ಕಾನಸ್ಟಂಟಿನೋಪಲ್ ಎನ್ನುವ ಪದ, ಓದುವಾಗಲೆಲ್ಲ ಎಲ್ಲರೂ ಕೇಳಿರುತ್ತೇವಾದರೂ ಅದೆಲ್ಲಿ, ಏನು, ಯಾಕೆ ಎನ್ನುವ ಉತ್ತರ ನನಗೂ ದೊರಕಿರಲಿಲ್ಲ. ಹಾಗಾಗಿ ಇಸ್ತಾಂಬುಲ್ ಎನ್ನುವ ಐತಿಹಾಸಿಕ ರಂಗಿನ ನಗರಿಗೆ ಇಳಿದಾಗ ಮೊದಲು ತಲುಪಿದ್ದೇ ಟೈಗ್ರೀಸ್ ನದಿ ದಡಕ್ಕೆ. ಅಲ್ಲೇ ಸಿಕ್ಕಿದ್ದು ಕಾನಸ್ಟಂಟಿನೋಪಲ್ ಎಂಬ ಬೆರಗು.
ಮೊದಲಿನಿಂದಲೂ ನನ್ನ ಫ್ಯಾಂಟಸ್ಸಿ ಬದುಕಿನ ಅತಿ ದೊಡ್ಡ ಕನಸು ಎಂದರೆ ಇಸ್ತಾಂಬುಲ್ ಪ್ರವಾಸ ಮಾಡಬೇಕು ಎಂಬುದಾಗಿತ್ತು. ಯಾಕೆಂದು ಗೊತ್ತಿಲ್ಲ. ಇಸ್ತಾಂಬುಲ್ ಕಾಲಿಟ್ಟಾಗ ನಿಜಕ್ಕೂ ವಿಭಿನ್ನ ನಗರ ಮತ್ತು ಜೀವನಕ್ಕೆ ತೆರೆದುಕೊಂಡ ಅನುಭವವಾಯಿತು. ಬೆಳಗ್ಗೆನೆ ನಾಲ್ಕೂ ಮೂವತ್ತಕ್ಕೆಲ್ಲ, ಇಸ್ತಾಂಬುಲ್ ತಲುಪುಪಿದ್ದರೆ ಸ್ಥಳೀಯ ಸಾರಿಗೆ ಆರಂಭವಾಗುವುದೇ ಆರೂವರೆ ಮೇಲೆ. ಎರಡನೇ ಯೋಚನೆ ಮಾಡದೆ ಬ್ಯಾಗು ತಲೆಗೆ ಇಟ್ಟು ಬಸ್ಸ್ಟಾ್ಯಂಡಿನ ವಿರಾಮದ ಬೆಂಚುಗಳ ಮೇಲೆ ಮಲಗಿ, ಕಣ್ಬಿಟ್ಟಾಗ ಎಲ್ಲೆಲ್ಲೂ ಧೂಮಲೀಲೆ.
ಮೂಲತಃ ಇಸ್ತಾಂಬುಲ್ ಎರಡು ಭಾಗದಲ್ಲಿ ಹಂಚಿ ಹೋಗಿದೆಯಲ್ಲ, ಅದರಲ್ಲಿ ಒಂದು ಏಷ್ಯಾ ವಿಭಾಗವಾದರೆ ಮತ್ತೊಂದು ಯುರೋಪಿಯನ್ ಭಾಗ. ಇವೆರಡನ್ನೂ ಸಂರ್ಪಸುವ ಪ್ರಮುಖ ನದಿ ಮತ್ತು ಪುರಾತನ ಜಗತ್ತಿನ ಮೊತ್ತಮೊದಲ ಸೇತುವೆ ಎಂಬ ಖ್ಯಾತಿಗೆ ಒಳಗಾಗಿರುವ ‘ಟೈಗ್ರೀಸ್’ ಸಂಪೂರ್ಣ ಇಸ್ತಾಂಬುಲ್ನ್ನು ಪ್ರತ್ಯೇಕಿಸುತ್ತದೆ. ನಾನು ಉದ್ದಾನು ಉದ್ದದ ಇಪ್ಪತ್ತು ಕಿ.ಮೀ. ದೂರದಲ್ಲೊಂದು ಮನೆ ಬುಕ್ ಮಾಡಿಕೊಂಡಿದ್ದೆ. ಈ ಸ್ಥಳೀಯ ವ್ಯವಸ್ಥೆ ಮತ್ತು ಇದೆಲ್ಲ ಹೀಗೆ ಎರಡೆರಡು ಭೂಭಾಗಗಳಲ್ಲಿ ಪ್ರತ್ಯೇಕಿಸುವ ಬಗ್ಗೆ ಮಾಹಿತಿ ಇರಲಿಲ್ಲ. ಆದರೆ ನಾವು ಶಾಲೆಯಲ್ಲಿ ಓದುತ್ತಿದ್ದಾಗ ಅರ್ಥವಾಗದೆ ಉಳಿದಿದ್ದ ಶಬ್ದ ‘ಕಾನಸ್ಟಂಟಿನೋಪಲ್’ ಎನ್ನುವ ಏಷ್ಯಾ ಭಾಗವನ್ನು ಸಂರ್ಪಸಲು ಬಳಸಿದ ಸ್ಥಳ, ದೇಶದ ಮಾಹಿತಿ, ಶಾಲೆ ಬಿಟ್ಟ ಮೂರು ದಶಕದ ನಂತರ ಅರಿವಾಗಿತ್ತು.
