ಅಂಕಣ

ವಸುಧೈವ ಕುಟುಂಬಕಂನ ಜ್ವಲಂತ ನಿದರ್ಶನ

ಇಂದು ಸೆಪ್ಟೆಂಬರ್ 11. ಈ ದಿನ ನನಗೆ ಎರಡು ವ್ಯತಿರಿಕ್ತ ನೆನಪುಗಳು ಮರುಕಳಿಸುತ್ತವೆ. ಮೊದಲನೆಯದು, 1893ರಲ್ಲಿ ಸ್ವಾಮಿ ವಿವೇಕಾನಂದರು ತಮ್ಮ ಐತಿಹಾಸಿಕ ಷಿಕಾಗೋ ಭಾಷಣ ಮಾಡಿದ್ದು. ‘ಅಮೆರಿಕದ ಸಹೋದರ ಸಹೋದರಿಯರೇ’ ಎಂಬ ಪದಗಳೊಂದಿಗೆ ಅವರು ಸಭಾಂಗಣದಲ್ಲಿದ್ದ ಸಾವಿರಾರು ಜನರ ಹೃದಯಗಳನ್ನು ಗೆದ್ದರು. ಭಾರತದ ಅನಾದಿ ಆಧ್ಯಾತ್ಮಿಕ ಪರಂಪರೆ, ಜಾಗತಿಕ ಭಾತೃತ್ವದ ಮಹತ್ವವನ್ನು ವಿಶ್ವ ವೇದಿಕೆಗೆ ಪರಿಚಯಿಸಿದರು. ಎರಡನೆಯ ನೆನಪು, ಭಯಾನಕ 9/11 ದಾಳಿಯದ್ದು. ಭಯೋತ್ಪಾದನೆ ಮತ್ತು ಮೂಲಭೂತವಾದದ ಬೆದರಿಕೆಯಿಂದಾಗಿ ವಿವೇಕಾನಂದರ ತತ್ವವು ದಾಳಿಗೆ ಒಳಗಾಯಿತು.

ಈ ದಿನದ ಬಗ್ಗೆ ಇನ್ನೂ ಒಂದು ಗಮನಾರ್ಹ ವಿಷಯವಿದೆ. ವಸುಧೈವ ಕುಟುಂಬಕಂ ತತ್ವದಿಂದ ಪ್ರೇರಿತರಾಗಿ, ತಮ್ಮ ಇಡೀ ಜೀವನವನ್ನು ಸಾಮಾಜಿಕ ಪರಿವರ್ತನೆ, ಸಾಮರಸ್ಯ, ಸಹೋದರತ್ವದ ಮನೋಭಾವವನ್ನು ಬಲಪಡಿಸಲು ಮುಡಿಪಾಗಿಟ್ಟ ಆರೆಸ್ಸೆಸ್​ನ ಸರಸಂಘಚಾಲಕ್ ಮೋಹನ್ ಭಾಗವತ್ ಅವರ 75ನೇ ಜನ್ಮದಿನ ಇಂದು. ಆರೆಸ್ಸೆಸ್ ಶತಮಾನೋತ್ಸವದ ವರ್ಷವೇ ಇದೂ ಬಂದಿರುವುದು ಕಾಕತಾಳೀಯ. ಅವರಿಗೆ ನನ್ನ ಶುಭಾಶಯ ಕೋರಿ, ಸುದೀರ್ಘ ಆರೋಗ್ಯಕರ ಜೀವನಕ್ಕಾಗಿ ಪ್ರಾರ್ಥಿಸುತ್ತೇನೆ.

