ಕರ್ನಾಟಕದಲ್ಲಿ ಪರಿಶಿಷ್ಟ ಪಂಗಡಗಳ ಸಂಖ್ಯೆ ದೊಡ್ಡದಿದೆ. ಇವರ ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಶ್ರೇಯೋಭಿವೃದ್ಧಿಗಳಿಗೆ ಅರ್ಥಪೂರ್ಣ ಉಪಕ್ರಮಗಳನ್ನು ಕೈಗೊಂಡರೆ ಮಾತ್ರ ನವಕರ್ನಾಟಕ ನಿರ್ವಣದ ಕನಸು ನನಸಾಗುತ್ತದೆ ಎನ್ನುವುದು ಬಿಜೆಪಿಯ ನಂಬಿಕೆಯಾಗಿದೆ. ಏಕೆಂದರೆ, ಸರಕಾರವೊಂದು ಇದೆಲ್ಲವೂ ಆಗುವಂಥ ಸಂವಿಧಾನಾತ್ಮಕ ಮತ್ತು ಶಾಸನಾತ್ಮಕ ಕ್ರಮಗಳನ್ನು ರೂಪಿಸುವುದನ್ನು ತನ್ನ ಆದ್ಯ ಕರ್ತವ್ಯವೆಂದು ಭಾವಿಸಿದಾಗ ಮಾತ್ರ ಸಾಧ್ಯ. ಇಲ್ಲದೆ ಹೋದರೆ, ತಾತ್ಕಾಲಿಕ ಲೆಕ್ಕಾಚಾರಗಳಲ್ಲಿ ಅಥವಾ ತಕ್ಷಣದ ಜನಪ್ರಿಯತೆಯಲ್ಲಿ ಎಲ್ಲವೂ ಕಳೆದುಹೋಗುತ್ತವಷ್ಟೆ. ಇದು ಸಾಧ್ಯವಾಗಬೇಕೆಂದರೆ, ಸಾಮಾಜಿಕ ಬದ್ಧತೆಯೂ ಮೇಳೈಸಿರುವ ಅಭಿವೃದ್ಧಿಕೇಂದ್ರಿತ ರಾಜಕಾರಣದ ಸಂಸ್ಕೃತಿಯ ಮೇಲೆ ನಂಬಿಕೆ ಬೆಳೆಸಿಕೊಂಡಾಗ ಮಾತ್ರ ಇದು ನಿಜವಾಗುತ್ತದೆ ಎನ್ನುವುದೂ ಅಷ್ಟೇ ಸತ್ಯ. ಇಲ್ಲದೆ ಹೋದರೆ, ಪರಿಶಿಷ್ಟ ಪಂಗಡಗಳ ಆರ್ಥಿಕ ಪ್ರಗತಿ ಅಸಂಭವವಾಗಿಯೇ ಉಳಿದುಬಿಡುತ್ತದೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಮತ್ತು ಕೇಂದ್ರದಲ್ಲಿ ಕಳೆದ ಎಂಟು ವರ್ಷಗಳಿಂದ ನಿಷ್ಕಳಂಕ ಆಡಳಿತ ನಡೆಸುತ್ತಿರುವ ಬಿಜೆಪಿಯ ಡಬಲ್ ಎಂಜಿನ್ ಸರಕಾರವು ಈ ನಿಟ್ಟಿನಲ್ಲಿ ಹತ್ತುಹಲವು ಹೆಜ್ಜೆಗಳನ್ನು ಇಟ್ಟಿದ್ದು, ಹೊಸ ಚರಿತ್ರೆಯನ್ನೇ ನಿರ್ವಿುಸಿದೆ ಎನ್ನುವುದು ಹೆಗ್ಗಳಿಕೆಯ ಸಂಗತಿಯಾಗಿದೆ.
