ಅಂಕಣ

ಮೋದಿ ನಾಯಕತ್ವದಲ್ಲಿ ಮಹಿಳಾ ಸಬಲೀಕರಣದ ಅಮೃತಕಾಲ

ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ ರಾಷ್ಟ್ರವನ್ನು ಸಶಕ್ತಗೊಳಿಸುವುದು ಎಂಬುದನ್ನು ನಾವು ನೆನಪಿಟ್ಟುಕೊಳ್ಳುವುದು ಮುಖ್ಯ. ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಸಮಾಜಗಳು ಅಭಿವೃದ್ಧಿ ಹೊಂದುತ್ತವೆ. ಈ ಮಹತ್ವದ ಘಟ್ಟದಲ್ಲಿ ನಿಂತಿರುವಾಗ, ಇದು ಸಾಧಿಸಿದ ಮೈಲಿಗಲ್ಲುಗಳನ್ನು ಸಂಭ್ರಮಿಸುವುದರ ಬಗ್ಗೆ ಮಾತ್ರವಲ್ಲದೆ ಮುಂದೆ ಇರುವ ಮಿತಿಯಿಲ್ಲದ ಸಾಧ್ಯತೆಗಳನ್ನು ಎದುರುನೋಡಬೇಕಾಗಿದೆ.

ನಾರಿ ಶಕ್ತಿ ವಂದನ ಅಧಿನಿಯಮವು (ಮಹಿಳಾ ಮೀಸಲಾತಿ ಮಸೂದೆ) ರಾಜಕೀಯ ಸಬಲೀಕರಣವನ್ನು ಸಾಧಿಸುವ ಪ್ರಮುಖ ಸಾಧನವಾಗಿದೆ. ಮಹಿಳೆಯರಿಗೆ ಸಂಬಂಧಿಸಿದ ವಿಷಯ ಬಂದಾಗ, ನಮ್ಮ ಸರ್ಕಾರವು ರಾಜಕೀಯ ಮಾಡುವುದನ್ನು ಬಿಟ್ಟುಬಿಡುತ್ತದೆ. ಇದು ಪ್ರಧಾನ ಮಂತ್ರಿಯವರಿಗೆ ಅಚಲವಾದ ಬದ್ಧತೆಯ ವಿಷಯವಾಗಿದೆ. 370ನೇ ವಿಧಿ, ತ್ರಿವಳಿ ತಲಾಖ್ ಅಥವಾ ಈಗ ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ನಾವು ದೃಢವಾದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಮಹಿಳೆಯರಿಗೆ ಅವಕಾಶಗಳನ್ನು ನೀಡಿದರೆ, ನಮ್ಮ ಮಹಿಳಾ ವಿಜ್ಞಾನಿಗಳು ಇಸ್ರೋದಲ್ಲಿ ಉತ್ತಮ ಸಾಧನೆ ತೋರಿರುವ ರೀತಿಯಲ್ಲಿಯೇ ರಾಜಕೀಯ ಕ್ಷೇತ್ರದಲ್ಲಿಯೂ ಮಿಂಚಬಹುದು.

ಕಳೆದ ಒಂಬತ್ತು ವರ್ಷಗಳಲ್ಲಿ ಗೌರವಾನ್ವಿತ ಪ್ರಧಾನಿ ಮೋದಿ ಅವರ ದೂರದೃಷ್ಟಿಯ ನಾಯಕತ್ವದಲ್ಲಿ ಭಾರತವು ‘ಮಹಿಳಾ ನೇತೃತ್ವದ ಅಭಿವೃದ್ಧಿ’ಯ ಮಾದರಿಯತ್ತ ಚಿತ್ತಹರಿಸಿದೆ. ಈ ಸಬಲೀಕರಣ ಉಪಕ್ರಮಗಳ ಫಲಿತಾಂಶಗಳು ರಾಷ್ಟ್ರದ ಸಾಮಾಜಿಕ ರಚನೆಯಲ್ಲಿ ಬದಲಾವಣೆಗೆ ನಾಂದಿ ಹಾಡಿವೆ.

