ಅಂಕಣ

ವೈದೇಹಿ ಬರಹ ವೈವಿಧ್ಯ: ಹಿರಿಯ ಸಾಹಿತಿಗೆ ನೃಪತುಂಗ ಪ್ರಶಸ್ತಿಯ ಗರಿ

ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಹಯೋಗದಲ್ಲಿ ಕೊಡಮಾಡುವ 2022ನೇ ಸಾಲಿನ ನೃಪತುಂಗ ಸಾಹಿತ್ಯ ಪ್ರಶಸ್ತಿಯು ನಾಡಿನ ಹಿರಿಯ ಬರಹಗಾರ್ತಿ ವೈದೇಹಿ ಅವರ ಮುಡಿಗೇರಿದೆ. ಕಥೆ, ಕವನ, ಕಾದಂಬರಿ, ಪ್ರಬಂಧ, ಅನುವಾದ... ಹೀಗೆ ಸಾಹಿತ್ಯದ ಎಲ್ಲ ವಿಭಾಗಗಳಲ್ಲಿ ಕೊಡುಗೆ ನೀಡಿರುವ ಅವರ ಬದುಕು-ಬರಹದ ಕಿರುನೋಟ ಇಲ್ಲಿದೆ.

ಸಾಮಾನ್ಯ ಬದುಕಿನ ರೂಪಕ

| ಡಾ. ಕಾತ್ಯಾಯಿನಿ ಕುಂಜಿಬೆಟ್ಟು

ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ನಮ್ಮ ಕರಾವಳಿ ಕುಂದಾಪುರದ ವೈದೇಹಿಯವರು ಕಥೆ, ಕವನ, ಕಾದಂಬರಿ, ಮಕ್ಕಳ ಸಾಹಿತ್ಯ, ಪ್ರಬಂಧ, ಜೀವನ ಚರಿತ್ರೆ, ಅನುವಾದ.. ಹೀಗೆ ಸಾಹಿತ್ಯದ ಹೆಚ್ಚಿನ ಎಲ್ಲ ಪ್ರಕಾರಗಳಲ್ಲೂ ಮೌಲಿಕವಾದ ಕೃತಿಗಳನ್ನು ನೀಡಿದವರು.

