ಅಂಕಣ

ಧರ್ಮಾಂಧರ ಸೈತಾನಿ ಮೆದುಳಿಗೆ ಒಂದಿಷ್ಟು ಸಿಂಧೂರ

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಮೇ 6-7ರ ಮಧ್ಯರಾತ್ರಿ ಭಾರತೀಯ ಉಪಖಂಡದ ಆಧುನಿಕ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಆ ಗಳಿಗೆಯಿಂದ ಮುಂದಿನ ತೊಂಬತ್ತಾರು ತಾಸುಗಳಲ್ಲಿ ಏಷ್ಯಾದ ಸೇನಾ, ರಾಜಕೀಯ, ರಾಜತಾಂತ್ರಿಕ ಹಾಗೂ ಭೂ-ಸಾಮರಿಕ ವಾಸ್ತವಗಳು ಸಂಪೂರ್ಣವಾಗಿ ಬದಲಾಗಿ ಹೋದವು, ಭಾರತದ ಆಪರೇಷನ್ ಸಿಂಧೂರ್ ಎದುರು ಪಾಕಿಸ್ತಾನದ ಬುನಿಯಾನ್-ಉನ್-ಮರ್ಸಸ್ ನುಚ್ಚು ನೂರಾಯಿತು, ಆ ದುರುಳ ದೇಶದ ರಕ್ಷಣಾ ಶಕ್ತಿ ಪುಡಿಪುಡಿಯಾದರೆ ಅಣ್ವಸ್ತ್ರ ಸಾಮರ್ಥ್ಯ ಕರಗಿಹೋಗಿ ಅದಕ್ಕೇ ಘಾತಕ ಅಪಾಯವೊಡ್ಡತೊಡಗಿತು, ಏಷ್ಯಾದಲ್ಲಿ ಚೀನಾವನ್ನು ಹಿಂದೆ ಹಾಕಿ ಭಾರತ ಅತ್ಯಂತ ಪ್ರಬಲ ಸೇನಾಶಕ್ತಿಯಾಗಿ ಹೊರಹೊಮ್ಮಿತು!

ಆ ನಿರ್ಣಾಯಕ ನಾಲ್ಕು ದಿನಗಳಲ್ಲಿ ಆದದ್ದೇನು?

ಏಪ್ರಿಲ್ 22ರಂದು ನಮ್ಮ ಇಪ್ಪತ್ತಾರು ನಾರಿಯರ ಹಣೆಯ ಸಿಂಧೂರವನ್ನು ಅಳಿಸಲು ಪಾಕಿಸ್ತಾನ ಪ್ರಯತ್ನಿಸಿದ ಇಪ್ಪತ್ತನಾಲ್ಕು ತಾಸುಗಳಲ್ಲಿ ಆ ದೇಶವನ್ನು ಆರ್ಥಿಕವಾಗಿ ಮತ್ತು ರಾಜತಾಂತ್ರಿಕವಾಗಿ ಶಿಕ್ಷಿಸುವ ಕ್ರಮವನ್ನು ಭಾರತ ಆರಂಭಿಸಿತು. ಅದಾಗಿ ಒಂದು ದಿನ ಕಳೆಯುವುದರೊಳಗೆ ಭಾರತದ ನಡೆಯನ್ನು ಮತ್ತಷ್ಟು ಹರಿತಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ‘ಆತಂಕವಾದಿಗಳ ಅಳಿದುಳಿದ ನೆಲವನ್ನು ಮಣ್ಣಿನಲ್ಲಿ ಮಣ್ಣಾಗಿಸುವ ಸಮಯ ಬಂದಿದೆ, ಭಯೋತ್ಪಾದಕರನ್ನು ಗುರುತಿಸಲು, ಹುಡುಕಲು ಮತ್ತು ಶಿಕ್ಷಿಸಲು ನಾವು ಭೂಮಿಯ ಅಂಚಿನವರೆಗೂ ಹೋಗುತ್ತೇವೆ, ಭಾರತದ ಶತ್ರುಗಳು ಊಹಿಸಿಕೊಳ್ಳಲೂ ಆಗದ ಬಗೆಯ ಶಿಕ್ಷೆಯನ್ನು ನಾವು ಅವರಿಗೆ ನೀಡುತ್ತೇವೆ’ ಎಂದು ಸಾರ್ವಜನಿಕವಾಗಿ ಘೊಷಿಸಿ ಭಾರತದ ನಿರ್ಧಾರವನ್ನು ಜಗತ್ತಿಗೆ ತಿಳಿಸಿದರು.