ಮೋಹನ್​ಜೀ ಕುಟುಂಬದೊಂದಿಗೆ ನನಗೆ ಗಾಢ ಬಾಂಧವ್ಯವಿದೆ. ಅವರ ತಂದೆ ದಿ. ಮಧುಕರ್ ರಾವ್ ಭಾಗವತ್​ಜೀ ಜತೆ ನಿಕಟವಾಗಿ ಕೆಲಸ ಮಾಡುವ ಸೌಭಾಗ್ಯ ನನಗೆ ದೊರಕಿತ್ತು. ನನ್ನ ಜ್ಯೋತಿಪುಂಜ್ ಪುಸ್ತಕದಲ್ಲಿ ಅವರ ಬಗ್ಗೆ ವಿವರವಾಗಿ ಬರೆದಿದ್ದೇನೆ. ಕಾನೂನು ಜಗತ್ತಿನ ಒಡನಾಟದ ಜೊತೆಗೆ, ರಾಷ್ಟ್ರ ನಿರ್ವಣಕ್ಕೂ ಅರ್ಪಿಸಿಕೊಂಡವರು. ಗುಜರಾತಿನಾದ್ಯಂತ ಆರೆಸ್ಸೆಸ್ ಬಲಪಡಿಸುವಲ್ಲಿ ಅವರದು ಪ್ರಮುಖ ಪಾತ್ರ. ಇದು ಮೋಹನ್ ಅವರನ್ನೂ ಭಾರತದ ಪುನರುತ್ಥಾನದ ಕೆಲಸಕ್ಕೆ ಪ್ರೇರೇಪಿಸಿತು. ಮೋಹನ್​ಜೀ 1970ರ ದಶಕದ ಮಧ್ಯಭಾಗದಲ್ಲಿ ಪ್ರಚಾರಕರಾದರು. ಕಾಂಗ್ರೆಸ್ ಸರ್ಕಾರ ಕಠಿಣ ತುರ್ತು ಪರಿಸ್ಥಿತಿ ಹೇರಿದ್ದ ಸಮಯ ಅದು. ಪ್ರಜಾಪ್ರಭುತ್ವ ತತ್ವಗಳನ್ನು ಗೌರವಿಸುವ, ಭಾರತ ಅಭಿವೃದ್ಧಿ ಹೊಂದಬೇಕೆಂದು ಬಯಸುವ ಮೋಹನ್​ಜೀ ಮತ್ತು ಅಸಂಖ್ಯಾತ ಸ್ವಯಂಸೇವಕರು ತುರ್ತಸ್ಥಿತಿ ವಿರೋಧಿ ಚಳವಳಿಗೆ ಸೇರಿದರು. ಮಹಾರಾಷ್ಟ್ರದ ವಿದರ್ಭದಂಥ ಗ್ರಾಮೀಣ, ಹಿಂದುಳಿದ ಪ್ರದೇಶಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದರು. ಇದು ಬಡವರು, ದೀನದಲಿತರ ಸಮಸ್ಯೆಗಳ ಬಗ್ಗೆ ಅವರ ತಿಳಿವಳಿಕೆಯನ್ನು ರೂಪಿಸಿತು.

ಹಲವು ವರ್ಷಗಳಲ್ಲಿ ಭಾಗವತ್​ಜೀ ಆರೆಸ್ಸೆಸ್​ನಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದರು. ಪ್ರತಿಯೊಂದು ಜವಾಬ್ದಾರಿಯನ್ನೂ ದಕ್ಷತೆಯಿಂದ ನಿರ್ವಹಿಸಿದರು. 1990ರ ದಶಕದಲ್ಲಿ ಅಖಿಲ ಭಾರತೀಯ ಶಾರೀರಿಕ್ ಪ್ರಮುಖ್. ಆ ಅವಧಿಯನ್ನು ಅನೇಕ ಸ್ವಯಂಸೇವಕರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಬಿಹಾರದ ಹಳ್ಳಿಗಳಲ್ಲಿ ಸಾಕಷ್ಟು ಕೆಲಸ ಮಾಡಿದರು. ತಳಮಟ್ಟದ ಸಮಸ್ಯೆಗಳೊಂದಿಗಿನ ಸಂಪರ್ಕ ಮತ್ತಷ್ಟು ಗಾಢವಾಯಿತು. 2000ರಲ್ಲಿ ಸರಕಾರ್ಯ ವಾಹ ಆದರು. ಸಂಕೀರ್ಣ ಸಂದರ್ಭಗಳನ್ನು ಸುಲಭವಾಗಿ, ನಿಖರತೆಯಿಂದ ನಿಭಾಯಿಸಿದರು. 2009ರಲ್ಲಿ ಸರಸಂಘಚಾಲಕ್ ಆದರು. ಇನ್ನೂ ಹೆಚ್ಚಿನ ಚೈತನ್ಯದಿಂದ ಕೆಲಸ ಮಾಡುತ್ತಿದ್ದಾರೆ. ಸರಸಂಘಚಾಲಕ್ ಆಗಿರುವುದು ಕೇವಲ ಒಂದು ಸಂಘಟನೆಯ ಜವಾಬ್ದಾರಿಗಿಂತ ಹೆಚ್ಚಿನದು. ಅಸಾಧಾರಣ ವ್ಯಕ್ತಿಗಳು ವೈಯಕ್ತಿಕ ತ್ಯಾಗ, ಸ್ಪಷ್ಟ ಉದ್ದೇಶ, ಭಾರತಮಾತೆಗೆ ಅಚಲವಾದ ಬದ್ಧತೆ ಮೂಲಕ ಈ ಪಾತ್ರವನ್ನು ವ್ಯಾಖ್ಯಾನಿಸಿದ್ದಾರೆ. ಮೋಹನ್​ಜೀ ಈ ಜವಾಬ್ದಾರಿಯ ಅಗಾಧತೆಗೆ ಸಂಪೂರ್ಣ ನ್ಯಾಯ ಒದಗಿಸಿದ್ದಾರೆ. ಶಕ್ತಿ, ಬೌದ್ಧಿಕ ಆಳ, ಸಹಾನುಭೂತಿಯ ನಾಯಕತ್ವ ಪ್ರದರ್ಶಿಸಿದ್ದಾರೆ. ಇವೆಲ್ಲವೂ ರಾಷ್ಟ್ರ ಮೊದಲು ಎಂಬ ತತ್ವದಿಂದ ಪ್ರೇರಿತವಾಗಿವೆ.