ವೈದೇಹಿಯವರು ಬರೆಯಲು ಆರಂಭಿಸಿದ್ದು ಎಪ್ಪತ್ತು, ಎಂಬತ್ತರ ದಶಕದಲ್ಲಿ. ಸಾಹಿತ್ಯ ಕೃತಿಗಳು ದಲಿತ ಬಂಡಾಯ ಸಾಹಿತ್ಯ ಚಳವಳಿ, ರೈತ ಚಳವಳಿ, ಕಾರ್ವಿುಕ ಚಳವಳಿ, ಮಹಿಳಾ ಚಳವಳಿಗಳ ಭಾಗವಾಗಿಯೇ ತಲೆಯೆತ್ತಿದ ಕ್ರಾಂತಿಯ ಕಾಲವದು. ವೈದೇಹಿಯವರು ಯಾವುದೇ ಚಳವಳಿಯಲ್ಲಿ ಗುರುತಿಸಿಕೊಳ್ಳದಿದ್ದರೂ ಸ್ತ್ರೀ ವಿಮೋಚನೆಯ ವಿಚಾರಧಾರೆ ಮಹಿಳಾ ಸಾಹಿತಿಗಳನ್ನು ಕಾಡುತ್ತಿದ್ದ ಕಾಲವದು. ವೈದೇಹಿಯವರ ಕಥೆಗಳಲ್ಲಿ ಪುರುಷದ್ವೇಷ ಕಾಣಿಸುವುದಿಲ್ಲ. ಸ್ತ್ರೀಯ ಅದಮ್ಯ ಚೈತನ್ಯಕ್ಕೆ ಸರಿಸಮಾನವಾಗಿ ನಿಲ್ಲಲಾಗದೆ ವ್ಯವಸ್ಥೆಯ ಸಂಕೋಲೆಯಲ್ಲಿ ಬಂಧಿಸಲು ಯತ್ನಿಸುವಂಥವರ ಕುರಿತು ಕರುಣೆಯಿದೆ. ಎಂದಿಗೂ ಪ್ರತಿಭಟನೆಯ ಧ್ವನಿಯೇ ಇಲ್ಲದ ಆಕಳಂತಹ ಹೆಂಡತಿ (ಪುಟ್ಟಮ್ಮತ್ತೆಯ ಅಮ್ಮ) ದುಡಿದ ದಣಿವಿನಲ್ಲಿ ಎದುರು ಮಾತನಾಡಿದಳೆಂದು ರೋಷದಿಂದ ಅವಳನ್ನು ಎತ್ತಿ ಬಾವಿಗೆ ಹಾಕುವ ಗಂಡು ಪಾತ್ರ ಚಿತ್ರಿಸಿದವರೇ ದೂರದ ಊರಲ್ಲಿ ಹೋಟೆಲಿನಲ್ಲಿ ದುಡಿಯುತ್ತಿದ್ದ ಪುಟ್ಟಮ್ಮತ್ತೆಯ ಗಂಡ, ತನ್ನ ಹೊಡೆತಕ್ಕೆ ಸತ್ತನೆಂದು ಧಣಿಯು ಒಲೆಯ ಒಳಗೆ ಹಾಕಿ ಸುಟ್ಟುಹಾಕುವ ಹಿಂಸೆಯ ಮುಖವನ್ನೂ ಚಿತ್ರಿಸಿದ್ದಾರೆ. ಹೆಣ್ಣಿರಲಿ ಗಂಡಿರಲಿ ಯಾರಿಗಾದರೂ ಅನ್ಯಾಯ ಅನ್ಯಾಯವೇ. ಕತೆಗಳು ನಡೆಯುತ್ತಿರುತ್ತವೆ, ಕತೆಗಾರ್ತಿ ಒಂದು ಸಾಕ್ಷಿಪ್ರಜ್ಞೆ, ವಿಮರ್ಶಕಿ.

ವೈದೇಹಿಯವರ ಕೃತಿಗಳು ಸಾಮಾನ್ಯ ಬದುಕಿನ ಅತ್ಯುತ್ತಮ ರೂಪಕಗಳು. ಅವರ ಪಾತ್ರಗಳು ದಿಟ್ಟತನ, ಸಾಹಸ ಪ್ರವೃತ್ತಿಯ ಮೂಲಕ ಅಧೀನತೆಯನ್ನು ಮೀರುವ ಬಯಕೆಯವು. ಅವರ ಕತೆಗಳ ಅಂತಃಸತ್ವವಿರುವುದೇ ಅನಾದಿ ಕಾಲದಿಂದಲೂ ಪುರುಷಪ್ರಧಾನ ವ್ಯವಸ್ಥೆಯ ನಾಲ್ಕು ಗೋಡೆಯ ನಡುವೆ ಪುರುಷ ಹಾಂಕಾರ ಹೂಂಕಾರ ಹೇಂಕಾರಗಳಿಗೆ ಹೂಂಗುಡುತ ಅಧೀನರಾಗಿ ಬದುಕುವ ಮಧ್ಯಮ ವರ್ಗದ ಸ್ತ್ರೀಯರ ತಣ್ಣನೆ ಮಿಣ್ಣನೆ ಪ್ರತಿಭಟನೆಗಳಲ್ಲಿ ಅಥವಾ ಹಾವಂತೆ ಹೆಡೆಯೆತ್ತಿ ಫೂತ್ಕರಿಸಿ ಪ್ರತಿಭಟಿಸುವ ಗಟ್ಟಿ ಧ್ವನಿಯ ಬಂಡಾಯದಲ್ಲಿ.

