ಶ್ಲೋಕಾರ್ಧೆನ ಪ್ರವಕ್ಷ್ಯಾಮಿ ಯದುಕ್ತಂ ಗ್ರಂಥ ಕೋಟಿಭಿಃ |
ಬ್ರಹ್ಮ ಸತ್ಯಂ ಜಗನ್ಮಿಥ್ಯ ಜೀವೋ ಬ್ರಹ್ಮೈವ ನಾಪರಃ ||
‘ಕೋಟ್ಯಾನುಕೋಟಿ ಗ್ರಂಥಗಳ ಸಾರವನ್ನು ಅರ್ಧ ಶ್ಲೋಕದಲ್ಲಿ ಹೇಳುತ್ತೇನೆ. ಬ್ರಹ್ಮ ಅಥವಾ ದಿವ್ಯಪ್ರಜ್ಞೆಯು ಮಾತ್ರ ಸತ್ಯ ಹಾಗೂ ನಮಗೆ ಇಂದ್ರಿಯಗಳಿಗೆ ಗೋಚರವಾಗುವ ಜಗತ್ತು ಮಿಥ್ಯೆ. ಜೀವಾತ್ಮನೇ ಬ್ರಹ್ಮ, ಬೇರೊಂದಲ್ಲ!’
ಇದುವೇ ಉಪನಿಷತ್ತುಗಳು ಘೊಷಿಸುವ ಸತ್ಯವಾಗಿದೆ. ಆದರೆ, ಇಂದ್ರಿಯಗಳು ಮತ್ತು ಮನಸ್ಸಿಗೆ ಗೋಚರವಾಗುವ ಜಗತ್ತನ್ನು ಮಾತ್ರವೇ ಸತ್ಯವೆಂದು ಪರಿಗಣಿಸುವ ವಿಚಾರವಾದಿಗಳು ಮೇಲಿನ ಸಿದ್ಧಾಂತವನ್ನು ಕಾಲ್ಪನಿಕ ಊಹಾಪೋಹವೆಂದು ಅಲ್ಲಗಳೆಯಬಹುದು. ಅಂತಹವರಿಗಾಗಿ, ನಾವು 2022ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರಾದ ಮೂವರು ವಿಜ್ಞಾನಿಗಳ ಸಂಶೋಧನೆಯನ್ನು ಪರಿಶೀಲಿಸೋಣ. ಈ ವಿಜ್ಞಾನಿಗಳು - ಅಮೆರಿಕಾದ ಜಾನ್ ಕ್ಲೌಸರ್, ಫ್ರಾನ್ಸಿನ ಅಲೈನ್ ಆಸ್ಪೆಕ್ಟ್ ಮತ್ತು ಆಸ್ಟ್ರಿಯಾದ ಆಂಟನ್ ಝೈಲಿಂಗರ್.
ಈ ಕ್ವಾಂಟಂ ಭೌತಶಾಸ್ತ್ರದ ವಿಷಯದಲ್ಲಿ ವಾದ-ವಿವಾದಗಳು ಒಂದು ಶತಮಾನಕ್ಕಿಂತಲೂ ಹೆಚ್ಚು ಕಾಲದಿಂದ ಮುಂದುವರಿದಿವೆ. ಇಂದ್ರಿಯಗಳ ಮೂಲಕ ನಾವು ಗ್ರಹಿಸುವ ವಾಸ್ತವವು ಸತ್ಯವಲ್ಲ; ಏಕೆಂದರೆ ಅದು ಆ ವಾಸ್ತವವನ್ನು ಗ್ರಹಿಸುವ ವ್ಯಕ್ತಿಯ ಮೇಲೆ ಅವಲಂಬಿತವಾಗಿದೆ. ಇದರರ್ಥ, ಇಂದ್ರಿಯಗಳ ಮೂಲಕ ನಮಗೆ ಗೋಚರವಾಗುವ ಜಗತ್ತು ಸತ್ಯವಾಗಿರಲು ಸಾಧ್ಯವಿಲ್ಲ. ಈ ವಿಷಯದಲ್ಲಿ ಸುಪ್ರಸಿದ್ಧ ಸಮಕಾಲೀನ ವಿಜ್ಞಾನಿಗಳಾದ ಐನ್ಸ್ಟೆ್ಟೖನ್ ಮತ್ತು ನೀಲ್ ಬೋರ್ ನಡುವೆ ಭಿನ್ನಾಭಿಪ್ರಾಯವಿತ್ತು. ‘ಚಂದ್ರನನ್ನು ನೀನು ನೋಡದೇ ಇರುವ ಸಮಯದಲ್ಲಿ ಚಂದ್ರನು ಇಲ್ಲವೆಂದು ನೀನು ನಿಜವಾಗಿ ಭಾವಿಸುತ್ತೀಯಾ?’ ಎಂಬ ಪ್ರಶ್ನೆಗೆ ಉತ್ತರವಾಗಿ, ಐನ್ಸ್ಟೆ್ಟೖನ್ ಪ್ರಕಾರ, ‘ನಾವು ನೋಡದೇ ಇರುವಾಗಲೂ ಚಂದ್ರನು ಇದ್ದೇ ಇರುತ್ತಾನೆ.’ ಆದರೆ, ನೀಲ್ ಬೋರ್ ಪ್ರಕಾರ, ‘ನಾವು ನೋಡದೇ ಇರುವಾಗ ಚಂದ್ರನು ಖಂಡಿತವಾಗಿಯೂ ಇದ್ದಾನೆಂದು ಹೇಳಲು ಸಾಧ್ಯವಿಲ್ಲ.’ ಎಷ್ಟೋ ವರ್ಷಗಳ ನಂತರ ಕ್ವಾಂಟಂ ಸಿದ್ಧಾಂತದ ಬಗ್ಗೆ ನಡೆದ ಸಂಶೋಧನೆಗಳು ನೀಲ್ ಬೋರ್ ಅಭಿಪ್ರಾಯವೇ ಸರಿಯೆಂದು ಸಾಬೀತುಪಡಿಸಿವೆ.
ಈ ವಿಷಯದಲ್ಲಿ ನಡೆದ ವಾದಗಳು ಮತ್ತು ಪ್ರಯೋಗಗಳು ಎರಡು ವಿಷಯಗಳನ್ನು ಸಾಬೀತುಪಡಿಸಿವೆ. ಒಂದನೆಯದು, ಇಡೀ ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳು ಯಾವುದೋ ರೀತಿಯಲ್ಲಿ ಪರಸ್ಪರ ಒಂದಕ್ಕೊಂದು ಜೋಡಿಸಲ್ಪಟ್ಟಿವೆ. ಎರಡನೆಯದು, ಇಂದ್ರಿಯಗಳ ಮೂಲಕ ನಾವು ಗ್ರಹಿಸುವ ಜಗತ್ತು ಸತ್ಯವಲ್ಲ; ಏಕೆಂದರೆ ಅದು ಗ್ರಹಿಸುವ ವ್ಯಕ್ತಿಯ ಮೇಲೆ ಅವಲಂಬಿತವಾಗಿದ್ದು, ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ರೀತಿಯಲ್ಲಿ ಕಾಣಬಹುದು. 2022ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತರಾದ ಮೇಲಿನ ಮೂರು ವಿಜ್ಞಾನಿಗಳು ನಡೆಸಿದ ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಅಲ್ಲದೆ, ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳು ಯಾವುದೋ ನಿಗೂಢ ರೀತಿಯಲ್ಲಿ ಪರಸ್ಪರ ಸಂಪರ್ಕ ಹೊಂದಿವೆಯೆಂಬುದೂ ಸಾಬೀತಾಗಿದೆ.
ಇದನ್ನು ಬಹಳ ಹಿಂದೆಯೇ ಆದಿಶಂಕರರು ಸಾರಿದ್ದರು. ನಮಗೆ ಅನೇಕವಾಗಿ ಕಾಣುವ ಜಗತ್ತಿನಲ್ಲಿರುವ ವಸ್ತುವು ಒಂದೇ. ಆ ಒಂದು ಸತ್ಯವನ್ನೇ ನಮ್ಮ ಋಷಿ-ಮುನಿಗಳು, ಏಕಾತ್ಮ ಸರ್ವಭೂತಾಂತರಾತ್ಮ ಎಲ್ಲಾ ಜೀವಿಗಳಲ್ಲಿಯೂ ಇರುವುದು ಒಂದೇ ಆತ್ಮ ಎಂದು ಘೊಷಿಸಿದ್ದರು. ಅನೇಕತ್ವದಲ್ಲಿ ಏಕತ್ವವನ್ನು ಕಾಣುವುದೇ ನಿಜವಾದ ಜ್ಞಾನ. ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಕೂಡ ಇದನ್ನೇ ಉದ್ಘೋಷಿಸಿದ್ದಾನೆ ‘ಕ್ಷೇತ್ರಜ್ಞಂ ಚಾಪಿ ಮಾಂ ವಿದ್ಧಿ ಸರ್ವ ಕ್ಷೇತ್ರೇಷು ಭಾರತ’. ಎಲ್ಲದರಲ್ಲೂ ಇರುವವನು ಹಾಗೂ ಎಲ್ಲವನ್ನೂ ಅರಿತವನು ನಾನು ಎಂದು ತಿಳಿಯಿರಿ. ಈ ‘ನಾನು’ ಎಂಬುದೇ ಪ್ರಜ್ಞೆ. ಇದನ್ನೇ ಉಪನಿಷತ್ತುಗಳು ‘ಪ್ರಜ್ಞಾನಂ ಬ್ರಹ್ಮ’ ಎಂದು ಕರೆಯುತ್ತವೆ. ರೂಪ-ನಾಮರಹಿತವಾದ ಈ ಪ್ರಜ್ಞೆಯೇ ವಿಶ್ವದ ಎಲ್ಲಾ ಅರಿವಿನ ಮತ್ತು ಏಕತ್ವದ ಮೂಲ. ಇದುವೇ ನಮ್ಮ ಎಲ್ಲಾ ತಿಳಿವಿನ ಮೂಲ ಕೂಡ. ಕಠೋಪನಿಷತ್ತು ಹೇಳುವಂತೆ, ತಮೇವ ಭಾಂತಮನುಭಾತಿ ಸರ್ವ ತಸ್ಯ ಭಾಸಾ ಸರ್ವಮಿದಂ ವಿಭಾತಿ- ‘ಅದು ಮಾತ್ರ ಎಲ್ಲವನ್ನೂ ಬೆಳಗಿಸುತ್ತದೆ, ಮತ್ತು ಅದರ ಬೆಳಕಿನಲ್ಲಿಯೇ ಉಳಿದೆಲ್ಲವೂ ಬೆಳಗುತ್ತದೆ.’
ದೇಹ-ಮನಸ್ಸುಗಳ ಸಂಕೀರ್ಣದಿಂದ ಸ್ವತಂತ್ರವಾಗಿರುವ ಈ ಪ್ರಜ್ಞೆಯ ಮೂಲಕವೇ ನಾವು ನಮ್ಮ ದೇಹ, ಮನಸ್ಸು ಮತ್ತು ಬುದ್ಧಿಗಳನ್ನು ಅರಿಯುತ್ತೇವೆ. ನಿರ್ಜೀವ ವಸ್ತುಗಳಲ್ಲಿರುವುದು ಸಹ ಇದುವೇ.
