ಅಂಕಣ

ಡ್ರಗ್​ರಾಣಿಯಾದ ಗೀತಾ ಪರ್ವರ್; ಮುಂಬೈ ಭೂಗತ ಲೋಕದಲ್ಲಿ ಮೆರೆದ ಗುಜರಾತಿ ಮಹಿಳೆ ಭಾಗ -2

ತನ್ನ ಗಂಡ ಪ್ರಕಾಶ್ ಜೈಲಿನಿಂದ ಬಿಡುಗಡೆಯಾಗಿ ಹೊರಬಂದ ಕೂಡಲೇ ಗೀತಾ ಮಗನೊಡನೆ ಮುಂಬೈನಿಂದ ಬರೋಡಾಗೆ ವಾಪಸ್ಸಾಗಿ ಸಂಸಾರ ನಡೆಸತೊಡಗಿದಳು. ಆ ಸಮಯದಲ್ಲಿಯೇ ಅವರ ಗ್ಯಾಂಗ್​ನ ಮುಖ್ಯಸ್ಥ ಕಿನೀಟ್ ಅಮೀನ್ ಘಾಟ್​ಕೋಪರ್​ನ ಆಭರಣಗಳ ಅಂಗಡಿಯ ದರೋಡೆಯ ಪ್ಲಾನ್ ಹಾಕಿದ. ಮುಂಬೈನಲ್ಲಿ ವಾಸವಾಗಿ ಅಲ್ಲಿಯ ಪರಿಚಯ ಹೊಂದಿದ್ದ ಗೀತಾಳನ್ನೂ ಆತ ತನ್ನ ತಂಡದಲ್ಲಿ ಶಾಮೀಲು ಮಾಡಿಕೊಂಡ. ದರೋಡೆಯ ನಂತರ ಎಲ್ಲರೂ ಬರೋಡಾಕ್ಕೆ ಹೋಗಿ ಅಲ್ಲಿ ಅಡಗಿದ್ದು ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು.

ಘಾಟಕೋಪರ್ ಆಭರಣ ಅಂಗಡಿ ದರೋಡೆ ಪ್ರಕರಣದಲ್ಲಿ ಗೀತಾಗೆ ಐದು ವರ್ಷ ಜೈಲು ಶಿಕ್ಷೆಯಾಗಿ ಅವಳನ್ನು ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಇರಿಸಲಾಯಿತು. ಆಗಾಕೆ ತನ್ನ ಮಗನನ್ನು ಸಂಬಂಧಿಕರೊಬ್ಬರ ಮನೆಯಲ್ಲಿ ಬಿಡಬೇಕಾಯಿತು. ಹೊರಗಡೆಯಿಂದ ಜೈಲನ್ನು ಬಹಳಷ್ಟು ಕಾಲ ಗೀತಾ ನೋಡಿದ್ದರೂ ಆಕೆಗೆ ಮಹಿಳಾ ಕೈದಿಗಳಿರುವ ಬ್ಯಾರಕ್​ಗಳ ಬಗ್ಗೆ ಅರಿವಿರಲಿಲ್ಲ. ಆ ಜೈಲಿನಲ್ಲಿದ್ದ 167 ಮಹಿಳಾ ಕೈದಿಗಳ ಬ್ಯಾರಕ್​ಗೆ ಇದ್ದದ್ದು ನಾಲ್ಕು ಶೌಚಗೃಹಗಳು ಮಾತ್ರ. ಹೀಗಾಗಿ ಮುಂಜಾನೆಯಾದರೆ ಶೌಚಗೃಹಗಳ ಮುಂದೆ ಯುದ್ಧಗಳೇ ನಡೆಯುತ್ತಿದ್ದವು. ಆದರೆ ಗೀತಾಳಿಗೇನೂ ಇದರಿಂದ ತೊಂದರೆಯಾಗಲಿಲ್ಲ. ತನ್ನ ಕರಾಟೆ ಪೆಟ್ಟುಗಳಿಂದ ಶೌಚಗೃಹದ ಮುಂದಿದ್ದವರನ್ನು ಪಕ್ಕಕ್ಕೆ ಸರಿಸಿ ತನಗೆ ಬೇಕಾದ ಸಮಯಕ್ಕೆ ಶೌಚಗೃಹ ಉಪಯೋಗಿಸತೊಡಗಿದಳು. ಮುಂದೆ ನಾಲ್ಕರಲ್ಲಿ ಮೂರು ಶೌಚಗೃಹಗಳನ್ನು ತಾನೇ ಅಕ್ರಮವಾಗಿ ವಶಪಡಿಸಿಕೊಂಡು ಅವಕ್ಕೆ ಬೀಗ ಹಾಕಿದಳು. ತನಗೆ ಹಣಕೊಟ್ಟ ಕೈದಿಗಳಿಗೆ ಮಾತ್ರ ಅವನ್ನು ಬಳಸಲು ಕೊಡುತ್ತಿದ್ದಳು.