ಜಗತ್ತಿನ ಭಾಷೆಯೇ ಪುಲ್ಲಿಂಗ. ನಿತ್ಯ ಬಳಕೆಯ ಎಷ್ಟೋ ಪದಗಳಿಂದ ಹಿಡಿದು ಎಷ್ಟೋ ಬೈಗುಳದ ಪದಗಳು ಕೂಡ ಸ್ತ್ರೀಯ ಸ್ಥಿತಿಗತಿಗೆ ಹಿಡಿದ ಪದಕನ್ನಡಿಗಳೇ. ವೈದೇಹಿಯವರ ‘ಆರತಿ ತಟ್ಟೆ’ ಎಂಬ ಪ್ರತಿಮಾತ್ಮಕವಾದ ಕತೆಯ ಹೆಸರಲ್ಲೇ ಅವರ ಸೃಜನಶೀಲ ಪ್ರತಿಭೆಯ ದೀಪ ಬೆಳಗುತ್ತದೆ. ಸಂಪ್ರದಾಯಸ್ಥ ಪಿತೃಸಂಸ್ಕೃತಿಯ ಕುಟುಂಬದ ಮೀನಾಕ್ಷಮ್ಮ ಎತ್ತಿದವರು ಹೇಳಿದಂತೆ ಸುತ್ತು ಹೊಡೆಯುವ ಆರತಿ ತಟ್ಟೆ. ಸ್ವಂತಬುದ್ಧಿ ಇಲ್ಲದವಳು. ವಿಧೇಯಳು. ತನ್ನ ಗಂಡ ಅಪ್ಪಣ್ಣಯ್ಯ ಇಟ್ಟುಕೊಂಡ ಹೆಣ್ಣು ಗುಲಾಬಿ ರಾತ್ರಿ ಮನೆಗೇ ಮಲಗಲು ಬಂದಾಗ ಪ್ರತಿದಿನ ಹಾಲು ಕೊಟ್ಟು ಜತೆಗೆ ಇರುವೆ ಕೂಡ ಬಿಟ್ಟು ಆಕೆ ‘ಗಣಪತಿ ಶಾಪ ಇದ್ರೆ ಯರು ಬತ್ ಅಂಬ್ರಲೆ, ನಾನ್ ಇಲ್ಲಿಗೆ ಬಪ್ಪುದ್ ಗಣಪತಿ ದೇವ್ರಿಗೆ ಸಮಾಧಾನ ಇಲ್ಲೆ ಕಾಂತ್’ ಅಂತಳಿ ಗುಲಾಬಿ ಮನೆಗೆ ಬರುವುದನ್ನೇ ಬಿಟ್ಟಳು. ಯಾರಿಗೂ ಸುಳಿವೂ ಸಿಗದಂತೆ ದಿವ್ಯಮೌನದಲ್ಲಿ ಪ್ರತಿಭಟಿಸುತ್ತಾಳೆ ಮೀನಾಕ್ಷಿ. ಅಕ್ಕು, ಅಮ್ಮಚ್ಚಿಯೆಂಬ ನೆನಪು ಮುಂತಾದ ಕತೆಗಳಲ್ಲಿ ಸ್ವಾಭಿಮಾನ, ಸ್ವಾತಂತ್ರ್ಯ, ಅಸ್ತಿತ್ವಕ್ಕಾಗಿ ಬೆಂಕಿಮೈಯಲಿ ಸಿಡಿದು ಪ್ರತಿಭಟಿಸುವ ಹೆಣ್ಣು ಪಾತ್ರಗಳು ಕಾಣಿಸುತ್ತವೆ. ‘ಪುಟ್ಟಮ್ಮತ್ತೆ ಮತ್ತು ಮೊಮ್ಮಗಳು’ ಕತೆಯ ಮೊಮ್ಮಗಳು ಅಪ್ರತಿಮ ರೂಪ ಸ್ವರೂಪವಿದ್ದರೂ ಆಸ್ತಿಪಾಸ್ತಿ, ಸೀರೆ ಒಡವೆ ಇಲ್ಲದ ಬಡ ಹೆಣ್ಣು ಆಗಿರುವುದರಿಂದಲೇ ಆಯ್ಕೆಯ ಸ್ವಾತಂತ್ರ್ಯವೇ ಇಲ್ಲದೆ ಅಲ್ಲಲ್ಲಿ ಸಿಡಿದೇಳುತ್ತ ಅಸಹಾಯಕಳಾಗಿ ಒಳಗೇ ಮೂಕವಾಗಿ ಉಮ್ಮಳಿಸುವ ಪಾತ್ರ.

ವೈದೇಹಿಯವರ ಒಂದೊಂದು ಕತೆಯೂ ಹಾಸ್ಯಲೇಪಿತ ಕುಂದಾಪುರ ಕನ್ನಡದ ಸಂಭಾಷಣೆಗಳನ್ನು ಒಳಗೊಂಡ ದೃಶ್ಯಕಾವ್ಯಗಳು. ಅಕ್ಕು, ಅಮ್ಮಚ್ಚಿ, ನಟಿಯಂತಹ ಪಾತ್ರಗಳಂತೂ ಅದ್ಭುತ ಅಭಿನೇತ್ರಿಯರು. ಮದುವೆಮನೆ, ಉಪನಯನ, ಶ್ರಾದ್ಧ ಸಮಾರಂಭಗಳಲ್ಲಿ ಹೆಣ್ಣು ಜೀವಗಳು ಸೇರುವ ಜಾಗವೇ ಪಟ್ಟಾಂಗದ ಕಟ್ಟೆಯಾಗುತ್ತವೆ. ಲೇವಡಿ, ವ್ಯಂಗ್ಯ, ವಿಡಂಬನೆ, ಹಾಸ್ಯ, ಹಾಳು ಹರಟೆ ತುಂಬಿದ ಕಿರು ರಂಗಭೂಮಿಯೂ ಆಗುತ್ತದೆ. ಕರಾವಳಿ ಕಡಲ ತೀರದ ಆಂತರಿಕ ಹಾಗೂ ಬಾಹ್ಯ ಚಲನಶೀಲ ಜಗತ್ತು ಕೌಟುಂಬಿಕ, ಸಾಮಾಜಿಕ ಸ್ಥಿತ್ಯಂತರ ಪರಿವರ್ತನೆಗಳ ಸಮೇತ ಇಲ್ಲಿ ಅನಾವರಣಗೊಳ್ಳುತ್ತವೆ. ಗಂಡ ಹಾಗೂ ಮಗನಿಂದ ದೂರ ದೂಡಲ್ಪಟ್ಟ ‘ನಟಿ’ ಕತೆಯ ರತ್ನ ಒಳಗೆ ಜ್ವಾಲಾಮುಖಿ ಇಟ್ಟುಕೊಂಡೇ ತಾನು ಕಂಡ ಪ್ರತಿಯೊಂದು ಸ್ತ್ರೀಯ ಪರಕಾಯ ಪ್ರವೇಶ ಮಾಡಿ ನಟಿಸುತ್ತ ಮನೋರಂಜನೆ ನೀಡುತ್ತಾಳೆ. ಕೊನೆಗೆ ತನ್ನ ಪಾತ್ರವನ್ನು ತಾನೇ ನಟಿಸುತ್ತ ಮಗಳ ಶವಕ್ಕೆ ಕೊಳ್ಳಿ ಇಟ್ಟು ಬಂದ ಪ್ರಸಂಗವನ್ನೂ ನಟಿಸಿ ಕೊಠಡಿಯ ಒಳಗೆ ಹೋಗಿ ಕದ ಮುಚ್ಚಿ ಕೂತವಳು ಹೊರಬರುವುದೇ ಇಲ್ಲ.

