ಕೃಷಿಗಾಗಿ ಸಾಲ ಮಾಡಿ ಅದನ್ನು ತೀರಿಸಲಾಗದೆ ಆತ್ಮಹತ್ಯೆಯ ಹಾದಿ ಹಿಡಿದ ರೈತರ ಮಕ್ಕಳು ಶೈಕ್ಷಣಿಕವಾಗಿ ಅತಂತ್ರರಾಗುವುದು ಸಹಜ. ಇದನ್ನು ತಪ್ಪಿಸುವುದಕ್ಕೋಸ್ಕರ ಆ ಮಕ್ಕಳ ಶಿಕ್ಷಣದ ವೆಚ್ಚವನ್ನು ರಾಜ್ಯ ಸರ್ಕಾರದಿಂದಲೇ ಭರಿಸಲು ಕೆಲವು ವರ್ಷಗಳ ಹಿಂದೆ ತೀರ್ಮಾನ ಕೈಗೊಳ್ಳಲಾಗಿತ್ತು. ‘ಉತ್ತಮ ಶಿಕ್ಷಣ ಪಡೆದುಕೊಂಡಾಗ ಉದ್ಯೋಗ ಸಿಗುತ್ತದೆ, ಕುಟುಂಬ ಆರ್ಥಿಕವಾಗಿ ಸಬಲ ಆಗಬಹುದು’ ಎಂಬ ಲೆಕ್ಕಾಚಾರದಲ್ಲೇ ಒಡಮೂಡಿದ ಯೋಜನೆ ಇದಾಗಿತ್ತು. ಅನ್ನದಾತರ ಮಕ್ಕಳು ಅನಾಥರಾಗಬಾರದು, ಅವರಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ಕಾರಣಕ್ಕೆ ರೂಪುಗೊಂಡ ದೊಡ್ಡ ಉದ್ದೇಶದ ಸಣ್ಣ ಯೋಜನೆ ಇದು. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕಳೆದ 2-3 ವರ್ಷಗಳಿಂದ ಈ ಯೋಜನೆ ಬಗ್ಗೆ ಸರ್ಕಾರ ಉದಾಸೀನ ತೋರುತ್ತಿದೆ. ಆಡಳಿತ ಪಕ್ಷದ ಶಾಸಕರೇ ಸರ್ಕಾರಕ್ಕೆ ಮನವಿ ಸಲ್ಲಿಸಿ, ರೈತರ ಮಕ್ಕಳಿಗೆ ನೆರವಾಗಿ ಎಂದು ಕೋರಿಕೆ ಇಟ್ಟರೂ ಸರ್ಕಾರಕ್ಕೆ ಮನಸ್ಸು ಕರಗಿದಂತೆ ಕಾಣಿಸುತ್ತಿಲ್ಲ.
ಈ ಯೋಜನೆ ಪ್ರಕಾರ, ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ವಾರ್ಷಿಕ ಬೋಧನಾ ಶುಲ್ಕವಾಗಿ 24 ಸಾವಿರ ರೂ. ಮತ್ತು ಬೋಧನಾ ಮತ್ತು ವಸತಿ ಶುಲ್ಕ ಒಳಗೊಂಡಂತೆ ಒಟ್ಟಾರೆ 48 ಸಾವಿರ ರೂ. ಗರಿಷ್ಠ ಮಿತಿಯಲ್ಲಿ ಶುಲ್ಕ ಮರುಪಾವತಿ ಮಾಡಲಾಗುತ್ತಿತ್ತು. ಈಗಿನ ಶೈಕ್ಷಣಿಕ ಪರಿಸರದಲ್ಲಿ ಇದು ಸಣ್ಣ ಮೊತ್ತವೇ. ಆದರೂ ಒಂದು ಆಸರೆಯಂತೂ ಆಗುತ್ತಿತ್ತು. ವರ್ಷಕ್ಕೆ ಹೆಚ್ಚೆಂದರೆ 20-25 ಲಕ್ಷ ರೂ.ವರೆಗೆ ವೆಚ್ಚವಾಗುತ್ತದೆ. ಇದು ಸರ್ಕಾರಕ್ಕೆ ಹೊರೆ ಎನಿಸುವುದೇ ಇಲ್ಲ. ಅಲ್ಲದೇ ಇದೊಂದು ಅನುಪಯುಕ್ತ ಕಾರ್ಯಕ್ರಮ ಅಥವಾ ಯೋಜನೆ ಎಂದು ಯಾವ ಆಯಾಮದಲ್ಲೂ ಕಾಣಿಸದು. ಈ ಮೊತ್ತ ಒಬ್ಬ ಸಚಿವರ ಓಡಾಟಕ್ಕೆ ಹೊಸ ವಾಹನ ಖರೀದಿಸಲು ಮಾಡುವ ವೆಚ್ಚಕ್ಕಿಂತಲೂ ಕಡಿಮೆ. ಹಾಗಾಗಿ ಅಧಿಕಾರಿಗಳು ಕುಂಟುನೆಪವೊಡ್ಡಿ ಯೋಜನೆಗೆ ಅಡ್ಡಿ ಉಂಟು ಮಾಡಬಾರದು. ಆತ್ಮಹತ್ಯೆ ಮಾಡಿಕೊಂಡ ರೈತರ ಸಮಗ್ರ ಮಾಹಿತಿ ಸರ್ಕಾರದ ಬಳಿ ಇದ್ದೇ ಇರುತ್ತದೆ. ಪುನಃ ಆ ಕುಟುಂಬದಿಂದ ವರದಿ ತರಿಸಿಕೊಳ್ಳುವ ಅಗತ್ಯವೇ ಬೀಳುವುದಿಲ್ಲ.
ಇನ್ನೊಂದೆಡೆ, ಅನಾಥರು, ಸಾಮಾಜಿಕ ಸಂಘರ್ಷಕ್ಕೆ ಒಳಗಾದವರು, ಕೋವಿಡ್ನಿಂದ ಏಕಪಾಲಕರನ್ನು ಕಳೆದುಕೊಂಡ ಮಕ್ಕಳೊಂದಿಗೆ ನಿಲ್ಲಬೇಕಿದ್ದ ಸರ್ಕಾರ ಅವರಿಂದ ಅಂತರ ಕಾಯ್ದುಕೊಂಡಿರುವುದೂ ಸರಿಯಲ್ಲ. ಈ ಯೋಜನೆಗೆ ಕಳೆದ 9 ತಿಂಗಳಿಂದ ಅನುದಾನ ಬಿಡುಗಡೆ ಆಗದೇ ಸಾವಿರಾರು ಫಲಾನುಭವಿಗಳು ಅತಂತ್ರರಾಗಿದ್ದಾರೆ. ಅವರನ್ನು ಸರ್ಕಾರವೇ ನಡು ನೀರಲ್ಲಿ ಕೈಬಿಟ್ಟಿದೆ. ಅದರ ಬಗ್ಗೆಯೂ ಸರ್ಕಾರ ಗಮನ ಹರಿಸುವ ಅವಶ್ಯಕತೆ ಇದೆ. ಆತ್ಮಹತ್ಯೆ ಮಾಡಿಕೊಂಡ ರೈತನ ಮಕ್ಕಳಿಗೆ ನೆರವಾಗುವುದು ಹಾಗೂ ‘ಪ್ರಾಯೋಜಕತ್ವ’ ಯೋಜನೆ ಮುಂದುವರಿಸಲು ಸರ್ಕಾರ ಮನಸ್ಸು ಮಾಡಲಿ, ಮನಸ್ಸು ವಿಸ್ತರಿಸಿಕೊಳ್ಳಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು.