| ಮಂಡಗದ್ದೆ ಪ್ರಕಾಶ್ಬಾಬು ಕೆ.ಆರ್.
ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಕೃತ್ತಿಕಾ ನಕ್ಷತ್ರದ ದಿನ ‘ಆಡಿಕೃತ್ತಿಕೆ ಸುಬ್ರಹ್ಮಣ್ಯ’ನ ಹಬ್ಬವನ್ನು ಜಾತಿ-ಮತ ಭೇದ ಇಲ್ಲದೆ ಎಲ್ಲರೂ ಆಚರಿಸುವುದು ವಿಶೇಷ. ಈ ಹಬ್ಬವನ್ನು ‘ಕಾವಡಿ’ ಎಂದೂ ಕರೆಯುತ್ತಾರೆ. ಕಾವಡಿ ಎಂದರೆ ಹರಕೆ ಎಂದು ಅರ್ಥ. ಆಷಾಢಮಾಸದ ಪ್ರಾರಂಭ ದಿನದಿಂದ ಕೃತ್ತಿಕಾ ನಕ್ಷತ್ರ ಬರುವತನಕ ಸುಮಾರು ಒಂದು ತಿಂಗಳ ಕಾಲ ಶ್ರದ್ಧಾ, ಭಕ್ತಿಯಿಂದ ಹಾಗೂ ಬ್ರಹ್ಮಚರ್ಯ ಪಾಲಿಸಿಕೊಂಡು ಈ ಕಾವಡಿ ವ್ರತವನ್ನು ಆಚರಿಸುತ್ತಾರೆ. ಈ ವ್ರತದಲ್ಲಿ ಸುಬ್ರಹ್ಮಣ್ಯನ ಆರಾಧನೆಯೇ ಮುಖ್ಯವಾದದ್ದು.
ಕಾವಡಿ ವಿಶೇಷ: ಒಂದು ಬಿದಿರಿನ ಕೋಲು ಹಾಗೂ ಎರಡು ಬಿದಿರಿನ ಬುಟ್ಟಿಯೇ ಕಾವಡಿ. ಒಂದು ಬುಟ್ಟಿಗೆ ಅರಿಸಿನ ಬಟ್ಟೆಯನ್ನು ಸುತ್ತಿರುತ್ತಾರೆ. ಅದರಲ್ಲಿ ದೇವರ ಪೂಜೆಯ ಸಾಮಾನನ್ನು ಇಟ್ಟಿರುತ್ತಾರೆ. ಇನ್ನೊಂದು ಬುಟ್ಟಿಯಲ್ಲಿ ಸುಬ್ರಹ್ಮಣ್ಯನಿಗೆ ನೈವೇದ್ಯ ಮಾಡಲು ತಯಾರಿಸಿದ ಪ್ರಸಾದ ಇಟ್ಟಿರುತ್ತಾರೆ. ಬಿದಿರ ಕೋಲಿನ ಕೊನೆಯಲ್ಲಿ ಈ ಎರಡನ್ನು ಅರಸಿನ ಹಗ್ಗದಲ್ಲಿ ಕಟ್ಟಿ ತಕ್ಕಡಿ ರೀತಿ ನೇತು ಹಾಕಿರುತ್ತಾರೆ. ಇದಕ್ಕೆ ಹಳದಿ ಹೂವಿನಿಂದ ಅಲಂಕಾರ ಮಾಡಿರುತ್ತಾರೆ. ಸುಬ್ರಹ್ಮಣ್ಯನ ಹರಕೆ ಹೊತ್ತವರು ಈ ಹಬ್ಬದ ದಿನ ಆ ಕಾವಡಿಯನ್ನು ಹೊತ್ತು ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗುತ್ತಾರೆ. ಈ ಕಾವಡಿಯನ್ನು ವಿವಿಧ ರೀತಿಯಲ್ಲಿ ತಯಾರಿಸಿರುತ್ತಾರೆ. ಹೂವುಗಳಿಂದ ಅಲಂಕರಿಸಿದ ಕಾವಡಿ, ಮೀನಿನಾಕಾರದ ಕಾವಡಿ, ನವಿಲಿನ ಆಕಾರದ ಕಾವಡಿ, ತೇರು ಅಥವಾ ರಥದ ಆಕಾರದ ಕಾವಡಿ, ಹಾವಿನ ಆಕಾರದ ಕಾವಡಿ -ಹೀಗೆ ವಿವಿಧ ಆಕರ್ಷಕ ಕಾವಡಿಗಳು ಇರುತ್ತದೆ. ಮಕ್ಕಳಿಗಾಗಿ ಸಣ್ಣ ಸಣ್ಣ ಕಾವಡಿಗಳೂ ಇರುತ್ತವೆ. ಹಬ್ಬದ ಇಪ್ಪತ್ತು ದಿನ ಮೊದಲು ಇದನ್ನು ತಯಾರಿಸಲು ಪ್ರಾರಂಭಿಸುತ್ತಾರೆ.