ಉಜ್ವಲ ಯೋಜನೆ, ಸ್ವಚ್ಛತಾ ಅಭಿಯಾನ, ಬೇಟಿ ಬಚಾವೋ ಬೇಟಿ ಪಢಾವೋ, ಮುದ್ರಾ ಯೋಜನೆ, ಹೆರಿಗೆ ರಜೆ ಹೆಚ್ಚಳ ಮತ್ತು ಸಶಸ್ತ್ರ ಪಡೆಗಳಲ್ಲಿ ಮಹಿಳೆಯರನ್ನು ಶಾಶ್ವತವಾಗಿ ನಿಯೋಜಿಸುವಂತಹ ಉಪಕ್ರಮಗಳ ಮೂಲಕ ಮಹಿಳೆಯರ ಸಬಲೀಕರಣಕ್ಕಾಗಿ ಮೋದಿ ಸರ್ಕಾರ ಮಾಡಿದ ಪ್ರಯತ್ನಗಳು ಎಲ್ಲರಿಗೂ ಗೋಚರಿಸುವಂತಿವೆ.

ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿಯಲ್ಲಿ ಅಂದಾಜು 70 ಪ್ರತಿಶತದಷ್ಟು ಸಾಲಗಳನ್ನು ಮಹಿಳೆಯರಿಗೆ ಮಂಜೂರು ಮಾಡಲಾಗಿದೆ. ಇವು ಚಿಕ್ಕ ಘಟಕಗಳು ಮತ್ತು ಸ್ವಯಂ ಉದ್ಯೋಗಿಗಳನ್ನು ಬೆಂಬಲಿಸಲು 10 ಲಕ್ಷ ರೂಪಾಯಿವರೆಗಿನ ಸಾಲಗಳಾಗಿವೆ. ಇದೇ ರೀತಿ, ಸ್ಟಾ್ಯಂಡ್-ಅಪ್ ಇಂಡಿಯಾ ಯೋಜನೆಯಡಿಯಲ್ಲಿ 80 ಪ್ರತಿಶತದಷ್ಟು ಫಲಾನುಭವಿಗಳು ಮಹಿಳೆಯರೇ ಆಗಿದ್ದಾರೆ.

ಮಹಿಳೆಯರಿಗೆ ಗೌರವಯುತ ಜೀವನವನ್ನು ಖಾತ್ರಿಪಡಿಸುವುದು ಮೋದಿ ಸರ್ಕಾರಕ್ಕೆ ಅಚಲವಾದ ಬದ್ಧತೆಯಾಗಿದೆ. ಉಜ್ವಲ ಯೋಜನೆಯನ್ನು ವಿಸ್ತರಿಸಿ ಇನ್ನಷ್ಟು ಎಲ್​ಪಿಜಿ ಸಿಲಿಂಡರ್​ಗಳನ್ನು ಒದಗಿಸುತ್ತಿರುವ ಕೆಲಸದಲ್ಲಿ ಈ ಸಮರ್ಪಣೆಯು ಸ್ಪಷ್ಟವಾಗಿ ಗೋಚರಿಸುತ್ತದೆ. ಧೂಮಮುಕ್ತ ಅಡುಗೆಮನೆಗಳನ್ನು ಉತ್ತೇಜಿಸುವ ಮೂಲಕ ಲಕ್ಷಾಂತರ ಮಹಿಳೆಯರನ್ನು ದೀರ್ಘಕಾಲದ ಉಸಿರಾಟದ ಅಸ್ವಸ್ಥತೆಗಳಿಂದ ರಕ್ಷಿಸುವ ಯೋಜನೆ ಇದಾಗಿದೆ. ಇದಲ್ಲದೆ, ಸ್ವಚ್ಛ ಭಾರತ ಅಭಿಯಾನದ ಯಶಸ್ಸಿನೊಂದಿಗೆ, ಅಸಂಖ್ಯಾತ ಮಹಿಳೆಯರು ಈಗ ತಮ್ಮ ಮನೆಗಳಲ್ಲಿ ಶೌಚಾಲಯಗಳನ್ನು ಹೊಂದುವಂತಾಗಿದೆ. ಈ ಮೂಲಕ ಮಹಿಳೆಯರ ಸುರಕ್ಷತೆ ಮತ್ತು ಘನತೆ ಕುರಿತ ಆತಂಕಗಳು ನಿವಾರಣೆಯಾಗಿವೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಅಡಿಯಲ್ಲಿ ನಿರ್ವಿುಸಲಾದ ಮನೆಗಳ ಜಂಟಿ ಮಾಲೀಕತ್ವವನ್ನು ಕೂಡ ಮಹಿಳೆಯರು ಪಡೆದುಕೊಂಡಿದ್ದಾರೆ.

