

ವಿಜಯವಾಣಿ ಸುದ್ದಿಜಾಲ ಉಡುಪಿ
ಭಾರತೀಯ ಚಿತ್ರರಂಗದ ದಿಗ್ಗಜ, ಖ್ಯಾತ ಯಶಸ್ವಿ ನಟ ಅಮಿತಾಬ್ ಬಚ್ಚನ್ ಅವರಿಗೀಗ 83 ವರ್ಷ. ಐದು ದಶಕಗಳಿಗೂ ಮೀರಿ ಸಿನಿಮಾ ವೃತ್ತಿ ಬದುಕಿನಲ್ಲಿ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ನಟನೆಯ ಸಿನಿಮಾಗಳು ಯುವ ಸಮುದಾಯದ ಮನ ಗೆದ್ದಿದ್ದು, ಅನೇಕ ಯುವಜನರು ಜೀವನದಲ್ಲಿ ಖಿನ್ನತೆ, ಜಿಗುಪ್ಸೆ ತೊರೆದು ಸುಖಿ ಜೀವನ ನಡೆಸಿದ ಉದಾಹರಣೆಯೂ ಇದೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ತಿಳಿಸಿದರು.
ಉಡುಪಿಯ ಸಗ್ರಿ ವಾರ್ಡ್ನಲ್ಲಿರುವ ಅಂಗನವಾಡಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ನಟ ಅಮಿತಾಬ್ ಬಚ್ಚನ್ ಜನ್ಮದಿನ ಆಚರಿಸಿ, ಪುಟಾಣಿ ಮಕ್ಕಳಿಗೆ ಲೇಖನ ಸಾಮಾಗ್ರಿ ವಿತರಿಸಿ ಮಾತನಾಡಿದರು.
70&-80ರ ದಶಕಗಳಲ್ಲಿ ಅವರು ನಟಿಸಿದ ದೀವಾರ್, ಶೋಲೆ, ಅಮರ್-ಅಕ್ಬರ್-ಆಂತೋನಿ, ಕೂಲಿ, ಡಾನ್ ಸೇರಿದಂತೆ ಅನೇಕ ಸಿನಿಮಾಗಳಿಂದ ಎಂಗ್ರಿ ಯಂಗ್ಮೆನ್ ಬಿರುದು ಲಭಿಸಿತು. ಅಲ್ಲದೆ, ಭಾರತೀಯ ಹಿಂದಿ ಚಿತ್ರರಂಗದ ದಿಕ್ಕೇ ಬದಲಿಸಿದರು. ಆದರೆ, ನಂತರದ ದಿನಗಳಲ್ಲಿ ರಾಜಕೀಯ ಪ್ರವೇಶಿಸಿ ಎಲ್ಲವನ್ನೂ ಕಳೆದುಕೊಂಡರೂ ಸಹ ಛಲ ಮತ್ತು ವಿಶ್ವಾಸದಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲಕ್ಕೆ ಬಂದರು. ಅವರು ನಡೆಸುತ್ತಿರುವ ಕೌನ್ ಬನೇಗಾ ಕರೋಡ್ ಪತಿ ಟಿವಿ ಕಾರ್ಯಕ್ರಮ ಇಂದಿಗೂ ಪ್ರಸಿದ್ಧ. ಅವರ ವ್ಯಕ್ತಿತ್ವ ಮತ್ತು ಆದರ್ಶ ಯುವಕರಿಗೆ ಮಾದರಿಯಾಗಿದೆ ಎಂದರು.
ಸುನೀತಾ, ಕಲ್ಪನಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಸುರೇಶ ಡಿ., ಅನುರಾಧಾ ಜಿ.ಎಸ್., ವಾಸು ಪಿ., ಐಶ್ವರ್ಯಾ ಆರ್., ಉಮೇಶ ಎಂ., ಅಕ್ಷತಾ, ವನಜಾ, ಕಲ್ಪನಾ, ಸಹನಾ, ಉಷಾ, ಕಾವ್ಯಾ, ಸತೀಶ, ಪ್ರಮೋದ, ಬಸವರಾಜ, ಶ್ರೀನಿವಾಸ ಡಿ. ಇತರರಿದ್ದರು.