ಉದಾಹರಣೆಗೆ, ಮೀಸಲಾತಿಯ ವಿಚಾರವನ್ನೇ ನೋಡಬಹುದು. ಹಿಂದಿನ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರವು ಪರಿಶಿಷ್ಟ ಪಂಗಡಗಳ ಉದ್ಧಾರದ ಬಗ್ಗೆ ದೊಡ್ಡದೊಡ್ಡ ಮಾತುಗಳನ್ನೇ ಆಡುತ್ತಿತ್ತು. ಆದರೆ, ಯಥಾಪ್ರಕಾರ ಒಂದು ಸಮಿತಿಯನ್ನು ರಚಿಸಿ, ಎಂದಿನಂತೆ ಅಲ್ಲೇ ವಿರಮಿಸಿತು. ಏಕೆಂದರೆ, ಕಾಂಗ್ರೆಸ್ ಪಕ್ಷಕ್ಕೆ ಈ ಸಮಾಜದ ಬಗೆಗಿರುವುದು ನೈಜ ಕಳಕಳಿಯಲ್ಲ; ಅದೇನಿದ್ದರೂ ಮೊಸಳೆ ಕಣ್ಣೀರು. ಆದರೆ, ಬಿಜೆಪಿ ಮಾತ್ರ ಇದಕ್ಕೆ ಬೇಕಾದ ಇಚ್ಛಾಶಕ್ತಿಯನ್ನು ಪ್ರದರ್ಶಿಸುತ್ತ ಬಂದಿದೆ. ಹೀಗಾಗಿ, ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದ ಸಮಿತಿಯು ಪರಿಶಿಷ್ಟ ಪಂಗಡಗಳಿಗೆ ಕೊಡುವ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಈಗ ಚಾಲ್ತಿಯಲ್ಲಿರುವ ಶೇಕಡ 3ರಿಂದ ಶೇಕಡ 7ಕ್ಕೆ ಹೆಚ್ಚಿಸಬೇಕು ಎನ್ನುವ ಶಿಫಾರಸನ್ನು ನಾವು ಪ್ರಾಮಾಣಿಕವಾಗಿ ಅಂಗೀಕರಿಸಿದ್ದೇವೆ. ಇದು ಈ ಸಮುದಾಯಗಳ ಉತ್ತರೋತ್ತರ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿ, ಮನ್ವಂತರವನ್ನು ಸೃಷ್ಟಿಸಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ.
ಬಹಳ ದೀರ್ಘಕಾಲ ಪರಿಶಿಷ್ಟ ಪಂಗಡಗಳ ಪಾಲಿಗೆ ಅಭಿವೃದ್ಧಿಯೆನ್ನುವುದು ಒಂದು ಬಗೆಯಲ್ಲಿ ಕಣ್ಕಟ್ಟಿನಂತಾಗಿ ಹೋಗಿತ್ತು. ಇದನ್ನು ಗಮನಿಸಿದ ಬಿಜೆಪಿ ಸರಕಾರವು ಈ ಸಮುದಾಯಗಳ ಕಲ್ಯಾಣವನ್ನು ಸಾಧಿಸಲೆಂದೇ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಿತು. ಇಷ್ಟೇ ಅಲ್ಲ, 2019-20 ಮತ್ತು 2022-23ರ ನಡುವೆ ರಾಜ್ಯ ಬಿಜೆಪಿ ಸರಕಾರವು ಟ್ರೖೆಬಲ್ ಸಬ್ಪ್ಲಾ್ಯನ್ ಅಡಿಯಲ್ಲಿ 32,905 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಒದಗಿಸಿದೆ. ಅದರಲ್ಲೂ 2021-22ನೇ ಸಾಲೊಂದರಲ್ಲೇ 7,522.20 ಕೋಟಿ ರೂ.ಗಳನ್ನು ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರವು ಪರಿಶಿಷ್ಟ ಪಂಗಡಗಳ ಒಳಿತಿಗಾಗಿ ವಿನಿಯೋಗಿಸಿದೆ.
ಮೊದಲೇ ಹೇಳಿದ ಹಾಗೆ, ಸಾಮಾಜಿಕ ಸಬಲೀಕರಣ ನಮ್ಮ ಮುಂದಿರುವ ಒಂದು ದಾರಿ; ಹಾಗೆಯೇ, ಶೈಕ್ಷಣಿಕ ಉನ್ನತಿಯನ್ನು ಸಾಧ್ಯವಾಗಿಸುವುದು ದೀರ್ಘಕಾಲೀನ ಪರಿಣಾಮವನ್ನು ಉಂಟು ಮಾಡುವಂತಹ ಪರಿಣಾಮಕಾರಿ ಹಾದಿ. ಬಿಜೆಪಿ ಸರಕಾರ ಇದನ್ನು ಮನಗಂಡಿದ್ದು, 2021-22ನೇ ಸಾಲಿನಲ್ಲಿ ಎಸ್ಟಿ ಸಮುದಾಯಗಳ 3.06 ಲಕ್ಷ ಮಕ್ಕಳಿಗೆ 37.89 ಕೋಟಿ ರೂ.ಗಳಷ್ಟು ಮೆಟ್ರಿಕ್ಪೂರ್ವ ವಿದ್ಯಾರ್ಥಿ ವೇತನವನ್ನು ನೇರವಾಗಿ ಖಾತೆಗಳಿಗೆ ವರ್ಗಾಯಿಸಿದೆ. ಹಾಗೆಯೇ, 96 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ 75.42 ಕೋಟಿ ರೂ.ಗಳನ್ನು ಇದೇ ಬಾಬ್ತಿಗೆ ವಿನಿಯೋಗಿಸಿದೆ. ಇದರ ಫಲಗಳು ಮುಂದಿನ ದಿನಗಳಲ್ಲಿ ನಿಚ್ಚಳವಾಗಿ ಕಾಣಲಿವೆ. ಇವುಗಳ ಜತೆಗೆ ಪರಿಶಿಷ್ಟ ಪಂಗಡಗಳ 887 ಪ್ರತಿಭಾವಂತರಿಗೆ ದೆಹಲಿ, ಹೈದರಾಬಾದ್ ಮತ್ತು ರಾಜ್ಯದ ಒಳಗಿರುವ ಅನೇಕ ತರಬೇತಿ ಕೇಂದ್ರಗಳಲ್ಲಿ ಐಎಎಸ್/ಐಪಿಎಸ್ ತರಹದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿ ವ್ಯವಸ್ಥೆಯನ್ನು ಬಿಜೆಪಿ ಸರಕಾರ ಮಾಡಿರುವುದನ್ನು ಇಲ್ಲಿ ಉಲ್ಲೇಖಿಸಬೇಕು.
ಸಿದ್ಧಿಗಳು, ತಳವಾರ ಮತ್ತು ಪರಿವಾರ, ಬೆಟ್ಟ ಕುರುಬ ಸಮುದಾಯಗಳು ಎಷ್ಟೋ ವರ್ಷಗಳಿಂದಲೂ ತಮ್ಮನ್ನು ಪರಿಶಿಷ್ಟ ಪಂಗಡ ಎಂದು ಪರಿಗಣಿಸಬೇಕು ಎಂದು ಹೋರಾಡುತ್ತಿದ್ದವು. ಅವುಗಳ ಈ ದನಿಯನ್ನು ಆಲಿಸಿದ್ದು ಡಬಲ್ ಎಂಜಿನ್ ಬಿಜೆಪಿ ಸರಕಾರ ಮಾತ್ರ! ಇದರಂತೆ, ರಾಜ್ಯ ಬಿಜೆಪಿ ಸರಕಾರದ ನಿರಂತರ ಅನುಸರಣ ಕಾರ್ಯ ಮತ್ತು ಕೇಂದ್ರದಲ್ಲಿರುವ ನರೇಂದ್ರ ಮೋದಿ ಅವರ ಸಾರಥ್ಯದ ಸರಕಾರದ ಸ್ಪಂದನಶೀಲತೆಯಿಂದಾಗಿ ಈ ಮೂರು ಸಮುದಾಯಗಳಿಗೂ ಈಗ ಎಸ್ಟಿ ಸ್ಥಾನಮಾನ ನೀಡಲಾಗಿದೆ. ಇಷ್ಟೇ ಅಲ್ಲ, ಉತ್ತರ ಕನ್ನಡದ ಸಿದ್ಧಿ ಜನಾಂಗಕ್ಕೆ ಸೇರಿದ ಶಾಂತಾರಾಮ ಸಿದ್ಧಿ ಅವರಂತಹ ನಿಸ್ಪೃರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವ ಮೂಲಕ ಬಿಜೆಪಿಯು ಪರಿಶಿಷ್ಟ ಪಂಗಡಗಳ ಏಳ್ಗೆಯ ಬಗ್ಗೆ ತನಗಿರುವ ಕಳಕಳಿಯು ನೈಜವಾದುದು ಎನ್ನುವುದನ್ನು ಸಾಬೀತುಪಡಿಸಿದೆ. ಇಂತಹ ಸಂಕಲ್ಪವನ್ನಾಗಲಿ, ಕಾರ್ಯಸಿದ್ಧಿಯನ್ನಾಗಲಿ ಬೇರೆ ಪಕ್ಷಗಳಿಂದ ಎಂದಾದರೂ ನಿರೀಕ್ಷಿಸಲು ಸಾಧ್ಯವೇ?
