| ಮೇಲುಕೋಟೆ ವಿ.ಎನ್. ಗೌಡ
ಕಳೆದ ಶತಮಾನದ ಎಪ್ಪತ್ತರ ದಶಕದಲ್ಲಿ ಆದಿಚುಂಚನಗಿರಿ ಕ್ಷೇತ್ರವು ಕಲ್ಲು ಬಂಡೆಗಳಿಂದ ಕೂಡಿದ ಒಂದು ಬೆಟ್ಟವಾಗಿತ್ತು. ತನ್ನ ನಿಜ ರೂಪವನ್ನು ಪಡೆಯಲು ಶ್ರೀರಾಮನ ಪಾದಸ್ಪರ್ಶಕ್ಕಾಗಿ ನೂರಾರು ವರ್ಷ ಕಲ್ಲಿನ ರೂಪದಲ್ಲಿ ಕಾದಿದ್ದ ಅಹಲ್ಯೆಯಂತೆ ಈ ಕ್ಷೇತ್ರವೂ ಗುರುಗಳ ಬರುವಿಕೆಗಾಗಿ ಕಾದಿತ್ತು. ಅದಾಗಲೇ 1500 ವರ್ಷಗಳ ಇತಿಹಾಸವನ್ನು ಹೊಂದಿ 70 ಜಗದ್ಗುರುಗಳನ್ನು ಕಂಡಿದ್ದರೂ ಈ ಕ್ಷೇತ್ರ ಜಡರೂಪದಲ್ಲೇ ಇತ್ತು. ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಪದಾರ್ಪಣೆಯಾಗುತ್ತಿದ್ದಂತೆಯೇ ಜಡವಾಗಿದ್ದ ಕ್ಷೇತ್ರ ನವಚೈತನ್ಯ ಪಡೆಯಿತು. ಭಕ್ತಕೋಟಿಯಲ್ಲೂ ಚೈತನ್ಯ ತುಂಬಿತು.
ಪೀಠಾಧ್ಯಕ್ಷರಾಗಿ ಬಂದ ಹೊಸದರಲ್ಲಿಯೇ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ‘ಕ್ಷೇತ್ರದಲ್ಲಿದ್ದುಕೊಂಡು ಜನರ ಸೇವೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡುವುದಕ್ಕಾಗುವುದಿಲ್ಲ. ನಮ್ಮ ಸಮಾಜ ಅಸಂಘಟನೆಯಿಂದಾಗಿ ಹಿಂದುಳಿದಿದೆ. ಜನರಿಗೆ ವಿದ್ಯೆಯಿಲ್ಲ. ಬಹುತೇಕ ಹಳ್ಳಿಗಳಲ್ಲಿರುವ ಮಕ್ಕಳು ಅಕ್ಷರ ವಂಚಿತರಾಗಿದ್ದಾರೆ. ಮೊದಲು ಅವರನ್ನು ವಿದ್ಯಾವಂತರನ್ನಾಗಿ ಮಾಡಬೇಕು’ ಎಂದು ಸಂಕಲ್ಪಿಸಿದರು. ಧಾರ್ವಿುಕ ಪೀಠದ ಗುರುವಾಗಿದ್ದರೂ ಮೊದಲಿಗೆ ದೇವಾಲಯ ನಿರ್ವಿುಸಲಿಲ್ಲ. ಪ್ರತಿ ಹಳ್ಳಿಯಲ್ಲೂ ವಿದ್ಯಾಲಯಗಳನ್ನು ನಿರ್ವಿುಸಿದರು. ತಮ್ಮ ಅವಧಿಯಲ್ಲಿ 10 ಸಾವಿರ ಮಕ್ಕಳಿಗಾದರೂ ವಿದ್ಯೆ ನೀಡುವಷ್ಟರ ಮಟ್ಟಿಗೆ ಮಠವನ್ನು ಬೆಳೆಸಬೇಕು ಎಂದುಕೊಂಡಿದ್ದರು. ಅವರು ಕೊನೆಗೆ 1 ಲಕ್ಷದ 10 ಸಾವಿರ ವಿದ್ಯಾರ್ಥಿಗಳು ವಿದ್ಯೆ ಪಡೆಯುತ್ತಿದ್ದುದನ್ನು ಕಣ್ಣಾರೆ ಕಂಡರು.
ತಮ್ಮ ಸಾಮಾಜಿಕ ಸೇವಾ ಕೈಂಕರ್ಯಗಳ ಬಗ್ಗೆ ಶ್ರೀಗಳು ಮಾತನಾಡಿದ್ದು ತುಂಬಾ ಕಡಿಮೆ. ಶ್ರೀಗಳು ಕಡಿಮೆ ಮಾತನಾಡಿದರು. ಹೆಚ್ಚು ಸಾಧಿಸಿದರು. ಭೈರವನ ಭಕ್ತರಿಗಷ್ಟೇ ಸೀಮಿತವಾಗಿದ್ದ ಆದಿಚುಂಚನಗಿರಿ ಕ್ಷೇತ್ರವನ್ನು ಮಹಾಕ್ಷೇತ್ರವನ್ನಾಗಿ ರೂಪಿಸಿದರು. ಮಠದ ಮೂಲಕ ಕೇವಲ ಒಂದು ಸಮಾಜವನ್ನಷ್ಟೇ ಉದ್ಧರಿಸಲಿಲ್ಲ. ಯಾವ ಹಿಂದುಳಿದ ಸಮಾಜಕ್ಕೆ ಸಂಘಟಿತ ಶಕ್ತಿ ಇರಲಿಲ್ಲವೋ, ಆಧುನಿಕ ಜ್ಞಾನದ ಅರಿವೂ ಇರಲಿಲ್ಲವೋ, ಯಾವ ಸಮಾಜ ಸಾಂಸ್ಕೃತಿಕವಾಗಿ ಪರಾವಲಂಬಿಯಾಗಿತ್ತೋ ಅಂತಹ ಸಮಾಜದ ಜನಮಾನಸಕ್ಕೆ ಚೇತನ ನೀಡಿದರು. ಸರ್ವ ಜನಾಂಗದವರನ್ನೂ, ಸರ್ವ ಧರ್ವಿುಯರನ್ನೂ ಸಮಾನವಾಗಿ ಪ್ರೀತಿಸಿ, ಬೆಳೆಸಿದರು.