ಕಾಲ ದೇಶ ಭಾಷಾತೀತವಾಗಿ ಸರ್ವಕಾಲಕ್ಕೂ ನಿಲ್ಲುವಂತಹ ಕತೆಗಳನ್ನು ನೀಡಿರುವ ವೈದೇಹಿಯವರು ಪ್ರತಿಷ್ಠಿತ ನೃಪತುಂಗ ಪ್ರಶಸ್ತಿಗೆ ಪಾತ್ರರಾಗಿದ್ದಕ್ಕಾಗಿ ಅಭಿನಂದನೆಗಳು. ಮುಂದಿನ ಸಾಹಿತ್ಯ ಪ್ರಯಾಣಕ್ಕೆ ಶುಭ ಹಾರೈಕೆಗಳು.

(ಲೇಖಕರು ಉಪನ್ಯಾಸಕರು, ಸಾಹಿತಿ)

ಸ್ತ್ರೀ ಸಂವೇದನೆಯ ಹಾದಿ

| ಮುರಳೀಧರ ಉಪಾಧ್ಯ ಹಿರಿಯಡಕ

ಹೆಣ್ಣಿನ ಜೀವನವೆಂದರೆ ಕೇವಲ ಸಂಕಟ, ಹೋರಾಟ, ಅಸಹಾಯಕತೆಯಲ್ಲ. ಅದರಲ್ಲಿ ಸಂಭ್ರಮ, ಸುಖ, ಸಣ್ಣತನ, ವಂಚನೆ, ಆಸೆ ಎಲ್ಲವೂ ಧಾರಾಳವಾಗಿದೆ ಎಂಬುದನ್ನು ತನ್ನ ಕಥೆಗಳಲ್ಲಿ ಚಿತ್ರಿಸಿದವರು ವೈದೇಹಿ. ವೈದೇಹಿ ಕಳೆದ 40 ವರ್ಷಗಳಲ್ಲಿ ಸಣ್ಣಕತೆ, ಕಾದಂಬರಿ, ಕವನ, ಪ್ರಬಂಧ, ಮಕ್ಕಳ ನಾಟಕ, ಭಾಷಾಂತರ, ಆತ್ಮಕತೆ ನಿರೂಪಣೆ ಹೀಗೆ ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಬರೆಯುತ್ತಾ ಬೆಳೆದಿದ್ದಾರೆ. ಕೋ.ಲ. ಕಾರಂತ, ಸೇಡಿಯಾಪು, ಸರಸ್ವತಿ ಬಾಯಿ ರಾಜವಾಡೆ, ಬಿ.ವಿ. ಕಾರಂತ ಮೊದಲಾದ ಹಿರಿಯರ ಆತ್ಮಕತೆಗಳನ್ನು ನಿರೂಪಿಸಿ ಸಾಹಿತ್ಯ ಪರಂಪರೆಯನ್ನು ಸ್ವಯಾರ್ಜಿತ ಮಾಡಿಕೊಳ್ಳುವ ಹೊಸ ಮಾರ್ಗವೊಂದನ್ನು ತೋರಿಸಿಕೊಟ್ಟಿದ್ದಾರೆ.

ವೈದೇಹಿ ಆತ್ಮಕತೆಯಲ್ಲಿ ಗಮನ ಸೆಳೆಯುವ ಒಂದು ಶಬ್ದ ‘ಹದ’. ಎಲ್ಲದಕ್ಕೂ ಒಂದು ಹದ ಬೇಕು ಎಂಬ ತನ್ನ ಅಮ್ಮನ ಕಿವಿಮಾತನ್ನು ಅವರು ನೆನಪಿಸಿಕೊಳ್ಳುತ್ತಾರೆ. ಬರೆಯುವುದು ತುಸು ಹದ ತಪ್ಪಿದರೂ ಅದು ಒಂದೋ ಭಾವುಕವಾಗುವ, ಇಲ್ಲ ಹಳಹಳಿಕೆಯಾಗುವ ಸ್ವಮರುಕವಾಗುವ ಅಥವಾ ಇನ್ನೊಂದು ದಿಕ್ಕಿನಲ್ಲಿ ಸಿಟ್ಟು ಕ್ರೋಧ, ನಿರಾಶೆಗಳಿಗೆ ಶಬ್ದಗಳು ಹುರಿಗಟ್ಟಿ ಸಂಯಮ ಕಳೆಯುವ ಅಪಾಯದ ಬಗ್ಗೆ ಎಚ್ಚರ ವಹಿಸಿದ್ದಾರೆ.