ಮೋದಿ ಸರ್ಕಾರದ ಆಡಳಿತದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಮಹಿಳೆಯರು ಗಮನಾರ್ಹ ಸಾಧನೆಗಳೊಂದಿಗೆ ಮುನ್ನಡೆದಿದ್ದಾರೆ. ಮಹಿಳಾ ಪೊಲೀಸ್ ಸಿಬ್ಬಂದಿಯ ಪ್ರಾತಿನಿಧ್ಯದಲ್ಲಿ; ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನಮ್ಮ ಮಹಿಳಾ ಕ್ರೀಡಾಪಟುಗಳು ಗಳಿಸಿದ ಪುರಸ್ಕಾರಗಳು; ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್ ಮತ್ತು ಗಣಿತ (ಎಸ್​ಟಿಇಎಂ- ಸೈನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್, ಮ್ಯಾಥ್ಸ್) ವಿಭಾಗಗಳಲ್ಲಿ ಮಹಿಳೆಯರ ಹೆಚ್ಚುತ್ತಿರುವ ದಾಖಲಾತಿಯಲ್ಲಿ ಈ ಪ್ರಗತಿಯು ಸ್ಪಷ್ಟವಾಗಿ ಗೋಚರಿಸುತ್ತದೆ.

2014ರಿಂದ ತಾಂತ್ರಿಕ ಶಿಕ್ಷಣದಲ್ಲಿ, ವಿಶೇಷವಾಗಿ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ (ಐಟಿಐ) ಮಹಿಳೆಯರ ಭಾಗವಹಿಸುವಿಕೆ ದ್ವಿಗುಣಗೊಂಡಿದೆ. ಗಮನಾರ್ಹ ಸಂಗತಿ ಎಂದರೆ, ಭಾರತದಲ್ಲಿ ಎಸ್​ಟಿಇಎಂ ವಿಭಾಗಗಳ ಪದವೀಧರರಲ್ಲಿ ಅಂದಾಜು 43 ಪ್ರತಿಶತದಷ್ಟು ಮಹಿಳೆಯರೇ ಇದ್ದಾರೆ.

ಭಾರತದ ಬಾಹ್ಯಾಕಾಶ ವಿಜ್ಞಾನಿಗಳಲ್ಲಿ ಅಂದಾಜು ಕಾಲು ಭಾಗದಷ್ಟು ಮಹಿಳೆಯರು ಇದ್ದು, ಚಂದ್ರಯಾನ, ಗಗನಯಾನ ಮತ್ತು ಮಂಗಳಯಾನ ಸೇರಿದಂತೆ ರಾಷ್ಟ್ರದ ಪ್ರಮುಖ ಬಾಹ್ಯಾಕಾಶ ಕಾರ್ಯಾಚರಣೆಗಳಲ್ಲಿ ಅವರ ಸಮರ್ಪಣೆ ಮತ್ತು ಕಠಿಣ ಪರಿಶ್ರಮವು ಮಹತ್ವದ್ದಾಗಿದೆ.