ಉದಾಹರಣೆಗೆ, ಕನಸಿನಲ್ಲಿ ಮುಳುಗಿರುವ ವ್ಯಕ್ತಿ ಹಲವು ವಸ್ತುಗಳನ್ನೂ, ಜನರನ್ನೂ ಕಾಣುತ್ತಾನೆ. ಅವನಿಗೆ ಕನಸೂ ಹಾಗೂ ಅದರಲ್ಲಿ ಕಾಣುವುದೆಲ್ಲವೂ ಸತ್ಯವೆಂದೇ ತೋರುತ್ತದೆ. ನಗರ ಬೀದಿಗಳು, ಅಲ್ಲಿನ ಜನರು, ಅವರ ಹಾವಭಾವಗಳು, ದೃಶ್ಯ, ಶಬ್ದ, ಗಂಧ, ಸ್ಪರ್ಶ ಹಾಗೂ ರುಚಿಗಳೆಲ್ಲವೂ ಅವನ ಪಾಲಿಗೆ ಸತ್ಯವೇ. ಚುಟುಕಾಗಿ ಹೇಳಬೇಕೆಂದರೆ, ಅವನಿಗೆ ಅದನ್ನು ಅಸತ್ಯವೆಂದು ನಿರಾಕರಿಸುವುದು ಅಸಾಧ್ಯವೇ ಸರಿ. ಅವನು ಕನಸಿನಿಂದ ಎಚ್ಚೆತ್ತಾಗ ಮಾತ್ರವೇ, ಅದು ಅಸತ್ಯವೆಂದು ತಿಳಿಯುತ್ತದೆ. ಆದ್ದರಿಂದ, ಕನಸಿನ ಸತ್ಯಾಸತ್ಯತೆಗಳು ಆ ವ್ಯಕ್ತಿಯನ್ನು ಅವಲಂಬಿಸಿವೆಯೇ ಹೊರತು, ಕನಸಿಗೆ ಸ್ವಂತ ಅಸ್ತಿತ್ವವಿರುವುದಿಲ್ಲ. ಈ ವಿದ್ಯಮಾನವು ಕ್ವಾಂಟಮ್ ಭೌತಶಾಸ್ತ›ದ (Quantum Physics) ಸಿದ್ಧಾಂತದಂತೆಯೇ ತೋರುವುದಲ್ಲದೆ?
ಇದೇ ರೀತಿ ಆದಿ ಶಂಕರಾಚಾರ್ಯರು ಎಲ್ಲಾ ಅರಿವಿನ ಮೂಲವಾಗಿರುವ ಪ್ರಜ್ಞೆಯನ್ನು ಆಧರಿಸಿ, ಸರ್ವ ಅಸ್ತಿತ್ವದ ಏಕತೆಯನ್ನು ಸಾರುವ ಅದ್ವೈತ ಸಿದ್ಧಾಂತವನ್ನು ಬೋಧಿಸಿದರು. ಒಂದು ಕನಸಿನಲ್ಲಿನ ಜನರು, ಸ್ಥಳಗಳು ಮತ್ತು ಅನುಭವಗಳೆಲ್ಲವೂ ಆ ವ್ಯಕ್ತಿಯ ಕನಸು ಕಾಣುವ ಶಕ್ತಿಯನ್ನೇ ಅವಲಂಬಿಸಿರುತ್ತವೆ. ಕನಸಿನಲ್ಲಿಯೂ ಅವನು ಕೇವಲ ಸಾಕ್ಷಿಯಾಗಿರುತ್ತಾನೆಯೇ ಹೊರತು, ಅಲ್ಲಿ ನಡೆಯುವ ವಿದ್ಯಮಾನಗಳು ಅವನ ವಾಸ್ತವಿಕ ಜೀವನದಲ್ಲಿ ಸತ್ಯವಾಗುವುದಿಲ್ಲವಷ್ಟೆ. ಅವನ ಪ್ರಜ್ಞೆಯೇ ಸ್ವಪ್ನದಲ್ಲಿನ ಎಲ್ಲಾ ವಸ್ತುಗಳಲ್ಲಿ ಅಡಕವಾಗಿರುತ್ತದೆಯೇ ಹೊರತು, ಆ ವಸ್ತುಗಳಿಗೆ ಅವನಿಗಿಂತ ಹೊರತಾದ ಸ್ವಂತ ಅಸ್ತಿತ್ವವಿರುವುದಿಲ್ಲ. ಹೀಗೆ, ಅದ್ವೈತ ಸಿದ್ಧಾಂತದ ಪ್ರತಿಬಿಂಬವನ್ನೇ ನಾವು ಕ್ವಾಂಟಮ್ ಭೌತಶಾಸ್ತ›ದಲ್ಲಿ ಕಾಣುತ್ತೇವೆ. ವ್ಯಕ್ತಿಯು ಅವಲೋಕಿಸುವುದೆಲ್ಲವೂ ಅವನ ಮೇಲೆಯೇ ಅವಲಂಬಿತವಾಗಿರುತ್ತದೆ (dependency of the observed on the observer) ಹಾಗೂ ಜಗತ್ತಿನಲ್ಲಿರುವ ಸರ್ವ ವಸ್ತುಗಳೂ ಒಂದಕ್ಕೊಂದು ಪರಸ್ಪರ ಜೋಡಿಸಲ್ಪಟ್ಟಿವೆಯೆಂಬ (interconnectedness of all) ಸಿದ್ಧಾಂತಗಳನ್ನೇ ಅಲ್ಲಿ ಕಾಣುತ್ತೇವೆ.
