ಅಂಕಣ

ಪರಿವರ್ತನೆಯ ಒಂದು ದಶಕ

ಮೋಹನ್​ ಶೆಟ್ಟಿ

(ಲೇಖಕರು ಜೆ.ಕೆ ಪೇಪರ್ ಲಿಮಿಟೆಡ್​ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು)

ಭಾರತ ಇಂದು ಜಪಾನ್ ದೇಶವನ್ನು ಹಿಂದಿಕ್ಕಿ 4.2 ಟ್ರಿಲಿಯನ್ ಜಿಡಿಪಿಯೊಂದಿಗೆ ಜಗತ್ತಿನ ನಾಲ್ಕನೇ ಅತಿ ದೊಡ್ಡ ರಾಷ್ಟ್ರವಾಗಿ ಮೂಡಿಬಂದಿದೆ. ಮುಂದಿನ ಕೆಲವೇ ವರ್ಷಗಳಲ್ಲಿ ಜರ್ಮನಿಯನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೆ ಬರುವ ನಿರೀಕ್ಷೆಯಿದೆ. ಕಳೆದ ದಶಕದಲ್ಲಿ (2014-2024) ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಾನಾ ಆಯಾಮಗಳಲ್ಲಿ ದೇಶ ಪರಿವರ್ತನೆ ಹೊಂದಿರುವ ಮಹತ್ವವನ್ನು ಇದು ಸಾರುತ್ತದೆ. 2014ರಿಂದ ಶೇಕಡ 6.4 ಇದ್ದ ಸರಾಸರಿ ಬೆಳವಣಿಗೆ ಈಚಿನ ತ್ರೈಮಾಸಿಕದಲ್ಲಿ ಶೇ. 7.4ಕ್ಕೆ ಬೆಳೆದಿದೆ. ಭಾರತೀಯ ಆರ್ಥಿಕತೆಯ ಪ್ರಬಲ ಚೇತರಿಕೆ ಮತ್ತು ಸುಸ್ಥಿರ ಆವೇಗವನ್ನು ಇದು ತೋರಿಸುತ್ತದೆ. ಹಣದುಬ್ಬರ ನಿರ್ವಹಣೆ ಗಣನೀಯವಾಗಿ ಸುಧಾರಿಸಿದೆ. 2013-14ರಲ್ಲಿದ್ದ ಶೇ. 9.14 ಹಣದುಬ್ಬರವು ಈಗ ಶೇ. 4.6ಕ್ಕೆ ಇಳಿದು ಕುಟುಂಬಗಳು ಮತ್ತು ವ್ಯಾಪಾರ-ವಹಿವಾಟುಗಳಿಗೆ ಅಗತ್ಯವಾದ ಸ್ಥಿರತೆಯನ್ನು ಒದಗಿಸಿದೆ.

ಮೂಲಸೌಕರ್ಯ ವಿಸ್ತರಣೆ: ಭಾರತದ ಮೂಲಸೌಕರ್ಯ ಬೆಳವಣಿಗೆಯು ಈ ಪರಿವರ್ತನೆಯ ಅತ್ಯಂತ ಎದ್ದು ಕಾಣುವ ಸಂಕೇತಗಳಲ್ಲಿ ಒಂದಾಗಿದೆ. 2014ರಲ್ಲಿದ್ದ 91,287 ಕಿಮೀ ರಾಷ್ಟ್ರೀಯ ಹೆದ್ದಾರಿ (ಎನ್​ಎಚ್) 2024ರಲ್ಲಿ 1,46,204 ಕಿಮೀಗೆ ವಿಸ್ತರಣೆಯಾಗಿದೆ ಮತ್ತು ನಿರ್ಮಾಣ ವೇಗದಲ್ಲಿ ದೈನಿಕ 12 ಕಿಮೀನಿಂದ 34 ಕಿಮೀಗೆ ಏರಿಕೆಯಾಗಿದೆ. ಕೊನೆಯ ಹಂತದವರೆಗೂ ಸಂಪರ್ಕ ಕಲ್ಪಿಸುವುದಕ್ಕೆ (ಲಾಸ್ಟ್ ಮೈಲ್ ಕನೆಕ್ಟಿವಿಟಿ) ಹೆಚ್ಚಿನ ಒತ್ತು ನೀಡಿರುವುದರಿಂದ 4 ಲಕ್ಷ ಕಿಮೀ ಗ್ರಾಮೀಣ ರಸ್ತೆಗಳನ್ನು ನಿರ್ವಿುಸಲಾಗಿದೆ. ಇದರಿಂದಾಗಿ, ಭಾರತದ ಶೇಕಡ 99ರಷ್ಟು ಗ್ರಾಮೀಣ ಭಾಗವು ರಾಷ್ಟ್ರೀಯ ಜಾಲದೊಳಗೆ ಬಂದಂತಾಗಿದ್ದು ಗ್ರಾಮೀಣ ಜನರ ಸಂಚಾರ ಮತ್ತು ಆರ್ಥಿಕ ಒಳಗೊಳ್ಳುವಿಕೆಗೆ ಇದು ನೆರವಾಗಿದೆ.