ಪ್ರಸ್ತುತ ಭಾರತದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರು ಉನ್ನತ ಶಿಕ್ಷಣ ಕೋರ್ಸ್​ಗಳಿಗೆ ಪ್ರವೇಶ ಪಡೆದುಕೊಳ್ಳುತ್ತಿದ್ದಾರೆ. ನಾಗರಿಕ ವಿಮಾನಯಾನದಲ್ಲಿ ನಾವು ಅಧಿಕ ಸಂಖ್ಯೆಯ ಮಹಿಳಾ ಪೈಲಟ್​ಗಳನ್ನು ಹೊಂದಿದ್ದೇವೆ. ಅಲ್ಲದೆ, ಭಾರತೀಯ ವಾಯುಪಡೆಯಲ್ಲಿ ಮಹಿಳಾ ಪೈಲಟ್​ಗಳು ಈಗ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಮೋದಿ ಸರ್ಕಾರವು ಸಿಎಪಿಎಫ್​ಗಳಲ್ಲಿ (ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು) ಮಹಿಳೆಯರಿಗೆ ಹುದ್ದೆಗಳನ್ನು ಮೀಸಲಿಟ್ಟಿದೆ. ಅಲ್ಲದೆ, ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್​ಡಿಎ) ಮತ್ತು ಸೈನಿಕ ಶಾಲೆಗಳಲ್ಲಿ ಹುಡುಗಿಯರ ಪ್ರವೇಶಕ್ಕೂ ಅವಕಾಶ ಕಲ್ಪಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಮಹಿಳಾ ಹೋರಾಟಗಾರರು ಈಗ ಅಮೃತ ಕಾಲದಲ್ಲಿ ಅಮೃತ ರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ಹಕ್ಕನ್ನು ಮೊದಲಿನಿಂದಲೂ ನೀಡಲಾಗಿದೆ. 14 ಲಕ್ಷ, ಅಂದರೆ ಭಾರತದ ಗ್ರಾಮೀಣ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳಲ್ಲಿ ಶೇಕಡಾ 46ರಷ್ಟು ಮಹಿಳೆಯರೇ ಇದ್ದಾರೆ. ಭಾರತೀಯ ಮಹಿಳೆಯರು ಮತ್ತು ಅವರ ಸಬಲೀಕರಣವು ಭಾರತದ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದೆ.

ನಮ್ಮ ಸರ್ಕಾರವು ಇತ್ತೀಚೆಗೆ ನೂತನ ಸಂಸತ್ ಕಟ್ಟಡವನ್ನು ಉದ್ಘಾಟಿಸಲು ವಿಶೇಷ ಅಧಿವೇಶನ ಕರೆದಿತ್ತು. ಇದು ನವ ಭಾರತದ ಸಂಕೇತವಾಗಿದೆ. ಈ ಸಂಸತ್ತು ತನ್ನ ಇತಿಹಾಸದಲ್ಲಿಯೇ ಅತ್ಯಂತ ಪ್ರಮುಖವಾದ ಮಸೂದೆ ಅಂಗೀಕರಿಸುವ ಮೂಲಕ ತನ್ನ ಪ್ರಯಾಣ ಪ್ರಾರಂಭಿಸುವುದನ್ನು ನಾವು ನೋಡಿದ್ದೇವೆ. ಈ ಮಂಗಳಕರ ಆರಂಭವು ಮುಂಬರುವ ಶತಮಾನದಲ್ಲಿ ರಾಷ್ಟ್ರಕ್ಕೆ ಸೇವೆ ಸಲ್ಲಿಸಲು ವಿನ್ಯಾಸಗೊಳಿಸಲಾದ ಕಟ್ಟಡದೊಂದಿಗೆ ಹೊಂದಿಕೆಯಾಗುತ್ತದೆ. ಜನಸಂಖ್ಯೆಯಲ್ಲಿ ಶೇಕಡಾ 50ರಷ್ಟಿರುವ ಮಹಿಳೆಯರು ತಮ್ಮ ಮನೆಗಳಿಗೆ ಸೀಮಿತವಾಗಿದ್ದರೆ ಯಶಸ್ಸು ಸಾಧಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಅವರು ಸೂಕ್ತವಾಗಿಯೇ ಹೇಳಿದ್ದಾರೆ. ಭಾರತವು ತನ್ನನ್ನು ತಾನು ಪ್ರಬಲ ಜಾಗತಿಕ ಆರ್ಥಿಕ ಶಕ್ತಿಯಾಗಲು ಪ್ರೇರೇಪಿಸುತ್ತಿರುವುದರಿಂದ, ರಾಷ್ಟ್ರದ ಬೆಳವಣಿಗೆಗೆ ಕೊಡುಗೆ ನೀಡುವಲ್ಲಿ ಮಹಿಳೆಯರ ಪಾತ್ರವು ಪ್ರತಿ ದಿನವೂ ಹೆಚ್ಚು ಅನಿವಾರ್ಯವಾಗುತ್ತದೆ.