ಇದರರ್ಥ ಭಾರತ ಸೇನಾ ಕಾರ್ಯಾಚರಣೆಗೆ ಸಜ್ಜಾಗುತ್ತಿದೆ ಎಂದು ಪಾಕಿಸ್ತಾನೀಯರಿಗೆ ಮನವರಿಕೆಯಾಯಿತು. ಆದರೆ ಅದನ್ನೆದುರಿಸುವ ಸಾಮರ್ಥ್ಯ ತಮಗಿಲ್ಲ ಎನ್ನುವುದನ್ನೂ ಆ ದೇಶದ ಸೇನಾ ಮತ್ತು ರಾಜಕೀಯ ನಾಯಕತ್ವ ಗುರುತಿಸಿತು. ಅದು ವ್ಯಕ್ತವಾದದ್ದು ಆ ವಾರಾಂತ್ಯದ ಹೊತ್ತಿಗೆ ಆ ದುರುಳ ದೇಶದ ಭಯೋತ್ಪಾದಕ ಮನಸ್ಥಿತಿಯ ಪ್ರತೀಕವಾದ ಐಎಸ್​ಐನ ಮುಖ್ಯಸ್ಥ ಲೆ.ಜ. ಆಸಿಫ್ ಮಲಿಕ್ ‘ಸುರಕ್ಷತೆ’ಗಾಗಿ ತಮ್ಮ ಸಂಸಾರವನ್ನು ನ್ಯೂರ್ಯಾಗೆ ಮತ್ತು ಸೇನಾ ದಂಡನಾಯಕ ಜ. ಆಸಿಮ್ ಮುನೀರ್ ತಮ್ಮ ಕುಟುಂಬವನ್ನು ಲಂಡನ್​ಗೆ ಕಳುಹಿಸಿದಾಗ. ಪಾಕಿಸ್ತಾನದ ಇತರ ಕೋಟ್ಯಂತರ ನಾರಿಯರ ಮತ್ತು ಮಕ್ಕಳ ಸುರಕ್ಷೆಯ ಚಿಂತೆ ಅವರಿಗಿರಲಿಲ್ಲ. ಅಷ್ಟೇ ಅಲ್ಲ, ಅದೇ ಸಮಯಕ್ಕೆ ಜ. ಮುನೀರ್ ಭೂಗತರಾದದ್ದು ಮತ್ತು ಮತ್ತು ಪ್ರಧಾನಿ ಶೆಹ್​ಬಾಜ್ ಶರೀಫ್ ರಾವಲ್ಪಿಂಡಿಯ ಸೇನಾ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂತು.

ಶರೀಫ್​ರ ಆಸ್ಪತ್ರೆವಾಸದ ಕಾರಣ ಉಲ್ಬಣಿಸಿದ ಮುಳವ್ಯಾಧಿ ಎಂದು ಹೇಳುವ ದಾಖಲೆಗಳು ಕಾಣಿಸಿಕೊಂಡರೂ ಮುನೀರ್ ಅದೃಶ್ಯರಾದ ಬಗ್ಗೆ ಊಹೆಗಳೆದ್ದವು. ತಮ್ಮ ಸೇನೆಯಲ್ಲೇ ವಿದ್ರೋಹವೆದ್ದು ಅದರಿಂದಾಗಿ ತಮ್ಮ ಜೀವಕ್ಕೇ ಅಪಾಯವನ್ನು ಕಂಡು ಅವರು ರಾವಲ್ಪಿಂಡಿಯ ಸೇನಾವಲಯದ ಬಂಕರ್ ಒಂದರಲ್ಲಿ ಅಡಗಿಕೂತರು ಎಂಬ ಮಾತುಗಳು ಕೇಳಿಬಂದವು. ಆದರೆ ಶರೀಫ್ ಮತ್ತು ಮುನೀರ್ ಇಬ್ಬರ ಕುರಿತಾಗಿನ ಈ ಮಾತುಗಳು ಸತ್ಯದೂರ ಎಂದು ನನಗನಿಸುತ್ತದೆ. ನನ್ನ ಈ ಅನುಮಾನಕ್ಕೆ ಇತಿಹಾಸದಲ್ಲಿ ನಿಖರ ಉದಾಹರಣೆ ಇದೆ. ಅದು 1965ರ ಯುದ್ಧದ ದಿನಗಳು. ‘ಇನ್ನು ಹದಿನೈದು ದಿನಗಳಲ್ಲಿ ನಾವು ದೆಹಲಿಯಲ್ಲಿರುತ್ತೇವೆ, ಕೆಂಪುಕೋಟೆಯ ಮೇಲೆ ಪಾಕಿಸ್ತಾನಿ ಧ್ವಜ ಹಾರಿಸುತ್ತೇವೆ’ ಎಂದು ಹಮ್ಮಿನಿಂದ ಹೇಳಿಕೊಂಡು ಯುದ್ಧ ಆರಂಭಿಸಿದ ಸೇನಾ ಸರ್ವಾಧಿಕಾರಿ ಅಯೂಬ್ ಖಾನ್ ಅದೇ ಹದಿನೈದು ದಿನದಲ್ಲಿ ಸೋಲಿನ ಅಂಚಿಗೆ ಬಂದುನಿಂತರು.

