ಅಂಕಣ

ಕೋಪ ಯಾರಿಗೂ ತರವಲ್ಲ: ಮನೋಲ್ಲಾಸ

| ಡಾ.ವಿ.ಎಚ್.ಮೂಲಿಮನಿ 
ಅನಿಯಂತ್ರಿತ ಕೋಪ ಅನೇಕ ಆಘಾತಗಳಿಗೆ ಕಾರಣವಾಗುತ್ತದೆ. ಇದು ಕೋಪಗ್ರಸ್ತನ ವೈಯಕ್ತಿಕ ಆರೋಗ್ಯವನ್ನು ಕೆಡಿಸುವುದಷ್ಟೇ ಅಲ್ಲದೆ ಸಾಂಸಾರಿಕ- ಸಾಮಾಜಿಕ ಆರೋಗ್ಯವನ್ನು ಕೆಡಿಸುತ್ತದೆ.

ಮಧ್ಯಮ ವರ್ಗದ ಕುಟುಂಬ. ತಾಯಿ ಇಲ್ಲದ ಮಗನನ್ನು ಪ್ರೀತಿಯಿಂದ ಸಲಹುವ ತಂದೆ. ಮಗ ಕಾಲೇಜು ಮೆಟ್ಟಲು ಹತ್ತಿದಾಗ ಅವನದೊಂದು ಬೇಡಿಕೆ, ‘ಅಪ್ಪ ನನ್ನ ಸಹಪಾಠಿಗಳೆಲ್ಲಾ ಮೋಟಾರ್ ಬೈಕ್ ತೆಗೆದುಕೊಂಡಿದ್ದಾರೆ. ನನಗೂ ಕೊಡಿಸು. ಮುಂದಿನ ತಿಂಗಳು ನನ್ನ ಹುಟ್ಟುಹಬ್ಬ. ಅಂದು ನನಗೆ ಹೊಸ ಮೋಟಾರ್​ಬೈಕ್ ಬೇಕೇ ಬೇಕು’. ಸಮಸ್ಯೆಯೆಂದರೆ ಮಗ ದುಡುಕು ಸ್ವಭಾವದ ಕೋಪಿಷ್ಠ, ತಂದೆ ಆರ್ಥಿಕವಾಗಿ ಅಷ್ಟೇನೂ ಸ್ಥಿತಿವಂತನಲ್ಲ. ಹುಟ್ಟುಹಬ್ಬದ ದಿನ ಬಂದೇಬಿಟ್ಟಿತು. ರಾತ್ರಿ ಮನೆಗೆ ಬಂದವನೇ ಏರುಧ್ವನಿಯಲ್ಲಿ ಕೇಳಿದ, ‘ಅಪ್ಪ! ಎಲ್ಲಿ ಮೋಟಾರ್​ಬೈಕ್?’. ಆಗ ತಂದೆ ನಗುನಗುತ್ತಾ ಅವನ ಕೈಗೆ ಭಗವದ್ಗೀತೆಯ ಪುಸ್ತಕವನ್ನು ಕೊಟ್ಟ. ಮಗನ ಕೋಪ ನೆತ್ತಿಗೇರಿತು. ಪುಸ್ತಕವನ್ನು ಮೇಜಿನ ಮೇಲೆ ಬಿಸಾಡಿ, ಮನೆ ಬಿಟ್ಟು ಹೋಗುತ್ತೇನೆ. ಎಂದು ಹೇಳಿ, ತಿರುಗಿಯೂ ನೋಡದೇ ಹೊರಟೇಹೋದ.

ಮಗನಿಗೆ ಕಾದು ಕಾದು ಬಸವಳಿದು ತಂದೆ ವ್ಯಾಕುಲನಾದ, ವ್ಯಾದಿಗ್ರಸ್ಥನಾದ, ಕಡೆಗೆ ಅಸುನೀಗಿದ. ಯಾರೋ ಅಂತ್ಯ ಸಂಸ್ಕಾರ ಮಾಡಿ ಮನೆಗೆ ಬೀಗ ಹಾಕಿದರು. ಕೆಲವು ದಿನಗಳ ನಂತರ ಹೇಗೋ ಆ ಯುವಕನಿಗೆ ತನ್ನ ತಂದೆಯ ಸಾವಿನ ವಾರ್ತೆ ತಿಳಿಯಿತು. ದುಃಖತಪ್ತನಾಗಿ ಮನೆಗೆ ಮರಳಿದ. ಬೀಗ ತೆಗೆದು ಒಳಹೊಕ್ಕ. ತಾನು ಬಿಸಾಡಿದ ಭಗವದ್ಗೀತೆಯ ಪುಸ್ತಕ ಹಾಗೆಯೇ ಬಿದ್ದಿತ್ತು. ಪುಸ್ತಕದೆಡೆಗೆ ಭಾರವಾದ ಹೆಜ್ಜೆ ಹಾಕಿದ. ಪುಸ್ತಕ ಎಡಬದಿಯ ಹಾಳೆಯಲ್ಲಿ