ಮೋಹನ್​ಜೀ ತಮ್ಮ ಹೃದಯಕ್ಕೆ ಹತ್ತಿರವಾದ ಎರಡು ವೈಶಿಷ್ಟ್ಯಳನ್ನು ಕಾರ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದಾರೆ. ಸ್ಥಿರತೆ ಮತ್ತು ಹೊಂದಾಣಿಕೆ. ಅತ್ಯಂತ ಸಂಕೀರ್ಣ ಸಂದರ್ಭಗಳಲ್ಲೂ ಸಂಘಟನೆಯನ್ನು ಮುನ್ನಡೆಸಿದ್ದಾರೆ. ಮೂಲ ಸಿದ್ಧಾಂತದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳಲಿಲ್ಲ. ಅದೇ ವೇಳೆ ಸಮಾಜದ ಬದಲಾಗುತ್ತಿರುವ ಅಗತ್ಯಗಳನ್ನು ಪೂರೈಸಿದ್ದಾರೆ. ಯುವಕರೊಂದಿಗೆ ಸಹಜ ಸಂಪರ್ಕ ಹೊಂದಿರುವುದರಿಂದ ಹೆಚ್ಚುಹೆಚ್ಚು ಯುವಜನರನ್ನು ಸಂಘ ಪರಿವಾರಕ್ಕೆ ತರುವತ್ತ ಗಮನಹರಿಸಿದ್ದಾರೆ. ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸುತ್ತಾರೆ, ಜನರೊಂದಿಗೆ ಸಂವಹನ ನಡೆಸುತ್ತಾರೆ. ಇದು ಇಂದಿನ ಕ್ರಿಯಾತ್ಮಕ, ಡಿಜಿಟಲ್ ಜಗತ್ತಿನಲ್ಲಿ ಬಹಳ ಉಪಯುಕ್ತ ಎಂದು ಸಾಬೀತಾಗಿದೆ. ಭಾಗವತ್​ಜೀ ಅವರ ಅಧಿಕಾರಾವಧಿ ಆರೆಸ್ಸೆಸ್​ನ 100 ವರ್ಷಗಳ ಪಯಣದಲ್ಲಿ ಅತ್ಯಂತ ಪರಿವರ್ತನಾಶೀಲ ಅವಧಿ. ಸಮವಸ್ತ್ರದಿಂದ ಹಿಡಿದು ಶಿಕ್ಷಾ ವರ್ಗ(ತರಬೇತಿ ಶಿಬಿರ)ಗಳಲ್ಲಿನ ಬದಲಾವಣೆವರೆಗೆ ಅನೇಕ ಪ್ರಮುಖ ಬದಲಾವಣೆಗಳಾಗಿವೆ.