ನಾರಿ ಶಕ್ತಿ ವಂದನ ಅಧಿನಿಯಮವು ಐತಿಹಾಸಿಕ ಶಾಸನವಾಗಿದ್ದು, ಇದು ಮಹಿಳಾ ಸಬಲೀಕರಣವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಅಲ್ಲದೆ, ನಮ್ಮ ರಾಜಕೀಯ ಮತ್ತು ಆಡಳಿತ ಪ್ರಕ್ರಿಯೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯನ್ನು ಸಕ್ರಿಯಗೊಳಿಸುತ್ತದೆ. ನಾರಿ ಶಕ್ತಿ ವಂದನ ಅಧಿನಿಯಮದ ಜಾರಿಯ ಮೂಲಕ ಭಾರತವು ಹೆಚ್ಚು ಉಜ್ವಲವಾದ ಮತ್ತು ಅಂತರ್ಗತವಾದ ನಾಳೆಗಾಗಿ ತನ್ನನ್ನು ತಾನು ಸಜ್ಜುಗೊಳಿಸಿಕೊಂಡಿದ್ದು, ನಮ್ಮ ನಾರಿ ಶಕ್ತಿಯು ಈ ರೂಪಾಂತರದ ಕೇಂದ್ರಬಿಂದುವಾಗಿದೆ.

ಈ ಬದಲಾವಣೆಯ ಪಯಣವು ಮಹಿಳೆಯರು ಇನ್ನು ಮುಂದೆ ಫಲಾನುಭವಿಗಳು ಮಾತ್ರವಲ್ಲ, ಸಕ್ರಿಯ ಕೊಡುಗೆದಾರರು ಮತ್ತು ರಾಷ್ಟ್ರದ ಭವಿಷ್ಯವನ್ನು ರೂಪಿಸುವವರು ಎಂಬ ಸಾಮಾಜಿಕ ಗ್ರಹಿಕೆಗಳಲ್ಲಿನ ಮಾದರಿ ಬದಲಾವಣೆಯನ್ನು ಸಹ ಸೂಚಿಸುತ್ತದೆ. ಈ ಮಾರ್ಗವು ಸವಾಲಿನದ್ದಾಗಿದ್ದು, ಹೋರಾಟವು ದೀರ್ಘಕಾಲದ್ದಾಗಿದೆ, ಆದರೆ, ಅಂತಿಮವಾಗಿ, ‘ನಾರಿ ಶಕ್ತಿ’ ವಿಜಯಶಾಲಿಯಾಗಿ ಹೊರಹೊಮ್ಮಿದೆ. ಈ ಯಶಸ್ಸಿನ ಕ್ಷಣದಲ್ಲಿ, ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ 33 ಪ್ರತಿಶತ ಮೀಸಲಾತಿಯನ್ನು ಪರಿಚಯಿಸಿದ್ದಕ್ಕಾಗಿ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಸರ್ಕಾರದ ಕೊಡುಗೆ ಒಪ್ಪಿಕೊಳ್ಳುವುದು ನಿರ್ಣಾಯಕವಾಗಿದೆ. ಅನೇಕ ರಾಜ್ಯಗಳು ತಳಮಟ್ಟದಲ್ಲಿ ಮೀಸಲಾತಿಯನ್ನು 50 ಪ್ರತಿಶತಕ್ಕೆ ಹೆಚ್ಚಿಸುವ ಮೂಲಕ ಈ ಉಪಕ್ರಮವು ಮಹಿಳೆಯರ ಭಾಗವಹಿಸುವಿಕೆಯ ಹೆಚ್ಚಳಕ್ಕೆ ಕಾರಣವಾಗಿದೆ.