ಜೈಲಿನಲ್ಲಿ ಗೀತಾಳ ದುರ್ವರ್ತನೆ ಸಹಿಸದ ಇತರ ಕೈದಿಗಳು ಅಧಿಕಾರಿಗಳಿಗೆ ದೂರಿತ್ತಾಗ ಆಕೆ ದೂರು ಕೊಟ್ಟವರನ್ನು ಮನಬಂದಂತೆ ಥಳಿಸಿದಳು. ಈ ಕಾರಣ ಜೈಲಿನಲ್ಲಿದ್ದ 150 ಮಹಿಳಾ ಕೈದಿಗಳು ಗೀತಾಳ ವಿರುದ್ಧ ಮಾನವ ಹಕ್ಕುಗಳ ಆಯೋಗಕ್ಕೆ ದೂರಿತ್ತರು. ಆಯೋಗವು ಗೀತಾ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿತು. ಇದರ ಮೇರೆಗೆ ಗೀತಾಳನ್ನು ಮುಂಬೈನಲ್ಲಿಯೇ ಇರುವ ಆರ್ಥರ್ ರೋಡ್ ಜೈಲಿಗೆ ವರ್ಗಾಯಿಸಲಾಯಿತು. ಆ ಜೈಲಿನಲ್ಲಿ ಮುಂಬೈ ಭೂಗತ ಲೋಕದ ಕುಖ್ಯಾತ ಡಾನ್ ಛೋಟಾ ಶಕೀಲ್​ನ ಪ್ರೇಮಿ ಶಮೀಮ್ ಮಿರ್ಜಾಬಾಗ್ ಕೈದಿಯಾಗಿದ್ದಳು. ದಾವೂದ್ ಇಬ್ರಾಹಿಂನ ಆಣತಿಯ ಮೇರೆಗೆ ಶಸ್ತ್ರಾಸ್ತ್ರಗಳು ಹಾಗೂ ಸ್ಪೋಟಕಗಳನ್ನು ಕಳ್ಳಸಾಗಣೆ ಮಾಡುವ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಆಕೆ ತಾನು ಛೋಟಾ ಶಕೀಲ್ ಗ್ಯಾಂಗಿನವಳೆಂದು ಹೇಳಿಕೊಂಡು ಸಹಕೈದಿಗಳಲ್ಲದೆ ಮಹಿಳಾ ಜೈಲರ್​ಗಳ ಮೇಲೆಯೂ ದಾದಾಗಿರಿ ಮಾಡುತ್ತಿದ್ದಳು. ಜೈಲಿನ ಸಿಬ್ಬಂದಿಯೂ ಅವಳ ಆಣತಿಯಂತೆಯೇ ಕಾರ್ಯನಿರ್ವಹಿಸುತ್ತಿದ್ದರು. ಅದೇ ಜೈಲಿಗೆ ವರ್ಗವಾಗಿ ಬಂದ ಗೀತಾಳಿಗೆ ಶಮೀಮ್ ವರ್ತನೆ ಸಿಟ್ಟು ತರಿಸಿತು. ಹೇಗಾದರೂ ಮಾಡಿ ಅವಳನ್ನು ಮಣಿಸಬೇಕೆಂದು ಪಣ ತೊಟ್ಟ ಗೀತಾ ಜೈಲಿನ ಹಿಂದೂ ಕೈದಿಗಳನ್ನು ಒಟ್ಟುಗೂಡಿಸಿ ಅವರನ್ನು ಶಮೀಮ್ ವಿರುದ್ಧ ಎತ್ತಿಕಟ್ಟಿದಳು. ಜೈಲಿನಲ್ಲಿ ಮತದ ಆಧಾರದ ಮೇಲೆ ಎರಡು ಬಣಗಳಾದವು. ಎರಡೂ ಬಣಗಳ ನಡುವೆ ಪ್ರತಿದಿನವೂ ಒಂದಲ್ಲಾ ಒಂದು ಕಾರಣಕ್ಕೆ ಕಲಹಗಳಾಗತೊಡಗಿದವು.