ಅವರು ಕಂಗಾಲಾದದ್ದು ಸೇನೆಯ ಮದ್ದುಗುಂಡು ದಾಸ್ತಾನು ಕ್ಷೀಣಗೊಳ್ಳುತ್ತಿದ್ದುದನ್ನು ಕಂಡು. ಆಗ ಸಹಾಯವನ್ನರಸಿ ಅವರು ವಾಯುಸೇನೆಯ ನಿವೃತ್ತ ಮುಖ್ಯಸ್ಥ ನೂರ್ ಖಾನ್ ಅವರನ್ನು ರಹಸ್ಯವಾಗಿ ಚೀನಾ, ಇಂಡೋನೇಷ್ಯಾ ಮತ್ತು ತುರ್ಕಿಗಳಿಗೆ ಕಳುಹಿಸಿದರು. ಅಷ್ಟೇ ಅಲ್ಲ, ಯುದ್ಧದ ದಿನಗಳಲ್ಲೇ ಖುದ್ದಾಗಿ ಚೀನಾಗೆ ಹಾರಿದರು! ಅವರ ರಹಸ್ಯ ಚೀನಾ ಭೇಟಿ ತಿಳಿದಿದ್ದದ್ದು ಸರ್ಕಾರದ ಅತಿ ಉನ್ನತ ವಲಯದ ಬೆರಳೆಣಿಕೆಯಷ್ಟು ಜನಕ್ಕೆ ಮಾತ್ರ. ಆ ವಿಷಯ ಅಧ್ಯಕ್ಷರ ನಿವಾಸದಲ್ಲೂ ಒಂದಿಬ್ಬರ ಹೊರತಾಗಿ ಯಾರಿಗೂ ತಿಳಿದಿರಲಿಲ್ಲ. ‘ಅಧ್ಯಕ್ಷರು ಹಠಾತ್ತಾಗಿ ಅನಾರೋಗ್ಯಕ್ಕೊಳಗಾಗಿದ್ದಾರೆ, ಹಾಗಾಗಿ ಅವರು ತಮ್ಮ ಮಲಗುವ ಕೋಣೆಯಿಂದ ಹೊರಬರುತ್ತಿಲ್ಲ, ಯಾರನ್ನೂ ಭೇಟಿಯಾಗುವುದಿಲ್ಲ’ ಎಂಬ ಸುಳ್ಳುಸುದ್ದಿಯನ್ನು ಉದ್ದೇಶಪೂರ್ವಕವಾಗಿ ಅಧ್ಯಕ್ಷ ನಿವಾಸದಲ್ಲೇ ಹರಡಲಾಯಿತು. ಆ ಸುಳ್ಳನ್ನು ನಿಜಗೊಳಿಸಲು ಪ್ರತಿ ಬೆಳಿಗ್ಗೆ ಅಧ್ಯಕ್ಷ ಕೋಣೆಯೊಳಗೆ ಬೆಡ್ ಕಾಫಿಯನ್ನು ಕೊಂಡೊಯ್ಯಲಾಗುತ್ತಿತ್ತು! ‘ರೋಗಿಯ ಪಥ್ಯದ ಊಟ’ ಸಹ ಸಮಯಕ್ಕೆ ಸರಿಯಾಗಿ ಕೋಣೆಯೊಳಗೆ ಹೋಗುತ್ತಿತ್ತು!

ಇದೇ ಕಳ್ಳಾಟವನ್ನು ಪಾಕಿಸ್ತಾನೀಯರು ಅಮೆರಿಕನ್ನರಿಗೂ ಕಲಿಸಿದರು. 1971ರ ಜುಲೈ ಮಧ್ಯಭಾಗದಲ್ಲಿ ಅಮೆರಿಕಾದ ಅಂದಿನ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಹೆನ್ರಿ ಕಿಸಿಂಜರ್ ಪಾಕಿಸ್ತಾನಕ್ಕೆ ಅಧಿಕೃತ ಭೇಟಿ ನೀಡಿದರು, ಅನಾರೋಗ್ಯಕ್ಕೊಳಗಾಗಿದ್ದೇನೆ ಎಂದು ಅದೃಶ್ಯರಾದರು. ಅವರು ಗಡಿನಾಡಿನ ಆರೋಗ್ಯಧಾಮವೊಂದರಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆಂದು ಅಮೆರಿಕಾ ಮತ್ತು ಪಾಕಿಸ್ತಾನಿ ಸರ್ಕಾರಗಳು ಜಾಗತಿಕ ಸುದ್ದಿಮಾಧ್ಯಮಗಳಿಗೆ ಹೇಳಿಕೆ ಕೊಟ್ಟವು. ಮೂರು ದಿನಗಳ ನಂತರ ಕಿಸಿಂಜರ್ ‘ಆರೋಗ್ಯ ಸುಧಾರಿಸಿಕೊಂಡು’ ಇಸ್ಲಾಮಾಬಾದ್​ನಲ್ಲಿ ಕಾಣಿಸಿಕೊಂಡರು, ಸ್ವದೇಶಕ್ಕೂ ಹಿಂತಿರುಗಿದರು. ಆ 3 ದಿನಗಳಲ್ಲಿ ಅವರು ಚೀನಾಗೆ ರಹಸ್ಯವಾಗಿ ಭೇಟಿ ನೀಡಿ ಅಮೆರಿಕಾ ಮತ್ತು ಕಮ್ಯೂನಿಸ್ಟ್ ಚೀನಾಗಳ ನಡುವೆ ಸಂಬಂಧವೃದ್ಧಿಗೆ ಅಸ್ತಿಭಾರ ಹಾಕಿದ್ದರು ಎಂಬ ವಿಷಯ ಶ್ವೇತಭವನದಿಂದ ಪ್ರಕಟವಾದಾಗ ಜಗತ್ತು ಕುಮಟಿಬಿದ್ದಿತು.