ಆದಿ ಶಂಕರಾಚಾರ್ಯರು, ವಿಶ್ವಂ ತ್ಯಕ್ತಾ್ವ ಸ್ವಪ್ನ ವಿಚಾರಂ - ‘ವಿಶ್ವವು ಒಂದು ಸ್ವಪ್ನವೆಂಬುದನ್ನರಿತು ಅದರ ವ್ಯಾಮೋಹವನ್ನು ತ್ಯಜಿಸು’ ಎಂದು ಹೇಳುತ್ತಾರೆ. ವಿಶ್ವವೆಂಬುದೊಂದು ಮಾಯೆ. ಅದು ನಿಜವಾಗಿ ಇಲ್ಲ, ಕೇವಲ ಮಿಥ್ಯೆ. ‘ಯಾ ಮಾ ಸಾ ಮಾಯಾ’- ಮಾಯೆ ಎಂದರೆ ಇಲ್ಲದಿರುವುದೇ. ಸ್ವಪ್ನದಲ್ಲಿ ಲಾಟರಿ ಗೆದ್ದರೆ ನಾವೇನೂ ಶ್ರೀಮಂತರಾಗುವುದಿಲ್ಲ. ಹಾಗೆಯೇ ಸ್ವಪ್ನದಲ್ಲಿ ನಮ್ಮ ಸಂಪತ್ತಿನ ಅಪಹರಣವಾದರೆ ನಾವೇನೂ ಬಡವರಾಗುವುದಿಲ್ಲವಷ್ಟೇ! ಆದಾಗ್ಯೂ, ನಮ್ಮ ದೈನಂದಿನ ಅನುಭವದಲ್ಲಿ ಇಷ್ಟು ನಂಬಲರ್ಹವಾದಂತಹ ಈ ಆಕರ್ಷಕ ಜಗತ್ತನ್ನು ಮಿಥ್ಯೆಯೆಂದು ತಿರಸ್ಕರಿಸಲು ಕಷ್ಟವಾಗುವುದರಿಂದ, ಅದ್ವೈತ ವೇದಾಂತವನ್ನು ಸತ್ಯವೆಂದು ಒಪ್ಪಲು ನಿರಾಕರಿಸುತ್ತೇವೆ. ಆದರೆ, ಆಳವಾದ ಆತ್ಮಾವಲೋಕನ, ಮನನ, ಧ್ಯಾನ, ಮತ್ತು ಸಾಕ್ಷಾತ್ಕಾರ ಪಡೆದ ಜ್ಞಾನಿಯ ಮಾರ್ಗದರ್ಶನಗಳಿಂದ ನಾವು ಸತ್ಯವನ್ನು ಅನುಭವದ ಮೂಲಕ ಅರಿತು, ಮಿಥ್ಯವಾದ ಪ್ರಾಪಂಚಿಕ ಬಂಧನದಿಂದ ಮುಕ್ತಿಯನ್ನು ಪಡೆಯಬಹುದು.