ಛೋಟಾ ಶಕೀಲ್ ತಂಡದವಳಾದ ತನಗೇ ಸೆಡ್ಡುಹೊಡೆದ ಗೀತಾಳಿಗೆ ಬುದ್ಧಿ ಕಲಿಸಬೇಕೆಂದು ನಿರ್ಧರಿಸಿದ ಶಮೀಂ ಆಕೆ ಮೇಲೆ ದೈಹಿಕ ಹಲ್ಲೆ ನಡೆಸಿದಳು. ಜೈಲಿನ ಆವರಣದಲ್ಲಿ ನಡೆದ ಸೆಣಸಾಟದಲ್ಲಿ ಶಮೀಮ್ ಎಷ್ಟು ತೀವ್ರವಾಗಿ ಗಾಯಗೊಂಡಳೆಂದರೆ ಆಕೆ ಮೂಳೆಗಳನ್ನು ಮುರಿದುಕೊಂಡು ಆಸ್ಪತ್ರೆ ಸೇರಬೇಕಾಯಿತು. ಗೀತಾ ತನಗೆ ಥಳಿಸಿದ್ದಲ್ಲದೆ ಕೈದಿಗಳನ್ನು ಬೆದರಿಸಿ ಅವರಿಂದ ಹಫ್ತಾ ಪಡೆಯುತ್ತಿದ್ದಾಳೆಂದೂ ಶಮೀಮ್ ಆರೋಪಿಸಿದ ಮೇರೆಗೆ ಗೀತಾಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಯಿತು. ನ್ಯಾಯಾಧೀಶರು ಗೀತಾಗೆ ಆರು ತಿಂಗಳ ಕಠಿಣ ಶಿಕ್ಷೆಯನ್ನು ಕೊಟ್ಟು, ಅವಳನ್ನು ಆರ್ಥರ್ ರೋಡ್ ಜೈಲಿನಿಂದ ಬೇರೆ ಜೈಲಿಗೆ ವರ್ಗಾಯಿಸಬೇಕೆಂದು ಆದೇಶವಿತ್ತರು. ಇದರ ಮೇರೆಗೆ ಅವಳನ್ನು ಠಾಣೆ ಜಿಲ್ಲೆಯ ಜೈಲಿಗೆ ಕಳುಹಿಸಲಾಯಿತು.

ಆ ಜೈಲಿನಲ್ಲಿಯೂ ಗೀತಾ ಜೈಲಿನ ಅಧಿಕಾರಿಗಳು ಮತ್ತು ಕೈದಿಗಳ ಜೊತೆ ಜಗಳವಾಡಿದ ಕಾರಣ ಅವಳ ಮೇಲೆ ಇನ್ನೊಂದು ಪ್ರಕರಣ ದಾಖಲಾಯಿತು. ಆಗ ಅವಳನ್ನು ನಾಗಪುರದ ಜೈಲಿಗೆ ಕಳುಹಿಸಲಾಯಿತು. ಗೀತಾಳ ಮೇಲೆ ದಾಖಲಾಗಿದ್ದ ಪ್ರಕರಣಗಳು ಮುಂಬೈ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಕಾರಣ ಅವಳನ್ನು ವಿಚಾರಣೆಯ ದಿನಾಂಕಗಳಂದು ದೂರದ ನಾಗಪುರದಿಂದ ಪೊಲೀಸ್ ಬೆಂಗಾವಲಿನಲ್ಲಿ ಮುಂಬೈಗೆ ಕರೆತರಲಾಗುತ್ತಿತ್ತು.