ಅರವತ್ತು ವರ್ಷಗಳ ಹಿಂದೆ ಅಯೂಬ್ ಖಾನ್ ಮಾಡಿದ್ದನ್ನೇ ಇಂದು ಶರೀಫ್ ಮತ್ತು ಮುನೀರ್ ಮಾಡಿರುವ ಸಾಧ್ಯತೆ ಇದೆ. ಪೆಹಲ್​ಗಾಮ್ ಭಯೋತ್ಪಾದಕ ಹತ್ಯಾಕಾಂಡಕ್ಕೆ ಪ್ರತಿಯಾಗಿ ಭಾರತ ದೊಡ್ಡ ಪ್ರಮಾಣದ ಸೇನಾ ಕಾರ್ಯಾಚರಣೆಗೆ ಮುಂದಾಗುತ್ತದೆ ಎಂದು ಅವರಿಬ್ಬರೂ ನಿರೀಕ್ಷಿಸಿರಲೇ ಇಲ್ಲ. ಆಕ್ರಮಿತ ಕಾಶ್ಮೀರದಲ್ಲಿ ಒಂದೆರಡು ಸರ್ಜಿಕಲ್ ದಾಳಿ, ಮತ್ತೊಂದು ಬಾಲಾಕೋಟ್ ಅಷ್ಟೇ ಭಾರತದ ಆಯ್ಕೆ ಎಂದವರು ತಿಳಿದಿದ್ದರು. ಆದರೆ ಈ ಬಾರಿ ತಮಗೆ ಕಾದಿರುವುದೇನು ಎಂದು ನಿಚ್ಚಳವಾಗು ತ್ತಿದ್ದಂತೆಯೇ ಇಬ್ಬರೂ ಕಂಗೆಟ್ಟರು. ಯಾಕೆಂದರೆ ಕಳೆದ ಎರಡೂವರೆ- ಮೂರು ವರ್ಷಗಳಲ್ಲಿ ಭಾರತದಿಂದ ಯಾವುದೇ ಅಪಾಯವನ್ನು ನಿರೀಕ್ಷಿಸದೇ ಅವರು ತಮ್ಮ ಸೇನೆಯ ದೊಡ್ಡ ಭಾಗವನ್ನು ಅಫ್ಘನ್ ಗಡಿ ಮತ್ತು ಬಲೂಚಿಸ್ತಾನದಲ್ಲಿ ನಿಯೋಜಿಸಿಬಿಟ್ಟಿದ್ದರು. ಅಲ್ಲದೇ, ಸೇನೆಯ ಹಣಕಾಸಿನ ತುರ್ತು ಅಗತ್ಯವನ್ನು ಪೂರೈಸಿ ಕೊಳ್ಳಲೆಂದು ಯುದ್ಧದಂತಹ ತೀವ್ರತಮ ವಿಷಮ ಸನ್ನಿವೇಶಗಳಲ್ಲಿ ಬಳಸುವಂತಹ ಶಸ್ತ್ರಾಸ್ತ್ರಗಳನ್ನು ಯೂಕ್ರೇನ್​ಗೆ ಮಾರಿಬಿಟ್ಟಿದ್ದರು! ಅದರಿಂದ ಬಂದ 850 ಮಿಲಿಯನ್ ಡಾಲರ್​ಗಳಷ್ಟು ಹಣವನ್ನು ಸೈನಿಕರಿಗೆ ಸಂಬಳ ಮತ್ತಿತರ ತುರ್ತು ಖರ್ಚುಗಳಿಗಾಗಿ ಬಳಸಲಾಯಿತು. ಟ್ಯಾಂಕ್​ಗಳು ಮತ್ತು ಫಿರಂಗಿಗಳಲ್ಲಿ ಬಳಸುವ 155 ಎಂಎಂ ಹಾಗೂ 122 ಎಂಎಂ ಶೆಲ್​ಗಳನ್ನೂ 364 ಮಿಲಿಯನ್ ಡಾಲರ್​ಗಳಿಗೆ ಮಾರಿಬಿಟ್ಟಿದ್ದರಂತೆ. ಅವುಗಳನ್ನು ಮಾರಿದ್ದು ಯೂಕ್ರೇನ್​ಗೆ ಮಾತ್ರವಲ್ಲ, ಇಸ್ರೇಲ್​ಗೂ ಸಹ!

