ಯಾವಾಗ ನಮಗೆ ಎಲ್ಲೆಡೆಯಿಂದ ಹಿತದ ಅನುಭವ ಉಂಟಾಗುತ್ತದೋ ಆಗ ಮನಸ್ಸು ಧನಾತ್ಮಕವಾಗಿ ಯೋಚಿಸಲು ಪ್ರಾರಂಭಿಸುತ್ತದೆ. ಹೊಸ ಯೋಚನೆ, ಯೋಜನೆಗಳು ಮೊಳಕೆಯೊಡೆದು ಜೀವನದ ಹಾದಿಯನ್ನೇ ಉನ್ನತೀಕರಿಸುವ ಶಕ್ತಿ ಹಿತಾನುಭವದ ಮನಸ್ಸಿಗಿರುತ್ತದೆ. ರೋಗಿಗೂ ಇಂತಹುದೇ ಹಿತಾನುಭವ ನೀಡಬೇಕು. ಆಯುರ್ವೆದದಲ್ಲಿ ಚಂದ್ರಪ್ರಭಾ ವಟಿಯೆಂಬ ಮಾತ್ರೆಯಿದೆ. ಚಂದ್ರಪ್ರಭಾ ಗುಟಿಕಾ ಎಂಬ ದುಂಡನೆಯ ಗುಳಿಗೆಯೂ ಲಭ್ಯವಿದೆ. ಎರಡರ ಘಟಕಾಂಶಗಳಲ್ಲಿ ಏನೇನೂ ಮಾರ್ಪಾಡುಗಳಿಲ್ಲ, ತೂಕದಲ್ಲೂ ಬದಲಾವಣೆಯಿಲ್ಲ, ಆಕಾರದಲ್ಲಿ ಮಾತ್ರ ವ್ಯತ್ಯಾಸ! ಅಂದಮೇಲೆ ಯಾಕೆ ಈ ರೀತಿಯ ವೈವಿಧ್ಯ ಎಂಬ ಜಿಜ್ಞಾಸೆ ಹುಟ್ಟಿಕೊಳ್ಳುತ್ತದೆ. ಕೆಲವಷ್ಟು ಜನರಿಗೆ ಮಾತ್ರೆಯನ್ನು ಸಲೀಸಾಗಿ ನುಂಗಲು ಬರುತ್ತದೆ. ಆದರೆ ಗುಳಿಗೆ ಗಂಟಲ ಕೆಳಗಿಳಿಯುವುದಿಲ್ಲ! ಇನ್ನೂ ಕೆಲವರಿಗೆ ದುಂಡಾಕಾರದ ಗುಳಿಗೆ ನುಂಗುವುದು ಬಲು ಸಲೀಸು, ಚಪ್ಪಟೆಯಾದ ಮಾತ್ರೆಯನ್ನು ನುಂಗಲು ಹರಸಾಹಸ ಪಡುತ್ತಾರೆ! ಅಚ್ಚರಿಯ ಸಂಗತಿಯೆಂದರೆ ಕೆಲವು ಚಿಕ್ಕಮಕ್ಕಳು ಮಾತ್ರೆಯನ್ನು ಅದು ಹೇಗೋ ಸೇವಿಸಿ ಬಿಡುತ್ತಾರೆ, ಸಿರಪ್ ಕೊಟ್ಟರೆ ಗಂಟಲ ಕೆಳಗಿಳಿಯುವುದೇ ಇಲ್ಲ! ಕೆಲವು ರೋಗಿಗಳಿಗೆ ಚೂರ್ಣವೆಂದರೆ ಅಷ್ಟಕ್ಕಷ್ಟೇ. ಕಷಾಯ ಎಂಬ ಹೆಸರು ಹೇಳಿದೊಡನೆಯೇ ದೂರ ಓಡಿಹೋಗುವ ಕೋಮಲ ಶರೀರಿಗಳೂ ಇರುತ್ತಾರೆ! ಎಣ್ಣೆಯನ್ನು ಮೈಮೇಲೆ ಹಚ್ಚುವುದೆಂದರೆ ಅಸಹ್ಯ ಪಡುವವರೂ ಸಿಗುತ್ತಾರೆ. ಔಷಧೀಯ ಎಣ್ಣೆ ಅಥವಾ ತುಪ್ಪ ಕುಡಿಯುವುದು ಎಂಬುದನ್ನು ಮನದಲ್ಲಿ ನೆನೆದಾಗಲೇ ವಾಕರಿಕೆ ಆಗುವವರೂ ಇರುತ್ತಾರೆ. ಔಷಧದ ರೂಪ ಗುಣಗಳು ಮನಸ್ಸಿಗೆ ಹಿಡಿಸುತ್ತಿಲ್ಲ ಎಂದಾದರೆ ಅವುಗಳು ದೇಹದೊಳಗೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಾದರೂ ಹೇಗೆ? ಈ ನಿಟ್ಟಿನಲ್ಲಿ ಚಿಂತನೆಗೈದ ಆಯುರ್ವೆದದ ಋಷಿಮುನಿಗಳು ಇದಕ್ಕೆ ಪರಿಹಾರವಾಗಿ ಕಂಡುಕೊಂಡ ಉತ್ತರವೇ ಔಷಧಗಳ ರೂಪಗಳಲ್ಲಿ ವೈವಿಧ್ಯ!