2006ರ ಜೂನ್ 4 ರಂದು ಗೀತಾಳನ್ನು ಮುಂಬೈಗೆ ರೈಲಿನಲ್ಲಿ ಕರೆದುಕೊಂಡು ಬರುತ್ತಿದ್ದರು. ಮುಂಜಾನೆ ಸುಮಾರು 5 ಗಂಟೆಗೆ ರೈಲು ಭೂಸಾವಲ್ ಸ್ಟೇಷನ್ನಿಗೆ ಬಂದಿತು. ‘ನನಗೆ ವಿಪರೀತ ಹಸಿವಾಗುತ್ತಿದೆ, ಏನಾದರೂ ತಿನ್ನಲೇಬೇಕು’ ಎಂದು ಬೆಂಗಾವಲು ತಂಡಕ್ಕೆ ತಿಳಿಸಿದ ಗೀತಾ ರೈಲಿನಿಂದ ಕೆಳಗೆ ಇಳಿದಳು. ಅವಳ ಎರಡೂ ಬದಿಯಲ್ಲಿ ಮಹಿಳಾ ಮತ್ತು ಪುರುಷ ಕಾನ್​ಸ್ಟೆಬಲ್ ಇದ್ದರು. ಅವಳ ಹಿಂದೆಯೂ ಶಸ್ತ್ರಧಾರಿ ಕಾನ್​ಸ್ಟೆಬಲ್ ಇದ್ದ. ಚಹಾದಂಗಡಿಯ ಮುಂದೆ ಹೋಗುತ್ತಿದ್ದಂತೆ ಗೀತಾ ಮಹಿಳಾ ಕಾನ್​ಸ್ಟೆಬಲ್​ಗೆ ಎಂತಹ ಕರಾಟೆ ಪೆಟ್ಟು ಕೊಟ್ಟಳೆಂದರೆ ಆಕೆ ಪ್ಲಾಟ್​ಫಾಮ್ರ್ ಮೇಲೆಯೇ ಕುಸಿದು ಬಿದ್ದಳು. ಆಕೆಯ ಸಹಾಯಕ್ಕೆ ಬಂದ ಇನ್ನಿತರ ಪೊಲೀಸರಿಗೂ ಕರಾಟೆ ಏಟುಗಳನ್ನು ಕೊಟ್ಟು ಅವರನ್ನೂ ಕೆಳಗೆ ಬೀಳಿಸಿದಳು. ಅಲ್ಲಿದ್ದ ಜನ ಏನಾಗುತ್ತಿದೆ ಎಂದು ಅರಿಯುವಷ್ಟರಲ್ಲಿ ಗೀತಾ ಜನಜಂಗುಳಿಯಲ್ಲಿ ಪರಾರಿಯಾದಳು. ಪೊಲೀಸ್ ವಶದಿಂದ ಪರಾರಿಯಾದ ಆರೋಪದ ಮೇರೆಗೆ ಭೂಸಾವಲ್ ರೈಲ್ವೆ ಪೊಲೀಸ್ ಠಾಣೆಯಲ್ಲಿ ಗೀತಾ ವಿರುದ್ಧ ಇನ್ನೊಂದು ಪ್ರಕರಣ ದಾಖಲಾಯಿತು. ಗೀತಾ ತನ್ನ ಹುಟ್ಟೂರಿಗೆ ಹೋಗಿರಬಹುದೆಂದು ಭಾವಿಸಿದ ಮಹಾರಾಷ್ಟ್ರ ಪೊಲೀಸರು ಗುಜರಾತ್ ಪೊಲೀಸರಿಗೆ ಮಾಹಿತಿ ನೀಡಿ ಬರೋಡಾಗೆ ಹೋದರು. ಗುಜರಾತ್ ಮತ್ತು ಮಹಾರಾಷ್ಟ್ರ ಪೊಲೀಸರು ಎರಡೂ ರಾಜ್ಯಗಳಲ್ಲಿ ಹುಡುಕಿದರೂ ಗೀತಾ ಪತ್ತೆಯಾಗಲಿಲ್ಲ. ಮೂರು ತಿಂಗಳ ನಂತರ ಆಕೆಯನ್ನು ಹುಡುಕುವುದನ್ನು ಪೊಲೀಸರು ನಿಲ್ಲಿಸಿದರು.