ಸುಬ್ರಹ್ಮಣ್ಯನ ಹಿನ್ನೆಲೆ: ಹಿಂದೆ ತಾರಕಾಸುರನೆಂಬ ರಾಕ್ಷಸನು ಗರ್ವಿಷ್ಟನಾಗಿ ಸಕಲ ಲೋಕಗಳ ಜನರಿಗೆ ಮತ್ತು ದೇವತೆಗಳಿಗೆ ಹಿಂಸಿಸುತ್ತಿದ್ದ. ದೇವತೆಗಳು ಈ ವಿಷಯದ ಕುರಿತು ಬ್ರಹ್ಮದೇವರಲ್ಲಿ ಮೊರೆಯಿಟ್ಟರು. ಅದಕ್ಕೆ ಬ್ರಹ್ಮ ದೇವ, ‘‘ಈಗ ಶಿವ ಘೊರ ತಪಸ್ಸು ಮಾಡುತ್ತಿದ್ದಾನೆ. ಅವನು ತಪಸ್ಸನ್ನು ಬಿಟ್ಟು ಪಾರ್ವತಿಯನ್ನು ವಿವಾಹ ಮಾಡಿಕೊಂಡರೆ ಅವನಿಗೆ ಜನಿಸುವ ಕುಮಾರನು, ತಾರಕಾಸುರನನ್ನು ಸಂಹಾರ ಮಾಡುತ್ತಾನೆ’’ ಎಂದನು. ದೇವತೆಗಳು ಶಿವನ ತಪೋಭಂಗ ಮಾಡಲು ಮನ್ಮಥನನ್ನು ಕಳುಹಿಸಿದರು. ಶಿವ ತನ್ನ ಮೂರನೆಯ ಕಣ್ಣನ್ನು ತೆರೆದು ಮನ್ಮಥನನ್ನು ದಹಿಸಿದ. ಬಳಿಕ, ತನ್ನ ಸೇವೆ ಮಾಡುತ್ತಿದ್ದ ಪಾರ್ವತಿಯನ್ನು ವಿವಾಹ ಮಾಡಿಕೊಂಡ. ಅವರಿಬ್ಬರೂ ಶೃಂಗಾರದಲ್ಲಿದ್ದ ಸಂದರ್ಭದಲ್ಲಿ ಶಿವನ ರೇತಸ್ಸು ಕೆಳಗೆ ಬಿದ್ದಿತು. ಭೂಮಿಯು ಅದನ್ನು ಭರಿಸಲಾಗದೆ ಅಗ್ನಿಯೊಳಗೆ ಹಾಕಿತು. ಅದನ್ನು ಅಗ್ನಿ ಧರಿಸಲಾಗದೆ ಗಂಗೆಯಲ್ಲಿ ಹಾಕಿದ. ಗಂಗೆಯು ತನ್ನ ದಡದಲ್ಲಿದ್ದ ಶರವಣ ಮುನಿಗೆ ನೀಡಿದಳು. ಅಲ್ಲಿಯೇ ಶ್ರೀ ಸುಬ್ರಹ್ಮಣ್ಯಸ್ವಾಮಿ ಜನಿಸಿದ. ಆದ್ದರಿಂದ ಸುಬ್ರಹ್ಮಣ್ಯನಿಗೆ ಇನ್ನೊಂದು ಹೆಸರು ಶರವಣಭವ. ಈ ಹೆಸರಿನಲ್ಲಿ ಒಂದೊಂದು ಅಕ್ಷರಕ್ಕೂ ವಿಶೇಷ ಅರ್ಥವಿದೆ. ‘ಶ’ ಲಕ್ಷ್ಮೀಬೀಜ, ‘ರ’ ಅಗ್ನಿಬೀಜ, ‘ವ’ ಅಮೃತ ಬೀಜ. ಶರವಣನು ಆರು ಮುಖ ಹೊಂದಿರುವುದರಿಂದ ಈತನನ್ನು ‘ಷಣ್ಮುಖ’ ಎನ್ನುತ್ತಾರೆ. ಆರು ಮುಖದ ಬಣ್ಣಗಳು- ಬಿಳಿ, ಕಪ್ಪು, ಕೆಂಪು, ಕಂದು, ಚಿತ್ರವರ್ಣ ಮತ್ತು ಹಳದಿ. ಸುಬ್ರಹ್ಮಣ್ಯನಿಗೆ ಹಳದಿ ಬಣ್ಣ ಬಹಳ ಪ್ರಿಯ.
ಹರಕೆಯ ಆಚರಣೆ: ಶ್ರಾವಣ ಮಾಸದಲ್ಲಿ ಒಂದು ತಿಂಗಳು ಈ ವ್ರತವನ್ನು ಆಚರಿಸಿ ಕಾವಡಿ ಹಬ್ಬದ (ಕೃತ್ತಿಕಾ ನಕ್ಷತ್ರದ) ದಿನ ಮಹಿಳೆಯರು ಅರಿಸಿನ ಸೀರೆ ಧರಿಸಿ, ಪುರುಷರು ಅರಿಶಿಣ ಬಣ್ಣದ ಪಂಚೆಯನ್ನು ಧರಿಸಿ ಮಡಿಯಿಂದ ಆ ಕಾವಡಿಯನ್ನು ಹೆಗಲ ಮೇಲೆ ಹೊತ್ತು ವಿಶೇಷ ವಾದ್ಯಗಳೊಂದಿಗೆ ಮನೆಯಿಂದ ಹೊರಡುತ್ತಾರೆ. ಹೋಗುವಾಗ ಕುಣಿಯುತ್ತಾ ‘ಹರೋ ಹರ... ಹರೋ ಹರ...’ ಎಂದು ಸುಬ್ರಹ್ಮಣ್ಯನನ್ನು ನೆನೆಯುತ್ತಾ ಸಾಗುತ್ತಾರೆ. ಒಂದು ಸಲ ಕಾವಡಿ ಹೊತ್ತುಕೊಂಡರೆ ಅದನ್ನು ಸುಬ್ರಹ್ಮಣ್ಯ ದೇವಾಲಯದ ತನಕ ಹೊತ್ತುಕೊಂಡಿರಬೇಕು. ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು. ಹರಕೆಯನ್ನು ತೀರಿಸಿದ ನಂತರ ಸುಬ್ರಹ್ಮಣ್ಯನಿಗೆ ಪೂಜೆ ಸಲ್ಲಿಸಿ, ಪ್ರಸಾದವನ್ನು ಸ್ವೀಕರಿಸಿ ವ್ರತವನ್ನು ಪೂರ್ತಿಗೊಳಿಸಲಾಗುತ್ತದೆ. ಅಲ್ಲಿಗೆ ಆ ವರ್ಷದ ಆಡಿ ಕೃತ್ತಿಕೆಯ ಹಬ್ಬವು ಮುಗಿಯುತ್ತದೆ.
(ಲೇಖಕರು ಅಧ್ಯಾತ್ಮ ಚಿಂತಕ, ಹವ್ಯಾಸಿ ಬರಹಗಾರ)