ಮಹಿಳಾ ನೇತೃತ್ವದ ಅಭಿವೃದ್ಧಿಯ ಮೇಲಿನ ಈ ಗಮನವು ಕೇವಲ ರಾಜಕೀಯ ತಂತ್ರವಲ್ಲ; ಆದರೆ ಆಳವಾಗಿ ಹುದುಗಿರುವ ನೀತಿಯಾಗಿದೆ. ರಾಷ್ಟ್ರದ ಬೆಳವಣಿಗೆಯು ಅದರ ಮಹಿಳೆಯರ ಬೆಳವಣಿಗೆಯೊಂದಿಗೆ ಬೇರ್ಪಡಿಸಲಾಗದಂತೆ ಸಂಬಂಧ ಹೊಂದಿದೆ ಎಂಬ ತತ್ವವನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಅಳವಡಿಸಿಕೊಂಡಿದೆ. ಈ ಬದ್ಧತೆಯು ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಾರಂಭಿಸಿದ ಅಸಂಖ್ಯಾತ ನೀತಿಗಳು ಮತ್ತು ಉಪಕ್ರಮಗಳಲ್ಲಿ ಪ್ರತಿಫಲಿಸುತ್ತದೆ ಮತ್ತು ಫಲಿತಾಂಶಗಳು ವ್ಯಾಪಕವಾಗಿ ಹೊರಹೊಮ್ಮಿವೆ.

ಒಂದು ಪಕ್ಷವಾಗಿ ಬಿಜೆಪಿಯು ನಿರಂತರವಾಗಿ ಮಹಿಳಾ ಮೀಸಲಾತಿಯನ್ನು ಪ್ರತಿಪಾದಿಸಿದೆ. ನಾವು ಸಶಕ್ತ ಮಹಿಳೆಯರನ್ನು ಪ್ರತಿನಿಧಿಸುತ್ತೇವೆ ಮತ್ತು ನಮ್ಮ ಗೌರವಾನ್ವಿತ ಪ್ರಧಾನಿಯವರೊಂದಿಗೆ ನಮ್ಮ ಪಕ್ಷವು ನಮಗೆಲ್ಲರಿಗೂ ಅಧಿಕಾರ ನೀಡಿದೆ. ಗೌರವಾನ್ವಿತ ರಾಷ್ಟ್ರಪತಿ ದ್ರೌಪದಿ ಮುಮು ಅವರು ಸಶಕ್ತ ಮಹಿಳೆಗೆ ಉಜ್ವಲ ಉದಾಹರಣೆಯಾಗಿದ್ದಾರೆ. ಅಲ್ಲದೆ, ನಮ್ಮ ಪಕ್ಷದ ಪ್ರತಿಯೊಬ್ಬ ಮಹಿಳಾ ಸಂಸದರು ಸಬಲೀಕರಣದ ಪ್ರತೀಕವಾಗಿದ್ದಾರೆ.