ಗ್ರಾಮೀಣ ಪ್ರದೇಶದ ಎಲ್ಲ ವರ್ಗದ ಮಕ್ಕಳೂ ಸಂಸ್ಕೃತ ಅಭ್ಯಸಿಸಬೇಕೆಂದು ಸಂಕಲ್ಪಿಸಿ ಕ್ಷೇತ್ರದಲ್ಲಿ ಕಾಲಭೈರವೇಶ್ವರ ಸಂಸ್ಕೃತ ವೇದ-ಆಗಮ ಮಹಾವಿದ್ಯಾಲಯವನ್ನು, ಶಾಖಾ ಮಠಗಳಿರುವ ಕಡೆಯಲ್ಲೆಲ್ಲಾ ಸಂಸ್ಕೃತ ಪಾಠಶಾಲೆಗಳನ್ನೂ ತೆರೆದರು. ಜಾತಿ, ಮತ ಭೇದವಿಲ್ಲದೆ ಅಲ್ಲಿ ಎಲ್ಲರೂ ಅಧ್ಯಯನ ಮಾಡುವಂತೆ ಅವಕಾಶ ಕಲ್ಪಿಸಿದರು. ವಿದ್ಯೆ ನೀಡುವುದರಲ್ಲಿ ಯಾವತ್ತೂ ಜಾತಿ, ವರ್ಗ, ವರ್ಣಗಳ ಭೇದ ಭಾವ ಈ ಮಠಕ್ಕೆ ಅಂಟದಂತೆ ನೋಡಿಕೊಂಡರು. ಬಡ ಜನರ ಆರೋಗ್ಯ ರಕ್ಷಣೆಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಅಂದರೆ, ಮಂಡ್ಯ ಜಿಲ್ಲೆಯ ಬಿಜಿ ನಗರ, ಮೈಸೂರು, ರಾಮನಗರ, ಮಂಡ್ಯ, ಬೆಂಗಳೂರಿನಲ್ಲಿ ಅತ್ಯಾಧುನಿಕ ಸೇವಾ ಸೌಲಭ್ಯಗಳಿರುವ ಆಸ್ಪತ್ರೆಗಳನ್ನು ತೆರೆದು ಜನರ ಆರೋಗ್ಯ ರಕ್ಷಣೆಗೆ ದೊಡ್ಡ ಕೊಡುಗೆ ನೀಡಿದರು. ಭಾರತೀಯ ವೈದ್ಯಪದ್ಧತಿ ಪುನರುಜ್ಜೀವನಗೊಳಿಸಲು ಬೆಂಗಳೂರಿನ ವಿಜಯನಗರದಲ್ಲಿ 1996ರಲ್ಲಿಯೇ ಹತ್ತು ಕೋಟಿ ರೂ. ವೆಚ್ಚದಲ್ಲಿ ಶ್ರೀ ಕಾಲಭೈರವೇಶ್ವರಸ್ವಾಮಿ ಆಯುರ್ವೆದ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ ತೆರೆದರು. ನಾಡಿನ ವಿವಿಧೆಡೆ 475ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ತೆರೆದು ಅಕ್ಷರ ವಂಚಿತ ಮಕ್ಕಳ ಕಣ್ಗಳಲ್ಲಿ ಜ್ಞಾನದ ಬೆಳಕನ್ನು ಬೆಳಗಿಸಿದರು. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡು, ಮಹಾರಾಷ್ಟ್ರ, ದೆಹಲಿ ಮುಂತಾದೆಡೆಯೂ ಶಿಕ್ಷಣ ಸಂಸ್ಥೆಗಳನ್ನೂ, ಕಾಶಿ, ರಾಮೇಶ್ವರ, ಉಜ್ಜಯಿನಿ, ಚಿತ್ರಕೂಟ, ಅಮೆರಿಕ ಮುಂತಾದೆಡೆ ಶಾಖಾಮಠಗಳನ್ನೂ ತೆರೆದರು. ಕೇವಲ ನಾಲ್ಕು ದಶಕಗಳಲ್ಲಿ ಇಡೀ ಯುಗಧರ್ಮವನ್ನೇ ಪರಿವರ್ತಿಸುವಂಥ ಅದ್ಭುತ ಪವಾಡ ಸದೃಶ ಸೇವಾಕಾರ್ಯಗಳನ್ನು ಸಾಧಿಸಿದ ಶ್ರೀಗಳು 2013ರ ಜ. 13ರಂದು ಉತ್ತರಾಯಣ ಪುಣ್ಯಕಾಲದಲ್ಲಿ ಶ್ರೀಕಾಲಭೈರವೇಶ್ವರ ಸ್ವಾಮಿಯಲ್ಲಿ ಲೀನರಾದರು.