ಇತಿಹಾಸದಲ್ಲಿ ಅತ್ತಲಿನ ಯುರೋಪ ಕಡೆಯಿಂದ ಏಷ್ಯಾ ಖಂಡಕ್ಕೆ ಸಂಪರ್ಕ ಸಾಧಿಸಿದ ಮೊದಲ ಜಾಗ ಇದು. ಈ ನದಿ ದಾಟಿ ಇದಕ್ಕೊಂದು ಸಂಪರ್ಕ ಒದಗಿಸಿದ ಈ ಕಾನಸ್ಟಂಟಿನೋಪಲ್ ಇವತ್ತಿಗೂ ಎರಡೂ ಖಂಡಗಳ ಆಚೀಚೆಯ ಭಾಗವಾಗಿ ಗುರುತಿಸಿಕೊಂಡಿದೆ. ನಾನು ಇಳಿದದ್ದು ಏಷ್ಯಾದ ಭಾಗದಲ್ಲಾದರೆ, ಓಡಾಡಬೇಕಾಗಿದ್ದುದು ಹೆಚ್ಚಾಗಿ ಆಚೆ ದಡದಲ್ಲೂ ಹಬ್ಬಿ ನಿಂತಿತ್ತು. ಅದರಲ್ಲೂ ರೈಲು ಹಿಡಿದು ಹೋಗಿ ಇಳಿದ ನಂತರ, ರಸ್ತೆಯ ಮೇಲೆ ಟ್ರಾಮ್ ನೋಡುತ್ತ ನಿಂತಿದ್ದರೆ, ಅದರ ಹಿಂದೆ ಇದ್ದಿದ್ದೇ ಜಗತ್ತಿನ ಮೊತ್ತಮೊದಲ ಮುಸ್ಲಿಂ ವಿಶ್ವವಿದ್ಯಾಲಯ ಇಲ್ಲೇ ಇತ್ತು ಎಂದು ಕರೆಸಿಕೊಳ್ಳುವ ಮತ್ತು ಪ್ರವಾದಿ ಇಲ್ಲಿಂದಲೇ ಪಯಣ ಆರಂಭಿಸಿದ್ದು ಎನ್ನುವ ಕತೆಗಳು ಬೆರಗಾಗಿಸಿದ್ದು ಹೌದು. ತುರ್ಕರ (ಆಟುಮನ್) ಈ ಸಾಮ್ರಾಜ್ಯದ ಅಗಾಧ ಇತಿಹಾಸಕ್ಕಿಂತ ನಾನು ಸ್ಕೂಲಿನಲ್ಲಿ ಓದಿದ ‘ದಿ ಕಾನಸ್ಟಂಟಿನೋಪಲ್’ ಶಬ್ದ ಅದ್ಯಾಕೆ ತಲೆಯಲ್ಲಿ ಉಳಿದು ಹೋಗಿತ್ತೋ ಗೊತ್ತಿಲ್ಲ.