ಕ್ರೋಧಾದ್ಬವತಿ ಸಂಮೋಹ ಸಂಮೋಹಾತ್ ಸ್ಮತಿವಿಭ್ರಮ|

ಸ್ಮತಿ ಭಂಶಾದ್ಬುದ್ದಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ||

(ಕೋಪದಿಂದ ಅವಿವೇಕವು ಆವೇಶವಾಗುತ್ತದೆ. ಅವಿವೇಕದಿಂದ ಮತಿಭ್ರಮೆಯುಂಟಾಗುತ್ತದೆ. ಅದರಿಂದ ಬುದ್ಧಿ ನಾಶವಾಗುತ್ತದೆ. ಬುದ್ಧಿ ನಾಶವಾದರೆ ಸರ್ವನಾಶವಾದಂತೆಯೇ.) ಎಂದು ಬರೆದಿತ್ತು.

ಬಲಬದಿಯಲ್ಲಿ ಚೀಟಿ ಬಿದ್ದಿತ್ತು. ಕೈಗೆತ್ತಿಕೊಂಡು ನೋಡಿದಾಗ ಒಂದು ಕ್ಷಣ ಉಸಿರೇ ನಿಂತುಹೋಯಿತು. ಅದು ಮೋಟಾರ್ ಸೈಕಲ್ ಕೊಂಡದ್ದರ ರಶೀದಿಯಾಗಿತ್ತು. ಇವನು ಮನೆ ಬಿಡುವ ಮೊದಲೇ ಖರೀದಿಸಲಾಗಿತ್ತು. ಹೊಸ ಮೋಟಾರ್ ಬೈಕ್ ಮನೆಯ ಗ್ಯಾರೇಜಿನಲ್ಲಿ ನಿಂತಿತ್ತು. ಕೋಪಕ್ಕೆ ಆ ಯುವಕ ಬಹುದೊಡ್ಡ ಬೆಲೆ ತೆತ್ತಿದ್ದ. ಕೋಪ ಅನ್ನೋದು ನಮ್ಮೊಳಗಿನ ಎಲ್ಲ ಒಳ್ಳೆಯ ಗುಣಗಳನ್ನು ಸುಟ್ಟು ಹೊಸಕಿ ಹಾಕುವ ಬೆಂಕಿ. ಸಿಟ್ಟಿನ ಕೈಗೆ ಬುದ್ಧಿ ಕೊಡದೆ, ಸಂದರ್ಭ, ಪರಿಸ್ಥಿತಿಗಳನ್ನು ತಾಳ್ಮೆಯಿಂದ ನಿರ್ವಹಿಸುವುದರಲ್ಲೇ ನಮ್ಮ ಜಾಣತನ ಅಡಗಿರುತ್ತದೆ. ತಾಳಿದವನು ಬಾಳಿಯಾನು, ದುಡುಕು ಬಹು ಕೆಡಕು ಎಂಬೆಲ್ಲ ಅನುಭವದ ನುಡಿಗಳಿವೆ. ತಾಳ್ಮೆ ಜೀವನದ ವಿಧಾನ ಆಗಬೆಂಕೆಂಬುದನ್ನೇ ಗೌತಮ ಬುದ್ಧನ ಈ ಹೇಳಿಕೆಯನ್ನು ಗಮನಿಸಿ : ನೀವು ಕೋಪಕ್ಕೆ ಒಳಗಾಗುವುದೆಂದರೆ ಇನ್ನೊಬ್ಬರ ಮೇಲೆ ಎಸೆಯುವ ಉದ್ದೇಶದಿಂದ ಕೆಂಡವನ್ನು ಕೈಯಲ್ಲಿ ಹಿಡಿದಂತೆ. ಸುಡುವಿಕೆ ಉಂಟಾಗುವುದು ನಿಮಗೇ!

(ಲೇಖಕರು ನಿವೃತ್ತ ಪ್ರಾಧ್ಯಾಪಕರು, ಹವ್ಯಾಸಿ ಬರಹಗಾರರು)