ಮುಂದೆಯೂ ಪೊಲೀಸರು ಈ ಪ್ರಕರಣದಲ್ಲಿ ಆಸಕ್ತಿ ವಹಿಸದಿರಬಹುದೆಂಬ ಶಂಕೆಯಿಂದ ಸಬಿತ ತಾವೇ ಪತ್ತೇದಾರಿಗೆ ಮುಂದಾದರು. ಜಿಗಿಶಾ ಕಳೆದ ಎರಡು ದಿನಗಳು ಮಾಡಿರಬಹುದಾದ ಬ್ಯಾಂಕಿನ ವ್ಯವಹಾರ ಗಮನಿಸಿದರೆ ಏನಾದರೂ ಮಾಹಿತಿ ಸಿಗಬಹುದೆಂದು ರ್ತಸಿದರು. ಜಿಗಿಶಾ ತಮ್ಮೊಡನೆ ಹಂಚಿಕೊಂಡಿದ್ದ ಪಾಸ್ವರ್ಡ್ ಬಳಸಿ ಬ್ಯಾಂಕ್ ವಿವರಗಳನ್ನು ನೋಡಿದರು. ಅಪಹರಣವಾದ ದಿನ ಬೆಳಗ್ಗೆ ಐದು ಗಂಟೆಗೆ ಜಿಗಿಶಾಳ ಖಾತೆಯಿಂದ ದೆಹಲಿಯ ಎಟಿಎಂ ಒಂದರಲ್ಲಿ 25 ಸಾವಿರ ರೂ. ನಗದನ್ನು ಪಡೆಯಲಾಗಿತ್ತು. ಅಲ್ಲದೆ ಅದೇ ದಿನ ಮಧ್ಯಾಹ್ನ ದಕ್ಷಿಣ ದೆಹಲಿಯ ಹಲವಾರು ಅಂಗಡಿಗಳಲ್ಲಿ 70 ಸಾವಿರ ರೂ. ಮೌಲ್ಯದ ವಿವಿಧ ಐಷಾರಾಮಿ ವಸ್ತುಗಳನ್ನು ಖರೀದಿಸಲಾಗಿತ್ತು. ಸಬಿತ ಕೂಡಲೇ ಜಿಗಿಶಾಳ ಬ್ಯಾಂಕಿಗೆ ಹೋಗಿ, ಮಗಳು ಅಪಹರಣವಾದ ಮಾಹಿತಿ ಕೊಟ್ಟು ಆಕೆಯ ಡೆಬಿಟ್ಕಾರ್ಡ್ ವಹಿವಾಟುಗಳ ಬಗ್ಗೆ ಹೆಚ್ಚಿನ ಮಾಹಿತಿ ಕೋರಿದರು. ಪೊಲೀಸರು ಕೇಳಿದರೆ ಮಾತ್ರ ಆ ಮಾಹಿತಿ ಕೊಡಲಾಗುವುದೆಂದು ಬ್ಯಾಂಕಿನವರು ಆಕೆಗೆ ತಿಳಿಸಿದರು.