ನಮ್ಮ ಪುರಾಣಗಳಲ್ಲಿ ಒಂದು ಘಟನೆಯಿದೆ. ಒಮ್ಮೆ ಜನಕ ಮಹಾರಾಜನಿಗೆ ಕೆಟ್ಟ ಕನಸು ಬೀಳುತ್ತದೆ. ಅದರಲ್ಲಿ ಅವನು ತನ್ನ ಸಾಮ್ರಾಜ್ಯ-ಸಂಪತ್ತುಗಳನ್ನು ಕಳೆದುಕೊಂಡು ಭಿಕಾರಿಯಾಗುತ್ತಾನೆ. ಆಗ ಅವನು ಗಲಿಬಿಲಿಗೊಂಡು ಕನಸಿನಿಂದ ಎಚ್ಚರಗೊಂಡಾಗ, ತಾನು ಅರಮನೆಯಲ್ಲಿಯೇ ಸುಪ್ಪತ್ತಿಗೆಯಲ್ಲಿ ಮಲಗಿರುವುದು ಕಂಡುಬರುತ್ತದೆ. ದಿಗ್ಭ›ಮೆಗೊಳಗಾಗಿ ಅವನು, ಕಂಡವರನ್ನೆಲ್ಲಾ, ಇದು ಕನಸೋ, ಅಥವಾ ಅದು ಕನಸೋ? ಎಂದು ಪ್ರಶ್ನಿಸಲಾರಂಭಿಸುತ್ತಾನೆ! ಅವನಿಗೆ ಸರಿಯಾದ ಉತ್ತರವನ್ನು ಕೊಟ್ಟವನು, ಬಾಲಜ್ಞಾನಿಯಾದ ಅಷ್ಟಾವಕ್ರ -‘ಇದೂ ಸತ್ಯವಲ್ಲ, ಅದೂ ಸತ್ಯವಲ್ಲ! ಇವೆರಡಕ್ಕೂ ಸಾಕ್ಷಿಯಾಗಿರುವ ನೀನೇ ಸತ್ಯ!’ ಎಂದು ಬೋಧಿಸುತ್ತಾನೆ.
ಸರ್ವ ಸಾಕ್ಷಿಯಾದ ಪ್ರಜ್ಞೆಯೇ ಎಲ್ಲವನ್ನೂ ಬೆಳಗಿಸುತ್ತದೆಯೆಂಬ ಸತ್ಯವನ್ನು ಯಾರು ಅರಿಯುವನೋ, ಅವನು ಮಿಥ್ಯವಾದ ಈ ಜಗತ್ತಿನಲ್ಲಿ ಮೋಹದ ಬಂಧನಕ್ಕೆ ಒಳಗಾಗದೇ ಲೋಕ ಕಲ್ಯಾಣಕ್ಕಾಗಿ ಸದಾ ಕ್ರಿಯಾಶೀಲನಾಗಿದ್ದು, ಅಂತರಂಗ-ಬಹಿರಂಗಗಳೆರಡರಲ್ಲಿಯೂ ಸದಾ ದಿವ್ಯಾನಂದವನ್ನು ಸವಿಯುತ್ತಾನೆ. ಅಂತಹ ಜ್ಞಾನಿ ಸತ್ಯವನ್ನು ಅರಿತವರಲ್ಲಿ ಶ್ರೇಷ್ಠನು, ಎಂದು ಮುಂಡಕೋಪನಿಷತ್ತು ಹೇಳುತ್ತದೆ.
ಋಷಿ-ಮುನಿಗಳು ಬಹು ಹಿಂದೆ ಕಂಡುಕೊಂಡ ಸತ್ಯದ ಸನಿಹಕ್ಕೆ ಇಂದು ವಿಜ್ಞಾನವು ಬರುತ್ತಿದೆ. ಆದರೆ, ಸತ್ಯಶೋಧನೆಗಾಗಿ ಕೇವಲ ಬಾಹ್ಯವಾದ ಇಂದ್ರಿಯಗಳು ಹಾಗೂ ತರ್ಕಗಳನ್ನೇ ಅವಲಂಬಿಸಿರುವ ವಿಜ್ಞಾನವು ಸತ್ಯಕ್ಕೆ ಸಮೀಪ ಬರಬಹುದಷ್ಟೇ ಹೊರತು, ಅದನ್ನು ತಲುಪಲು ಸಾಧ್ಯವಿಲ್ಲ. ಏಕೆಂದರೆ, ಸತ್ಯವನ್ನು ಅಂತರಂಗದಲ್ಲಿ ಮಾತ್ರ ಅನುಭವದ ಮೂಲಕ ಕಂಡುಕೊಳ್ಳಬಹುದು. ಇಂದ್ರಿಯ ಮತ್ತು ತರ್ಕಗಳ ಜೊತೆಗೆ, ಅಧ್ಯಾತ್ಮದ ಅಂತಸ್ಪುರಣವನ್ನು ವಿಜ್ಞಾನವು ಒಪ್ಪಿಕೊಂಡಾಗ ಮಾತ್ರ ಅದು ಸತ್ಯವನ್ನು ಮುಟ್ಟಬಹುದು. ಆಗ ಅಧ್ಯಾತ್ಮ ಹಾಗೂ ವಿಜ್ಞಾನಗಳೆರಡೂ ಒಂದೇ ಆಗುತ್ತವೆ.