ನಮ್ಮ ಚುನಾಯಿತ ಮಹಿಳಾ ಪ್ರತಿನಿಧಿಗಳು ನಿಸ್ಸಂದೇಹವಾಗಿ ಸಂಸದೀಯ ಚರ್ಚೆಗಳ ಗುಣಮಟ್ಟವನ್ನು ಹೆಚ್ಚಿಸುತ್ತಿದ್ದಾರೆ. ಕಾನೂನು ಮತ್ತು ನೀತಿ ರಚನೆಯ ಮೇಲೆ ಪ್ರಭಾವ ಬೀರುತ್ತಿದ್ದಾರೆ. ಅಲ್ಲದೆ, ಎಲ್ಲ ಭಾರತೀಯರ ಒಳಿತಿಗಾಗಿ ಆಡಳಿತಕ್ಕೆ ಸಕಾರಾತ್ಮಕ ಕೊಡುಗೆ ನೀಡುತ್ತಿದ್ದಾರೆ.

ಮಹಿಳೆಯರನ್ನು ಸಬಲೀಕರಣಗೊಳಿಸುವುದು ಎಂದರೆ ರಾಷ್ಟ್ರವನ್ನು ಸಶಕ್ತಗೊಳಿಸುವುದು ಎಂಬುದನ್ನು ನಾವು ನೆನಪಿಟ್ಟುಕೊಳ್ಳುವುದು ಬಹಳ ಮುಖ್ಯ. ಮಹಿಳೆಯರು ಅಭಿವೃದ್ಧಿ ಹೊಂದಿದಾಗ ಸಮಾಜಗಳು ಅಭಿವೃದ್ಧಿ ಹೊಂದುತ್ತವೆ. ನಾವು ಈ ಮಹತ್ವದ ಘಟ್ಟದಲ್ಲಿ ನಿಂತಿರುವಾಗ, ಇದು ಸಾಧಿಸಿದ ಮೈಲಿಗಲ್ಲುಗಳನ್ನು ಸಂಭ್ರಮಿಸುವುದರ ಬಗ್ಗೆ ಮಾತ್ರವಲ್ಲದೆ ಮುಂದೆ ಇರುವ ಮಿತಿಯಿಲ್ಲದ ಸಾಧ್ಯತೆಗಳನ್ನು ಎದುರುನೋಡಬೇಕಾಗಿದೆ. ಸಮೃದ್ಧ ಮತ್ತು ಸಮತೋಲಿತ ಭವಿಷ್ಯಕ್ಕೆ ದಾರಿ ಮಾಡಿಕೊಡುವ ನಿಟ್ಟಿನಲ್ಲಿ ಲಿಂಗ ಅಡೆತಡೆಗಳನ್ನು ನಿವಾರಿಸಬಹುದು ಎಂಬ ಬದ್ಧತೆ, ದೃಷ್ಟಿಕೋನದೊಂದಿಗೆ ಭಾರತವು ಜಾಗತಿಕ ಮಟ್ಟದಲ್ಲಿ ಒಂದು ಉದಾಹರಣೆಯಾಗಿ ಹೊರಹೊಮ್ಮುತ್ತಿದೆ.

ನಾರಿ ಶಕ್ತಿ ವಂದನ ಅಧಿನಿಯಮ ಮತ್ತು ಇಂತಹುದೇ ಉಪಕ್ರಮಗಳ ಸಾರವು ಭರವಸೆ, ಪ್ರಗತಿ ಮತ್ತು ಎಲ್ಲರಿಗೂ ಉಜ್ವಲ ಭವಿಷ್ಯದ ಭರವಸೆಯನ್ನು ಸೂಚಿಸುತ್ತದೆ. ಈಗ ಆರಂಭವಾಗಿರುವ ಬದಲಾವಣೆಯ ಗಾಳಿಯು ಮುಂದಿನ ಪೀಳಿಗೆಗೂ ಮುಂದುವರಿಯುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ಹಾಗೂ ಇಡೀ ರಾಷ್ಟ್ರವು ಒಗ್ಗಟ್ಟಿನಿಂದ ಇದನ್ನು ಬೆಂಬಲಿಸುವ ಐತಿಹಾಸಿಕ ಕರೆ ಇದಾಗಿದೆ.

(ಲೇಖಕರು ಕೇಂದ್ರ ವಿತ್ತ ಸಚಿವರು)