ಅಂಕಣ

ಅರಿತು ಬಳಸಿದರೆ ವರ, ಅಲಕ್ಷ್ಯ ಮಾಡಿದರೆ ಶಾಪ

Webdesk - Ravikanth

ಜನಸಂಖ್ಯೆ ಜಾಸ್ತಿ ಇರುವುದು ಒಂದು ರೀತಿಯಲ್ಲಿ ವರವೂ ಹೌದು, ಶಾಪವೂ ಹೌದು. ಉತ್ತಮ ಶಿಕ್ಷಣ ನೀಡಿ, ಮಾನವ ಸಂಪನ್ಮೂಲವನ್ನಾಗಿ ಬಳಸಿದರೆ ಅದು ವರ. ಇಲ್ಲದಿದ್ದರೆ ನಿರುದ್ಯೋಗ, ಅಪರಾಧದ ಪ್ರಮಾಣ ಹೆಚ್ಚಳವಾಗಿ ಅದೇ ಶಾಪವಾಗಿ ಪರಿಣಮಿಸುತ್ತದೆ. ವಿಶ್ವದ ಜನಸಂಖ್ಯೆ ಎಷ್ಟಿತ್ತು, ಎಷ್ಟಾಯಿತು, ನಿಯಂತ್ರಣದ ದಾರಿ ಯಾವುದು? ಇಲ್ಲಿದೆ ಮಾಹಿತಿ.

| ಪಂಕಜ ಕೆ.ಎಂ.

ವಿಶ್ವದ ಜನಸಂಖ್ಯೆ ಎಷ್ಟಿರಬಹುದು ಎಂದು ಊಹಿಸಿದ್ದೀರಾ? ವಿಶ್ವ ಸಂಸ್ಥೆಯ ಇತ್ತೀಚಿನ ಮಾಹಿತಿ ಪ್ರಕಾರ ಪ್ರಸ್ತುತ ಜುಲೈ 2021ರ ಹೊತ್ತಿಗೆ ವಿಶ್ವದ ಜನಂಖ್ಯೆ 7.9 ಶತಕೋಟಿ ಆಗಿದೆ. ವಿಶ್ವ ಜನಸಂಖ್ಯಾ ದಿನ ಎಂದು ವಿಶ್ವ ಸಂಸ್ಥೆ ಘೋಷಿಸಿ 34 ವರ್ಷಗಳು ಕಳೆದರೂ ನಿಯಂತ್ರಣ ಮಾಡಬೇಕೆ, ಬೇಡವೇ ಎಂಬ ಬಗ್ಗೆ ಜಗತ್ತಿನಾದ್ಯಂತ ಚರ್ಚೆ ನಡೆದೇ ಇದೆ. ಜಗತ್ತಿನಲ್ಲಿ ಪ್ರತಿ ನಿಮಿಷಕ್ಕೆ ಒಂದು ಮಗು ಜನಿಸುತ್ತದೆ. ವರ್ಷದಿಂದ ವರ್ಷಕ್ಕೆ ಜನಸಂಖ್ಯೆ ಏರುಗತಿಯಲ್ಲಿ ಸಾಗುತ್ತಲೇ ಇದ್ದು, ಅಂದಾಜಿನ ಪ್ರಕಾರ, 2023ರ ವೇಳೆಗೆ ವಿಶ್ವದ ಜನಸಂಖ್ಯೆ 8 ಶತಕೋಟಿಯಾಗಲಿದೆ. 2037ರ ವೇಳೆಗೆ 9 ಶತಕೋಟಿ, 2057ರ ವೇಳೆಗೆ 10 ಶತಕೋಟಿ ತಲುಪುವ ನಿರೀಕ್ಷೆ ಇದೆ.

ಭಾರತದ ಸ್ಥಿತಿಗತಿ: ವಿಶ್ವಸಂಸ್ಥೆಯ ಇತ್ತೀಚಿನ ದತ್ತಾಂಶದ ಪ್ರಕಾರ ದೇಶದ ಜನಸಂಖ್ಯೆ (ಜು. 2, 2021ರ ವೇಳೆಗೆ) 139 ಕೋಟಿ ಆಗಿದ್ದು, ಇದು ವಿಶ್ವದ ಒಟ್ಟು ಜನಸಂಖ್ಯೆಯ ಶೇ. 17.7ರಷ್ಟು. ಆ ಮೂಲಕ ಭಾರತ ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿದೆ. ಚೀನಾ ಮೊದಲ (143 ಕೋಟಿ) ಸ್ಥಾನದಲ್ಲಿದೆ. ಪ್ರಸ್ತುತ ಕರ್ನಾಟಕದ ಜನಸಂಖ್ಯೆ 7.2 ಕೋಟಿ ಇದೆ.

