನು ಶೋಕೇಸ್ ಮಾಡಿದರೆ ಬೆಂಗಳೂರು ಟೆಕ್ ಶೃಂಗ ಸಭೆಯು ಸ್ಟಾರ್ಟಪ್ ಬಗ್ಗೆ ವಿಶೇಷವಾಗಿ ಕೇಂದ್ರೀಕರಿಸಿತ್ತು ಎಂಬುದು ಗಮನಾರ್ಹ ಸಂಗತಿ. ನವೀನ ಚಿಂತನೆಗಳು, ತುಂಬಿ ತುಳುಕುವ ಉತ್ಸಾಹ, ನಕಾರಾತ್ಮಕ ಸಂಗತಿ ಹತ್ತಿರಕ್ಕೂ ಸುಳಿಯಗೊಡದ ಆತ್ಮಸ್ಥೈರ್ಯ ತುಂಬಿದ ದೊಡ್ಡ ಯುವ ಸಮೂಹವು ತಮ್ಮ ಚಿಂತನಾ ಲಹರಿಗೆ ಉದ್ಯಮದ ರೂಪಕೊಟ್ಟು ಚೌಕಟ್ಟಿನ ಹೊರಗೆ ಆಲೋಚಿಸಿದರೆ ಅವಕಾಶ ಸೃಷ್ಟಿಸಿಕೊಡಬಹುದೆಂಬುದನ್ನು ತೋರಿಸಿಕೊಡುತ್ತಿದ್ದು, ಈ ಹಾದಿಗೆ ಬೂಸ್ಟ್ ನೀಡಿದ್ದು, ಸರ್ಕಾರದ ಎರಡು ಪ್ರಮುಖ ಕಾರ್ಯಕ್ರಮ. ಅಲ್ಲಿ ಹೊರಹೊಮ್ಮಿದ ಲಹರಿ ಮತ್ತಷ್ಟು ಯುವಕರಿಗೆ ಪ್ರೇರಣದಾಯಿಯಾಗಿ ಉತ್ತೇಜಿಸುವಂತಿತ್ತು.
ಅಗಣಿತ ಊಹಾತೀತ ಬದಲಾವಣೆ: ನಮ್ಮ ನಡುವೆ ಬದಲಾವಣೆ ಅಗಣಿತ, ಊಹಾತೀತ. ಇದಕ್ಕೊಂದೆರೆಡು ಸಣ್ಣ ಉದಾಹರಣೆ ನೀಡುವುದಾದರೆ, ‘ಕ್ಯಾಪ್ಚಬೋರ್ಡ್’ ಎಂಬ ಉತ್ಪನ್ನವನ್ನು ಯುವಕರ ತಂಡ ಪರಿಚಯಿಸಿದೆ. ಇದು ಕಂಡಿದ್ದು ಬೆಂಗಳೂರು ಟೆಕ್ ಸಮಿಟ್ನಲ್ಲಿ. ಶಾಲಾ ಕೊಠಡಿ, ಸರ್ಕಾರಿ ಅಥವಾ ಖಾಸಗಿ ಕಂಪನಿಗಳ ಮೀಟಿಂಗ್ಗಳಲ್ಲಿ ಬಳಕೆ ಮಾಡುವ, ಸಭೆಯಲ್ಲಿದ್ದವರಿಗೆ ಅರ್ಥ ಮಾಡಿಸಲು ಬಳಕೆ ಮಾಡುವ ಬೋರ್ಡ್ನಲ್ಲಿ ಬರೆದ ವಿಷಯವನ್ನು ಸೇವ್ ಮಾಡುವ ಸುಲಭ, ಸರಳ ಚಿಂತನೆ ಈ ಸ್ಟಾರ್ಟಪ್ನಲ್ಲಿದೆ. ಬೋರ್ಡ್ ಮೇಲೆ ಮಾರ್ಕರ್ನಲ್ಲಿ ಬರೆದ ಅಂಶಗಳೆಲ್ಲ ಆಪ್ ಮೂಲಕ ಪಿಡಿಎಫ್ ರೂಪದಲ್ಲಿ ದಾಖಲಾಗಲಿದೆ. ಇದು ಎಷ್ಟು ಮಹತ್ವದ್ದು ಎಂದು ಬಳಸುವವರಿಗೆ ಅರಿವಿಗಿರಲಿದೆ. ಇನ್ನೊಂದು ಉದಾಹರಣೆ ಎಂದರೆ, ದೆಹಲಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಒಂದು ಸ್ಟಾರ್ಟಪ್ ಹುಟ್ಟಿಕೊಂಡಿದೆ. ಗೌರವಯುತವಾಗಿ ಅಂತ್ಯಕ್ರಿಯೆ ವಿಧಿವಿಧಾನವನ್ನು ನಡೆಸಿಕೊಡುವ ಕೆಲಸವನ್ನು ಅದು ಮಾಡಲಿದೆ. ಇಂತಹ ಸಂಗತಿಗಳು ಉದ್ಯಮ ರೂಪ ಪಡೆದುಕೊಳ್ಳುತ್ತವೆ ಎಂದು ಊಹಿಸುವುದಕ್ಕೂ ಸಾಧ್ಯವಿತ್ತೇ? ನಮ್ಮ ಯುವಕರಿಂದ ಇಂಥವೆಲ್ಲ ಸಾಧ್ಯವಾಗುತ್ತಿದೆ ಎಂಬುದೇ ವಿಶೇಷ ಸಂಗತಿ.
ಹೊಸದಿಕ್ಕಿನತ್ತ ರಾಜ್ಯ-ರಾಜಧಾನಿ: ಸರ್ಕಾರದ ಮಾಹಿತಿ ಪ್ರಕಾರ 2025ರ ಒಳಗೆ ಬೆಂಗಳೂರಿನಲ್ಲಿ 20 ಸಾವಿರ ನವೋದ್ಯಮಗಳನ್ನು ಹೊಂದುವ ಗುರಿ ಇಟ್ಟುಕೊಳ್ಳಲಾಗಿತ್ತು. ಆದರೆ, ಈಗಾಗಲೇ ನಮ್ಮಲ್ಲಿ 22 ಸಾವಿರಕ್ಕೂ ಹೆಚ್ಚು ಸ್ಟಾರ್ಟಪ್ಗಳಿವೆ. ದಿನ ದಿನಕ್ಕೂ ಹೊಸ ಹೊಸ ನವೋದ್ಯಮ ಸ್ಥಾಪನೆಯಾಗುತ್ತಿದ್ದು, 2025ರ ವೇಳೆಗೆ ಎಷ್ಟು ಸ್ಟಾರ್ಟಪ್ಗಳು ಇರಲಿವೆ ಎಂದು ಅಂದಾಜು ಮಾಡಿಕೊಳ್ಳಲೂ ಸಾಧ್ಯವಿಲ್ಲದ ವಾತಾವರಣ ಕಂಡುಬಂದಿದೆ. ಯುವಕರ ಚಿಂತನೆ, ಅವರಿಗೆ ಸಿಗುತ್ತಿರುವ ಪ್ರೋತ್ಸಾಹ, ಅನುಷ್ಠಾನಕ್ಕೆ ಪೂರಕವಾಗಿ ಸಿಗುತ್ತಿರುವ ವೆಂಚರ್ ಕ್ಯಾಪಿಟಲ್ ಕೂಡ ಕಾರಣ. ಇನ್ನೊಂದು ಗಮನ ಸೆಳೆಯುವ ಸಂಗತಿ ಎಂದರೆ, ತಲಾ 10 ಶತಕೋಟಿ ಡಾಲರ್ ಮೌಲ್ಯದ ನಾಲ್ಕು ಡೆಕಾಕಾರ್ನ್ ದರ್ಜೆಯ ಕಂಪನಿಗಳು ಭಾರತದಲ್ಲಿವೆ. ಇವುಗಳ ಪೈಕಿ ಫ್ಲಿಪ್ಕಾರ್ಟ್, ಬೈಜೂಸ್ ಮತ್ತು ಸ್ವಿಗ್ಗಿ ಬೆಂಗಳೂರಿನವೇ ಆಗಿವೆ. ಇದಲ್ಲದೆ, ಸದ್ಯದಲ್ಲೇ ರಾಜ್ಯದ ಇನ್ನೂ 20 ನವೋದ್ಯಮಗಳು ಸದ್ಯದಲ್ಲೇ ಯೂನಿಕಾರ್ನ್ ಸ್ಥಾನಮಾನಕ್ಕೆ ಏರಲಿವೆ ಎಂಬುದು ರಾಜ್ಯ ಸರ್ಕಾರದ ಅಂದಾಜು. ಅದೇ ರೀತಿ ಈ ವಾತಾವರಣ ಬೆಂಗಳೂರು ಮತ್ತು ರಾಜ್ಯವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಸುಳಿವಾಗಿದೆ.
ಮೋದಿಗೂ ಬೆಂಗಳೂರಿನ ಮೇಲೆ ಭರವಸೆ: ಕೃತಕ ಬುದ್ಧಿಮತ್ತೆ, ಬಿಗ್ ಡೇಟಾ, ಸೆಮಿಕಂಡಕ್ಟರ್, ಮಷೀನ್ ಲರ್ನಿಂಗ್, 5ಜಿ, ರೋಬೋಟಿಕ್ಸ್, ಫಿನ್ಟೆಕ್, ಜೀನ್ ಎಡಿಟಿಂಗ್, ಮೆಡಿಟೆಕ್, ಸ್ಪೇಸ್ ಟೆಕ್, ಇ- ಸಂಚಾರ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಬೆಳವಣಿಗೆ ಅಚ್ಚರಿಪಡುವಂಥದ್ದು. ಇದೇ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಮೇಲೆ ಭರವಸೆ ವ್ಯಕ್ತಪಡಿಸಿ, ಇಲ್ಲಿನ ಯುವ ಸಮುದಾಯದ ಕುರಿತಂತೆ ವಿಶೇಷ ಆಸಕ್ತಿದಾಯಕ ಮಾತುಗಳನ್ನು ಪ್ರಸ್ತಾಪಿಸುತ್ತಿದ್ದಾರೆ. ಈ ಮಾತಿಗೆ ಪೂರಕವಾಗಿ ಸ್ಟಾರ್ಟಪ್ಗಳು ಯಾವ ಮಟ್ಟಿಗೆ ಪ್ರಭಾವ ಬೀರುತ್ತಿವೆ ಎಂದರೆ, ಇಸ್ರೋ 100 ಸ್ಟಾರ್ಟಪ್ಗಳನ್ನು ಬಳಸಿಕೊಳ್ಳುವ ಹಾದಿಯಲ್ಲಿದೆ. ಸದ್ಯಕ್ಕೆ 10 ಕಂಪನಿಗಳು ಉಪಗ್ರಹ ಮತ್ತು ರಾಕೆಟ್ ನಿರ್ವಣದಲ್ಲಿ ತೊಡಗಿಕೊಂಡಿವೆ. ರಾಜ್ಯ ಸರ್ಕಾರ ಕೂಡ ಯುವಕರ ಉತ್ಸಾಹಕ್ಕೆ ನೀರೆರೆಯಲು ಹೊಸ ಯೋಜನೆ ಪ್ರಕಟಿಸಿದೆ. ಸ್ಟಾರ್ಟಪ್ ಪಾರ್ಕ್ ತೆರೆಯುವುದು ಸೇರಿದಂತೆ ಕರ್ನಾಟಕ ಸ್ಟಾರ್ಟಪ್ ಸೆಲ್ನಲ್ಲಿ ನೋಂದಣಿ ಮಾಡಿಕೊಂಡಿರುವ ನವೋದ್ಯಮಗಳಿಗೆ ಇನ್ನುಮುಂದೆ ಎಚ್ಡಿಎಫ್ಸಿ, ಪೇಟಿಎಂ ಮತ್ತು ರೇಜರ್ ಪೇ ಸಂಸ್ಥೆಗಳ ಮೂಲಕ ಬ್ಯಾಂಕಿಂಗ್ ಹಾಗೂ ಫಿನ್-ಟೆಕ್ ಸೇವೆ ಕೊಡುವುದು, ಪರಿಪೋಷಣೆಯ ಸಹಾಯ, ಕ್ಲೌಡ್ ಆಧಾರಿತ ಸೇವೆಗಳ ಬೆಂಬಲವನ್ನೂ ನೀಡಲಾಗುತ್ತದೆ.