ಹೀಗೆ ಶಸ್ತ್ರಾಸ್ತ್ರಗಳ ಜತೆಗೆ ಯುದ್ಧವಿಮಾನಗಳು ಮತ್ತು ಯುದ್ಧಟ್ಯಾಂಕ್​ಗಳಲ್ಲಿ ಇಂಧನಕ್ಕೂ ತತ್ವಾರವಾಗಿ ರಕ್ಷಣಾ ಪಡೆಗಳ ಮೂರೂ ವಿಭಾಗಗಳು ಈ ವರ್ಷಕ್ಕೆ ನಿಗದಿಯಾಗಿಯಾಗಿದ್ದ ತಮ್ಮೆಲ್ಲಾ ಕವಾಯಿತುಗಳನ್ನು ರದ್ದುಗೊಳಿಸುವ ನಿರ್ಣಯವನ್ನು ಇದೇ ಜನವರಿಯಲ್ಲಿ ತೆಗೆದುಕೊಂಡದ್ದನ್ನು ನೆನಪಿಸಿಕೊಳ್ಳೋಣ. ಇಷ್ಟೆಲ್ಲಾ ಸಂಕಟಕ್ಕೆ ಸಿಲುಕಿದ ಪಾಕ್ ಸೇನೆ ಮೇ 7ರ ಒಂದೇ ರಾತ್ರಿ ನಮ್ಮ ಮೇಲೆ ನಾನೂರಕ್ಕಿಂತಲೂ ಹೆಚ್ಚಿನ ಡ್ರೋನ್​ಗಳನ್ನು ಹಾರಿಸಿದ್ದು ಹೇಗೆ? ಮುಂದಿನ ಮೂರು ರಾತ್ರಿಗಳೂ ಅದನ್ನು ಮುಂದುವರೆಸಿದ್ದು ಹೇಗೆ? ಟ್ಯಾಂಕ್​ಗಳು ಮತ್ತಿತರ ಸೇನಾವಾಹನ ಗಳನ್ನು ದೊಡ್ಡ ಸಂಖ್ಯೆಯಲ್ಲಿ ಭಾರತದ ಗಡಿಗೆ ತಂದದ್ದು ಹೇಗೆ? ಕಾಶ್ಮೀರದ ಹತೋಟಿ ರೇಖೆಯುದ್ದಕ್ಕೂ ನಿರಂತರವಾಗಿ ಶೆಲ್ ದಾಳಿಗೆ ತೊಡಗಿದ್ದು ಹೇಗೆ? ಈ ಪ್ರಶ್ನೆಗಳಿಗೆಲ್ಲಾ ಇರಬಹುದಾದ ಉತ್ತರ ಒಂದೇ- ಮೊಳೆರೋಗದ ನೆಪವೊಡ್ಡಿ ಅದೃಶ್ಯರಾದ ಶರೀಫ್ ಹೋಗಿದ್ದದ್ದು ತುರ್ಕಿಯೇಗೆ, ಬಂಕರ್ ಭ್ರಮೆ ಸೃಷ್ಟಿಸಿ ಮುನೀರ್ ಹಾರಿದ್ದು ಚೀನಾಗೆ!

ಪಾಕಿಸ್ತಾನಕ್ಕೆ ನಾವು ಯಾವ ಸೇನಾ ನೆರವನ್ನೂ ನೀಡುತ್ತಿಲ್ಲ ಎಂದು ತುರ್ಕಿಯೇ ಅಧ್ಯಕ್ಷ ಎರದೋಗೆನ್ ಘೊಷಿಸಿದ ಎರಡೇ ದಿನಗಳಲ್ಲಿ ಆ ದೇಶ ನೌಕಾಪಡೆಯ ಸರಕು ಸಾಗಣಿಕೆಯ ಹಡಗೊಂದು ಕರಾಚಿ ಬಂದರಿಗೆ ಬಂದದ್ದು ಮತ್ತು ಒಂದೇ ರಾತ್ರಿಯಲ್ಲಿ ಚೀನಾ ಪಿಎಲ್-15 ಕ್ಷಿಪಣಿಗಳನ್ನು ಪಾಕಿಸ್ತಾನಕ್ಕೆ ಪೂರೈಸಿದ್ದರ ಮರ್ಮ ಇದಿರಬಹುದು. ‘ಸಂಬಂಧಪಟ್ಟವರು’ ಖುದ್ದಾಗಿ ಎದುರಿಗೆ ನಿಂತು, ನಿಬಂಧನೆಗಳಿಗೆ ಸಮ್ಮತಿಸಿ ಹೇಳಿದೆಡೆ ಸಹಿ ಹಾಕದಿದ್ದರೆ ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ಯಾರಿಗೂ ಏನನ್ನೂ ಕೊಡುವುದಿಲ್ಲ. ತುರ್ಕೀಯರದೂ ಅದೇ ಜಾಯಮಾನವಿರಬಹುದು. ಚೀನೀಯರು ಮತ್ತು ತುರ್ಕೀಯರ ಸಹಾಯದೊಂದಿಗೆ ತಮ್ಮ ಅಣ್ವಸ್ತ್ತ್ರಗಳನ್ನೂ ಝುಳಪಿಸಿ ಭಾರತವನ್ನು ಹಿಮ್ಮೆಟ್ಟಿಸುವ ಇರಾದೆ ಮುನೀರ್​ಗಿತ್ತು. ಸಗೋಧಾ ಬಳಿಯ ಕಿರಾನಾ ಬೆಟ್ಟಗಳು ಅಥವಾ ಕಾಲಾಚಿಟ್ಟಾ ಪಹಾಡ್​ನಲ್ಲಿನ ಕೆಲವು ಬೆಳವಣಿಗೆಗಳು ಆ ಸಾಧ್ಯತೆಯ ಸುಳಿವು ನೀಡುತ್ತವೆ.