ಕೇನೋಪನಿಷತ್ತಿನ ಋಷಿಯು ತನ್ನ ಶಿಷ್ಯರಿಗೆ ಸತ್ಯದ ಕುರಿತಾಗಿ ಅತ್ಯಂತ ವಿನಯಪೂರ್ವಕವಾಗಿ ಹೀಗೆ ಹೇಳುತ್ತಾನೆ:
ನ ತತ್ರ ಚಕ್ಷುರ್ಗಚ್ಛತಿ ನ ವಾಗ್ಗಚ್ಛತಿ ನೋ ಮನಃ |
ನ ವಿದ್ಮೋ ನ ವಿಜಾನೀಮೋ ಯಥೈತದನುಶಿಷ್ಯಾತ್ ||3||
ಅನ್ಯದೇವ ತದ್ವಿದಿತಾದಥೋ ಅವಿದಿತಾದಧಿ |
ಇತಿ ಶುಶ್ರುಮ ಪೂರ್ವೆಷಾಂ ಯೇ ನಸ್ತದ್ವಾ್ಯಚಚಕ್ಷಿರೇ ||4||
‘ಅಲ್ಲಿಗೆ ಕಣ್ಣಾಗಲೀ, ಮಾತಾಗಲೀ ಅಥವಾ ಮನಸ್ಸಾಗಲೀ ಹೋಗಲಾರವು. ಅಂತಹ ಸತ್ಯವನ್ನು ನಾವು (ಇಂದ್ರಿಯಗಳ ಮೂಲಕ) ಹೇಗೆ ಬೋಧಿಸಬಹುದೆಂಬುದು ನಮಗೆ ತಿಳಿಯದಾಗಿದೆ. ಪೂರ್ವಜರಾದ ಜ್ಞಾನಿಗಳು ಹೇಳಿರುವಂತೆ ಅದು ನಮಗೆ ತಿಳಿದಿರುವುದೆಲ್ಲಕ್ಕಿಂತಲೂ ಹಾಗೂ ತಿಳಿಯದೇ ಇರುವುದೆಲ್ಲಕ್ಕಿಂತಲೂ ಭಿನ್ನವಾದುದು. ಆದ್ದರಿಂದ ಬುದ್ಧಿಯ ಮೂಲಕ ಅದನ್ನು ತಿಳಿಯಲು ಸಾಧ್ಯವಿಲ್ಲ. ಅದು ನಮಗೆ ನಮ್ಮ ಅಂತರಂಗಗಳಲ್ಲಿಯೇ ಗೋಚರವಾಗಬೇಕಷ್ಟೇ.’
ಕನಸಿನಲ್ಲಿ ಗೆದ್ದ ಲಾಟರಿಯನ್ನು ನನಸಿನ ಬ್ಯಾಂಕಿನಲ್ಲಿ ನಗದಾಗಿಸಲು ಶಕ್ಯವೇ? ಲಾಟರಿಯ ಗೆಲುವು ಅಷ್ಟರಮಟ್ಟಿಗೆ ಸತ್ಯ; ಅಷ್ಟೇ ಮಟ್ಟಿಗೆ ಮಿಥ್ಯೆ! ಜಗತ್ತಿನ ಮಿಥ್ಯತೆಯನ್ನು ಅರಿತವನು ಮಾತ್ರ ಅದರ ಮೋಹಬಂಧನದಿಂದ ಮುಕ್ತಿ ಪಡೆದು, ಸರ್ವಕ್ಕೂ ಸಾಕ್ಷೀಭೂತವಾದ ಪ್ರಜ್ಞೆಯಲ್ಲಿ ನೆಲೆಸಿ ಶಾಶ್ವತ ಶಾಂತಿಯನ್ನು ಹೊಂದಬಹುದು. ಅಂತಹ ಜ್ಞಾನಿ ಮಾತ್ರ ಪರಮಪದವನ್ನು ಪಡೆಯುತ್ತಾನೆಂದು ಉಪನಿಷತ್ತುಗಳು ಸಾರುತ್ತವೆ.
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)