ಇನ್ನಷ್ಟು ಸರಳವಾಗಿ ಹೇಳಬೇಕೆಂದರೆ ಸಿಹಿ ವ್ಯಂಜನಗಳಲ್ಲಿ ಕೆಲವರಿಗೆ ಪಾಯಸ ಇಷ್ಟವಿರುತ್ತದೆ. ಅದೇ ಘಟಕ ಅಂಶಗಳನ್ನು ಬಳಸಿ ಸಿಹಿತಿನಿಸನ್ನೂ ತಯಾರಿಸಲು ಸಾಧ್ಯವಾಗುತ್ತದೆ. ಸಿಹಿತಿಂಡಿ ಪ್ರಿಯರಿಗೆ ಅದೇ ರೂಪದಲ್ಲಿ ತಯಾರಿಸಿ ಕೊಡಿಸಿ. ಆಗ ಆಗುವ ಖುಷಿಯಲ್ಲಿ ಬಹಳಷ್ಟು ವ್ಯತ್ಯಾಸವಿರುತ್ತದೆ. ಇದೇ ತತ್ತ್ವವನ್ನು ಔಷಧಗಳಿಗೂ ಅನ್ವಯಿಸಬೇಕು. ರೋಗಿಗೆ ಹಿತವಾಗುವಂತಹ ರೂಪದಲ್ಲಿ ಔಷಧ ನೀಡಿದರೆ ಅದು ಕಾರ್ಯವೆಸಗುವ ರಭಸವೇ ಬೇರೆ. ಇದನ್ನರಿತು ಚರಕ ಸಂಹಿತೆಯಲ್ಲಿ 129, ಸುಶ್ರುತ ಸಂಹಿತೆಯಲ್ಲಿ 129, ಅಷ್ಟಾಂಗ ಸಂಗ್ರಹದಲ್ಲಿ 88, ಅಷ್ಟಾಂಗ ಹೃದಯದಲ್ಲಿ 76, ಕಾಶ್ಯಪ ಸಂಹಿತೆಯಲ್ಲಿ 108, ಚಕ್ರದತ್ತದಲ್ಲಿ 90, ಶಾšರ್Yಧರ ಸಂಹಿತಾದಲ್ಲಿ 74, ಭೈಷಜ್ಯ ರತ್ನಾವಲಿಯಲ್ಲಿ 98- ವಿಭಿನ್ನ ರೂಪಗಳಲ್ಲಿ ಔಷಧಗಳನ್ನು ವಿವರಿಸಿದ್ದಾರೆ. ಇಂದಿನ ಜನಸಂಖ್ಯೆಯ ಹತ್ತು ಪ್ರತಿಶತವೂ ಇದ್ದಿರದ ಆ ಕಾಲದಲ್ಲಿ ಎಲ್ಲರ ಮನಸ್ಸಿಗೂ ಹಿತವಾಗಲು ಇಷ್ಟೊಂದು ವಿಶಾಲ ಸರಣಿಯ ಔಷಧ ರೂಪಗಳನ್ನು ಪ್ರತಿಪಾದಿಸಿ ಜನರಿಗೆ ಒದಗಿಸಿದ್ದು ಅಂದಿನ ಔಷಧ ತಯಾರಿಕಾ ಕ್ಷೇತ್ರದ ವೈಜ್ಞಾನಿಕ ಉತ್ತುಂಗಕ್ಕೆ ನೇರ ಸಾಕ್ಷಿ. ಇಂದಿನ ಆಧುನಿಕ ವೈದ್ಯಕೀಯದಲ್ಲಿ ಔಷಧ ರೂಪಗಳು ಹದಿನೈದರ ಗೆರೆಯನ್ನೂ ದಾಟುವುದಿಲ್ಲ! ಔಷಧ ರೂಪಗಳ ಮೂಲಕವೂ ರೋಗಿಯ ಮನ ಗೆಲ್ಲಲು ತನ್ಮೂಲಕ ರೋಗ ಗೆಲ್ಲಲು ನೂರಾರು ಹೆಜ್ಜೆಯಿರಿಸಿದ ಭಾರತದ ವಿಶಿಷ್ಟ ಚಿಂತನಾಶಕ್ತಿಯ ವಾಸ್ತವ ನಮ್ಮೆಲ್ಲರ ಕಣ್ತೆರೆಯಲಿ.