ಪಾಕಿಸ್ತಾನದ ಅಣ್ವಸ್ತ್ರಗಳ ‘ಉಸ್ತುವಾರಿ’ಯನ್ನು ಅಮೆರಿಕಾ ಕನಿಷ್ಠ 2007ರಷ್ಟು ಹಿಂದೆಯೇ ತೆಗೆದುಕೊಂಡಿದೆ. ಅಲ್ಲದೇ ಪಾಕಿಸ್ತಾನದ ಬಹುತೇಕ ಅಣ್ವಸ್ತ್ರಗಳನ್ನು ಅಮೆರಿಕನ್ನರು ಜನವರಿ 2023ರಲ್ಲಿ ಸೌದಿ ಅರೇಬಿಯಾಗೆ ಸಾಗಿಸಿತೆಂದು ಹೇಳಲು ಸಾಂರ್ದಭಿಕ ಸಾಕ್ಷ್ಯಗಳಿವೆ. ಇದು ಸಾಲದು ಎಂಬಂತೆ ರಾವಲ್ಪಿಂಡಿಯ ನೂರ್ ಖಾನ್ ವಾಯುನೆಲೆಯಲ್ಲಿ ಅಣ್ವಸ್ತ್ರಗಳಿರುವ ಭೂಮ್ಯಂತರ್ಗತ ಕಾಂಕ ಸುರಂಗವ್ಯವಸ್ಥೆಯ ಕೀಲಿಕೈ ಅಮೆರಿಕಾದ ಬಳಿ ಇರುವ ಕಾರಣ ಅವುಗಳನ್ನು ಭಾರತದ ವಿರುದ್ಧ ಬಳಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಹೀಗಾಗಿ ಸದ್ಯಕ್ಕೆ ಕೈಯಲ್ಲಿರುವ ಅಣು ಸಾಮಗ್ರಿಗಳಿಂದ ತರಾತುರಿಯಲ್ಲಿ ಅಣ್ವಸ್ತ್ರಗಳನ್ನು ಹೊಂದಿಸಿ ಪರೀಕ್ಷಿಸುವ ಪ್ರಯತ್ನವನ್ನು ಪಾಕಿಸ್ತಾನ ಆರಂಭಿಸಿದೆ. ಹೀಗಾಗಿಯೇ ಏಪ್ರಿಲ್ 24ರಿಂದ ಈ ಲೇಖನವನ್ನು ಬರೆಯುವ ಹೊತ್ತಿನವರೆಗೆ ಕಾಲಾಚಿಟ್ಟಾ ಪಹಾಡ್ ಪ್ರದೇಶದಲ್ಲಿ ಇಪ್ಪತ್ತೆಂಟು ಲಘು ಭೂಕಂಪಗಳು ಸಂಭವಿಸಿವೆ! ತಮಗೆ ಸಿಕ್ಕಿದ ಪ್ರಾರಂಭಿಕ ಯಶಸ್ಸುಗಳಿಂದಲೇ ಇರಬೇಕು ರೈಲ್ವೇ ಮಂತ್ರಿ ಹನೀಫ್ ಅಬ್ಬಾಸಿ ಸೇರಿದಂತೆ ಹಲವು ಪಾಕ್ ನೇತಾರರು ಭಾರತಕ್ಕೆ ಅಣ್ವಸ್ತ್ರ ಬೆದರಿಕೆ ಒಡ್ಡುವ ಮಾತುಗಳನ್ನಾಡಿದ್ದು.