ಆದರೆ ಜಗತ್ತಿನ ಅತಿ ಹೆಚ್ಚು ಗಮನ ಸೆಳೆದ ಮತ್ತು ನಾಗರಿಕ ಸಮಾಜದ ಎರಡು ಖಂಡಗಳ ಮಧ್ಯೆ ಸಂಪರ್ಕಕ್ಕೆ ನಿರ್ಣಾಯಕ ಪಾತ್ರ ವಹಿಸಿದ್ದ ಶಬ್ದ ಇದು. ಈ ಶಬ್ದಕ್ಕೆ ಯಾಕೆ ಈ ಹೆಸರು ಬಂತೆಂದಾಗಲಿ, ಯಾಕೆ ಹಾಗೆ ಕರೆಯುತ್ತಾರೆಂದಾಗಲಿ ಖಚಿತ ನಿಲುವು ಇವತ್ತಿಗೂ ಇಲ್ಲ. ಆದರೆ ಎರಡು ಪ್ರಮುಖ ಭೂಮುಖದ ಸಂವಹನ ಸಂಪರ್ಕಕ್ಕೆ ಕಾರಣವಾದ ಈ ಬಾಸ್ಪರಸ್ ಸೇತುವೆ ಅಥವಾ ದಿ ಕಾನಸ್ಟಂಟಿನೋಪಲ್ ಏಷ್ಯಾದ ಚಹರೆಯನ್ನೇ ಬದಲಿಸಿತು. ಕಾರಣ ಹೀಗೆ ನದಿಯ ಆಚೆಗಿನ ನೆಲವನ್ನು ಸಂರ್ಪಸಬೇಕೆಂದರೆ, ಅಗಾಧ ಸಮುದ್ರದ ರೀತಿಯಲ್ಲಿ ಆವರಿಸಿಕೊಂಡಿದ್ದು ಏನಿದೆ ಆಚೆಗೆ ಎಂದು ಅರಿವಿಗೆ ನಿಲುಕದ ನೆಲದ ತುದಿ ಯುರೋಪ್ ಕಡೆಯಿಂದ ಮುಂಚಾಚಿಕೊಂಡಿತ್ತು.
ಹಾಗೆ ಇತ್ತಲಿನ ತುರ್ಕರ ಸಾಮ್ರಾಜ್ಯದ ತುದಿಯಿಂದ ಇಸ್ತಾಂಬುಲ್ ತೀರದಲ್ಲಿ ಹೇಗಾದರೂ ದಾಟಬೇಕೆಂದು ಸಂಪರ್ಕ ಕಲ್ಪಿಸಿದಾಗ ಸರಾಗವಾಗಿ ನೀರ ಮೇಲೆ ನಿಲ್ಲಬಹುದೆಂಬ ಕಾರಣಕ್ಕೆ ಸಾಲು ಸಾಲು ದೋಣಿಗಳು ಇದಕ್ಕೆ ಬೆನ್ನೆಲುಬಾಗಿದ್ದವು. ಸರಿಸುಮಾರು 1453ರಲ್ಲಿ ಮೊದಲ ಬಾರಿಗೆ ಒಂದರ ಪಕ್ಕ ಒಂದರಂತೆ ದೋಣಿಗಳನ್ನು ಜೋಡಿಸಿ ಇತ್ತಲಿನ ಭಾಸ್ಪಾರಾಸ್ ಬೀದಿಯ ತುದಿಯ ಕಡೆಯಿಂದ ಬಿಗಿದು ಅತ್ತಲಿನ ಯುರೋಪನ್ನು ಸಂರ್ಪಸಿಯೇ ಬಿಟ್ಟಿದ್ದ ಆಗಿನ ಚಕ್ರವರ್ತಿ ಡೆರಿಯಸ್. ಹಾಗಾಗಿ ಅಚ್ಚರಿಯ ಕ್ರಾಂತಿಗೆ ಕಾರಣವಾದ ಭಾಸ್ಪಾರಾಸ್ ಸೇತುವೆ ಇವತ್ತಿಗೂ ಜಗತ್ತಿನ ಆಕರ್ಷಣೀಯ ತಾಣ ಮತ್ತು ಪ್ರವಾಸೋದ್ಯಮದ ಪುಟದಲ್ಲಿ ಮೊದಲ ಸ್ಥಾನದಲ್ಲಿದೆ.