ಏತನ್ಮಧ್ಯೆ ಗೀತಾ ಬರೋಡಾದ ಬಳಿಯಿದ್ದ ಹುಟ್ಟೂರಿನಲ್ಲಿ ಅಡಗಿದ್ದಳು. ಆ ಸಮಯದಲ್ಲಿ ಅವಳ ಗಂಡ ಪ್ರಕಾಶ್ ಆಭರಣ ಅಂಗಡಿ ದರೋಡೆ ಕೇಸಿನಲ್ಲಿ ಇನ್ನೂ ಮುಂಬೈನ ಜೈಲಿನಲ್ಲಿ ಶಿಕ್ಷೆಯನ್ನನುಭವಿಸುತ್ತಿದ್ದ. ಅವರ ತಂಡದ ನಾಯಕ ಕಿನೀಟ್ ಅಮೀನ್ ಸಹಾ ಜೈಲಿನಲ್ಲಿದ್ದ. ಎರಡು ತಿಂಗಳು ಭೂಗತಳಾಗಿದ್ದ ಗೀತಾ ಹೊರಗೆ ಬಂದ ನಂತರ ಹಣದ ಅಡಚಣೆ ಕಾಡತೊಡಗಿತು. ಆಗ ಆಕೆಗೆ ಒಬ್ಬರು ಡ್ರಗ್ ಸ್ಮಗ್ಲಿಂಗ್ ಮಾಡಿದರೆ ಹೆಚ್ಚಿನ ಹಣ ಗಳಿಸಬಹುದೆಂದು ತಿಳಿಸಿ ಈ ದಂಧೆಯಲ್ಲಿ ತೊಡಗಿದ್ದ ಅಮೀನ್ ಜೈಲಿನಲ್ಲಿರುವುದರಿಂದ ಅವಳಿಗೆ ಪೈಪೋಟಿಯಿರುವುದಿಲ್ಲ ಎಂದರು. ಅಂತೆಯೇ ಆಕೆ ಮಾದಕವಸ್ತುಗಳ ಕಳ್ಳಸಾಗಾಣಿಕೆ ಮಾಡುತ್ತಿದ್ದ ಕೆಲವರನ್ನು ಸಂರ್ಪಸಿದಳು. ಪಾಕಿಸ್ತಾನದಿಂದ ಮಾದಕವಸ್ತುಗಳನ್ನು ಕಳ್ಳಸಾಗಾಣಿಕೆ ಮಾಡುವುದರಲ್ಲಿ ರಿಸ್ಕ್ ಹೆಚ್ಚಾಗಿರುವುದರಿಂದ ಸ್ಥಳೀಯವಾಗಿ ಮಾದಕ ಡ್ರಗ್ ಟ್ಯಾಬ್ಲೆಟ್​ಗಳನ್ನು ತಯಾರಿಸುವುದು ಸೂಕ್ತ ಎಂದು ಅವರು ಸಲಹೆಯಿತ್ತರು. ಆ ಸಮಯದಲ್ಲಿ ಕೇವಲ 35 ವರ್ಷ ವಯಸ್ಸಿನವಳಾಗಿದ್ದ ಗೀತಾ ಕೆಮಿಸ್ಟ್ ಒಬ್ಬನನ್ನು ಸಂರ್ಪಸಿ ಆತನ ಸಹಾಯದಿಂದ ಮ್ಯಾಂಡ್ರಾಕ್ಸ್ ಮತ್ತಿತರ ಸಿಂಥೆಟಿಕ್ ಮಾದಕ ವಸ್ತುಗಳನ್ನು ತಯಾರಿಸಲು ತೀರ್ವನಿಸಿದಳು.