ಕೋವಿಡ್ ಅವಧಿಯ ಅವರ ಪ್ರಯತ್ನಗಳೂ ವಿಶೇಷವಾಗಿವೆ. ಆಗ ಆರೆಸ್ಸೆಸ್​ನ ಸಾಂಪ್ರದಾಯಿಕ ಚಟುವಟಿಕೆಗಳನ್ನು ಮುಂದುವರಿಸುವುದು ಸವಾಲಾಗಿತ್ತು. ತಂತ್ರಜ್ಞಾನದ ಬಳಕೆ ಹೆಚ್ಚಿಸುವಂತೆ ಮೋಹನ್​ಜೀ ಸೂಚಿಸಿದರು. ಸಾಂಸ್ಥಿಕ ರಚನೆಗಳನ್ನು ಅಭಿವೃದ್ಧಿಪಡಿಸುವಾಗಲೇ ಅವರು ಜಾಗತಿಕ ದೃಷ್ಟಿಕೋನ ಹೊಂದಿದ್ದರು. ಎಲ್ಲ ಸ್ವಯಂಸೇವಕರು ತಮ್ಮ ಮತ್ತು ಇತರರ ಸುರಕ್ಷತೆ ಖಚಿತಪಡಿಸಿಕೊಂಡು, ಅಗತ್ಯವಿರುವವರನ್ನು ತಲುಪಲು ಪ್ರಯತ್ನಿಸಿದರು. ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅನೇಕ ಸ್ವಯಂಸೇವಕರನ್ನು ಕಳೆದುಕೊಂಡೆವು. ಆದರೆ ಮೋಹನ್​ಜೀ ಅವರ ಸ್ಪೂರ್ತಿ, ದೃಢಸಂಕಲ್ಪ ಎಂದಿಗೂ ಅಲುಗಾಡಲಿಲ್ಲ. ಈ ವರ್ಷದ ಆರಂಭದಲ್ಲಿ ನಾಗಪುರದ ಸಮಾರಂಭದಲ್ಲಿ ನಾನು ‘ಆರೆಸ್ಸೆಸ್ ಅಕ್ಷಯವೃಕ್ಷ ಇದ್ದಂತೆ; ರಾಷ್ಟ್ರೀಯ ಸಂಸ್ಕೃತಿ, ಸಾಮೂಹಿಕ ಪ್ರಜ್ಞೆಯನ್ನು ಚೈತನ್ಯಗೊಳಿಸುವ ಶಾಶ್ವತ ಆಲದ ಮರ’ ಎಂದು ಹೇಳಿದ್ದೆ. ಈ ಅಕ್ಷಯವಟ್​ನ ಬೇರುಗಳು ಆಳವಾಗಿ, ಬಲವಾಗಿ ಮೌಲ್ಯಗಳಲ್ಲಿ ಬೇರೂರಿವೆ. ಮೋಹನ್​ಜೀ ಈ ಮೌಲ್ಯಗಳನ್ನು ಪೋಷಿಸಿ ಮುನ್ನಡೆಸಲು ತಮ್ಮನ್ನು ಸಮರ್ಪಿಸಿಕೊಂಡಿರುವುದು ಸ್ಪೂರ್ತಿದಾಯಕವಾಗಿದೆ.