ಜಿಗಿಶಾ ಕಾಣೆಯಾದ ಎರಡು ದಿನಗಳ ನಂತರ ದೆಹಲಿಯ ಗಡಿಭಾಗದಲ್ಲಿರುವ ಸೂರಜ್ಕುಂಡ್ ಬಳಿ ಯುವತಿಯ ಶವ ಸಿಕ್ಕಿತು. ಫರೀದಾಬಾದ್ ಪೊಲೀಸರು ಸ್ಥಳಕ್ಕೆ ಹೋಗಿ ನೋಡಿದಾಗ ಅದು ಸುಮಾರು 25 ವರ್ಷ ವಯಸ್ಸಿನವಳದಾಗಿತ್ತು. ಆಕೆಯ ಮೈಮೇಲೆ ಆಕೆಯ ಗುರುತುಗಳು ಸಿಗುವಂಥ ಯಾವುದೇ ವಸ್ತುಗಳಿರಲಿಲ್ಲ. ಅಪರಿಚಿತ ದೇಹವೆಂದು ಪರಿಗಣಿಸಿದ ಪೊಲೀಸರು ಶವದ ಪಂಚನಾಮೆ ಮಾಡಿ ಶವದ ಫೋಟೋಗಳನ್ನು ತೆಗೆದುಕೊಂಡರು. ಮೃತಳ ಫೋಟೋ ಮತ್ತಿತರ ವಿವರಗಳನ್ನು ಅವರು ವಾಡಿಕೆಯಂತೆ ನೆರೆಯ ದೆಹಲಿ ಪೊಲೀಸರಿಗೂ ಕೊಟ್ಟರು. ದೆಹಲಿ ಪೊಲೀಸ್ ಕಂಟ್ರೋಲ್ ರೂಂ ಈ ಮಾಹಿತಿಯನ್ನು ನಗರದ ಎಲ್ಲ ಪೊಲೀಸ್ ಠಾಣೆಗಳಿಗೂ ಹಂಚಿತು. ಇದನ್ನು ಪಡೆದ ವಸಂತ್ ವಿಹಾರ್ ಪೊಲೀಸರು ಮೃತಳ ವಿವರಗಳು ಕಾಣೆಯಾದ ಜಿಗಿಶಾಳನ್ನು ಹೋಲುತ್ತಿದ್ದ ಕಾರಣ ಈ ಮಾಹಿತಿ ಪರಿಶೀಲಿಸಲು ಜಿಗಿಶಾಳ ಫೋಟೋದೊಂದಿಗೆ ಫರೀದಾಬಾದಿಗೆ ಹೋದರು. ಶವವು ಜಿಗಿಶಾಳದ್ದಿರಬಹುದು ಎಂದು ಸಂದೇಹಿಸಿದ ದೆಹಲಿ ಪೊಲೀಸರು ಜಗದೀಶ್ರನ್ನು ಸಂರ್ಪಸಿ ಶವಾಗಾರಕ್ಕೆ ಬರಹೇಳಿದರು. ಶವವನ್ನು ನೋಡಿದ ಕೂಡಲೇ ಜಗದೀಶ್ ಅದನ್ನು ತಮ್ಮ ಮಗಳದೆಂದೇ ಗುರುತಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದರು. ಜಿಗಿಶಾಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಪೋಸ್ಟ್ಮಾರ್ಟಂ ಮಾಡಿದ ವೈದ್ಯರು, ‘ಜಿಗಿಶಾಳ ಕತ್ತನ್ನು ಹಿಸುಕಿ ಕೊಲೆ ಮಾಡಲಾಗಿದೆ, ಆಕೆಯ ಮೇಲೆ ಅತ್ಯಾಚಾರವಾಗಿಲ್ಲ’ ಎಂದು ವರದಿ ನೀಡಿದರು.
ದೆಹಲಿ ಪೊಲೀಸರು ಅಪಹರಣದ ಪ್ರಕರಣಕ್ಕೆ ದರೋಡೆ, ಕೊಲೆ ಮತ್ತು ಸಾಕ್ಷ್ಯನಾಶದ ಕಲಂಗಳನ್ನು ಸೇರಿಸಿದರು. ಅದೇ ದಿನವೇ ಜಿಗಿಶಾಳ ತಾಯಿ ಪೊಲೀಸ್ ಠಾಣೆಗೆ ಹೋಗಿ ಆಕೆ ಕಾಣೆಯಾದ ದಿನದ ಬೆಳಗ್ಗೆ ಮತ್ತು ಮಧ್ಯಾಹ್ನ ಅವಳ ಡೆಬಿಟ್ಕಾರ್ಡ್ನ್ನು ಬಳಸಿ ಎಟಿಎಂನಲ್ಲಿ ಹಣ ಪಡೆದು, ಐದು ಅಂಗಡಿಗಳಲ್ಲಿ ವಸ್ತುಗಳನ್ನು ಖರೀದಿಸಿರುವ ಮಾಹಿತಿ ನೀಡಿ ಪೊಲೀಸರನ್ನು ತನ್ನೊಡನೆ ಬ್ಯಾಂಕಿಗೆ ಕರೆದೊಯ್ದರು. ಬ್ಯಾಂಕಿನಿಂದ ವಿವರ ಪಡೆದ ಪೊಲೀಸರು ಇಪ್ಪತ್ತೆ ೖದು ಸಾವಿರ ರೂ. ನಗದನ್ನು ಪಡೆದಿದ್ದ ಎಟಿಎಂಗೆ ಹೋದರು. ಅದು ದೆಹಲಿಯ ಮಹಿಪಾಲಪುರ ಬಡಾವಣೆಯಲ್ಲಿತ್ತು. ಸಿಸಿಟಿವಿ ಕ್ಯಾಮೆರಾದ ರೆಕಾರ್ಡಿಂಗ್ಗಳನ್ನು ಪರಿಶೀಲಿಸಿದಾಗ ಬೆಳಗಿನ ಐದು ಗಂಟೆ ಸುಮಾರಿಗೆ ಒಂದು ಕೆಂಪುಬಣ್ಣದ ಸ್ಯಾಂಟ್ರೋ ಕಾರು ಆ ರಸ್ತೆಯಲ್ಲಿ ಹೋದದ್ದು ದಾಖಲಾಗಿತ್ತು.