ಗೀತಾ ಬರೋಡಾದ ಸಮೀಪದಲ್ಲಿ ಸಣ್ಣ ಗೋದಾಮನ್ನು ಬಾಡಿಗೆಗೆ ಪಡೆದು ಅದನ್ನು ಲ್ಯಾಬೊರೇಟರಿಯಾಗಿ ಪರಿವರ್ತಿಸಿದಳು. ಅಷ್ಟರಲ್ಲಾಗಲೇ ಆಕೆ ತನ್ನ ಮಗನಿಗೆ ಮದುವೆ ಮಾಡಿದ್ದಳು. ಮಗ ಹಾಗೂ ಸೊಸೆಯಲ್ಲದೆ ತನ್ನ ಹಲಕೆಲವು ಸಂಬಂಧಿಕರನ್ನು ಕೂಡ ಸಹಾಯಕ್ಕೆ ನೇಮಿಸಿಕೊಂಡಳು. ಕೆಲವೇ ದಿನಗಳಲ್ಲಿ ಅವಳ ಬಿಜಿನೆಸ್ ಪ್ರವರ್ಧಮಾನಕ್ಕೆ ಬಂದಿತು. ಏಕೆಂದರೆ ಆ ಸಮಯದಲ್ಲಿ ಸ್ಥಳೀಯ ಪೊಲೀಸರು ಮಾದಕ ವಸ್ತುಗಳ ತಯಾರಿಕೆಯ ಬಗ್ಗೆ ತಲೆಕೆಡಿಸಿಕೊಳ್ಳದೆ ಗೀತಾ ಕೊಡುತ್ತಿದ್ದ ಲಂಚ ಪಡೆದು ಸುಮ್ಮನಿದ್ದರು. ಮಾದಕ ವಸ್ತುಗಳ ಕೇಸುಗಳನ್ನು ಕೇವಲ ನಾರ್ಕೆಟಿಕ್ ವಿಭಾಗದ ಪೊಲೀಸರು ದಾಖಲಿಸುತ್ತಿದ್ದ ಕಾರಣ ಗೀತಾ ಅವರಿಗೆ ಮಾತ್ರ ಹೆದರುತ್ತಿದ್ದಳು. ಈ ವಿಭಾಗದ ಪೊಲೀಸರು ದೂರದ ಮುಂಬೈ ಇಲ್ಲವೇ ಅಹ್ಮದಾಬಾದಿನಲ್ಲಿ ಕಚೇರಿ ಹೊಂದಿದ್ದು ಅಗೊಮ್ಮೆ ಈಗೊಮ್ಮೆ ದಾಳಿ ನಡೆಸುತ್ತಾ್ತರೆಂದು ಅವಳಿಗೆ ತಿಳಿದಿತ್ತು.

ಮಾರುವೇಷದಲ್ಲಿ ಬರುವ ನಾರ್ಕೆಟಿಕ್ ವಿಭಾಗದ ಅಧಿಕಾರಿಗಳಿಂದ ತಪ್ಪಿಸಿಕೊಳ್ಳಲು ಆಕೆ ತನ್ನ ಲ್ಯಾಬೊರೇಟರಿಯ ಸುತ್ತಮುತ್ತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿಕೊಂಡಿದ್ದಳು. ಯಾರಾದರೂ ಅಪರಿಚಿತರು ಲ್ಯಾಬೊರೇಟರಿ ಬಳಿಗೆ ಸುಳಿದರೆ ಗೀತಾ ಫ್ಯಾಕ್ಟರಿಯಲ್ಲಿದ್ದ ಹೆಣ್ಣುಮಕ್ಕಳನ್ನು ಅವರತ್ತ ಛೂ ಬಿಟ್ಟು ಅವರ ಗುರುತನ್ನು ಪರೀಕ್ಷಿಸುತ್ತಿದ್ದಳು. ಬಂದವರು ಅಧಿಕಾರಿಗಳಂತೆ ಕಂಡರೆ ಅವರು ಲ್ಯಾಬೊರೇಟರಿಗೆ ಬರದಂತೆ ಆ ಸ್ತ್ರೀಯರು