ಇದಕ್ಕೆ ಎರಡು ಕಾರಣಗಳು. ಒಂದು, ಎರಡೂ ಖಂಡಗಳನ್ನು ಬೆಸೆದ ಇತಿಹಾಸ. ಎರಡು, ಇತ್ತ ಸೇತುವೆ ನಂತರದ ಕಾಲದಲ್ಲಿ ತೀರ ನದಿಯ ಎಡ ದಂಡೆಯ ಮೇಲೆ ನಿರ್ವಿುತವಾದ ವಿಖ್ಯಾತ ಅರಮನೆ ಬೇಯ್ಲರ್ ಬೇಯಿ. ಅತ್ತಲಿನ ಯುರೋಪ್ ಭಾಗವಾದ ಅರ್ಟಾಕೋಯ್ನಿಂದ ಆರಂಭವಾಗುವ ಈ ಸೇತುವೆ, ಇಸ್ತಾಂಬುಲ್ನ ಇತಿಹಾಸ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬೇಯ್ಲರ್ ಬೇಯಿ ಅರಮನೆಯ ಪಕ್ಕಕ್ಕೇನೆ ನೇರ ಸಂಪರ್ಕಿಸುತ್ತದೆ. ಹಾಗಾಗಿ ಈ ಸ್ಥಳಕ್ಕೆ ಪ್ರವಾಸಿಸುವ ನೀವು ಬೇಯ್ಲರ್ ಬೇಯಿ ಹಾಗೂ ಭಾಸ್ಪರಾಸ್ ಬ್ರಿಡ್ಜ್ ಎರಡನ್ನೂ ಸರಾಗವಾಗಿ ನೋಡಬಹುದು. ಅದರಲ್ಲೂ ಬೇಯ್ಲರ್ ಬೇಯಿ ಈ ತೀರದಲ್ಲಿ ಸಮುದ್ರದಂತೆ ಉಕ್ಕೇರಿ ಬಂದಪ್ಪಳಿಸುವ ನದಿಯ ತೆರೆಗೆ ಸೆಡ್ಡು ಹೊಡೆದು ಅದ್ಹೇಗೆ ಅರಮನೆ ಕಟ್ಟಿ, ಅದಕ್ಕೆ ಪಾಗಾರ ಹಾಕಿ ನಿಲ್ಲಿಸಿದರೋ ಗೊತ್ತಿಲ್ಲ. ಅದರೆ ಟರ್ಕಿಯ ಭಾಗದಲ್ಲಿ ಕೊನೆಯ ತುದಿಯಾಗಿ ನಿಲ್ಲುವ ಅರಮನೆಯ ಪ್ರಾಂಗಣದಿಂದ ಅತ್ತಲಿನ ಯುರೋಪಿಗೆ ಕಾಲಿಕ್ಕುವ ದಡದಲ್ಲಿ ನಿಂತು ವಿಶಾಲ ನದಿ ಮತ್ತು ಅಗಾಧ ವಿಸ್ತಾರದ ಇಸ್ತಾಂಬುಲ್ ನೋಡುವ ವಿಭಿನ್ನತೆ ಅಲ್ಲಿ ಮಾತ್ರ ಅರಿವಿಗೆ ದಕ್ಕುವಂತಹದ್ದು.
ಸಂಜೆಯ ಇಸ್ತಾಂಬುಲ್ ತಿರುಗಾಟಕ್ಕಿಂತ ಹೆಚ್ಚು ಆಕರ್ಷಿಸಿದ್ದು ಇಸ್ತಾಂಬುಲ್ನ ಗ್ರಾ್ಯಂಡ್ ಬಜಾರ್ ಮತ್ತು ಮಸಾಲೆ ಮಾರ್ಕೆಟ್. ಕಿ.ಮೀ.ಗಟ್ಟಲೇ ಉದ್ದಾನು ಉದ್ದದ ರಸ್ತೆಯ ಇಕ್ಕೆಲಗಳಲ್ಲಿ ಲೆಕ್ಕ ತಪ್ಪಿ ಮಾರಾಟ ಮಾಡುವ ಬಂಗಾರದಿಂದ ತಾಮ್ರದವರೆಗಿನ ಆಭರಣಗಳು ಓರಿಜಿನಲ್, ಡುಪ್ಲಿಕೇಟ್ ಎಲ್ಲದರಲ್ಲೂ ಲಭ್ಯ. ತರಹೇವಾರಿ ಆಭರಣದ ಗೋಲ್ಡ್ಮಾರ್ಕ್ನಿಂದ ಹಿಡಿದು ವಜ್ರಗಳ ಸಮೇತ ಕೆ.ಜಿ. ಲೆಕ್ಕದಲ್ಲಿ ಹೂಡಿ ಇಟ್ಟಿದ್ದರೆ, ಖರೀದಿಸುವವನು ಕಂಗಾಲು. ಕನಿಷ್ಠ ಬೆಳ್ಳಿಯನ್ನು ಬಳಸಿ ಮಾಡಿದ ಶೃಂಗಾರದ ಆಭರಣಗಳ ದಾಂಗುಡಿಗೆ ಬೆರಗಾಗಲೇಬೇಕು. ಮುಂದೆ ಹೋದಂತೆ ಬೆಂಗಳೂರಿನ ಚಿಕ್ಕಪೇಟೆ ಗಲ್ಲಿಯಂತಾಗುವ ಮಾರುಕಟ್ಟೆ, ಅದರ ಅಕ್ಕಪಕ್ಕದಲ್ಲೂ ಬಾಯ್ದೆರದ ಚಿಕ್ಕ ದಾರಿಗಳಲ್ಲಿ ಚಕ್ರವ್ಯೂಹದಂತಿರುವ ಮಾರುಕಟ್ಟೆ ದಂಗುಬಡಿಸಲು ಕಾರಣ ಇದರ ಆಸುಪಾಸಿನಲ್ಲೇ ಹಿಂಭಾಗದಿಂದ ಸೇರಿಕೊಳ್ಳುವ ಸರಾಫ್ ಬಜಾರ್ ಎನ್ನುವ ಮತ್ತೊಂದು ಸಾಲು.