ಲೇಖಕಿಯರಿಗೆ ಅಂತರಂಗಕ್ಕೆ ಪಾತಾಳಗರಡಿ ಹಾಕಿ ಬರೆಯುವ ತಾಕತ್ತು ಇದೆಯಾ ಎಂದು ವೈದೇಹಿ ಸಂದರ್ಶನದಲ್ಲಿ ಪ್ರಶ್ನಿಸಿದ್ದರು. ಪಾತಾಳಗರಡಿ ಎಂದೊಡನೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಹೆಣ್ಮಕ್ಕಳು ನೆನಪಾಗುತ್ತಾರೆ. ವೈದೇಹಿ ಅಂತರಂಗಕ್ಕೆ ಪಾತಾಳಗರಡಿ ಹಾಕಿ ಬರೆದಿದ್ದರಿಂದ ಕನ್ನಡ ಕಥಾ ಸಾಹಿತ್ಯಕ್ಕೆ ಕೆಲವು ಕಥಾರತ್ನಗಳು ದೊರೆತಿವೆ. ಪುರುಷ ಪ್ರಧಾನ ಸಮಾಜದ ಮುಖವಾಡ ಕಳಚಿವೆ.

ಪರಿಪೂರ್ಣತೆ ಈ ಜಗತ್ತಿನಲ್ಲಿಯೇ ಇಲ್ಲ ಎನ್ನುವ ವೈದೇಹಿ ಯಾವ ವರವನ್ನೂ ಬೇಡದೆ ಯಾರ ಶಾಪಕ್ಕೂ ಅಂಜದೆ ಚಿರಂಜೀವಿಯಾಗಿ ಉಳಿಯಬಲ್ಲ ಕುಂದಾಪುರ ಕನ್ನಡ ಸ್ಪರ್ಶವನ್ನು ಭಾರತದ ಸಮಕಾಲೀನ ಕಥಾ ಸಾಹಿತ್ಯಕ್ಕೆ ನೀಡಿದ್ದಾರೆ. ಭಾಷಾಂತರಗಳ ಮೂಲಕ ವೈದೇಹಿ ಭಾರತದ ಎಲ್ಲಾ ಭಾಷೆಗಳ ಓದುಗರನ್ನು ತಲುಪಿದ್ದಾರೆ. ಭಾರತೀಯ ಭಾಷೆಗಳಲ್ಲಿ ಈಗ ಬರೆಯುತ್ತಿರುವ ಮಹತ್ವದ ಲೇಖಕಿಯರಲ್ಲಿ ವೈದೇಹಿ ಕೂಡ ಒಬ್ಬರಾಗಿದ್ದಾರೆ.

ಕಥನಕಾಲದ ವೈದೇಹಿ ‘ಹೂವ ಕಟ್ಟುವ ಕಾಯಕ’ ಕವನ ಸಂಕಲದಲ್ಲಿ ಹೊಸ ಹಾದಿ ಹಿಡಿದಿದ್ದಾರೆ. ‘ತಿಳಿಸಾರು ಗೊತ್ತು, ಕಾವ್ಯ ಗೊತ್ತಿಲ್ಲ’ ಎನ್ನುತ್ತಾ ಕಾವ್ಯಲೋಕಕ್ಕೆ ಬಂದ ವೈದೇಹಿ ಅವರ ಕವನಗಳಲ್ಲಿ ಕಾವ್ಯದ ಹೊಸ ರುಚಿ ಮತ್ತು ಹೊಸ ಹದ ಕಾಣುತ್ತೇವೆ. ವೈದೇಹಿ ನಿರೂಪಿಸಿದ ಬಿವಿ ಕಾರಂತರ ಆತ್ಮಕತೆ ‘ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ’ ಕರ್ನಾಟಕದ ಮಹತ್ವದ ಸಾಂಸ್ಕೃತಿಕ ಪಠ್ಯ.