ಬಿಜೆಪಿಯು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ರಾಷ್ಟ್ರದ ಪ್ರಥಮ ಪ್ರಜೆಯಾಗಿ ಒಡಿಸ್ಸಾದ ಬುಡಕಟ್ಟು ಮೂಲದವರಾದ ದ್ರೌಪದಿ ಮುಮು ಅವರನ್ನು ತನ್ನ ನೇತೃತ್ವದ ಎನ್.ಡಿ.ಎ ಒಕ್ಕೂಟದ ಅಧಿಕೃತ ರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಘೊಷಿಸಿತು. ಇದರಲ್ಲಿಯೂ ಬಿಜೆಪಿಯ ಸಮತ್ವದ ಕಳಕಳಿ ಕಾಣಬಹುದಾಗಿದೆ. ಅಂತೆಯೇ ಕಾಂಗ್ರೆಸ್ಸಿನ ನಿಸ್ತೇಜ ಮತ್ತು ಸತ್ವಹೀನ ರಾಜಕೀಯದ ಕುರುಹು ಇದಾಗಿದೆ; ಏಕೆಂದರೆ ಸಮತ್ವದ ನೆಲೆಯಲ್ಲಿ ನಂಬಿಕೆ ಇರುವಂತಿದ್ದರೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನೇ ಹಾಕಬಾರದಿತ್ತು. ಎಂದಿನಂತೆ ತನ್ನ ರಾಜಕೀಯ ನಾಟಕವನ್ನು ಮುಂದುವರಿಸಿದ ದೇಶದ ಅತಿ ಪುರಾತನ ಪಕ್ಷ ದ್ರೌಪದಿ ಮುಮು ವಿರುದ್ಧ ತನ್ನ ಅಭ್ಯರ್ಥಿಯನ್ನು ಹಾಕಿ ಪರಿಶಿಷ್ಟ ಪಂಗಡದವರ ಬಗೆಗಿನ ತನ್ನ ನಿಲುವನ್ನು ಜಾಹೀರುಪಡಿಸಿತು. ಇಲ್ಲಿ ಮರೆಯಬಾರದ ಹಾಗೂ ಮರೆಯಲಾಗದ ಒಂದು ನಾಚಿಕೆಗೇಡಿನ ಸಂಗತಿ ಎಂದರೆ, ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ರಾಷ್ಟ್ರಪತಿ ಅಭ್ಯರ್ಥಿಯನ್ನು ಏಕವಚನದಲ್ಲಿ ಸಂಬೋಧಿಸಿ ರಾಜ್ಯದ ಸಮಷ್ಟಿ ಪ್ರಜ್ಞೆಗೆ ಕಳಂಕ ತಂದಿದ್ದು. ಇದರಲ್ಲೇ ತಿಳಿಯುತ್ತದಲ್ಲವೇ ಪರಿಶಿಷ್ಟ ಪಂಗಡದ ಬಗೆಗಿನ ಬಿಜೆಪಿಯ ಮತ್ತು ಕಾಂಗ್ರೆಸ್ಸಿನ ನೈಜ ಕಳಕಳಿ ಮತ್ತು ರೀತಿ-ರಿವಾಜುಗಳು? ದ್ರೌಪದಿ ಮುಮು ಅವರ ಆಯ್ಕೆ ರಾಷ್ಟ್ರಮಟ್ಟದಲ್ಲಿ ಬಿಜೆಪಿಯ ಕಳಕಳಿಯನ್ನು ಪ್ರದರ್ಶಿಸಿದರೆ, ನಮ್ಮದೇ ರಾಜ್ಯದಲ್ಲಿ ನೋಡುವುದಾದರೆ, ಮೈಸೂರು ಮಹಾನಗರ ಪಾಲಿಕೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಯಾವುದೇ ಮೀಸಲಾತಿ ಇರದಿದ್ದರೂ ಪರಿಶಿಷ್ಟ ಪಂಗಡದ ಶಿವಕುಮಾರ್ ಎಂಬುವರನ್ನು ತನ್ನ ಮೇಯರ್ ಆಗಿ ಕಣಕ್ಕಿಳಿಸಿ ಗೆಲ್ಲಿಸಿತು ಬಿಜೆಪಿ.
ಈ ಎಲ್ಲಾ ಆಯಾಮಗಳಲ್ಲೂ ಹಲವು ಮಜಲುಗಳಾಗಿ ಪರಿಶಿಷ್ಟ ಪಂಗಡಗಳ ಬಗೆಗೆ ಅಕ್ಕರಾಸ್ಥೆ ಹೊಂದಿದ್ದು, ಅವರ ಉದ್ಧಾರಕ್ಕಾಗಿ ಅವಿರತವಾಗಿ ಶ್ರಮಿಸಿ, ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಅಂತ್ಯೋದಯದ ಕನಸನ್ನು ನನಸು ಮಾಡುತ್ತಿರುವುದು ಬಿಜೆಪಿ ಮಾತ್ರ ಎಂದು ಹೇಳಲು ನನಗೆ ಹೆಮ್ಮೆಯೆನಿಸುತ್ತದೆ.
(ಲೇಖಕರು ಜಲಸಂಪನ್ಮೂಲ ಸಚಿವರು)