ಜಗತ್ತಿನ ಅಷ್ಟೂ ಒಣಹಣ್ಣುಗಳ ಹಲವು ರೀತಿಯ ವಿಭಿನ್ನ ಆಕಾರ ಮತ್ತು ಹೆಸರಲ್ಲಿ ಇಲ್ಲೆ ಜಮೆಯಾಗಿದೆ. ಕಾರಣ ಅಗಾಧ ಹಳೆಯ ಮಾರುಕಟ್ಟೆಯ ಸಾಂಸ್ಕೃತಿಕ ಅಂದಚೆಂದದ ಕಟ್ಟೆ ಕಂಬಗಳ ಹಿನ್ನೆಲೆಯಲ್ಲಿ, ಹೊಸ ರೂಪದ ಮಳಿಗೆಗಳ ಸಂಕೀರ್ಣಗಳು ಜಮೆಯಾಗುತ್ತ ಸಾಗಿದ್ದು ಬರೋಬ್ಬರಿ ನಾಲ್ಕಾರು ಕಿ.ಮೀ.ವರೆಗೂ ವಿಸ್ತರಿಸಿಕೊಂಡಿದೆ. ಒಣಹಣ್ಣುಗಳ ತಿನಿಸುಗಳ ಮಾರುಕಟ್ಟೆಯನ್ನು ನೋಡಲೇ ಅರ್ಧದಿನ ಬೇಕಾಗುತ್ತದೆ. ಖರೀದಿಗೆ ದಿಕ್ಕು ತಪ್ಪುತ್ತದೆ. ಆದಾಗ್ಯೂ ಇಸ್ತಾಂಬುಲ್ ಮತ್ತು ಟರ್ಕಿ ಹೇಳಿಕೇಳಿ ಸಿಹಿ ತಿನಿಸುಗಳ ದರ್ಬಾರು ಎಂದೇ ಕರೆಸಿಕೊಳ್ಳುವಾಗ ಪ್ರತೀ ರಸ್ತೆಯಲ್ಲೂ ಹೆಸರು ನೆನಪಿಡಲಾಗದ, ತರಹೇವಾರಿ ಸಿಹಿಗಳ ಆಗರ. ಪ್ರಮುಖ ಮಾರುಕಟ್ಟೆ ಮತ್ತು ರಸ್ತೆಗಳೂ ಸೇರಿದಂತೆ ಎಲ್ಲೆಂದರಲ್ಲಿ ಕಾಣಿಸುಕೊಳ್ಳುವ ಏಕೈಕ ಸ್ಥಳಗಳೆಂದರೆ ಸಿಹಿ ತಿನಿಸಿನ ಹಜಾರಗಳು. ಬಹುಶಃ ಪೂರ್ತಿ ಪ್ರವಾಸದುದ್ದಕ್ಕೂ ಎಲ್ಲೂ ಸಿಕ್ಕದ ಸಿಹಿ ತಿನಿಸಿಗಳನ್ನು ಇಲ್ಲಿ ತಿಂದು ಮುಗಿಸಿದ್ದೇನೆಂದರೂ ಆಚ್ಚರಿ ಇಲ್ಲ.
