ಅಂಕಣ

ದಾಸಸಾಹಿತ್ಯದ ರತ್ನ; ವಿಜಯದಾಸರ ಆರಾಧನೆ ಇಂದು

| ಶಿಲ್ಪಾ ಕುಲಕರ್ಣಿ

ದಾಸ ಚತುಷ್ಟಯರಲ್ಲಿ ಓರ್ವರಾದ , ಭೃಗು ಋಷಿಗಳ ಅವತಾರಿಗಳಾದ ಶ್ರೀ ವಿಜಯದಾಸರು ಮಾನ್ವಿ ತಾಲೂಕಿನ ಚಿಕಲಪರವಿನಲ್ಲಿ ಕ್ರಿ.ಶ.1682ರಲ್ಲಿ ಶ್ರೀನಿವಾಸಪ್ಪ ಮತ್ತು ಕೂಸಮ್ಮ ದಂಪತಿಗೆ ಜನಿಸಿದರು. ಇವರ ಮೂಲ ಹೆಸರು ದಾಸಪ್ಪ. ಇವರು ಕೆಲಕಾಲ ಸಂಸಾರಿಗಳಾಗಿ, ನಂತರ ಹರಿದಾಸ ದೀಕ್ಷೆ ಸ್ವೀಕರಿಸಿ ವಿಜಯದಾಸರೆನಿಸಿದರು. ವಿಜಯದಾಸರು ಅಪಾರ ಶಿಷ್ಯವೃಂದವನ್ನು ಹೊಂದಿದ್ದು, ಅವರಲ್ಲಿ ಮೋಹನದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರು ಪ್ರಮುಖರು. ಕನ್ನಡ ಮತ್ತು ಭಕ್ತಿ ಸಾಹಿತ್ಯಕ್ಕೆ ದಾಸಸಾಹಿತ್ಯದ ಕೊಡುಗೆ ಅದ್ವಿತೀಯ.

ಪುರಂದರದಾಸರು ಒಟ್ಟು 5,00,000 ದೇವರನಾಮಗಳನ್ನು ಬರೆಯಬೇಕೆಂದುಕೊಂಡಿದ್ದರು. ಆದರೆ, ಅವರ ಜೀವಿತ ಕಾಲದಲ್ಲಿ ಅವರು 4,75,000 ಬರೆದಿದ್ದು, ಉಳಿದ 25,000 ದೇವರನಾಮಗಳನ್ನು ವಿಜಯದಾಸರು ‘ವಿಜಯ ವಿಠ್ಠಲ’ ಅಂಕಿತನಾಮದಿಂದ ಪೂರ್ಣಗೊಳಿಸಿದ್ದಾರೆಂದು ಹೇಳಲಾಗುತ್ತದೆ. ‘ಸದಾ ಎನ್ನ ಹೃದಯದಲ್ಲಿ ವಾಸವಾಗಿರು ಶ್ರೀಹರಿ’ ಎಂದು ಭಗವಂತನನ್ನು ಕೊಂಡಾಡುತ್ತಾ ಅನೇಕ ದೇವರನಾಮಗಳನ್ನು ಬರೆದಿದ್ದು, ಅದರಲ್ಲಿ ಸುಳಾದಿ, ಉಗಾಭೋಗಗಳು ಪ್ರಮುಖವು. ವಿಜಯದಾಸರು ಸುಳಾದಿ ದಾಸರೆಂದೇ ಪ್ರಖ್ಯಾತ. ಸುಳಾದಿ ಹೆಸರೇ ಹೇಳುವಂತೆ ಸುಳಿವಿನ ಹಾದಿ, ಅಂದರೆ ಭಗವಂತನ ಸುಳಿವನ್ನು ನೀಡುವ ಜ್ಞಾನಾಮೃತ. ದಾಸರು ಬರೆದ ಪಂಚರತ್ನ ಸುಳಾದಿ ಎಂದು ಪ್ರಸಿದ್ಧವಾದ ನರಸಿಂಹ ಸುಳಾದಿ, ಧನ್ವಂತರಿ ಸುಳಾದಿ, ಕಪಿಲ ಸುಳಾದಿ, ದುರ್ಗಾ ಸುಳಾದಿ ಮತ್ತು ಮುಖ್ಯ ಪ್ರಾಣ ಸುಳಾದಿ ಕಲಿಯುಗಕ್ಕೆ ದಿವ್ಯ ಔಷಧಿ ಎಂದೇ ಹೇಳಬಹುದು.

ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಂ|

ವಿಜ್ಞಾನವಿಮಲಂ ಶಾಂತಂ ವಿಜಯಾಖ್ಯ ಗುರುಂ ಭಜೇ|

ವಿಜಯದಾಸ ಗುರುಗಳನ್ನು ಭಜಿಸುವುದರಿಂದ ಮನುಷ್ಯನಿಗೆ ಎದುರಾಗುವ ವಿಘ್ನಗಳನ್ನು ಮತ್ತು ಅಜ್ಞಾನವನ್ನು ನಾಶ ಮಾಡಿ; ಜ್ಞಾನ ಮತ್ತು ಬುದ್ಧಿಯನ್ನು ವೃದ್ಧಿಸಿ ಎಲ್ಲ ಗೊಂದಲಗಳನ್ನು ಪರಿಹಾರ ಮಾಡುತ್ತಾರೆ. ಕಲ್ಲೂರು ಸುಬ್ಬಣ್ಣಾಚಾರ್ಯರು, ದಾಸರ ಮಹಿಮೆಯನ್ನು ಖುದ್ದಾಗಿ ಕಂಡು ಶರಣಾಗಿ, ಅಪರೋಕ್ಷ ಜ್ಞಾನ ಪ್ರದಾನ ಮಾಡಬೇಕೆಂದು ಬೇಡಿಕೊಂಡರು. ಹರಿದಾಸರಾಗಬೇಕೆಂಬ ಇಚ್ಛೆಯನ್ನು ಆಚಾರ್ಯರಲ್ಲಿ ಕಂಡು ತಮ್ಮ ಶಿಷ್ಯರಿಂದ ‘ವ್ಯಾಸ ವಿಠ್ಠಲ’ ಅಂಕಿತವನ್ನು ಕೊಡಿಸಿ ಹರಿದಾಸ ದೀಕ್ಷೆಯನ್ನು ನೀಡಿದರು. ಸುಬ್ಬಣ್ಣಾಚಾರ್ಯರು ಮುಂದೆ ಭವರೋಗ ಪರಿಹಾರದ ರಕ್ಷಾಕವಚವಾದ ‘ವಿಜಯರಾಯರ ಕವಚ’ ರಚಿಸಿದರು.

ಕಾರ್ತಿಕ ಶುದ್ಧ ದಶಮಿಯಂದು ಚಿಪ್ಪಗಿರಿಯಲ್ಲಿ ದಾಸರು ದೇಹತ್ಯಾಗ ಮಾಡಿದರು. ಇದು ಇಂದಿಗೂ ‘ವಿಜಯದಾಸರ ಕಟ್ಟೆ’ ಎಂದು ಪ್ರಖ್ಯಾತವಾಗಿದೆ. ಪ್ರತಿ ವರ್ಷ ಕಾರ್ತಿಕ ದಶಮಿಯಂದು ಮೋಹನದಾಸರ ವಂಶಸ್ಥರು ದಾಸರ ಆರಾಧನೆಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.