34 ವರ್ಷದಲ್ಲಿ 2.9 ಶತಕೋಟಿ ಹೆಚ್ಚಳ: 1987ರ ಜು. 11ಕ್ಕೆ ವಿಶ್ವದ ಜನಸಂಖ್ಯೆ 5 ಕೋಟಿ ಇತ್ತು. ಆದ್ದರಿಂದ ಅದೇ ದಿನವನ್ನು ವಿಶ್ವ ಜನಸಂಖ್ಯಾ ದಿನ ಎಂದು ಘೋಷಿಸಿದ ವಿಶ್ವಸಂಸ್ಥೆ ಪ್ರತಿ ವರ್ಷ ಈ ದಿನದಂದು ಜನಸಂಖ್ಯೆ ಹೆಚ್ಚಳ ನೋಡಿ, ಅದರಿಂದಾಗುವ ಸಮಸ್ಯೆಗಳು, ಕುಟುಂಬ ಯೋಜನೆ, ಲಿಂಗ ಸಮಾನತೆ, ಪರಿಸರದ ಮೇಲಾಗುವ ಪರಿಣಾಮಗಳು ಹಾಗೂ ಮಾನವಹಕ್ಕುಗಳ ಕುರಿತು ಪರಿಶೀಲಿಸಿ ಜನರಲ್ಲಿ ಜಾಗೃತಿ ಮೂಡಿಸಲು ನಿರ್ಧರಿಸಿತು. ಇದರ ಹೊರತಾಗಿಯೂ ವಿಶ್ವದ ಜನಸಂಖ್ಯೆ ಕಳೆದ 34 ವರ್ಷಗಳಲ್ಲಿ 2.9 ಶತಕೋಟಿ ಹೆಚ್ಚಳವಾಗಿದೆ. ವಿಶ್ವದಲ್ಲಿ 1804ರಲ್ಲಿ ನೂರು ಕೋಟಿ, 1927ರಲ್ಲಿ 200 ಕೋಟಿ, 1960ರಲ್ಲಿ 300 ಕೋಟಿ, 1987ರಲ್ಲಿ ಐನೂರು ಕೋಟಿ, 2000ದಲ್ಲಿ 600 ಕೋಟಿ, 2017ರಲ್ಲಿ 750 ಕೋಟಿ ಆಯಿತು. ಪ್ರಸ್ತುತ 790 ಕೋಟಿಯಷ್ಟಾಗಿದೆ.

ದಿನಾಚರಣೆಯ ಉದ್ದೇಶ: ಅತಿಯಾದ ಜನಸಂಖ್ಯೆಯು ಸಮಾಜದ ಮೇಲೆ ಒತ್ತಡವನ್ನು ಸೃಷ್ಟಿಸುತ್ತಿದೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಅಪರಾಧಗಳು ಹಿಂದೆಂದಿಗಿಂತಲೂ ಹೆಚ್ಚಾಗಿ ನಡೆಯುತ್ತಿವೆ. ಮಾನವ ಕಳ್ಳಸಾಗಣೆ ಮತ್ತು ಬಾಲ ಕಾರ್ವಿುಕ ಪದ್ಧತಿ ಸಾಮಾನ್ಯವಾಗುತ್ತಿವೆ. ಇವೂ ಸೇರಿದಂತೆ ಇನ್ನೂ ಹಲವು ದುಷ್ಪರಿಣಾಮಗಳು ಉಂಟಾಗುತ್ತಿವೆ. ಅದನ್ನು ತಡೆಯುವುದಕ್ಕಾಗಿ ಜನಸಂಖ್ಯೆ ನಿಯಂತ್ರಿಸುವುದು ಅತ್ಯಗತ್ಯ. ಆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷ ಜು. 11ರಂದು ‘ವಿಶ್ವ ಜನಸಂಖ್ಯಾ ದಿನ’ವನ್ನು ಆಚರಿಸಲಾಗುತ್ತದೆ.

ತಿಂಗಳುದ್ದಕ್ಕೂ ಜಾಗೃತಿ ಕಾರ್ಯಕ್ರಮ: ‘ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೂ ಕುಟುಂಬ ಯೋಜನೆ ಸೇವೆ- ಸ್ವಾವಲಂಬಿ ರಾಷ್ಟ್ರ ನಿರ್ವಣ’ ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜುಲೈನಾದ್ಯಂತ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜನಸಂಖ್ಯೆ ಸ್ಪೋಟದ ದುಷ್ಪರಿಣಾಮಗಳು, ಕುಟುಂಬ ಯೋಜನೆಯ ಉಪಯೋಗ ಕುರಿತು ಬ್ಯಾನರ್, ಪೋಸ್ಟರ್, ರೇಡಿಯೋ ಜಿಂಗಲ್ಸ್, ಜಾಹಿರಾತುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಒಂದೂವರೆ ವರ್ಷದಿಂದ ಕುಟುಂಬ ಕಲ್ಯಾಣ ಯೋಜನೆಯ ಸಮರ್ಪಕ ಜಾರಿಗೆ ಕೊಂಚ ಹಿನ್ನಡೆಯಾಗಿತ್ತು ಎನ್ನುತ್ತಾರೆ ಇಲಾಖೆಯ ಕುಟುಂಬ ಕಲ್ಯಾಣ ವಿಭಾಗದ ಉಪನಿರ್ದೇಶಕಿ ಡಾ. ಬಿ.ಆರ್. ಚಂದ್ರಿಕಾ.