ಅದರಲ್ಲೂ ಇಸ್ತಾಂಬುಲ್ ಹಿತಮಿತ ಆಗುವುದೇ ಸೇವೆಗಾಗಿ ಹಾಗೂ ಕೈಗೊಂದು, ಕಾಲಿಗೊಂದು ಸಿಕ್ಕಿ ಪ್ರವಾಸದ, ಓಡಾಟದ ಪ್ರಯಾಸ ಕಡಿಮೆ ಮಾಡುವ ಟ್ರಾಮ್ ಸೇವೆಯಿಂದಾಗಿ. ತೀರ ಮಧ್ಯದಲ್ಲಿ ಟ್ರಾಕ್ ನಿರ್ವಿುಸಿ ಪ್ರತಿ ಗಲ್ಲಿಯ ತುದಿಗೂ ತಲುಪುವಂತೆ ಟ್ರಾಮ್ ಸಾರಿಗೆ, ಎಲ್ಲೆಡೆಗೆ ಯಾವಾಗೆಂದರೆ ಆವಾಗ ಪ್ರಯಾಣಿಸಲು ತುಂಬ ಅನುಕೂಲ ಮತ್ತು ಹೆಚ್ಚುವರಿ ಟ್ಯಾಕ್ಸಿ ದರ ಉಳಿತಾಯಕ್ಕೆ ಸಹಾಯಕಾರಿ. ಆದರೆ ಎಲ್ಲೂ ನಮ್ಮ ಕಾರ್ಡಗಳ ಬಳಕೆ ಮಾಡಲು ಆಗದ, ಆನ್ಲೈನ್ ಸೇವೆ ಸಾಕಷ್ಟಿಲ್ಲದ ಈ ದೇಶದಲ್ಲಿ ಅಲ್ಲಿನ ಕಿಯಾಸ್ಕಗಳಲ್ಲಿ ತುಂಬಿಸಿಟ್ಟಿರುವ ಕಾರ್ಡಗಳನ್ನೇ ಪಡೆದು ಉಪಯೋಗಿಸಬೇಕು. ಟರ್ಕಿಶ್ ಲಿರಾ ಕೂಡ ಕೈಗೆ ತೆಗೆದುಕೊಂಡು ಬಳಸುವ ಪರಿಪಾಠವೇ ಇಲ್ಲ. ಹಾಗಾಗಿ ಹತ್ತು ಟಿ.ಎಲ್.ನಿಂದ ನೂರು ಟಿ.ಎಲ್.ವರೆಗೂ ಕಾರ್ಡ ಪಡೆಯುವ ಸರ್ಕಸ್ಸು ಎಲ್ಲಕ್ಕಿಂತಲೂ ಮೊದಲು ಮಾಡಬೇಕಾದ ಅನಿವಾರ್ಯತೆ. ಅದನ್ನೇ ಎಲ್ಲೆಡೆ ಬಳಸುವ ಅನಿವಾರ್ಯತೆ.
ಹಾಗೆ ಹೊರಟು ಅಲ್ಲಿನ ವಿಶ್ವವಿದ್ಯಾಲಯದ ಆವರಣದೆದುರಿಗೆ ಬರುವ ಟ್ರಾಮ್ ಹತ್ತಿಕೊಂಡು ಒಂದೂವರೆ ಟಿ.ಎಲ್. ಕೊಡುತ್ತಿದ್ದಂತೆ ಹತ್ತೇ ನಿಮಿಷದಲ್ಲಿ ಜಗತ್ತಿನಲ್ಲೇ ದೊಡ್ಡ ಗುಮ್ಮಟದ ಮಸೀದಿ, ಬ್ಲೂ ಮಾಸ್ಕ್ ಎದುರು ಇಳಿದಿರುತ್ತೇವೆ. ಅದನ್ನು ಏರಲೇ ಎಸ್ಕವೇಟರ್ಗಳ ವ್ಯವಸ್ಥೆ ಮಾಡಿರುವ ನೀಲಿ ಮಸ್ಜಿದ್ ಎಂದರೆ ಇವತ್ತು ಜಗತ್ತಿನ ಪ್ರಮುಖ ಪ್ರವಾಸಿಸ್ಥಳವೂ ಹೌದು. ಯುನೆಸ್ಕೋ ಪರಿಗಣಿತ ಈ ಕಟ್ಟಡದಲ್ಲಿ ಗುಮ್ಮಟಗಳು ಮಧ್ಯದ ಕಂಬಗಳಿಲ್ಲದೆ ನಿರ್ವಿುಸಲಾಗಿದ್ದೇ ವಿಶೇಷ. ಅಂದಹಾಗೆ ಈ ಬ್ಲೂ ಮಾಸ್ಕ್ಗೇಕೆ ಅಷ್ಟು ಪ್ರಾಮುಖ್ಯತೆ. ಆ ಕತೆ ಮುಂದಿನ ಸಲಕ್ಕಿರಲಿ.