ಕಳೆದ ದಶಕದಲ್ಲಿ ಭಾರತದ ರೈಲ್ವೆ ಜಾಲದ ವಿಸ್ತರಣೆ ಅಭೂತಪೂರ್ವವಾಗಿದೆ. ಹೊಸ ಹಳಿಗಳ ಒಟ್ಟು 25,871 ಮಾರ್ಗ ಕಿಲೋಮೀಟರ್ (ರೂಟ್ ಕಿಮೀ-ಆರ್​ಕೆಎಂ) ಸೇರ್ಪಡೆಯಾಗಿದ್ದು ಕಳೆದ ದಶಕದ 14,985 ಆರ್​ಕೆಎಂಗಿಂತ ಗಣನೀಯವಾಗಿ ಹೆಚ್ಚಾಗಿದೆ. ಲೋಕೋಮೋಟಿವ್ ಉತ್ಪಾದನೆಯಲ್ಲಿ ಭಾರತ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. 2024-25ರಲ್ಲಿ 1,681 ಲೋಕೋಮೋಟಿವ್​ಗಳನ್ನು ಉತ್ಪಾದಿಸಲಾಗಿದೆ. ಅಮೆರಿಕ, ಯುರೋಪ್ ಮತ್ತು ಜಪಾನ್​ನಲ್ಲಿ ಈ ಅವಧಿಯಲ್ಲಿ ಉತ್ಪಾದನೆಯಾದ ಒಟ್ಟು ಲೋಕೋಮೋಟಿವ್​ಗಳಿಗಿಂತಲೂ ಇದು ಹೆಚ್ಚಾಗಿದೆ. ಸರಕು ಸಾಗಾಟ ಕೂಡ ತೀವ್ರ ಹೆಚ್ಚಾಗಿದ್ದು ಭಾರತೀಯ ರೈಲ್ವೆ ಜಗತಿನ 2ನೇ ಅತಿ ದೊಡ್ಡ ಸರಕು ಸಾಗಣೆ ಸಂಸ್ಥೆಯಾಗಿದೆ. ಅದು ವಾರ್ಷಿಕ 1,617 ದಶಲಕ್ಷ ಟನ್ ಸರಕುಗಳನ್ನು ಸಾಗಿಸುತ್ತದೆ.