ಮುಂದೆ ಪೊಲೀಸರು ಜಿಗಿಶಾಳ ಕಾರ್ಡಿನಲ್ಲಿ ಖರೀದಿ ಮಾಡಲಾಗಿದ್ದ ಅಂಗಡಿಗಳಿಗೆ ಹೋದರು. ಅವುಗಳಲ್ಲಿ ಎರಡು ಅಂಗಡಿಗಳು ದಕ್ಷಿಣ ದೆಹಲಿಯ ಸರೋಜಿನಿ ನಗರ ಮಾರುಕಟ್ಟೆಯಲ್ಲಿದ್ದರೆ ಮೂರು ಅಂಗಡಿಗಳು ಸಾಕೇತ್ ಬಡಾವಣೆಯಲ್ಲಿದ್ದವು. ಸರೋಜಿನಿ ನಗರದ ಟೆಲಿವಿಷನ್ ಅಂಗಡಿಯಲ್ಲಿ 22 ಇಂಚಿನ ಒಂದು ಟೆಲಿವಿಷನ್ ಖರೀದಿಸಲಾಗಿತ್ತು. ಆ ಅಂಗಡಿಯವರನ್ನು ಆ ಖರೀದಿಯ ಬಗ್ಗೆ ವಿಚಾರಿಸಿದಾಗ 25-30 ವರ್ಷ ವಯಸ್ಸಿನ ಮೂವರು ಯುವಕರು ಅಂಗಡಿಗೆ ಬಂದಿದ್ದಾಗಿಯೂ ಅವರು ಒಂದು ಟಿವಿ ಖರೀದಿಸಿ ಡೆಬಿಟ್ ಕಾರ್ಡ್ ಕೊಟ್ಟರೆಂದೂ ಸದರಿ ಕಾರ್ಡ್ ಯಾರದೆಂದು ಕೇಳಿದಾಗ ಒಬ್ಬ ಯುವಕ ತನ್ನದು ಎಂದು ಹೇಳಿ, ಆನಂತರ ಖರೀದಿ ಮಾಡಿದ ಕುರುಹಾಗಿ ಕೊಡುವ ಬ್ಯಾಂಕಿನ ಸ್ಲಿಪ್ನ ಮೇಲೆ ತನ್ನ ಸಹಿ ಹಾಕಿದನೆಂದು ತಿಳಿಸಿದ. ‘ನೀವು ಖರೀದಿಸಿದ ಟಿ.ವಿ.ಯನ್ನು ಇನ್ಸ್ಟಾಲ್ ಮಾಡಲು ಎಲ್ಲಿಗೆ ಬರಬೇಕೆಂದು ಕೇಳಿದಾಗ ಆ ವ್ಯಕ್ತಿ ಸಾಕೇತ್ ಬಡಾವಣೆಯ ಒಂದು ವಿಳಾಸ ನೀಡಿದ್ದು ಆ ವಿಳಾಸ ನಕಲಿ ಎಂದು ಅಲ್ಲಿಗೆ ಹೋದಾಗ ತಿಳಿಯಿತು’ ಎಂದು ಅಂಗಡಿ ಮಾಲೀಕ ಜಿಯಾಉದ್ದೀನ್ ತಿಳಿಸಿದ. ಸದರಿ ದಾಖಲೆಗಳನ್ನು ಪೊಲೀಸರಿಗೆ ಹಸ್ತಾಂತರಿಸಿದ.