ವೈದೇಹಿಯವರ ಸೌಹಾರ್ದ ಸ್ತ್ರೀವಾದದ ಮುಖ್ಯಾಂಶಗಳನ್ನು ಗಮನಿಸುವುದಾದರೆ ಹೆಣ್ಣಿನ ಸತ್ವ ಯಾವಾಗಲೂ ವಿಶಿಷ್ಟವಾಗಿದೆ. ಅವಳ ಚೈತನ್ಯಶೀಲತೆ, ಅಂತಃಶಕ್ತಿ, ಧಾರಣಾಗುಣ ಗಂಡು ಸತ್ವಕ್ಕೆ ಜನ್ಮ ಜನ್ಮಾಂತರಕ್ಕೂ ಬಾರದು. ನಮಗೆ ತಿಳಿಯದಂತೆ ಅವರು ಕಲ್ಪಿಸಿದ ಹೊರ ಒಳಗಿನ ಪ್ರಪಂಚಗಳನ್ನು ನಾವು ಹೆಬ್ಬೆಟ್ಟು ಒತ್ತಿ ಒಪ್ಪಿಗೆ ಸೂಚಿಸಿದ್ದೆವು. ಸ್ತ್ರೀವಾದ ಎಂದರೆ ಹೀಗೆ ಹೆಬ್ಬೆಟ್ಟು ಒತ್ತದೆ ಸ್ವಪ್ರಜ್ಞೆಯಲ್ಲಿ ದೃಢನಿಲ್ಲುವ ಕಣ್ತೆರೆದ ಕಣ್ಣು ಅನಾಗರಿಕ ಚಕಮಕಿಗಳಿಲ್ಲದ ಸೌಹಾರ್ದಯುತವಾಗಿ ಕೈ ಕೈ ಹಿಡಿದು ನಡೆದ ಕನಸಿನೆಚ್ಚರದ ಒಂದು ವಾಸ್ತವ ಪ್ರಜ್ಞೆ, ಜೀವ ಜೀವನದ ಜ್ಞಾನ.

ವೈದೇಹಿ ಹಲವು ಕತೆಗಳ ಸಂಭಾಷಣೆಯಲ್ಲಿ ಕುಂಧಾಪುರ ಕನ್ನಡ ಬಳಸಿದ್ದಾರೆ. ಅವರ ‘ಅಸ್ಪಶ್ಯರು’ (1992) ಕಾದಂಬರಿಯನ್ನು ಓದಿದ ಶಿವರಾಮ ಕಾರಂತರು ವೈದೇಹಿಗೆ ಪತ್ರ ಬರೆದು ಕಾದಂಬರಿಯ ಲವಲವಿಕೆಯನ್ನು ಮೆಚ್ಚಿಕೊಂಡಿದ್ದರು. ಕುಂದಾಪುರ ಕನ್ನಡ ಬಳಕೆಯಿಂದ ಓದುಗರು ಕಡಿಮೆಯಾಗಬಹುದು ಎಂದು ಸಲಹೆ ನೀಡಿದ್ದರು. ಕಾರಂತರ ಸಲಹೆಯನ್ನು ವೈದೇಹಿ ಅಲಕ್ಷಿಸಿ ಮುನ್ನಡೆದ ಕಾರಣ ಕುಂದಕನ್ನಡ ಅಖಿಲ ಕರ್ನಾಟಕ ಮನ್ನಣೆ ಪಡೆಯಿತು.