ಇಷ್ಟೆಲ್ಲಾ ತಯಾರಿಯಾದರೂ ಪಾಕಿಸ್ತಾನಕ್ಕೆ ಕೊನೆಗೆ ಆದದ್ದೇನು? ಮೇ 6-7ರ ರಾತ್ರಿ ನಮ್ಮ ವಾಯುಪಡೆ ಸುಖೋಯ್ ಎಂಕೆಐ ಯುದ್ಧವಿಮಾನಗಳಿಗೆ ಜೋಡಿಸಿದ ಬ್ರಹ್ಮೋಸ್ ಕ್ಷಿಪಣಿಗಳಿಂದ ಬಹವಾಲ್ಪುರ ಮತ್ತು ಮುರೀದ್ಕೆ ಸೇರಿದಂತೆ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿಯೆಸಗಿ ನೆಲಸಮ ಮಾಡಿದ್ದನ್ನು ತಡೆಯಲು ಪಾಕಿಸ್ತಾನಕ್ಕೆ ಆಗಲಿಲ್ಲ. ಮರುರಾತ್ರಿ ಅವರು ಪ್ರಯೋಗಿಸಿದ ನಾನೂರಕ್ಕೂ ಹೆಚ್ಚು ತುರ್ಕಿಯೇ ನಿರ್ವಿುತ ಡ್ರೋನ್​ಗಳಲ್ಲಿ 95 ಭಾಗವನ್ನು ನಮ್ಮ ಆಕಾಶ್ ವಾಯು ರಕ್ಷಣಾ ವ್ಯವಸ್ಥೆ ನಿಷ್ಪಲಗೊಳಿಸಿತು. ಮರುರಾತ್ರಿಯೂ ವಿಫಲಗೊಂಡ ಡ್ರೋನ್ ದಾಳಿಯಿಂದ ಹತಾಶಗೊಂಡ ಪಾಕಿಸ್ತಾನ ಮೇ 9ರ ರಾತ್ರಿ ದೆಹಲಿಯತ್ತ ಫತಾಹ್-2 ಕ್ಷಿಪಣಿ ಉಡಾಯಿಸಿತು. ಆದರೆ ಅದನ್ನು ನಮ್ಮ ವಾಯು ರಕ್ಷಣಾ ವ್ಯವಸ್ಥೆ ಹರಿಯಾಣಾದ ಸಿರ್ಸಾ ಬಳಿ ಹೊಡೆದುರುಳಿಸಿತು. ಸದ್ಯದ ವರದಿಗಳ ಪ್ರಕಾರ ಆ ಕ್ಷಿಪಣಿ ಹೊತ್ತಿದ್ದದ್ದು ನೀರನ್ನು! ಇದು ನಿಜವೇ ಆಗಿದ್ದಲ್ಲಿ ಪಾಕಿಸ್ತಾನೀಯರ ಉದ್ದೇಶ ಫತಾಹ್-2 ಕ್ಷಿಪಣಿ ದೆಹಲಿಯವರೆಗೆ ಸಾಗಬಲ್ಲುದೇ ಎಂದು ಪರೀಕ್ಷಿಸುವುದಾಗಿತ್ತು ಮತ್ತು ಅದು ಸಾಧ್ಯವೆಂದು ತಿಳಿದಾಗ ಅಣ್ವಸ್ತ್ರವನ್ನು ಕೈಗೆತ್ತಿಕೊಳ್ಳುವುದಾಗಿತ್ತು.

ಇದರರ್ಥ ಫತಾ-2 ಮತ್ತೊಮ್ಮೆ ದೆಹಲಿಯತ್ತ ಹಾರಿದಾಗ ಅದರಲ್ಲಿ ಅಣ್ವಸ್ತ್ರವಿರುತ್ತದೆ ಎಂದು ನಮ್ಮ ರಕ್ಷಣಾ ಪಡೆಗಳಿಗೆ ಸ್ಪಷ್ಟವಾಯಿತು! ನಮ್ಮ ನಾಯಕ ವರ್ಗದ ದೃಷ್ಟಿಯಲ್ಲಿ ಪಾಕಿಸ್ತಾನ ದಾಟಿದ ಲಕ್ಷ್ಮಣರೇಖೆ ಅದು. ಮುಂದಿನ ಮೂರು ಗಂಟೆಗಳಲ್ಲಿ ದಕ್ಷಿಣದ ಕರಾಚಿಯ ಬೊಲಾರಿಯಿಂದ ಹಿಡಿದು ಉತ್ತರದ ರಾವಲ್​ಪಿಂಡಿಯ ಚಕ್ಲಾಲಾವರೆಗೆ ಶತ್ರುವಿನ ಹನ್ನೊಂದು ವಾಯುನೆಲೆಗಳ ಮೇಲೆ ನಮ್ಮ ಬ್ರಹ್ಮೋಸ್ ಕ್ಷಿಪಣಿಗಳು ಎರಗಿದವು. ಮುಂದಿನ ದೊಡ್ಡ ಕಥೆಯನ್ನು ಸಂಕ್ಷಿಪ್ತಗೊಳಿಸುವುದಾದರೆ ಹನ್ನೊಂದೂವರೆ ತಾಸಿನಲ್ಲಿ ಪಾಕಿಸ್ತಾನ ಮಂಡಿಯೂರಿತು! ನಮ್ಮ ದಾಳಿಯಲ್ಲಿ ಅತ್ಯಂತ ಪರಿಣಾಮಕಾರಿಯಾದದ್ದು ಚಕ್ಲಾಲಾದಲ್ಲಿನ ನೂರ್​ಖಾನ್ ವಾಯುನೆಲೆಯ ಮೇಲಾದದ್ದು. ಅಲ್ಲಿ ಅಣ್ವಸ್ತ್ರಗಳನ್ನಿರಿಸಿದ್ದ ಭೂಮ್ಯಂತರ್ಗತ ಸುರಂಗವ್ಯವಸ್ಥೆಯ ಆರು ಕವಾಟಗಳಲ್ಲಿ ಐದನ್ನು ಬ್ರಹ್ಮೋಸ್ ಕ್ಷಿಪಣಿಗಳು ಭೇದಿಸಿವೆ. ಇದರ ಪರಿಣಾಮ ಪಾಕಿಸ್ತಾನಕ್ಕೆ ತೀವ್ರ ಆತಂಕಕಾರಿ ಎನ್ನುವುದು ತಿಳಿಯುವುದು ಇಸ್ಲಾಮಾಬಾದ್​ಗೆ ತರಾತುರಿಯಲ್ಲಿ ಹಾರಿಬಂದಿರುವ ಅಮೆರಿಕಾದ ವಿಮಾನದಿಂದ.