ಅದೇ ಸರೋಜಿನಿ ನಗರ ಮಾರುಕಟ್ಟೆಯಲ್ಲಿಯೇ ಪಾದರಕ್ಷೆಯ ಅಂಗಡಿಯಿಂದ ಜಿಗಿಶಾಳ ಕಾರ್ಡಿನಿಂದ 14,700 ರೂ. ಬೆಲೆಯ ಶೂಗಳನ್ನು ಖರೀದಿಸಲಾಗಿತ್ತು. ಜಿಯಾಉದ್ದೀನ್ ಹೇಳಿದ ಮಾತುಗಳನ್ನೇ ಆ ಅಂಗಡಿಯವರೂ ಹೇಳಿದರು. ಅದೇ ಕಾರ್ಡ್ನ್ನು ಬಳಸಿ ಸಮೀಪದ ವಾಚ್ ಕಂಪನಿಯಿಂದ ಒಂದು ಗಡಿಯಾರ ಖರೀದಿಸಿದ್ದ ಕಾರಣ ಪೊಲೀಸರು ಅಲ್ಲಿಗೆ ಹೋದರು. ಅಲ್ಲಿ ಸಿಸಿಟಿವಿ ಇದ್ದದ್ದನ್ನು ಕಂಡು, ಪೊಲೀಸರು ಅಂಗಡಿಮಾಲೀಕನಿಗೆ ಆ ಅಂಗಡಿಯಲ್ಲಿ ದಾಖಲಾಗಿದ್ದ ಫುಟೇಜ್ ಕೊಡಲು ಹೇಳಿದರು. ನಂತರ ಸಾಕೇತ್ ಬಡಾವಣೆಯ ಮಾರುಕಟ್ಟೆಗೆ ಹೋದರು. ಅಲ್ಲಿನ ಎರಡು ಅಂಗಡಿಗಳಲ್ಲಿ ಜಿಗಿಶಾಳ ಡೆಬಿಟ್ಕಾರ್ಡ್ ಮೂಲಕ ಒಂದು ಕೂಲಿಂಗ್ಗ್ಲಾಸ್ ಮತ್ತು ಒಂದು ಜೋಡಿ ಪಾದರಕ್ಷೆ ಖರೀದಿಸಲಾಗಿತ್ತು. ಅಲ್ಲಿನ ಬ್ಯಾಂಕ್ಸ್ಲಿಪ್ಗಳನ್ನು ವಶಪಡಿಸಿಕೊಳ್ಳಲಾಯಿತು. ಎಲ್ಲ ಅಂಗಡಿಗಳಲ್ಲಿಯೂ ಮೂರು ಜನ ಯುವಕರು ಖರೀದಿಗಾಗಿ ತಮ್ಮಲ್ಲಿಗೆ ಬಂದಿದ್ದು, ಅವರಲ್ಲಿ ಒಬ್ಬ ಬಿಳಿ ಬಣ್ಣದ ಟೋಪಿ ಧರಿಸಿದ್ದ ಎಂದರು. ಅಂಗಡಿಗಳ ಡೆಬಿಟ್ ಕಾರ್ಡ್ ಬ್ಯಾಂಕ್ಸ್ಲಿಪ್ಗಳಲ್ಲಿ ಬೇರೆ ಬೇರೆ ವ್ಯಕ್ತಿಗಳು ಸಹಿಮಾಡಿದ್ದರು. ಎಲ್ಲ ಸಹಿಗಳನ್ನೂ ಜಿಗಿಶಾಳ ತಾಯಿಗೆ ತೋರಿಸಿದಾಗ ಆಕೆ ಇವೆಲ್ಲವೂ ನಕಲಿ ಸಹಿಗಳು ಎಂದರು.