ವೈದೇಹಿ ಅವರ ‘ನರಳಿದವರು’ ಪ್ರಬಂಧದಲ್ಲಿರುವ ಕಲಾವಿದನ ಹೆಂಡತಿ, ಅರಸಿಕ ಗಂಡನ ಸಹವಾಸದಲ್ಲಿ ನರಳಿದವಳು. ಒಂದು ದಿನ ರಾತ್ರಿ ಹಸೆಗೆ ಕರೆದಾಗ ನಿರಾಕರಿಸಿದ ಅವಳು ಮನೆಯಿಂದ ಹೊರಗೆ ಓಡುತ್ತಾಳೆ. ಅವನು ಬೆನ್ನಟ್ಟಿಕೊಂಡು ಬಂದಾಗ ಅವಳು ಒಂದು ಹಲಸಿನ ಮರ ಹತ್ತಿ ಕುಳಿತುಕೊಳ್ಳುತ್ತಾಳೆ. ‘ಬೇಗ ಮಕ್ಕಳು, ಗಿಕ್ಕಳು ಆಗುವುದಿಲ್ಲ.. ಹೆದರಬೇಡ ಬಾ’ ಎಂದು ಕಲಾವಿದ ಪುಸಲಾಯಿಸಿ ಕರೆದರೂ ಆಕೆ ಮರದಿಂದ ಕೆಳಗಿಳಿಯುವುದಿಲ್ಲ. ಬೆಳಗಾಗುವ ತನಕವೂ ಹಲಸಿನ ಮರದ ಮೇಲೆಯೇ ಕುಳಿತಿರುತ್ತಾಳೆ. ಇದೆಲ್ಲವನ್ನೂ ಗಮನಿಸಿದರೆ ವೈದೇಹಿ ಅವರ ಕತೆಯ ಪಾತ್ರಗಳು ಜನಪದ ಕತೆಗಳ ಲೋಕದಿಂದ ಹಲಸಿನ ಮರದಿಂದ ಇಳಿದು ಬಂದು ನಮ್ಮೊಡನೆ ಪಟ್ಟಾಂಗ ಆರಂಭಿಸುತ್ತವೆ.ಹಿರಿಯ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಹಿಂದೊಮ್ಮೆ ‘ವೈದೇಹಿ ಮುಟ್ಟಿದ್ದೆಲ್ಲಾ ಚಿನ್ನ ಮಾಡುವ ಲೇಖಕಿ’ ಎಂದಿದ್ದರು.

ವೈದೇಹಿಯವರ ಪ್ರಮುಖ ಕೃತಿಗಳು: ಮರ ಗಿಡ ಬಳ್ಳಿ, ಅಂತರಂಗದ ಪುಟಗಳು, ಗೋಲ, ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿ, ಅಮ್ಮಚ್ಚಿ ಎಂಬ ನೆನಪು, ಕ್ರೌಂಚ ಪಕ್ಷಿಗಳು, ಕತೆ (ಕಥಾ ಸಂಕಲನಗಳು); ಬಿಂದು ಬಿಂದಿಗೆ, ಪಾರಿಜಾತ, ಹೂವ ಕಟ್ಟುವ ಕಾಯಕ, ದೀಪದೊಳಗಿನ ದೀಪ (ಕವನ ಸಂಕಲನಗಳು); ಅಸ್ಪೃ್ಯರು (ಕಾದಂಬರಿ) ; ನಾಯಿಮರಿ, ಧಾಂ ಧೂಂ ಸುಂಟರಗಾಳಿ, ಮೂಕನ ಮಕ್ಕಳು, ಕೋಟು ಗುಮ್ಮ, ಹಕ್ಕಿ ಹಾಡು, ಆನೆ ಬಂತೊಂದು ಆನೆ, ರಾಜಾ ಲಿಯರ್ (ಮಕ್ಕಳ ಸಾಹಿತ್ಯ); ಮಲ್ಲಿನಾಥನ ಧ್ಯಾನ, ಮೇಜು ಮತ್ತು ಬಡಗಿ, ಜಾತ್ರೆ (ಪ್ರಬಂಧ ಸಂಕಲನ).

(ಲೇಖಕರು ಹಿರಿಯ ಸಾಹಿತಿ, ವಿಮರ್ಶಕರು)