ಎನ್111ಎಸ್​ಝೀ ನಂಬರಿನ, ಎ03192 ಕೋಡ್​ನ, ಕಿಂಗ್ ಏರ್ 350 ವಿಮಾನದ ಬಳಕೆಯಾಗುವುದು ಅಣುವಿಕಿರಣ ಪತ್ತೆಗೆ. ಇದರರ್ಥ ಬ್ರಹ್ಮೋಸ್ ದಾಳಿಯಿಂದ ತೀವ್ರ ಶಾಖವುಂಟಾಗಿ ಅಣ್ವಸ್ತ್ರ ಲೋಹಕವಚ ಕರಗಿ ಒಳಗಿನಿಂದ ವಿಕಿರಣ ಹೊರಸೂಸುತ್ತಿದೆ ಎಂದಿರಬಹುದು. ಈ ಊಹೆಯನ್ನು ದಟ್ಟವಾಗಿಸುವುದು ಅಣುವಿಕಿರಣವನ್ನು ಹೀರಿಕೊಳ್ಳುವ ಐಸೋಟೋಪ್ ಬೋರಾನ್-10 ಅನ್ನು ಒಳಗೊಂಡ ಬೊರೇಟ್ ಖನಿಜದ ಸಂಸ್ಕರಿತ ರೂಪವನ್ನು ಹೊತ್ತ ಈಜಿಪ್ಷಿಯನ್ ವಿಮಾನವೊಂದು ಪಾಕಿಸ್ತಾನಕ್ಕೆ ಬಂದಿರುವುದು. ನೂರ್ ಖಾನ್ ನೆಲೆಯಲ್ಲಿ ಏನಾಗಿದೆ ಎಂದು ನಿಖರವಾಗಿ ತಿಳಿಯಲು ನಮಗೆ ಇನ್ನೂ ಕೆಲವು ದಿನಗಳು ಬೇಕಾಗುತ್ತವೆ. ಒಂದು ವೇಳೆ ಸದ್ಯಕ್ಕೆ ಕಂಡುಬರುತ್ತಿರುವ ಚಿತ್ರಗಳು ಅಲ್ಲಿ ಅಣುವಿಕಿರಣ ಸೋರಿಕೆಯನ್ನೇ ಸೂಚಿಸುತ್ತಿರುವುದಾದರೆ ಅಲ್ಲಿಂದ ಹತ್ತೇ ಕಿಲೋಮೀಟರ್ ಹತ್ತಿರವಿರುವ ಪಾಕ್ ರಾಜಧಾನಿ ಇಸ್ಲಾಮಾಬಾದ್ ಮಾನವ ವಸತಿಗೆ ಅಯೋಗ್ಯವಾಗುತ್ತದೆ ಎಂದರ್ಥ! ಅದರ ಅವಳಿ ನಗರವಾದ, ಸೇನಾ ಮುಖ್ಯಾಲಯವಿರುವ ರಾವಲ್​ಪಿಂಡಿಯದೂ ಅದೇ ಗತಿ. ಹೀಗೆ ತನ್ನೆರಡೂ ಶಕ್ತಿಕೇಂದ್ರಗಳನ್ನು ತೊರೆಯಬೇಕಾದ ಭೀಕರ ಅಪಾಯದ ಸೂಚನೆ ಕಂಡಾಗ ನಮ್ಮ ಮುಂದೆ ಮಂಡಿಯೂರಿ, ದಾಳಿ ನಿಲ್ಲಿಸಿ ಎಂದು ಗೋಗರೆಯದೇ ಆ ದೇಶಕ್ಕೆ ಬೇರೇನು ದಾರಿ ಇದೆ?

ಸಿಂಧೂರದ ಶಕ್ತಿ ಎಷ್ಟೆಂದು ಜಗತ್ತು ತಿಳಿಯತೊಡಗಿದೆ. ಏಷ್ಯಾದ ಅತ್ಯಂತ ಬಲಿಷ್ಠ ಸೇನಾಶಕ್ತಿಯಾಗಿ ಭಾರತ ಎದ್ದುನಿಂತಿದೆ. ಅತ್ತ, ಅಭೇದ್ಯ ಕಟ್ಟಡ ಎಂಬರ್ಥದ ಬುನಿಯಾನ್-ಉನ್-ಮರ್ಸಸ್ ಎಂಬ ಹೆಸರನ್ನು ತನ್ನ ಕಾರ್ಯಾಚರಣೆಗಿಟ್ಟುಕೊಂಡು, ತನ್ನ ಸುರಕ್ಷಾ ವ್ಯವಸ್ಥೆ ಮತ್ತೆಮತ್ತೆ ಭೇದಿಸಲ್ಪಟ್ಟಿದ್ದನ್ನು ಕಂಡು ಕಂಗಾಲಾದ ಪಾಕಿಸ್ತಾನದ ಬಗ್ಗೆ ಜಗತ್ತು ನಗುತ್ತಿದೆ.