ಪ್ರಗತಿಯಲ್ಲಿರುವ ಸಮರ್ಪಿತ ಸರಕು ಕಾರಿಡಾರ್ (ಡೆಡಿಕೇಟೆಡ್ ಫ್ರೈಟ್ ಕಾರಿಡಾರ್-ಡಿಎಫ್​ಸಿ), ಸರಕುಗಳ ಸಾಗಾಟದಲ್ಲಿ ದಕ್ಷತೆಯನ್ನು ಹೆಚ್ಚಿಸುವಲ್ಲಿ ಹಾಗೂ ಪ್ರಯಾಣಿಕ ಮಾರ್ಗಗಳಲ್ಲಿನ ದಟ್ಟಣೆಯನ್ನು ತಗ್ಗಿಸಲು ನೆರವಾಗುವ ನಿರೀಕ್ಷೆಯಿದೆ. ಅದೇ ರೀತಿ, ವೈಮಾನಿಕ ಸಂಚಾರ ಕ್ಷೇತ್ರವೂ ತ್ವರಿತ ಜನತಾಂತ್ರೀಕರಣಕ್ಕೆ ಸಾಕ್ಷಿಯಾಗಿದೆ. 2014 ಮತ್ತು 2025ರ ನಡುವೆ ಭಾರತದಲ್ಲಿ ಕಾರ್ಯಾಚರಿಸುವ ವಿಮಾನನಿಲ್ದಾಣಗಳ ಸಂಖ್ಯೆ 74ರಿಂದ 160ಕ್ಕೆ ಏರಿದೆ. ಉಡಾನ್ ಯೋಜನೆಯು ತೀರಾ ಒಳನಾಡಿನ ಪಟ್ಟಣಗಳಿಗೂ ವಿಮಾನ ಸಂಪರ್ಕ ಏರ್ಪಡಿಸಲು ನೆರವಾಗಿರುವುದು ಇದಕ್ಕೆ ಕಾರಣವಾಗಿದೆ. 2047ರೊಳಗೆ 300 ಏರ್​ಪೋರ್ಟ್​ಗಳಿಗೆ ವಿಸ್ತರಿಸುವ ಸರ್ಕಾರದ ದೂರದೃಷ್ಟಿಯು ಸಾರಿಗೆ ಮತ್ತು ಲಭ್ಯತೆಗಳಿಗೆ ನೀಡುತ್ತಿರುವ ಮಹತ್ವಕ್ಕೆ ಸಾಕ್ಷಿಯಾಗಿದೆ.

ಸುಸ್ಥಿರ ಭವಿಷ್ಯದತ್ತ ಸ್ವಚ್ಛ ಇಂಧನ: ಸ್ಮಾರ್ಟ್ ಸಿಟೀಸ್ ಮಿಷನ್ ಮೂಲಕ ನಗರ ಭಾಗದ ಪರಿವರ್ತನೆಯು ಮುಂದುವರಿದಿದೆ. ಈ ಮಿಷನ್ ಅಡಿ 8,000ಕ್ಕೂ ಅಧಿಕ ಯೋಜನೆಗಳಿದ್ದು 1.64 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಿದೆ. ದೆಹಲಿ ಮೆಟ್ರೋ ಜಾಗತಿಕವಾಗಿ ಅತ್ಯಂತ ದೊಡ್ಡ ಮತ್ತು ಹೆಚ್ಚು ದಕ್ಷ ಮೆಟ್ರೋ ವ್ಯವಸ್ಥೆಗಳಲ್ಲಿ ಒಂದಾಗಿ ವಿಸ್ತರಿಸುತ್ತಿದೆ. ದೆಹಲಿ ಮೆಟ್ರೋ ದೇಶದಲ್ಲಿ ಸಾಮೂಹಿಕ ತ್ವರಿತ ಸಂಚಾರಕ್ಕೆ ಒಂದು ಬೆಂಚ್​ವಾರ್ಕ್ ಆಗಿದೆ. ಮೆಟ್ರೋ ಈಗ 15 ಭಾರತೀಯ ನಗರಗಳಿಗೆ ವಿಸ್ತರಿಸಿದೆ.