ಏತನ್ಮಧ್ಯೆ, ಜಿಗಿಶಾ ಹೊಂದಿದ್ದ ಎರಡು ಮೊಬೈಲ್ ಫೋನ್ಗಳಲ್ಲಿ ಒಂದು ಆಕ್ಟಿವೇಟ್ ಆಗಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತು, ಅವರು ಸದರಿ ಫೋನಿನ ಲೊಕೇಷನ್ ನೋಡಿದಾಗ ಅದು ಉತ್ತರಪ್ರದೇಶದ ಗಾಜಿಯಾಬಾದ್ನಲ್ಲಿತ್ತು. ಆರೋಪಿಗಳು ಇನ್ನೇನು ಸಿಕ್ಕಿಯೇ ಬಿಟ್ಟರು ಎನ್ನುವ ಖುಷಿಯಲ್ಲಿ ತನಿಖಾಧಿಕಾರಿ ಅಲ್ಲಿಗೆ ಹೋದರು. ಕಪಿಲ್ ಶರ್ಮ ಎನ್ನುವ ಕಟ್ಟಡ ನಿರ್ಮಾಣ ಮೇಸ್ತ್ರಿ ಜಿಗಿಶಾಳ ಹ್ಯಾಂಡ್ಸೆಟ್ಟಿಗೆ ಒಂದು ಹೊಸ ಸಿಮ್ ಹಾಕಿಸಿಕೊಂಡು ಅದನ್ನು ಬಳಸುತ್ತಿದ್ದ. ಅವನನ್ನು ಪೊಲೀಸ್ ಠಾಣೆಯಲ್ಲಿ ಪ್ರಶ್ನಿಸಿದಾಗ, ‘ಎರಡು ದಿನಗಳ ಹಿಂದೆ ನಾನು ಒಂದು ಲಾರಿ ಮರಳಿನ ಲೋಡ್ ತರಿಸಿದ್ದೆ. ಅದನ್ನು ಇಳಿಸುವಾಗ ಅದರಲ್ಲಿ ಈ ಹ್ಯಾಂಡ್ಸೆಟ್ ಸಿಕ್ಕಿತು, ಅದರಲ್ಲಿ ಸಿಮ್ ಇರಲಿಲ್ಲ, ನಾನು ಹೊಸಸಿಮ್ ಹಾಕಿಸಿದೆ’ ಎಂದ. ಆತ ಸತ್ಯವನ್ನು ಹೇಳುತ್ತಿದ್ದಾನೆ ಎಂದು ತಿಳಿದಾಗ ಅವನನ್ನು ಬಿಡುಗಡೆ ಮಾಡಿದರು.
ಪೊಲೀಸರು ಗಡಿಯಾರದ ಅಂಗಡಿಯಿಂದ ಪಡೆದಿದ್ದ ಸಿಸಿಟಿವಿ ದೃಶ್ಯಗಳನ್ನು ಗಮನಿಸಿದಾಗ ಮೂವರು ಯುವಕರು ಅಂಗಡಿಗೆ ಬಂದಿದ್ದು ಅವರು ವಸ್ತುಗಳನ್ನು ಖರೀದಿಸಿದ್ದು ದಾಖಲಾಗಿತ್ತು. ಆದರೆ ಅವರು ಯಾರೆಂಬುದು ಪೊಲೀಸರಿಗೆ ತಿಳಿಯಲಿಲ್ಲ. ಇಷ್ಟರಲ್ಲಿ ಎಟಿಎಂನಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳೂ ಲಭ್ಯವಾದವು. ಅದರಲ್ಲಿ ಜಿಗಿಶಾ ಇಬ್ಬರು ಯುವಕರೊಂದಿಗೆ ಅಲ್ಲಿಗೆ ಬಂದದ್ದು ದಾಖಲಾಗಿತ್ತು. ಆ ಯುವಕರು ಕರ್ಚೀಫಿನಿಂದ ತಮ್ಮ ಮುಖ ಮುಚ್ಚಿಕೊಂಡಿದ್ದರು. (ಮುಂದುವರಿಯುವುದು)
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)