ಅಂಕಣ

ಕಾಗೆಯ ಕುಬುದ್ಧಿ; ಮಕ್ಕಳ ಕಥೆಗಳು

Webdesk - Ravikanth
ಒಂದೂರಲ್ಲಿ ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಕಾಗೆ ಹಾಗೂ ಗುಬ್ಬಚ್ಚಿ ಗೆಳೆಯರು. ಇಬ್ಬರದೂ ಒಂದೊಂದು ಮನೆ ಇರುತ್ತದೆ. ಕಾಗೆಯು ಸೋಮಾರಿತನದಿಂದ ಮಣ್ಣಿನ ಮನೆ ಕಟ್ಟುತ್ತದೆ ಹಾಗೂ ಗುಬ್ಬಿಯು ಕಲ್ಲಿನ ಮನೆ ಕಟ್ಟುತ್ತದೆ. ಇಬ್ಬರೂ ಖುಷಿಯಾಗಿ ಬಾಳುತ್ತಿರುತ್ತಾರೆ. ಒಂದಿನ ಇದ್ದಕ್ಕಿದಂತೆ ಮಳೆ ಬರುತ್ತದೆ. ಮಳೆಯು ನೋಡುತ್ತಾ ನೋಡುತ್ತಾ ಜೋರಾಯಿತು. ಆಗ ಕಾಗೆಯ ಮನೆಯು ಕುಸಿದುಬಿತ್ತು, ಕಾಗೆ ಅಳುತ್ತಾ ಕೂರುತ್ತದೆ.

ಅದನ್ನು ಕಂಡ ಗುಬ್ಬಿ ಅನುಕಂಪದಿಂದ ಕಾಗೆಯನ್ನು ತನ್ನ ಮನೆಗೆ ಕರೆಯಿತು. ಆಗ ರಾತ್ರಿಯಾಗಿತ್ತು. ಕಾಗೆ ಗುಬ್ಬಿಯ ಮನೆಗೆ ಬಂದು ಬಾಗಿಲು ತಟ್ಟಿದಾಗ ಗುಬ್ಬಿ ‘ನಾನು ಗಂಡನಿಗೆ ಊಟ ಬಡಿಸುತ್ತಿದ್ದೇನೆ’ ಎಂದಿತು. ಸ್ವಲ್ಪ ಸಮಯದ ನಂತರ ಮಳೆ ಶುರುವಾಯಿತು. ಆಗ ಕಾಗೆ ಮತ್ತೊಮ್ಮೆ ಬಾಗಿಲು ತಟ್ಟಿತು. ಆಗ ಗುಬ್ಬಿ, ‘ನನ್ನ ಮಕ್ಕಳಿಗೆ ಊಟ ಮಾಡಿಸುತ್ತಿದ್ದೇನೆ’ ಎಂದಿತು. ಆನಂತರ ಇನ್ನೊಮ್ಮೆ ಬಾಗಿಲು ತಟ್ಟುತ್ತದೆ. ಆಗ ಗುಬ್ಬಿ ತಾನು ಊಟ ಮಾಡಿ ಬಾಗಿಲು ತೆರೆಯುವುದಾಗಿ ಹೇಳಿ ಊಟದ ನಂತರ ಕೊನೆಗೆ ಬಾಗಿಲು ತೆರೆಯಿತು. ಆಗ ಮಧ್ಯರಾತ್ರಿ ಆಗಿದ್ದು, ಎಲ್ಲರೂ ಮಲಗಿದ್ದರು. ಕಾಗೆಯನ್ನು ಕಡಲೆಕಾಯಿ ಕಣಜದಲ್ಲಿ ಕೂರಿಸಿತು. ಬೆಳಿಗ್ಗೆಯಷ್ಟರಲ್ಲಿ ಕಾಗೆ ಆರು ತಿಂಗಳಿನ ಆಹಾರ ಎಲ್ಲವನ್ನೂ ತಿಂದು ಕಣಜದಲ್ಲಿ ಹಿಕ್ಕೆ ಮಾಡಿ ಹಾರಿ ಹೋಗಿತ್ತು. ಇದನ್ನು ನೋಡಿದ ಗುಬ್ಬಿಗೆ ತುಂಬಾ ಬೇಸರವಾಗಿ ಯೋಗ್ಯತೆ ಇರುವವರ ಜತೆ ಸಹವಾಸ, ಯೋಗ್ಯತೆ ಇರುವವರಿಗೆ ಮಾತ್ರ ಉಪಕಾರ ಮಾಡಬೇಕು ಎಂದುಕೊಂಡಿತು.

ನೀತಿ: ಯೋಗ್ಯತೆ ಇರುವವರಿಗೆ ಮಾತ್ರ ಉಪಕಾರ ಮಾಡಬೇಕು

| ಸಾಗರ್ ಎಂ., 8ನೇ ತರಗತಿ, ಸರ್ಕಾರಿ ಪದವಿ ಪೂರ್ವ ಕಾಲೇಜು, ಪ್ರೌಢಶಾಲೆ, ಹೊಸದುರ್ಗ, ಚಿತ್ರದುರ್ಗ.