ಶುದ್ಧ ಇಂಧನ: ಭಾರತದ ಶುದ್ಧ ಇಂಧನ ಕ್ಷೇತ್ರದ ಪ್ರಗತಿ ಕೂಡ ಪ್ರಶಂಸಾರ್ಹವಾಗಿದೆ. ಸೌರ ವಿದ್ಯುತ್ ಸಾಮರ್ಥ್ಯ 2014ರ 2.82 ಗಿಗಾವ್ಯಾಟ್​ನಿಂದ ಪ್ರಸ್ತುತ 105.65 ಗಿಗಾವ್ಯಾಟ್​ಗೆ ಏರಿಕೆಯಾಗಿದೆ. ಹೀಗಾಗಿ ಶುದ್ಧ ಇಂಧನದ ಸಾಮರ್ಥ್ಯದ ಒಟ್ಟು ಪ್ರಮಾಣ 228.28 ಗಿಗಾವ್ಯಾಟ್​ಗೆ ಏರಿದೆ. ಇದು ಭಾರತ ಜಗತ್ತಿನಲ್ಲಿ ಮೂರನೇ ಅತಿದೊಡ್ಡ ಹಾಗೂ ನಾಲ್ಕನೇ ಅತಿ ದೊಡ್ಡ ಪವನ ವಿದ್ಯುತ್ (ಗಾಳಿ ವಿದ್ಯುತ್) ಉತ್ಪಾದನೆಯ ದೇಶವಾಗಿ ಹೊರಹೊಮ್ಮಲು ನೆರವಾಗಿದೆ.

ಡಿಜಿಟಲ್ ಮೂಲಸೌಕರ್ಯ: ಭಾರತದ ಸಾರ್ವಜನಿಕ ಡಿಜಿಟಲ್ ಮೂಲಸೌಕರ್ಯ ಅಗಾಧವಾಗಿ ಬೆಳೆದಿದ್ದು ಕಳೆದ ದಶಕದ ಪ್ರಮುಖ ಯಶೋಗಾಥೆಯಲ್ಲಿ ಒಂದಾಗಿದೆ. ಯುಪಿಐ ಮತ್ತು ಆಧಾರ್​ನಂಥ ವೇದಿಕೆಗಳ ನೇತೃತ್ವದಲ್ಲಿ ಸಾರ್ವಜನಿಕರು- ಮೊದಲು (ಪಬ್ಲಿಕ್-ಫಸ್ಟ್) ಧೋರಣೆಯ ಫಲಿತವಾಗಿ ರಿಯಲ್-ಟೈಮ್ ಪಾವತಿಗಳು, ನೇರ ವರ್ಗಾವಣೆಗಳು ಸಾಧ್ಯವಾಗಿವೆ. ಹಾಗೂ ಜನಧನ್ ಮತ್ತು ಡಿಜಿಟಲ್ ಲಭ್ಯತೆ ಪಾಯಿಂಟ್​ಗಳ ಮೂಲಕ ಗ್ರಾಮೀಣ ಬ್ಯಾಂಕಿಂಗ್ ವಿಸ್ತರಣೆಯಾಗಿದೆ. ಡಿಪಿಐ ಮೂಲಸೌಕರ್ಯವು ಜಿಡಿಪಿಗೆ ಶೇಕಡ 1ರ ಕೊಡುಗೆ ನೀಡಿದ್ದು 2030ರ ವೇಳೆಗೆ ಅದು ಶೇ. 3ರಿಂದ 4ಕ್ಕೆ ತಲುಪುವ ನಿರೀಕ್ಷೆಯಿದೆ. ದಶಕದ ಸಮಯ ತಗಲಲಿದ್ದುದನ್ನು ಡಿಪಿಐ ಕೇವಲ ಆರು ವರ್ಷಗಳಲ್ಲಿ ಸಾಧಿಸಿದೆ ಎಂದು ವಿಶ್ವಬ್ಯಾಂಕ್ ಗುರುತಿಸಿದೆ. ಭಾರತದ ಡಿಪಿಐ ಅನ್ನು ಇದೀಗ ವಿಶ್ವದ 12ಕ್ಕೂ ಹೆಚ್ಚು ದೇಶಗಳು ಅಳವಡಿಸಿಕೊಂಡಿವೆ. ಈ ದಶಕದಲ್ಲಿ 17.1 ಕೋಟಿ ಜನರನ್ನು ಬಡತನದಿಂದ ಹೊರತರಲಾಗಿದೆ ಎಂದು ಅಧಿಕೃತ ಅಂಕಿಅಂಶಗಳು ತೋರಿಸಿವೆ. 2013-14ರಲ್ಲಿದ್ದ ಶೇ. 29.17 ಬಡತನದ ಪ್ರಮಾಣವು 2022-23ರಲ್ಲಿ ಶೇ. 11.28ಕ್ಕೆ ಕುಸಿದಿದೆ.

ಭಾರತದ ಮುಂದಿರುವ ಹಾದಿ: ಸ್ವಾತಂತ್ರ್ಯದ ಶತಮಾನೋತ್ಸವದತ್ತ ಮುನ್ನಡೆಯುತ್ತಿರುವ ಭಾರತ ಇದೀಗ ಜಾಗತಿಕ ಅಭಿವೃದ್ಧಿಯ ಕಾರ್ಯಸೂಚಿಯನ್ನು ಹೊಂದಿದೆ. ಜಿಎಸ್​ಟಿ, ನಿಯಮಗಳ ಸರಣೀಕರಣ ಮತ್ತು ಹಳೆಯ ಕಾನೂನುಗಳ ನಿವಾರಣೆ ಮುಂತಾದ ಪ್ರಮುಖ ಸುಧಾರಣೆಗಳು ಭಾರತದ ಪ್ರಗತಿ ಮತ್ತು ಚೇತರಿಕೆಯನ್ನು ತೋರಿಸುತ್ತದೆ. ಆದರೂ ಸುಗಮ ವ್ಯವಹಾರದ ಸುಧಾರಣೆ, ನಿಯಮಗಳ ಪಾಲನೆ ಕೊರತೆಯ ಹೊರೆ ನಿವಾರಣೆ, ಸ್ಪರ್ಧಾತ್ಮಕತೆಯ ಹೆಚ್ಚಳ ಮತ್ತು ಜಾಗತಿಕ ಸರಬರಾಜು ಸರಣಿಯಲ್ಲಿ ಬಹಳ ಆಳವಾಗಿ ಒಳಗೊಳ್ಳುವುದು -ಇವೇ ಮುಂತಾಗಿ ಮಾಡಲು ಬೇಕಾದಷ್ಟು ವಿಚಾರಗಳಿವೆ.

ವ್ಯೂಹಾತ್ಮಕ ಹೂಡಿಕೆಗಳು, ಆಡಳಿತ ಸುಧಾರಣೆಗಳು, ಮತ್ತು ಒಳಗೊಳ್ಳುವ ಬೆಳವಣಿಗೆಯು ಬಲವಾದ ತಳಪಾಯವನ್ನು ಹಾಕಿದೆ. ನೀತಿನಿರೂಪಣೆಯಲ್ಲಿ ಚುರುಕುತನ, ಸುಸ್ಥಿರತೆ ಮೇಲೆ ಗಮನ ಕೇಂದ್ರೀಕರಣ, ಮತ್ತು ಸುಧಾರಿತ ಉತ್ಪಾದನೆ ಮತ್ತು ಕೌಶಲದ ಮೂಲಕ ಜಾಗತಿಕ ಸರಬರಾಜು ಸರಪಳಿಯಲ್ಲಿ ಆಳವಾಗಿ ಸಮಗ್ರಗೊಳ್ಳುವುದು ಮುನ್ನಡೆಯ ಪಯಣದಲ್ಲಿ ಮಹತ್ವದ್ದಾಗುತ್ತದೆ. ಆರ್ಥಿಕ ಬಲ, ಡಿಜಿಟಲ್ ಪ್ರಗತಿಯಲ್ಲಿ ಬೇರು ಹೊಂದಿರುವ ಭಾರತದ ಅಭಿವೃದ್ಧಿ ಪ್ರಯಾಣವು ಇದೀಗ ಚೇತರಿಕೆ ಮತ್ತು ದೀರ್ಘಾವಧಿಯ ಪರಿಣಾಮ ತರುವ ಗುರಿಯನ್ನು ಹೊಂದಿದೆ.