ತಡೆಯುತ್ತಿದ್ದರು. ಆ ಸಮಯವನ್ನು ಬಳಸಿ ಗೀತಾ ಮತ್ತವಳ ಅನುಯಾಯಿಗಳು ಫ್ಯಾಕ್ಟರಿಯಲ್ಲಿದ್ದ ಮಾದಕ ವಸ್ತುಗಳನ್ನು ಖಾಲಿ ಮಾಡಿ ಹಿಂಭಾಗದ ಬಾಗಿಲಿನಿಂದ ಪರಾರಿಯಾಗುತ್ತಿದ್ದರು. ಹಲವಾರು ಬಾರಿ ಮುಂಬೈ ಮತ್ತು ಗುಜರಾತಿನ ಮಾದಕವಸ್ತು ನಿಗ್ರಹ ದಳಗಳು ಕಾರ್ಖಾನೆಗೆ ದಾಳಿ ಮಾಡಿದರೂ ಆಕೆ ಸಿಕ್ಕಿಬೀಳಲಿಲ್ಲ. ಆದರೆ 2016ರಲ್ಲಿ ಅದೃಷ್ಟ ಅವಳಿಗೆ ಕೈಕೊಟ್ಟಿತು. ಗೀತಾ ಪೊಲೀಸರ ಬಲೆಗೆ ಬಿದ್ದಳು. ಗೀತಾ ಮತ್ತು ಸಹಚರರ ವಿರುದ್ಧ ಮೂರು ಪ್ರಕರಣಗಳು ದಾಖಲಾದವು. ಮೂರರಲ್ಲಿಯೂ ಶಿಕ್ಷೆಯಾಗಿ ಆಕೆ ಸದ್ಯ ಗುಜರಾತಿನ ಜೈಲೊಂದರಲ್ಲಿದ್ದಾಳೆ. ಈಗ ಗೀತಾ ಪರ್ವರ್​ಗೆ ಸುಮಾರು 50 ವರ್ಷಗಳಾಗಿದೆ. ಆಕೆ ಮತ್ತೊಮ್ಮೆ ತಪ್ಪಿಸಿಕೊಂಡು ಹೋಗಬಾರದೆಂದು ಹೈ ಸೆಕ್ಯೂರಿಟಿ ಬ್ಯಾರಕ್​ನಲ್ಲಿಡಲಾಗಿದೆ. ಭಾರತದ ಮಹಿಳಾ ಡಾನ್​ಗಳಲ್ಲೊಬ್ಬಳಾಗಿ ಮೆರೆದ ಗೀತಾಳ ವರ್ತನೆ ಸುಧಾರಿಸಿದೆ ಎನ್ನುತ್ತಾರೆ ಜೈಲು ಅಧಿಕಾರಿಗಳು. ‘ಉದರದೈವಕೆ ಜಗದೊಳೆದುರು ದೈವವದೆಲ್ಲಿ? ಮೊದಲದರ ಪೂಜೆ; ಮಿಕ್ಕೆಲ್ಲವದರಿಂದ, ಮುದಿಸುವುದದಾದರಿಸೆ, ಕುದಿವುದು ನಿರಾಕರಿಸೆ, ಹದದೊಳಿರಿಸುವುದೆಂತೋ? ಮಂಕುತಿಮ್ಮ’ ಎಂಬಂತೆ ಅಪರಾಧ ಜಗತ್ತಿಗೆ ಪ್ರವೇಶಿಸಲು ಗೀತಾ ಉದ್ದೇಶಿಸಿರಲಿಲ್ಲ. ಆದರೆ ಉದರಪೋಷಣೆಗೆ ಬಂದಾಕೆಗೆ ಉದರವನ್ನು ಹದದಲ್ಲಿಟ್ಟುಕೊಳ್ಳಲು ಸಾಧ್ಯವಾಗದಿದ್ದುದೇ ಇಳಿವಯಸ್ಸಿನಲ್ಲಿಯೂ ಆಕೆ ಜೈಲಿಗೆ ಹೋಗಲು ಕಾರಣವಾಯಿತು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)