ಮೋಹನ್​ಜೀ ವ್ಯಕ್ತಿತ್ವದ ಮತ್ತೊಂದು ಪ್ರಶಂಸನೀಯ ಗುಣವೆಂದರೆ ಮೃದುಮಾತು. ಅವರ ಆಲಿಸುವ ಸಾಮರ್ಥ್ಯವೂ ಅಸಾಧಾರಣ. ಇದು ಅವರ ವ್ಯಕ್ತಿತ್ವಕ್ಕೆ, ನಾಯಕತ್ವಕ್ಕೆ ಸೂಕ್ಷ್ಮತೆ, ಘನತೆ ತಂದಿದೆ. ವಿವಿಧ ಜನಾಂದೋಲನಗಳಲ್ಲಿ ಅವರ ಆಸಕ್ತಿಯೂ ಅನನ್ಯ. ಸ್ವಚ್ಛ ಭಾರತ ಮಿಷನ್​ನಿಂದ ಹಿಡಿದು ಬೇಟಿ ಬಚಾವೋ, ಬೇಟಿ ಪಢಾವೋವರೆಗೆ ಎಲ್ಲ ಆಂದೋಲನಗಳಿಗೆ ಶಕ್ತಿ ನೀಡಿದ್ದಾರೆ. ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸಲು ಅವರು ಸಾಮರಸ್ಯ, ಕುಟುಂಬ ಮೌಲ್ಯ, ಪರಿಸರ ಜಾಗೃತಿ, ರಾಷ್ಟ್ರೀಯ ಅಸ್ಮಿತೆ, ನಾಗರಿಕ ಕರ್ತವ್ಯವೆಂಬ ‘ಪಂಚ ಪರಿವರ್ತನ’ ಸೂತ್ರ ನೀಡಿದ್ದಾರೆ. ಇವು ಎಲ್ಲ ಭಾರತೀಯರಿಗೆ ಸ್ಪೂರ್ತಿ. ಬಲಿಷ್ಠ, ಸಮೃದ್ಧ ರಾಷ್ಟ್ರದ ಕನಸು ನನಸಾಗಿಸಬಲ್ಲ ಸ್ಪಷ್ಟ ದೃಷ್ಟಿಕೋನ, ನಿರ್ಣಾಯಕ ಕ್ರಮ ಎರಡೂ ಗುಣಗಳು ಮೋಹನ್​ಜೀ ಅವರಲ್ಲಿವೆ. ಅವರು ‘ಏಕ್ ಭಾರತ್ ಶ್ರೇಷ್ಠ ಭಾರತ್’ನ ಪ್ರಬಲ ಪ್ರತಿಪಾದಕರು. ದೇಶದ ವೈವಿಧ್ಯಮಯ ಸಂಸ್ಕೃತಿ, ಸಂಪ್ರದಾಯಗಳಲ್ಲಿ ಅವರಿಗೆ ದೃಢ ನಂಬಿಕೆ. ಬಿಡುವಿಲ್ಲದ ಕೆಲಸಗಳ ನಡುವೆಯೂ ಮೋಹನ್​ಜೀ ಸಂಗೀತ, ಗಾಯನಕ್ಕೆ ಸಮಯ ನೀಡುತ್ತಾರೆ. ಅವರು ವಿವಿಧ ಭಾರತೀಯ ಸಂಗೀತ ವಾದ್ಯಗಳಲ್ಲಿ ಪರಿಣಿತರೆಂಬುದು ಹಲವರಿಗೆ ತಿಳಿದಿಲ್ಲ. ಅವರ ಓದುವ ಉತ್ಸಾಹವೇ ಭಾಷಣಗಳಲ್ಲಿ, ಸಂವಾದಗಳಲ್ಲಿ ಕಾಣಿಸುತ್ತದೆ.

ಈ ವರ್ಷ ವಿಜಯದಶಮಿ, ಗಾಂಧಿ ಜಯಂತಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಮತ್ತು ಆರೆಸ್ಸೆಸ್ 100ನೇ ವರ್ಷಾಚರಣೆ ಒಂದೇ ದಿನ ಬರುತ್ತಿರುವುದು ಸಂತೋಷದ ವಿಷಯ. ಆರೆಸ್ಸೆಸ್​ನೊಂದಿಗೆ ಸಂಬಂಧ ಹೊಂದಿರುವ ಲಕ್ಷಾಂತರ ಜನರಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲು. ಈ ಸಂದರ್ಭದಲ್ಲಿ ಅತ್ಯಂತ ತಿಳಿವಳಿಕೆಯುಳ್ಳ ಕಠಿಣ ಪರಿಶ್ರಮಿ ಮೋಹನ್​ಜೀ ಸರಸಂಘಚಾಲಕರಾಗಿ ಸಂಘಟನೆಯನ್ನು ಮುನ್ನಡೆಸುತ್ತಿದ್ದಾರೆ. ನಾವು ಎಲ್ಲೆಗಳನ್ನು ಮೀರಿ ಎಲ್ಲರನ್ನೂ ನಮ್ಮವರೆಂದು ಪರಿಗಣಿಸಿದಾಗ, ಅದು ಸಮಾಜದಲ್ಲಿ ನಂಬಿಕೆ, ಸಹೋದರತ್ವ, ಸಮಾನತೆಯನ್ನು ಬಲಪಡಿಸುತ್ತದೆ. ಇಂತಹ ‘ವಸುಧೈವ ಕುಟುಂಬಕಂ’ನ ಜ್ವಲಂತ ಉದಾಹರಣೆ ಮೋಹನ್​ಜೀ. ಭಾರತಮಾತೆಯ ಸೇವೆಯಲ್ಲಿ ಸುದೀರ್ಘ, ಆರೋಗ್ಯಕರ ಜೀವನ ಅವರದಾಗಲಿ.